ಇಟಲಿಯಲ್ಲೂ ತ್ರಿವರ್ಣ ಧ್ವಜ! ಯಾರು ಈ ಸುಹಾನಿ ಶಾ? ಮೊದಲ ಮಹಿಳಾ ಮೆಂಟಲಿಸ್ಟ್ ರೋಚಕ ಕಥೆ

ಇಟಲಿಯಲ್ಲಿ ಭಾರತದ ಧ್ವಜ ಹಾರಿಸಿದ ಸುಹಾನಿ ಶಾ. 'ಅತ್ಯುತ್ತಮ ಮ್ಯಾಜಿಕ್ ಕ್ರಿಯೇಟರ್' ಗೌರವ ಪಡೆದ ಭಾರತೀಯ ಮನಶ್ಶಾಸ್ತ್ರಜ್ಞೆ ಕಥೆಯಿದು. ಹೌದು, ಇಟಲಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಮ್ಯಾಜಿಕ್ ಸೊಸೈಟೀಸ್ (FISM) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸುಹಾನಿ ಶಾ (Suhani Shah) ದೊಡ್ಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ 'ಭಾರತೀಯ ಮಹಿಳಾ ಮೆಂಟಲಿಸ್ಟ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರತಿಷ್ಠಿತ 'ಬೆಸ್ಟ್ ಮ್ಯಾಜಿಕ್ ಕ್ರಿಯೇಟರ್' (Best Magic Creator Award 2025) ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಆಸ್ಟ್ರೇಲಿಯಾದ ಟೆಲಿವಿಷನ್ ಶೋ 'ದಿ ಪ್ರಾಜೆಕ್ಟ್'ನಲ್ಲಿ ಸುಹಾನಿ ಶಾ ಅವರ ಅದ್ಭುತ ಪ್ರದರ್ಶನದ ನಂತರ, ಅವರ ಖ್ಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಗನಕ್ಕೇರಿತು. ವೈರಲ್ ಆದ ಒಂದು ಭಾಗದಲ್ಲಿ, ಅವರು ನಿರೂಪಕರ ಐಫೋನ್ ಪಾಸ್‌ಕೋಡ್ ಅನ್ನು ನಿಖರವಾಗಿ ಬಹಿರಂಗಪಡಿಸಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದರು. ಅಲ್ಲದೆ, ತಮ್ಮ ಅಸಾಧಾರಣ ಮಾನಸಿಕ ಕೌಶಲ್ಯಗಳನ್ನು ಬಳಸಿಕೊಂಡು ಮತ್ತೊಬ್ಬ ನಿರೂಪಕಿಯ ಗುಪ್ತ ಪ್ರೀತಿಯ ಬಗ್ಗೆಯೂ ಅವರು ಹೇಳಿದ್ದು, ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು. ಈ ಪ್ರದರ್ಶನದಿಂದ ಸುಹಾನಿ ಜಾಗತಿಕವಾಗಿ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದರು.

Suhani Shah Won Best Magic Creator

ಭಾರತದ ಮಗಳು ಸುಹಾನಿ ಶಾ ಮತ್ತೊಮ್ಮೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಹೆಸರನ್ನು ಹೆಮ್ಮೆಯಿಂದ ಎತ್ತಿ ಹಿಡಿದಿದ್ದಾರೆ. ಜಾಗತಿಕವಾಗಿ ಮ್ಯಾಜಿಕ್ ಮತ್ತು ಮೆಂಟಲಿಸಂ ಜಗತ್ತಿನಲ್ಲಿನ ಉತ್ಕೃಷ್ಟತೆಯನ್ನು ಗುರುತಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸುಹಾನಿ ಕೇವಲ ಅದ್ಭುತ ಮಾಂತ್ರಿಕ (ಇಲ್ಯೂಷನಿಸ್ಟ್) ಮಾತ್ರವಲ್ಲ, ದೇಶದ ಮೊದಲ ಮಹಿಳಾ ಮೆಂಟಲಿಸ್ಟ್ ಕೂಡ ಆಗಿದ್ದಾರೆ. ಸಾಂಪ್ರದಾಯಿಕ ಚಿಂತನೆಗಳನ್ನು ಮುರಿದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಹಾಗಾದರೆ, ಸುಹಾನಿ ಶಾ ಯಾರು? (Who is Suhani Shah) ಮತ್ತು ಅವರು ಈ ಸಾಧನೆಯನ್ನು ಹೇಗೆ ಮಾಡಿದರು ಎಂಬುದನ್ನು ತಿಳಿಯೋಣ ಬನ್ನಿ.

ಯಾರು ಈ ಸುಹಾನಿ ಶಾ?

