For Quick Alerts
ALLOW NOTIFICATIONS  
For Daily Alerts

ಶಾಪಗ್ರಸ್ತ ಹಳ್ಳಿ: ರಾತ್ರೋ ರಾತ್ರಿ ಈ ಊರಿನ ಜನರೆಲ್ಲಾ ಕಾಣೆಯಾಗಿ ಬಿಟ್ಟರು!

By Arshad
|

ರಾಜಸ್ಥಾನದ ವಿಶಾಲ ಮರಳುಗಾಡಿನ ನಡುವೆ ಕೆಲವು ಗ್ರಾಮಗಳನ್ನು ಸುಮಾರು ನೂರು ವರ್ಷಗಳ ಹಿಂದೆಯೇ ಪರಿತ್ಯಕ್ತಗೊಳಿಸಿ ಈಗ ಅವು ಹಾಳುಬಿದ್ದಿವೆ. ರಾಜ್ಯದ ನೈರುತ್ಯ ಭಾಗದಲ್ಲಿರುವ, ಜೈಸಲ್ಮೇರ್ ನಗರದಿಂದ ಸುಮಾರು ಹದಿನೆಂಟು ಕಿ.ಮೀ ದೂರವಿರುವ ಒಂದು ಗ್ರಾಮ ಕುಲ್ಧಾರ. ಈ ಗ್ರಾಮದ ಮನೆಗಳನ್ನು ಸುಣ್ಣದ ಕಲ್ಲುಗಳ ಇಟ್ಟಿಗೆಗಳಿಂದ ಕಟ್ಟಲಾಗಿದ್ದು ಇಂದಿಗೂ ಮೋಟುಗೋಡೆಗಳು ಇತಿಹಾಸದ ಬಗ್ಗೆ ವಿವರ ನೀಡುತ್ತಿವೆ. ರಸ್ತೆಗಳನ್ನೂ ಸುಣ್ಣದ ಕಲ್ಲುಗಳಿಂದಲೇ ನಿರ್ಮಿಸಲಾಗಿತ್ತು. ಆದರೆ ಈ ಗ್ರಾಮಕ್ಕೆ ಎರಗಿದ ಶಾಪದ ಕಾರಣ ಅನಿವಾರ್ಯವಾಗಿ ಪರಿತ್ಯಕ್ತಗೊಳಿಸಬೇಕಾಗಿ ಬಂದಿತ್ತು. ಅಷ್ಟಕ್ಕೂ ಈ ಗ್ರಾಮಕ್ಕೆ ಎದುರಾದ ಶಾಪ ಯಾವುದು? ಇದೊಂದು ನಿಗೂಢವಾಗಿದ್ದು ಹೆಚ್ಚಿನ ಜನರ ಕುತೂಹಲವನ್ನು ಅಂದಿನಿಂದಲೂ ಕೆರಳಿಸುತ್ತಾ ಬಂದಿದೆ.

ಈ ಗ್ರಾಮ ಸುಮಾರು ಹದಿಮೂರನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅಂದಿನ ದಿನಗಳಲ್ಲಿ ಶ್ರೀಮಂತ ಮನೆತನದವಾಗಿದ್ದ ಪಳಿವಾಳ ಬ್ರಾಹ್ಮಣ ಕುಟುಂಬದವರು ಈ ಗ್ರಾಮವನ್ನು ಸ್ಥಾಪಿಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಗ್ರಾಮದಲ್ಲಿ ಸುಮಾರು ನಾನ್ನೂರು ಮನೆಗಳಿದ್ದು ಸುಮಾರು ಒಂದೂವರೆ ಸಾವಿರ ಜನರು ವಾಸವಾಗಿದ್ದರು. ಈಗ ಈ ಗ್ರಾಮದಲ್ಲಿ ಒಂದು ನರಪಿಳ್ಳೆಯೂ ಇಲ್ಲ. 1825ರಲ್ಲಿ ಈ ಗ್ರಾಮದ ಸಹಿತ ಸುತ್ತಮುತ್ತಲ ಸುಮಾರು ಎಂಭತ್ತಮೂರು ಗ್ರಾಮಗಳು ಏಕಾ ಏಕಿ ರಾತ್ರೋರಾತ್ರಿ ಗ್ರಾಮಗಳನ್ನು ತ್ಯಜಿಸಿ ಹೊರಟುಹೋಗಿದ್ದರು.

