Latest Updates
-
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
ಗರ್ಭದಲ್ಲಿ ಮಗುವಿನ ಒದೆತ ಕುರಿತು ತಿಳಿದಿರಬೇಕಾದ ಸಂಗತಿಗಳಿವು
ಗರ್ಭದೊಳಗಿನ ಮಗು ತನ್ನ ಕಾಲಿನಿಂದ ಹೊಟ್ಟೆಯ ಒಳಭಾಗಕ್ಕೆಲ್ಲೋ ಒತ್ತುವ ಅನುಭವವನ್ನೇ ಮಗುವಿನ ಒದೆತ ಅಥವಾ Baby's Kick ಅಥವಾ fetal movement ಎಂದು ಕರೆಯುತ್ತಾರೆ. ಈ ಅನುಭವ ಗರ್ಭಿಣಿಗೆ ಅತ್ಯಂತ ಸಂತೋಷ ನೀಡುವ ವಿಷಯವಾಗಿದ್ದು ಈ ಅನುಭವಕ್ಕಾಗಿ ಕಾತರದಿಂದ ಎದುರು ನೋಡುತ್ತಿರುತ್ತಾಳೆ. ಆದರೆ ಮೊದಲ ತ್ರೈಮಾಸಿಕಗಳಲ್ಲಂತೂ ಯಾವುದೇ ಅನುಭವವಾಗದು. ಎರಡನೆಯ ತ್ರೈಮಾಸಿಕದ ನಡುಭಾಗದಲ್ಲಿ ಕೇವಲ ಒಳಗಿನಿಂದ ಅತಿಸೂಕ್ಷ್ಮವಾದ ಚಲನೆಯನ್ನು ಗಮನಿಸಬಹುದು. ಆದರೆ ಸ್ಪಷ್ಟವಾಗಿ, ಹೊಟ್ಟೆಯ ಹೊರಭಾಗದಲ್ಲಿಯೂ ಅನುಭವಕ್ಕೆ ಬರಲು ಮೂರನೆಯ ತ್ರೈಮಾಸಿಕ ಎದುರಾಗಬೇಕು.
ಪ್ರತಿ ಗರ್ಭಿಣಿಯೂ ಈ ಅನುಭವವನ್ನು ಊಹಿಸಿದ್ದರೆ ಆತಂಕಕ್ಕೆ ಕಾರಣವಿಲ್ಲ. ಆದರೆ ಈ ಅನುಭವದ ಕುರಿತು ಇನ್ನೂ ಕೆಲವಾರು ವಿಷಯಗಳಿವೆ. ಇವೆಲ್ಲವನ್ನೂ ಗರ್ಭಿಣಿ ಅರಿತಿದ್ದರೆ ಅನಾಗತ್ಯ ಚಿಂತೆ ಅಥವಾ ಆತಂಕಕ್ಕೆ ಒಳಗಾಗುವ ಸಂದರ್ಭ ಎದುರಾಗದು. ಇಂತಹ ಒಂಭತ್ತು ಸಂಗತಿಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ನೋಡೋಣ:

ಎರಡನೇ ತ್ರೈಮಾಸಿಕದವರೆಗೂ ನಿಮಗೆ ಸ್ಪಷ್ಟವಾಗಿ ಏನೂ ಅನಿಸುವುದಿಲ್ಲ:
