For Quick Alerts
ALLOW NOTIFICATIONS  
For Daily Alerts

ನಿಮ್ಮ ವ್ಯಕ್ತಿತ್ವವನ್ನು ವರ್ಣಮಯಗೊಳಿಸುವ ಬಣ್ಣದ ಲೋಕ!

By Arshad
|

ಊಟವನ್ನು ನಿನ್ನಿಷ್ಟದಂತೆ ಸೇವಿಸು ಆದರೆ ಬಟ್ಟೆಯನ್ನು ಮಾತ್ರ ಜನರ ಇಷ್ಟದಂತೆ ತೊಡು ಎಂಬ ಹಿಂದಿ ಸುಭಾಷಿತವೊಂದಿದೆ. ಅಂತೆಯೇ ನಾವೆಲ್ಲಾ ಬೇರೆಯವರು ನೋಡಿದರೆ ಮೆಚ್ಚುವಂತಿರಬೇಕು ಎಂಬ ನಿಟ್ಟಿನಲ್ಲಿಯೇ ನಮ್ಮ ಉಡುಗೆ ತೊಡುಗೆಗಳನ್ನು ಆಯ್ದುಕೊಳ್ಳುತ್ತೇವೆ. ಕಾಲಕಾಲಕ್ಕೆ ಜನರ ಅಭಿರುಚಿ ಬದಲಾದಂತೆ ವಿನ್ಯಾಸಗಳೂ ಬದಲಾಗುತ್ತಲೇ ಇರುತ್ತವೆ. ಇದನ್ನೇ ಫ್ಯಾಷನ್ ಎನ್ನುತ್ತಾರೆ.

ಈ ಅಭಿರುಚಿಗಳೇನೇ ಇರಲಿ, ಪ್ರತಿಯೊಬ್ಬರಿಗೂ ಒಂದು ಬಣ್ಣ ಅತಿ ಹೆಚ್ಚು ಇಷ್ಟವಾಗಿರುತ್ತದೆ. ನಮ್ಮ ಹೆಚ್ಚಿನ ವಸ್ತುಗಳನ್ನು ಇದೇ ಬಣ್ಣದಲ್ಲಿರಲು ನಾವೆಲ್ಲರೂ ಬಯಸುತ್ತೇವೆ. ಉಡುವ ಬಟ್ಟೆ, ನಡೆಸುವ ಕಾರು, ಮನೆಯ ಗೋಡೆಯ ಬಣ್ಣ ಮೊದಲಾದ ಅತ್ಯಂತ ಖಾಸಗಿ ವಸ್ತು ಅಥವಾ ಸ್ಥಳಗಳಿಗೆ ಇದೇ ಬಣ್ಣವನ್ನು ಬಳಿಯುತ್ತೇವೆ ಅಥವಾ ಆಯ್ದುಕೊಳ್ಳುತ್ತೇವೆ.

ಈ ಬಣ್ಣದ ಮೇಲಿನ ವ್ಯಾಮೋಹ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಹಲವು ವಿಷಯಗಳನ್ನು ತಿಳಿಸುತ್ತವೆ. ಅಷ್ಟೇ ಏಕೆ, ನಮ್ಮ ರಾಷ್ಟ್ರಧ್ವಜದ ಮೂರು ಬಣ್ಣಗಳೂ ಮೂರು ವಿಷಯಗಳನ್ನು ಪ್ರತಿನಿಧಿಸುತ್ತವೆ. (ಕೇಸರಿ ಬಣ್ಣ ಧೈರ್ಯ, ಬಿಳಿ ಬಣ್ಣ ಸತ್ಯ-ಶಾಂತಿ ಹಾಗೂ ಹಸಿರು ಬಣ್ಣ ವಿಶ್ವಾಸ- ಸಂಪತ್ತುಗಳ ಪ್ರತಿನಿಧಿ). ನಿಮ್ಮ ನೆಚ್ಚಿನ ಬಣ್ಣ ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬ ಬಗ್ಗೆ ಕುತೂಹಲವೇ? ಮುಂದೆ ಓದಿ.