ಈ ದೇವಸ್ಥಾನದಲ್ಲಿ ಒಂದು ರಾತ್ರಿ ಕಳೆದರೆ, ಅವರು ಕಲ್ಲಾಗಿ ಬಿಡುತ್ತಾರೆ!

ಆ ಬಳಿಕ ಈ ಗ್ರಾಮದ ಯಾವುದೇ ಗ್ರಾಮಸ್ಥರನ್ನು ಇಲ್ಲಿ ಹಿಂದಿರುಗಿದ್ದನ್ನು ಕಂಡಿಲ್ಲ. ಈ ಗ್ರಾಮದ ರೂವಾರಿಗಳಾದ ಪಳಿವಾಳ ಬ್ರಾಹ್ಮಣ ಕುಟುಂಬದ ಯಾವುದೇ ಸದಸ್ಯರೂ ಅಂದಿನಿಂದ ಪತ್ತೆಯಿಲ್ಲ. ಗ್ರಾಮದಿಂದ ಒಬ್ಬಿಬ್ಬರು ಕಾಣೆಯಾದರೆ ಇದಕ್ಕೆ ಕೌಟುಂಬಿಕ ಕಾರಣವೆಂದು ಪರಿಗಣಿಸಬಹುದು. ಆದರೆ ಒಂದೂವರೆ ಸಾವಿರ ಜನ ಒಟ್ಟಿಗೇ ಕಾಣೆಯಾದರೆ?

ಈ ಬಗ್ಗೆ ಇತಿಹಾಸ ತಜ್ಞರಿಗೆ ಇಂದಿಗೂ ಸ್ಪಷ್ಟವಾಗಿ ಕಾರಣ ನೀಡಲು ಸಾಧ್ಯವಾಗಿಲ್ಲ. ಭಾರತದಲ್ಲಿ ಪರಿತ್ಯಕ್ತ ಹಳ್ಳಿಗಳು ಹಲವಾರಿರಬಹುದು. ಆದರೆ ಇದಕ್ಕೆ ಕಾರಣವೂ ಇದೆ. ಈ ಕಾರಣಗಳು ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ಕರ್ನಾಟಕದ ಮಲೆನಾಡಿನಲ್ಲಿ ಕೆಲವು ಗ್ರಾಮಗಳು ಪರಿತ್ಯಕ್ತಗೊಂಡಿರುವುದಕ್ಕೆ ಅಂದಿನ ದಿನಗಳಲ್ಲಿ ಹುಲಿಕಾಟ ವಿಪರೀತವಾಗಿದ್ದುದು ಕಾರಣವಾಗಿತ್ತು. ಆದರೆ ಕುಲ್ಧಾರಾದ ಕಥೆ ಏನು? ಬನ್ನಿ, ನೋಡೋಣ...

ಕುಲ್ಧಾರಾ ಗ್ರಾಮ

ಕುಲ್ಧಾರಾ ಗ್ರಾಮ

ಈ ಗ್ರಾಮದ ಕಥೆ ನೂರೈವತ್ತು ವರ್ಷಕ್ಕೂ ಹಳೆಯದಾದರೂ ಇಂದಿಗೂ ಕುತೂಹಲದಿಂದ ಜನರು ಕೇಳುವಷ್ಟು ರೋಚಕವಾಗಿದೆ. ಜೈಸಲ್ಮೇರದಿಂದ ಸುಮಾರು ಹದಿನೆಂಟು ಕಿ.ಮೀ ದೂರವಿರುವ ಈ ಗ್ರಾಮವನ್ನು ನೋಡಿದರೆ, ಹೆಚ್ಚಿನಾಂಶ ಗ್ರಾಮಕ್ಕಿಂತಲೂ ಹೆಚ್ಚಾಗಿ ಒಂದು ಚಿಕ್ಕ ಪಟ್ಟಣದಂತೆಯೇ ತೋರುತ್ತದೆ. ಇಂದಿಗೂ ಉಳಿದಿರುವ ಘನಭಾಗಗಳಿಂದ ಅಂದಿನ ದಿನಗಳಲ್ಲಿ ಇವುಗಳ ಮೇಲೆ ಕಟ್ಟಲಾಗಿದ್ದ ಮನೆ, ಛಾವಣಿಗಳನ್ನು ಕಲ್ಪಿಸಿ ಎಷ್ಟು ಸಮೃದ್ಧವಾಗಿದ್ದಿರಬಹುದು ಎಂದು ಕಲ್ಪಿಸಲು ಸಾಧ್ಯವಾಗುತ್ತದೆ.

