ಹೈದರಾಬಾದ್‍ನ 10 ಆಕರ್ಷಣೆಯ ಸ್ಥಳಗಳು

By Deepak M

ಹೈದರಾಬಾದ್‍ ನಿಜಾಮರ ನಗರ, ಮುತ್ತಿನ ನಗರಿ ಮತ್ತು ಹೈಟೆಕ್ ಸಿಟಿ ಎಂದೆಲ್ಲ ಕರೆಯಲ್ಪಡುವ ಈ ನಗರವು ದಕ್ಷಿಣ ಭಾರತದ ಖ್ಯಾತ ನಗರಗಳಲ್ಲಿ ಒಂದು. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುವ ಈ ನಗರದಲ್ಲಿ ಮಾತನಾಡುವ ಭಾಷೆಯಲ್ಲಿ ಪರ್ಷಿಯನ್ ಭಾಷೆಯ ಸೊಗಡನ್ನು ಮತ್ತು ಸಂಸ್ಕೃತಿಯನ್ನು ಕಾಣಬಹುದು. ಹಿಂದಿಯನ್ನು ವ್ಯವಹಾರ ಭಾಷೆಯಾಗಿ ಬಳಸಬಹುದಾದ ನಗರಗಳಲ್ಲಿ ಹೈದರಾಬಾದ್ ಸಹ ಒಂದು.

ಮೊಘಲರ ಪರಂಪರೆಯಲ್ಲಿ ಬೆಳೆದು ಬಂದ ನಿಜಾಮರು ಈ ನಗರವನ್ನು ಆಳಿದ್ದರು. ಇದರಿಂದಾಗಿಯೇ ಹೈದರಾಬಾದ್‍ ಉತ್ತರ ಮತ್ತು ದಕ್ಷಿಣ ಭಾರತದ ಎರಡೂ ಸಂಸ್ಕೃತಿಗಳ ಸಮ್ಮಿಲನವನ್ನು ನೋಡಬಹುದು.
ಈ ನಗರದ ಭಾಷೆ, ಆಹಾರ ಮತ್ತು ವಾಸ್ತುಶಿಲ್ಪ ಮುಂತಾದವುಗಳಲ್ಲಿ ಸಂಸ್ಕೃತಿಯ ಸೌಂದರ್ಯವು ನಮ್ಮನ್ನು ಸೆಳೆಯುತ್ತದೆ. ಹೈದರಬಾದ್‍ನಲ್ಲಿ ಎರಡು ಅದ್ಭುತ ವಾಸ್ತುಶಿಲ್ಪಗಳು ನಮ್ಮನ್ನು ಆಕರ್ಷಿಸುತ್ತವೆ. ಅದರಲ್ಲಿ ಒಂದು ಚಾರ್‌ಮಿನಾರ್, ಮತ್ತೊಂದು ಗೊಲ್ಕೊಂಡಾ ಕೋಟೆ.

ಇದರ ಜೊತೆಗೆ ನೀವು ಹೈದರಬಾದ್‍ಗೆ ಹೋದಾಗ ಸಲಾರ್ ಜಂಗ್ ವಸ್ತುಸಂಗ್ರಹಾಲಯವನ್ನು ನೋಡಲು ಮರೆಯಬಾರದು. ಇದು ಭಾರತದ ಅತ್ಯುತ್ತಮ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಹೈದರಬಾದ್ ಪ್ರವಾಸದಲ್ಲಿ ಆಹಾರವು ಅತ್ಯಂತ ಮುಖ್ಯವಾದ ವಿಷಯವಾಗಿರುತ್ತದೆ. ಹೈದರಬಾದ್‍ಗೆ ಹೋಗಿ ಅಲ್ಲಿನ ಬಿರಿಯಾನಿಯನ್ನು ತಿನ್ನದೆ ಬಂದರೆ ಹೇಗೆ? ಏಕೆಂದರೆ ಹೈದರಬಾದಿ ಬಿರಿಯಾನಿ ಮತ್ತು ಕಬಾಬ್‍ಗಳು ಹೈದರಬಾದ್‍ನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ.

