ಮಹಿಳೆಯರೇ ಫೈಬ್ರಾಯ್ಡ್‌ ಗಡ್ಡೆ ಬಗ್ಗೆ ಎಚ್ಚರ, ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ

ಕೆಲ ವರ್ಷಗಳ ಹಿಂದೆ ನಮ್ಮ ಆತ್ಮೀಯರೊಬ್ಬರಿಗೆ ಮುಟ್ಟಿನ ದಿನಗಳು ಅಲ್ಲದಿದ್ದರೂ ವಿಪರೀತ ರಕ್ತಸ್ರಾವ ಆಗೋದಿಕ್ಕೆ ಶುರುವಾಯ್ತು. ಮಧ್ಯವಯಸ್ಕರಾದುದರಿಂದ ಮೆನೋಪಾಸ್‌ ಹಂತದಲ್ಲಿ ಹೀಗಾಗುತ್ತೇನೋ ಎಂದು ಸುಮ್ಮನಾಗಿಬಿಟ್ಟರು. ಒಂದು ತಿಂಗಳು ಕಳೆದಂತೆ ರಕ್ತಸ್ರಾವ ಆಗುವುದು ನಿಂತಿರಲಿಲ್ಲ. ಅತಿಯಾದ ರಕ್ತಸ್ರಾವದಿಂದ ತೀರಾ ನಿಶ್ಯಕ್ತಿಗೊಳಗಾಗಿ ಎದ್ದೇಳುವುದೇ ಕಷ್ಟವಾಯಿತು.

fibroids

ನಂತರದಲ್ಲಿ ಎಲ್ಲಾ ಪರೀಕ್ಷೆ, ಸ್ಕ್ಯಾನಿಂಗ್‌ಗಳ ಮುಖಾಂತರ ಗೊತ್ತಾಗಿದ್ದು ಫೈಬ್ರಾಯ್ಡ್‌ ಗಡ್ಡೆ. ಹೌದು ಇತ್ತೀಚಿನ ದಿನಗಳಲ್ಲಿ ಮಧ್ಯವಯಸ್ಕ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆ ಇದು. ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದರೆ, ಮುಂದೆ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು.

ಅರಿವೇ ಆಗದಂತೆ ಫೈಬ್ರಾಯ್ಡ್‌ ಗಡ್ಡೆ ಉಂಟಾಗುವುದು ಹೇಗೆ..? ಇದು ಯಾವ ಕಾರಣದಿಂದ ಉಂಟಾಗುತ್ತೆ, ಇದರ ಲಕ್ಷಣಗಳೇನು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ನೋಡಿ:

ಏನಿದು ಫೈಬ್ರಾಯ್ಡ್‌..?

ಏನಿದು ಫೈಬ್ರಾಯ್ಡ್‌..?

ಗರ್ಭಾಶಯದ ಒಳಗೋಡೆಯ ಸ್ನಾಯು ಮತ್ತು ಅಲ್ಲಿರುವ ಇತರ ಅಂಗಾಂಶಗಳಿಂದ ರಚನೆಯಾಗುವಂತಹ ಒಂದು ರೀತಿಯ ಬೆಳವಣಿಗೆ ಇದನ್ನು ಲಿಯೋಮಿಯೋಮಾಸ್‌ ಎಂದೂ ಕರೆಯುತ್ತಾರೆ. ಇದು ಗರ್ಭಕೋಶದ ಒಳಗೆ ಯಾವ ಭಾಗದಲ್ಲಿ ಆದರೂ ಬೆಳೆಯಬಹುದು. ಅದು ಬೆಳೆಯುವ ಜಾಗಕ್ಕೆ ಅನುಗುಣವಾಗಿ ಅದರ ಆಕಾರ ಗಾತ್ರ ಬದಲಾಗುತ್ತದೆ. ಕೆಲವರಲ್ಲಿ ಸಣ್ಣ ಫೈಬ್ರಾಯ್ಡ್‌ ಗಡ್ಡೆಯೂ ಇರಬಹುದು. ಕೆಲವರಲ್ಲಿ ಗೊಂಚಲು ಗೊಂಚಲಾಗಿಯೂ ಗಡ್ಡೆ ಬೆಳೆಯಬಹುದು. ಈ ಗಡ್ಡೆಯ ಗಾತ್ರ 1ಮಿಮೀನಿಂದ 8ಇಂಚಿನಷ್ಟು ಗಾತ್ರದ ಗಡ್ಡೆಯೂ ಕೆಲವರಲ್ಲಿ ಬೆಳವಣಿಗೆ ಹೊಂದಬಹುದು. ಇದು ಗರ್ಭಾಶಯದ ಮೇಲೆ, ಕುಳಿಯಲ್ಲಿ ಅಥವಾ ಗರ್ಭಾಶಯದ ಗೋಡೆಯೊಳಗೆಯೂ ಬೆಳೆಯಬಹುದು. ಗರ್ಭಾಶಯದ ಗೋಡೆಯ ಮೇಲೆ ಬೆಳೆಯುವ ಫೈಬ್ರಾಯ್ಡ್‌ ಅಷ್ಟೇನೂ ಅಪಾಯಕಾರಿಯಲ್ಲದಿದ್ದರೂ ಗರ್ಭಧಾರಣೆಗೆ ಇದರಿಂದ ಸಮಸ್ಯೆಯಾಗಬಹುದು.

