For Quick Alerts
ALLOW NOTIFICATIONS  
For Daily Alerts

ತ್ಯಾಗ ಬಲಿದಾನದ ಪ್ರತೀಕವಾದ 'ಬಕ್ರೀದ್ ಹಬ್ಬದ' ವಿಶೇಷತೆ

By Arshad
|

ಮುಸ್ಲಿಮರಿಗೆ ಪವಿತ್ರವಾದ ಹಬ್ಬಗಳು ಎರಡೇ ಅಂದರೆ ಈದ್ ಉಲ್ ಫಿತ್ರ್ ಅಥವಾ ರಂಜಾನ್ ಹಬ್ಬ ಹಾಗೂ ಈದ್ ಅಲ್ ಅಧಾ (ಈದ್ ಉಲ್ ಧುಹಾ) ಅಥವಾ ಬಕ್ರೀದ್ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೆಯ ತಿಂಗಳಲ್ಲಿ ಒಂದು ತಿಂಗಳ ಉಪವಾಸ ಆಚರಣೆಯ ಬಳಿಕ ರಂಜಾನ್ ರಬ್ಬ ಆಚರಿಸಿದರೆ ಕಡೆಯ ತಿಂಗಳಾದ ದುಲ್ ಹಜ್ ನ ಹತ್ತನೆಯ ದಿನದಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.

ಮುಸ್ಲಿಮರಿಗೆ ಕಡ್ಡಾಯವಾದ ಐದು ಸ್ತಂಭಗಳಲ್ಲಿ ಒಂದಾದ ಪವಿತ್ರ ಹಜ್ ಯಾತ್ರೆ (ಜೀವನದಲ್ಲಿ ಕನಿಷ್ಟ ಒಂದು ಬಾರಿ ಆಚರಿಸಬೇಕಾದ ಕಡ್ಡಾಯವಿಧಿ) ದುಲ್ ಹಜ್ ಒಂಬತ್ತರಿಂದ ತೊಡಗಿ ಹನ್ನೊಂದನೇ ತಾರೀಖಿಗೆ ಸಂಪನ್ನಗೊಳ್ಳುತ್ತದೆ.

ವಿಶ್ವದಾದ್ಯಂತ ದುಲ್ ಹಜ್ ತಿಂಗಳ ಹತ್ತನೆಯ ದಿನ (ಚಂದ್ರದರ್ಶನವಾದ ಹತ್ತನೆಯ ದಿನ) ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆ ಕಾರಣವಾದ ಕಥೆಗೆ ನಾಲ್ಕು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಮಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹನಿಂದ ಅವರ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಯಿತು.

Traditions And Rituals Of Bakrid

ಅಲ್ಲಾಹನಿಗಾಗಿ ತಮ್ಮ ಏಕಮಾತ್ರ ಮತ್ತು ಅತ್ಯಂತ ಪ್ರೀತಿಪಾತ್ರ ಮಗನನ್ನೂ ಬಲಿಕೊಡಲು ಮುಂದಾದರು. ತಂದೆಯ ವಾಕ್ಯವನ್ನು ಪೂರ್ಣಗೊಳಿಸಲು ಇಸ್ಮಾಯಿಲರೂ ನಗುಮೊಗದಿಂದಲೇ ಸಾವಿಗೆ ಸಿದ್ಧರಾದರು. ಆದರೆ ಮಗನ ಕುತ್ತಿಗೆಯನ್ನು ಮುಟ್ಟಲೂ ಕತ್ತಿ ಅಸಮರ್ಥವಾಗುತ್ತದೆ. ಆಗ ಇಸ್ಮಾಯಿಲರು ತಂದೆಯಲ್ಲಿ ಹೀಗೆ ಹೇಳುತ್ತಾರೆ. ನಿಮಗೆ ಪುತ್ರವಾತ್ಸಲ್ಯ ಅಡ್ಡಿಯಾಗುತ್ತಿದೆ, ಆದ್ದರಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಿ ಎನ್ನುತ್ತಾರೆ. ಅಂತೆಯೇ ಬಟ್ಟೆ ಕಟ್ಟಿಕೊಂಡು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.

ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‌ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯ ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ. ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ.