ಸುಹಾನಿ ಶಾ ಅವರು ಜನವರಿ 29, 1990 ರಂದು ರಾಜಸ್ಥಾನದ ಉದಯಪುರದಲ್ಲಿ ಜನಿಸಿದರು. ಇವರು ಮಾರ್ವಾಡಿ ಕುಟುಂಬಕ್ಕೆ ಸೇರಿದವರು. ಆರು ವರ್ಷದವರಿದ್ದಾಗ, ಸುಹಾಸಿನಿ ತಾನು ಮಾಂತ್ರಿಕಿಯಾಗಲು ಬಯಸುತ್ತೇನೆ ಎಂದು ತಮ್ಮ ಪೋಷಕರಿಗೆ ಹೇಳಿದ್ದರಂತೆ. ಅದನ್ನು ಕೇಳಿ ಮೊದಲು ಅವರೂ ಆಶ್ಚರ್ಯಚಕಿತರಾದರು. ಅದರಂತೆ ತಮ್ಮ 7ನೇ ವಯಸ್ಸಿನಲ್ಲಿ ಮೊದಲ ಮ್ಯಾಜಿಕ್ ಶೋ ಮಾಡಿದರು. ವಿದ್ಯಾಭ್ಯಾಸವನ್ನು ತೊರೆದು ಮ್ಯಾಜಿಕ್ ಅನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡರು. ಇಂದು ಭಾರತದ ಅತ್ಯಂತ ಪ್ರಸಿದ್ಧ ಮೆಂಟಲಿಸ್ಟ್ ಆಗಿದ್ದಾರೆ.

ತಂದೆ ಕೂಡ ಒಬ್ಬ ಮಾಂತ್ರಿಕ

ಆಶ್ಚರ್ಯಕರ ವಿಷಯವೆಂದರೆ, ಸುಹಾನಿ ಅವರ ತಂದೆ ಕೂಡ ಒಬ್ಬ ಮಾಂತ್ರಿಕರಾಗಿದ್ದು, ಸುಹಾನಿಗೆ ಮೊದಲ ಬೆಂಬಲಿಗರಾಗಿ ಮತ್ತು ಮಾರ್ಗದರ್ಶಕರಾಗಿ ನಿಂತರು. ಸುಹಾನಿ ತನ್ನನ್ನು ತಾನು ಮಾಂತ್ರಿಕಿಗಿಂತ ಹೆಚ್ಚಾಗಿ ಮೆಂಟಲಿಸ್ಟ್ ಮತ್ತು ಪರ್ಫಾರ್ಮರ್ ಎಂದು ಪರಿಗಣಿಸಿಕೊಳ್ಳುತ್ತಾರೆ. ಅವರು ಮೈಂಡ್ ರೀಡಿಂಗ್, ಬಾಡಿ ಲ್ಯಾಂಗ್ವೇಜ್ ಇಂಟರ್ಪ್ರಿಟೇಶನ್ ಮತ್ತು ಸೈಕಲಾಜಿಕಲ್ ಟ್ರಿಕ್ಸ್ ಬಳಸಿಕೊಂಡು ಪ್ರೇಕ್ಷಕರನ್ನು ಬೆರಗುಗೊಳಿಸುತ್ತಾರೆ. ಲೈವ್ ಶೋಗಳು, ಯೂಟ್ಯೂಬ್ ವಿಡಿಯೋಗಳು ಮತ್ತು ಪ್ರೇರಣಾದಾಯಕ ಭಾಷಣಗಳ ಮೂಲಕವೂ ಲಕ್ಷಾಂತರ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ.

ಶಾಲೆ ತೊರೆದು ದೇಶಾದ್ಯಂತ ಲೈವ್ ಶೋ

ಸುಹಾನಿ ತಮ್ಮ ಏಳನೇ ವಯಸ್ಸಿನಲ್ಲಿ ಅಕ್ಟೋಬರ್ 1997 ರಲ್ಲಿ ಗುಜರಾತಿನ ಅಹಮದಾಬಾದ್‌ನಲ್ಲಿ ಮೊದಲ ಲೈವ್ ಮ್ಯಾಜಿಕ್ ಶೋ ನೀಡಿದರು. ಮ್ಯಾಜಿಕ್ ಮೇಲಿನ ಅವರ ಪ್ರೀತಿ ಎಷ್ಟಿತ್ತೆಂದರೆ, ಅವರು 1ನೇ ತರಗತಿಯ ಬಳಿಕ ಶಾಲೆಯನ್ನು ತೊರೆದು ದೇಶಾದ್ಯಂತ ಲೈವ್ ಶೋಗಳನ್ನು ನೀಡಲು ಪ್ರಾರಂಭಿಸಿದರು. ಅನುಭವ ಮತ್ತು ಸ್ವಯಂ ಕಲಿಕೆಯಿಂದಲೇ ಮೆಂಟಲಿಸಂ ಮತ್ತು ಮ್ಯಾಜಿಕ್‌ನಲ್ಲಿ ಪೂರ್ಣ ಪ್ರಮಾಣದ ವೃತ್ತಿಜೀವನವನ್ನು ರೂಪಿಸಿಕೊಂಡ ಕೆಲವೇ ಕೆಲವು ಭಾರತೀಯರಲ್ಲಿ ಇವರು ಒಬ್ಬರು. ವೇದಿಕೆ ಪ್ರದರ್ಶನದ ಜೊತೆಗೆ, ಸುಹಾನಿ ತರಬೇತಿ ಪಡೆದ ಹಿಪ್ನೋಥೆರಪಿಸ್ಟ್ ಕೂಡ ಆಗಿದ್ದಾರೆ.