ಎರಡನೇ ತ್ರೈಮಾಸಿಕವನ್ನು ಒಂದು ಪ್ರಮುಖ ಕಾರಣಕ್ಕಾಗಿ "ಉತ್ತಮ ತ್ರೈಮಾಸಿಕ" ಎಂದು ಕರೆಯಲಾಗುತ್ತದೆ. ಏಕೆಂದರೆ ಮೊದಲ ತ್ರೈಮಾಸಿಕದಲ್ಲಿ ಎದುರಾಗುವ ವಾಕರಿಕೆ, ವಾಂತಿ, ಆಯಾಸ ಇವೆಲ್ಲವೂ ಎರಡನೆಯ ತ್ರೈಮಾಸಿಕ ಬಂದಾಗ ಇಲ್ಲವಾಗಿರುತ್ತದೆ. ಹೊಟ್ಟೆಯ ಗಾತ್ರ ಕೊಂಚ ದೊಡ್ಡದಾಗಿರುವುದು ಬಿಟ್ಟರೆ ಉಳಿದಂತೆ ಸಾಮಾನ್ಯ ಆರೋಗ್ಯವನ್ನು ಪಡೆದಿರುತ್ತೀರಿ. ಅಲ್ಲದೇ ನಿಮ್ಮ ಮಗುವಿನ ಚಲನೆಯ ಅನುಭವವೂ ಈ ಅವಧಿಯಲ್ಲಿಯೇ ಪ್ರಾರಂಭವಾಗುತ್ತದೆ. ಹೆಚ್ಚಿನ ಗರ್ಭವತಿಯರು ತಮ್ಮ ಒಡಲಿನ ಮಗುವಿಗೆ 4 ಅಥವಾ 5 ತಿಂಗಳಾದಾಗ ಮಗುವಿನ ಚಲನೆಯನ್ನು ಮೊದಲಾಗಿ ಅನುಭವಿಸುತ್ತಾರೆ. ಅಂದರೆ ಸಾಮಾನ್ಯವಾಗಿ 18 ಮತ್ತು 22 ವಾರಗಳ ನಡುವೆ. ಆದರೆ ಇದು ಪ್ರತಿಯೊಬ್ಬ ಗರ್ಭವತಿಗೂ ವಿಭಿನ್ನವಾಗಿರುತ್ತದೆ, ಒಂದು ವೇಳೆ ನಿಮಗೆ 14 ನೇ ವಾರದಲ್ಲಿಯೇ ಮಗುವಿನ ಚಲನೆಯ ಅನುಭವ ಪಡೆದರೆ ಈಕೆಗೆ ಹೆಚ್ಚಿನ ವಿಶ್ರಾಂತಿ ಬೇಕಾಗಿದೆ ಎಂದು ಅರ್ಥ. ವೈದ್ಯರ ಅನುಭವದ ಪ್ರಕಾರ ಹೇಳುವುದಾದರೆ, ಈಗಾಗಲೇ ಹೆರಿಗೆಯ ಅನುಭವವನ್ನು ಪಡೆದಿರುವ ಅಮ್ಮಂದಿರು ಮತ್ತು ಕೃಶಕಾಯದ ಗರ್ಭವತಿಯರಿಗೆ ಗರ್ಭದ ಹಿಂದಿನ ಭಾಗದಲ್ಲಿ ಭ್ರೂಣದ ಚಲನೆಯನ್ನು ಅನುಭವಿಸುತ್ತಾರೆ. ನಿಮ್ಮ ಜರಾಯುವಿನ ಸ್ಥಾನವೂ ಒಂದು ಪಾತ್ರವನ್ನು ವಹಿಸುತ್ತದೆ. ಒಂದು ವೇಳೆ ಅದು ಮುಂಭಾಗದಲ್ಲಿದ್ದರೆ, ಅದು ನಿಮ್ಮ ಮಗುವಿನ ಒದೆತಗಳನ್ನು ಸ್ವಲ್ಪ ಸಮಯದವರೆಗೆ ನಿಗ್ರಹಿಸಬಹುದು.