ಯೋಜಿತ ನಗರ?

ಯೋಜಿತ ನಗರ?

ಯಾವುದೇ ಪಟ್ಟಣವನ್ನು ಯೋಜಿಸುವಾಗ ಮೊದಲಾಗಿ ರಸ್ತೆಗಳನ್ನು ಯೋಜಿಸಬೇಕಾಗುತ್ತದೆ. ಬೆಳಕಿನ ವ್ಯವಸ್ಥೆ ಹಾಗೂ ಎಲ್ಲಾ ಮನೆಗಳನ್ನು ತಲುಪುವಂತೆ ನಿಯೋಜಿಸಬೇಕಾಗುತ್ತದೆ. ಈ ಗ್ರಾಮದ ರಸ್ತೆಗಳನ್ನು ನೋಡಿದರೆ ಅಂದಿನ ದಿನಗಳಲ್ಲಿಯೇ ಅದ್ಭುತವಾಗಿ ರಸ್ತೆಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಗ್ರಾಮ ಸುಂದರವಾಗಿ ಕಾಣುವಂತಿರಬೇಕೆಂದು ಹಾಗೂ ಸೌಕರ್ಯಗಳು ಜನರಿಗೆ ಸುಲಭವಾಗಿ ಲಭಿಸುವಂತಿರಬೇಕೆಂದು ಯೋಜಿಸಿದ್ದುದು ಸ್ಪಷ್ಟವಾಗುತ್ತದೆ. ಆಲ್ಲದೇ ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ ಎತ್ತಿನ ಗಾಡಿಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿದ್ದು ಇಂದಿನ ಪಾರ್ಕಿಂಗ್ ವ್ಯವಸ್ಥೆಗೆ ಪರ್ಯಾಯವಾಗಿದೆ. ಗ್ರಾಮದಲ್ಲಿ ದೇವಾಲಯ, ಪುಷ್ಕರಣಿ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಸೂಕ್ತ ಸ್ಥಳಗಳಲ್ಲಿ ನಿರ್ಮಿಸಲಾಗಿದ್ದುದನ್ನು ಕಾಣಬಹುದು.

ಅಂದಿನ ಅತಿದೊಡ್ಡ ಗ್ರಾಮ

ಅಂದಿನ ಅತಿದೊಡ್ಡ ಗ್ರಾಮ

ಅಂದಿನ ದಿನಗಳಲ್ಲಿ ಕುಲ್ಧಾರ ಗ್ರಾಮ ರಾಜಸ್ಥಾನದಲ್ಲಿಯೇ ಅತಿ ದೊಡ್ಡ ಗ್ರಾಮವಾಗಿತ್ತು. ಈ ಗ್ರಾಮ ಸುತ್ತಮುತ್ತಲ ಎಂಭತ್ತನಾಲ್ಕು ಚಿಕ್ಕ ಗ್ರಾಮಗಳಿಗೆ ಕೇಂದ್ರವಾಗಿತ್ತು. ಇತಿಹಾಸಜ್ಞರ ಪ್ರಕಾರ 1291ರಲ್ಲಿ ಪಳಿವಾಳ ಬ್ರಾಹ್ಮಣರು ಕಟ್ಟಿದ ಈ ಗ್ರಾಮ ಸಮೃದ್ದವಾಗಿತ್ತು. ಸುತ್ತಮುತ್ತಲ ಪ್ರದೇಶದ ಹೊಲಗಳ ಒಡೆಯರಾಗಿದ್ದ ಈ ಕುಟುಂಬ ಅಂದಿನ ದಿನಗಳಲ್ಲಿ ಮರುಭೂಮಿಯಾಗಿದ್ದರೂ ಉತ್ತಮ ಇಳಿಯವರಿಯನ್ನು ನೀಡುವ ಹೊಲಗಳ ಉತ್ಪನ್ನಗಳಿಂದ ಇವರ ಶ್ರೀಮಂತಿಕೆ ಹೆಚ್ಚುತ್ತಲೇ ಹೋಗಿತ್ತು.

ಏಕಾಏಕಿ ಕಾಣೆಯಾದ ಪಳಿವಾಳ ಬ್ರಾಹ್ಮಣರು!

ಏಕಾಏಕಿ ಕಾಣೆಯಾದ ಪಳಿವಾಳ ಬ್ರಾಹ್ಮಣರು!

