Latest Updates
-
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್!
ಅಯ್ಯೋ ದೇವ್ರೆ, ಹೀಗಾಗಲ್ಲ ಅಂದುಕೊಂಡಿದ್ದೆ!
ಆರೇ ಆರು ವಾರಗಳ ಅವಧಿ, ಮನದಲ್ಲಿ ಏನೋ ಕಸಿವಿಸಿ, ಹೊಟ್ಟೆಯಲ್ಲೇನೋ ಮಳಮಳ, ಯಾರಿಗೂ ಹೇಳಿಕೊಳ್ಳಲಾಗದ ತಳಮಳ. ಆರು ವಾರಗಳ ಹಿಂದಿನ ಫ್ಲಾಷ್ ಬ್ಯಾಕಿಗೆ ಹೋಗಿ, ಅಂದು ರಾತ್ರಿ ಏನಾಗಿತ್ತು ಎಂದು ಚಿಂತಿಸುವ ಹೊತ್ತಿಗೆ, ಕಾಲ ಮಿಂಚಿಬಿಟ್ಟಿರುತ್ತದೆ, ಹೆಣ್ಣೊಬ್ಬಳು ಊಹಿಸಿರದೇ ಇರುವ ಸೃಷ್ಟಿಕ್ರಿಯೆಯೊಂದು ಗರ್ಭದಲ್ಲಿ ಆರಂಭವಾಗಿಬಿಟ್ಟಿರುತ್ತದೆ. 'ಗುಡ್ ನ್ಯೂಸ್' ಅಂತ ಹೇಳುವ ಉತ್ಸಾಹವೇ ಬತ್ತಿಹೋಗಿರುತ್ತದೆ.
ಓಹ್ ಮೈ ಗಾಡ್, ಅಂದು ರಾತ್ರಿ ನಾನು ಗರ್ಭನಿರೋಧಕ ಬಳಸಿರಲಿಲ್ಲ ಎಂಬ ಸಂಗತಿ ಮಿದುಳಲ್ಲಿ ಛಕ್ಕನೆ ಮಿಂಚಿದಂತಾಗಿ ಮೈಯಲ್ಲೆಲ್ಲ ಗುಡುಗದೆ ನಡುಕ ಬಂದಿರುತ್ತದೆ. ತಿಳಿವಳಿಕೆಯ ಕೊರತೆಯೋ, ನಥಿಂಗ್ ವಿಲ್ ಹ್ಯಾಪನ್ ಎಂಬ ಉದಾಸೀನತೆಯೋ, ತಾನು ಅಂದುಕೊಂಡಂತೆ ಜಗತ್ತು ನಡೆಯುತ್ತದೆಂಬ ದಾರ್ಷ್ಟ್ಯವೋ ಅಥವಾ ಆದಿದ್ದಾಗಲಿ ಮುಂದೆ ನೋಡೋಣ ಎಂಬ ಭಂಡತನವೋ.
ಒಟ್ಟಿನಲ್ಲಿ, ಒಂದು ಅಧ್ಯಯನದ ಪ್ರಕಾರ, ಲೈಂಗಿಕ ಕ್ರಿಯೆ ನಡೆಸುವಾಗ ಐವರು ಮಹಿಳೆಯರಲ್ಲಿ ಇಬ್ಬರು ಮಹಿಳೆಯರು ಗರ್ಭನಿರೋಧಕಗಳನ್ನು ಬಳಸುವುದಿಲ್ಲ. ಗರ್ಭನಿರೋಧಕಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇವರು ಕಾಮಕ್ರೀಡೆ ನಡೆಸುವಾಗ ಮಕ್ಕಳಾಗದಂತೆ ಯಾವುದೇ ರಕ್ಷಣೆಯ ಬಗ್ಗೆ ಚಿಂತಿಸುವುದಿಲ್ಲ. ಇಂಥ ಅಜಾರೂಕ ಮಹಿಳೆಯರಿರುವುದು ಬೇರೆ ಯಾವ ಹಿಂದುಳಿದ ದೇಶದಲ್ಲಿ ಅಲ್ಲ, ಅಮೆರಿಕದಲ್ಲಿ!
ತೆವಾ ವಿಮೆನ್ಸ್ ಹೆಲ್ತ್ ಸಂಸ್ಥೆಯ ಪ್ರಾಯೋಜಕತ್ವದೊಂದಿಗೆ ಸ್ಟಾಟೆಜಿಕ್ ಫಾರ್ಮಾ ಸೊಲ್ಯೂಷನ್ಸ್ ಸಂಸ್ಥೆ ನಡೆಸಿದ ಅಧ್ಯಯನದಿಂದ ಈ ಸಂಗತಿ ತಿಳಿದುಬಂದಿದೆ. ಪ್ರಾಪ್ತ ವಯಸ್ಸಿಗೆ ಬಂದ 18ರ ಹರೆಯದ ಮಹಿಳೆಯರಿಂದ 49 ವರ್ಷದವರೆಗಿನ ಸಾವಿರಾರು ಮಹಿಳೆಯರ ಜೊತೆ, ಲೈಂಗಿಕ ಚಟುವಟಿಕೆ ಮತ್ತು ಗರ್ಭನಿರೋಧಕಗಳ ಬಳಕೆ ಬಗ್ಗೆ ನಡೆಸಿದ ಚರ್ಚೆಯಿಂದ ಗರ್ಭನಿರೋಧಕಗಳನ್ನು ಬಳಸದಿರುವ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.
ಇದಕ್ಕೆ ಕಾರಣಗಳೂ ಹಲವಾರು ಇವೆ. ಅವೆಂದರೆ...