ಮಗುವಿನ ಮೊದಲ ಚಲನೆಗಳು ನಿಮ್ಮ ಅನುಭವಕ್ಕೆ ಬಾರದೇ ಹೋಗಬಹುದು
ಗರ್ಭಿಣಿ ಮಹಿಳೆಯರಿಗೆ ಆ ಮೊದಲ ಚಲನೆಗಳು ಹೇಗಿರುತ್ತವೆ ಎಂಬುದನ್ನು ವಿವರಿಸಲು ಕಷ್ಟವಾಗಲು ಒಂದು ಕಾರಣವಿದೆ: ಏಕೆಂದರೆ ಈ ಚಲನೆಗಳು ಅತಿ ಸೂಕ್ಷ್ಮವಾಗಿದ್ದು ಸ್ಪಷ್ಟವಾಗಿ ಗಮನಕ್ಕೆ ಬರಲಾರದು. ಮಗುವಿನ ಮೊದಲ "ಒದೆತಗಳು" ತೀಕ್ಷ್ಣವಾದ ಹೊಡೆತ ಅಥವಾ ಕರಾಟೆ ಏಟಿನಂತೇನೂ ಇರುವುದಿಲ್ಲ. (ಅದು ಶೀಘ್ರದಲ್ಲೇ ಬರಲಿದೆ), ಬದಲಿಗೆ ಒಳಗೆ ನಸುವಾಗಿ ಬಾಳಿ ಬೀಸಿದಂತೆ ಅಥವಾ ನೀವು ಗಾಬರಿಗೊಂಡಾಗ ನಿಮ್ಮ ಹೊಟ್ಟೆಯಲ್ಲಿ ಚಿಟ್ಟೆ ರೆಕ್ಕೆ ಬಡಿದಂತಹ ಭಾವನೆ ಮೂಡಬಹುದು. ಕೆಲವರಿಗೆ ಇದು ಕೊಂಚ ನೀರಿನ ಅಲೆಗಳಂತೆಯೂ ಅನಿಸಬಹುದು. ನಿಸ್ಸಂದೇಹವಾಗಿ, ಆ ಮೊದಲ ಸೂಕ್ಷ್ಮವಾದ ಒತ್ತುವಿಕೆಯನ್ನು ನೀವು ಮೊದಲು ಗಮನಿಸಿದ ನಂತರ ನಿಮ್ಮ ಮಗುವಿನ ಚಲನೆಯನ್ನು ಹೆಚ್ಚು ನಿರೀಕ್ಷಿಸುತ್ತೀರಿ- ಮತ್ತು ಚಿಂತಿಸಬೇಡಿ, ಹೆಚ್ಚಿನ ಚಲನೆಗಳು ಶೀಘ್ರವೇ ನಿಮ್ಮ ಗಮನಕ್ಕೆ ಬರಲಿದೆ. ನಿಮ್ಮ ಮಗುವಿನ ಕೈ ಮತ್ತು ಕಾಲುಗಳು ಗಾತ್ರಕ್ಕೆ ಅನುಗುಣವಾಗಿ ಬೆಳೆಯುತ್ತಲೇ, ಅಂದರೆ ಸುಮಾರು 21 ನೇ ವಾರದ ಸಮಯದಲ್ಲಿ ಕೈ ಮತ್ತು ಕಾಲುಗಳ ಒತ್ತುವಿಕೆಯನ್ನು ಇನ್ನಷ್ಟು ಸ್ಪಷ್ಟವಾಗಿ ಗಮನಿಸಬಹುದು.