ಈ ಗ್ರಾಮದ ಏಳ್ಗೆಗೆ ಪಳಿವಾಳ ಬ್ರಾಹ್ಮಣರು ತಮ್ಮ ಲಾಭದ ಬಹುಪಾಲನ್ನು ಗ್ರಾಮಕ್ಕೆ ವಿನಿಯೋಗಿಸುತ್ತಿದ್ದುದೇ ಕಾರಣವಾಗಿತ್ತು. ಇವರಿಗೆ ಕೃಷಿ ಹಾಗೂ ವ್ಯಾಪಾರದ ಬಗ್ಗೆ ಹೆಚ್ಚಿನ ಮಾಹಿತಿ ಇತ್ತು. ಆದರೆ 1825ರ ಒಂದು ರಾತ್ರಿ ಕುಲ್ಧಾರಾ ಹಾಗೂ ಸುತ್ತಲ ಎಂಭತ್ತಮೂರು ಗ್ರಾಮಗಳ ಅಷ್ಟೂ ಜನರು ಏಕಾಏಕಿ ಈ ಗ್ರಾಮಗಳನ್ನು ತ್ಯಜಿಸಿ ಎತ್ತಲೋ ಹೊರಟು ಹೋಗಿದ್ದರು. ಸುಮಾರು ಏಳು ಶತಮಾನಗಳಿಂದ ಜೀವನ ನಡೆಸುತ್ತಾ ಬಂದಿದ್ದ ಗ್ರಾಮಸ್ಥರು ಏಕಾಗಿ ಗ್ರಾಮವನ್ನು ತ್ಯಜಿಸಬೇಕಾಗಿ ಬಂದಿತ್ತು? ಇದೊಂದು ರಹಸ್ಯವಾಗಿದೆ.

ಈ ರಹಸ್ಯದ ಹಿಂದಿನ ಕಥೆ

ಈ ರಹಸ್ಯದ ಹಿಂದಿನ ಕಥೆ

ಗ್ರಾಮದ ಆಡಳಿತಗಾರರಲ್ಲೊಬ್ಬ ಸಚಿವನಿದ್ದ. ಕುಟಿಲ ಮನಸ್ಸಿನ ಈತ ಗ್ರಾಮದ ಮುಖ್ಯಸ್ಥರ ಸುಂದರ ಮಗಳನ್ನು ನೋಡಿ ಮೋಹಿಸಿದ. ಈಕೆಯನ್ನು ಮದುವೆಯಾಗಬಯಸಿ ಮುಖ್ಯಸ್ಥರನ್ನು ಮದುವೆಗೆ ಬಲವಂತಪಡಿಸಿದ. ಒಂದು ವೇಳೆ ಒಂದು ನಿಗದಿತ ಸಮಯದೊಳಗೆ ಮದುವೆ ಮಾಡಿಕೊಡದೇ ಇದ್ದರೆ ಗ್ರಾಮದ ಮೇಲೆ ಆಕ್ರಮಣ ಮಾಡಿ ಬಲವಂತವಾಗಿ ಹುಡುಗಿಯನ್ನು ಎತ್ತಿಕೊಂಡು ಹೋಗುತ್ತೇನೆ ಎಂದು ಬೆದರಿಕೆಯೊಡ್ಡಿದ.

ಸುಖಕ್ಕಿಂತಲೂ ಇವರಿಗೆ ಮಾನವೇ ಮುಖ್ಯವಾಗಿತ್ತು

ಸುಖಕ್ಕಿಂತಲೂ ಇವರಿಗೆ ಮಾನವೇ ಮುಖ್ಯವಾಗಿತ್ತು

ತಮ್ಮವರಲ್ಲೊಬ್ಬನ ಮಗಳನ್ನು ಕಟುಕನಿಗೆ ಒಪ್ಪಿಸಲು ಯಾರಿಗೂ ಇಷ್ಟಿವಿರಲಿಲ್ಲ. ಪ್ರಬಲ ವ್ಯಕ್ತಿಯನ್ನು ಎದುರು ಹಾಕಿಕೊಂಡು ಜೀವನ ಮಾಡಲು ಅಸಾಧ್ಯವಾಗಿದ್ದ ಅಂದಿನ ಕಾಲದಲ್ಲಿ ದೃಢ ತೀರ್ಮಾನವನ್ನು ಕೈಗೊಂಡ ಎಲ್ಲಾ ಎಂಭತ್ತನಾಲ್ಕು ಹಳ್ಳಿಗಳ ಹಿರಿಯರು ಏಕಾಏಕಿ ಅಲ್ಲಿಂದ ಬೇರೆಡೆಗೆ ಗುಳೆ ಹೋಗುವುದೇ ಉತ್ತಮ ಎಂಬ ಕಠಿಣ ನಿರ್ಧಾರವನ್ನು ಕೈಗೊಂಡರು. ಅಂತೆಯೇ ರಾತ್ರೋ ರಾತ್ರಿ ಅಷ್ಟೂ ಜನರು ಗ್ರಾಮಗಳನ್ನು ತ್ಯಜಿಸಿ ಹೊರಟು ಹೋದರು. ಎಲ್ಲಿ ಹೋದರು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ ರಾಜಸ್ಥಾನದ ಪಶ್ಚಿಮ ಭಾಗದಲ್ಲಿರುವ ಜೋಧಪುರದಲ್ಲಿ ಸ್ಥಿತಗೊಂಡರು ಎಂದು ನಂಬಲಾಗಿದೆ.