ವೈದ್ಯರ ಸಲಹೆ ಪಡೆಯುವುದಿಲ್ಲ
ಏನೇ ಆಗಲಿ ಮಕ್ಕಳಾಗಲೇಬಾರದು ಎಂದು ನಿರ್ಧಾರ ಮಾಡಿಬಿಟ್ಟಿರುತ್ತಾರೆ. ಗರ್ಭನಿರೋಧಕಗಳು ಸುಲಭವಾಗಿ ಸಿಗುತ್ತಿದ್ದರೂ, ಅವುಗಳನ್ನು ಬಳಸುವ ಬಗ್ಗೆ ವೈದ್ಯರಿಂದ ಅಥವಾ ಆರೋಗ್ಯ ಕೇಂದ್ರಗಳಿಂದ ಸೂಕ್ತ ಸಲಹೆ ಪಡೆದಿರುವುದಿಲ್ಲ. ಇಂಥವರ ಸಂಖ್ಯೆ ಐದರಲ್ಲಿ ಎರಡು. ಆರೋಗ್ಯ ವಿಮೆ ಮಾಡಿಸದಿರುವವರೇ ಇಂಥ ಅಚಾತುರ್ಯ ಮಾಡಿರುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ, ಚಿಂತನೆ ಆರಂಭವಾದಾಗ ಕಾಲ ಮಿಂಚಿಹೋಗಿರುತ್ತದೆ.

ಅಯ್ಯೋ, ಏನೂ ಆಗಲ್ಲ ಬಿಡಿ
ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸದಿರುವವರು ಮತ್ತು ಗರ್ಭ ಧರಿಸಲು ವೈಫಲ್ಯತೆ ಅನುಭವಿಸುವವರು ಕಾಮಕೇಳಿ ನಡೆಸುವಾಗ ಏನೂ ಆಗಲ್ಲ ಬಿಡು ಎಂಬ ಮನೋಭಾವ ಹೊಂದಿರುತ್ತಾರೆ. ಆದರೆ, ಕಾಲಕ್ರಮೇಣ ಅವರಲ್ಲಿಯೇ ಬದಲಾವಣೆ ಬಂದಿರುವುದು ಅವರ ಅರಿವಿಗೆ ಬಂದಿರುವುದಿಲ್ಲ. ಮೈ ಗಾಡ್, ಹೀಗೆ ಆಗಲ್ಲ ಅಂತ ಅಂದುಕೊಂಡಿದ್ದೆ, ಆಗಿಬಿಟ್ಟಿದೆ ಎಂದು ಪೇಚಾಡಲು ಆರಂಭಿಸುತ್ತಾರೆ. ಅನಿರೀಕ್ಷಿತವಾಗಿ ಗರ್ಭ ಧರಿಸಿ ಹೊಟ್ಟೆ ತೊಳೆಸಲು ಆರಂಭಿಸಿದಾಗ ತಮ್ಮ ತಪ್ಪಿನ ಅರಿವಾಗಿರುತ್ತದೆ.

ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡಿದ್ರೆ ಹೇಗೆ?
ಒಂದು ಬಾರಿ ಗಂಡು ಒಳಪ್ರವೇಶಿಸಿ ವೀರ್ಯ ಸ್ರವಿಸಿದರೆ ಗರ್ಭ ಕಟ್ಟುತ್ತದೆ ಎಂಬ ತಿಳಿವಳಿಕೆ ಇದ್ದರೂ, ಮಕ್ಕಳಾಗುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರೂ ರಿಸ್ಕ್ ತೆಗೆದುಕೊಂಡಿರುತ್ತಾರೆ. ಕಾಮಕೇಳಿಯ ಸುಖದಲ್ಲಿ ಹೊರಳಾಡುವಾಗ ಮುಂಜಾಗರೂಕತೆ ವಹಿಸಿರುವುದಿಲ್ಲ. ಇಂಥವರ ಸಂಖ್ಯೆ ಶೇ.11ರಷ್ಟು. ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆ ನಡೆಸುವುದು ರಿಸ್ಕಿ ಎಂದು ಗೊತ್ತಿದ್ದರೂ ಎಚ್ಚರಿಕೆ ತೆಗೆದುಕೊಳ್ಳದೆ ಲೈಂಗಿಕ ಕ್ರಿಯೆ ನಡೆಸಿರುತ್ತಾರೆ.

ಇಂಥ ವಯಸ್ಸಲ್ಲಿ ಮಕ್ಕಳಾಗಲ್ಲ ಬಿಡು
ಹದಿಹರೆಯದ ಅಥವಾ ಮೊದಲ ಬಾರಿಗೆ ಕಾಮಕೇಳಿ ನಡೆಸುತ್ತಿರುವವರ ಕಥೆ ಒಂದು ರೀತಿಯದಾದರೆ, ಇಷ್ಟು ವಯಸ್ಸಾದ ಮೇಲೆ ಮಕ್ಕಳಾಗಲ್ಲ ಬಿಡು ಎಂದು ಅಂದುಕೊಂಡವರು ಆಕ್ಸಿಡೆಂಟಲ್ ಆಗಿ ಗರ್ಭವತಿ ಆಗುವ ಕಥೆ ಮತ್ತೊಂದು ರೀತಿಯದು. ಮತ್ತೆ ತಾಯಂದಿರಾಗುವ ಹಂತ ದಾಟಿಬಿಟ್ಟಿದ್ದೇವೆ ಎಂಬ ಉದಾಸೀನತೆಯಿಂದ ಮೈಮರೆಯುವ ಹೊತ್ತಿಗೆ, ಹೊಟ್ಟೆಯಲ್ಲಿನ ವಿಚಿತ್ರ ತಳಮಳ ಅವರನ್ನು ಬಡಿದೆಬ್ಬಿರುತ್ತದೆ. ಹರಿದ ಕಾಂಡೋಮ್ ಅಥವಾ ನಿಯಮಿತವಾಗಿ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳದಿರುವುದು ಹಿತವಾದ, ಆದರೆ ಅನಿರೀಕ್ಷಿತವಾದ ಆಘಾತ ನೀಡಿರುತ್ತದೆ.

