For Quick Alerts
ALLOW NOTIFICATIONS  
For Daily Alerts

ಆ್ಯಸಿಡ್ ದಾಳಿಯಾದರೂ, ಇವರು ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ

By Super
|

ಸುಂದರ ಮುಖ ಪ್ರತಿ ವ್ಯಕ್ತಿಯ ಚಹರೆಯೇ ಆಗಿದೆ. ಅಭಿವ್ಯಕ್ತಿಯ ಭಾವನೆಗಳನ್ನು ಮೂಡಿಸುವುದೇ ಮುಖ. ಆದರೆ ಕಲವು ವಿಕೃತ ಮನಸ್ಸಿನ ವ್ಯಕ್ತಿಗಳ ವಿಕೃತ ಕೃತ್ಯದ ಕಾರಣ ಮುಖದ ಮೇಲೆ ಆಮ್ಲವನ್ನು ಎರಚಿ ಮುಖದ ಸೌಂದರ್ಯವೇ ಕುಂದಿದಾಗ ಕಾಲ ಕೆಳಗಿನ ನೆಲವೇ ಕುಸಿದಂತೆ ಅನ್ನಿಸುವುದು ಸಹಜ.

ವಿರೂಪಗೊಂಡ ಮುಖವನ್ನು ಹೊತ್ತು ಸಮಾಜದ ಎದುರು ಬರಲೇ ಅಂಜುವ, ಜೀವನವೇ ಕೊನೆಗೊಂಡಂತೆ ವರ್ತಿಸುವ ಮೂಲಕ ಆತ್ಮೀಯರಿಗೆಲ್ಲರಿಗೂ ವ್ಯಾಕುಲತೆಯನ್ನು ತಂದಿಡುತ್ತಾರೆ. ಆದರೆ ಈ ವಿರೂಪವನ್ನು ಧೈರ್ಯವಾಗಿ ಎದುರಿಸಿ ಸಮಾಜದಲ್ಲಿ ಎಲ್ಲರಂತೆ ಬದುಕುವ ಮತ್ತು ಸ್ವಾಭಿಮಾನದಿಂದ ಬಾಳುವ ಸ್ಥೈರ್ಯವನ್ನು ಕೆಲವು ಆಮ್ಲ ಆಕ್ರಮಣದ ಪೀಡಿತ ಮಹಿಳೆಯರು ತೋರಿದ್ದಾರೆ.

ಇವರಲ್ಲಿ ಕೆಲವರು ತಮ್ಮ ವಿರೂಪವನ್ನು ತಮ್ಮ ಸುಂದರ ಯೋಚನೆಗಳು ಮತ್ತು ಕೆಲಸಗಳ ಮೂಲಕ ಮರೆಸುತ್ತಾರೆ. ಆತ್ಮೀಯತೆ, ಮಾನವೀಯತೆ ಮೆರೆಯುವ ಮೂಲಕ ಜನಮನಗಳಲ್ಲಿ ಸುಂದರ ವ್ಯಕ್ತಿಗಳಿಗಿಂತಲೂ ಸುಂದರರಾಗಿ ಸ್ಥಾಪಿತಗೊಳ್ಳುತ್ತಾರೆ. ಇಂತಹ ಐವರು ದಿಟ್ಟ ಮಹಿಳೆಯರ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಪರಿಚಯಿಸಲಾಗುತ್ತಿದ್ದು ಇವರೆಲ್ಲರ ಬಳಿಯೂ ಭಿನ್ನವಾದ ಕಥೆಗಳಿವೆ.