ಒಂದು ವೇಳೆ ನೀವು ಸಂಜೆಗಳಲ್ಲಿ ವಿಶ್ರಾಂತಿಯನ್ನು ಬಯಸಿದಲ್ಲಿ ಹುಸೇನ್ ಸಾಗರ್ ನಿಮಗೆ ಹೇಳಿ ಮಾಡಿಸಿದ ಸ್ಥಳವಾಗಿರುತ್ತದೆ. ಇಲ್ಲಿ ನಾವು ನಿಮಗಾಗಿ ಹೈದರಬಾದ್‍ ಪ್ರವಾಸದ ಪೈಸಾ ವಸೂಲ್ ಮಾಡಿಕೊಳ್ಳುವ ಬಗೆಯನ್ನು ವಿವರಿಸುತ್ತಿದ್ದೇವೆ. ಇದನ್ನು ಓದಿ ತಿಳಿದುಕೊಳ್ಳಿ, ಹೈದರಬಾದ್‍ಗೆ ಹೋದಾಗ ತಪ್ಪದೆ ಇವುಗಳನ್ನು ನೋಡಿ.

ಚಾರ್‌ಮಿನಾರ್

ಚಾರ್‌ಮಿನಾರ್

ಚಾರ್‌ಮಿನಾರ್ ಹೈದರಬಾದ್‍ನ ಹೆಗ್ಗುರುತುಗಳಲ್ಲಿ ಒಂದು. ಲಾಡ್ ಬಜಾರಿನಲ್ಲಿರುವ ಓಲ್ಡ್ ಸಿಟಿ ಪ್ರಾಂತ್ಯದ ಹೃದಯ ಭಾಗದಲ್ಲಿ ಈ ಕಟ್ಟಡವು ಎದ್ದು ನಿಂತಿದೆ. ನಿಮಗೆ ಕುರುಕಲು ತಿಂಡಿಗಳನ್ನು ತಿನ್ನುವ ಬಯಕೆಯಿದ್ದಲ್ಲಿ ಚಾರ್‌ಮಿನಾರ್ ಸಮೀಪ ನಿಮ್ಮ ತಿನ್ನುವ ಚಪಲವನ್ನು ತೀರಿಸಿಕೊಳ್ಳಬಹುದು. ಇದರ ಜೊತೆಯಲ್ಲಿ ಈ ಸ್ಥಳದಲ್ಲಿ ಹಲವಾರು ಅಗ್ಗದ ಮನೋರಂಜನೆಗಳು ಸಹ ನಿಮಗೆ ದೊರೆಯುತ್ತವೆ.

ಗೋಲ್ಕೊಂಡಾ ಕೋಟೆ

ಗೋಲ್ಕೊಂಡಾ ಕೋಟೆ

ಗೋಲ್ಕೊಂಡಾ ಕೋಟೆಯನ್ನು ನಿರ್ಮಿಸಿದವನು ಇಬ್ರಾಹಿಂ ಖುಲಿ ಖುತುಬ್ ಷಾಹ್ ವಾಲಿ. ಈತನ ನಂತರ ಸುಮಾರು ರಾಜರು ಈ ಕೋಟೆಯ ಮೇಲೆ ಒಡೆತನವನ್ನು ಹೊಂದಿದ್ದರು. ಈ ಕೋಟೆಯ ತನ್ನ ಪ್ರಾಚ್ಯ ವಾಸ್ತುಶಿಲ್ಪದ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಹಿಂದಿನ ಕಾಲದಲ್ಲಿ ವಜ್ರಗಳ ಅಗರವಾಗಿದ್ದ ಈ ಕೋಟೆಯು ಇಂದು ಧ್ವನಿ ಬೆಳಕಿನ ಪ್ರದರ್ಶನದ ಆಕರ್ಷಣೆಯನ್ನು ಹೊಂದಿದ್ದು, ಹೈದರಬಾದ್‍ಗೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗನನ್ನು ತನ್ನತ್ತ ಆಕರ್ಷಿಸುತ್ತಿದೆ. ಅಮಿತಾಬ್ ಬಚ್ಚನ್ ಧ್ವನಿಯಲ್ಲಿ ಮೂಡಿ ಬಂದಿರುವ ಧ್ವನಿ ಬೆಳಕಿನ ಪ್ರದರ್ಶನ ಹೈದರಬಾದ್‍ನಲ್ಲಿ ನೋಡಲೆ ಬೇಕಾದ ಅಂಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಸಲಾರ್ ಜಂಗ್ ವಸ್ತು ಸಂಗ್ರಹಾಲಯ

