2023ರಲ್ಲಿ ದಾಖಲಾಗಿವೆ ಚಿತ್ರ ವಿಚಿತ್ರ ಗಿನ್ನಿಸ್ ದಾಖಲೆ..! ಯಾವುದೆಲ್ಲಾ ಗೊತ್ತಾ?

ಹೊಸ ವರ್ಷ ಸ್ವಾಗತಿಸಲು ಇನ್ನೇನು ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿವೆ. ವಿಶ್ವದಾದ್ಯಂತ ಹೊಸ ವರ್ಷವನ್ನು ಸ್ವಾಗತಿಸಲು ಜನ ಕಾತರದಿಂದ ಕಾಯುತ್ತಿದ್ದಾರೆ. ಹಾಗೆ 2023ರಲ್ಲಿ ನಡೆದ ಹಲವು ಘಟನೆಗಳ ಮೆಲುಕು ಹಾಕುತ್ತಿದ್ದಾರೆ. ಈ ವರ್ಷ ಒಂದಿಷ್ಟು ಚಿತ್ರ ವಿಚಿತ್ರ ಗಿನ್ನಿಸ್ ವರ್ಡ್‌ ರೆಕಾರ್ಡ್‌ಗಳು ದಾಖಲಾಗಿವೆ. ಅದರಲ್ಲೂ ಯಾರು ಊಹಿಸದಂತಹ ವಿಚಾರಗಳಲ್ಲಿ ಹಲವರು ರೆಕಾರ್ಡ್ ಮಾಡಿ ಜನರ ಹುಬ್ಬೇರುವಂತೆ ಮಾಡಿದ್ದಾರೆ. ಅಂತಹ ಕೆಲವು ವಿಚಿತ್ರ ಗಿನ್ನಿಸ್ ರೆಕಾರ್ಡ್‌ಗಳು ಇಲ್ಲಿವೆ ನೋಡಿ.

2004ರಲ್ಲಿ ಮೊದಲ ಬಾರಿಗೆ ಗಿನ್ನಿಸ್ ವರ್ಡ್ ರೆಕಾರ್ಡ್ ಡೇ ಆಚರಿಸಲಾಗಿತ್ತು, ಅಂದಿನಿಂದ ಪ್ರತಿ ವರ್ಷದ ನವೆಂಬರ್ 16ರಂದು ವಿಶ್ವ ಗಿನ್ನಿಸ್ ವರ್ಡ್ ರೆಕಾರ್ಡ್ ಡೇ ಆಚರಿಸಲಾಗುತ್ತಿದೆ. ಆದರೆ 2023ರಲ್ಲಿ ಕೆಲವು ವಿಚಿತ್ರ ವಿಷಯದಲ್ಲಿ ಗಿನ್ನಿಸ್ ರೆಕಾರ್ಡ್ ಬರೆದ ಸಾಧನೆ ಮಾಡಿದ್ದಾರೆ.

Records 2023

ಹೆಲಿಕಾಪ್ಟರ್ ಮೇಲೆ ಅತೀ ಹೆಚ್ಚು ಚಿನ್‌ಅಪ್ಸ್‌

ಜಿಮ್‌ನಲ್ಲಿ ಕಸರತ್ತು ಮಾಡುವವರು ರಾಡ್‌ ಅಥವಾ ಕಬ್ಬಿಣದ ಸರಳಿನ ಸಹಾಯದಿಂದ ಚಿನ್‌ಅಪ್‌ ಮಾಡುತ್ತಾರೆ. ಆದ್ರೆ ಈ ಕಸರತ್ತು ನೋಡಿದಷ್ಟು ಸುಲಭವಲ್ಲ. ಸುಮಾರು 10 ರಿಂದ 15 ಚಿನ್‌ಅಪ್‌ ಮಾಡುವಗ್ಲೇ ದೇಹ ದಣಿಯುತ್ತದೆ. ಆದ್ರೆ ಇಲ್ಲೊಬ್ಬ ಹೆಲಿಕಾಪ್ಟರ್ ಮೇಲೆ ಚಿನ್‌ಅಪ್ಸ್ ಮಾಡಿ ಗಿನ್ನಿಸ್ ವರ್ಡ್ ರೆಕಾರ್ಡ್ ಮಾಡಿದ್ದ. ಅರ್ಮೇನಿಯಾದ ಹಮಾಜಾಸ್ಪ್ ಹ್ಲೋಯಾನ್ ಹೆಲಿಕಾಪ್ಟರ್ ಏರಿ ಒಂದು ನಿಮಿಷದೊಳಗೆ 32 ಪುಲ್ ಅಪ್ಸ್ ಮಾಡಿದ್ದ, ಇದು ಹೆಲಿಕಾಪ್ಟರ್ ಮೇಲೆ ಅತೀ ವೇಗವಾಗಿ ಪುಲ್‌ಅಪ್ಸ್‌ ಮಾಡಿದ ಸಾಧನೆ ಪಟ್ಟಿಗೆ ಸೇರಿತು. ಜನ ಆತನ ಕಸರತ್ತು ಕಂಡು ನಿಬ್ಬೆರಗಾಗಿದ್ರು.

