ಗರ್ಭಧಾರಣೆಯ ಸುಖವನ್ನು ಸವಿಯಲು ಹಲವು ಕಾರಣಗಳು

By Super

ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಸುಂದರ ಕನಸು. ಆದರೆ ಕೆಲವರು ಈ ಭಾವವನ್ನು ಒಂದು ಹೊರೆಯನ್ನಾಗಿ ಭಾವಿಸುತ್ತಾರೆ. ಅವರಿಗೆ ಇಂದಿನ ದಿನದಲ್ಲಿ ಸವಿಯಲಿರುವ ಸುಖವನ್ನು ಈ ಬೇಡದ ಗರ್ಭ ನುಂಗಿಹಾಕುವ ಭಯ. ಅದಕ್ಕಾಗಿ ಅವರು ಗರ್ಭವತಿಯಾಗದೇ ಇರಲು ನಾನಾ ತರಹದ ಉಪಾಯಗಳನ್ನು ಅನುಸರಿಸುತ್ತಾರೆ. ಈಗಲೇ ಮಗು ಏಕೆ ಬೇಡ ಎಂಬುದಕ್ಕೆ ಹಲವು ಸಮರ್ಥನೆಗಳನ್ನೂ ನೀಡುತ್ತಾರೆ. ಆದರೆ ತಜ್ಞರ ಅನುಭವದ ಪ್ರಕಾರ ಸೂಕ್ತ ವಯಸ್ಸಿನಲ್ಲಿ ಗರ್ಭವತಿಯಾಗುವುದು ಅತ್ಯಂತ ಸಂತೋಷಕರ ವಿಷಯವಾಗಬೇಕು ಹಾಗೂ ನವಮಾಸದುದ್ದಕ್ಕೂ ಸಂತೋಷದಿಂದ ದಿನಗಳನ್ನು ಕಳೆಯಬೇಕು.

ಇದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಈ ಮನೋಭಾವ ಮತ್ತು ಆರೋಗ್ಯವಂತ ಶರೀರ ಮಗುವಿನ ಬೆಳವಣಿಗೆಗೆ ಹಾಗೂ ಸುಖಕರ ಪ್ರಸವಕ್ಕೆ ನಾಂದಿಯಾಗುತ್ತದೆ. ಸಂತೋಷದಿಂದಿರುವ ಮನಸ್ಸು ಒಂದು ಧನಾತ್ಮಕ ವಾತಾವರಣವನ್ನು ಸೃಷ್ಟಿಸಿ ತಾಯಿ ಮತ್ತು ಮಗುವಿಗೆ ಹಾನಿಕರವಾಗುವ ದುಷ್ಟಶಕ್ತಿಗಳನ್ನು ದೂರವಿರಿಸುತ್ತದೆ. ಒಮ್ಮೆ ಗರ್ಭವತಿಯಾಗಬೇಕೆಂಬ ಸ್ಪಷ್ಟ ಬಯಕೆ ಮೂಡಿದ ಬಳಿಕ ಗರ್ಭ ಧರಿಸಿದರೆ ಈ ಹಂತದಲ್ಲಿ ಕಾಡುವ ಆರೋಗ್ಯ ವೈಪರೀತ್ಯಗಳು ಅತ್ಯಂತ ಕಡಿಮೆಯಾಗುತ್ತವೆ.

ಗರ್ಭಾವಸ್ಥೆಯಲ್ಲಿ ಅತಿ ಮುಖ್ಯವಾಗಬೇಕಾಗಿರುವುದೆಂದರೆ ಬೆಳೆಯುತ್ತಿರುವ ನಿಮ್ಮ ಕೆಳಹೊಟ್ಟೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು. ಇದರೊಳಗೆ ತನ್ನ ರಕ್ತವನ್ನು ಹಂಚಿಕೊಳ್ಳುವ, ತನ್ನ ಹೃದಯದೊಂದಿಗೇ ಮಿಡಿಯುವ ಪುಟ್ಟ ಕಂದನಿದೆ ಎಂಬ ಭಾವನೆ ಮೂಡಿದ ಬಳಿಕ ನಿಮಗೆ ಗರ್ಭವತಿಯಾಗಿರುವ ಬಗ್ಗೆ ಅಭಿಮಾನ ಮೂಡುತ್ತದೆ. ಈ ಅಭಿಮಾನವನ್ನು ಹೆಚ್ಚಿಸಲು ಕೆಲವು ಸಕಾರಣಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಪುಟ್ಟ ಮಕ್ಕಳಿಗೆ ನೀಡುವ ಹುಟ್ಟುಹಬ್ಬದ ಉಡುಗೊರೆ ಹೇಗಿರಬೇಕು?