ಈ ಕಥೆಗಳನ್ನು ಕೇಳಿದವರಿಗೆ ಇವರ ನೋವಿನ ಅಂದಾಜು ಆಗಬಹುದಾದರೂ ಮಾನಸಿಕವಾಗಿ ಕುಗ್ಗಿದ ಸ್ಥೈರ್ಯವನ್ನು ಊಹಿಸಲು ಸಾಧ್ಯವಿಲ್ಲ. ಈ ಸ್ಥಿತಿಯಿಂದ ಮೇಲೇಳಲು ಅಪಾರವಾದ ಮನೋಸ್ಥೈರ್ಯದ ಅಗತ್ಯವಿದೆ. ಈ ವ್ಯಕ್ತಿಗಳು ಆದರ್ಶಪ್ರಾಯರಾಗಲು ಈ ಮನೋಸ್ಥೈರ್ಯವೇ ಕಾರಣ. ಬನ್ನಿ, ಮಾರ್ಚ್ ಎಂಟರಂದು ವಿಶ್ವದಾದ್ಯಂತ 'ಅಂತಾರಾಷ್ಟ್ರೀಯ ಮಹಿಳಾ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಈ ಅದ್ಭುತ ವ್ಯಕ್ತಿಗಳ ಕಥೆ ಏನೆಂದು ನೋಡೋಣ...

ಮೋನಿಕಾ ಸಿಂಗ್

ಮೋನಿಕಾ ಸಿಂಗ್

ಭಾರತದಲ್ಲಿ ಹಿರಿಯರು ಆಯೋಜಿಸಿದ ಮದುವೆಗಳ ಸಂಖ್ಯೆಯೇ ಹೆಚ್ಚು. ಇದು ಎರಡು ವ್ಯಕ್ತಿಗಳ ನಡುವೆಗಿಂತ ಹೆಚ್ಚಾಗಿ ಎರಡು ಕುಟುಂಬಗಳ ನಡುವೆ ನಡೆಯುವ ಬಾಂಧವ್ಯವೇ ಆಗಿದೆ. ಎಷ್ಟೋ ಸಮಯದಲ್ಲಿ ಕುಟುಂಬದ ಮರ್ಯಾದೆ ಉಳಿಸಲು ಯುವಕ, ಯುವತಿಯರಿಗೆ ಇಲ್ಲ ಎನ್ನಲು ಸಾಧ್ಯವೇ ಆಗುವುದಿಲ್ಲ. ಇಲ್ಲ ಎನ್ನುವುದು ಹಿರಿಯರ ಪಾಲಿಗೆ ಅವಮಾನದಂತೆ. ಕೆಲವೊಮ್ಮೆ ಯುವತಿಯಿಂದ ಇಲ್ಲ ಅನ್ನಿಸಿಕೊಳ್ಳುವುದು ಕೆಲವು ಪುರುಷರಿಗೆ ಇಷ್ಟವಾಗುವುದಿಲ್ಲ. 2005ರಲ್ಲಿ ಮೋನಿಕಾ ಸಿಂಗ್ ರಿಗೆ ಆಗಿದ್ದೂ ಇದೇ. ಆಗ ಹತ್ತೊಂಭತ್ತು ವರ್ಷದ ತರುಣಿಯಾಗಿದ್ದ ಮೋನಿಕಾರಿಗೆ ತಮ್ಮ ಜೀವನಸಂಗಾತಿಯ ಬಗ್ಗೆ ಹಲವು ಕನಸುಗಳಿದ್ದವು. ಆ ಸಮಯದಲ್ಲಿ ಮನೆಯವರಿಂದ ವ್ಯಕ್ತಿಯೊಬ್ಬರ ಜೊತೆಗೆ ವಿವಾಹವಾಗಲು ಆಹ್ವಾನ ಬಂದಿತ್ತು. ಆದರೆ ಈ ವ್ಯಕ್ತಿಯನ್ನು ಇಷ್ಟಪಡದ ಅವರು ಇಲ್ಲ ಎಂದುಬಿಟ್ಟರು. ತರುಣಿಯೊಬ್ಬಳು ತಮಗೆ ಇಲ್ಲ ಎಂದಿದ್ದು ಇಷ್ಟವಾಗದ ಆ ವ್ಯಕ್ತಿ ಕೋಪದ ಭರದಲ್ಲಿ ಮೋನಿಕಾರವರು ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮುಖ, ಕುತ್ತಿಗೆ ಮತ್ತು ಎದೆಯ ಮೇಲೆ ಪ್ರಬಲ ಆಮ್ಲವನ್ನು ಎರಚಿದ. ಈ ಆಕ್ರಮಣದಿಂದ ಹೇಗೋ ಬದುಕುಳಿದ ಮೋನಿಕಾರವರು ನಿಧಾನವಾಗಿ ಚೇತರಿಸಿಕೊಂಡ ಬಳಿಕ ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡು ಜಗತ್ತಿನ ಎಲ್ಲಾ ಶಕ್ತಿಗಳಿಗೆ ವಿರುದ್ಧವಾಗಿ ನ್ಯೂಯಾರ್ಕ್‌ನಲ್ಲಿ Parson's New School of Design ನಲ್ಲಿ ವ್ಯಾಸಾಂಗ ಮಾಡುತ್ತಿದ್ದು ಉತ್ತಮ ಸಾಧನೆ ತೋರುತ್ತಿದ್ದಾರೆ. ತಮ್ಮ ಮೊದಲ ರೂಪ ಪಡೆಯಲು ಇದುವರೆಗೆ ನಲವತ್ತಮೂರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಇದರಿಂದ ಅವರ ರೂಪ ಮೊದಲಿನಂತಲ್ಲದಿದ್ದರೂ ಕೊಂಚ ಹತ್ತಿರಕ್ಕೆ ಬಂದಿದೆ.

