ಮಕ್ಕಳ ಬಳಿ ಸಾರಿ ಕೇಳು, ಥ್ಯಾಂಕ್ಯೂ ಹೇಳು ಅಂತ ಹೇಳಲೇಬಾರದು ಗೊತ್ತಾ?

ನಮ್ಮ ಮಕ್ಕಳು ಬೇರೆಯವರ ಮುಂದೆ ಸಭ್ಯರಾಗಿರಬೇಕೆಂದು ಬಯಸುತ್ತೇವೆ. ಅದಕ್ಕಾಗಿ ಸ್ಸಾರಿ, ಥ್ಯಾಂಕ್ಯೂಗಳನ್ನು ಹೇಳಬೇಕೆಂದು ಒತ್ತಿ ಹೇಳುತ್ತೇವೆ. ಸಾಮಾನ್ಯವಾಗಿ ತಪ್ಪು ಮಾಡಿದಾಗ "ಸಾರಿ ಅಂತ ಹೇಳು.." ಅಥವಾ ಯಾರಾದರೂ ಚಾಕಲೇಟ್ ಕೊಟ್ಟಾಗ "ಥ್ಯಾಂಕ್ಸ್‌ ಹೇಳು.." ಎಂದು ಮಕ್ಕಳಿಗೆ ಒತ್ತಾಯ ಮಾಡುತ್ತೇವೆ. ಆದರೆ ಹೀಗೆ ಮಾಡ್ಬಾರದಂತೆ. ಹಾಗಾದ್ರೆ ಮಕ್ಕಳಿಗೆ ಹೇಗೆ ಹೇಳಿಕೊಡೋದು, ಯಾಕೆ ಸ್ಸಾರಿ ಅಥವಾ ಥ್ಯಾಂಕ್ಸ್‌ ಹೇಳುವುದನ್ನು ಬಲವಂತ ಮಾಡಿ ಹೇಳಿಸಿಕೊಳ್ಳಬಾರದು ಎನ್ನುವುದು ನಿಮ್ಮ ಪ್ರಶ್ನೆಯಾದ್ರೆ, ಈ ಲೇಖನ ತಪ್ಪದೇ ಓದಿ.

parenting tips

ಸಾಮಾನ್ಯವಾಗಿ ಮಕ್ಕಳು ನಾವು ಕಲಿಸುವುದಕ್ಕಿಂತ ಹೆಚ್ಚಾಗಿ ತಾವೇ ಕಲಿಯುವ ಗುಣವನ್ನು, ಅರಿತುಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಆ ಸಂದರ್ಭದಲ್ಲಿ ನಾವು ಮಧ್ಯ ಪ್ರವೇಶಿಸಿ ಮಕ್ಕಳ ಮೇಲೆ ಒತ್ತಡ ಹೇರಿದಾಗ ಮಕ್ಕಳು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಬದಲು ಅಸಮಾಧಾನ, ಕೋಪ ಅಥವಾ ಅವಮಾನವನ್ನು ಅನುಭವಿಸುತ್ತಾರೆ. ಭವಿಷ್ಯದಲ್ಲಿ ಕ್ಷಮೆಯಾಚಿಸುವ ಗುಣ ಅವರಲ್ಲಿ ಕಡಿಮೆಯಾಗುತ್ತಾ ಹೋಗುತ್ತಂತೆ. ಕ್ಷಮೆ ಕೇಳಲು ಅಥವಾ ಥ್ಯಾಂಕ್ಸ್‌ ಹೇಳಲು ಮಕ್ಕಳನ್ನು ಯಾಕೆ ಒತ್ತಾಯಿಸಬಾರದೆಂದರೆ..