ಗರ್ಭವತಿಯಾಗುವುದಕ್ಕೋಸ್ಕರವೇ ಮಿಲನವಾಗಲಿ

ಬೇಡದ ಗರ್ಭವನ್ನು ತಡೆಯಲೆಂದೇ ಹಲವು ವಿಧಾನಗಳನ್ನು ಅನುಸರಿಸುತ್ತಾ ಕೂಡಿದ ಮಿಲನ ಒಂದು ರೀತಿಯ ದುಗುಡ, ದುಮ್ಮಾನ ಹಾಗೂ ಹೆದರಿಕೆಯಿಂದ ಕೂಡಿರುತ್ತದೆ. ಗರ್ಭ ನಿಲ್ಲುವ ದಿನಗಳನ್ನು ಆರಿಸಿ ಇದಕ್ಕಾಗಿ ದಂಪತಿಗಳು ಸಿದ್ಧರಾಗಿ ಮಿಲನದ ಪೂರ್ಣ ಸುಖವನ್ನು ಯಾವುದೇ ದುಗುಡ-ದುಮ್ಮಾನವಿಲ್ಲದೇ, ಯಾವ ಮಿತಿಯೂ ಇಲ್ಲದೇ ಅನುಭವಿಸಿ. ಈ ದಿನಗಳಲ್ಲಿ ನಿಮ್ಮ ಶರೀರದಲ್ಲಿನ ಹಾರ್ಮೋನುಗಳು ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಲ್ಲಿರುತ್ತವೆ. ಫಲಭರಿತ ದಿನಗಳಷ್ಟೂ ಮಿಲನದ ಪರಾಕಾಷ್ಠೆಯನ್ನು ಪಡೆಯುವುದು ಜೀವನದಲ್ಲಿ ದಕ್ಕಬಹುದಾದ ಅಮೂಲ್ಯ ವರಗಳಲ್ಲೊಂದಾಗಿದೆ.

ಯಾವುದೇ ಸಮಯದಲ್ಲಿ ನಿಮಗೆ ನಿದ್ದೆ ಲಭ್ಯವಾಗುತ್ತದೆ

ಗರ್ಭ‌ಧರಿಸಿದ ಬಳಿಕ ಪ್ರಾರಂಭದ ದಿನಗಳ ವಾಕರಿಕೆ, ಸುಸ್ತು, ತಲೆತಿರುಗುವಿಕೆ ಮೊದಲಾದ ಚಿಕ್ಕಪುಟ್ಟ ತೊಂದರೆಗಳನ್ನು ಬಿಟ್ಟರೆ ಪ್ರಸವದ ದಿನಗಳವರೆಗೂ ನಿಮಗೆ ಹಾಯಾದ ನಿದ್ದೆ ಲಭ್ಯವಾಗುತ್ತದೆ. ದಿನದ ಯಾವುದೇ ಹೊತ್ತಿನಲ್ಲಿ ಮಲಗಿದ ಕೂಡಲೇ ಆವರಿಸುವ ನಿದ್ದೆ ಎಷ್ಟೋ ಜನರಿಗೆ ಎಟುಕದ ಸೌಭಾಗ್ಯ ನಿಮಗೆ ವರದಾನವಾಗಿದೆ. ಸಾಕಷ್ಟು ನಿದ್ದೆ ನಿಮ್ಮ ಶರೀರಕ್ಕೂ, ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೂ ಅಗತ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಹೆರಿಗೆ ನೋವಿನ ಲಕ್ಷಣಗಳು

ಹುಳಿ, ಖಾರ ತಿನ್ನುವ ಬಯಕೆಯಾಗುತ್ತದೆ

ಮನೆಯಲ್ಲಿ ಗರ್ಭವತಿಯಿದ್ದಾಳೆ ಎಂಬ ಸಂಚಲನ ಮನೆಯವರಲ್ಲಿ ಸಂತೋಷ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ನಿಸರ್ಗ ಈ ಸಮಯದಲ್ಲಿ ಹುಳಿ ತಿನ್ನುವ ಬಯಕೆಯನ್ನು ಮೂಡಿಸುತ್ತದೆ. ಬರೆಯ ಹುಳಿ ಮಾತ್ರವಲ್ಲ, ಇನ್ನಿತರ ಹಲವು ಖಾದ್ಯಗಳನ್ನೂ ತಿನ್ನುವ ಬಯಕೆಯಾಗುತ್ತದೆ. ಬಸುರಿಯ ಬಯಕೆಯನ್ನು ತೀರಿಸಲು ಪಣತೊಟ್ಟ ಮನೆಯವರೆಲ್ಲಾ ವಿವಿಧ ಖಾದ್ಯಗಳನ್ನು ತಯಾರಿಸಿ ಕೊಡುವಲ್ಲಿ ನಿರತರಾಗುತ್ತಾರೆ. ಭೇಟಿಯಾಗಲು ಬಂದ ಸ್ನೇಹಿತೆಯರೂ ವಿವಿಧ ತಿಂಡಿಗಳನ್ನು ಜೊತೆಯಲ್ಲಿ ತರುತ್ತಾರೆ. ಎಲ್ಲೂ ಸಿಗದ ಹಣ್ಣನ್ನು ಪತಿದೇವರು ಎಲ್ಲಿಂದಲೋ ತಂದುಕೊಡುತ್ತಾರೆ. ಎಲ್ಲೆಲ್ಲೂ ಸಂತೋಷ, ಕಾತರ ಒಗ್ಗೂಡುತ್ತದೆ. ಒಟ್ಟಾರೆ ಮನೆಯೊಂದು ಸ್ವರ್ಗದ ತೆರೆದ ಬಾಗಿಲಿಗೆ ಸಮನಾಗುತ್ತದೆ.