 ಬಿಳಿಯ ಬಣ್ಣ ಮೆಚ್ಚುವವರು

ಬಿಳಿಯ ಬಣ್ಣ ಮೆಚ್ಚುವವರು

ಬಿಳಿ ಬಣ್ಣ ಶುದ್ದತೆ, ಪರಿಪೂರ್ಣತೆ ಮತ್ತು ಮುಗ್ದತೆಯ ಪ್ರತೀಕವಾಗಿದೆ. ಒಂದೂ ಚುಕ್ಕಿ ಇಲ್ಲದ ಬಿಳಿಯ ಬಣ್ಣ ಅಚ್ಚಕನ್ಯೆಯನ್ನೂ ಪ್ರತಿನಿಧಿಸುತ್ತದೆ. ಅಲ್ಲದೇ ಗಾಯಗಳನ್ನು ಮಾಗಿಸುವ ಮತ್ತು ಧಾರ್ಮಿಕ ಮನೋಭಾವದ ಸಂಕೇತವೂ ಆಗಿದೆ.(ಇದೇ ಕಾರಣಕ್ಕೆ ವೈದ್ಯರು ಮತ್ತು ದಾದಿಯರು ಬಳಸುವ ಮೇಲ್ವಸ್ತ್ರ ಬಿಳಿಯಾಗಿದೆ). ಒಂದು ವೇಳೆ ನೀವು ಬಿಳಿಯ ಬಣ್ಣವನ್ನು ಅತಿ ಹೆಚ್ಚಾಗಿ ಇಷ್ಟಪಡುವವರಾಗಿದ್ದರೆ ನಿಮ್ಮ ಪರಿಶುದ್ಧ ವ್ಯಕ್ತಿತ್ವ,ಶಿಸ್ತಿನ ಸ್ವಭಾವವನ್ನು ಪ್ರಸ್ತುತಪಡಿಸುತ್ತದೆ. ಇನ್ನೊಂದೆಡೆ ನಿಮ್ಮ ಮನೆಯ ಎಲ್ಲಾ ವಸ್ತುಗಳು ಬಿಳಿಯದ್ದೇ ಆಗಿದ್ದರೆ (ಬೇರೆ ಬಣ್ಣದವುಗಳಾಗಿದ್ದರೂ ಅದರ ಮೇಲೆ ಬಿಳಿಯ ಬಣ್ಣ ಹೊಡೆದಿದ್ದರೆ) ಅದು ಮತಾಂಧತೆಯನ್ನು ಪ್ರತಿಬಿಂಬಿಸುತ್ತದೆ.

