Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕನ್ನಡದ ಧ್ರುವತಾರೆ ಅಣ್ಣಾವ್ರ ಕುರಿತಾದ ರೋಚಕ ಸಂಗತಿಗಳು
ಏಪ್ರಿಲ್12, 2006, ಕನ್ನಡದ ಧ್ರುವತಾರೆ ಚಿತ್ರರಂಗದ ತಾರೆಯೊಂದು ಅಸ್ತಂಗತವಾದ ದಿನ. ಅಂದು ಕಣ್ಣೀರು ಹಾಕದ ಕನ್ನಡಿಗರೇ ಇರಲಿಲ್ಲ. ಎಲ್ಲಾ ಮಾಧ್ಯಮಗಳಲ್ಲಿ ಡಾ. ರಾಜಕುಮಾರ್ ರವರದ್ದೇ ಚರ್ಚೆ, ಏಕೆ ಕನ್ನಡಿಗರು ಅಣ್ಣಾವ್ರನ್ನು ಇಷ್ಟೊಂದು ಹಚ್ಚಿಕೊಂಡಿದ್ದರು ಎಂಬ ಪ್ರಶ್ನೆಗೆ ಅಣ್ಣಾವ್ರರಲ್ಲಿ ಅವರು ಚಿತ್ರನಟನಿಗಿಂತ ಹೆಚ್ಚಾಗಿ ಒಬ್ಬ ಸತ್ಪುರುಷನನ್ನು ಕಂಡಿದ್ದರು.
ಹಿಂದಿ ಚಿತ್ರರಂಗದ ಮೇರುನಟ ಅಮಿತಾಭ್ ಬಚ್ಚನ್ ರವರೇ ಅಣ್ಣಾವ್ರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತಾ ಈ ಮಾತುಗಳನ್ನು ಹೇಳಿದ್ದರು. "ಒಳ್ಳೆಯದಾಯಿತು ಅವರು ಹಿಂದಿಗೆ ಬರದೇ ಇದ್ದದ್ದು. ಒಂದು ವೇಳೆ ಬಂದಿದ್ದರೆ ನಾವ್ಯಾರೂ ಈ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಲೇ ಇರಲಿಲ್ಲ"
ಅಣ್ಣಾವ್ರು ಅತ್ಯುತ್ತಮ ನಟನಿಗಿಂತಲೂ ಅತ್ಯುತ್ತಮ ವ್ಯಕ್ತಿಯಾಗಿಯೇ ಕನ್ನಡಿಗರ ಹೃದಯ ಗೆದ್ದವರಾಗಿದ್ದಾರೆ. ಅವರ ಎಲ್ಲಾ ಚಿತ್ರಗಳಲ್ಲಿ ಮಾನವೀಯತೆಯನ್ನು ಗೌರವಿಸುವ, ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುವ, ಇಂತಹ ನೂರಾರು ನಿದರ್ಶನಗಳಿವೆ. ಯಾವುದೇ ಪಾತ್ರವನ್ನಾದರೂ ನೀರು ಕುಡಿದಷ್ಟು ಸುಲಭವಾಗಿ ನಿಭಾಯಿಸಬಲ್ಲ ಅಣ್ಣಾವ್ರು ಎಂದಿಗೂ ತಮ್ಮ ನಟನೆಯ ಬಗ್ಗೆ ಕೊಚ್ಚಿಕೊಳ್ಳುತ್ತಿರಲಿಲ್ಲ.
ಎಷ್ಟೋ ಸಂದರ್ಶನಗಳಲ್ಲಿ ಅವರು ತಮ್ಮ ನಟನೆಯನ್ನು ಅತ್ಯದ್ಭುತವಾದುದು ಎಂಬುದನ್ನು ಒಪ್ಪದೇ 'ಕೊಂಚ ಕಷ್ಟಪಟ್ಟಿದ್ದರೆ ಇನ್ನಷ್ಟು ಆ ಪಾತ್ರಕ್ಕೆ ಇನ್ನಷ್ಟು ಕಳೆ ನೀಡಬಹುದಾಗಿತ್ತು' ಎಂದೇ ಅವರು ಹೇಳುತ್ತಿದ್ದರು. ಅವರ ವರ್ಚಸ್ಸನ್ನು ರಾಜಕೀಯ ಲಾಭಗಳಿಗಾಗಿ ಉಪಯೋಗಿಸಿಕೊಳ್ಳಲು ಹಲವರು ಪ್ರಯತ್ನಿಸಿದರಾದರೂ ಅಣ್ಣಾವ್ರು ಎಂದೂ ಈ ಪ್ರಲೋಭನೆಗೆ ಒಳಗಾಗಲಿಲ್ಲ. ಆದರೆ ಕನ್ನಡ ಭಾಷೆಗಾಗಿ ಗೋಕಾಕ್ ಚಳುವಳಿಯಲ್ಲಿ ಮಾತ್ರ ಸಕ್ರಿಯವಾಗಿ ಭಾಗವಹಿಸಿದರು. ಈ ಮೇರುನಟನ ಬಗ್ಗೆ ನಾವು ತಿಳಿದಿರುವ ವಿಷಯಗಳ ಜೊತೆಗೆ ನಾವು ತಿಳಿದರದ ಹಲವು ರೋಚಕ ಮಾಹಿತಿಗಳಿವೆ. ಈ ಮಾಹಿತಿಗಳನ್ನು ಹಂಚಿಕೊಳ್ಳಲು ಬೋಲ್ಡ್ ಸ್ಕೈ ತಂಡಕ್ಕೆ ಹೆಮ್ಮೆಯೆನಿಸುತ್ತಿದೆ...