೧. ಮಕ್ಕಳು ಸುಳ್ಳು ಹೇಳಲು ಕಲಿಯುತ್ತಾರೆ

ಕೆಲವೊಮ್ಮೆ ಮಕ್ಕಳದ್ದು ತಪ್ಪಿದೆಯಾ, ಇಲ್ಲವೋ ಎನ್ನುವುದನ್ನು ನಾವು ಗಮನಿಸದೆಯೂ ಮಕ್ಕಳಿಗೆ ಸ್ಸಾರಿ ಕೇಳು ಎಂದು ಒತ್ತಾಯಿಸುತ್ತೇವೆ. ಅವರಿಗೆ ಪ್ರಾಮಾಣಿಕವಾಗಿರಲು ಕಲಿಸುತ್ತೇವೆ. ಆದರೆ ಅವರು ತಪ್ಪು ಮಾಡಿದ್ದರೂ ವಿಷಾದಿಸದೇ ಸ್ಸಾರಿ ಎಂದು ಸುಮ್ಮನಿದ್ದು ಬಿಡಬಹುದು. ಮಕ್ಕಳು ತಾವು ಮಾಡಿದ್ದು ತಪ್ಪು ಅದರಿಂದ ಬೇರೆಯವರಿಗೆ ನೋವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಅವರು ಅದನ್ನು ಅರ್ಥಮಾಡಿಕೊಳ್ಳುವ ಮೊದಲೇ ನಾವು ಅವರಲ್ಲಿ ಕ್ಷಮೆ ಕೇಳು ಎಂದು ಒತ್ತಾಯಿಸಿದರೆ, ಇತರರ ನೋವನ್ನು ಅರ್ಥಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳದೇ ಇರಬಹುದು. ವಾಸ್ತವವಾಗಿ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳುವುದು ಅವರಿಗೆ ಕಷ್ಟವಾಗುತ್ತದೆ.

೨. ಕೇವಲ ಪದಗಳಲ್ಲಿ ತಪ್ಪು ಅಥವಾ ಧನ್ಯವಾದ ತಿಳಿಸಿಬಿಟ್ಟರೆ ಸಾಕು ಎಂದುಕೊಳ್ಳುತ್ತಾರೆ
ಮಕ್ಕಳು ತಪ್ಪು ಮಾಡಿದಾಗ ಸ್ಸಾರಿ ಹೇಳು ಎಂದು ಹೇಳುವುದು ಅಥವಾ ಥ್ಯಾಂಕ್ಸ್‌ ಹೇಳು ಎನ್ನುವುದನ್ನು ಹೇಳಿಕೊಟ್ಟರೆ, ಪದಗಳಲ್ಲಿ ಹೇಳಿಬಿಟ್ಟರೆ ಸಾಕು ಎನ್ನುವುದಷ್ಟೇ ಎಂದು ಮಕ್ಕಳು ತಿಳಿದುಕೊಂಡುಬಿಡುತ್ತಾರೆ. ಎಷ್ಟೇ ದೊಡ್ಡ ತಪ್ಪು ಮಾಡಿದರೂ ಸ್ಸಾರಿ ಎಂದು ಹೇಳಿದರೆ ಎಲ್ಲವೂ ಸರಿ ಹೋಗುತ್ತದೆ ಎನ್ನುವ ಮನೋಭಾವ ಮಕ್ಕಳಲ್ಲಿ ಬೆಳೆದುಬಿಡುತ್ತದೆ. ಸ್ಸಾರಿ ಎಂದು ಯಾಕೆ ಹೇಳಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳುವ ಮಕ್ಕಳನ್ನು ನಾವು ಬೆಳೆಸಬೇಕೆ ಹೊರತು, ಸ್ಸಾರಿ ಎಂದು ಹೇಳಿ ಎಲ್ಲವನ್ನೂ ತಳ್ಳಿಬಿಡುವ ಮಕ್ಕಳು ನಮ್ಮವರಾಗಬಾರದು. ಮಾಡಿದ ತಪ್ಪನ್ನು ಸರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಮಕ್ಕಳು ನಮ್ಮವರಾಗಬೇಕು.

