ಮಳೆ, ಚಹಾ, ಪಕೋಡ: ಮಸಾಲಾ ಟೀ ಜೊತೆ ಈ ಪಕೋಡಗಳು ಇದ್ರೆ ಸ್ವರ್ಗ

Posted By:

ಮಳೆಗಾಲ ಬಂತೆಂದರೆ ಬಿಸಿ ಬಿಸಿಯಾದ ಪಕೋಡ ತಿನ್ನಬೇಕೆಂಬ ಆಸೆ ಎಲ್ಲರಿಗೂ ಬರುತ್ತದೆ. ಅದರಲ್ಲೂ ಚಹಾ ಇದ್ದರೆ ಪಕೋಡದ (pakoras) ರುಚಿಯೇ ಬೇರೆ. ಆದರೆ, ಮೊದಲು ನಿಮಗೆ ಯಾವ ತರಕಾರಿ ಪಕೋಡ ಬೇಕು ಅಂತ ಆಯ್ಕೆ ಮಾಡಿಕೊಳ್ಳಿ. ನೀವು ಮೊಸರು ಅಥವಾ ಟೊಮೆಟೊ ಸಾಸ್‌ನೊಂದಿಗೆ ಈ ಪಕೋಡಗಳನ್ನು ಸವಿಯಬಹುದು. ನಾವು ಮಳೆಗಾಲಕ್ಕೆ ಸೂಕ್ತವಾದ ಏಳು ಬಗೆಯ ಪಕೋಡಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ. ಈ ಮಳೆಗಾಲದಲ್ಲಿ ಮನೆಯಲ್ಲಿಯೇ ಪಕೋಡ ಮಾಡಿ ನಿಮ್ಮ ಕುಟುಂಬದವರೊಂದಿಗೆ ಆನಂದಿಸಿ.

ಮಳೆಗಾಲದಲ್ಲಿ (monsoon) ಬಿಸಿ ಬಿಸಿಯಾದ ಚಹಾ ಮತ್ತು ಕರಿದ ತಿಂಡಿಗಳ ಕಾಂಬಿನೇಷನ್ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಪಕೋಡ ಎಂದರೆ ಬಾಯಲ್ಲಿ ನೀರೂರುತ್ತದೆ. ಬೇರೆ ಬೇರೆ ತರಕಾರಿಗಳನ್ನು ಬಳಸಿ ಮಾಡುವ ಪಕೋಡ ರುಚಿಕರವಾಗಿರುತ್ತದೆ. ಇವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದಂತಹ ತಿಂಡಿಯಾಗಿದೆ. ಅದರಲ್ಲೂ ಈರುಳ್ಳಿ ಪಕೋಡವನ್ನು 'ಮಳೆಗಾಲದ ತಿಂಡಿಗಳ ರಾಜ' ಎಂದೇ ಹೇಳಬಹುದು. ಇದನ್ನು ಹೊರತುಪಡಿಸಿ ನೀವು ಮಾಡಬಹುದಾದ ಪಕೋಡಗಳು ಇಲ್ಲಿವೆ.

pakora recipes

ಈರುಳ್ಳಿ ಪಕೋಡ

ಮಳೆಗಾಲದಲ್ಲಿ ಬಿಸಿ ಬಿಸಿಯಾದ ಈರುಳ್ಳಿ ಪಕೋಡ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ, ಈರುಳ್ಳಿ ಪಕೋಡಗೆ ಅಗ್ರಸ್ಥಾನ. ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯ ಖಾರ ಮಿಶ್ರಣದ ರುಚಿ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಇದನ್ನು ತಯಾರಿಸಲು, ಕತ್ತರಿಸಿದ ಈರುಳ್ಳಿಯನ್ನು ಕಡಲೆ ಹಿಟ್ಟು, ಹಸಿರು ಮೆಣಸಿನಕಾಯಿ, ಓಂ ಕಾಳು, ಉಪ್ಪು ಮತ್ತು ಅರಿಶಿನದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಆದರೆ, ಇದಕ್ಕೆ ಹೆಚ್ಚುವರಿ ನೀರು ಹಾಕುವುದನ್ನು ತಪ್ಪಿಸಬೇಕು. ಬಳಿಕ, ಗರಿಗರಿಯಾಗುವವರೆಗೆ ಬಿಸಿ ಎಣ್ಣೆಯಲ್ಲಿ ಕರಿಯಬೇಕು. ಹೀಗೆ ತಯಾರಿಸಿದ ಈರುಳ್ಳಿ ಪಕೋಡಾ ಮಳೆಯಲ್ಲಿ ತಿನ್ನಲು ಬಲು ರುಚಿ. ಇದನ್ನು ಪುದೀನಾ ಚಟ್ನಿ ಮತ್ತು ಚಹಾದೊಂದಿಗೆ ಸವಿಯಬಹುದು.