ಬಕ್ರೀದ್ ಹಬ್ಬ ಎಂದರೆ ಕೇವಲ ಪ್ರಾಣಿಬಲಿ ಕೊಡುವ ಒಂದು ಕ್ರಿಯೆಯಲ್ಲ, ಇದರಲ್ಲಿ ತ್ಯಾಗ ಬಲಿದಾನಗಳ ಜೊತೆಗೇ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪ್ರವಾದಿಗಳು ಆಜ್ಞಾಪಿಸಿದ್ದಾರೆ. ಅಂತೆಯೇ ಹಬ್ಬದ ದಿನದಂದು ಸಾಧ್ಯವಾದಷ್ಟು ಜನರನ್ನು ಭೇಟಿಯಾಗಿ ಸಿಹಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದೂ ಒಂದು ಆಚರಣೆಯಾಗಿದೆ.

ಹೊಸ ಬಟ್ಟೆಕಡ್ಡಾಯವಾಗಿದೆ
ಈ ಎರಡೂ ಹಬ್ಬಗಳಂದು ಮುಸ್ಲಿಮರು ತಮ್ಮಲ್ಲಿರುವ ಅತ್ಯುತ್ತಮ ಉಡುಪುಗಳನ್ನು ತೊಡಬೇಕೆನ್ನುವುದು ಒಂದು ಕಡ್ಡಾಯವಾದ ಭಾಗವಾಗಿದೆ. ಆದ ಕಾರಣ ತಮಗೆ ಮತ್ತು ಇಡಿಯ ಕುಟುಂಬದವರಿಗೆ ಹೊಸ ಬಟ್ಟೆಗಳನ್ನು ಹೊಲಿಸಿ ಈ ದಿನ ಉಟ್ಟುಕೊಳ್ಳುವುದು ಸಹಾ ಸಂತೋಷವನ್ನು ಹೆಚ್ಚಿಸುವ ಕ್ರಿಯೆಯಾಗಿದೆ.
ಸಮಾಜದಲ್ಲಿರುವ ಎಲ್ಲಾ ವರ್ಗದ ಜನರೂ ಹೊಸಬಟ್ಟೆಗಳನ್ನು ತೊಡಲು ಸಾಧ್ಯವಾಗುವಂತೆ ಹಲವಾರು ಸಂಘಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಎಷ್ಟೇ ಬಡವರಾಗಿದ್ದರೂ ದಾನರೂಪದಲ್ಲಿ ಸಿಕ್ಕ ಬಟ್ಟೆಗಳನ್ನು ತೊಟ್ಟು ಸಮಾಜದಲ್ಲಿ ಎಲ್ಲರೊಂದಿಗೆ ನಗುಮೊಗದಿಂದ ಬೆರೆತು ಹಬ್ಬದ ಸಂತೋಷವನ್ನು ಅನುಭವಿಸಬಹುದಾಗಿದೆ.

ಹೆಣ್ಣುಮಕ್ಕಳ ಸಂತಸವನ್ನು ಹೆಚ್ಚಿಸುವ ಮದರಂಗಿ
ಹಬ್ಬದ ದಿನದಂದು ತಮ್ಮ ಕೈಗಳಿಗೆ ಮದರಂಗಿ ಹಚ್ಚಿ ಅಲಂಕರಿಸಿಕೊಳ್ಳುವುದನ್ನು ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಐಚ್ಛಿಕವಾಗಿಸಿದೆ. ಎಲ್ಲಾ ವರ್ಗದ ಜನರು ಮನೆಯಲ್ಲಿಯೇ ಅರೆದ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ರೂಪದ ಮದರಂಗಿಯನ್ನು ಸುಂದರ ವಿನ್ಯಾಸಗಳಲ್ಲಿ ಹಚ್ಚಿ ಸಂಭ್ರಮ ಪಡುತ್ತಾರೆ. ಹೆಚ್ಚಿನ ದೇಶಗಳಲ್ಲಿ ಮದರಂಗಿ ಹಚ್ಚುವುದನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ನಿರ್ವಹಿಸಲಾಗುತ್ತದೆ. ಅಂತೆಯೇ ಹೆಚ್ಚುವ ವ್ಯಾಪಾರದ ಸಂಭ್ರಮದಲ್ಲಿ ದೊಡ್ಡ ದೊಡ್ಡ ಮಳಿಗೆಗಳೂ ವರ್ಣರಂಜಿತವಾಗುತ್ತವೆ.