ರೇಶ್ಮಾ ಫಾತಿಮಾ

ರೇಶ್ಮಾ ಫಾತಿಮಾ

ಹದಿನೇಳದ ಯುವತಿಯಾಗಿದ್ದಾಗ ಅವರನ್ನು ಮದುವೆಯಾಗಲು ಯುವಕರೊಬ್ಬರು ಕೇಳಿಕೊಂಡು ಬಂದಿದ್ದರು. ಈ ವ್ಯಕ್ತಿಯನ್ನು ವಿವಾಹವಾಗಲೊಪ್ಪದ ರೇಶ್ಮಾರ ನೇರ ನಡುವಳಿಕೆಯನ್ನು ಸಹಿಸದ ಅವರು ಚೂರಿ ತೋರಿಸಿ ಮದುವೆಯಾಗದಿದ್ದರೆ ಕೊಲ್ಲುವೆ ಎಂದು ಬೆದರಿಸಿದರು. ಇದಕ್ಕೂ ಜಗ್ಗದ ಆಕೆಯ ಮೇಲೆ ಚೂರಿಯಿಂದ ಭಯಾನಕವಾಗಿ ಆಕ್ರಮಣ ನಡೆಸಿ ಗಾಯಗೊಳಿಸಿದರು. ಬಳಿಕ ತಮ್ಮ ಗಾಯಗಳಿಂದ ರಕ್ತ ಸೋರುತ್ತಿರುವಂತೆಯೇ ರಿಕ್ಷಾ ಹಿಡಿದು ನೇರವಾಗಿ ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿದ ಬಳಿಕವೇ ಆಸ್ಪತ್ರೆಗೆ ಧಾವಿಸಿದರು. ಈ ಕ್ರಮದಿಂದ ಪೋಲೀಸರಿಗೆ ಆರೋಪಿಯನ್ನು ತಕ್ಷಣ ಬಂಧಿಸಲು ಸಾಧ್ಯವಾಯಿತು. ರೇಶ್ಮಾರ ಈ ದಿಟ್ಟ ಕ್ರಮವನ್ನು ಶ್ಲಾಘಿಸಿ 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಮೂಲಕ ಭಾರತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ದಿಟ್ಟ ಹೆಣ್ಣುಮಗಳು ಎಲ್ಲರ ಆದರ್ಶವಾಗಿದ್ದು ಇಂದು ಐ.ಎ.ಎಸ್. ಅಧಿಕಾರಿಯಾಗುವ ಕನಸು ಕಾಣುತ್ತಿದ್ದಾಳೆ.

