ರಕ್ಷಾ ಬಂಧನ ಸ್ಪೆಷಲ್: ಮನೆಯಲ್ಲೇ ಗೋಡಂಬಿ ಬರ್ಫಿ ಮಾಡಿ ನೋಡಿ.. ರುಚಿಗೆ ವಾವ್ ಅಂತಿರಾ

Posted By:

ರಕ್ಷಾ ಬಂಧನ ಸ್ಪೆಷಲ್! 5 ನಿಮಿಷದಲ್ಲಿ ಮಾಡಬಹುದು ಗೋಡಂಬಿ ಬರ್ಫಿ. ರುಚಿಗೆ 'ವಾಹ್' ಅನ್ನಲೇಬೇಕು! ಗೋಡಂಬಿ ಬರ್ಫಿ ಅಥವಾ ಕಾಜು ಕಟ್ಲಿ (Cashew Barfi) ಉತ್ತರ ಭಾರತದ ಜನಪ್ರಿಯ ಮತ್ತು ರುಚಿಕರ ಸಿಹಿ ತಿನಿಸು. ಗೋಡಂಬಿ, ಸಕ್ಕರೆ ಹಾಗೂ ಏಲಕ್ಕಿ ಪುಡಿಯಿಂದ ತಯಾರಾಗುವ ಇದು, ಎಲ್ಲ ಸಿಹಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ತುಸು ದುಬಾರಿ. ಆದರೆ, ಮನೆಯಲ್ಲೇ ತಯಾರಿಸುವುದರಿಂದ ಹಣ ಉಳಿತಾಯವಾಗುತ್ತದೆ. ಜೊತೆಗೆ ರುಚಿಯೂ ಚೆನ್ನಾಗಿರುತ್ತದೆ. ಈ ರಾಖಿ ಹಬ್ಬಕ್ಕೆ ನಿಮ್ಮ ಸಹೋದರರಿಗಾಗಿ ಪ್ರೀತಿಯಿಂದ ಇದನ್ನು ತಯಾರಿಸಬಹುದು.

ರಕ್ಷಾ ಬಂಧನವು ದೇಶದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದು. ಇದು ಸಹೋದರ-ಸಹೋದರಿಯರ ನಡುವಿನ ಅಚಲ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಹೋದರನಿಗೆ ಸಹೋದರಿಯ ರಕ್ಷಣೆ ಮತ್ತು ಒಳಿತನ್ನು ಹಾರೈಸುವ ಒಂದು ವಿಶೇಷ ಸಂದರ್ಭವಾಗಿದೆ. ಈ ದಿನದಂದು ಮನೆಯಲ್ಲೇ ರುಚಿಕರವಾದ ಗೋಡಂಬಿ ಬರ್ಫಿ (Kaju Barfi Kaju Barfi) ತಯಾರಿಸಬಹುದು. ಇದಕ್ಕೆ ಅಗತ್ಯವಿರುವ ಪದಾರ್ಥಗಳು ಮತ್ತು ಸುಲಭವಾದ ವಿಧಾನ ಇಲ್ಲಿದೆ.

Cashew Barfi

ಗೋಡಂಬಿ ಬರ್ಫಿ ತಯಾರಿಸಲು ಬೇಕಾದ ಸಾಮಗ್ರಿಗಳು

• ಗೋಡಂಬಿ (ಕಾಜು)
• ಸಕ್ಕರೆ
• ನೀರು
• ತುಪ್ಪ
• ಏಲಕ್ಕಿ ಪುಡಿ
• ರೋಸ್ ವಾಟರ್ ಅಥವಾ ಕೇಸರಿ

Kaju Barfi

ಗೋಡಂಬಿ ಬರ್ಫಿ ತಯಾರಿಸುವ ವಿಧಾನ

ಮೊದಲಿಗೆ, 1 ಕಪ್ (ಸುಮಾರು 150 ಗ್ರಾಂ) ಗೋಡಂಬಿಯನ್ನುತೆಗೆದುಕೊಳ್ಳಿ. ಸುಮಾರು 2 ಗಂಟೆಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡುವುದರಿಂದ ಗೋಡಂಬಿ ಮೃದುವಾಗಿ, ಅರೆಯಲು ಸುಲಭವಾಗುತ್ತದೆ. ಬಳಿಕ, ನೆನೆಸಿದ ಗೋಡಂಬಿಯನ್ನು ಟವಲ್ ಮೇಲೆ ಹರಡಿ ಚೆನ್ನಾಗಿ ಒಣಗಿಸಿ. ಒಣಗಿದ ಗೋಡಂಬಿಯನ್ನು ಫುಡ್ ಪ್ರೊಸೆಸರ್ ಬಳಸಿ ನುಣ್ಣಗೆ ಪುಡಿ ಮಾಡಿ. ಅತಿಯಾಗಿ ಪುಡಿ ಮಾಡದೆ, ಬೆಣ್ಣೆಯಂತಹ ಹದಕ್ಕೆ ಬರುವಂತೆ ಪ್ರೊಸೆಸ್ ಮಾಡಿ.