ಕೆಂಪು ಬಣ್ಣವನ್ನು ಮೆಚ್ಚುವವರು

ಕೆಂಪು ಬಣ್ಣವನ್ನು ಮೆಚ್ಚುವವರು

ಪ್ರಥಮ ನೋಟದಲ್ಲಿ ಕೆಂಪು ಬಣ್ಣ ನೋಡಿದವರು ಅಪಾಯದ ಸಂಕೇತವನ್ನು ಗ್ರಹಿಸುತ್ತಾರೆ. ಏಕೆಂದರೆ ಕೆಂಪು ಬಣ್ಣದ ದೀಪಗಳು ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಸದಾ ಅಪಾಯವನ್ನೇ ಪ್ರತಿನಿಧಿಸುತ್ತವೆ.(ಉದಾಹರಣೆಗೆ ರಕ್ತ, ಟ್ರಾಫಿಕ್ ಕೆಂಪು ದೀಪ ಮೊದಲಾದವು) ಆದರೆ ಕೆಂಪು ಬಣ್ಣವನ್ನು ಇಷ್ಟಪಡುವವರು ಅಪಾಯಕಾರಿ ವ್ಯಕ್ತಿಗಳಲ್ಲ. ಕೆಂಪುಬಣ್ಣ ಅಪರಿಮಿತ ಉತ್ಸಾಹ ಮತ್ತು ಉದ್ವೇಗವನ್ನು ಪ್ರತಿಬಿಂಬಿಸುತ್ತದೆ. ವೇಗ, ಪ್ರಚೋದನೆ ಮತ್ತು ಪ್ರೇರಣೆಯ ಸಂಕೇತವೂ ಆಗಿದೆ.ಈ ವ್ಯಕ್ತಿಗಳು ಬಹಿರರ್ಮುಖಿ (ಗುಟ್ಟನ್ನು ತಮ್ಮಲ್ಲಿ ಇಟ್ಟುಕೊಳ್ಳದವರು) ಮತ್ತು ಆಶಾವಾದಿಗಳಾಗಿರುತ್ತಾರೆ. ಇವರು ಸದಾ ಚಟುವಟಿಕೆಯಲ್ಲಿದ್ದು ದೈಹಿಕವಾಗಿ ಸಬಲರಾಗಿರುತ್ತಾರೆ. ಇವರು ಸುತ್ತಮುತ್ತಲಿನ ಎಲ್ಲರ ಗಮನ ಸೆಳೆಯಲು ಸದಾ ಕಾರ್ಯನಿರತರಾಗಿರುತ್ತಾರೆ.

ಕಪ್ಪು ಬಣ್ಣ ನಿಮ್ಮ ಮೆಚ್ಚಿನದ್ದಾಗಿದ್ದರೆ

ಕಪ್ಪು ಬಣ್ಣ ನಿಮ್ಮ ಮೆಚ್ಚಿನದ್ದಾಗಿದ್ದರೆ

ಸಾಮಾನ್ಯವಾಗಿ ಕಪ್ಪು ಬಣ್ಣ ನಿಷೇಧತೆ ಮತ್ತು ಋಣಾತ್ಮಕ ಚಿಂತನೆಗಳ ಪ್ರತೀಕವಾಗಿದೆ. (ಉದಾಹರಣೆಗೆ ಕಪ್ಪು ಬಾವುಟ ಪ್ರದರ್ಶನ, ಬಿರುಗಾಳಿಯ ಮೊದಲು ಕಪ್ಪು ಮೋಡ, ಹೆದರಿಕೆ ಹುಟ್ಟಿಸುವ ಕತ್ತಲು). ಕಪ್ಪು ಬಣ್ಣ ರಹಸ್ಯ, ಒಂಟಿತನ, ಖಿನ್ನತೆ, ಹತಾಶೆಯ ಸಂಕೇತವಾಗಿದೆ. ಇನ್ನೊಂದರ್ಥದಲ್ಲಿ ಕಪ್ಪುಬಣ್ಣ ಘನತೆ, ಪ್ರಶಾಂತತೆ, ಗೌರವ ಮತ್ತು ಸೊಬಗಿನ ಸಂಕೇತವೂ ಆಗಿದೆ. (ಉದಾಹರಣೆಗೆ ದೇವರ ವಿಗ್ರಹ,ಶಿವಲಿಂಗ ಮೊದಲಾದವು) ಅಂತೆಯೇ ಕಪ್ಪುಬಣ್ಣವನ್ನು ಮೆಚ್ಚುವವರು ಎರಡೂ ನಿಟ್ಟಿನಲ್ಲಿ ವಿಪರೀತವಾದ ಲಕ್ಷಣಗಳನ್ನು ಹೊಂದಿರಬಹುದು.ಇವರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಒಮ್ಮೆ ಇವರ ವಿಶ್ವಾಸ ಗಳಿಸಿದರೆ ಜೀವನಪರ್ಯಂತ ಅದನ್ನು ಉಳಿಸಿಕೊಳ್ಳಲು ಇವರು ಪ್ರಾಣವನ್ನೂ ಪಣಕ್ಕಿಡುವವರಾಗಿರುತ್ತಾರೆ. ಹೆಚ್ಚಿನವರು ಮಹತ್ವಾಕಾಂಕ್ಷಿಗಳೂ ಆಗಿರುತ್ತಾರೆ.