ನೀರಿನೊಳಗೆ ದೀರ್ಘಚುಂಬನ

ಜನ ಕಿಸ್ ಮಾಡುವುದರಲ್ಲೂ ಈ ಬಾರಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಅಚ್ಚರಿ ಎಂದರೆ ಇದು ನೀರಿನೊಳಗೆ ಎನ್ನುವುದು ಮತ್ತೊಂದು ಅಚ್ಚರಿ. ಈ ವರ್ಷದ ಪ್ರೇಮಿಗಳ ದಿನದಂದು ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಈಜುಕೊಳದೊಳಗೆ 4 ನಿಮಿಷ ಮತ್ತು 6 ಸೆಕೆಂಡುಗಳ ಕಾಲ ದೀರ್ಘ ಚುಂಬನಕ್ಕೆ ಒಳಗಾಗಿದ್ದರು. ಇದು ನೀರೊಳಗೆ ದಾಖಲಾದ ಅತ್ಯಂತ ಸುದೀರ್ಘ ಚುಂಬನ ಎಂಬ ಗಿನ್ನಿಸ್ ದಾಖಲೆ ಬರೆದಿದೆ.

ಅಕ್ಷಯ್ ಕುಮಾರ್ ಸೆಲ್ಫಿ ದಾಖಲೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳುವುದರಲ್ಲೂ ಗಿನ್ನಿಸ್ ದಾಖಲೆ ಬರೆದರು. ಅವರ ಸೆಲ್ಫಿ ಚಿತ್ರದ ಅಂಗವಾಗಿ ಸೆಲ್ಫಿ ಅಭಿಯಾನ ಆರಂಭಿಸಿ ಒಂದು ನಿಮಿಷದೊಳಗೆ ಅತೀ ಜನರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ದಾಖಲೆ ಬರೆದರು. 3 ನಿಮಿಷದಲ್ಲಿ ಬರೋಬ್ಬರಿ 184 ಮಂದಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿ ಹೊಸ ದಾಖಲೆ ಬರೆದರು. ಈ ಮೊದಲು ಅಮೆರಿಕ ಮೂಲದ ಜೇಮ್ಸ್ ಸ್ಮಿತ್ 3 ನಿಮಿಷದಲ್ಲಿ 168 ಜನರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ದಾಖಲೆ ಇತ್ತು.

1 ಲೀಟರ್ ಟೊಮ್ಯಾಟೊ ಸಾಸ್ ಕುಡಿದ ಭೂಪ

ಜನ ಗಿನ್ನಿಸ್ ರೆಕಾರ್ಡ್ ಮಾಡಲು ಎಂತಹ ಸಾಹಸಕ್ಕೆ ಬೇಕಾದ್ರೂ ಮುಂದಾಗುತ್ತಾರೆ ಎನ್ನುವುದಕ್ಕೆ ಇದೊಂದು ಸಾಕ್ಷಿ. ಆತ ಗಿನ್ನಿಸ್‌ ರೆಕಾರ್ಡ್‌ನಲ್ಲಿ ತನ್ನ ಹೆಸರು ಮುದ್ರಿಸಲು 1 ಲೀಟರ್ ಟೊಮ್ಯಾಟೊ ಸಾಸ್ ಅನ್ನು ಕೇವಲ 55.21 ಸೆಕೆಂಡ್‌ಗಳಲ್ಲಿ ಕುಡಿದು ದಾಖಲೆ ಬರೆದ. ಜರ್ಮನಿಯ ಬವೇರಿಯಾದ ಆಗ್ಸ್‌ಬರ್ಗ್‌ನ ಆಂಡ್ರೆ ಓರ್ಟೋಲ್ಫ್ ಈ ವಿಚಿತ್ರ ದಾಖಲೆ ಬರೆದ ವ್ಯಕ್ತಿಯಾಗಿದ್ದು, ಆತನ ದಾಖಲೆ ಯಾರು ಸರಿಗಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕು.