ಒಂದೇ ರಾತ್ರಿಯಲ್ಲಿ ಕಾಣೆಯಾದ ಜನತೆ!!

ಒಂದೇ ರಾತ್ರಿಯಲ್ಲಿ ಕಾಣೆಯಾದ ಜನತೆ!!

ಯಾವುದೇ ಮಾಹಿತಿಯಿಲ್ಲದೇ ಎಲ್ಲಾ ಎಂಭತ್ತನಾಲ್ಕು ಹಳ್ಳಿಗಳ ಜನತೆ ಹೇಗೆ ಮಾಯವಾದರು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಇವರು ಮನೆ ಬಿಟ್ಟು ಹೋದುದನ್ನಾಗಲೀ ಅಥವಾ ದಾರಿಯಲ್ಲಿ ಬೇರೆ ಗ್ರಾಮಗಳನ್ನು ಹಾದು ಹೋದುದಾಗಲೀ ಯಾರೂ ಕಂಡಿಲ್ಲ. ಒಟ್ಟಾರೆ ಗಾಳಿಯೇ ನುಂಗಿತೋ ಎಂಬಂತೆ ಕಾಣೆಯಾದರು.

ಬಳಿಕ ಗ್ರಾಮಕ್ಕೆ ಅಂಟಿದ ಶಾಪ

ಬಳಿಕ ಗ್ರಾಮಕ್ಕೆ ಅಂಟಿದ ಶಾಪ

ಗ್ರಾಮಸ್ಥರು ಈ ಗ್ರಾಮಗಳನ್ನು ತ್ಯಜಿಸುವ ಮುನ್ನ ಈ ಗ್ರಾಮಕ್ಕೆ ಶಾಪ ನೀಡಿ ಹೋದರು ಎಂದು ನಂಬಲಾಗಿದೆ. ಶಾಪ ಏನೆಂದರೆ ಇವರ ಬಳಿಕ ಈ ಹಳ್ಳಿಗಳಲ್ಲಿ ಯಾರು ನೆಲೆಸುತ್ತಾರೋ ಅವರಿಗೆ ಸಾವು ಎದುರಾಗುತ್ತದೆ. ಈ ಶಾಪ ಇದೆ ಎಂದು ಗೊತ್ತಾದ ಕಾರಣಕ್ಕೇ ಇಲ್ಲಿ ಯಾರೂ ನೆಲೆಸಿಲ್ಲ, ಅಷ್ಟೇ ಅಲ್ಲ, ಅಂದಿನಿಂದ ಆ ಹಳ್ಳಿಗಳ ಒಂದು ಇಟ್ಟಿಗೆಯನ್ನೂ ಯಾರೂ ಕದ್ದೊಯ್ದಿಲ್ಲ. ಹಾಗಾಗಿ ಹೆಚ್ಚಿನ ಭಾಗ ಇಂದಿಗೂ ಹಳೆಯ ಸ್ಥಿತಿಯಲ್ಲಿಯೇ ಇದೆ.