ಫೈಬ್ರಾಯ್ಡ್‌ನ ಲಕ್ಷಣಗಳು

ಫೈಬ್ರಾಯ್ಡ್‌ನ ಲಕ್ಷಣಗಳು

ಫೈಬ್ರಾಯ್ಡ್‌ನ ಲಕ್ಷಣಗಳು ಮಹಿಳೆಯರಿಂದ ಮಹಿಳೆಯರಲ್ಲಿ ಬದಲಾಗಬಹುದು. ಎಲ್ಲರಲ್ಲೂ ಒಂದೇ ಥರಹದ ಲಕ್ಷಣಗಳನ್ನು ಗುರುತಿಸಲು ಸಾಧ್ಯವಿಲ್ಲ. ರೋಗ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು. 40 ರಿಂದ 80ರಷ್ಟು ಮಹಿಳೆಯರಲ್ಲಿ ಈ ಫೈಬ್ರಾಯ್ಡ್‌ ಗಡ್ಡೆಯ ಬೆಳವಣಿಗೆ ಸಾಮಾನ್ಯ. ಕೆಲವರು ಏನೂ ರೋಗ ಲಕ್ಷಣಗಳನ್ನು ಹೊಂದಿರುವುದೇ ಇಲ್ಲ. ಆದರೆ ಫೈಬ್ರಾಯ್ಡ್‌ ಗಡ್ಡೆ ದೊಡ್ಡದಾಗಿ ಬೆಳೆಯುತ್ತಿದ್ದರೆ ಕೆಲವೊಂದು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅವೆಂದರೆ,

* ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ

* ಹೊಟ್ಟೆ ತುಂಬಿದಂತಹ ಅನುಭವ

* ಮುಟ್ಟಿನ ಸಮಯದಲ್ಲಿ ಅತಿಯಾದ ಹೊಟ್ಟೆನೋವು

* ಕೆಳ ಬೆನ್ನಿನಲ್ಲಿ ನೋವು

* ಮಲಬದ್ಧತೆ

* ದೀರ್ಘಕಾಲದಿಂದ ಯೋನಿಯಲ್ಲಿ ಸ್ರಾವ

* ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುವುದು

* ಸಂಭೋಗದ ಸಮಯದಲ್ಲಿ ನೋವು

* ಮೂತ್ರನಾಳದಲ್ಲಿ ನೋವು

* ಕೆಳಹೊಟ್ಟೆಯು ಹಿಗ್ಗುವುದು

* ಫೈಬ್ರಾಯ್ಡ್‌ ಗಡ್ಡೆಯು ಮೂತ್ರಕೋಶದ ಮೇಲೆ ಒತ್ತಡ ಹಾಕುವುದರಿಂದ ಆಗಾಗ ಮೂತ್ರವಿಸರ್ಜನೆ

ಫೈಬ್ರಾಯ್ಡ್‌ಗೆ ಕಾರಣವಾಗುವ ಅಂಶಗಳು

ಫೈಬ್ರಾಯ್ಡ್‌ಗೆ ಕಾರಣವಾಗುವ ಅಂಶಗಳು

ಇತ್ತೀಚೆಗೆ ಕೆವೊಂದು ರೋಗಗಳು ನಮ್ಮ ದೇಹವನ್ನು ಆವರಿಸಿರುವುದೇ ಗೊತ್ತಾಗೋದಿಲ್ಲ. ಅದು ದೇಹದೊಳಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಲು ಆರಂಭಿಸಿದಾಗ..ಓಹ್‌ ನನಗೇನೋ ಆಗಿದೆ, ಆಗಾಗ್ಗೆ ಹುಷಾರಿಲ್ಲದಂತಾಗುತ್ತೆ ಎನ್ನುವಾಗಲೇ ಸಮಸ್ಯೆಯ ಅರಿವಾಗುವುದು. ಈ ಫ್ರೈಬ್ರಾಯ್ಡ್‌ ಕೂಡಾ ಹೀಗೆನೇ. ಆದರೆ ಫೈಬ್ರಾಯ್ಡ್‌ ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚು ಕಂಡುಬರದು, ಸಂತಾನೋತ್ಪತ್ತಿಯ ವಯಸ್ಸಿನಲ್ಲಿ, ಮಧ್ಯವಯಸ್ಕ ಮಹಿಳೆಯರಲ್ಲಿ ಕಂಡುಬರುವುದು ಹೆಚ್ಚು.ಗರ್ಭಾಶಯದಲ್ಲಿ ಬೆಳೆಯುವ ಫೈಬ್ರಾಯ್ಡ್‌ಗೆ ಕಾರಣವಾಗುವ ಅಪಾಯಕಾರಿ ಅಂಶಗಳೆಂದರೆ ಇವೇ ನೋಡಿ..

ಬೊಜ್ಜು

ಬೊಜ್ಜು

ನಮ್ಮ ಬದಲಾದ ಜೀವನ ಮತ್ತು ಆಹಾರ ಶೈಲಿಯಿಂದಾಗಿ ಬೊಜ್ಜು ಕಾಣಿಸಿಕೊಳ್ಳುತ್ತೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತೆ, ಆ ಕಾರಣಗಳಲ್ಲಿ ಫೈಬ್ರಾಯ್ಡ್‌ ಕೂಡಾ ಒಂದು. ಅತಿಯಾದ ದೇಹದ ತೂಕದ ಹೆಚ್ಚಳವು ಫೈಬ್ರಾಯ್ಡ್‌ಗೆ ದಾರಿ ಮಾಡಿಕೊಡುತ್ತದೆ.

ಅನುವಂಶೀಯತೆ

ಅನುವಂಶೀಯತೆ

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಫೈಬ್ರಾಯ್ಡ್‌ ಇದ್ದಲ್ಲಿ, ಈ ಸಮಸ್ಯೆಯ ಸಾಧ್ಯತೆ ಹೆಚ್ಚು. ಅನುವಂಶಿಕತೆಯೂ ಕೂಡಾ ಫೈಬ್ರಾಯ್ಡ್‌ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತೆ. ಕುಟುಂಬದಲ್ಲಿ ಯಾರಾದರೂ ಫೈಬ್ರಾಯ್ಡ್‌ ಇತಿಹಾಸ ಹೊಂದಿದ್ದರೆ ಅದು ಅಪಾಯವನ್ನು ಹೆಚ್ಚಿಸುತ್ತದೆ.

ಬೇಗ ಮುಟ್ಟಾಗುವುದು

ಬೇಗ ಮುಟ್ಟಾಗುವುದು

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯೂ ಬದಲಾವಣೆಯಾದುದರಿಂದ ಸಣ್ಣವಯಸ್ಸಿನ ಹೆಣ್ಣು ಮಕ್ಕಳಲ್ಲಿ ಋತುಸ್ರಾವ ಆರಂಭವಾಗುತ್ತಿದೆ. ಚಿಕ್ಕವಯಸ್ಸಿನಲ್ಲೇ ಋತುಚಕ್ರವು ಪ್ರಾರಂಭವಾಗುವುದೂ ಫೈಬ್ರಾಯ್ಡ್‌ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.