ಗಂಡ ಕಾಂಡೋಮ್ ಬಳಸಲಿ ಸಾಕು
ಅರೆ ನಾನ್ಯಾಕೆ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳಲಿ, ಹ್ಯಾಗಿದ್ರೂ ಗಂಡ ಕಾಂಡೋಮ್ ಬಳಸುತ್ತಾನಲ್ಲ ಎಂಬ ಮನೋಭಾವ ಇರುವ ಮಹಿಳೆಯರ ಸಂಖ್ಯೆ ಕಡಿಮೆಯೇನಿಲ್ಲ. ಇವರ ಸಂಖ್ಯೆ ಶೇ.8ರಷ್ಟಿದೆ. ಆದರೆ, ಕಳಪೆ ಕಾಂಡೋಮ್‌ನಿಂದಾಗಿ ಅಥವಾ ಮಿಲನ ಮಹೋತ್ಸವ ನಡೆಸುವಾಗ ಅತಿಉತ್ಸಾಹದಿಂದ ಕಾಂಡೋಮ್ ಹರಿದು, ಹೊಟ್ಟೆ ಊದಿಸಿಕೊಂಡಿರುತ್ತಾರೆ. ಕಾಂಡೋಮ್ ಅನೇಕ ಬಾರಿ ಕೆಲಸ ಮಾಡಲ್ಲ ಎಂಬ ತಿಳಿವಳಿಕೆಯೂ ಅವರಲ್ಲಿರುವುದಿಲ್ಲ. ಗಂಡನ ಮೇಲೆ ದೂರುವುದಕ್ಕಿಂತ ಮಹಿಳೆ ತಾನೇ ಎಚ್ಚರ ವಹಿಸುವುದು ಹಿತ ಅಲ್ಲವೆ?

ಗರ್ಭನಿರೋಧಕ ಮಾತ್ರೆ ಕೂಡ ಕೈಕೊಟ್ಟಾಗ
ಕಾಂಡೋಮ್ ಹೇಗೆ ಕೈಕೊಡುತ್ತದೋ, ಗರ್ಭನಿರೋಧಕ ಮಾತ್ರೆ ನಿಯಮಿತವಾಗಿ ತೆಗೆದುಕೊಳ್ಳುತ್ತಿದ್ದರೂ ಕೈಕೊಡುವ ಸಾಧ್ಯತೆ ಹೆಚ್ಚು. ಇದನ್ನು ವೈದ್ಯರೊಡನೆ ಮೊದಲೇ ಚರ್ಚಿಸಿ ಸಾಧ್ಯತೆ ಬಾಧ್ಯತೆಗಳ ಬಗ್ಗೆ ತಿಳಿದುಕೊಂಡಿರಬೇಕು. ಈ ಅಧ್ಯಯನದ ಪ್ರಕಾರ ಇಂಥವರ ಸಂಖ್ಯೆ ಶೇ.40ರಷ್ಟಿದೆ ಮತ್ತು ಅನುಭವದ ಕೊರತೆಯೋ ಏನೋ ಇವರೆಲ್ಲ 24 ವರ್ಷದೊಳಗಿನ ಹದಿಹರೆಯದ ಮಹಿಳೆಯರು.

ಮಾತ್ರೆ ತೆಗೆದುಕೊಳ್ಳಲು ಉದಾಸೀನತೆ
ಶೇ.47ರಷ್ಟು ಮಹಿಳೆಯರಿಗೆ, ಲೈಂಗಿಕ ಕ್ರಿಯೆ ನಡೆಸಿದ 72 ಗಂಟೆಯೊಳಗೆ ಮಾತ್ರೆ ತೆಗೆದುಕೊಂಡರೆ ಗರ್ಭಧರಿಸುವುದನ್ನು ನಿಲ್ಲಿಸಬಹುದು ಎಂಬ ಅರಿವಿದ್ದರೂ ಉದಾಸೀನತೆಯಿಂದ ಮಾತ್ರೆ ತೆಗೆದುಕೊಳ್ಳುವುದನ್ನು ಮುಂದೂಡಿರುತ್ತಾರೆ. ಅಚ್ಚರಿಯ ಸಂಗತಿಯೆಂದರೆ, ಶೇ.91ರಷ್ಟು ಮಹಿಳೆಯರಿಗೆ ಮಾತ್ರೆಯ ಮಹಿಮೆಯ ಅರಿವಿದೆ. ಆದರೆ, ಮಾತ್ರೆ ಹೊಟ್ಟೆಗಿಳಿಯುವ ಮೊದಲೇ ಆಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಇನ್ನೊಂದು ಸೇರಿಸುವ ಸೃಷ್ಟಿಕ್ರಿಯೆ ಆರಂಭವಾಗಿರುತ್ತದೆ.



Click it and Unblock the Notifications