ಮಗುವಿನ ಚಲನೆ ಆರಂಭದಲ್ಲಿ ಸಾಕಷ್ಟು ಅನಿಯಮಿತವಾಗಿರುತ್ತದೆ:
ಮೊದಲ ಚಲನೆಯ ಅನುಭವಗಳು ದಿನದ ಯಾವ ಸಮಯದಲ್ಲಿ ಎದುರಾಗುತ್ತವೆ ಅಥವಾ ಎರಡು ಚಲನೆಗಳ ನಡುವಣ ಅವಧಿ ಎಷ್ಟಿರುತ್ತದೆ ಎಂಬುದನ್ನು ಯಾವುದೇ ತರ್ಕದಿಂದ ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಮಗು ಚಲನೆಯನ್ನು ಪ್ರಕಟಿಸುವ ರೀತಿಗೆ ಯಾವುದೇ ನಿಯಮವಿಲ್ಲ. ದಿನದ ಯಾವುದೇ ಹೊತ್ತಿನಲ್ಲಿ, ಎಷ್ಟು ಸಾರಿ ಬೇಕಾದರೂ ಈ ಚಲನೆಗಳನ್ನು ನೀವು ಅನುಭವಿಸಬಹುದು. ಕೆಲವು ದಿನಗಳಲ್ಲಿ ದಿನದಲ್ಲಿ ಹಲವಾರು ಬಾರಿ ಚಲನೆಯ ಅನುಭವ ಗಮನಕ್ಕೆ ಬರುತ್ತದೆ. ಕೆಲವೊಮ್ಮೆ ಎರಡು ಮೂರು ದಿನವಾದರೂ ಯಾವುದೇ ಸೂಚನೆಯನ್ನು ನೀಡದೇ ಸುಮ್ಮನೇ ಮಲಗಿದೆ ಎಂಬ ಅನುಭವವನ್ನೂ ನೀವು ಅನುಭವಿಸಬಹುದು. ಕೆಲವು ಗರ್ಭವತಿಯರು ಈ ಚಲನೆ ಇಲ್ಲದ ಸಮಯದ ಹೆಚ್ಚಿದಷ್ಟೂ ಅನಾವಶ್ಯಕವಾಗಿ ಗಾಬರಿಗೆ ಒಳಗಾಗುತ್ತಾರೆ.

ನಿಮ್ಮ ಮಗು ಹಗಲಿನ (ಮತ್ತು ರಾತ್ರಿಯ) ಕೆಲವು ಸಮಯಗಳಲ್ಲಿಯೇ ಹೆಚ್ಚು ಸಕ್ರಿಯವಾಗಿರುತ್ತದೆ:
ನಿಮ್ಮ ಗರ್ಭಾವಸ್ಥೆ ಮೂರನೆಯ ತ್ರೈಮಾಸಿಕ ತಲುಪುತ್ತಿದ್ದಂತೆಯೇ ನಿಮ್ಮ ಮಗುವಿನ ಚಲನೆಗಳು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತವೆ, ದಿನದ ನಿರ್ದಿಷ್ಟ ಸಮಯಗಳಲ್ಲಿಯೇ ಮಗು ಹೆಚ್ಚು ಚಲನೆಯ ಅನುಭವಗಳನ್ನು ನೀಡುತ್ತಿರುವುದನ್ನು ನೀವು ಗಮನಿಸಲು ಪ್ರಾರಂಭಿಸುತ್ತೀರಿ. ಉದಾಹರಣೆಗೆ, ನೀವು ಮಲಗಿದ ಬಳಿಕ ಮತ್ತು ನಿಮ್ಮ ದೇಹದ ಸೂಕ್ಷ್ಮ ಚಲನೆಯ ಬಗ್ಗೆಯೂ ಗಮನ ನೀಡುವಂತಾದಾಗ ನಿಮ್ಮ ಮಗು ಹೆಚ್ಚು ಚಲಿಸುತ್ತಿರುವುದನ್ನು ನೀವು ಅನುಭವಿಸಬಹುದು. ನೀವು ಊಟ ಮಾಡಿದ ನಂತರ ಅಥವಾ ನೀವು ಆತಂಕಕ್ಕೊಳಗಾದಾಗ ನಿಮ್ಮ ದೇಹದಲ್ಲಿ ಸ್ರವಿಸಿದ ಅಡ್ರಿನಲಿನ್ ರಸದೂತ ಮಗುವಿಗೂ ಒದೆತ ನೀಡುವ ಶಕ್ತಿಯನ್ನು ನೀಡಿರಬಹುದು.

ಕೆಲವು ಸಂದರ್ಭಗಳಲ್ಲಿ ಚಲನೆ ಅನುಭವಕ್ಕೆ ಬರುವುದಿಲ್ಲ ಅಥವಾ ಕಡಿಮೆಯಾಗುತ್ತದೆ.