ಇಟಲಿಯಲ್ಲಿ ನಡೆದ FISM (Fédération Internationale des Sociétés Magiques) ನಂತಹ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸುಹಾನಿಗೆ ಈ ಗೌರವ ಸಿಕ್ಕಿದೆ. ವಿಶ್ವದ ಅತ್ಯಂತ ನವೀನ ಮತ್ತು ಪ್ರಭಾವಶಾಲಿ ಮ್ಯಾಜಿಕ್ ಪ್ರೆಸೆಂಟರ್‌ಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸುಹಾನಿಯವರ ಪ್ರದರ್ಶನ ಮತ್ತು ಹೊಸ ಆಲೋಚನೆಗಳು ತೀರ್ಪುಗಾರರನ್ನು ತುಂಬಾ ಪ್ರಭಾವಿಸಿದವು. ಹೀಗಾಗಿ, ಅವರಿಗೆ ಅತ್ಯುತ್ತಮ ಮ್ಯಾಜಿಕ್ ಕ್ರಿಯೇಟರ್ ಬಿರುದನ್ನು ನೀಡಲಾಯಿತು.

20 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌

ಸುಹಾನಿ ಅವರು ಯೂಟ್ಯೂಬ್ ಚಾನೆಲ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ. ಅವರು ತಮ್ಮ ಕಾರ್ಯಕ್ರಮಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳೊಂದಿಗೆ ಮೈಂಡ್ ರೀಡಿಂಗ್ ಮಾಡುತ್ತಾರೆ. ಅವರ ಕೆಲವು ಜನಪ್ರಿಯ ಸರಣಿಗಳಲ್ಲಿ 'ಟ್ರುತ್ & ಡೇರ್ ವಿತ್ ಸುಹಾನಿ ಷಾ' ಮತ್ತು 'ದಿ ಸುಹಾನಿ ಷಾ ಎಕ್ಸ್‌ಪೀರಿಯೆನ್ಸ್' ಸೇರಿವೆ. ಇವರು ಮೆಂಟಲಿಸಂ ಕಾರ್ಯಾಗಾರಗಳನ್ನು ಆಯೋಜಿಸುತ್ತಾರೆ. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್‌ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಏಕೈಕ ಪೂರ್ಣಾವಧಿ ಮಹಿಳಾ ಮೆಂಟಲಿಸ್ಟ್

ಸುಹಾನಿ ಶಾ ಅವರು ಭಾರತದ ಏಕೈಕ ಪೂರ್ಣಾವಧಿ ಮಹಿಳಾ ಮೆಂಟಲಿಸ್ಟ್ ಆಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 5,000ಕ್ಕೂ ಹೆಚ್ಚು ಲೈವ್ ಶೋಗಳನ್ನು ಮಾಡಿದ್ದಾರೆ. ಅವರು ಮಾನಸಿಕ ಆರೋಗ್ಯ, ಸೈಕಾಲಜಿ ಮತ್ತು ಮಾನವ ನಡವಳಿಕೆಯ ಬಗ್ಗೆಯೂ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಸುಹಾನಿ ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಸುಹಾನಿ ಷಾ ಕೇವಲ ಮಾಂತ್ರಿಕಿಯಲ್ಲ, ಭಾರತೀಯ ಮಹಿಳೆಯರ ಶಕ್ತಿ, ಆತ್ಮವಿಶ್ವಾಸ ಮತ್ತು ಪ್ರತಿಭೆಯ ಸಂಕೇತವಾಗಿದ್ದಾರೆ. ಹುಮ್ಮಸ್ಸು ಇದ್ದರೆ ಯಾವುದೇ ವೇದಿಕೆ ದೊಡ್ಡದಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ.

English summary

Who Is Suhani Shah? Indian Mentalist Won Best Magic Creator In Italy 2025

Who Is Suhani Shah? Indian Mentalist Won Best Magic Creator In Italy 2025
Story first published: Tuesday, July 22, 2025, 12:35 [IST]
X
Desktop Bottom Promotion