ಬೆಳಿಗ್ಗೆ ಏನು ಮಾಡ್ಲಿ? ಚಿಂತೆ ಬೇಡ.. ತಕ್ಷಣ ಮಾಡಿ ಮಹಾರಾಷ್ಟ್ರ ಸ್ಟೈಲ್ ಕಂದ ಪೋಹಾ

Posted By:

ಬ್ರೇಕ್‌ಫಾಸ್ಟ್ ಟೆನ್ಶನ್ ಬಿಡಿ. ಆರೋಗ್ಯ ಮತ್ತು ರುಚಿಗೆ ಈ ಪೋಹಾ ರೆಸಿಪಿ ಟ್ರೈ ಮಾಡಿ. ಪ್ರತಿದಿನ ಬೆಳಗ್ಗೆ 'ಉಪಹಾರಕ್ಕೆ ಏನು ಮಾಡಲಿ? ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಸುಳಿಯುತ್ತದೆ. ಅದರಲ್ಲೂ ವಾರದ ದಿನಗಳಲ್ಲಿ, ಶೀಘ್ರವಾಗಿ ತಯಾರಿಸಬಹುದಾದ ಮತ್ತು ದೇಹಕ್ಕೆ ಹಗುರವಾದ ಆಹಾರವನ್ನು ಸೇವಿಸಲು ಎಲ್ಲರೂ ಬಯಸುತ್ತಾರೆ. ಪದೇ ಪದೆ ಇಡ್ಲಿ, ದೋಸೆ ಅಥವಾ ಪರಾಠ ತಿಂದು ಬೇಸರವಾಗಿದ್ದರೆ, ನಿಮಗಾಗಿ ಒಂದು ಸುಲಭ, ತ್ವರಿತ ಮತ್ತು ಅತ್ಯಂತ ರುಚಿಕರವಾದ ಆಯ್ಕೆ ಇಲ್ಲಿದೆ. ಅದುವೇ ಮಹಾರಾಷ್ಟ್ರದ ಜನಪ್ರಿಯ ಖಾದ್ಯವಾದ ಕಾಂದಾ ಪೋಹಾ (Kanda Poha). ಕಂದಾ ಪೋಹಾ ತಯಾರಿಸಲು ಅಗತ್ಯವಿರುವ ಸಾಮಗ್ರಿಗಳು ಮತ್ತು ವಿಧಾನ ಇಲ್ಲಿದೆ.

ಕಾಂದಾ ಪೋಹಾ (ಈರುಳ್ಳಿ ಅವಲಕ್ಕಿ) ಎಂಬುದು ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ, ಕೇವಲ 10 ರಿಂದ 15 ನಿಮಿಷಗಳಲ್ಲಿ ತಯಾರಿಸಬಹುದಾದ ಒಂದು ಶ್ರೇಷ್ಠ ಪಾಕವಿಧಾನ. ಇದು ಅವಲಕ್ಕಿ, ಈರುಳ್ಳಿ ಮತ್ತು ಶೇಂಗಾಬೀಜಗಳ ಮಿಶ್ರಣವಾಗಿದ್ದು, ಕಡಿಮೆ ಎಣ್ಣೆಯನ್ನು ಬಳಸಿ ತಯಾರಿಸುವುದರಿಂದ ಆರೋಗ್ಯಕ್ಕೂ ಹಿತಕರವಾಗಿದೆ. ಇದು ಸುಲಭವಾಗಿ ಜೀರ್ಣವಾಗುವುದರಿಂದ, ದಿನವಿಡೀ ನಿಮ್ಮನ್ನು ಚೈತನ್ಯದಿಂದ ಇಡುತ್ತದೆ. ಹೀಗಾಗಿ, ಬೆಳಗಿನ ಉಪಹಾರಕ್ಕೆ (Kanda Poha For Breakfast) ಇದು ಉತ್ತಮ ಆಯ್ಕೆಯಾಗಿದೆ.

Kanda Poha Recipe

ಕಂದಾ ಪೋಹಾ ತಯಾರಿಸಲು ಬೇಕಾದ ಸಾಮಗ್ರಿಗಳು

• ದಪ್ಪ ಅವಲಕ್ಕಿ (ಪೋಹಾ) - ಒಂದು ಕಪ್
• ಸಾಸಿವೆ - ಅರ್ಧ ಚಮಚ
• ಜೀರಿಗೆ - ಅರ್ಧ ಚಮಚ
• ಕಡಲೆಕಾಯಿ - 2 ಚಮಚ
• ಹಸಿ ಮೆಣಸಿನಕಾಯಿ - ಒಂದು
• ಇಂಗು - ಒಂದು ಚಿಟಿಕೆ
• ಎಣ್ಣೆ - 2 ಚಮಚ
• ಈರುಳ್ಳಿ - ಒಂದು ದೊಡ್ಡದು
• ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಕತ್ತರಿಸಿದ)
• ಉಪ್ಪು - ರುಚಿಗೆ ತಕ್ಕಷ್ಟು
• ನಿಂಬೆ ರಸ - ಒಂದು ಸಣ್ಣ ಚಮಚ
• ಸಕ್ಕರೆ - ಒಂದು ಚಿಟಿಕೆ
• ಕರಿಬೇವು - 8-10 ಎಲೆಗಳು