ಅತ್ಯಂತ ಉದ್ದದ ರೆಪ್ಪೆ ಹೊಂದಿದ ನಾಯಿ

ಇತ್ತೀಚಿನ ದಿನಗಳಲ್ಲಿ ನಾಯಿ ಕೇವಲ ಸಾಕು ಪ್ರಾಣಿಯಾಗಿ ಉಳಿಯದೆ ಕುಟುಂಬದ ಸದಸ್ಯ ಎಂಬ ಭಾವನೆ ಬಂದಿದೆ. ನಾಯಿ ಸಾಕುವವರು ಅವುಗಳ ಕುರಿತು ಹೆಚ್ಚು ಗಮನಹರಿಸುತ್ತಾರೆ. ಆದರೆ ಇಲ್ಲೊಂದು ನಾಯಿ ವಿಶ್ವದಲ್ಲೇ ಅತ್ಯಂತ ಉದ್ದದ ಕಣ್ಣಿನ ರೆಪ್ಪೆ ಹೊಂದಿದೆ ಎಂಬ ಗಿನ್ನಿಸ್ ರೆಕಾರ್ಡ್ ಬರೆದಿದೆ. ಕೊಕೊಕೋ ಎಂಬ 6 ವರ್ಷದ ನಾಯಿ 17.8 ಸೆಂ.ಮೀ ಉದ್ದ ರೆಪ್ಪೆಗಳ ಹೊಂದಿರುವುದು ಗಿನ್ನಿಸ್ ರೆಕಾರ್ಡ್ ಬುಕ್‌ಗೆ ಸೇರಿಕೊಂಡಿದೆ.

ಗಿನ್ನಿಸ್ ಬುಕ್ ಸೇರಿದ 7 ವರ್ಷದ ಬಾಲಕಿ

ಜನ ಹೆಚ್ಚೆಂದರೆ ಎಷ್ಟು ಲಿಪ್‌ ಬಾಮ್‌ (Lipbalm) ಇಟ್ಟುಕೊಳ್ಳುತ್ತಾರೆ. ಅಬ್ಬಬ್ಬಾ ಅಂದ್ರೆ 5 ಅಥವಾ 6 ಅದಕ್ಕೂ ಹೆಚ್ಚೆಂದರೆ 10 ಇಟ್ಟುಕೊಳ್ಳಬಹುದು. ಆದರೆ ಇಲ್ಲೊಬ್ಬಳು 7 ವರ್ಷದ ಬಾಲಕಿ ಸುಮಾರು 3,388 ಲಿಪ್ ಬಾಮ್ ಸಂಗ್ರಹ ಇಟ್ಟುಕೊಂಡು ಗಿನ್ನಿಸ್ ರೆಕಾರ್ಡ್ ಮಾಡಿದ್ದಾಳೆ. ಸ್ಕಾರ್ಲೆಂಟ್ ಚೆಂಗ್ ಎಂಬ 7 ವರ್ಷದ ಬಾಲಕಿ ತನ್ನ 3 ವರ್ಷದಿಂದ ಲಿಪ್ ಬಾಮ್ ಸಂಗ್ರಹಿಸುವ ಅಭ್ಯಾಸ ಇಟ್ಟುಕೊಂಡಿದ್ದಳು. ಆಕೆ 7ನೇ ವರ್ಷಕ್ಕೆ ಬಂದಾಗ ಅವಳ ಬಳಿ ಬರೋಬ್ಬರಿ 3,388 ಲಿಪ್ ಬಾಮ್ ಸಂಗ್ರಹವಾಗಿತ್ತಲ್ಲದೆ ಇದು ಗಿನ್ನಿಸ್ ರೆಕಾರ್ಡ್‌ಗೂ ಕಾರಣವಾಯಿತು.

English summary

Strange Guinness records in 2023..! Do you know which is weirdest?

Weirdest Guinness World Records 2023, Year Ender 2023, Guinness World Records 2023,
X
Desktop Bottom Promotion