೩. ಮಕ್ಕಳ ಸ್ವಂತ ಭಾವನೆಗಳ ಮೇಲೆಯೇ ಅಪನಂಬಿಕೆ ಮೂಡುತ್ತದೆ
ಬಲವಂತವಾಗಿ ಕ್ಷಮೆಯಾಚಿಸುವುದು ತಮ್ಮ ಭಾವನೆಗಳಿಗಿಂತ ಇತರರ ಭಾವನೆಗಳೇ ಹೆಚ್ಚು ಮುಖ್ಯವೆಂದು ಮಕ್ಕಳಿಗೆ ಕಲಿಸಿಬಿಡುತ್ತದೆ. ಯಾರೇ ತಪ್ಪು ಮಾಡಲಿ ಅದು ಅವರಿಗೆ ತಪ್ಪು ಎಂದು ಅರ್ಥವಾಗಲು ಸಮಯ ಬೇಕೇ ಬೇಕಾಗುತ್ತೆ. ಮಕ್ಕಳ ವಿಚಾರದಲ್ಲಿ ನಾವು ತಕ್ಷಣಕ್ಕೇ ಕ್ಷಮೆ ಕೇಳೆಂದು ಒತ್ತಾಯಿಸಿದರೆ ಮಕ್ಕಳು ತಮ್ಮನ್ನು ತಾವು ಅರ್ಥಮಾಡಿಕೊಳ್ಳುವಂತಹ ಸಮಯವನ್ನು ಕಸಿದುಕೊಂಡುಬಿಡುತ್ತೇವೆ.ಸ್ವಂತ ಭಾವನೆಗಳನ್ನು ನಿರ್ಲಕ್ಷ್ಯಿಸಿ ಇತರರ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಬೇಕು ಎಂದು ನಾವು ಕಲಿಸಿದಂತಾಗುತ್ತೆ. ತಮಗಾಗಿ ತಾವು ನಿಲ್ಲುವ ಸ್ವಂತ ಆತ್ಮವಿಶ್ವಾಸದ ಕೊರತೆ ಅವರಲ್ಲಿ ಬೆಳೆಯುತ್ತೆ ಮಾತ್ರವಲ್ಲ ಸ್ವಂತ ಅಗತ್ಯಗಳನ್ನು ಹೇಗೆ ಪೂರೈಸಿಕೊಳ್ಳಬೇಕು ಎನ್ನುವುದು ಅವರಿಗೆ ತಿಳಿಯುವುದಿಲ್ಲ.

೪. ಮಕ್ಕಳು ಅವಮಾನ ಮತ್ತು ಅಸಮಾಧಾನಕ್ಕೊಳಗಾಗುತ್ತಾರೆ
ಮಕ್ಕಳನ್ನು ಬೇರೆಯವರ ಮುಂದೆ ಸ್ಸಾರಿ ಕೇಳು ಎಂದು ಬಲವಂತ ಮಾಡುವುದು ಅಥವಾ ಥ್ಯಾಂಕ್ಸ್‌ ಹೇಳು ಎಂದು ಒತ್ತಾಯ ಮಾಡಿಸುವುದು ಮಕ್ಕಳಿಗೆ ಒಂದು ರೀತಿಯ ಅವಮಾನ ಮಾಡಿದಂತಾಗಬಹುದು ಅಥವಾ ಅಸಮಾಧಾನ ತೋರಬಹುದು. ಮಕ್ಕಳು ತಾವು ಮಾಡಿದಕ್ಕೆ ಅವಮಾನವನ್ನು ಅನುಭವಿಸಿದಾಗ ಇತರರ ಮೇಲೆ ಸಹಾನುಭೂತಿ ತೋರಿಸಲು ಕಷ್ಟವಾಗಬಹುದು. ಅಧಿಕಾರದಲ್ಲಿರುವ ಯಾರಾದರೂ ನಾವು ಕ್ಷಮೆ ಕೇಳುವಂತೆ ಮಾಡಿದಾಗ ಆ ಕ್ಷಮೆಯನ್ನು ನಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಇದು ಮಕ್ಕಳಲ್ಲಿ ಭವಿಷ್ಯದಲ್ಲಿಯೂ ಕ್ಷಮೆ ಯಾಚಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಇದರ ಬದಲಾಗಿ ಏನು ಮಾಡಬೇಕು
ತಪ್ಪು ಮಾಡಿದಾಗ ಮಕ್ಕಳು ಸ್ಸಾರಿ ಕೇಳಬೇಕಲ್ಲವೇ ಎನ್ನುವುದು ನಿಮ್ಮ ಪ್ರಶ್ನೆಯಾದರೆ, ಹೌದು ಸ್ಸಾರಿ ಅಥವಾ ಥ್ಯಾಂಕ್ಸ್‌ ಹೇಳಬೇಕು. ಆದರೆ ಯಾಕಾಗಿ ಕ್ಷಮೆ ಅಥವಾ ಥ್ಯಾಂಕ್ಸ್‌ ಹೇಳಬೇಕು ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಂಡರೆ ಆ ಎರಡು ಪದಗಳು ಪ್ರಾಮಾಣಿಕವಾಗಿ ಮಕ್ಕಳ ಮನಸ್ಸಿನಿಂದ ಬಂದ ಮಾತುಗಳಾಗಿರುತ್ತವೆ. ಬಲವಂತವಾಗಿ ಮಕ್ಕಳಿಂದ ಹೇಳಿಸುವ ಬದಲಾಗಿ ಇದನ್ನು ಮಾಡಿ,