ಅಮಿತಾಭ್ ಬಚ್ಚನ್ ರಿಗೇ 'ಇಲ್ಲ' ಎಂದ ಅಣ್ಣಾವ್ರು
ಅಮಿತಾಭ್ ಬಚ್ಚನ್ರಿಗೇ 'ಇಲ್ಲ' ಎಂದ ಅಣ್ಣಾವ್ರು ಇಂದಿಗೂ ಹಿಂದಿ ಚಿತ್ರರಂಗದ ದಿಗ್ಗಜ ಎಂದರೆ ಅವರೇ ಬಿಗ್ ಬಿ ಅಮಿತಾಭ್ ಬಚ್ಚನ್. ಇವರೊಂದಿಗೆ ಕೇವಲ ಒಂದು ಕ್ಷಣ ಕಳೆದರೂ ಜೀವನ ಸಾರ್ಥಕ ಎಂದು ತಿಳಿದಿರುವ ಭಾರತದ ನೂರು ಕೋಟಿ ಜನರ ನಡುವೆ ತನ್ನ ಭಾಷೆಗಾಗಿ ಪರಭಾಷೆಯನ್ನು ಒಲ್ಲೆ ಎಂದ ಅಣ್ಣಾವ್ರು ನಮ್ಮ ಹೃದಯವನ್ನು ಗೆಲ್ಲುತ್ತಾರೆ. ಅಂದು ಅಮಿತಾಭ್ ರವರ ಯಶಸ್ವೀ ಚಿತ್ರ 'ಕೂಲಿ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆ ಚಿತ್ರದಲ್ಲಿ ಒಂದು ಸನ್ನಿವೇಶದಲ್ಲಿ ಅಣ್ಣಾವ್ರು ರೈಲಿನಿಂದ ಬಂದು ಇಳಿಯುವಾಗ ಅಮಿತಾಭ್ ರವರೇ ಅವರ ವಸ್ತುಗಳನ್ನು ಕೂಲಿಯಾಗಿ ಹೊರುವ ದೃಶ್ಯವನ್ನು ಅವರು ಅಳವಡಿಸಲು ಯೋಜಿಸಿದ್ದರು. ಈ ಬಗ್ಗೆ ಅವರು ಅಣ್ಣವ್ರಲ್ಲಿ ವಿನಂತಿಸಿಕೊಂಡಾಗ ಅಣ್ಣಾವ್ರು ನಯವಾಗಿಯೇ ಅವರ ವಿನಂತಿಯನ್ನು ತಿರಸ್ಕರಿಸಿ ತಮ್ಮ ಸಮರ್ಪಣೆ ಏನಿದ್ದರೂ ಕನ್ನಡ ಭಾಷೆಗೇ ಹೊರತು ಬೇರೆ ಭಾಷೆಯ ಚಿತ್ರದಲ್ಲಿ ನಟಿಸಲಾರೆ ಎಂದರು. ಇದನ್ನು ನಿರೀಕ್ಷಿಸದ ಅಮಿತಾಭ್ ಅವಕ್ಕಾದರೂ ಅಣ್ಣಾವ್ರ ಅಭಿಮಾನವನ್ನು ಮೆಚ್ಚಿದ್ದರು. ಈ ವಿಷಯವನ್ನು ಇಂದಿಗೂ ಅವರು ಸ್ಮರಿಸುತ್ತಾರೆ.

ಕಸ್ತೂರಿ ನಿವಾಸದ ನಟನೆ
ಕಪ್ಪು ಬಿಳುಪು ಚಿತ್ರದಲ್ಲಿ ಪ್ರದರ್ಶಿತವಾಗಿದ್ದ ಡಾ. ರಾಜ್ ರವರ ಅತ್ಯದ್ಭುತ ನಟನೆಯ ಕಸ್ತೂರಿನಿವಾಸ ಇಂದಿಗೂ ಇಂಟರ್ನೆಟ್ ನಲ್ಲಿ ನೋಡಲ್ಪಡುತ್ತಿರುವ ಚಿತ್ರ. ಸುಮಾರು ಎಪ್ಪತ್ತರ ದಶಕದಲ್ಲಿ ಹಿಂದಿ ನಟ ಸಂಜೀವ್ ಕುಮಾರ್ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಶೋಲೆ ಚಿತ್ರದ ಠಾಕುರ್, ಅಂಗೂರ್ ಚಿತ್ರದ ದ್ವಿಪಾತ್ರದಲ್ಲಿ ಅಶೋಕ್, ಪತಿ ಪತ್ನಿ ಔರ್ ವೋ ಚಿತ್ರದ ಪತಿ ಮೊದಲಾದ ವಿಭಿನ್ನ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದ ಸಂಜೀವ್ ಕುಮಾರ್ ರಿಗೆ ಕನ್ನಡದಲ್ಲಿ ಯಶಸ್ವಿಯಾಗಿದ್ದ ಕಸ್ತೂರಿ ನಿವಾಸ ಚಿತ್ರವನ್ನು ತೋರಿಸಿ ಡಾ. ರಾಜ್ ರವರ ಪಾತ್ರವನ್ನು ನಿರ್ವಹಿಸಲು ಕೇಳಿಕೊಳ್ಳಲಾಯಿತು. ಚಿತ್ರವನ್ನು ಅತ್ಯಂತ ಗಮನವಿಟ್ಟು ನೋಡಿ ಪ್ರತಿ ಸಂಭಾಷಣೆಯನ್ನೂ ಹಿಂದಿಯಲ್ಲಿ ತರ್ಜುಮೆ ಮಾಡಿಸಿಕೊಂಡು ಬಳಿಕ ಅವರು ಈ ಪಾತ್ರವನ್ನು ನಿರ್ವಹಿಸಲು ನಿರಾಕರಿಸಿದರು. ಏಕೆಂದರೆ ಕಸ್ತೂರಿ ನಿವಾಸದಲ್ಲಿ ಡಾ. ರಾಜ್ ನೀಡಿದ ಅಭಿನಯ ಅವರ ಪ್ರಕಾರ ಅವರ ಸಾಮರ್ಥ್ಯಕ್ಕೆ ಮೀರಿದುದಾಗಿತ್ತು. ಅದರಲ್ಲೂ ಕಡೆಯ ಮೂವತ್ತು ನಿಮಿಷಯದ ಅಭಿನಯವಂತೂ ಡಾ. ರಾಜ್ ಹೊರತು ಬೇರೆ ಯಾರಿಂದಲೂ ನೀಡಲು ಸಾಧ್ಯವೇ ಇಲ್ಲ ಎಂಬುದು ಅವರ ನಿಲುವಾಗಿತ್ತು.