ನಿಮ್ಮ ಮೂರನೇ ತ್ರೈಮಾಸಿಕದಲ್ಲಿ ನಿಮ್ಮ ಕೆಲವು ಚಟುವಟಿಕೆಗಳ ಬಳಿಕ ಯಾವುದೇ ಚಲನೆ ಇಲ್ಲದ ಮೂಲಕ ನಿಮ್ಮ ಮಗು ನಿದ್ರಿಸುತ್ತಿದೆ ಎಂದು ನೀವು ತಿಳಿದುಕೊಳ್ಳುವಂತಾಗುತ್ತದೆ. ಕೆಲವು ಗರ್ಭವತಿಯರು ಲೈಂಗಿಕ ಕ್ರಿಯೆಯ ನಂತರ ಭ್ರೂಣದ ಚಲನೆಯಲ್ಲಿನ ಇಳಿಕೆಯನ್ನು ಗಮನಿಸುತ್ತಾರೆ, ಏಕೆಂದರೆ ಪರಾಕಾಷ್ಠೆಯೊಂದಿಗೆ ಬರುವ ದೈಹಿಕ ಚಲನೆ ಮತ್ತು ಗರ್ಭಾಶಯದ ಸಂಕೋಚನಗಳು ಹೆಚ್ಚಾಗಿ ಮಕ್ಕಳನ್ನು ಗಾಢ ನಿದ್ದೆ ಮಾಡುವಂತೆ ಪ್ರೇರೇಪಿಸುತ್ತದೆ. ಆದರೆ ಮರುದಿನ ಸಾಮಾನ್ಯ ಚಟುವಟಿಕೆಗಳು ಮತ್ತೊಮ್ಮೆ ಅನುಭವವಕ್ಕೆ ಬರುತ್ತದೆ. ಕಾರಣಾಂತರಗಳಿಂದ ದಿನವಿಡೀ ಕಳೆದರೂ ಯಾವುದೇ ಚಲನೆ ಇಲ್ಲವೆಂದಾದರೆ ಮಾತ್ರ ತಕ್ಷಣ ಈ ವಿಷಯವನ್ನು ವೈದ್ಯರ ಗಮನಕ್ಕೆ ತರಬೇಕು.

ನಿಮ್ಮ ಮಗುವಿನ ಚಲನೆ ಕೇವಲ ಒದೆತ ಮತ್ರವೇ ಅಲ್ಲ:
ಮಗುವಿನ ಚಲನೆ ಕೇವಲ ಕಾಲಿನ ಪಾದವನ್ನು ಗರ್ಭಾಶಯದ ಒಳಗೋಡೆಗೆ ಒತ್ತುವುದು ಮಾತ್ರ ನಿಮಗೆ ಅನುಭವಕ್ಕೆ ಬರುವುದು ಎಂದೇನೂ ಇಲ್ಲ. ಬದಲಿಗೆ ಕೈಗಳಿಂದಲೂ ಒತ್ತುವುದು, ತನ್ನ ಮೈಯನ್ನು ಹೊರಳಿಸುವುದು, ಅಕ್ಕ ಪಕ್ಕ ಬಾಗುವುದು, ಮೈ ಮುರಿಯುವುದು ಮೊದಲಾದ ಕ್ರಿಯೆಯನ್ನು ನಡೆಸುತ್ತಿರುವ ಅನುಭವವನ್ನೂ ಪಡೆಯಬಹುದು. ಮೂರನೆಯ ತ್ರೈಮಾಸಿಕದ ಕೊನೆಯ ದಿನಗಳಲ್ಲಿ ಈ ಲಕ್ಷಣಗಳು ಅತಿ ಹೆಚ್ಚು ಸ್ಪಷ್ಟವಾಗಬಹುದು. ಕೆಲವು ಸಂದರ್ಭಗಳಲ್ಲಿ, ನಿಮ್ಮ ಹೊಟ್ಟೆಯ ಒಳಗಿನಿಂದ ಬರುವ ಲಯಬದ್ಧವಾಗಿ ತಬಲ ಬಡಿದಂತೆ ಚಿಕ್ಕದಾಗಿ ಬಡಿಯುವ ಪರಿಯನ್ನೂ ನೀವು ಗಮನಿಸಬಹುದು. ಅದು