ಸಲಾರ್ ಜಂಗ್ ವಸ್ತು ಸಂಗ್ರಹಾಲಯ

ಸಲಾರ್ ಜಂಗ್ ವಸ್ತು ಸಂಗ್ರಹಾಲಯವು ಒಬ್ಬ ಖಾಸಗಿ ವ್ಯಕ್ತಿಯ ಆಸಕ್ತಿಯಿಂದ ಜನ್ಮ ತಳೆದ ವಸ್ತು ಸಂಗ್ರಹಾಲಯವಾಗಿದೆ. ಮೂರನೆ ನವಾಬ್ ಯೂಸುಫ್ ಅಲಿ ಖಾನ್ ಸಲಾರ್ ಜಂಗ್ ನಿಜಾಮರ ಪ್ರಧಾನ ಮಂತ್ರಿಯಾಗಿದ್ದ ಈತನೇ ಈ ವಸ್ತು ಸಂಗ್ರಹಾಲಯದ ರೂವಾರಿ. ಇದು ಭಾರತದ ಮೂರನೆ ಅತಿ ದೊಡ್ಡ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಲ್ಲಿ ನೀವು ಔರಂಗಜೇಬನ ಖಡ್ಗ, ರವಿ ವರ್ಮನ ವರ್ಣಚಿತ್ರಗಳು ಮತ್ತು "ವೈಲೆಡ್ ರೆಬೆಕಾ"ಳ ವಿಗ್ರಹವನ್ನು ಸಹ ನಾವು ಇಲ್ಲಿ ನೋಡಬಹುದು.

ಹುಸೇನ್ ಸಾಗರ್ ಸರೋವರ

ಹುಸೇನ್ ಸಾಗರ್ ಸರೋವರ

ಹಚ್ಚ ಹಸಿರಿನಿಂದ ಕೂಡಿದ ಹುಲ್ಲು ಹಾಸುಗಳಿಂದ ಸುತ್ತುವರಿದ ಹುಸೇನ್ ಸಾಗರ್ ಸರೋವರವು ಸಂಜೆಗಳನ್ನು ಏಕಾಂತದಲ್ಲಿ ಕಳೆಯಲು ಬಯಸುವವರಿಗಾಗಿ ಹೇಳಿ ಮಾಡಿಸಿದ ಸ್ಥಳವಾಗಿದೆ. ಟ್ಯಾಂಕ್ ಬಂಡ್‌ನ ಮಧ್ಯಭಾಗದಲ್ಲಿ ಆಕಾಶಕ್ಕೆ ಚಾಚಿಕೊಂಡಂತೆ ನಿಲ್ಲಿಸಲಾಗಿರುವ ಗೌತಮ ಬುದ್ಧನ ಬಿಳಿಯ ಅಮೃತ ಶಿಲೆಯ ವಿಗ್ರಹವು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಫಲಕ್‌ನುಮ ಅರಮನೆ

ಫಲಕ್‌ನುಮ ಅರಮನೆ

ಫಲಕ್ನುಮ ಅರಮನೆಯು ಹೈದರಬಾದ್‍ನ ಹಳೆಯ ವಾಸ್ತುಶಿಲ್ಪವನ್ನು ನಮಗೆ ಪರಿಚಯಿಸಲು ಉಳಿದಿರುವ ಒಂದು ಅದ್ಭುತವಾದ ಕಟ್ಟಡವಾಗಿದೆ. ಗತ ಕಾಲದ ವೈಭವವನ್ನು ತನ್ನ ಸೌಂದರ್ಯದ ಮೂಲಕವೇ ಸಾರುವ ಈ ಸುಂದರ ಕಟ್ಟಡವು ಚಾರ್‌ಮಿನಾರ್‌ನಿಂದ ಕೇವಲ 5 ಕಿ.ಮೀ ದೂರದಲ್ಲಿದೆ.

ಪ್ಯಾರಡೈಸ್

ಪ್ಯಾರಡೈಸ್

ನೀವು ತಿಂಡಿ ಪೋತರೇ!, ಹಾಗಾದರೆ ನಿಮಗೆ ಹೈದರಬಾದ್‍ನಲ್ಲಿರುವ ಪ್ಯಾರಡೈಸ್ ನಿಜಕ್ಕು ಪ್ರಧಾನ ಆಕರ್ಷಣೆಯಾಗಿ ಕಾಣುತ್ತದೆ. ಹೈದರಬಾದಿ ಬಿರಿಯಾನಿ ಮತ್ತು ಚೋಟಿ-ಬೋಟಿ ಕಿಬಾಬ್‍ಗಳನ್ನು ತಿಂದು ನಿಮ್ಮ ರುಚಿ ಗ್ರಂಥಿಗಳಿಗೆ ಹಬ್ಬವನ್ನುಂಟು ಮಾಡಲು ನೀವು ತಪ್ಪದೇ ಇಲ್ಲಿಗೆ ಭೇಟಿ ನೀಡಬೇಕು.