ಮುಂಜಾನೆಯ ಪ್ರಾರ್ಥನೆ
ಬಕ್ರೀದ್ ಹಬ್ಬದ ಮುಂಜಾನೆ ಇಡಿಯ ಊರಿನ ಜನರೆಲ್ಲರೂ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಈ ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರಮುಖ ಮಸೀದಿಗಳಲ್ಲಿಯೇ ಈದ್ ಪ್ರಾರ್ಥನೆಯನ್ನು ಆಯೋಜಿಸಲಾಗಿರುತ್ತದೆ. ತೆರೆದ ಮೈದಾನದಲ್ಲಿ ಊರಿನ ಅಷ್ಟೂ ಜನರು ಒಂದಾಗಿ ಈದ್ ನಮಾಜ್ ನಿರ್ವಹಿಸುವ ಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.


ಅಂತೆಯೇ ಊರಿನ ಹಿರಿಯರು ನಿಶ್ಚಯಿಸುವ, ಎಲ್ಲರಿಗೂ ಸಮರ್ಪಕವಾದ ಒಂದು ವೇಳೆಯಲ್ಲಿ ಸರ್ವರೂ ಈದ್ಗಾ ಮೈದಾನ ಅಥವಾ ಮಸೀದಿಗೆ ಆಗಮಿಸುತ್ತಾರೆ. ಹೋಗುವ ಮತ್ತು ಹಿಂದಿರುಗುವ ದಾರಿಯಲ್ಲಿ ಅತಿ ಹೆಚ್ಚು ಜನರನ್ನು ಭೇಟಿಯಾಗಲು ಸಾಧ್ಯವಾಗುವಂತೆ ಒಂದು ದಾರಿಯಲ್ಲಿ ತೆರಳಿ ಬೇರೆ ದಾರಿಯಲ್ಲಿ ಹಿಂದಿರುಗುವುದೂ ಬಕ್ರೀದ್ ಹಬ್ಬದ ಇನ್ನೊಂದು ಕ್ರಮವಾಗಿದೆ. ಈದ್ ನಮಾಜ್ ಬಳಿಕ ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡು ಜನರು ಸಂಭ್ರಮಿಸುತ್ತಾರೆ.

ಪ್ರಾಣಿಯ ಕುರ್ಬಾನಿ
ಪ್ರವಾದಿ ಇಬ್ರಾಹಿಮರ ಸತ್ಯನಿಷ್ಠೆಯ ಪರೀಕ್ಷೆಯ ಪ್ರಕಾರ ನಾಲ್ಕು ಕಾಲುಗಳ ಪ್ರಾಣಿಯೊಂದನ್ನು ಈದ್ ನಮಾಜ್ ಬಳಿಕ ಕುರ್ಬಾನಿಯ ರೂಪದಲ್ಲಿ ಬಲಿನೀಡಲಾಗುತ್ತದೆ. ಇದು ಕುರಿ, ಎತ್ತು ಅಥವಾ ಒಂಟೆಯಾಗಿರಬಹುದು. ಆದರೆ ಕುರ್ಬಾನಿಗೆ ಅರ್ಹವಾಗುವ ಪ್ರಾಣಿಯನ್ನು ಆರಿಸಲು ಕೆಲವು ಮಾನದಂಡಗಳಿವೆ. ಪ್ರಾಣಿಯು ಆರೋಗ್ಯವಂತವಾಗಿರಬೇಕು, ಒಂದು ಕಾಲನ್ನು ನೆಲದ ಮೇಲಿಡದೇ ಕುಂಟುತ್ತಿರಬಾರದು, ಅಂಗವಿಕಲವಾಗಿರಬಾರದು, ಗಾಯಗೊಂಡಿರಬಾರದು, ಸಾವಿನ ಅವಸ್ಥೆಯಲ್ಲಿರಬಾರದು ಇತ್ಯಾದಿ.


ಇದು ಪ್ರಾಣಿಯನ್ನು ಆಯ್ಕೆ ಮಾಡುವ ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿದೆ. ಹೆಚ್ಚು ಶಕ್ತಿವಂತರಲ್ಲದ ಹಲವರು ಸೇರಿ ಹಣವನ್ನು ಒಗ್ಗೂಡಿಸಿ ಒಂದು ಪ್ರಾಣಿಯನ್ನು ಪಾಲು ಮಾಡಿಕೊಳ್ಳುವ ಅವಕಾಶವಿದೆ. ಕುರ್ಬಾನಿಯನ್ನು ದುರ್ ಹಜ್ ನ ಹದಿಮೂರನೇ ತಾರೀಖಿನ ಸಂಜೆಯ (ಮಗ್ರಿಬ್) ಸಮಾಜಿನ ಮುನ್ನಾಸಮಯದವೆರೆಗೆ ನಡೆಸಬಹುದು. ಅದರ ನಂತರ ಅವಕಾಶವಿಲ್ಲ.