ಆಲೂಗೆಡ್ಡೆ ಪಕೋಡ

ಬಿಸಿ ಬಿಸಿಯಾದ ಆಲೂಗೆಡ್ಡೆ ಪಕೋಡಾ ಮಳೆಗಾಲದಲ್ಲಿ ತಿನ್ನಲು ಹೇಳಿ ಮಾಡಿಸಿದ ತಿನಿಸು. ಆಲೂಗೆಡ್ಡೆಯ ಹೋಳುಗಳನ್ನು ಮಸಾಲೆ ಮಿಶ್ರಿತ ಕಡಲೆ ಹಿಟ್ಟಿನ ದ್ರಾವಣದಲ್ಲಿ ಅದ್ದಿ, ಬಳಿಕ ಕರಿಯಬೇಕು. ಕಡಲೆ ಹಿಟ್ಟಿಗೆ ಓಂ ಕಾಳು, ಜೀರಿಗೆ, ಮತ್ತು ಕೆಂಪು ಮೆಣಸಿನಕಾಯಿ ಸೇರಿಸುವುದರಿಂದ ರುಚಿ ಹೆಚ್ಚಾಗುತ್ತದೆ. ಇದು ಜೀರ್ಣಕ್ರಿಯೆಗೂ ಸಹಕಾರಿ. ಕೆಲವರು ಆಲೂಗೆಡ್ಡೆ ಹೋಳುಗಳನ್ನು ಮೊದಲು ಚಟ್ನಿಯಲ್ಲಿ ಅದ್ದಿ, ನಂತರ ಹಿಟ್ಟಿನಲ್ಲಿ ಅದ್ದಿ ಕರಿಯುತ್ತಾರೆ. ಈ ಪಕೋಡಗಳನ್ನು ಚಟ್ನಿಯೊಂದಿಗೆ ಸವಿಯಲು ರುಚಿಕರ. ಮಳೆಗಾಲದಲ್ಲಿ ಬಿಸಿ ಚಹಾದೊಂದಿಗೆ ಸೇವಿಸಿದರೆ, ಹಿತವಾದ ಅನುಭವ ಖಚಿತ.

pakoda recipes

ಪನ್ನೀರ್ ಪಕೋಡ

ಪನ್ನೀರ್ ಪಕೋಡ ಸಹ ಜನಪ್ರಿಯ ತಿಂಡಿ. ಪನ್ನೀರ್ ತುಂಡುಗಳನ್ನು ಮಸಾಲೆ ಮಿಶ್ರಿತ ಕಡಲೆ ಹಿಟ್ಟಿನಲ್ಲಿ ಅದ್ದಿ ಕರಿದರೆ ಗರಿಗರಿಯಾಗಿರುತ್ತದೆ. ಬಾಯಿಯಲ್ಲಿ ಕರಗುವಂತಹ ಟೇಸ್ಟ್ ನೀಡುತ್ತದೆ. ರುಚಿಯನ್ನು ಇನ್ನಷ್ಟು ಹೆಚ್ಚಿಸಲು, ಪನ್ನೀರ್ ತುಂಡುಗಳನ್ನು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ನಿಂಬೆ ರಸದೊಂದಿಗೆ ಮ್ಯಾರಿನೇಟ್ ಮಾಡಬಹುದು. ಇದನ್ನು ಕೊತ್ತಂಬರಿ ಚಟ್ನಿ ಜೊತೆಗೆ ಸವಿದರೆ, ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಪನ್ನೀರ್ ಪಕೋಡ ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಇದು ಹೊಟ್ಟೆ ತುಂಬಿಸುವ ಮತ್ತು ಎಲ್ಲರಿಗೂ ಇಷ್ಟವಾಗುವಂತಹ ತಿಂಡಿಯಾಗಿದೆ.

