ರಾಮ ನವಮಿ 2024: ಈ ವರ್ಷ ರಾಮ ನವಮಿ ಯಾವಾಗ? ಈ ಹಬ್ಬದ ಮಹತ್ವವೇನು?

ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ನಮ್ಮೆದುರು ಬರಲಿವೆ. ಅದರಲ್ಲೂ ಯುಗಾದಿ ಹಿಂದೂಗಳ ಪಾಲಿಗೆ ಪವಿತ್ರ ಹಾಗೂ ಪ್ರಮುಖ ಹಬ್ಬವಾಗಿದೆ. ವಸಂತ ಋತು ಆರಂಭವಾಗುವ ಹಿನ್ನೆಲೆ ಈ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇನ್ನು ಯುಗಾದಿಯ ಬಳಿಕ ಒಂದಲ್ಲಾ ಒಂದು ಹಬ್ಬಗಳು ಬರುತ್ತವೆ.

ಯುಗಾದಿ ಮುಗಿಯುತ್ತಿದ್ದಂತೆ ರಾಮನವಮಿಯೂ ಬರಲಿದೆ. ಭಗವಾನ್ ಶ್ರೀ ರಾಮನ ಭಕ್ತರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀ ರಾಮನ ಜನ್ಮ ದಿನವನ್ನು ರಾಮ ನವಮಿಯೆಂದು ಆಚರಿಸಲಾಗುವುದು. ಈ ವರ್ಷ ರಾಮ ನವಮಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ತಿಳಿಯೋಣ.

Ramnavami 2024 When Is Ramnavami What Is The Significance Ramnavami

ಶ್ರೀ ರಾಮನವಮಿಯೆ೦ಬ ಈ ಹಬ್ಬವು ಭಗವಾನ್ ಮಹಾವಿಷ್ಣುವಿನ ಏಳನೆಯ ಅವತಾರವಾಗಿರುವ ಪ್ರಭು ಶ್ರೀ ರಾಮಚ೦ದ್ರನ ಜನ್ಮದಿನದ ಸ್ಮರಣಾರ್ಥವಾಗಿ ಆಗಿರುತ್ತದೆ.ಭಗವಾನ್ ಶ್ರೀ ರಾಮಚ೦ದ್ರನು ಅಯೋಧ್ಯಾಧಿಪತಿ ರಾಜಾ ದಶರಥ ಹಾಗೂ ರಾಣಿ ಕೌಸಲ್ಯೆಗೆ ಜನಿಸಿದನು. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ರಾವಣನನ್ನು ಸ೦ಹರಿಸುವುದಕ್ಕಾಗಿ ಸ್ವಯ೦ ಭಗವಾನ್ ಶ್ರೀ ಮನ್ಮಹಾವಿಷ್ಣುವೇ ಭಗವಾನ್ ಶ್ರೀ ರಾಮಚ೦ದ್ರನ ರೂಪದಲ್ಲಿ ಅವತರಿಸಿದನು.

ರಾಮ ನವಮಿ ದಿನಾಂಕ ಹಾಗೂ ಪೂಜೆಗೆ ಶುಭ ಸಮಯ

ರಾಮ ನವಮಿ ಶುಭ ಮುಹೂರ್ತ

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ 16 ರಂದು ಮಧ್ಯಾಹ್ನ 01:23 ಕ್ಕೆ ಪ್ರಾರಂಭವಾಗುತ್ತದೆ. ಈ ದಿನಾಂಕವು ಏಪ್ರಿಲ್ 17 ರಂದು ಮಧ್ಯಾಹ್ನ 03:14 ಕ್ಕೆ ಕೊನೆಗೊಳ್ಳಲಿದೆ. ಉದಯ ತಿಥಿಯ ಪ್ರಕಾರ, ಏಪ್ರಿಲ್ 17 ರ ಬುಧವಾರದಂದು ರಾಮ ನವಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ರಾಮ ನವಮಿಯ ಶುಭ ಮುಹೂರ್ತ - ಬೆಳಗ್ಗೆ 11:03 ರಿಂದ ಮಧ್ಯಾಹ್ನ 1:38.

ಹಿ೦ದೂ ಚಾ೦ದ್ರಮಾನದ ಪ್ರಕಾರ, ಪ್ರತಿವರ್ಷವೂ ಚೈತ್ರಮಾಸದ ಒ೦ಭತ್ತನೆಯ ದಿನದ೦ದು (ಮಾರ್ಚ್ - ಏಪ್ರಿಲ್) ಈ ಮ೦ಗಳಕರ ದಿನವನ್ನು ಆಚರಿಸಲಾಗುತ್ತದೆ.ಭಗವಾನ್ ಶ್ರೀ ರಾಮಚ೦ದ್ರನ ಜನ್ಮದಿನವನ್ನು ಆಚರಿಸುವುದರೊ೦ದಿಗೆ, ಇದೇ ದಿನವನ್ನು ರಾಮ ಹಾಗೂ ಸೀತೆಯರ ವಿವಾಹದ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ರಾಮನವಮಿಯ ಮಹತ್ವ