ಮಾಂಸದ ಪಾಲು
ಕುರ್ಬಾನಿಯ ಬಳಿಕ ದೊರಕುವ ಮಾಂಸದಲ್ಲಿ ಮೂರು ಪಾಲು ಮಾಡಲಾಗುತ್ತದೆ. ಒಂದು ಪಾಲು ಬಡವರಿಗೆ, ಇನ್ನೊಂದು ಸಂಬಂಧಿಕರಿಗೆ ಮತ್ತು ಮೂರನೆಯ ಪಾಲನ್ನು ಸ್ವಂತಕ್ಕಾಗಿ ಉಪಯೋಗಿಸಬಹುದು. ಕುರ್ಬಾನಿ ಮಾಡಲು ಅನುಕೂಲತೆ ಇಲ್ಲದವರು ಅಥವಾ ಊರಿನಿಂದ ದೂರವಿರುವ ಅಥವಾ ಬೇರಾವುದೋ ಕಾರಣದಿಂದ ನೀಡಲು ಸಾಧ್ಯವಾಗದಿರುವವರು ಇದೇ ಕಾರ್ಯಕ್ಕಾಗಿ ನಿಯೋಜಿಸಿರುವ ಸಂಸ್ಥೆಗಳಿಗೆ ದಾನರೂಪದಲ್ಲಿ ಧನವನ್ನು ನೀಡುವ ಮೂಲಕ ನೆರವು ನೀಡಬಹುದು. ಇದರ ಪರಿಣಾಮವಾಗಿ ವಿಶ್ವದ ಎಷ್ಟೋ ದೇಶಗಳ ಬಡಜನತೆ ಪೌಷ್ಠಿಕವಾದ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.

ತಕ್ಬೀರ್ ಹೇಳುವುದು
ಬಕ್ರೀದ್ ಹಬ್ಬದ ಮುನ್ನಾದಿನದಿಂದ (ಅಂದರೆ ದುಜ್ ಹಜ್‌ನ ಒಂಬತ್ತನೆಯ ತಾರೀಖಿನ) ಮುಂಜಾನೆಯ ಪ್ರಾರ್ಥನೆಯಿಂದ ಪ್ರಾರಂಭವಾಗಿ ಹದಿಮೂರನೇ ತಾರೀಖಿನ ಸಂಜೆಯ ಪ್ರಾರ್ಥನೆಯವರೆಗೂ (ಅಸರ್) -ಒಟ್ಟು ಇಪ್ಪತ್ತಮೂರು ಪ್ರಾರ್ಥನೆಗಳ ಕಾಲ ಅಂದರೆ ಸುಮಾರು ಐದು ದಿನ ಮತ್ತು ನಾಲ್ಕು ರಾತ್ರಿಗಳಂದು ಪ್ರತಿ ಹೊತ್ತಿನ ನಮಾಜಿನ ಬಳಿಕ ತಕ್ಬೀರ್ ಹೇಳುವುದು ಕಡ್ಡಾಯವಾಗಿದೆ. ಇದರಿಂದ ಹಬ್ಬದ ಸಂಭ್ರಮ ಮತ್ತು ಹುರುಳು ಹೆಚ್ಚಿನ ಕಾಲ ಭಕ್ತರ ನೆನಪಿನಲ್ಲಿರಲು ಸಾಧ್ಯವಾಗುತ್ತದೆ.

English summary

Traditions And Rituals Of Bakrid

Bakrid or Id-ul-Azha is the second main celebration of the Islamic lunar calender. The first celebration is the Eid-al-Fitr that is celebrated at the end of the month of Ramzan. Bakrid is a celebration of the spirit of sacrifice. It also marks the end of the Hajj Pilgrimage. Bakrid has a set of rituals and traditions which makes the festival a mixture of piety and fun. Read on to know more about the traditions of Bakrid.
X
Desktop Bottom Promotion