ಮಕ್ಕಳು ಬ್ರೊಕೊಲಿ ತಿನ್ನಲ್ವಾ? ಈ ರೀತಿ ದೋಸೆ ಮಾಡಿಕೊಡಿ.. ಇಷ್ಟಪಟ್ಟು ತಿಂತಾರೆ! ಸೂಪರ್ ರುಚಿ

Posted By:

ಮಕ್ಕಳು ಬ್ರೊಕೊಲಿ ತಿನ್ನಲ್ವಾ? ಈ ರೀತಿ ದೋಸೆ ಮಾಡಿಕೊಡಿ, ಇಷ್ಟಪಟ್ಟು ತಿಂತಾರೆ! ಇದು ಬೆಳಗಿನ ತಿಂಡಿಗೆ ಸೂಪರ್ ಹೆಲ್ದಿ ದೋಸೆ (Dosa Recipe). ಮನೆಯಲ್ಲೇ ಮಾಡುವ ಸಿಂಪಲ್ ಸೀಕ್ರೆಟ್ ಟಿಪ್ಸ್ ಇಲ್ಲಿದೆ. ಹೌದು, ಇಂದಿನ ಜೀವನಶೈಲಿಯಲ್ಲಿ ರುಚಿ ಮತ್ತು ಆರೋಗ್ಯವನ್ನು ಸಮತೋಲನಗೊಳಿಸುವ ಉಪಾಹಾರದ ಅಗತ್ಯ ಹೆಚ್ಚಿದೆ. ಮಕ್ಕಳು ಹಸಿರು ತರಕಾರಿಗಳನ್ನು ಇಷ್ಟಪಡದಿರುವುದು ಸಾಮಾನ್ಯ.

ಬ್ರೊಕೊಲಿಯಂತಹ (Broccoli) ಪೌಷ್ಟಿಕ ತರಕಾರಿಯನ್ನು ತಿನ್ನಿಸುವುದು ಪೋಷಕರಿಗೆ ಸವಾಲೇ ಸರಿ. ಇಂತಹ ಸಮಯದಲ್ಲಿ ಬ್ರೊಕೊಲಿಯನ್ನು ದೋಸೆಯ ರೂಪದಲ್ಲಿ ನೀಡುವುದು ಅತ್ಯುತ್ತಮ ಪರಿಹಾರ. ಇದು ಕೇವಲ ರುಚಿಕರ ಮಾತ್ರವಲ್ಲದೆ ದೇಹಕ್ಕೆ ಅಗತ್ಯ ಪ್ರೋಟೀನ್ ಮತ್ತು ವಿಟಮಿನ್‌ಗಳನ್ನು ಒದಗಿಸುತ್ತದೆ. ಪೌಷ್ಟಿಕಾಂಶದ ಆಗರವಾಗಿರುವ ಬ್ರೊಕೊಲಿಯನ್ನು ದೋಸೆಯ (Broccoli Dosa) ರೂಪದಲ್ಲಿ ಸೇವಿಸುವುದರಿಂದ ಹಲವಾರು ಲಾಭಗಳಿವೆ.

ವಿಟಮಿನ್ ಸಿ, ಕೆ ಮತ್ತು ನಾರಿನಂಶಗಳಿಂದ ಸಮೃದ್ಧವಾಗಿರುವ ಈ ದೋಸೆ, ಹಿಟ್ಟು ಹೊಸ ರುಚಿ ಹಾಗೂ ಆಕರ್ಷಕ ಹಸಿರು ಬಣ್ಣವನ್ನು ನೀಡುತ್ತದೆ. ಗರಿಗರಿಯಾದ ವಿನ್ಯಾಸದಿಂದಾಗಿ ಮಕ್ಕಳು ಇದನ್ನು ಇಷ್ಟಪಡುತ್ತಾರೆ. ಈ ಲೇಖನದಲ್ಲಿ ಮಕ್ಕಳು ಹಾಗೂ ದೊಡ್ಡವರಿಗೆ ಇಷ್ಟವಾಗುವ ಈ ಹೆಲ್ದಿ ಬ್ರೊಕೊಲಿ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Broccoli Dosa Recipe) ತಿಳಿಯೋಣ ಬನ್ನಿ.

ಆರೋಗ್ಯಕ್ಕೆ ಏನು ಲಾಭ?

ಬ್ರೊಕೊಲಿ ದೋಸೆ ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ಹೇರಳವಾಗಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಧಿಕ ನಾರಿನಂಶ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಅಂಶಗಳಿಂದಾಗಿ ಮೂಳೆಗಳು ಬಲಗೊಳ್ಳುತ್ತವೆ. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಈ ದೋಸೆಯು ತೂಕ ಇಳಿಕೆ ಬಯಸುವವರಿಗೂ ಆಯ್ದ ಆರೋಗ್ಯಕರ ಆಯ್ಕೆಯಾಗಿದೆ.