ಪೃಥ್ವೀರಾಜ್ ಕಪೂರ್
ಕಪೂರ್ ಕುಟುಂಬದ ಹಿರಿಯ, ಹಿಂದಿ ಚಿತ್ರರಂಗದ ಹಿರಿಯ ನಟ ಪೃಥ್ವೀರಾಜ್ ಕಪೂರ್ ಅವರೂ ಒಮ್ಮೆ ತಮ್ಮೊಂದಿಗೆ ಹಿಂದಿ ಚಿತ್ರದಲ್ಲಿ ಚಿಕ್ಕ ಪಾತ್ರವಹಿಸಲು ಡಾ. ರಾಜ್ ರನ್ನು ಕೇಳಿಕೊಂಡಿದ್ದರು. ಆದರೆ ಕನ್ನಡ ಚಿತ್ರದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ ಡಾ. ರಾಜ್ ರವರೊಂದಿಗೆ ನಟಿಸದೇ ಇರಲು ಅವರಿಗೆ ಸಾಧ್ಯವಾಗಲಿಲ್ಲ. ಡಾ. ರಾಜ್ ರೊಂದಿಗೆ ಕೆಲವು ಕ್ಷಣಗಳನ್ನಾದರೂ ಅಭಿನಯಿಸಲೇಬೇಕು ಎಂಬ ಅದಮ್ಯ ಬಯಕೆಯಿಂದ ಅವರು ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ ಆರೆನ್ನಾರ್ ಮನೋಹರ್ ಮತ್ತು ಕನ್ನಡದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರೊಂದಿಗೆ ವಿನಂತಿಸಿಕೊಂಡರು. ಬಳಿಕ ತ.ರಾ.ಸು ರವರ ಕಾದಂಬರಿ ಆಧಾರಿತ ಕನ್ನಡ ಚಿತ್ರ 'ಸಾಕ್ಷಾತ್ಕಾರ'ದಲ್ಲಿ (ನಿರ್ದೇಶನ: ಪುಟ್ಟಣ್ಣ ಕಣಗಾಲ್) ಪೋಷಕ ಪಾತ್ರವೊಂದನ್ನು (ಡಾ. ರಾಜ್ ನಿರ್ವಹಿಸಿದ ಮಹೇಶ್ ನ ತಂದೆಯ ಪಾತ್ರ) ನಿರ್ವಹಿಸಿ ಕೃತಾರ್ಥತೆ ಅನುಭವಿಸಿದರು.

ತಂತ್ರಜ್ಞಾನವನ್ನೂ ಮೀರಿದ ಸಮರ್ಪಣೆ
ಇಂದಿನ ತಂತ್ರಜ್ಞಾನ ಚಿತ್ರರಂಗದ ಸಾಧ್ಯತೆಗಳನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ. ಉದಾಹರಣೆಗೆ 'ಮಾಯಾ' ಎಂಬ ಗಣತ ತಂತ್ರಜ್ಞಾನ ವಿದ್ದರೆ ನಾಯಕ ನಾಯಕಿಯರನ್ನು ಈಜಿಪ್ಟಿಗೆ ಹೋಗದೇ ಈಜಿಪ್ಟಿನ ಪಿರಮಿಡ್ಡುಗಳ ಎದುರಿನಲ್ಲಿ ನರ್ತಿಸುವಂತೆ ಮಾಡಬಹುದು! ಆದರೆ ಎಪ್ಪತ್ತರ ದಶಕದಲ್ಲಿ ಇಂತಹ ತಂತ್ರಜ್ಞಾನ ಯಾವುದೂ ಇರಲಿಲ್ಲ. ಇದ್ದರೆ ಅದು ಅಪ್ಪಟ ಪ್ರತಿಭೆ ಮತ್ತು ತಮ್ಮ ತಮ್ಮ ಕೆಲಸಗಳಿಗೆ ನೀಡಲಾಗುತ್ತಿದ್ದ ಶ್ರದ್ಧೆ. ಅಂದು ಮರಾಠಿಯಲ್ಲಿ ಸಂತ ತುಕಾರಾಮ್ ಎಂಬ ಚಿತ್ರ ಬಿಡುಗಡೆಯಾಗಿದ್ದು ಭರ್ಜರಿ ಯಶಸ್ಸು ಕಂಡಿತ್ತು. ಇದರ ನಿರ್ದೇಶಕರಾದ ನಾಡಕರ್ಣಿಯವರು ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ಯೋಚಿಸಿ ಡಾ. ರಾಜ್ ರವರು ಪ್ರಧಾನ ಪಾತ್ರದಲ್ಲಿ, ವಿಜಯಭಾಸ್ಕರ್ ರವರ ಸಂಗೀತ ಮತ್ತು ಚಿ. ಸದಾಶಿವಯ್ಯ (ಚಿ. ಉದಯಶಂಕರ್ ರವರ ತಂದೆ) ರವರಿಂದ ಸಾಹಿತ್ಯವನ್ನು ಆಯೋಜಿಸಿದ್ದರು. ಅಂದು ಚಿತ್ರದ ದೃಶ್ಯಾವಳಿಗಳನ್ನು ಈಗಿನಂತೆ ಡೀವಿಡಿ, ಸೀಡಿಗಳಲ್ಲಿ ನೋಡುವ ಯಾವುದೇ ವ್ಯವಸ್ಥೆ ಇರಲಿಲ್ಲ. ಬದಲಿಗೆ ಕೇವಲ ಗ್ರಾಮೋಫೋನ್ ನಿಂದ ಹಾಡನ್ನು ಕೇಳಬಹುದಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ತಂತ್ರಜ್ಞಾನವನ್ನೂ ಮೀರಿದ ಸಮರ್ಪಣೆ
ಚಿತ್ರದ ಅತ್ಯಂತ ಜನಪ್ರಿಯ ಗೀತೆಯಾದ 'ಜಯತು ಜಯ ವಿಠಲಾ...' ಎಂಬ ಹಾಡನ್ನು ಕೇವಲ ಕಿವಿಯಿಂದ ಕೇಳಿದ ಅವರು ಈ ಹಾಡಿನ ಕನ್ನಡ ಅವತರಣಿಕೆಯ ಚಿತ್ರೀಕರಣಕ್ಕೆ ಒಪ್ಪಿದರು. ಅಂದರೆ ಕೇವಲ ಮರಾಠಿ ಹಾಡಿನ ಪದಗಳಿಗೆ ಕನ್ನಡದಲ್ಲಿ ಹಾಡುತ್ತಿರುವಂತೆ ಅವರು ತಮ್ಮ ತುಟಿಗಳನ್ನು ಆಡಿಸಬೇಕಿತ್ತು. ಇಂದಿನ ನಟರು ಇದು ಸಾಧ್ಯವೇ ಇಲ್ಲ ಎಂದು ಕೈಚೆಲ್ಲುವಾಗ ಡಾ. ರಾಜಕುಮಾರ್ ಈ ಸವಾಲನ್ನು ಸ್ವೀಕರಿಸಿ ಕನಿಷ್ಠ ಪ್ರಯತ್ನಗಳಲ್ಲಿ ಹಾಡಿನ ಚಿತ್ರೀಕರಣ ಮುಗಿಸಿಯೇ ಬಿಟ್ಟರು. ಬಳಿಕ ಈ ಹಾಡಿಗೆ ಪಿ.ಬಿ. ಶ್ರೀನಿವಾಸ್ ರವರ ಕಂಠದಿಂದ ಹಾಡಿನ ಕನ್ನಡ ಹಾಡನ್ನು ಚಿತ್ರದಲ್ಲಿ ಅಳವಡಿಸಲಾಯಿತು. ಒಂದು ವೇಳೆ ಈ ಮಾತನ್ನು ಹೇಳಿರದೇ ಇದ್ದರೆ ಈ ಹಾಡನ್ನು ನೋಡಿದವರಾರೂ ಹಾಡಿಗೂ ಮುನ್ನವೇ ಡಾ. ರಾಜ್ ಅಭಿನಯಿಸಿದ್ದರು ಎಂದರೆ ನಂಬಲೇ ಅಸಾಧ್ಯವಾಗುತ್ತದೆ.

