ಹನುಮಾನ್‌ ಆಸನ ಮಾಡಿದರೆ ದೇಹದಲ್ಲಿ ಈ ಬದಲಾವಣೆಗಳಾಗುವುದು

ಶತಶತಮಾನಗಳಿಂದ ಯೋಗ ಎನ್ನುವ ಒಂದು ಅತ್ಯದ್ಭುತವಾದ ಪದ್ಧತಿ ನಮ್ಮಲ್ಲಿ ಬಳಕೆಯಲ್ಲಿದೆ. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸ್ವಾಸ್ಥ್ಯಕ್ಕಾಗಿ ನಾವು ಮಾಡಬಹುದಾದ, ಅನುಸರಿಸಬಹುದಾದ ಅತ್ಯಂತ ಪರಿಣಾಮಕಾರಿ ಅಭ್ಯಾಸಗಳಲ್ಲಿ ಯೋಗ ಕೂಡ ಒಂದು.

ಯೋಗ ಅಭ್ಯಾಸ ಇಂದು ನೆನ್ನೆಯದಲ್ಲ. ತಲತಲಾಂತರಗಳಿಂದಲೂ ಕೂಡ ಈ ಅಭ್ಯಾಸ ನಮ್ಮಲ್ಲಿ ರೂಢಿಯಲ್ಲಿದೆ. ಪ್ರಪಂಚದಾದ್ಯಂತ ಯೋಗದ ಮಹತ್ವ ವ್ಯಾಪಿಸಿದೆ. ಯೋಗವನ್ನು ಯಾರು ಬೇಕಾದರೂ ಮಾಡಬಹುದು. ದೇಹ ಫಿಟ್ ಆಗಿ ಇರಲು, ದೇಹ ಆರೋಗ್ಯವಂತವಾಗಿ ಇರಲು, ಮಾನಸಿಕ ನೆಮ್ಮದಿಗಾಗಿ ಯೋಗವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Benefits of Hanumanasana (Monkey Pose) In Kannada

ಯೋಗದಲ್ಲಿ ಸಾಕಷ್ಟು ವಿವಿಧ ಭಂಗಿಗಳಿವೆ. ಅದರಲ್ಲಿ ಜನಪ್ರಿಯವಾಗಿರುವ ಒಂದು ಭಂಗಿ, ಹನುಮಾನಾಸನ. ಅತ್ಯಂತ ಪರಿಣಾಮಕಾರಿಯಾಗಿರುವ ಹಾಗೂ ಮಹತ್ವ ಪಡೆದುಕೊಂಡಿರುವ ಈ ಭಂಗಿಯನ್ನು ಮಂಕಿ ಭಂಗಿ ಎಂದು ಕೂಡ ಕರೆಯುತ್ತಾರೆ. ಹಿಂದೂ ದೇವರಾದ ಹನುಮನ ಹೆಸರಿನಲ್ಲಿ ಈ ಭಂಗಿ ಪ್ರಸಿದ್ಧವಾಗಿದೆ.

ಇನ್ನು ಹನುಮಾನಾಸನವನ್ನು ಮನೆಯಲ್ಲಿಯೇ ಮಾಡಬಹುದು. ಆದರೂ ಈ ಆಸನದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಕರಗತ ಮಾಡಿಕೊಂಡಿರಬೇಕು. ಹಾಗಾಗಿ ಸರಿಯಾದ ಮಾರ್ಗದರ್ಶನ ಪಡೆದು ಈ ಭಂಗಿಯನ್ನು ರೂಢಿಸಿಕೊಳ್ಳುವುದು ಉತ್ತಮ.