ಬ್ರೊಕೊಲಿ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಸುಲಭವಾಗಿ ಮನೆಯಲ್ಲೇ ಈ ಪೌಷ್ಟಿಕ ದೋಸೆಯನ್ನು ತಯಾರಿಸಲು ಈ ಕೆಳಗಿನ ಸಾಮಗ್ರಿಗಳು ಸಾಕು ಅಥವಾ ಬೇಕು.

• ಬ್ರೊಕೊಲಿ - 1 ಕಪ್
• ದೋಸೆ ಹಿಟ್ಟು ಅಥವಾ ರವೆ (ಸೂಜಿ) - 1 ಕಪ್
• ಮೊಸರು - ಅರ್ಧ ಕಪ್
• ಹಸಿ ಮೆಣಸಿನಕಾಯಿ - 1
• ಈರುಳ್ಳಿ - 1
• ಶುಂಠಿ ತುರಿ - 1 ಚಮಚ
• ಜೀರಿಗೆ - ಅರ್ಧ ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - ದೋಸೆ ಸುಡಲು

ಬ್ರೊಕೊಲಿ ದೋಸೆ ತಯಾರಿಸುವ ವಿಧಾನ

- ಮೊದಲಿಗೆ, ಬ್ರೊಕೊಲಿಯನ್ನು ಉಪ್ಪು ನೀರಿನಲ್ಲಿ ತೊಳೆದು, ಸಣ್ಣದಾಗಿ ಹೆಚ್ಚಿರಿ. ಅಥವಾ, ಹಬೆಯಲ್ಲಿ ಬೇಯಿಸಿ ಹಿಸುಕಿದರೂ (ಮ್ಯಾಶ್) ಉತ್ತಮ. ಇದು ಹಿಟ್ಟಿನೊಂದಿಗೆ ಸುಲಭವಾಗಿ ಬೆರೆಯಲು ಸಹಕಾರಿ.

- ಈಗ ದೋಸೆ ಹಿಟ್ಟನ್ನು ಪಾತ್ರೆಯಲ್ಲಿ ತೆಗೆದುಕೊಳ್ಳಿ. ರವೆ ಬಳಸುವವರಾದರೆ, ಮೊಸರು-ನೀರು ಸೇರಿಸಿ ಹದಿನೈದು ನಿಮಿಷ ನೆನೆಯಲು ಬಿಡಿ.

- ನಂತರ ಇದಕ್ಕೆ ಹೆಚ್ಚಿದ ಬ್ರೊಕೊಲಿ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ತುರಿ, ಜೀರಿಗೆ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಹಿಟ್ಟು ದೋಸೆ ಹದಕ್ಕೆ ಇರಲಿ.

- ದೋಸೆ ಹಂಚನ್ನು (ತವಾ) ಬಿಸಿ ಮಾಡಿ, ಎಣ್ಣೆ ಸವರಿ. ಒಂದು ಸೌಟು ಹಿಟ್ಟನ್ನು ಹಂಚಿನ ಮೇಲೆ ಹಾಕಿ ತೆಳುವಾಗಿ ಹರಡಿ. ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ.

- ಬಳಿಕ ಮಧ್ಯಮ ಉರಿಯಲ್ಲಿ ದೋಸೆಯ ಎರಡೂ ಬದಿ ಕೆಂಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಬೇಯಿಸಿ. ಬ್ರೊಕೊಲಿಯ ಹಸಿ ವಾಸನೆ ಹೋಗಿ, ಕಂಪು ಬರುವವರೆಗೆ ಬೇಯಿಸುವುದು ಮುಖ್ಯ.

- ಇಷ್ಟು ಮಾಡಿದರೆ ಸಾಕು, ಆರೋಕ್ಯಕರ ಮತ್ತು ರುಚಿಕರವಾದ ಬ್ರೊಕೊಲಿ ದೋಸೆ ಸವಿಯಲು ಸಿದ್ದ.

- ಬಿಸಿ ಬಿಸಿಯಾದ ಬ್ರೊಕೊಲಿ ದೋಸೆಯನ್ನು ಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ಸಾರಿನೊಂದಿಗೆ ಸವಿಯಿರಿ. ಮಕ್ಕಳಿಗೆ ನೀಡುವಾಗ ಚೀಸ್ ತುರಿ ಸೇರಿಸಿದರೆ ಅವರು ಇನ್ನೂ ಇಷ್ಟಪಟ್ಟು ತಿಂತಾರೆ.

[ of 5 - Users]
X
Desktop Bottom Promotion