Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಯಾರು ನಿನ್ನ ಬೆಸ್ಟ್ ಫ್ರೆಂಡ್ ಅಂದಾಗ ಅಷ್ಟು ಫ್ರೆಂಡ್ಸ್‌ಗಳ ನಡುವೆ ಮೊದಲು ಬರುವ ಹೆಸರೇ ಪನ್ನಗ....
ಜೀವನ ಎನ್ನುವ ಪಯಣದಲ್ಲಿ ನಾವು ಸಾವಿರಾರು ಜನರನ್ನು ಭೇಟಿ ಮಾಡುತ್ತೇವೆ. ನೂರಾರು ಜನರ ಫೋನ್ ನಂಬರ್ ಸೇವ್ ಮಾಡಿಕೊಳ್ಳುತ್ತೇವೆ. ಅದರಲ್ಲಿ ಒಂದು ಮೂವತ್ತು ಜನರ ಜೊತೆ ಫೋಟೋಗೆ ಪೋಸ್ ಕೊಟ್ಟಿರಬಹುದು, ಒಂದು ಹತ್ತು ಜನರ ಬರ್ತಡೇ ನೆನಪು ಇರಬಹುದು, ಐದಾರು ಜನರ ಜೊತೆ ದಿನ ಮಾತಾಡಬಹುದು,
ಇಷ್ಟೆಲ್ಲ ಜನರ ನಡುವೆ ನಿನ್ನ ಬೆಸ್ಟ್ ಫ್ರೆಂಡ್ ಯಾರು ಅಂತ ಕೇಳಿದಾಗ ತಲೆಕೆಟ್ಟಂತಾಗುವುದು ಸಹಜ. ಆದರೆ ನಾನು ಈ ವಿಷಯದಲ್ಲಿ ಬಹಳ ಅದೃಷ್ಟದಂತೆ, ಕಳೆದ 15 ವರ್ಷದಿಂದ ಈ ಪ್ರಶ್ನೆ ಯಾರೇ ಕೇಳಿದರೂ ಒಂದೇ ಹೆಸರು...ಒಂದೇ ಉತ್ತರ... ಪ್ರೀತಿಯ ಪನ್ನಗ

ಒಮ್ಮೆ ಶುರುವಾದರೆ ನಿಲ್ಲದ ನಮ್ಮ ಮಾತು, ಗಂಭೀರ ಪರಿಸ್ಥಿತಿಯಲ್ಲೂ ನಗುವ ನಮ್ಮ ಕೆಟ್ಟ ಚಾಳಿ, ಆಗಾಗ ಸಣ್ಣ ಪುಟ್ಟ ಮುನಿಸು, ಒಂದಿಷ್ಟು ದಿನಗಳ ಮೌನ... ಎಲ್ಲವನ್ನು ಅನುಭವಿಸಿಯು ಕೂಡ ಇಂದಿಗೂ ನಮ್ಮ ಸ್ನೇಹ ಬಾಲ್ಯದಲ್ಲಿ ಹಂಚಿ ತಿಂದ ಚಾಕಲೇಟ್ ನಷ್ಟೇ ಸಿಹಿಯಾಗಿದೆ. ಕಳೆದ ನಾಲ್ಕು ವರ್ಷದಿಂದ ನಾನು ದೂರದ ಊರಿನ ಹಾಸ್ಟೆಲ್ ನಲ್ಲಿ ಇದ್ದರೂ ಕೂಡ ನಮ್ಮ ಆಪ್ತತೆಗೆ ಯಾವ ಆಪತ್ತು ಬಂದಿಲ್ಲ.
ನಮ್ಮ ಸ್ನೇಹಿತರ ಬಗ್ಗೆ ನಮ್ಮ ಕುಟುಂಬದವರಿಗೆ ಗೊತ್ತಿದ್ದಷ್ಟು ಸ್ನೇಹ ಆಳವಾಗಿರುತ್ತೆ ಎಂದು ಹೇಳುತ್ತಾರೆ. ನಮ್ಮ ವಿಷಯದಲ್ಲಿ ಅವಳು ನನ್ನ ಕುಟುಂಬದ ಒಂದು ಭಾಗ ಎನ್ನಬಹುದು. ನನ್ನ ಅಮ್ಮನಿಗೆ ಒಳ್ಳೆಯ ಜೊತೆಗಾತಿಯಾಗಿ ನಿಂತಿದ್ದು ಅವಳ ಅಮ್ಮ, ನನ್ನ ತಮ್ಮನಿಗೆ ತುಂಟಾಟದಲ್ಲಿ ಪಾರ್ಟ್ನರ್ ಆಗಿ ಅವಳ ತಮ್ಮ ನಮ್ಮ ಹಾಗೆ ಅವರು ಈಗ ಸ್ನೇಹಿತರು.
