ಮಹಿಳೆಯರಿಗೆ ಸ್ಮಾರ್ಟ್‌ಫೋನ್ ಬಳಕೆ ನಿಷೇಧಿಸಿದ 15 ಹಳ್ಳಿಗಳು! ಈ ನಿರ್ಧಾರ ಏಕೆ ಗೊತ್ತಾ?

ಈಗ ಸ್ಮಾರ್ಟ್ ಫೋನ್ ಬಳಸದೆ ಇರುವ ಜನರನ್ನು ನೀವು ಹುಡುಕುವುದು ಕೂಡ ಕಷ್ಟ. ನೀವು ವಿದ್ಯುತ್ ತಲುಪದ ಹಳ್ಳಿಗೆ ಹೋದರೂ ಸಹ ಅಲ್ಲಿಯೂ ಸ್ಮಾರ್ಟ್ ಫೋನ್ ಬಳಸುವವರು ಇರುತ್ತಾರೆ. ಈಗ ಬಹಳ ಕಡಿಮೆ ಬೆಲೆಯ ಫೋನ್‌ಗಳು ಸಿಗುವ ಕಾರಣ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಕಾಣಬಹುದು. ಆದ್ರೆ ಸ್ಮಾರ್ಟ್‌ಫೋನ್ ಬಳಕೆಯಿಂದ ಎಷ್ಟೊಂದು ಹಾನಿ ಇದೆ ಎಂಬುದನ್ನ ಸಹ ನಾವು ಹಲವು ಘಟನೆಗಳ ಆಧಾರದಲ್ಲಿ ನೋಡಬಹುದು.

ಅದ್ರಲ್ಲೂ ಸ್ಮಾರ್ಟ್ ಫೋನ್ ಅತೀಯಾಗಿ ಬಳಸುವುದು ದೃಷ್ಟಿದೋಷದಿಂದ ಹಿಡಿದು ದೊಡ್ಡ ಅನಾರೋಗ್ಯ ಸಮಸ್ಯೆಗಳ ತರಬಹುದು. ಹಾಗೆ ಮಕ್ಕಳ ಕೈಗೆ ಮೊಬೈಲ್ ಸಿಕ್ಕರಂತು ಅವರು ಓದಿನತ್ತ ಗಮನ ನೀಡದೆ ಮೊಬೈಲ್‌ ಬಳಕೆಯಲ್ಲಿಯೇ ಮುಳುಗಿರುತ್ತಾರೆ. ಇಂತಹ ಸಮಸ್ಯೆಗಳಿಂದ ಹೊರ ಬರುವ ಉದ್ದೇಶದಿಂದ ಹಲವು ರೀತಿ ಕ್ರಮಗಳ ಪಾಲಿಸುವುದು ನೋಡಬಹುದು.

15 Villages Have Banned Women From Using Smartphones

ಆದರೆ ಇಲ್ಲೊಂದು ಕಡೆ ಮಹಿಳೆಯರಿಗೆ ಸ್ಮಾರ್ಟ್ ಬಳಸುವುದನ್ನೇ ನಿಷೇಧಿಸಲಾಗಿದೆ. ಹೌದು ರಾಜಸ್ಥಾನದ ಹಳ್ಳಿಯೊಂದರಲ್ಲಿ ಈ ರೀತಿಯ ವಿಚಿತ್ರ ನಿರ್ಧಾರಕ್ಕೆ ಬರಲಾಗಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿನ ಪಂಚಾಯತ್ ನಿರ್ಧಾರವೊಂದು ಚರ್ಚೆಗೆ ಗ್ರಾಸವಾಗಿದೆ. ಸ್ಮಾರ್ಟ್ ಇಂಡಿಯಾ ಯುಗದಲ್ಲಿ, 15 ಹಳ್ಳಿಗಳ ಮಹಿಳೆಯರು ಕ್ಯಾಮೆರಾಗಳೊಂದಿಗೆ ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಪಂಚಾಯತ್ ನಿಯಮಗಳ ಪ್ರಕಾರ ಮಹಿಳೆಯರು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅನುಮತಿಸಲಾಗುವುದು. ಕೆಲವರು ಈ ನಿರ್ಧಾರವನ್ನು ಸಾಮಾಜಿಕ ಘನತೆ ಮತ್ತು ಕುಟುಂಬದ ಸುರಕ್ಷತೆಯ ವಿಷಯವೆಂದು ಪರಿಗಣಿಸಲಾಗಿದೆಯಂತೆ. ಆದ್ರೆ ಇದು ಸಂವಿಧಾನ ಮತ್ತು ಮಹಿಳಾ ಹಕ್ಕುಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ನವವಿವಾಹಿತರಾಗಲಿ ಅಥವಾ ಮಹಿಳೆಯರಾಗಲಿ ಎಲ್ಲರೂ ಇಂಟರ್ನೆಟ್ ಹೊಂದಿರುವ ಮೊಬೈಲ್ ಫೋನ್‌ಗಳಿಂದ ದೂರವಿರಬೇಕಾಗುತ್ತದೆ. ಹಾಗೆ ಕೀಪ್ಯಾಡ್ ಫೋನ್ ಮಾತ್ರ ಬಳಸುವಂತೆ ಹೇಳಲಾಗಿದೆ. ಜಾಲೋರ್ ಜಿಲ್ಲೆಯ ಸುಂಧಮಾತಾ ಪಟ್ಟಿಯ ಚೌಧರಿ ಸಮುದಾಯ ಪಂಚಾಯತ್ 15 ಹಳ್ಳಿಗಳಲ್ಲಿ ಸೊಸೆಯಂದಿರು ಮತ್ತು ಹೆಣ್ಣುಮಕ್ಕಳು ಇನ್ನು ಮುಂದೆ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಳಸುವಂತಿಲ್ಲ ಎಂದು ಪಂಚಾಯತಿ ನಿರ್ಧಾರ ಪ್ರಕಟಿಸಿದೆ. ಈ ಆದೇಶವು ಜನವರಿ 26ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಇದಿಷ್ಟೇ ಅಲ್ಲ ಮಹಿಳೆಯರು ಸಾರ್ವಜನಿಕ ಕಾರ್ಯಕ್ರಮಗಳು, ಮದುವೆಗಳು ಅಥವಾ ಸಾಮಾಜಿಕ ಕೂಟಗಳಿಗೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ, ಜೊತೆಗೆ ಅವರು ತಮ್ಮ ನೆರೆಹೊರೆಯವರ ಮನೆಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯುವುದನ್ನು ಸಹ ನಿಷೇಧಿಸಲಾಗಿದೆ.