ಹಳದಿ ಬಣ್ಣ ನಿಮಗಿಷ್ಟವೇ?

ಹಳದಿ ಬಣ್ಣ ನಿಮಗಿಷ್ಟವೇ?

ಹಳದಿ ಬಣ್ಣ ಇಷ್ಟಪಡುವ ವ್ಯಕ್ತಿಗಳು ಸದಾ ಹಸನ್ಮುಖಿಯಾಗಿದ್ದು ಸದಾ ತಮ್ಮ ಸುತ್ತಮುತ್ತಲಿನವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಎಲ್ಲರೂ ಸುಖವಾಗಿ ಸಂತೋಷವಾಗಿರಬೇಕೆಂದು ಬಯಸುತ್ತಾರೆ. ಇವರು ಕ್ರಿಯಾಶೀಲರಾಗಿದ್ದು ಹೊಸತನ್ನು ನೀಡುತ್ತಲೇ ಇರುತ್ತಾರೆ. ಇವರ ವಿಚಾರಗಳು ಕೆಲವೊಮ್ಮೆ ಅತಿರೇಕವೆನಿಸಿದರೂ ಸದಾ ಆಕಾಶದ ಮಟ್ಟದಲ್ಲೇ ತಿರುಗಾಡುತ್ತಿರುತ್ತವೆ. ಇವರು ಯಾರಿಗೂ ಕೇಡು ಬಯಸದವರಾಗಿದ್ದು ಒಮ್ಮೆ ವಿಶ್ವಾಸ ಕಳೆದುಕೊಂಡರೆ ಜೀವಮಾನದಲ್ಲಿ ಮತ್ತೆ ಆ ವಿಶ್ವಾಸವನ್ನು ಪಡೆಯಲು ಬಯಸುವುದಿಲ್ಲ. ಸ್ನೇಹ ಉಳಿಸಿಕೊಳ್ಳಲು ಇವರು ಪ್ರಯತ್ನಶೀಲರಾಗಿರುತ್ತಾರೆ.

 ಹಸಿರು ಬಣ್ಣವನ್ನು ಇಷ್ಟ ಪಡುವವರು ಹೀಗಿರುತ್ತಾರೆ

ಹಸಿರು ಬಣ್ಣವನ್ನು ಇಷ್ಟ ಪಡುವವರು ಹೀಗಿರುತ್ತಾರೆ

ಹಸಿರು ಬಣ್ಣವನ್ನು ಇಷ್ಟಪಡುವವರು ಸದಾ ಪ್ರಾಯೋಗಿಕವಾಗಿದ್ದು ಅತ್ಯಂತ ಸೌಮ್ಯ ಸ್ವಭಾವವನ್ನು ಹೊಂದಿರುತ್ತಾರೆ. ಜೀವನದಲ್ಲಿ ಯಾವ ಮಟ್ಟಕ್ಕೇರಿದರೂ ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಬೆರೆತು ಕಷ್ಟ ಸುಖಗಳನ್ನು ಹಂಚಿಕೊಳ್ಳುವವರಾಗಿರುತ್ತಾರೆ. ಸುತ್ತ ಮುತ್ತಲ ಜನರೊಂದಿಗೆ ಅತಿ ಹೆಚ್ಚು ನಲ್ಮೆಯನ್ನು ಹೊಂದಿರುವ ಇವರು ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ಇವರು ಕೊಡುಗೈ ದಾನಿಗಳೂ, ಸಹಾನುಭೂತಿಯುಳ್ಳವರೂ, ಎಂತಹ ಪರಿಸ್ಥಿತಿಯಲ್ಲಿಯೂ ತಾಳ್ಮೆ ಕಳೆದುಕೊಳ್ಳದವರೂ, ಹಸನ್ಮುಖಿಗಳೂ ಆಗಿರುತ್ತಾರೆ. ಸದಾ ಸಕಾರಾತ್ಮಕವಾಗಿ ಯೋಚಿಸುವ ಇವರು ತಮ್ಮ ಕೆಲಸದಲ್ಲಿ ಬೇರೆಯವರಿಂದಾಗುವ ತಪ್ಪುಗಳನ್ನು ತಮ್ಮ ಮೈಮೇಲೆಳೆದು ಕೊಳ್ಳುವುದರಿಂದ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾ ಇರುತ್ತಾರೆ. ಆದರೆ ಇವೇ ಗುಣಗಳ ಕಾರಣ ಸಮಾಜದಲ್ಲಿರುವ ದುರುಳ, ಗೋಮುಖ ವ್ಯಾಘ್ರಗಳ ಸಂಚಿಗೆ ಬಲಿಯಾಗಿ ನಷ್ಟವನ್ನೂ ಅನುಭವಿಸುತ್ತಾರೆ.

