AirPods ಬಳಕೆದಾರರೇ ಹುಷಾರ್! ಮೇಕಪ್ ಆರ್ಟಿಸ್ಟ್ ಕಿವಿ ಡಮಾರ್.. ನೋಡಿ ಏನಾಯ್ತು

ಏರ್‌ಪಾಡ್ಸ್ ಬಳಕೆದಾರರೇ ಎಚ್ಚರ! ಇಯರ್​ಫೋನ್​, ಇಯರ್​ಬಡ್ಸ್ ಅತಿಯಾದ ಬಳಕೆ ಕಿವುಡುತನಕ್ಕೆ ಕಾರಣವಾಗಬಹುದು. ಹೌದು, ಏರ್‌ಪಾಡ್‌ಗಳು (AirPods) ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಭಾಗವಾಗಿವೆ. ಮಕ್ಕಳು ಮತ್ತು ವೃದ್ಧರು ಗಂಟೆಗಳ ಕಾಲ ಏರ್‌ಪಾಡ್‌ಗನ್ನು ಬಳಸುತ್ತಿದ್ದಾರೆ. ಕೆಲಸದ ಸಮಯದಲ್ಲಿ ಕಾಲ್‌ಗಳಿಂದ ಹಿಡಿದು ವ್ಯಾಯಾಮದವರೆಗೆ, ಇವು ಜನರ ಕಿವಿಯಲ್ಲಿಯೇ ಇರುತ್ತವೆ. ಆದರೆ, ಅವುಗಳನ್ನು ದೀರ್ಘಕಾಲದವರೆಗೆ ಬಳಸುವುದು ಅಪಾಯಕಾರಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ? ದೀರ್ಘಕಾಲದವರೆಗೆ ಏರ್‌ಪಾಡ್‌ಗಳನ್ನು ಬಳಸುವುದರಿಂದ ನೀವು ಕಿವುಡರಾಗಬಹುದು. ಇದನ್ನು ನಾವು ಹೇಳುತ್ತಿಲ್ಲ. ಆದರೆ, ಮೇಕಪ್ ಕಲಾವಿದೆಯೊಬ್ಬರು ತಮ್ಮ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ಇದರ ಟ್ರೆಂಡ್ ಕೂಡ ವೇಗವಾಗಿ ಹೆಚ್ಚಿದೆ. ಆಫೀಸ್ ಮೀಟಿಂಗ್‌ನಿಂದ ಹಿಡಿದು ಸ್ನೇಹಿತರೊಂದಿಗೆ ಮಾತನಾಡುವುದು, ವಿಡಿಯೋ, ಚಲನಚಿತ್ರ ಮತ್ತು ಸಾಂಗ್ ಕೇಳುವುದು ಸೇರಿದಂತೆ ನಿದ್ದೆ ಮಾಡುವಾಗಲೂ ಹಲವರು ಎರ್‌ಪಾಡ್ಸ್ ಬಳಸುತ್ತಾರೆ. ಆದರೆ, ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮೇಕಪ್ ಕಲಾವಿದೆ ಆರುಷಿ ಓಸ್ವಾಲ್ ತಮ್ಮ ಶ್ರವಣ (Ear damage) ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ. ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ತಮ್ಮ ಅನುಯಾಯಿಗಳಿಗೆ ಈ ವಾಸ್ತವವನ್ನು ನೆನಪಿಸಿದ್ದಾರೆ.

Arushi Oswal AirPods incident

ಅಸಲಿ ವಿಷಯ ಏನೆಂದು ಗೊತ್ತಾ?