ಪ್ರವಾಸಿಗರ ಆಕರ್ಷಣೆ

ಪ್ರವಾಸಿಗರ ಆಕರ್ಷಣೆ

ಕಥೆ ಏನೇ ಇರಲಿ, ಈ ಹಳ್ಳಿಗಳು ಅಂದಿನಿಂದ ನೀರವ ಮೌನ ಸೂಸುತ್ತಾ ಹಿಂದಿನ ವೈಭವವನ್ನು ತೋರುತ್ತಿರುವುದು ಮಾತ್ರ ಪ್ರವಾಸಿಗರ ಆಕರ್ಷಣೆಯಾಗಿದೆ. ಅದರಲ್ಲೂ ಕೆಲವು ಮನೆಗಳಲ್ಲಿ ಮೇಲಂತಸ್ತು ಇದ್ದು ಇಂದಿಗೂ ಸುಸ್ಥಿತಿಯಲ್ಲಿವೆ. ಅಂದಿನ ದಿನಗಳಲ್ಲಿ ಭಾರತದಲ್ಲಿ ಜೀವನ ಹೇಗಿತ್ತು ಎಂಬುದನ್ನು ಕಲ್ಪಿಸಲು ಪ್ರವಾಸಿಗರಿಗೆ ಈ ಹಳ್ಳಿ ಹಲವಾರು ಅವಕಾಶಗಳನ್ನು ಒದಗಿಸುತ್ತದೆ.

ಸರ್ಕಾರದಿಂದ ಸಂರಕ್ಷಿತ ಪಾರಂಪರಿಕ ತಾಣ

ಸರ್ಕಾರದಿಂದ ಸಂರಕ್ಷಿತ ಪಾರಂಪರಿಕ ತಾಣ

ಈ ಹಳ್ಳಿಗಳನ್ನು ರಾಜಸ್ಥಾನ ರಾಜ್ಯ ಸರ್ಕಾರ ಸಂರಕ್ಷಿತ ತಾಣಗಳೆಂದು ಗುರುತಿಸಿ ಪಾರಂಪರಿಕ ತಾಣವೆಂದು ಘೋಷಿಸಿದೆ. ಆ ಪ್ರಕಾರ ಈ ಸ್ಥಳಗಳು ಕೇವಲ ಪ್ರವಾಸಿ ಆಕರ್ಷಣೆಯಾಗಿ ಮಾತ್ರವೇ ಉಳಿದಿರುತ್ತವೆ. ಈ ಹಳ್ಳಿಯಲ್ಲೊಂದು ಸುತ್ತು ಹಾಕಿದರೆ ಯಾವುದೋ ಭೂತದ ಚಿತ್ರಕ್ಕಾಗಿ ಹಾಕಿರುವ ಸೆಟ್ ಇರಬೇಕೆಂದೂ ಕೆಲವರಿಗೆ ಅನ್ನಿಸಬಹುದು.

ನಿಗೂಢತೆಯ ಹಿಂದೆ...

ನಿಗೂಢತೆಯ ಹಿಂದೆ...

ಜೈಸಲ್ಮೇರ್ ಗೆ ಭೇಟಿ ನೀಡುವ ಯಾವುದೇ ಪ್ರವಾಸಿಗ ಕುಲ್ಧಾರಾ ಗ್ರಾಮವನ್ನು ನೋಡದೇ ಹಿಂದಿರುಗಿದರೆ ಆಗ್ರಾಕ್ಕೆ ಹೋಗಿ ತಾಜ್ ಮಹಲ್ ನೋಡದೇ ಬಂದಂತೆಯೇ ಲೆಕ್ಕ. ಬರೇ ನೋಡಿ ಬಂದರೆ ಸಾಲದು, ಕೆಲವು ಘಂಟೆಗಳನ್ನಾದರೂ ಅಲ್ಲಿ ಕಳೆದು ವಿಶೇಷವಾಗಿ ಸಂಜೆಯ ಬಳಿಕ ಕತ್ತಲಿನಲ್ಲಿ ಎದುರಾಗುವ ನಿಗೂಢತೆಯನ್ನು ಅರಿಯಲು ಯತ್ನಿಸಿದರೆ ಇದೊಂದು ಸ್ಮರಣೀಯ ಭೇಟಿಯಾಗುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗೆ ಸೈಫ್ ಅಲಿ ಖಾನ್ ರವರ ಏಜೆಂಟ್ ವಿನೋದ್ ಚಿತ್ರವನ್ನೂ ಈ ಗ್ರಾಮದಲ್ಲಿ ಚಿತ್ರೀಕರಿಸಲಾಗಿತ್ತು.

English summary

Mystery of an abandoned and cursed village in Rajasthan

Abandoned since the 19th century, this small village of Kuldhara is around 18 kilometers (12.4 miles) southwest of Jaisalmer, Rajasthan. This village is dotted with hundreds of dilapidated sand stone houses and dusty roads, and the ruins of this village are said to be cursed and haunted, and consequently have obtained an air of abandonment, while beholding a dark secret, which needs to be discovered.
X
Desktop Bottom Promotion