ರೂಪಾ

ರೂಪಾ

ಹಲವು ಆಕ್ರಮಣಗಳಲ್ಲಿ ಮನೆಯವರೇ ಇದಕ್ಕೆ ನೇರವಾಗಿ ಕಾರಣರಾಗಿರುವುದನ್ನು ಪೋಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು ತಿಳಿಸುತ್ತವೆ. ರೂಪಾಳಿಗೆ ಆಗಿದ್ದೂ ಇದೇ. ಕೇವಲ ಹದಿನೈದು ವರ್ಷದ ಕಿಶೋರಿಯಾಗಿದ್ದಾಗ ಅವಳ ಮಲತಾಯಿಯೇ ಆಕೆಯ ಮುಖದ ಮೇಲೆ ಪ್ರಬಲ ಆಮ್ಲವನ್ನು ಎರಚಿದ್ದಳು. ಉಪಚಾರದ ಬಳಿಕ ಮುಖ ವಿರೂಪಗೊಂಡಿದ್ದರೂ ನೂಲಿನ ಕಸೂತಿ ಕಾರ್ಯದಲ್ಲಿ ತನ್ನ ಕೈಗಳು ಸಿದ್ಧಹಸ್ತವಾಗಿರುವುದನ್ನು ರೂಪಾ ಕಂಡುಕೊಂಡಳು. ಬಳಿಕ ತನ್ನ ಪ್ರತಿಭೆಯನ್ನು ಮಹಿಳೆಯರ ಉಡುಪುಗಳ ಮೇಲೆ ಪ್ರಯೋಗಿಸತೊಡಗಿದಳು. ಇದನ್ನು ಗಮನಿಸಿ ಮೆಚ್ಚಿನ ಹಲವರು ಆಕೆಯನ್ನು ಪ್ರೋತ್ಸಾಹಿಸಿ ವೃತ್ತಿಯಲ್ಲಿ ಬೆಳೆಯಲು ನೆರವಾದರು. ಇಂದು ಆಗ್ರಾದ ತಾಜ್ ಮಹಲ್ ಬಳಿ ಇರುವ ಶೆರೋಸ್ ಹ್ಯಾಂಗೌಟ್ ಎಂಬ ಕಟ್ಟಡದಲ್ಲಿ 'ರೂಪಾಸ್ ಕ್ರಿಯೇಶನ್ಸ್' ಎಂಬ ಅಂಗಡಿಯನ್ನಿಟ್ಟು ತನ್ನ ಕಾಲ ಮೇಲೆ ನಿಂತಿದ್ದಾಳೆ, ಎಲ್ಲರಿಗೂ ಆದರ್ಶವಾಗಿದ್ದಾಳೆ. ವಿಶೇಷವೆಂದರೆ ಈ ಮಳಿಗೆಯೂ ಇತರ ಆಮ್ಲ ಆಕ್ರಮಣದ ಪೀಡಿತರಿಂದಲೇ ಪ್ರಾಯೋಜಕತ್ವ ಪಡೆಯುತ್ತಿದೆ.