ಈಗ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ 1/2 ಕಪ್ (100 ಗ್ರಾಂ) ಸಕ್ಕರೆ ಮತ್ತು 1/4 ಕಪ್ (60 ಮಿ.ಲೀ) ನೀರು ಸೇರಿಸಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಸಿರಪ್ ಒಂದೆಳೆ ಪಾಕದ ಹದಕ್ಕೆ ಬರುವವರೆಗೆ ಕುದಿಸುವುದನ್ನು ಮುಂದುವರಿಸಿ. ಬೆರಳಲ್ಲಿ ಹನಿ ತೆಗೆದು ನೋಡಿದಾಗ ಅದು ಒಂದೇ ದಾರವನ್ನು ರೂಪಿಸಬೇಕು. ಈ ಹದಕ್ಕೆ ಬಂದ ತಕ್ಷಣ ಉರಿಯಿಂದ ಇಳಿಸಿ. ಈಗ ಉರಿಯನ್ನು ಕಡಿಮೆ ಮಾಡಿ.

How To Make Cashew Barfi

ನಂತರ ತಯಾರಿಸಿದ ಗೋಡಂಬಿ ಪುಡಿಯನ್ನು ಸಕ್ಕರೆ ಪಾಕಕ್ಕೆ ನಿಧಾನವಾಗಿ ಸೇರಿಸಿ. ಯಾವುದೇ ಗಂಟುಗಳು ಆಗದಂತೆ ಚೆನ್ನಾಗಿ ಕಲಸುತ್ತಾ ಇರಿ. ಇದೇ ಸಮಯದಲ್ಲಿ 1/2 ಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ನಿರಂತರವಾಗಿ ಸುಮಾರು ಹತ್ತು ನಿಮಿಷಗಳ ಕಾಲ ಬೆರೆಸುತ್ತಾ ಬೇಯಿಸಿ. ಆಗ ಮಿಶ್ರಣವು ಕ್ರಮೇಣ ದಪ್ಪವಾಗುತ್ತದೆ. ಮಿಶ್ರಣ ತಯಾರಾದ ಬಳಿಕ ತಟ್ಟೆಗೆ ಸ್ವಲ್ಪ (1 ಚಮಚ) ತುಪ್ಪ ಸವರಿ. ತಯಾರಾದ ಗೋಡಂಬಿ ಬರ್ಫಿ ಮಿಶ್ರಣವನ್ನು ಅದರ ಮೇಲೆ ಹಾಕಿ.

ಈಗ ರೋಲಿಂಗ್ ಪಿನ್ ಬಳಸಿ 1/4 ಇಂಚು ದಪ್ಪಕ್ಕೆ ಸಮತಟ್ಟು ಮಾಡಿ. ಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಬೆಚ್ಚಗಿರುವಾಗಲೇ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿದರೆ (ವಜ್ರಾಕಾರದ ಅಥವಾ ಚೌಕಾಕಾರದಲ್ಲಿ ಕತ್ತರಿಸಿ), ರುಚಿಕರವಾದ ಕಾಜು ಬರ್ಫಿ ಸವಿಯಲು ಸಿದ್ಧ. ಕತ್ತರಿಸಿದ ಗೋಡಂಬಿ ಬರ್ಫಿ ತುಂಡುಗಳು ಸಂಪೂರ್ಣವಾಗಿ ತಣ್ಣಗಾದ ನಂತರ, ಅವುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ. ಹೀಗೆ ಮಾಡಿದರೆ ಗೋಡಂಬಿ ಬರ್ಫಿ ಹೆಚ್ಚು ದಿನಗಳ ಕಾಲ ಇರುತ್ತದೆ.

[ of 5 - Users]
Story first published: Tuesday, August 5, 2025, 17:10 [IST]
X
Desktop Bottom Promotion