ಹನುಮಾನಾಸನ:

ಮುಂಭಾಗದ ವಿಭಜಿತ ಯೋಗ ಭಂಗಿ ಇದಾಗಿದ್ದು ಪುರಾಣ ಹಾಗೂ ಇತಿಹಾಸದಲ್ಲಿ ಹನುಮಾನಾಸನ ಎಂದೇ ಪ್ರಸಿದ್ಧಿ ಪಡೆದುಕೊಂಡು ಬಂದಿದೆ. ಇನ್ನು ಈ ಭಂಗಿಗೆ ಹನುಮಂತನ ಹೆಸರನ್ನೇ ಇಟ್ಟಿರುವುದಕ್ಕೂ ಪ್ರಮುಖ ಕಾರಣವಿದೆ. ದೈತ್ಯ ಜಿಗಿತ ಇದು ಎಂದು ಹೇಳಲಾಗುತ್ತದೆ. ಭಗವಾನ್ ಹನುಮಂತನು ಭಾರತದಿಂದ ಶ್ರೀಲಂಕಾದ ದ್ವೀಪದವರೆಗೆ ದೈತ್ಯಾಕಾರದ ಜಿಗಿತವನ್ನು ಮಾಡಿದನು ಅಲ್ಲಿ ರಾಕ್ಷಸರ ರಾಜನಾಗಿದ್ದ ರಾವಣ ರಾಮನ ಪತ್ನಿ ಸೀತಾದೇವಿಯನ್ನ ತನ್ನ ವಶದಲ್ಲಿ ಇಟ್ಟುಕೊಂಡಿದ್ದನು. ಈ ಸಂದರ್ಭದಲ್ಲಿ ಹನುಮಂತನು ಹೀಗೆ ಜಿಗಿದು ಸೀತಾಮಾತೆಯ ಬಳಿ ಹೋಗುತ್ತಾನೆ. ಇದು ಹನುಮನ ಪರಾಕ್ರಮ ಹಾಗೂ ನಂಬಿಕೆಯನ್ನು ತೋರಿಸುವಂತಹ ಒಂದು ಭಂಗಿಯಾಗಿದೆ.

ಇನ್ನು ಹನುಮಾನಾಸನ ಯೋಗದ ಭಂಗಿಯನ್ನು ಹಠಯೋಗದಲ್ಲಿ ಉಲ್ಲೇಖಿಸಿಲ್ಲ. ಆದರೆ 20 ನೇ ಶತಮಾನದಲ್ಲಿ ಈ ಯೋಗ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಈ ಹನುಮಾನಾಸನವನ್ನು ಅಯ್ಯಂಗಾರ್ ಯೋಗ ಮತ್ತು ಪಟ್ಟಾಭಿ ಜೋಯಿಸ್ ಅವರ ಅಷ್ಟಾಂಗ ವಿನ್ಯಾಸ ಯೋಗದಲ್ಲಿ ಕಾಣಬಹುದು. ಅಲ್ಲದೆ ಇತ್ತೀಚಿಗೆ ಆನ್ಲೈನ್ ಯೋಗ ತರಗತಿಗಳಲ್ಲಿಯೂ ಕೂಡ ಈ ಆಸನವನ್ನು ಕಲಿಸಿಕೊಡುತ್ತಾರೆ.

ಹನುಮಾನಸನದ ಪ್ರಯೋಜನಗಳು:

ಹನುಮಾನಾಸನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ತಿಳಿದರೆ ನೀವು ಕೂಡ ಈ ಆಸನವನ್ನು ಕಲಿತುಕೊಳ್ಳಲು ಪ್ರಯತ್ನಿಸಬಹುದು. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಪ್ರಯೋಜನವನ್ನು ಈ ಒಂದೇ ಒಂದು ಆಸನದಿಂದ ನೀವು ಪಡೆದುಕೊಳ್ಳಬಹುದು.

ದೇಹದ ಹಿಗ್ಗುವಿಕೆ:

ಕಾಲುಗಳನ್ನು ಮುಂಭಾಗದಲ್ಲಿ ವಿಭಜಿಸುವಂತಹ ಒಂದು ಆಸನ ಇದಾಗಿದ್ದು ಇದರಿಂದ ಸ್ನಾಯುಗಳು ವಿಸ್ತರಿಸುತ್ತವೆ. ಈ ಒಂದು ಭಂಗಿಯಿಂದ ಮಂಡಿ, ತೊಡೆ ಸಂದು, ಹಿಪ್ ಪ್ಲೆಕ್ಸರ್, ತೋಳುಗಳು ಹಿಂಬಾಗದ ಸ್ನಾಯುಗಳು ಹಿಗ್ಗುತ್ತವೆ ಅಂದರೆ ಸ್ಟ್ರೇಟ್ ಆಗುತ್ತದೆ.