೧. ಕ್ಷಮೆ ಕೇಳುವುದು ಹೇಗೆ ಎನ್ನುವುದನ್ನು ನೀವೇ ಅರ್ಥಮಾಡಿಸಿ
ಮಕ್ಕಳು ಎಲ್ಲವನ್ನೂ ದೊಡ್ಡವರಿಂದಲೇ ನೋಡಿ ಕಲಿಯುತ್ತಾರೆ. ಹಾಗಾಗಿ ನೀವು ಕೂಡಾ ಸಣ್ಣ ಪುಟ್ಟ ತಪ್ಪುಗಳನ್ನು ಮಕ್ಕಳ ಮುಂದೆ ಮಾಡಿದಾಗ ಅವರಲ್ಲಿ ಕ್ಷಮೆ ಕೇಳಿ. ಮಕ್ಕಳಲ್ಲಿ ನಾವೇನು ಸ್ಸಾರಿ ಕೇಳುವುದು ಎಂದುಕೊಳ್ಳಬೇಡಿ. ನಾವು ತಪ್ಪು ಮಾಡಿ ಕ್ಷಮೆ ಕೇಳಿದಾಗ ಸ್ವೀಕರಿಸುವ ಅವರು, ನೀವು ಯಾವ ರೀತಿಯ ಭಾವನೆಯನ್ನು ಹೊಂದಿದ್ದೀರಿ ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ. ಕ್ಷಮೆ ಕೇಳಲು ನಾಚಿಕೆಪಡಬೇಕಾಗಿಲ್ಲ ಅಥವಾ ಕ್ಷಮೆ ಕೇಳುವುದು ಒಂದು ರೀತಿಯ ಅವಮಾನದ ಭಾವನೆಯಲ್ಲ ಎನ್ನುವುದನ್ನು ಮಕ್ಕಳೂ ಕಲಿಯುತ್ತಾರೆ.

೨. ಮಕ್ಕಳಿಗೆ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿ
ಮಕ್ಕಳು ತಪ್ಪು ಮಾಡಿದಾಗ ನೇರವಾಗಿ ಸ್ಸಾರಿ ಕೇಳು ಎನ್ನುವ ಬದಲು, "ನೋಡು ನಿನ್ನಿಂದಾಗಿ ಅವರಿಗೆ ನೋವಾಗಿದೆ, ಬೇಜಾರಾಗಿದೆ. ನಿನಗೂ ಅವರು ಇದೇ ರೀತಿ ಮಾಡಿದಲ್ಲಿ ನೋವಾಗುತ್ತಲ್ವೇ" ಎನ್ನುವ ಮೂಲಕ ಮಕ್ಕಳನ್ನು ದೂಷಿಸದೇ, ಅವಮಾನಿಸದೇ ಸಮಾಧಾನದ ಧ್ವನಿಯಲ್ಲಿ ಹೇಳಿದರೆ ಮಕ್ಕಳೂ ಅರ್ಥಮಾಡಿಕೊಳ್ಳುವರು.