ಲಕ್ಷ್ಮಿ ಅಗರವಾಲ್

ಲಕ್ಷ್ಮಿ ಅಗರವಾಲ್

ತನ್ನನ್ನು ಮದುವೆಯಾಗಲು ನಿರಾಕರಿಸಿದ ನಿರಾಶೆಯನ್ನು ಸಹಿಸದ ವ್ಯಕ್ತಿಯೊಬ್ಬರು ಲಕ್ಷ್ಮಿ ಅಗರವಾಲ್ ಎಂಬ ಹದಿನೈದು ವರ್ಷದ ಹುಡುಗಿಯ ಮೇಲೆ ಪ್ರಬಲ ಆಮ್ಲ ತುಂಬಿದ್ದ ಬಿಯರ್ ಬಾಟಲಿಯನ್ನು ಎಸೆದು ಸೇಡು ತೀರಿಸಿಕೊಂಡಿದ್ದರು. ಬಾಟಲಿ ಒಡೆದು ಗಾಜಿನ ಚೂರುಗಳು ಚರ್ಮದ ಹೊಕ್ಕಿದ್ದ ಜೊತೆಗೇ ಪ್ರಬಲ ಆಮ್ಲ ಆಳದವರೆಗೆ ಚರ್ಮವನ್ನು ಸುಟ್ಟಿತ್ತು. ಆದರೆ ಆಕೆಯನ್ನು ಬದುಕಲು ಕಲಿಸಿದ್ದು ಆಕೆಯ ಆತ್ಮಸ್ಥೈರ್ಯವೇ ಹೊರತು ಇನ್ನೇನೂ ಅಲ್ಲ. ಇಂದು ಆಕೆಯ ಮುಖವನ್ನು ಬಿಟ್ಟು ಮನಸ್ಸನ್ನು ಮೆಚ್ಚಿದ ಆಲೋಕ್ ದೀಕ್ಷಿತ್ ರನ್ನು ಮದುವೆಯಾಗಿ ಒಂದು ಪುಟ್ಟ ಸುಂದರ ಹೆಣ್ಣು ಮಗುವಿನ ತಾಯಿಯೂ ಆಗಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಸುಮ್ಮನಿರದೇ ತನಗಾದ ಸ್ಥಿತಿ ಬೇರೆಯವರಿಗೆ ಆಗಬಾರದು ಎಂದು ಆಮ್ಲದ ಆಕ್ರಮಣಕ್ಕೆ ತುತ್ತಾದ ಇತರ ಮಹಿಳೆಯರಿಗೆ ಸಾಂತ್ವಾನ ಮತ್ತು ಸಮಾಜದಲ್ಲಿ ಬದುಕಲು ಧೈರ್ಯ ನೀಡುವ "ಛಾಂವ್ ಫೌಂಡೇಷನ್" (ಕನ್ನಡದಲ್ಲಿ ಹೇಳುವುದಾದರೆ ನೆರಳಿನ ಆಸರೆ) ಎಂಬ ಅಸರ್ಕಾರಿ ಸಂಸ್ಥೆಯ ನಿರ್ದೇಶಕಿಯೂ ಆಗಿ ತನ್ನಂತಹ ನೂರಾರು ಮಹಿಳೆಯರ ಪಾಲಿಗೆ ಆಶಾಕಿರಣವಾಗಿದ್ದಾರೆ.

ಸೋನಾಲಿ ಮುಖರ್ಜಿ

ಸೋನಾಲಿ ಮುಖರ್ಜಿ

ಹದಿನೆಂಟು ವರ್ಷದ ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬರು ಕಳ್ಳನಂತೆ ರಾತ್ರಿ ಮನಗೆ ನುಗ್ಗಿ ಮಲಗಿದ್ದ ಸೋನಾಲಿಯವರ ಮುಖದ ಮೇಲೆ ಉರಿಯುತ್ತಿದ್ದ ಆಮ್ಲವನ್ನು ಸುರುವಿದ್ದರು. ಆ ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯ ಒಂಭತ್ತು ವರ್ಷಗಳ ಕಠಿಣ ಶಿಕ್ಷೆಯನ್ನೂ ವಿಧಿಸಿತ್ತು. ಆದರೆ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಯಾಗಿತ್ತು. ಇತ್ತ ತನ್ನ ಬದಲಾದ ಮತ್ತು ವಿರೂಪಗೊಂಡ ಮುಖವನ್ನೇ ಹೊತ್ತು ಧೈರ್ಯದಿಂದ ಸಮಾಜವನ್ನು ಎದುರಿಸಿದ ಸೋನಾಲಿ ಇಂದು ಬೊಕಾರೋ ಉಪ ಕಮೀಶನರ್ ರವರ ಕಛೇರಿಯ ಕಲ್ಯಾಣ ವಿಭಾಗದಲ್ಲಿ ಮೂರನೆಯ ದರ್ಜೆಯ ಅಧಿಕಾರಿಯಾಗಿ ಉಳಿದವರಿಗೆ ಸರಿಸಮರಾಗಿ ನಿಂತು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

English summary

5 Acid Attack Victims Who Are Amazing

When you are born with a beautiful face and it is disfigured by no fault of your own, won't you feel like the whole world is crashing beneath your feet? Well, for these five beautiful young women they have a different story to tell. Survivors of acid attacks, these five amazing women have really shown the rest of the world what it is to be courageous, strong-willed and powerful
X
Desktop Bottom Promotion