ಫ್ಲೆಕ್ಸಿಬಿಲಿಟಿ (ದೇಹ ಹಾಗೂ ರಾಗುವುದು)

ಈ ಭಂಗಿಯಲ್ಲಿ ಸಂಪೂರ್ಣವಾಗಿ ನಮ್ಮ ದೇಹ ವಿಸ್ತರಿಸುವುದರಿಂದ ಸ್ನಾಯುಗಳು ಸಡಿಲವಾಗಿ ದೇಹವು ಹಗುರಾಗುತ್ತದೆ. ಅಥ್ಲೆಟಿಕ್ ನಂತಹ ಆಟಗಾರರಿಗೆ ಅವರ ಕಾರ್ಯಕ್ಷಮತೆಯನ್ನು ಈ ಭಂಗಿ ಹೆಚ್ಚಿಸುತ್ತದೆ ಅಲ್ಲದೇ ಗಾಯಗಳಾಗುವ ಸಾಧ್ಯತೆಯನ್ನು ಕೂಡ ಕಡಿಮೆ ಮಾಡುತ್ತದೆ.

ಸ್ನಾಯುಗಳ ಬಲಪಡಿಸುವಿಕೆ

ಆ ಆಸನವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಕಾಲುಗಳು, ಕೈ ತೋಳುಗಳು ಬಲಗೊಳ್ಳುತ್ತವೆ ದೇಹದ ಕೆಳ ಭಾಗದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತವೆ. ಸ್ನಾಯುಗಳು ಇನ್ನಷ್ಟು ಬಲವಾಗುತ್ತವೆ.

ದೇಹದ ಸ್ಥಿರತೆ;

ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಒಂದು ಅತ್ಯುತ್ತಮವಾದ ಭಂಗಿಯಾಗಿದೆ. ದೇಹದಲ್ಲಿ ಸ್ಥಿರತೆಯ ಅಗತ್ಯವಿದ್ದಾಗ ಆಸನವನ್ನು ಅಭ್ಯಾಸ ಮಾಡುವುದು ಒಳ್ಳೆಯದು. ಇದು ದೇಹದ ಸ್ಥಿರತೆಯನ್ನು ಸುಧಾರಿಸುತ್ತದೆ ಜೊತೆಗೆ ದೇಹವನ್ನು ಬಲಪಡಿಸುತ್ತದೆ.

ಕಿಬ್ಬೊಟ್ಟೆಯ ಆರೋಗ್ಯ ಸುಧಾರಿಸುತ್ತದೆ:

ಹನುಮಾನಾಸನ ಅಥವಾ ಮಂಕಿ ಭಂಗಿಯನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಾ ಬಂದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಸಂತಾನೋತ್ಪತ್ತಿ ಅಂಗಗಳ ಕಾರ್ಯ ನಿರ್ವಹಣೆ ಉತ್ತಮವಾಗುತ್ತದೆ.

ಮಾನಸಿಕ ಆರೋಗ್ಯಕ್ಕೆ ಅಸ್ತ್ರ:

ಹನುಮಾನಾಸನ ನಿಯಮಿತವಾಗಿ ಅಭ್ಯಾಸ ಮಾಡುತ್ತಾ ಬಂದರೆ ಮಾನಸಿಕ ಆರೋಗ್ಯವು ಸುಧಾರಿಸುತ್ತದೆ. ಮನಸ್ಸಿನ ಶಾಂತವಾಗಿ ಇಟ್ಟುಕೊಳ್ಳಲು, ಆತಂಕ ಒತ್ತಡ ನಿದ್ರಾಹೀನತೆ, ಮೊದಲಾದ ಸಮಸ್ಯೆಗಳಿಂದ ದೂರ ಇರಲು ಈ ಭಂಗಿ ಸಹಾಯ ಮಾಡುತ್ತದೆ.