ಕಂದಾ ಪೋಹಾ ತಯಾರಿಸುವ ವಿಧಾನ

ಕಂದಾ ಪೋಹಾ ತಯಾರಿಸಲು, ದಪ್ಪ ಅವಲಕ್ಕಿ ಬಳಸುವುದು ಅತ್ಯಗತ್ಯ. ಅವಲಕ್ಕಿಯನ್ನು ನೇರವಾಗಿ ನೀರಿನಲ್ಲಿ ನೆನೆಸುವ ಬದಲು, ಜರಡಿಯೊಂದಕ್ಕೆ ಹಾಕಿ. ಅದರ ಮೇಲೆ ನೀರನ್ನು ಸುರಿದು ತಕ್ಷಣವೇ ಬಸಿಯಬೇಕು. ಇದರಿಂದ ಅವಲಕ್ಕಿ ಅಗತ್ಯವಿದ್ದಷ್ಟು ತೇವಾಂಶವನ್ನು ಹೀರಿಕೊಂಡು ಮೃದುವಾಗುತ್ತದೆ ಮತ್ತು ಅಂಟಿಕೊಳ್ಳುವುದಿಲ್ಲ.

ನಂತರ, ಈ ಅವಲಕ್ಕಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅದನ್ನು ಪಕ್ಕಕ್ಕಿಡಬೇಕು. ಇದು ಅವಲಕ್ಕಿಗೆ ಸೌಮ್ಯವಾದ ರುಚಿ ನೀಡುತ್ತದೆ.

ಒಗ್ಗರಣೆ ತಯಾರಿಸಲು, ಬಾಣಲೆ ಅಥವಾ ಕಡಾಯಿಯನ್ನು ಬಿಸಿ ಮಾಡಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಕೂಡಲೇ, ಶೇಂಗಾಬೀಜಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಶೇಂಗಾ ಕರುಕುರು ಆಗಿ ಉಳಿಯಲು, ಅವುಗಳನ್ನು ಪ್ರತ್ಯೇಕವಾಗಿ ತೆಗೆದಿಡುವುದು ಉತ್ತಮ.

Kanda Poha

ಉಳಿದ ಎಣ್ಣೆಗೆ ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಯಲು ಬಿಡಿ. ನಂತರ ಇಂಗು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಬಳಿಕ ಹೆಚ್ಚಿದ ಹಸಿಮೆಣಸು ಸೇರಿಸಿ ಹುರಿಯಿರಿ. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಮೃದು ಮತ್ತು ಪಾರದರ್ಶಕವಾಗುವವರೆಗೆ ಹುರಿಯಿರಿ. ಇದನ್ನು ಕಂದು ಬಣ್ಣ ಬರುವವರೆಗೆ ಬೇಯಿಸಬಾರದು.

ಈರುಳ್ಳಿ ಬೆಂದ ನಂತರ, ಚಿಟಿಕೆ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸಿದ್ಧಪಡಿಸಿದ ಅವಲಕ್ಕಿಯನ್ನು ಬಾಣಲೆಗೆ ಹಾಕಿ. ಮಸಾಲೆಯು ಅವಲಕ್ಕಿಯೊಂದಿಗೆ ಸಂಪೂರ್ಣವಾಗಿ ಮಿಶ್ರಣವಾಗುವವರೆಗೆ ನಿಧಾನವಾಗಿ ತಿರುಗಿಸಿ. ಪೋಹಾವನ್ನು ಕೇವಲ 1-2 ನಿಮಿಷಗಳ ಕಾಲ ಬಿಸಿ ಮಾಡಿ; ಹೆಚ್ಚು ಬೇಯಿಸುವುದರಿಂದ ಗಟ್ಟಿಯಾಗಬಹುದು.

ಅಂತಿಮವಾಗಿ, ಬಿಸಿಯಾದ ಪೋಹಾಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇಷ್ಟು ಮಾಡಿದರೆ ಕಂದಾ ಪೋಹಾ ಸವಿಯಲ ಸಿದ್ಧ. ಈ ವಿಧಾನವು ಪೋಹಾವನ್ನು ಮೃದು ಮತ್ತು ರುಚಿಕರವಾಗಿ ಮಾಡುತ್ತದೆ.

[ of 5 - Users]
Story first published: Friday, October 3, 2025, 8:45 [IST]
X
Desktop Bottom Promotion