ನೀಲಿ ಬಣ್ಣ ನಿಮಗಿಷ್ಟವೇ?

ನೀಲಿ ಬಣ್ಣ ನಿಮಗಿಷ್ಟವೇ?

ನೀಲಿ ಬಣ್ಣ ಬುದ್ದಿವಂತಿಕೆ, ನಿಷ್ಠೆ, ಸತ್ಯ ಮತ್ತು ನಂಬಿಕೆಯ ಪ್ರತೀಕವಾಗಿದೆ. ಈ ಬಣ್ಣವನ್ನು ಇಷ್ಟಪಡುವವರು ವಿಶ್ವಾಸಾರ್ಹರೂ, ನಂಬಿಕೆಗೆ ಪಾತ್ರರೂ, ಸಂಪ್ರದಾಯವಾದಿಗಳೂ ಆಗಿರುತ್ತಾರೆ. ತಮ್ಮ ತತ್ವ ಮತ್ತು ನಂಬಿಕೆಗಳನ್ನು ಖಚಿತವಾದ ಮಾಹಿತಿ ಇಲ್ಲದಿದ್ದರೆ ಅವರು ಬದಲಿಸಲು ಹೋಗುವುದಿಲ್ಲ. ಯಾವುದೇ ವ್ಯಕ್ತಿಯನ್ನು ಅವರು ಥಟ್ಟನೇ ನಂಬಿಬಿಡುವುದಿಲ್ಲ. ಪ್ರತ್ಯಕ್ಷವಾಗಿ ಮತ್ತು ಸಮಯದ ಮೂಲಕ ಪ್ರಮಾಣಿತವಾದ ವ್ಯಕ್ತಿಗಳನ್ನು ಮಾತ್ರ ಅವರು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವರು.

ಗುಲಾಬಿ ಬಣ್ಣ ಕೇವಲ ಕಿಶೋರಿಯರಿಗೆ ಮಾತ್ರವೇ?

ಗುಲಾಬಿ ಬಣ್ಣ ಕೇವಲ ಕಿಶೋರಿಯರಿಗೆ ಮಾತ್ರವೇ?

ಕಿಶೋರರಿಗೆ ನೀಲಿ, ಕಿಶೋರಿಯರಿಗೆ ಗುಲಾಬಿ ಬಣ್ಣ ಎಂಬ ತತ್ವ ಯಾವ ಮಹಾನುಭಾವ ಪ್ರತಿಪಾದಿಸಿದ್ದರೋ ಗೊತ್ತಿಲ್ಲ. ಆದರೆ ಇದೇ ತತ್ವವನ್ನು ಮಕ್ಕಳ ಬಟ್ಟೆ, ಪಾದರಕ್ಷೆ, ಆಟಿಕೆಗಳನ್ನು ತಯಾರಿಸುವವರು ಗಾಢವಾಗಿ ನಂಬಿದ್ದಾರೆ. ಆದರೆ ಗುಲಾಬಿ ಬಣ್ಣವನ್ನು ಮೆಚ್ಚುವ ಹಿರಿಯರೂ ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ. ಗುಲಾಬಿ ಬಣ್ಣವನ್ನು ಮೆಚ್ಚುವವರು ಪ್ರೀತಿಪಾತ್ರರೂ, ಉದಾರ ಮನಸ್ಸಿನವರೂ ಸೂಕ್ಷ್ಮಮತಿಗಳೂ ಆಗಿರುತ್ತಾರೆ. ತಮ್ಮ ಸುತ್ತ ಮುತ್ತಲ ಜನರನ್ನು ತಾಯಿಯಂತೆ ರಕ್ಷಿಸುವ, ಪೋಷಿಸುವ ಮತ್ತು ಕಾಪಾಡುವ ಗುಣಗಳು ಇವರಲ್ಲಿರುತ್ತವೆ. ತಮ್ಮಲ್ಲಿ ಸಹಾಯ ಬೇಡಿ ಬಂದವರನ್ನು ಇವರು ಎಂದಿಗೂ