ಪಂಚಾಯತ್ ಪ್ರಕಾರ ಮಹಿಳೆಯರು ಸ್ಮಾರ್ಟ್‌ಫೋನ್‌ಗಳ ಬದಲಿಗೆ ಕೀಪ್ಯಾಡ್ ಮೊಬೈಲ್ ಫೋನ್‌ಗಳನ್ನು ಮಾತ್ರ ಬಳಸಲು ಅನುಮತಿಸಲಾಗುವುದು ಎಂದು ಹೇಳಿದೆ. ಮನೆಯಲ್ಲಿ ಮೊಬೈಲ್ ಬಳಕೆಗೆ ಅಧ್ಯಯನಕ್ಕಾಗಿ ಮಾತ್ರ ಅವಕಾಶವಿದೆ. ವಿದ್ಯಾರ್ಥಿನಿಯರಿಗೆ ಅಧ್ಯಯನಕ್ಕೆ ಮೊಬೈಲ್ ಫೋನ್‌ಗಳು ಅಗತ್ಯವಿದ್ದರೆ, ಅವರು ಅವುಗಳನ್ನು ಮನೆಯೊಳಗೆ ಬಳಸಬಹುದು. ಆದರೆ ಫೋನ್ ಅನ್ನು ಮನೆಯ ಹೊರಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಪಂಚಾಯತ್‌ನಲ್ಲಿ ಕೈಗೊಂಡ ನಿರ್ಧಾರವನ್ನು ಗ್ರಾಮಸ್ಥರ ಮುಂದೆಯೇ ದೊಡ್ಡದಾಗಿ ಓದಿ ಅರ್ಥೈಸಲಾಗಿದೆ. ಮೊಬೈಲ್ ಫೋನ್‌ಗಳು ಮಕ್ಕಳ ದೃಷ್ಟಿಗೆ ಹಾನಿ ಮಾಡುತ್ತವೆ ಅದಕ್ಕಾಗಿಯೇ ನಿಷೇಧವನ್ನು ವಿಧಿಸಲಾಗಿದೆ. ಮಹಿಳೆಯರು ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದ ಅವುಗಳ ಅತಿಯಾದ ಬಳಕೆಗೆ ಕಾರಣವಾಗುತ್ತದೆ, ಇದು ಅವರ ದೃಷ್ಟಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಂಬಂಧಗಳ ಮೇಲೆಯೂ ಅದು ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ ಎಂದು ಕಾರಣ ನೀಡಲಾಗಿದೆ. ಜನವರಿಯಿಂದ ಈ ನಿಯಮಗಳನ್ನು ಕಡ್ಡಾಯವಾಗಿ ಸಂಬಂಧ ಪಟ್ಟವರು ಪಾಲಿಸಬೇಕು ಎಂದು ಹೇಳಲಾಗಿದೆ. ಹಾಗೆ ನಿಯಮ ಮುರಿದರೆ ಮುಂದಿನ ಪಂಚಾಯತಿಯಲ್ಲಿ ಅವರಿಗೆ ಶಿಕ್ಷೆ ವಿಧಿಸುವುದಾಗಿಯೂ ಹೇಳಲಾಗಿದೆ.

English summary

15 Villages Have Banned Women From Using Smartphones

A panchayat decision in Rajasthan's Jalore district has sparked debate. In the era of Smart India, women in 15 villages have been banned from using mobile phones with cameras.
Story first published: Wednesday, December 24, 2025, 19:20 [IST]
X
Desktop Bottom Promotion