ಸಂಭವಿಸಿದರೆ, ನಿಮ್ಮ ಮಗು ಬಿಕ್ಕಳಿಸುತ್ತಿರುವ ಸಾಧ್ಯತೆ ಇದೆ. ಇದು ಸ್ವಲ್ಪ ವಿಲಕ್ಷಣವೆನಿಸಿದರೂ, ಗರ್ಭಾಶಯದಲ್ಲಿನ ಬಿಕ್ಕಳಿಸುವಿಕೆಯು ಸಂಪೂರ್ಣವಾಗಿ ನಿರುಪದ್ರವವಾಗಿದೆ ಮತ್ತು ಮಗುವಿಗೆ ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಉಂಟುಮಾಡುವುದಿಲ್ಲ ಎಂದು ತಿಳಿದ ಬಳಿಕ ನೀವು (ಕನಿಷ್ಟ ಮಾನಸಿಕವಾಗಿಯಾದರೂ) ನಿರಾಳರಾಗಿರಬಹುದು.

ಗರ್ಭಧಾರಣೆಯಲ್ಲಿ ಮಗುವಿನ ಬಿಕ್ಕಳಿಕೆ - ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು
ಎರಡನೆಯ ತ್ರೈಮಾಸಿಕದಲ್ಲಿ ನಿಮ್ಮ ಮಗುವಿನ ಚಲನೆಗಳು ಸೂಕ್ಷ್ಮ ಮತ್ತು ಅಸ್ಪಷ್ಟವಾಗಿದ್ದು ಎದುರಾದಾಗಲೆಲ್ಲಾ ನಿಮಗೆ ಅತೀವವಾದ ಸಂತೋಷದ ಅನುಭವವನ್ನು ನೀಡುತ್ತಿದ್ದವು. ಆದರೆ ಮೂರನೆಯ ತ್ರೈಮಾಸಿಕದಲ್ಲಿ ಮಗುವಿನ ಗಾತ್ರವೂ ಹೆಚ್ಚಾಗುವುದರೊಂದಿಗೆ ಮಗು ಈಗ ನೀಡುವ ಒತ್ತುವಿಕೆ ಮತ್ತು ಒದೆತಗಳು ಕೆಲವೊಮ್ಮೆ ಅಹಿತಕರವಾಗಬಹುದು. ನಿಮ್ಮ ಮಗು ಸತತವಾಗಿ ಗುದ್ದುವ ಚೀಲದಂತೆ ನಿಮ್ಮ ಗರ್ಭಾಶಯದ ಒಳಗೆ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದ್ದರೆ ನೀವು ಪವಡಿಸುವ ಭಂಗಿಯನ್ನು ಬದಲಾಯಿಸಲು ಪ್ರಯತ್ನಿಸಿ. ನೀವು ನಿಂತಿದ್ದರೆ, ಕುಳಿತುಕೊಳ್ಳಿ ಅಥವಾ ಒಂದು ಬದಿ ಹೊರಳಿ ಮಲಗಿಕೊಳ್ಳಿ. ಈಗ ಮಗುವಿನ ದೇಹದ ಒತ್ತುವಿಕೆಯ ಮೇಲೆ ಕೊಂಚ ಭಾರ ಬೀಳುವ ಮೂಲಕ ಗುದ್ದಬೇಡ ಎಂದು ನೀವು ಹೇಳುತ್ತಿದ್ದೀರಿ ಎಂದು ಮಗುವಿಗೆ ಅರ್ಥವಾಗಲೂಬಹುದು!