ಚಿತ್ರಕ್ಕಾಗಿಯೇ ಸ್ಕೂಟರ್ ಚಾಲನೆಯನ್ನು ಕಲಿತ ಡಾ. ರಾಜ್
ಚಿತ್ರಗಳಲ್ಲಿ ಸಾಹಸದ ದೃಶ್ಯಗಳನ್ನು ಹೆಚ್ಚಾಗಿ ಬದಲಿ ನಟರಿಂದ ಮಾಡಿಸಿಕೊಳ್ಳುತ್ತಾರೆ. ಈ ಬದಲಿ ನಟರು ವೃತ್ತಿಪರರಾಗಿದ್ದು ಸಾಹಸ ದೃಶ್ಯಗಳಲ್ಲಿ ನಾಯಕ ತೊಟ್ಟ ಬಟ್ಟೆಗಳನ್ನೇ ತೊಟ್ಟು ಸನ್ನಿವೇಶದಲ್ಲಿ ಭಾಗವಹಿಸುತ್ತಾರೆ. ಆದರೆ ಮುಖ ತೋರುವ ಸಂದರ್ಭದಲ್ಲಿ ಮಾತ್ರ ನಾಯಕನ ಮುಖವನ್ನು ತೋರಿಸಲಾಗುತ್ತದೆ. ಆದರೆ ಡಾ. ರಾಜ್ ರವರು ತಮ್ಮಿಂದ ಸಾಧ್ಯವಾದ ಎಲ್ಲಾ ಪಾತ್ರಗಳನ್ನೂ ಅವರೇ ಸ್ವತಃ ನಿಭಾಯಿಸಲು ಯತ್ನಿಸುತ್ತಿದ್ದರು. ಇದೇ ಪ್ರಯತ್ನ ಅವರನ್ನು ಗಾಯಕನನ್ನಾಗಿಯೂ ಮಾಡಿತು. ಸಾಹಸ ಸನ್ನಿವೇಶಗಳಲ್ಲಿ ಅವರು ಅನಿವಾರ್ಯವಾಗಿದ್ದರೆ ಮಾತ್ರ ಬದಲಿ ನಟರನ್ನು ಉಪಯೋಸಿಕೊಳ್ಳುತ್ತಿದ್ದರು. ಅವರ ಒಂದು ಯಶಸ್ವಿ ಚಿತ್ರವಾದ 'ಎರಡು ಕನಸು' ಚಿತ್ರೀಕರಣಕ್ಕೂ ಮುನ್ನ ಡಾ. ರಾಜ್ ರಿಗೆ ಸ್ಕೂಟರ್ ಚಾಲನೆ ಬರುತ್ತಿರಲಿಲ್ಲ. ಅಲ್ಲದೇ ಈ ಪಾತ್ರಕ್ಕೆ ಸ್ಕೂಟರ್ ಚಾಲನೆ ಅವಶ್ಯವಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಚಿತ್ರಕ್ಕಾಗಿಯೇ ಸ್ಕೂಟರ್ ಚಾಲನೆಯನ್ನು ಕಲಿತ ಡಾ. ರಾಜ್
ಇಂತಹ ಸಂದರ್ಭದಲ್ಲಿ ನಿಲ್ಲಿಸಿದ ಸ್ಕೂಟರ್ ನ ಹ್ಯಾಂಡಲ್ (ಅಥವಾ ಕಾರಿನ ಸ್ಟೇರಿಂಗ್) ಅತ್ತಿತ್ತ ಅಲುಗಾಡಿಸುತ್ತಿರುವಂತೆ, ಹಿನ್ನೆಲೆಯಲ್ಲಿ ಚಲಿಸುತ್ತಿರುವ ದೃಶ್ಯಾವಳಿ ನಾಯಕ ವಾಹನ ಚಲಾಯಿಸುತ್ತಿರುವಂತೆ ಭ್ರಮೆ ಮೂಡಿಸುತ್ತದೆ. ಆದರೆ ತಮ್ಮ ಪಾತ್ರಕ್ಕೆ ಪೂರ್ಣ ಪ್ರಮಾಣದ ನ್ಯಾಯ ದೊರಕಿಸಲು ಡಾ. ರಾಜ್ ಸ್ಕೂಟರ್ ಚಾಲನೆಯನ್ನು ಕಲಿತರು. ಇದಕ್ಕಾಗಿ ಅವರು ಮದ್ರಾಸಿನಲ್ಲಿ ಬೆಳ್ಳಂಬೆಳಿಗ್ಗೆ ಆರು ಗಂಟೆಗೇ ಎದ್ದು ನಿರ್ದೇಶಕ ದೊರೈಭಗವಾನ್ ರ ಮನೆಗೆ ತೆರಳಿ ಅವರ ಸಹೋದರನ ಸ್ಕೂಟರ್ ಮೇಲೆ ಒಂದು ಗಂಟೆಗೂ ಹೆಚ್ಚು ಕಾಲ ಸಮುದ್ರತೀರದ ರಸ್ತೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಎಂತೆಂತಹ ಪಾತ್ರಗಳನ್ನೇ ಲೀಲಾಜಾಲವಾಗಿ ನಿರ್ವಹಿಸಿದ ಡಾ. ರಾಜ್ ರಿಗೆ ಸ್ಕೂಟರ್ ಚಲಾವಣೆ ಒಂದು ಸಾಟಿಯೇ? ಪರಿಣಾಮ- ಎರಡು ಕನಸು ಚಿತ್ರದಲ್ಲಿ ಅವರು ನಿಜವಾಗಿಯೂ ಸ್ಕೂಟರ್ ಓಡಿಸಿ ನಾಯಕ ಪಾತ್ರಕ್ಕೆ ಪೂರ್ಣಪ್ರಮಾಣದ ನ್ಯಾಯ ಒದಗಿಸಿದರು.