ಪಾಲಕ್ ಪಕೋಡ

ಮಳೆಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕೆನಿಸಿದರೆ, ಪಾಲಕ್ ಪಕೋಡ ಬೆಸ್ಟ್ ಆಯ್ಕೆ. ಇದು ಟೀ ಟೈಮ್‌ಗೆ ಹೊಸ ರುಚಿ ನೀಡುವ ತಿಂಡಿ. ಪಾಲಕ್ ಸೊಪ್ಪನ್ನು ಮಸಾಲೆ ಮಿಶ್ರಿತ ಕಡಲೆ ಹಿಟ್ಟಿನಲ್ಲಿ ಅದ್ದಿ, ಕರಿಯಲಾಗುತ್ತದೆ. ಈ ಪಕೋಡಗಳು ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಹಿತವಾಗಿವೆ. ಪಾಲಕ್ ಕಬ್ಬಿಣ, ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಾಲಕ್ ಸೊಪ್ಪನ್ನು ಸಣ್ಣಗೆ ಕತ್ತರಿಸಿ, ನೇರವಾಗಿ ಹಿಟ್ಟಿಗೆ ಸೇರಿಸಲಾಗುತ್ತದೆ. ಹೆಚ್ಚು ರುಚಿಗಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ ಅಥವಾ ಕ್ಯಾರೆಟ್ ಸಹ ಬಳಸಬಹುದು. ಚಟ್ನಿಯೊಂದಿಗೆ ಈ ಪಕೋಡ ಸವಿಯಿರಿ. ಒಮ್ಮೆ ತಿಂದರೆ, ಮತ್ತೆ ಮತ್ತೆ ತಿನ್ನಬೇಕೆನಿಸುವ ರುಚಿ ಇದರಲ್ಲಿ ಅಡಿಗಿದೆ.

pakora

ಇದರೊಂದಿಗೆ, ಬ್ರೆಡ್ ಪಕೋಡ ಸಹ ಮಳೆಗಾಲಕ್ಕೆ ಸೂಕ್ತವಾಗಿದೆ. ಇದು ಭಾರತದ ಬೀದಿ ಬದಿಯ ಅತ್ಯಂತ ಜನಪ್ರಿಯ ತಿನಿಸುಗಳಲ್ಲಿ ಒಂದು. ನೀವು ಗೋಬಿ ಪಕೋಡ ಅಥವಾ ಹೂಕೋಸು ಪಕೋಡ ಸಹ ಮಾಡಬಹುದು. ಇದು ಸಹ ಮಳೆಗಾಲಕ್ಕೆ ಸೂಕ್ತವಾದ ತಿಂಡಿಯಾಗಿದೆ. ಇದರ ಹೊರತಾಗಿ, ಮಿಕ್ಸ್‌ ತರಕಾರಿ ಪಕೋಡ ಸಹ ಈ ಸಾಲಿಗೆ ಸೇರುತ್ತದೆ. ನಿಮಗೆ, ಯಾವ ತರಕಾರಿಗಳನ್ನು ಉಪಯೋಗಿಸಬೇಕೆಂದು ಗೊಂದಲವಾದರೆ, ಮಿಕ್ಸ್ ತರಕಾರಿ ಪಕೋಡ ಒಮ್ಮೆ ಪ್ರಯತ್ನಿಸಿ. ಮನೆಯಲ್ಲಿ ಲಭ್ಯವಿರುವ ವಿವಿಧ ತರಕಾರಿಗಳನ್ನು ಬಳಸಿ ಮಾಡಬಹುದಾದ ಒಂದು ರುಚಿಕರವಾದ ತಿಂಡಿಯಾಗಿದೆ.

[ of 5 - Users]
Story first published: Wednesday, July 23, 2025, 17:55 [IST]
X
Desktop Bottom Promotion