ವಯಸ್ಸಾದರೂ ಮುಟ್ಟು ನಿಲ್ಲದಿರುವುದು

ವಯಸ್ಸಾದರೂ ಮುಟ್ಟು ನಿಲ್ಲದಿರುವುದು

ಫೈಬ್ರಾಯ್ಡ್ ಮತ್ತು ಫಲವತ್ತತೆಯ ನಡುವೆಯೂ ಸಂಬಂಧವಿದೆ. ಸರಿಯಾದ ವಯಸ್ಸಿನಲ್ಲಿ ಋತುಬಂಧ ಅಂದರೆ ಮುಟ್ಟು ನಿಲ್ಲದಿರುವುದು ಫೈಬ್ರಾಯ್ಡ್‌ಗೆ ಕಾರಣವಾಗಬಹುದು. ಋತುಬಂಧ ಆಗದೇ ಇದ್ದಾಗ ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಫೈಬ್ರಾಯ್ಡ್‌ನ ಅಪಾಯ ಹೆಚ್ಚು.

ಆಹಾರ ಪದ್ಧತಿ

ಆಹಾರ ಪದ್ಧತಿ

ಇತ್ತೀಚೆಗೆ ಅನಾರೋಗ್ಯಕ್ಕೆ ನಮ್ಮ ಆಹಾರ ಶೈಲಿಯೂ ಒಂದು ಕಾರಣ. ವಿಟಮಿನ್‌ ಡಿ ಕೊರತೆ, ಹೆಚ್ಚು ಪ್ರೊಟಿನ್‌ ಇರುವ ಆಹಾರ, ಹೆಚ್ಚು ಮಾಂಸಾಹಾರ ಸೇವನೆ ಫೈಬ್ರಾಯ್ಡ್‌ ಗಡ್ಡೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆಹಾರದಲ್ಲಿ ಹಸಿರು ತರಕಾರಿ, ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳನ್ನು ಕಡಿಮೆಯಾದರೂ ಫೈಬ್ರಾಯ್ಡ್ ಹೊಂದುವ ಸಾಧ್ಯತೆ ಹೆಚ್ಚು.

ಮದ್ಯ ಸೇವನೆ

ಮದ್ಯ ಸೇವನೆ

ಅತಿಯಾದ ಆಲ್ಕೋಹಾಲ್ ಸೇವನೆಯು ಫೈಬ್ರಾಯ್ಡ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮದ್ಯಪಾನ ಮತ್ತು ಬಿಯರ್ ಕೂಡ ಫೈಬ್ರಾಯ್ಡ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಇತರ ಅಂಶಗಳು

ಇನ್ಸುಲಿನ್‌ನಂತಹ ದೇಹದಲ್ಲಿನ ಅಂಗಾಂಶಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಹಾರ್ಮೋನ್‌ಗಳ ಅಸಮತೋಲನವು ಫೈಬ್ರಾಯ್ಡ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸಬಹುದು.

ಗಾಬರಿಗೊಳ್ಳಬೇಡಿ. ಗರ್ಭಕೋಶದ ಗೋಡೆಯ ಮೇಲೆ ಬೆಳೆಯುವ ಫೈಬ್ರಾಯ್ಡ್‌ ಗಡ್ಡೆ ಕ್ಯಾನ್ಸರ್‌ ಅಲ್ಲ. ಆದರೆ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. ಈ ತಿಂಗಳು ಫೈಬ್ರಾಯ್ಡ್‌ ಅರಿವಿನ ತಿಂಗಳಾದುದರಿಂದ ಹೆಚ್ಚಿನ ಮಹಿಳೆಯರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಲು ಪ್ರಯತ್ನಿಸಿ. ಅನಾರೋಗ್ಯ ದೂರವಿಡಬೇಕಾದರೆ ಉತ್ತಮ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ, ಇದು ಫೈಬ್ರಾಯ್ಡ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

English summary

What are the symptoms and risk factors for fibroids in Kannada

What is fibroids, its symptoms and risk factors, read on...
X
Desktop Bottom Promotion