ನಾದಮಯ ಹಾಡಿಗಾಗಿ ಹಿಮಾಲಯವನ್ನೂ ಏರಿದ ಡಾ. ರಾಜ್
ದೊರೈ ಭಗವಾನ್ ರ ಇನ್ನೊಂದು ಯಶಸ್ವೀ ಚಿತ್ರ ಜೀವನ ಚೈತ್ರ. ಸುಮಾರು ಮೂರು ವರ್ಷಗಳ ವಿರಾಮದ ಬಳಿಕ ಚಿತ್ರಜೀವನಕ್ಕೆ ಮರಳಿದ ಡಾ. ರಾಜ್ ರವರ ಚಿತ್ರವನ್ನು ಇಡಿಯ ಕರ್ನಾಟಕವೇ ನಿರೀಕ್ಷಿಸುತ್ತಿತ್ತು.ಈ ಚಿತ್ರದಲ್ಲಿ ನೆನಪಿನ ಶಕ್ತಿಯನ್ನು ಕಳೆದುಕೊಂಡ ವ್ಯಕ್ತಿ ಹೇಗೋ ಹಿಮಾಲಯ ತಲುಪಿ 'ನಾದಮಯ ಈ ಲೋಕವೆಲ್ಲಾ' ಎಂಬ ಹಾಡಿನ ಮೂಲಕ ತನ್ನ ದುಗುಡವನ್ನು ವ್ಯಕ್ತಪಡಿಸುವ ಸನ್ನಿವೇಶವಿದೆ. ಮೂಲ ಕಥೆಯಲ್ಲಿ ಹಿಮಾಲಯದ ಪ್ರಸ್ತಾಪವೇ ಇರಲಿಲ್ಲ. ಆದರೆ ಚಿತ್ರಕಥೆಯನ್ನು ಓದಿದ ಡಾ. ರಾಜ್ ರವರೇ ಈ ಹಾಡು ಹಿಮಾಲಯದಲ್ಲಿ ಚಿತ್ರೀಕರಣಗೊಂಡರೆ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇವರ ಅಭಿಪ್ರಾಯಕ್ಕೆ ಪೂರ್ಣ ಸಹಕಾರ ನೀಡಿದ ದೊರೆ ಮತ್ತು ವರದಪ್ಪನವರು ಹಿಮಾಯಲದಲ್ಲಿಯೇ ಚಿತ್ರೀಕರಣ ನಡೆಸಲು ಒಪ್ಪಿಗೆ ನೀಡಿದರು. ಆದರೆ ಆರೋಗ್ಯ ನಿಮಿತ್ತ ಹಿಮಾಲಯಕ್ಕೆ ಹೋಗಲು ಸಾಧ್ಯವಾಗದೇ ಇದ್ದುದರಿಂದ ಡಾ. ರಾಜ್ ರವರು ಕೆಲವೇ ಸದಸ್ಯರೊಂದಿಗೆ ಹಿಮಾಲಯಕ್ಕೆ ತೆರಳಿ ಹಾಡಿನ ಚಿತ್ರೀಕರಣ ನಡೆಸಿದರು. ಪರಿಣಾಮ ಮೂರು ವರ್ಷ ಕಾದ ಕನ್ನಡಿಗರ ಪಾಲಿಗೆ ಅವಿಸ್ಮರಣೀಯ ಅನುಭವವಾಗಿತ್ತು.

'ಶಿವಪ್ಪ ಕಾಯೋ ತಂದೆ' ಹಾಡಿಗಾಗಿ ಪಾದರಕ್ಷೆಯನ್ನೂ ಧರಿಸದ ಡಾ.ರಾಜ್
ಸಾಮಾನ್ಯವಾಗಿ ಯಾವುದೇ ಸನ್ನಿವೇಶ ಒಂದೇ ಪ್ರಯತ್ನದಲ್ಲಿ ಸಫಲವಾಗುವುದು ಕಡಿಮೆ. ಅದರಲ್ಲೂ ಹೆಚ್ಚಿನ ನಟರಿದ್ದರೆ ಯಾರೊಬ್ಬರಿಂದಲೂ ತಪ್ಪಾದರೂ ಆ ಪ್ರಯತ್ನವನ್ನು ಮತ್ತೊಮ್ಮೆ ಮಗದೊಮ್ಮೆ ಪುನರಾವರ್ತಿಸಬೇಕಾಗುತ್ತದೆ. ಕೆಲವು ಸಂದರ್ಭಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ತಪ್ಪುಗಳನ್ನು ನೋಡಬಹುದು. ಬೇಡರ ಕಣ್ಣಪ್ಪ ಚಿತ್ರದಲ್ಲಿ 'ಶಿವಪ್ಪ ಕಾಯೋ ತಂದೆ' ಎಂಬ ಹಾಡಿದೆ. ಈ ಹಾಡಿನ ಚಿತ್ರೀಕರಣದ ಸಮಯ ಚಳಿಗಾಲವಾಗಿತ್ತು. ಎಲ್ಲರೂ ಉಣ್ಣೆಯ ಸ್ವೆಟರ್, ತಲೆಗೆ ಟೊಪ್ಪಿ, ಕಾಲುಚೀಲ ಧರಿಸಿ ಬೆಚ್ಚಗಿದ್ದರೆ ಡಾ. ರಾಜ್ ಮಾತ್ರ ಕೇವಲ ಜುಬ್ಬಾ ಪೈಜಾಮ ಧರಿಸಿ ಬರಿಗಾಲಿನಲ್ಲಿ ತಮ್ಮ ಪಾತ್ರವನ್ನು ನಿಭಾಯಿಸುತ್ತಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಪಾದರಕ್ಷೆಯನ್ನೂ ಧರಿಸದ ಡಾ.ರಾಜ್
ಈ ಹಾಡಿನಲ್ಲಿ ಭಕ್ತಿಯೇ ಪ್ರಧಾನವಾಗಿದ್ದು ಪಾದರಕ್ಷೆ ತೊಡದಿರುವುದು ಆ ಪಾತ್ರದ ಅಗತ್ಯವಾಗಿತ್ತು. ಚಳಿಯನ್ನೂ, ಪಾದವನ್ನು ಬಾಧಿಸುತ್ತಿದ್ದ ನೋವನ್ನೂ ಲೆಕ್ಕಿಸದ ಡಾ. ರಾಜ್ ಹದಿನಾಲ್ಕು ದಿನಗಳವರೆಗೆ ಬೇಡರ ಕಣ್ಣಪ್ಪ ಚಿತ್ರದ ಚಿತ್ರೀಕರಣವನ್ನು ನಿರ್ವಹಿಸಿದರು. ಅಲ್ಲದೇ ಈ ಹಾಡಿನ ಅಷ್ಟೂ ಸನ್ನಿವೇಶಗಳನ್ನು ಪ್ರಥಮ ಪ್ರಯತ್ನಗಳಲ್ಲಿಯೇ ಯಶಸ್ವಿಯಾಗಿಸಿದುದು ಇಂದಿಗೂ ಒಂದು ದಾಖಲೆಯಾಗಿದೆ.