ನಿರಾಶೆಗೊಳಿಸುವುದಿಲ್ಲ.

ಬೂದು ಬಣ್ಣ ಇಷ್ಟಪಡುವವರು ಹೀಗಿರುತ್ತಾರೆ

ಬೂದು ಬಣ್ಣ ಇಷ್ಟಪಡುವವರು ಹೀಗಿರುತ್ತಾರೆ

ಬೂದು ಬಣ್ಣವನ್ನು ಇಷ್ಟಪಡುವವರು ಜೀವನದಲ್ಲಿ ಹೆಚ್ಚಾಗಿ ನಿರ್ಲಿಪ್ತರಾಗಿರುತ್ತಾರೆ. ಇವರು ಜನಜಂಗುಳಿಯನ್ನು ಇಷ್ಟಪಡುವುದಿಲ್ಲ. ತಮ್ಮ ಕೆಲಸವಾಯಿತು, ತಾವಾಯಿತು ಎಂಬಂತಿರುತ್ತಾರೆ. ಇವರು ಯಾರಿಗೂ ಕೇಡು ಬಯಸದವರಾಗಿದ್ದರೂ ಅತಿ ಅಗತ್ಯವಿಲ್ಲದಿದ್ದ ಹೊರತು ಯಾರದ್ದೂ ಉಸಾಬರಿಗೆ ಹೋಗುವುದೇ ಇಲ್ಲ. ಇವರು ಅಲ್ಪತೃಪ್ತರೂ ಕೊಂಚ ಮಟ್ಟಿಗೆ ಸೋಮಾರಿಗಳೂ ಆಗಿರುತ್ತಾರೆ. ನಿಧಾನಗತಿಯ ಸಂಗೀತ ಮತ್ತು ಸರಳ ಉಡುಗೆಗಳನ್ನು ತೊಡುವ ಇವರು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವ ಪ್ರಯತ್ನದಲ್ಲಿ ಹಿಂದಿರುತ್ತಾರೆ.

ಕಂದು ಬಣ್ಣವನ್ನು ಇಷ್ಟಪಡುವವರು

ಕಂದು ಬಣ್ಣವನ್ನು ಇಷ್ಟಪಡುವವರು

ಈ ಬಣ್ಣವನ್ನು ಇಷ್ಟಪಡುವವರು ಅತಿ ಪ್ರಾಮಾಣಿಕರೂ ಸೌಮ್ಯ ಸ್ವಭಾವದವರೂ ಉತ್ತಮ ಆರೋಗ್ಯವುಳ್ಳವರೂ ಆಗಿರುತ್ತಾರೆ. ಇವರು ಒಂದೇ ಸ್ಥಳದಲ್ಲಿ ಸ್ಥಿತರಾಗಿರಲು ಇಚ್ಛಿಸುವವರು ಮತ್ತು ತಮಗೆ ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುವವರಾದ್ದರಿಂದ ಶೀಘ್ರವೇ ಎಲ್ಲರ ವಿಶ್ವಾಸ ಗಳಿಸುತ್ತಾರೆ.