ಮೆಕ್ಕಾ ಮಸೀದಿ

ಮೆಕ್ಕಾ ಮಸೀದಿ

ಮೆಕ್ಕಾ ಮಸೀದಿಯು ಭಾರತದ ಅತಿದೊಡ್ಡ ಮಸಿದಿಗಳಲ್ಲಿ ಒಂದಾಗಿದೆ. ಈ ಮಸೀದಿಯ ವಿಶೇಷತೆಯೇನೆಂದರೆ ಈ ಮಸೀದಿಯನ್ನು ಕಟ್ಟಲು ಬಳಸಿರುವ ಇಟ್ಟಿಗೆಗಳನ್ನು ಪವಿತ್ರ ನಗರಿ ಮೆಕ್ಕಾದಿಂದ ತಂದ ಮಣ್ಣಿನಿಂದ ತಯಾರಿಸಲಾಗಿದೆ. ಹಾಗಾಗಿ ಇದು ಭಾರತದ ಇಸ್ಲಾಂ ಧರ್ಮದವರಿಗೆ ಅತ್ಯಂತ ಪವಿತ್ರವಾದ ಮಸೀದಿಯಾಗಿ ಗುರುತಿಸಲ್ಪಟ್ಟಿದೆ.

ಚೌಮಹಲ್ಲ ಅರಮನೆ

ಚೌಮಹಲ್ಲ ಅರಮನೆ

ನೋಡಲು ವಿಶಾಲವಾಗಿರುವ ಮತ್ತು ಅಷ್ಟೇ ವರ್ಣರಂಜಿತವಾದ ಈ ಅರಮನೆಯು ಹೈದರಬಾದಿನ ನಿಜಾಮರ ಅಧಿಕೃತ ನಿವಾಸವಾಗಿತ್ತು. ಚೌಮಹಲ್ಲ ಅರಮನೆಯು ತನ್ನ ವೈಭವದ ದಿನಗಳಲ್ಲಿ ಹಲವಾರು ಸಮಾರಂಭಗಳನ್ನು ಕಂಡಿದೆ. ಅದರಲ್ಲೂ ಬ್ರಿಟಿಷರ ಅವಧಿಯಲ್ಲಿ ಇಲ್ಲಿ ವಿದೇಶಿಯರ ಸಭೆ-ಸಮಾರಂಭಗಳು ಇಲ್ಲಿ ಸಾಮಾನ್ಯವಾಗಿತ್ತು.

ಹೈದರಬಾದ್ ವಿಮಾನ ನಿಲ್ದಾಣ

ಹೈದರಬಾದ್ ವಿಮಾನ ನಿಲ್ದಾಣ

ಹೈದರಬಾದ್ ವಿಮಾನ ನಿಲ್ದಾಣವು ಭಾರತದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಬಾಸ್ಕೆಟ್ ಬಾಲ್ ಅಂಗಣವನ್ನು ಒಳಗೊಂಡಂತೆ! ಎಲ್ಲಾ ಆಧುನಿಕ ಸೌಲಭ್ಯಗಳೆಲ್ಲವನ್ನು ತನ್ನಲ್ಲಿ ಅಡಗಿಸಿಕೊಂಡು ಬೆಳೆಯುತ್ತಿದೆ.

ಮುತ್ತುಗಳು

ಮುತ್ತುಗಳು

ಹೈದರಬಾದ್ ಭಾರತದ ಮುತ್ತಿನ ರಾಜಧಾನಿ ಎಂದು ಕರೆಯಬಹುದು. ಮುತ್ತಿನ ನಗರಿ ಇದರ ಅನ್ವರ್ಥ ನಾಮ. ನಗರದ ಹೊರವಲಯದಲ್ಲಿರುವ ಚಂದನ್‍ಪೇಟ್ ದಿಬ್ಬದಲ್ಲಿ ಈ ಮುತ್ತುಗಳಿಂದ ಆಭರಣಗಳನ್ನು ತಯಾರಿಸಲಾಗುತ್ತದೆ. ಹೈದರಬಾದ್‍ನ ನೆನಪುಗಳನ್ನು ಸದಾ ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬೇಕೆಂಬ ಬಯಕೆ ನಿಮಗಿದ್ದಲ್ಲಿ ಇಲ್ಲಿಂದ ಹೊರಡುವ ಮೊದಲು ಕೆಲವು ಮುತ್ತುಗಳನ್ನು ಅಥವಾ ಮುತ್ತಿನ ಹಾರವನ್ನು ಖರೀದಿಸಿ.

X
Desktop Bottom Promotion