ಜೇಮ್ಸ್ ಬಾಂಡ್ ಪಾತ್ರದಲ್ಲಿಯೂ ತಮ್ಮತನ ಬಿಡದ ಡಾ. ರಾಜ್
ಜೇಮ್ಸ್ ಬಾಂಡ್ ಎಂದಾಕ್ಷಣ ಪತ್ತೇದಾರನ ನೈಪುಣ್ಯತೆಯ ಜೊತೆ ಆತನ ಲಲನೆಯರ ಜೊತೆಗಿನ ಸಂಗ, ಮದ್ಯಪಾನ, ಧೂಮಪಾನ ಮೊದಲಾದವೂ ಜೊತೆಗೇ ಬರುತ್ತವೆ. ಸ್ವತಃ ಎಂದೂ ಧೂಮಪಾನ ಮಾಡದ ಜೀವನದಲ್ಲಿ ಎಂದಿಗೂ ಮದ್ಯ ಮುಟ್ಟದ, ಏಕಪತ್ನೀವ್ರತಸ್ಥರಾದ ಡಾ. ರಾಜ್ ರಿಗೆ ಜೇಮ್ಸ್ ಬಾಂಡ್ ಪತ್ತೇದಾರನ ಪಾತ್ರ ಬಹಳ ಕ್ಲಿಷ್ಟಕರವಾಗಿ ಕಂಡಿತ್ತು. ಪತ್ತೇದಾರಿ ಕಥೆಯನ್ನು ಆಧರಿಸಿದ ಜೇಡರ ಬಲೆ ಚಿತ್ರಕ್ಕಾಗಿ ದೊರೈ ಭಗವಾನ್ ಡಾ. ರಾಜ್ ರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ ಪಾತ್ರದ ಬಗ್ಗೆ ತಿಳಿದ ಡಾ.ರಾಜ್ ಈ ಪಾತ್ರವನ್ನು ಮಾಡಲು ಹಿಂದೇಟು ಹಾಕಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಜೇಮ್ಸ್ ಬಾಂಡ್ ಪಾತ್ರದಲ್ಲಿಯೂ ತಮ್ಮತನ ಬಿಡದ ಡಾ. ರಾಜ್
ಇದರಲ್ಲಿ ಮದ್ಯ ಕುಡಿಯುವ ಸನ್ನಿವೇಶವಿದೆ, ತನ್ನ ಆತ್ಮ ಒಲ್ಲದ ಕೆಲಸವನ್ನು ಪಾತ್ರದಲ್ಲಿಯೂ ನಿಭಾಯಿಸಲಾರೆ ಎಂದುಬಿಟ್ಟರು. ಕಡೆಗೆ ಧೂಮಪಾನ ಮಾಡಿದಂತೆ, ಮದ್ಯದ ಬಾಟಲಿ ಹತ್ತಿರ ತಂದಂತೆ ಮಾತ್ರ ಮಾಡಿದರೆ ಸಾಕು ಎಂಬ ಭರವಸೆಯ ಮೇಲೆ ಬಾಟಲಿಯಲ್ಲಿ ಬಣ್ಣದ ನೀರನ್ನು ತುಂಬಿಸಿ ಪತ್ತೇದಾರ ಬಾಯಿಯ ಬಳಿ ಕೊಂಡೊಯ್ಯುವಂತೆ ಚಿತ್ರೀಕರಣ ನಡೆಸಲಾಯಿತು. ಇದಕ್ಕೂ ಮೊದಲು ಈ ಸನ್ನಿವೇಶಗಳನ್ನು ಹತ್ತಕ್ಕೂ ಹೆಚ್ಚು ಬಾರಿ ನೋಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಮತ್ತು ತಮ್ಮ ಆತ್ಮಸಾಕ್ಷಿಯನ್ನೂ ಒಪ್ಪಿಸಲು ಸೂಕ್ತವಾದ ಮಾರ್ಗವನ್ನು ಕಂಡುಕೊಂಡರು. ಇದೇ ಕೊನೆ, ಬಳಿಕ ಅವರ ಇಡಿಯ ಜೀವಮಾನದಲ್ಲಿಯೇ ಯಾವ ಚಿತ್ರದಲ್ಲಿಯೂ ಅವರು ಮದ್ಯದ ಅಥವಾ ಧೂಮಪಾನದ ಸನ್ನಿವೇಶಗಳನ್ನು ಒಪ್ಪಿಕೊಳ್ಳಲಿಲ್ಲ.