ನೇರಳೆ ಬಣ್ಣವನ್ನು ಇಷ್ಟಪಡುವವರು

ನೇರಳೆ ಬಣ್ಣವನ್ನು ಇಷ್ಟಪಡುವವರು

ನೇರಳೆ ಬಣ್ಣವನ್ನು ಇಷ್ಟಪಡುವವರು ಅತಿ ಸೂಕ್ಷ್ಮಮತಿಗಳೂ, ಸಹಾನುಭೂತಿಯುಳ್ಳವರೂ, ಬೆಂಬಲ ಸೂಚಿಸುವವರೂ ಮತ್ತು ಉತ್ತಮ ಸ್ನೇಹಿತರೂ ಆಗಿರುತ್ತಾರೆ. ತಮ್ಮ ಸುತ್ತಮುತ್ತಲ ಜನರ ಬಗ್ಗೆ ಸೂಕ್ಷ್ಮ ವಿಷಯಗಳನ್ನು ಗ್ರಹಿಸಿ ಅವರಿಗೆ ಅಗತ್ಯವಾದ ನೆರವು ಮತ್ತು ಸಲಹೆಗಳನ್ನು ನೀಡುವ ಮೂಲಕ ಇವರು ಪ್ರೀತಿಪಾತ್ರರಾಗಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಇತರರಿಗೆ ಸಹಾಯ ಮಾಡುವ ಭರದಲ್ಲಿ ತಮ್ಮ ಆದ್ಯತೆಗಳನ್ನೇ ಮರೆಯುವ ಇವರ ಗುಣದಿಂದ ಮನೆಯವರಲ್ಲಿಯೇ ಅಸಮಾಧಾನ ಉಂಟುಮಾಡುವವರಾಗಿರುತ್ತಾರೆ.

ನಿಮ್ಮ ನೆಚ್ಚಿನ ಬಣ್ಣ ಇತ್ತೀಚೆಗೆ ಬದಲಾಗಿದೆಯೇ

ನಿಮ್ಮ ನೆಚ್ಚಿನ ಬಣ್ಣ ಇತ್ತೀಚೆಗೆ ಬದಲಾಗಿದೆಯೇ

ಹಲವರಿಗೆ ತಮ್ಮ ನೆಚ್ಚಿನ ಬಣ್ಣ ಯಾವುದೆಂದೇ ಗೊತ್ತಿರುವುದಿಲ್ಲ. ಏಕೆಂದರೆ ಯಾವ ಬಣ್ಣದ ವಸ್ತು ನೋಡಿದರೂ ಅದು ಮೆಚ್ಚಿನದ್ದಾಗುತ್ತದೆ. ಆದರೆ ವಯಸ್ಸಾಗುತ್ತಿದ್ದಂತೆ, ವ್ಯಕ್ತಿತ್ವ ಮತ್ತು ಸ್ಥಳ ಬದಲಾಗುತ್ತಿದ್ದಂತೆ ನಿಮ್ಮ ನೆಚ್ಚಿನ ಬಣ್ಣ ಯಾವುದೆಂದು ನಿಧಾನವಾಗಿ ಗೋಚರಿಸಲು ತೊಡಗುತ್ತದೆ. ನಿಮ್ಮ ಅಭಿರುಚಿ, ನಿತ್ಯದ ಚಟುವಟಿಕೆ, ನಿಮ್ಮ ಸುತ್ತಮುತ್ತಲಿನವರು ನಿಮ್ಮ ಬಗ್ಗೆ ತೋರುವ ಅನಿಸಿಕೆಗಳನ್ನು ಅನುಸರಿಸಿ ನಿಮ್ಮ ನೆಚ್ಚಿನ ಬಣ್ಣ ಯಾವುದು ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

English summary

What does your favourite colour say about you?

Whether we’re a vibrant Orange, or a peaceful Blue, our colour preferences are a key to understanding our personalities. Find out what this colour expert has to say about your favourite colour. What does it reveal about who you really are?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X