ಚಕ್ರಗಳ ಸಮತೋಲನ:

ಇನ್ನು ಆಧ್ಯಾತ್ಮಿಕ ವಿಷಯಕ್ಕೆ ಬಂದರೆ ಹನುಮಾನಾಸನ ದೇಹದಲ್ಲಿನ ಚಕ್ರಗಳನ್ನು ಉತ್ತೇಜಿಸುತ್ತದೆ. ಮೂಲಾಧಾರ ಚಕ್ರ, ಸ್ವಾದಿಷ್ಟನ ಚಕ್ರ ಇವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ನಮ್ಮಲ್ಲಿ ವೈಯಕ್ತಿಕ ಬೆಳವಣಿಗೆ, ಸೃಜನಶೀಲತೆ, ವಿಷಯದ ಮೇಲೆ ಕೇಂದ್ರೀಕರಿಸುವುದು ಮೊದಲಾದವುಗಳನ್ನು ಮೈಗೂಡಿಸಿಕೊಳ್ಳಲು ಸಹಾಯಕವಾಗುತ್ತದೆ.

ಮಾರ್ಗದರ್ಶನ:

ಈ ಭಂಗಿಯನ್ನು ಮಾಡಲು ಹೆಚ್ಚಿನ ಶಕ್ತಿ ಮತ್ತು ದೇಹದಲ್ಲಿ ಫ್ಲೆಕ್ಸಿಬಿಲಿಟಿ ಬೇಕಾಗುತ್ತದೆ. ನೀವು ಹಲವು ವರ್ಷಗಳಿಂದ ಯೋಗಭ್ಯಾಸ ಮಾಡಿದವರಾಗಿದ್ದರೆ, ಹನುಮಾನಾಸನದ ಪೂರ್ವ ಭಂಗಿಗಳಾದ ಬದ್ಧಕೋನಾಸನ, ಸಿರ್ಶಾಸನ, ಪಶ್ಚಿಮೊತ್ಥಾಸನ, ಮೊದಲಾದವುಗಳನ್ನು ನೀವು ಅಭ್ಯಾಸ ಮಾಡಿದ್ದರೆ ಈ ಆಸನವು ನಿಮಗೆ ಸುಲಭವಾಗಬಹುದು.

ಹನುಮಾನ್ ಆಸನ ಮಾಡುವುದು ಹೇಗೆ?

ಮೊದಲು ನೆಲದ ಮೇಲೆ ಮೊಣಕಾಲು ಮಡಚಿದ ರೀತಿಯಲ್ಲಿ ಕುಳಿತುಕೊಳ್ಳಬೇಕು. ತಪ್ಪದೆ ಯೋಗ ಮಾಡುವಾಗ ಯೋಗ ಮ್ಯಾಟ್ ಬಳಸಿ. ಬೆನ್ನು ಮೂಳೆಗಳನ್ನು ನೇರವಾಗಿ ಇಟ್ಟುಕೊಳ್ಳಿ. ಈಗ ನಿಧಾನವಾಗಿ ಬಲ ಪಾದವನ್ನು ನಿಮ್ಮ ಅಡಿಭಾಗದಿಂದ ನೇರವಾಗಿ ಹಿಮ್ಮಡಿಯಲ್ಲಿ ನೆಲವನ್ನು ಸ್ಪರ್ಶಿಸಿ. ನಂತರ ಎಡ ಮೋಣಕಾಲು ಹಿಂದಕ್ಕೆ ಸರಿಸಿ. ನಿಮ್ಮ ಎಡ ಭಾಗವು ಮೇಲ್ಮುಖವಾಗಿರಬೇಕು ಕಾಲ್ ಬೆರಳುಗಳು ನೆಲಕ್ಕೆ ಸಮಾನಾಂತರವಾಗಿರಬೇಕು. ಎರಡು ಕಾಲುಗಳನ್ನು ನಿಧಾನವಾಗಿ ಸ್ಟ್ರೇಟ್ ಮಾಡುತ್ತಾ ಬನ್ನಿ. ಇದು ವಿಭಜಿತ ಭಂಗಿಯಂತೆ ಕಾಣಿಸಬೇಕು. ಈಗ ಆಳವಾಗಿ ಉಸಿರು ಎಳೆದುಕೊಳ್ಳಿ ಉಸಿರನ್ನು ಬಿಡುವಾಗ ತೋಳುಗಳನ್ನು ಮೇಲಕ್ಕೆತ್ತಿ. ನಂತರ ಕೈಗಳನ್ನು ಅಗಲ ಮಾಡಿ ನಿಮ್ಮ ಬೆನ್ನು ಮೂಳೆಯನ್ನು ಸ್ವಲ್ಪ ಹಿಂದಕ್ಕೆ ಭಾಗಿಸಿ. ಕೆಲವು ಸೆಕೆಂಡ್ ಗಳ ಕಾಲ ಈ ಭಂಗಿಯಲ್ಲಿ ಇದ್ದು ನಂತರ ತೋಳನ್ನು ಹಿಂದಕ್ಕೆ ತನ್ನಿ. ಭಂಗಿಯಿಂದ ಹೊರಬಂದು ಆರಾಮದಾಯಕ ಸ್ಥಿತಿಗೆ ತಿರುಗಿ.