೩. ಮಕ್ಕಳಿಗೆ ಆಯ್ಕೆಯನ್ನು ನೀಡಿ
ಕ್ಷಮೆಯಾಚಿಸುವುದು ಹೇಗೆ ಎನ್ನುವುದನ್ನು ಅರ್ಥನಾಡಿಕೊಳ್ಳುವ ಮೊದಲು, ನಾವು ಯಾಕೆ ಕ್ಷಮೆ ಯಾಚಿಸಬೇಕು ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು. ಮಕ್ಕಳಿಗೆ ಯಾಕಾಗಿ ಕ್ಷಮಾಪಣೆ ಕೇಳಬೇಕು ಎನ್ನುವುದನ್ನು ವಿವರಿಸಿದ ನಂತರ ನೀನು ಕ್ಷಮಾಪಣೆ ಕೇಳುತ್ತೀಯೋ, ಇಲ್ಲವೋ ಎನ್ನುವ ಆಯ್ಕೆಯನ್ನು ನೀಡಬೇಕು. ಉದಾಹರಣೆಗೆ ನಾವು ಮಾಡಿದ ತಪ್ಪಿನ ಬಗ್ಗೆ ಅರಿವಾದಾಗ ಅದನ್ನು ಕ್ಷಮಾಪಣೆ ಕೇಳುವ ಮೂಲಕ ಸರಿಮಾಡಿಕೊಳ್ಳಬಹುದು ಎನ್ನುವುದನ್ನು ಮಕ್ಕಳಿಗೆ ವಿವರಿಸಿ ಹೇಳಬೇಕು.

೪. ಕ್ಷಮೆಯನ್ನು ಹೇಗೆ ಕೇಳಬೇಕು ಎನ್ನುವುದನ್ನು ಮಕ್ಕಳಿಗೆ ಕಲಿಸಿ
ಕೆಲವು ಮಕ್ಕಳು ನಾವು ಒತ್ತಾಯ ಮಾಡಿದಾಗ ಮುಖ ಕೆಳಗೆ ಹಾಕಿಕೊಂಡು ಅಥವಾ ಎಲ್ಲೆಲ್ಲಿಯೋ ನೋಡಿಕೊಂಡು ಸ್ಸಾರಿ ಎಂದು ಹೇಳುವುದನ್ನು ನೋಡಿರಬಹುದು. ಕ್ಷಮೆ ಕೇಳುವುದಕ್ಕಿಂತ ಹೆಚ್ಚಾಗಿ ಮಕ್ಕಳು ಇತರರೊಂದಿಗೆ ದುರ್ವತನೆ ತೋರಿದ ನಂತರದಲ್ಲಿ ಮತ್ತೆ ಸಂಬಂಧಗಳನ್ನು ಹೇಗೆ ಸರಿಪಡಿಸಬೇಕು ಎನ್ನುವುದನ್ನು ಕಲಿಸಬೇಕು. ಉದಾಹರಣೆಗೆ ಮಕ್ಕಳು ಆಟವಾಡಿಕೊಳ್ಳುವಾಗ ಹೊಡೆದಾಡಿಕೊಳ್ಳುವುದು, ತಳ್ಳುವುದು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ನಿನ್ನಿಂದ ಅವರಿಗೆ ನೋವಾಗಿದೆ, ಇನ್ನು ಮುಂದೆಯೂ ನೀನು ಅವರೊಂದಿಗೆ ಆಟವಾಡಬೇಕಲ್ಲವೇ. ನಿನ್ನ ತಪ್ಪನ್ನು ಒಪ್ಪಿಕೊಂಡು ಒಂದು ಹಗ್‌ ಕೊಟ್ಟರೆ ಅವರ ಬೇಜಾರೆಲ್ಲಾ ದೂರವಾಗುತ್ತೆ ನೋಡು ಎನ್ನಬಹುದು. ಅಥವಾ ನಿಮ್ಮ ಮಗುವಿನಿಂದಾಗಿ ಇನ್ನೊಂದು ಮಗುವಿಗೆ ದೈಹಿಕವಾಗಿ ಗಾಯವಾಗಿದ್ದರೆ, ನಿಮ್ಮ ಮಗುವಿಗೆ ಬ್ಯಾಂಡೇಜ್‌ ಕೊಡುವಂತೆ ಅಥವಾ ಔಷಧಿಯನ್ನು ಹಚ್ಚಲು ಹೇಳಿ ತಮ್ಮಿಂದಾದ ತಪ್ಪನ್ನು ಅರ್ಥಮಾಡಿಕೊಳ್ಳಲು ಸಹಕರಿಸಬಹುದು.