ಪ್ರಸಿದ್ಧ ಮೇಕಪ್ ಕಲಾವಿದೆ ಮತ್ತು ಓಸೆಗ್ಲೋ ಇಂಡಿಯಾದ ಸಹ-ಸಂಸ್ಥಾಪಕಿ ಆರೂಷಿ ಅವರು ಸತತ ಎಂಟು ಗಂಟೆಗಳ ಕಾಲ ಏರ್‌ಪಾಡ್‌ಗಳನ್ನು ಧರಿಸಿದ್ದರು. ನಂತರ ತಮ್ಮ ಎಡ ಕಿವಿಯ ಶ್ರವಣ ಸಾಮರ್ಥ್ಯವು ಶೇ.45 ರಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ತನ್ನ ದಿನವು ಸಾಮಾನ್ಯ ದಿನದಂತೆ ಪ್ರಾರಂಭವಾಯಿತು. ನಂತರ ಆ ಅನುಭವವು ಆಸ್ಪತ್ರೆಗೆ ಬದಲಾಯಿತು ಎಂದು ತಿಳಿಸಿದ್ದಾರೆ. ಗುಣಮುಖರಾಗಲು ನೇರವಾಗಿ ಕಿವಿಗೆ ಸ್ಟೀರಾಯ್ಡ್ ಚುಚ್ಚುಮದ್ದು ಹಾಕಿಸಿಕೊಳ್ಳುವುದು ಒಂದೇ ಮಾರ್ಗ ಎಂದು ವೈದ್ಯರು ತಿಳಿಸಿದರು. ಅದು ಅತ್ಯಂತ ನೋವಿನ ಪ್ರಕ್ರಿಯೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಚೇತರಿಸಿಕೊಳ್ಳಲು ಒಂದು ವಾರ ಬೇಕಾಯಿತು

ಆರುಷಿ ಓಸ್ವಾಲ್ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವಾರ ತೆಗೆದುಕೊಂಡಿತು. ಈ ಘಟನೆಯನ್ನು ಹಂಚಿಕೊಂಡ ಅವರು, ಹೆಡ್‌ಫೋನ್‌ಗಳನ್ನು ಕಡಿಮೆ ಬಳಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಸಾಧ್ಯವಾದರೆ, ಬಳಸಲೇಬೇಡಿ ಎಂದು ಸಲಹೆ ನೀಡಿದ್ದಾರೆ. ಎಷ್ಟು ಸಮಯದವರೆಗೆ ಇಯರ್‌ಫೋನ್ ಅಥವಾ ಹೆಡ್‌ಫೋನ್ ಬಳಸುತ್ತೀರಿ ಎಂಬುದರ ಬಗ್ಗೆ ಗಮನವಿರಲಿ ಎಂದು ತಮ್ಮ ಫಾಲೋವರ್ಸ್‌ಗೆ ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಎಚ್ಚರಿಕೆ ಏನು?

ಆರೂಷಿ ಓಸ್ವಾಲ್ ಅವರ ಈ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತಜ್ಞರು ಸಹ ಎಚ್ಚರಿಸಿದ್ದಾರೆ. ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳನ್ನು ಅತಿಯಾಗಿ ಬಳಸುವುದರಿಂದ ಶಬ್ದದಿಂದ ಉಂಟಾಗುವ ಶ್ರವಣ ನಷ್ಟ (NIHL) ಉಂಟಾಗಬಹುದು ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಶಬ್ದದ ಮಟ್ಟವನ್ನು 70 dB ಗಿಂತ ಕಡಿಮೆ ಇರಿಸಿಕೊಳ್ಳಲು ಮತ್ತು ಒಂದು ಸಮಯದಲ್ಲಿ 60 ನಿಮಿಷಗಳಿಗಿಂತ ಹೆಚ್ಚು ಕಾಲ ಹೆಡ್‌ಫೋನ್‌ಗಳನ್ನು ಬಳಸದಂತೆ ಶಿಫಾರಸು ಮಾಡಿದೆ. ಆದರೂ, ಆರೂಷಿ ಓಸ್ವಾಲ್ ಅವರಂತೆ ಅನೇಕ ಬಳಕೆದಾರರು ದೀರ್ಘಕಾಲದವರೆಗೆ ಏರ್‌ಪಾಡ್ಸ್‌ಗಳನ್ನು ಧರಿಸುವುದರಿಂದ ಕಿವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇಯರ್‌ಫೋನ್ ಬಳಸುವಾಗ ಈ ವಿಷಯಗಳನ್ನು ನೆನಪಿಡಿ

ಇಯರ್‌ಫೋನ್ ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ.