ಕನ್ನಡದ ಪ್ರಥಮ ವರ್ಣಚಿತ್ರದಿಂದ ವಂಚಿತರಾದ ಡಾ. ರಾಜ್
1964ರಲ್ಲಿ ಕನ್ನಡದ ಪ್ರಥಮ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿ ಚಿತ್ರ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಅಭಿನಯಿಸಿದ್ದರು. ಆದರೆ ಇದಕ್ಕೂ ಮೊದಲು ಡಾ. ರಾಜ್ ರವರೇ ಅಭಿನಯಿಸಬೇಕೆಂದು ನಿರ್ಧಾರವಾಗಿತ್ತು. ಆದರೆ ಕಡೆಯ ಘಳಿಗೆಯಲ್ಲಿ, ಅದೂ ಚಿತ್ರದ ಚಿತ್ರೀಕರಣಕ್ಕಾಗಿ ಮುಖಕ್ಕೆ ಬಣ್ಣ ಹಚ್ಚಿಕೊಂಡ ಬಳಿಕ ಡಾ. ರಾಜ್ ರಿಗೆ ಈ ಪಾತ್ರದಲ್ಲಿ ನೀವಲ್ಲ, ಕಲ್ಯಾಣ್ ಕುಮಾರ್ ಅಭಿನಯಿಸಲಿದ್ದಾರೆ ಎಂದು ನಿರ್ದೇಶಕ ಬಿ.ಎಸ್. ರಂಗಾರವರು ತಿಳಿಸಿದರು. ತಮಗೆ ಸಿಕ್ಕ ಅವಕಾಶದಿಂದ ವಂಚಿತ ಡಾ. ರಾಜ್ ನಿರಾಶೆಗೊಂಡರೂ ಈ ಪಾತ್ರಕ್ಕೆ ತಮಗಿಂತಲೂ ಸಮರ್ಥರಾಗಿ ಕಲ್ಯಾಣ ಕುಮಾರ್ ಅಭಿನಯಿಸುವರು ಎಂದು ಸಮಾಧಾನಪಟ್ಟುಕೊಂಡರು. ತಾನು ಕನ್ನಡದ ಪ್ರಥಮ ವರ್ಣಚಿತ್ರದ ಭಾಗವಾಗಿಲ್ಲ ಎಂಬುದು ಕೊನೆಯವರೆಗೂ ಅವರಿಗೊಂದು ಕೊರಗಾಗಿಯೇ ಉಳಿದಿತ್ತು.

ಡಾ. ರಾಜ್ ಬಗ್ಗೆ ಇನ್ನೂ ಹಲವು ಮಾಹಿತಿಗಳು
'ತಾಯಿಗೆ ತಕ್ಕ ಮಗ' ಚಿತ್ರ ನೋಡಲು ಉಂಟಾದ ನೂಕು ನುಗ್ಗಲಿನಲ್ಲಿ ಮೂವರ ಸಾವು. ಡಿ.8,1978ರಲ್ಲಿ ಬಿಡುಗಡೆಯಾದ ಚಿತ್ರವನ್ನು ನೋಡಲು 'ಸಂಜಯ್' ಚಿತ್ರಮಂದಿರದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿತ್ತು. ಈ ನೂಕುನುಗ್ಗಲಿನಲ್ಲಿ ಮೂವರು ದಾರುಣ ಸಾವನ್ನು ಕಂಡರು.

ಕರ್ನಾಟಕದಲ್ಲಿ ಗಾಂಧಿಗಿಂತಲೂ ಹೆಚ್ಚು ರಾಜ್ ರ ಪ್ರತಿಮೆಗಳಿವೆ
ಅಧಿಕೃತವಾಗಿ ಇಡಿಯ ಕರ್ನಾಟಕದಲ್ಲಿ ಎಂಟು ಗಾಂಧೀಜಿಯವರ ಪ್ರತಿಮೆಗಳಿದ್ದರೆ ಅಧಿಕೃತವಾಗಿ ಕರ್ನಾಟಕದಲ್ಲಿ ಡಾ. ರಾಜ್ ರವರ 58 ಪ್ರತಿಮೆಗಳಿವೆ. ಅನಧಿಕೃತವಾಗಿ ಎಷ್ಟಿವೆ ಎಂಬ ಲೆಕ್ಕವಿಲ್ಲ.

ಜೀವನ ಚೈತ್ರದ ಮದ್ಯಪಾನ ವಿರೋಧಿ ಚಳುವಳಿಯ ಪ್ರಭಾವ
ಮದ್ಯದ ಪ್ರಭಾವವನ್ನು ಬಿಂಬಿಸುವ ಜೀವನ ಚೈತ್ರ ಚಿತ್ರದ ಮೋಡಿಯಿಂದ ಬೆಳಗಾವಿಯ ಬಳಿಕ ಗ್ರಾಮವೊಂದರಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು.

1980ರಲ್ಲಿ ಡಾ. ರಾಜ್ ಅಭಿಮಾನಿಗಳ ಸಂಘದ ಸಂಖ್ಯೆ 4700
ಸಾ.ರಾ. ಗೋವಿಂದು ಅಧ್ಯಕ್ಷರಾಗಿದ್ದ ಡಾ. ರಾಜ್. ಅಭಿಮಾನಿಗಳ ಸಂಘಟನೆಗಳ ಒಕ್ಕೂಟದಲ್ಲಿ 4700ಕ್ಕೂ ಹೆಚ್ಚು ಸಂಘಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದವು.

ಹಾಲು ಜೇನು ಚಿತ್ರದ ಕಟೌಟ್ ಎತ್ತರ ಎಪ್ಪತ್ತು ಅಡಿ
ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ಸಂತೋಷ್ ಚಿತ್ರಮಂದಿರದ ಎದುರು ನಿಲ್ಲಿಸಿದ್ದ ಸ್ತಬ್ದಚಿತ್ರದ ಎತ್ತರ ಎಪ್ಪತ್ತು ಅಡಿ ಆಗಿತ್ತು. ಅಲ್ಲದೇ ಈ ಚಿತ್ರಕ್ಕೆ ಕ್ಷೀರಾಭಿಶೇಕವನ್ನೂ ಅಭಿಮಾನಿಗಳು ಮಾಡಿದ್ದರು. ಗೊಮ್ಮಟನ ವಿಗ್ರಹದ ಬಳಿಕ ಯಾವುದೇ ಚಿತ್ರನಟನ ಸ್ತಬ್ದಚಿತ್ರಕ್ಕೆ ಕ್ಷೀರಾಭಿಶೇಕ ಮಾಡಿದ್ದ ಪ್ರಥಮ ನಟ ಎಂಬ ಗೌರವಕ್ಕೆ ಡಾ. ರಾಜ್ ಪಾತ್ರರಾಗುತ್ತಾರೆ.