ಕೊರೋನಾ ಎಂಬ ಅಲೆ ನನ್ನ ಕುಟುಂಬಕ್ಕೆ ಜೋರಾಗಿ ತಟ್ಟಿತ್ತು. ನೆರೆ ಬಂದಂತಾಗಿದ್ದ ನಮಗೆ ನೆಲೆ ಕಲ್ಪಿಸಿ ಆಸರೆಯಾಗಿದ್ದು ಪನ್ನಗಳ ಕುಟುಂಬ. ಯಾರು ಜೊತೆ ಇಲ್ಲದ ಸಮಯದಲ್ಲಿ ಪುಟ್ಟ ಸೂರು ನೀಡಿ ಆರ್ಥಿಕವಾಗಿ, ಮಾನಸಿಕವಾಗಿ ನಮ್ಮ ಜೊತೆ ನಿಂತು ಅಂದು ಅವರು ಚಾಚಿದ ಸಹಾಯ ಹಸ್ತವನ್ನು ಎಂದಿಗೂ ಮರೆಯುವುದಿಲ್ಲ ಹಾಗೆ ಜೀವನಪೂರ್ತಿ ಸ್ನೇಹದ ಬಂಧವನ್ನು ಬಿಡುವುದಿಲ್ಲ ಎಂಬ ಭರವಸೆ ನೀಡಬಲ್ಲೆ ಅಷ್ಟೇ ಹೊರತು ಅವರ ಉಪಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ನಾವು ಬೆಳೆದಿದ್ದು ಒಂದೇ ಮನೆಯ ಮಕ್ಕಳಂತೆ, ಅದೆಷ್ಟೋ ಬಾರಿ ಹಲವರು ನಮ್ಮನ್ನು ಅಕ್ಕ - ತಂಗಿ ಎಂದು ತಪ್ಪಾಗಿ ಭಾವಿಸಿದ್ದು ಇದೆ. ಎರಡು ಜಡೆ ಹಾಕಿಕೊಂಡು ಒಟ್ಟಿಗೆ ಶಾಲೆಗೆ ಹೋಗುತ್ತಿದ್ದಾಗ ಸಿಗುತ್ತಿದ್ದ ನಾವು ಈಗ ಭೇಟಿಯಾಗಲು ತಿಂಗಳಗಟ್ಟಲೆ ಕಾಯಬೇಕು. ಫ್ರೆಂಡ್ ಹುಡುಕಾಟದಲ್ಲಿದ್ದ ನನಗೆ ಫ್ಯಾಮಿಲಿಯನ್ನು ಕೊಟ್ಟವಳು ಪನ್ನಗ. ಅವಳ ಜೊತೆ ಇದ್ದಾಗಲೆಲ್ಲ ಮತ್ತೆ ಬಾಲ್ಯಕ್ಕೆ ಹೋಗಿ ಜೊತೆಯಾಗಿ ಕುಂಟೆ ಬಿಲ್ಲೆ ಆಡಿ ಗೆದ್ದಷ್ಟೇ ಸಂತೋಷವಾಗುತ್ತದೆ.
ನಮ್ಮ ನಡುವೆ ಮೈಲಿಗಳ ಅಂತರ ಬಂದರು, ಮನಸ್ಸು ಎಂದಿಗೂ ಹತ್ತಿರ ಇರಲು ಬಯಸುತ್ತದೆ. ಅವಳ ಸ್ನೇಹಕ್ಕೆ ಅವಳ ಕುಟುಂಬದ ವಾತ್ಸಲ್ಯಕ್ಕೆ ನಾನು ಎಂದಿಗೂ ಚಿರಋಣಿ. ಈ ನಮ್ಮ ಸ್ನೇಹ ಚಿರಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ ಮತ್ತು ಅದನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
ಮಾನಸ ಅಗ್ನಿಹೋತ್ರಿ , ಬಳ್ಳಾರಿ



Click it and Unblock the Notifications