ಇನ್ನು ಕಾಲುಗಳನ್ನು ಸಂಪೂರ್ಣವಾಗಿ ಅಗಲ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಅರ್ಧ ಹನುಮಾನಾಸನ ಕೂಡ ಮಾಡಬಹುದು ಇದು ಕೂಡ ಪೂರ್ವ ಸಿದ್ಧತಾ ಭಂಗಿ ಆಗಿದೆ. ಸರಿಯಾದ ಮಂಕಿ ಭಂಗಿಯನ್ನು ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಮುನ್ನೆಚ್ಚರಿಕೆಗಳು:

ಮೊದಲನೇದಾಗಿ ತೊಡೆ ಸಂದು ಅಥವಾ ಮಂಡಿಯಲ್ಲಿ ಯಾವುದೇ ಗಾಯ ಇದ್ದರೆ ಅಥವಾ ನೋವು ಇದ್ದರೆ ಈ ಯೋಗದ ಭಂಗಿಯನ್ನು ಅಭ್ಯಾಸ ಮಾಡಬೇಡಿ. ಇನ್ನು ಈ ಭಂಗಿಯ ಅಭ್ಯಾಸಕ್ಕೂ ಮೊದಲು ಸರಳವಾದ ಸ್ಟ್ರೆಚಿಂಗ್ ವ್ಯಾಯಾಮವನ್ನು ಅಭ್ಯಾಸ ಮಾಡಬೇಕು ನಿಮ್ಮ ದೇಹ ಮುಕ್ತ ಚಲನೆಗೆ ಅವಕಾಶ ನೀಡಿದ ನಂತರ ಈ ರೀತಿಯಾದಂತಹ ಭಂಗಿಗಿಯನ್ನು ಅಭ್ಯಾಸ ಮಾಡಬಹುದು.

ಇನ್ನು ಹನುಮಾನಾಸನ ಅಥವಾ ಯಾವುದೇ ಯೋಗದ ಭಂಗಿ ಮಾಡುವ 40 ನಿಮಿಷದ ಒಳಗೆ ಯಾವುದೇ ರೀತಿಯ ಭಾರಿ ಊಟವನ್ನು ಮಾಡಬೇಡಿ. ಗರ್ಭಿಣಿಯರು ಈ ಯೋಗಾಸನ ಮಾಡದೆ ಇರುವುದು ಒಳ್ಳೆಯದು.

ಹನುಮಾನಾಸನ ಕಠಿಣವಾದ ಭಂಗಿ ಎನಿಸಿಕೊಂಡಿದೆ ಆದರೆ ನೀವು ಸರಿಯಾದ ಅಭ್ಯಾಸ ಮಾಡಿ ಸರಿಯಾದ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ, ನಿಯಮಿತವಾಗಿ ಈ ಭಂಗಿ ಅಥವಾ ಆಸನವನ್ನು ಮಾಡುತ್ತಾ ಬಂದರೆ ಅದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳು ಮಾತ್ರ ಸಾವಿರಾರು. ಒಮ್ಮೆ ಈ ಹನುಮಾನಾಸನ ಅಭ್ಯಾಸವಾದರೆ ನೀವು ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Benefits of Hanumanasana (Monkey Pose) In Kannada

Here are benefits of Hanumanasana, Read on...
Story first published: Monday, April 3, 2023, 9:39 [IST]
X
Desktop Bottom Promotion