• ನಿಧಾನವಾಗಿ ಮತ್ತು ಸೀಮಿತ ಅವಧಿಗೆ ಬಳಸಿ.

• ಒಂದು ಬಾರಿಗೆ 60 ನಿಮಿಷಗಳಿಗಿಂತ ಹೆಚ್ಚು ಧರಿಸಬೇಡಿ.

• ವಾಲ್ಯೂಮ್ ಅನ್ನು 60% ಕ್ಕಿಂತ ಹೆಚ್ಚು ಇಡಬೇಡಿ (60/60 ನಿಯಮ).

• ತುಂಬಾ ಜೋರಾಗಿ ಸಾಂಗ್ ಕೇಳುವುದು ಅಥವಾ ಕರೆಗಳನ್ನು ಮಾತನಾಡುವುದು ಕಿವಿಯ ನರಗಳಿಗೆ ಹಾನಿ ಉಂಟುಮಾಡಬಹುದು.

• ಇಯರ್‌ಫೋನ್‌ಗಳ ನಿಯಮಿತ ಶುಚಿಗೊಳಿಸುವಿಕೆ ಅತ್ಯಗತ್ಯ. ಅವುಗಳನ್ನು ವಾರಕ್ಕೆ 1-2 ಬಾರಿ ಸ್ವಚ್ಛಗೊಳಿಸಿ.

• ಕೊಳಕು ಇಯರ್‌ಫೋನ್‌ಗಳಿಂದ ಕಿವಿಯಲ್ಲಿ ಬ್ಯಾಕ್ಟೀರಿಯಾದ ಸೋಂಕು ಉಂಟಾಗಬಹುದು.

• ಮಲಗುವಾಗ ಅಥವಾ ವ್ಯಾಯಾಮ ಮಾಡುವಾಗ ಇಯರ್‌ಫೋನ್‌ ಧರಿಸಬೇಡಿ. ಮಲಗುವಾಗ ಇಯರ್‌ಫೋನ್‌ಗಳನ್ನು ಬಳಸುವುದರಿಂದ ಕಿವಿಗೆ ಒತ್ತಡ ಉಂಟಾಗಬಹುದು.

• ವ್ಯಾಯಾಮ ಮಾಡುವಾಗ ವೈರ್‌ಲೆಸ್ ಇಯರ್‌ಫೋನ್‌ ಬೀಳುವ ಅಥವಾ ಕಿವಿಯಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ.

• ಬೇರೆಯವರ ಇಯರ್‌ಫೋನ್‌ಗಳನ್ನು ಬಳಸಬೇಡಿ ಅಥವಾ ನೀಡಬೇಡಿ. ಏಕೆಂದರೆ, ಇದು ಬ್ಯಾಕ್ಟೀರಿಯಾವನ್ನು ವರ್ಗಾಯಿಸಬಹುದು.

• ಕಳಪೆ ಗುಣಮಟ್ಟದ ಏರ್‌ಪಾಡ್‌ಗಳಿಂದ ವಿದ್ಯುತ್ ಆಘಾತ ಅಥವಾ ಜೋರಾದ ಧ್ವನಿಯಿಂದ ಹಾನಿಯಾಗಬಹುದು.

ಏರ್‌ಪಾಡ್‌ಗಳ ಅತಿಯಾದ ಬಳಕೆಯು ಶ್ರವಣ ದೋಷಕ್ಕೆ ಕಾರಣವಾಗಬಹುದು. ಆದ್ದರಿಂದ, ಇವುಗಳ ಬಳಕೆಯಲ್ಲಿ ಜಾಗರೂಕರಾಗಿರುವುದು ಮತ್ತು ತಜ್ಞರ ಸಲಹೆಗಳನ್ನು ಪಾಲಿಸುವುದು ಮುಖ್ಯ.

English summary

AirPods users careful! Makeup artist Aarushi Oswal suffers 45 hearing loss after using wireless earphones for hours

AirPods users careful! Makeup artist Aarushi Oswal suffers 45 hearing loss after using wireless earphones for hours
Story first published: Sunday, June 22, 2025, 14:30 [IST]
X
Desktop Bottom Promotion