ಮೊದಲ ಬಿಡುಗಡೆಯಲ್ಲಿಯೇ 104ವಾರ ಓಡಿ ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ
ನೂಕು ನುಗ್ಗಲು ತಪ್ಪಿಸಲು ಬಿಡುಗಡೆಯ ದಿನಾಂಕವನ್ನೇ ಪ್ರಕಟಿಸಿದ ಚಿತ್ರರಂಗ ಡಾ. ರಾಜ್ ರವರ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಗೊತ್ತಾದರೇ ಬಿಡುಗಡೆಯಾಗುವ ಚಿತ್ರಮಂದಿರದ ಸುತ್ತಮುತ್ತ ಜನಜಂಗುಳಿಯೇ ಸುತ್ತುವರೆಯುತ್ತದೆ. ನೂಕುನುಗ್ಗಲಿನಲ್ಲಿ ಪ್ರಾಣಾಪಾಯವೂ ಉಂಟಾಗುವ ಭಯದಿಂದ ನಿರ್ಮಾಪಕರು ಚಿತ್ರ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುತ್ತಲೇ ಇರಲಿಲ್ಲ. ದಿಢೀರನೇ ಒಂದು ಶುಕ್ರವಾರ ಬಿಡುಗಡೆ ಮಾಡುತ್ತಿದ್ದರು. ಮರುದಿನ ಬಿಡುಗಡೆಯಾಗಿದೆ ಎಂದು ತಿಳಿದ ಜನರು ಚಿತ್ರಮಂದಿರಗಳತ್ತ ಧಾವಿಸುತ್ತಿದ್ದರೂ ಪ್ರಾಣಾಪಾಯದಷ್ಟು ನೂಕು ನುಗ್ಗಲು ಉಂಟಾಗುತ್ತಿರಲಿಲ್ಲ.

ನೂಕು ನುಗ್ಗಲು ತಪ್ಪಿಸಲು ಬಿಡುಗಡೆಯ ದಿನಾಂಕವನ್ನೇ ಪ್ರಕಟಿಸಿದ ಚಿತ್ರರಂಗ
ಡಾ. ರಾಜ್ ರವರ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಗೊತ್ತಾದರೇ ಬಿಡುಗಡೆಯಾಗುವ ಚಿತ್ರಮಂದಿರದ ಸುತ್ತಮುತ್ತ ಜನಜಂಗುಳಿಯೇ ಸುತ್ತುವರೆಯುತ್ತದೆ. ನೂಕುನುಗ್ಗಲಿನಲ್ಲಿ ಪ್ರಾಣಾಪಾಯವೂ ಉಂಟಾಗುವ ಭಯದಿಂದ ನಿರ್ಮಾಪಕರು ಚಿತ್ರ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುತ್ತಲೇ ಇರಲಿಲ್ಲ. ಧಿಡೀರನೇ ಒಂದು ಶುಕ್ರವಾರ ಬಿಡುಗಡೆ ಮಾಡುತ್ತಿದ್ದರು. ಮರುದಿನ ಬಿಡುಗಡೆಯಾಗಿದೆ ಎಂದು ತಿಳಿದ ಜನರು ಚಿತ್ರಮಂದಿರಗಳತ್ತ ಧಾವಿಸುತ್ತಿದ್ದರೂ ಪ್ರಾಣಾಪಾಯದಷ್ಟು ನೂಕು ನುಗ್ಗಲು ಉಂಟಾಗುತ್ತಿರಲಿಲ್ಲ.

ಅಭಿಮಾನಿಗಳ ಒತ್ತಡಕ್ಕೆ ಮಣಿದು ಚಿತ್ರಕಥೆಯನ್ನೇ ಬದಲಿಸಬೇಕಾಗಿ ಬಂದ 'ಬಿಡುಗಡೆ'
ಅಣ್ಣಾವ್ರ ಇನ್ನೊಂದು ಯಶಸ್ವಿ ಚಿತ್ರವಾದ 'ಬಿಡುಗಡೆ'ಯಲ್ಲಿ ಡಾ. ರಾಜ್ ತನ್ನ ತಂದೆಗೆ ನೀಡಿದ ಮರಣದಂಡನೆಯ ವಿರುದ್ಧ ಸೆಣೆಸುವ ವಕೀಲನ ಪಾತ್ರವನ್ನು ಅಭಿನಯಿಸಿದ್ದರು. ಮೂಲ ಕಥೆಯ ಪ್ರಕಾರ ಬಿಡುಗಡೆಯಾದ ಚಿತ್ರದ ಅಂತಿಮ ಹಂತದಲ್ಲಿ ಡಾ. ರಾಜ್ ನ್ಯಾಯದ ಎದುರು ಸೋಲೊಪ್ಪಿಕೊಂಡು ತಂದೆಯ ಮರಣದಂಡನೆಯನ್ನು ಎದುರಿಸುವ ಸನ್ನಿವೇಶವಿದೆ. ಆದರೆ ಡಾ. ರಾಜ್ ರ ಸೋಲನ್ನು ಒಪ್ಪಿಕೊಳ್ಳದ ಜನತೆ ಈ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದರು. ಅನಿವಾರ್ಯವಾಗಿ ಚಿತ್ರವನ್ನು ಹಿಂದಕ್ಕೆ ಪಡೆದ ನಿರ್ದೇಶಕ ವೈ.ಆರ್.ಸ್ವಾಮಿ ಚಿತ್ರಕಥೆಯಲ್ಲಿ ಕೊಂಚ ಬದಲಾವಣೆ ಮಾಡಿ ಡಾ. ರಾಜ್ ರವರು ತಮ್ಮ ವಾದವನ್ನು ಗೆದ್ದಂತೆ ಮತ್ತು ಮರಣದಂಡನೆಯಿಂದ ತಂದೆಯನ್ನು ಮುಕ್ತಿಗೊಳಿಸಿದಂತೆ ಮರುಚಿತ್ರೀಕರಿಸಿ ಬಿಡುಗಡೆಗೊಳಿಸಿದರು. ಇಡಿಯ ಭಾರತದಲ್ಲಿಯೇ ಈ ಪರಿಯಾಗಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ಚಿತ್ರಕಥೆಯನ್ನೇ ಬದಲಿಸಿದ ನಿರ್ದೇಶನ ಇನ್ನೊಂದಿಲ್ಲ.



Click it and Unblock the Notifications