೫. ಅವರಿಗಾಗಿ ನೀವು ಕ್ಷಮೆ ಕೇಳಬಹುದು
ಇಷ್ಟೆಲ್ಲಾ ಮಾಡಿಯೂ ನಿಮ್ಮ ಮಗು ಕ್ಷಮೆ ಕೇಳಲು ಅಥವಾ ಥ್ಯಾಂಕ್ಸ್‌ ಎಂದು ಹೇಳಲು ನಿರಾಕರಿಸಿದರೆ ಅವರನ್ನು ದೂಷಿಸಬೇಡಿ, ಬಯ್ಯಬೇಡಿ ಅಥವಾ ಇದು ಅಸಭ್ಯ ವರ್ತನೆ, ಈ ರೀತಿ ಆಡಬಾರದು ಎಂದು ಜೋರು ಮಾಡಲು ಹೋಗಬೇಡಿ. ಯಾಕೆಂದರೆ ಅವರಿನ್ನೂ ಬೆಳೆಯುತ್ತಿರುವ ಮಕ್ಕಳು. ಅರ್ಥಮಾಡಿಕೊಳ್ಳಲು ಅವರಿಗೂ ಸಮಯ ಬೇಕಾಗುತ್ತೆ. ತಮಗೆ ಹೊಸದೆನಿಸಿದನ್ನು ಕಲಿಯಲು ಮಕ್ಕಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಬೇರೆಯವರ ಮೇಲೆ ಅನುಕಂಪ ತೋರಿಸಲು ಸಮಯ ಬೇಕಾಗುತ್ತೆ ಹಾಗೇನೆ ಮಕ್ಕಳಲ್ಲೂ ಈ ಕಲಿಕೆಯು ನಿಧಾನವಾಗಿರಬಹುದು. ಹಾಗಾಗಿ ಆ ಸಮಯದಲ್ಲಿ ನೀನು ಈ ಸ್ಸಾರಿ ಹೇಳದಿದ್ದರೆ ಪರವಾಗಿಲ್ಲ, ನಿನಗೆ ಮನಸ್ಸಾದಾಗ ಹೇಳು ಎಂದು ಹೇಳಿಬಿಡಿ. ಅವರ ಬದಲಿಗೆ ನೀವು ಕ್ಷಮಾಪಣೆಯನ್ನು ಕೇಳುವ ಮೂಲಕ ನೀವೇ ಅವರಿಗೆ ಮಾದರಿಯಾಗಿ.

English summary

Why You Should Not Ask Your child to Say 'Sorry & Thank you' In Kannada

Here are the reason why you should not ask your child to say sorry and thank you read on.
Story first published: Sunday, December 24, 2023, 7:00 [IST]
X
Desktop Bottom Promotion