ಹೊಟ್ಟೆಯೊಳಗಣ ಮಗು ಅಲ್ಲಾಡುವ ಅನುಭವ

ಸುಮಾರು ನಾಲ್ಕರಿಂದ ಐದು ತಿಂಗಳ ಬಳಿಕ ಹೊಟ್ಟೆಯೊಳಗಿನ ಮಗು ಕೊಂಚದಾಗಿ ಅಲ್ಲಾಡುವ ಅನುಭವವಾಗುತ್ತದೆ. ಏಳನೆಯ ಮತ್ತು ಎಂಟನೆಯ ತಿಂಗಳಲ್ಲಿ ಚಿಕ್ಕದಾಗಿ ಒದೆಯುವ ಅನುಭವವೂ ಆಗುತ್ತದೆ. ಜೀವನದಲ್ಲಿ ಗರ್ಭವತಿಗೆ ಮಾತ್ರ ಆಗುವ ಈ ಅನುಭವ ಅತ್ಯಂತ ಸಂತೋಷಕರವಾಗಿದ್ದು ತನ್ನ ಮಗುವಿನೊಂದಿಗೆ ಸಂವಾದ ನಡೆಸಲೂ ಪ್ರೇರಣೆ ನೀಡುತ್ತದೆ. ಅಭಿಮನ್ಯು ಗರ್ಭದಲ್ಲಿದ್ದಾಗ ಅರ್ಜುನ ಚಕ್ರವ್ಯೂಹವದ ಒಳಗೆ ನುಸುಳುವ ವಿದ್ಯೆಯನ್ನು ತಿಳಿಸುದ್ದಿದುದನ್ನು ಕೇಳಿ ಕಲಿತಿದ್ದನಂತೆ. ಆದರೆ ಹೊರಬರುವ ವಿಷಯವನ್ನು ಹೇಳುತ್ತಿರುವಾಗ ಸುಭದ್ರೆ ಮಲಗಿದ್ದರಿಂದ ಆ ವಿದ್ಯೆ ಕಲಿಯದೇ ಹೋದನಂತೆ.

ಮುಂದಿನ ಒಂಭತ್ತು ತಿಂಗಳು ರಜಾದಿನಗಳಿಗೆ ರಜಾ

ಋತುಮತಿಯಾದ ಬಳಿಕ ರಜೋ ನಿವೃತ್ತಿಯವರೆಗೂ ಪ್ರತಿತಿಂಗಳೂ ಕಾಡುವ ರಜಾದಿನಗಳಿಗೆ ಈ ಸಮಯದಲ್ಲಿ ರಜಾ ಸಿಗುತ್ತದೆ. ಅಷ್ಟೂ ದಿನಗಳ ಕಾಲ ನಿಮಗಿಷ್ಟ ಬಂದಂತೆ ಕಳೆಯಬಹುದು. ಸ್ವಾಭಾವಿಕವಾಗಿ ಎದೆಹಾಲು ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಇವೆಲ್ಲಾ ಶರೀರಕ್ಕೆ ಸಂಬಂಧಿಸಿದ ವಿಷಯಗಳಾದರೆ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿಯೂ ನಿಮ್ಮಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ನವಕಂದನ ಆಗಮನಕ್ಕೆ ಮನೆಯವರೆಲ್ಲಾ ಉತ್ಸುಕರಾಗಿ ನಿಮ್ಮ ಸೇವೆಗೆ ನಿಲ್ಲುತ್ತಾರೆ. ನಿಮ್ಮ ಪಾಲಿನ ಮನೆಕೆಲಸಗಳು ಕಡಿಮೆಯಾಗುತ್ತವೆ. ಕಂದನನ್ನು ಕುರಿತ ನೂರಾರು ಕನಸುಗಳು ಮನದಲ್ಲಿ ಮೂಡಿ ಮನಸ್ಸು ಏಳನೆಯ ಗಗನಕ್ಕೆ ಹಾರುತ್ತದೆ. ಬರಲಿರುವ ಕಂದನನ್ನು ನೆಪವಾಗಿಟ್ಟುಕೊಂಡು ನಿಮ್ಮ ಆಪ್ತರ ನಡುವೆ ಹಿಂದೆಂದೋ ಉಂಟಾಗಿದ್ದ ಚಿಕ್ಕಪುಟ್ಟ ಕ್ಲೇಶಗಳನ್ನು ದೂರಗೊಳಿಸಬಹುದು. ಸೀಮಂತದ ಕಾರ್ಯಕ್ರಮ ಒಂದು ಪುಟ್ಟ ಮದುವೆಯಂತೆಯೇ ನಡೆಯುವುದರಿಂದ ನಿಮಗೆ ಜೀವನದಲ್ಲಿ ಇನ್ನೊಂದು ಸುಂದರ ದಿನ ದಕ್ಕಿದಂತಾಗುತ್ತದೆ.

X
Desktop Bottom Promotion