ಮಗುವಿಗೆ ಉತ್ತೇಜನ ನೀಡಲು ಹಣ್ಣಿನ ರಸ ಸೇವಿಸಿ:
ನಿಮ್ಮ ಮಗುವಿನ ಚಲನೆ ನಿಮಗೆ ಇಷ್ಟವಾಗಿಯೇ ಇರುತ್ತದೆ. ಇನ್ನೂ ಹೆಚ್ಚು ಹೆಚ್ಚು ಚಲನೆಯ ಅನುಭವ ನೀಡು ಎಂದು ನೀವು ನಿಮ್ಮ ಮಗುವಿಗೆ ನೇರವಾಗಿ ಹೇಳಲು ಸಾಧ್ಯವಾಗದೇ ಇದ್ದರೂ ಮಗುವಿಗೆ ಹೀಗೆ ಮಾಡಲು ಶಕ್ತಿಯನ್ನು ಒದಗಿಸುವ ಮೂಲಕ ಸಂದೇಶವನ್ನಂತೂ ತಲುಪಿಸಬಹುದು. ಇದಕ್ಕೆ ಅತ್ಯುತ್ತಮ ಮಾರ್ಗ ಎಂದರೆ ಸಿಹಿಯಾದ ಹಣ್ಣಿನ ರಸದ ಸೇವನೆ. ಈ ರಸದ ಮೂಲಕ ನಿಮ್ಮ ರಕ್ತದಲ್ಲಿ ಥಟ್ಟನೇ ಏರುವ ಸಕ್ಕರೆಯ ಮಟ್ಟ ಕೊಂಚಕಾಲದಲ್ಲಿಯೇ ನಿಮ್ಮ ಮಗುವಿಗೂ ತಲುಪುತ್ತದೆ. ಒಂದು ವೇಳೆ ಕೊಂಚ ಹೊತ್ತಿನಿಂದಲೂ ನಿಮ್ಮ ಮಗುವಿನ ಚಲನೆಯ ಅನುಭವ ಬರಲಿಲ್ಲ ಎಂದರೆ ಚಲನೆಗೆ ಪ್ರಚೋದಿಸಲು ಇದೊಂದು ಜಾಣತನದ ಕ್ರಮವೂ ಆಗಿದೆ.

ಮಗು ಎಷ್ಟು ಬಾರಿ ಒದೆಯುತ್ತದೆ ಎಂಬುದನ್ನು ಎಣಿಸಲು ವೈದ್ಯರು ಹೇಳಬಹುದು:
ಮೂರನೆಯ ತ್ರೈಮಾಸಿಕದ 28 ನೇ ವಾರವನ್ನು ನೀವು ತಲುಪಿದಾಗ, ನಿಮ್ಮ ಮಗುವಿನ ಚಲನವಲನಗಳನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಗಮನಿಸಿ ಬರೆದಿಡುವಂತೆ ನಿಮ್ಮ ವೈದ್ಯರು ನಿಮಗೆ ಸಲಹೆ ನೀಡಬಹುದು. ಬೆಳಿಗ್ಗೆ ಅಥವಾ ಸಂಜೆ ನೀವು ಸ್ವಲ್ಪ ವಿಶ್ರಾಂತಿಯ ಸಮಯದಲ್ಲಿರುವಾಗ, ಗಡಿಯಾರವನ್ನು ನೋಡಿ ಮತ್ತು ನಿಮ್ಮ ಮಗು ಚಲಿಸುವಾಗ, ಒದೆಯುವಾಗ ಅಥವಾ ಹೊರಳುತ್ತಿರುವಾಗಲೆಲ್ಲಾ ಎಣಿಸಲು ಪ್ರಾರಂಭಿಸಿ. ಈ ಎಣಿಕೆ 10 ಕ್ಕೆ ತಲುಪಿದಾಗ, ಎಣಿಕೆಯನ್ನು ನಿಲ್ಲಿಸಿ ಮತ್ತು ಎಷ್ಟು ಸಮಯ ಕಳೆದುಹೋಗಿದೆ ಎಂಬುದನ್ನು ಗಮನಿಸಿ. ಸಾಮಾನ್ಯವಾಗಿ, ನೀವು ಒಂದು ಗಂಟೆಯಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ 10 ಅಥವಾ ಹೆಚ್ಚಿನ ಚಲನೆಯನ್ನು ಅನುಭವಿಸಲು ಬಯಸುತ್ತೀರಿ. ಈ ಚಲನೆಗಳು ಕಡಿಮೆ ಇದ್ದರೆ, ಅಲ್ಪ ಉಪಾಹಾರ ಮತ್ತು ಸ್ವಲ್ಪ ಹಣ್ಣಿನ ರಸವನ್ನು ಸೇವಿಸಿ ಮತ್ತು ಮತ್ತೊಮ್ಮೆ ಗಮನಿಸಿ. 10 ತಲುಪಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ, ನಿಮ್ಮ ವೈದ್ಯರಿಗೆ ಅಥವಾ ಸೂಲಗಿತ್ತಿಯವರಿಗೆ ಈ ವಿಷಯವನ್ನು ತಿಳಿಸಿ. ಇದು ಮಗುವಿನೊಂದಿಗೆ ಏನೂ ತಪ್ಪಾಗಿದೆ ಎಂದು ಅರ್ಥವಲ್ಲವಾದರೂ, ಇದಕ್ಕೆ ತಪಾಸಣೆಯ ಅಗತ್ಯವಂತೂ ಇರುತ್ತದೆ. ಅಲ್ಲದೇ ಈ ಚಲನೆಗಳ ಸಂಖ್ಯೆಯಲ್ಲಿ ಹಠಾತ್ ಇಳಿಕೆ ಕಂಡುಬಂದರಂತೂ ನೀವು ತಕ್ಷಣ ನಿಮ್ಮ ಶುಶ್ರೂಶೆಯ ಹೊಣೆ ಹೊತ್ತಿರುವ ಸಿಬ್ಬಂದಿ ಮತ್ತು ವೈದ್ಯರಿಗೆ ಮಾಹಿತಿಯನ್ನು ಒದಗಿಸಬೇಕು.
ಗರ್ಭಾವಸ್ಥೆಯ ಹೆಚ್ಚಿನ ವಿಷಯಗಳಂತೆ, ಮಗುವಿನ ಭ್ರೂಣದ ಚಲನೆಯು ಹೆಚ್ಚಿನ ಸಂತೋಷ, ಸ್ವಲ್ಪ ಆತಂಕ ಮತ್ತು ಕೆಲವು ಅಸ್ವಸ್ಥತೆಗಳನ್ನೂ ನೀಡಬಹುದು. ನಿಮ್ಮ ದೇಹ ಮತ್ತು ಅಂತಃಪ್ರಜ್ಞೆಯನ್ನು ಯಾವಾಗಲೂ ನಂಬುವುದು ಮತ್ತು ನಿಮ್ಮ ವೈದ್ಯರಿಗೆ ಯಾವುದೇ ಅಸಾಮಾನ್ಯ ಬದಲಾವಣೆಗಳನ್ನು ವರದಿ ಮಾಡುವುದು ಮುಖ್ಯ. ಈ ಬಗ್ಗೆ ಅನಾವಶ್ಯಕವಾಗಿ ಚಿಂತಿಸುವ ಕಾರಣವಿಲ್ಲ. ಈ ಸೂಚನೆಗಳು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಾ ಹೋದಂತೆ ನಿಮ್ಮ ಹೆರಿಗೆಯ ದಿನಗಳೂ ಹತ್ತಿರಾಗುತ್ತಿವೆ ಎಂದೇ ಅರ್ಥ! ನಿಮ್ಮ ಪ್ರಸವ ಸುಖಕರವಾಗಿ ನೆರವೇರಲಿ ಎಂದು ಹಾರೈಸುತ್ತೇವೆ.



Click it and Unblock the Notifications