ಭಗವಾನ್ ಶ್ರೀ ರಾಮಚ೦ದ್ರನು ಸತ್ಯ ಹಾಗೂ ನೈತಿಕತೆಯ ಸಾಕಾರಸ್ವರೂಪನೇ, ಪ್ರತಿರೂಪವೇ ಆಗಿದ್ದವನು. ಶ್ರೀ ರಾಮಚ೦ದ್ರನು ಓರ್ವ ಧರ್ಮನಿಷ್ಟ ಮಹಾರಾಜನು, ಓರ್ವ ಆದರ್ಶ ಪುತ್ರನು, ಓರ್ವ ಆದರ್ಶ ಪತಿಯು (ಏಕಪತ್ನೀ ವ್ರತಸ್ಥ), ಹಾಗೂ ವಾತ್ಸಲ್ಯಮಯೀ ಸಹೋದರನಾಗಿದ್ದವನು. ಮಾನವನ ಜೀವನಾದರ್ಶಗಳ ಚಿರ೦ತನ ಸ೦ಕೇತವೆ೦ದು ಪ್ರಭು ಶ್ರೀ ರಾಮಚ೦ದ್ರನು ಪರಿಗಣಿತನಾಗಿರುವನು.

ರಾಮ ನವಮಿಯ ಆಚರಣೆ

ಭಗವಾನ್ ಶ್ರೀ ರಾಮನ ಹುಟ್ಟೂರಾದ ಅಯೋಧ್ಯೆಯ೦ತಹ ಪವಿತ್ರ ಯಾತ್ರಾಸ್ಥಳಗಳಿಗೆ ಅಸ೦ಖ್ಯಾತ ಭಕ್ತಾದಿಗಳು ಹಾಗೂ ಇನ್ನೂ ಅನೇಕರು ರಾಮೇಶ್ವರದ೦ತಹ ಪುಣ್ಯಕ್ಷೇತ್ರಗಳಿಗೆ ಭಗವಾನ್ ಶ್ರೀ ರಾಮಚ೦ದ್ರನ ಆಶೀರ್ವಾದವನ್ನು ಪಡೆಯುವುದಕ್ಕೋಸ್ಕರ ಭೇಟಿ ನೀಡುತ್ತಾರೆ. ಭಗವಾನ್ ಶ್ರೀ ರಾಮಚ೦ದ್ರನ ಪವಿತ್ರ ನಾಮೋಚ್ಚಾರಣೆಯನ್ನು ಪುನ: ಪುನ: ಈ ಭಕ್ತರು ಪಠಿಸುತ್ತಲೇ ಇರುತ್ತಾರೆ. ಈ ರಾಮನಾಮವನ್ನೇ "ತಾರಕಮ೦ತ್ರ" ವೆ೦ದು ಪರಿಗಣಿಸಲಾಗುತ್ತದೆ. ಈ ಬಾರಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಬಳಿಕ ಮೊದಲ ರಾಮನವಮಿ ಇದಾಗಿದ್ದು ವಿಜೃಂಭಣೆಯಿಂದ ಆಚರಿಸಲು ದೇವಾಲಯದ ಟ್ರಸ್ಟ್‌ ಸಿದ್ಧತೆ ಮಾಡಿಕೊಂಡಿದೆ.

ರಾಮ ಸೀತೆ ಕಲ್ಯಾಣ

ಶ್ರೀ ರಾಮನವಮಿಯ ಈ ಶುಭದಾಯಕ ದಿನವನ್ನು ರಾಮ-ಸೀತೆಯರ ವೈವಾಹಿಕ ದಿನವನ್ನಾಗಿಯೂ ಆಚರಿಸುವುದಾದ್ದರಿ೦ದ ದಕ್ಷಿಣ ಭಾರತದಲ್ಲಿ,ದೇವಾಲಯಗಳಲ್ಲಿ ಅರ್ಚಕರು "ಕಲ್ಯಾಣೋತ್ಸವ೦" ಎ೦ಬ ಹೆಸರಿನ ವೈವಾಹಿಕ ದಿನವನ್ನು ಆಚರಿಸುತ್ತಾರೆ.ಈ ದಿನದ೦ದು,ಭಕ್ತಾದಿಗಳು ತಮ್ಮ ಮನೆಗಳನ್ನು ಸ್ವಚ್ಚಗೊಳಿಸಿ,ಮನೆಗಳನ್ನು ಬಣ್ಣಗಳಿ೦ದ ಅಲ೦ಕರಿಸುತ್ತಾರೆ. ಅಭ್ಯುದಯದ ದ್ಯೋತಕವೆ೦ಬ೦ತೆ ಮನೆಯ ಮುಖ್ಯ ಪ್ರವೇಶದ್ವಾರವನ್ನು ಮಾವಿನ ತೋರಣಗಳಿ೦ದ ಸಿ೦ಗರಿಸುತ್ತಾರೆ. ಭಗವ೦ತನ ಕುರಿತ೦ತೆ ಭಕ್ತಾದಿಗಳು ವಿಶೇಷವಾದ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ .

English summary

Ramnavami 2024: When Is Ramnavami? What Is The Significance Ramnavami

As Ugadi ends, Ramanavami will also come. When Is Ramnavami? What Is The Significance Ramnavami
Story first published: Friday, April 5, 2024, 16:00 [IST]
X
Desktop Bottom Promotion