ಯಾರು ಹೇಳದ ಸತ್ಯ! ಬೆಳ್ಳುಳ್ಳಿ ಮನೆಯಲ್ಲೇ ಬೆಳೆಸ್ಬೋದಾ? ಹೇಗೆ?

ಬೆಳ್ಳುಳ್ಳಿ ಎಲ್ಲರಿಗೂ ಚಿರಪರಿಚಿತ. ಬೆಳ್ಳುಳ್ಳಿ ಅಡುಗೆಗೆ ರುಚಿಕರವಷ್ಟೇ ಅಲ್ಲ, ಇದು ಹಲವು ಬಗೆಯಲ್ಲಿ ಔಷಧಿಯಂತೆಯೂ ಕೆಲಸ ನಿರ್ವಹಿಸುತ್ತವೆ. ನಿತ್ಯ ಬೆಳ್ಳುಳ್ಳಿ (Garlic) ಬಳಕೆಯಿಂದ ರೋಗ ನಿರೋಧಕ ಶಕ್ತಿ ಉತ್ತಮವಾಗಿರುತ್ತದೆ. ಅನೇಕ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಕೆಲವು ರೋಗಗಳಿಗೂ ಬೆಳ್ಳುಳ್ಳಿ ಸಿದ್ದೌಷಧಿ. ಹಾಗಿದ್ರೆ, ಬೆಳ್ಳುಳ್ಳಿಯನ್ನು ಮನೆಯಲ್ಲೇ ಬೆಳೆಸಬಹುದಾ? ನೀವು ನಿಮ್ಮ ಮನೆಯಲ್ಲಿ ಅಥವಾ ಹೊಲದಲ್ಲಿ ಬೆಳ್ಳುಳ್ಳಿ ಬೆಳೆಯಲು ಬಯಸುತ್ತೀರಾ? ಬನ್ನಿ, ಈ ಲೇಖನದಲ್ಲಿ ಬೆಳ್ಳುಳ್ಳಿ ಬೆಳೆಯುವ (How To Grow Garlic) ಬಗ್ಗೆ ತಿಳಿಯೋಣ.

ಬೆಳ್ಳುಳ್ಳಿ ಆಹಾರದಲ್ಲಿ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ. ಜೊತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಬಿ1, ಬಿ6, ಸಿ ಮತ್ತು ಕೆ, ಸೆಲೆನಿಯಮ್, ಮ್ಯಾಂಗನೀಸ್, ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಕೃಷಿ ಮಾಡುವ ಅಥವಾ ಕೃಷಿ ಪ್ರಾರಂಭಿಸುವ ಆಲೋಚನೆಯಲ್ಲಿರುವವರಿಗೆ, ಬೆಳ್ಳುಳ್ಳಿ ಉತ್ತಮ ಆದಾಯ ತರುವ ಬೆಳೆ. ಆದರೆ, ಬೆಳ್ಳುಳ್ಳಿ ಬೆಳೆಯಲು ಸರಿಯಾದ ಸಮಯ, ಹವಾಮಾನ ಮತ್ತು ವಿಧಾನದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ನಾವಿಂದು ಯಾರು ಹೇಳದ ಸೀಕ್ರೇಟ್‌ ನಿಮಗೆ ತಿಳಿಸಲಿದ್ದೇವೆ.

how to grow garlic

ಬೆಳ್ಳುಳ್ಳಿ ನಾಟಿಗೆ ಹವಾಮಾನ ಮತ್ತು ಮಣ್ಣು ಹೇಗಿರಬೇಕು?

ಬೆಳ್ಳುಳ್ಳಿ ಕೃಷಿಗೆ ಸ್ವಲ್ಪ ಶ್ರಮ ಬೇಕಾಗುತ್ತದೆ. ಆದರೆ, ಸರಿಯಾದ ಕಾಳಜಿ ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ಉತ್ತಮ ಆದಾಯ ಗಳಿಸಬಹುದು. ಉತ್ತಮ ವಿಧಾನಗಳ ಮೂಲಕ ಕೃಷಿ ಮಾಡಿದರೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಅಥವಾ ಲಾಭ ಪಡೆಯಬಹುದು.

ಬೆಳ್ಳುಳ್ಳಿ ತಂಪಾದ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಾಟಿ ಅಥವಾ ಬಿತ್ತನೆ ಮಾಡುವುದು ಸೂಕ್ತ. ಮಣ್ಣು ಸಡಿಲವಾಗಿರಬೇಕು ಮತ್ತು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೊಟ್ಟಿಗೆ ಗೊಬ್ಬರವನ್ನು ಹಾಕುವುದರಿಂದ ಮಣ್ಣು ಫಲವತ್ತಾಗುತ್ತದೆ.

ಬೆಳ್ಳುಳ್ಳಿ ಬೀಜವನ್ನು ಹೇಗೆ ಆಯ್ಕೆ ಮಾಡುವುದು?

ಬೀಜಕ್ಕಾಗಿ ದಪ್ಪ ಮತ್ತು ಸ್ವಚ್ಛವಾದ ಬೆಳ್ಳುಳ್ಳಿ ಎಸಳುಗಳನ್ನು ಆಯ್ಕೆ ಮಾಡಿ. ಹಾಳಾದ ಅಥವಾ ಕೊಳೆತ ಎಸಳುಗಳನ್ನು ಬಳಸಬೇಡಿ. ಬೀಜಗಳನ್ನು ನೆಡುವ ಮೊದಲು, ಮಣ್ಣನ್ನು ಚೆನ್ನಾಗಿ ಉಳುಮೆ ಮಾಡಿ ಮತ್ತು ಸಾವಯವ ಗೊಬ್ಬರವನ್ನು ಹಾಕಿ. ಪ್ರತಿ ಬೆಳ್ಳುಳ್ಳಿ ಎಸಳನ್ನು ಮೊನಚಾದ ಭಾಗವನ್ನು ಮೇಲ್ಮುಖವಾಗಿ ಮತ್ತು ಅಗಲವಾದ ಭಾಗವನ್ನು ಕೆಳಮುಖವಾಗಿ ಮಣ್ಣಿನಲ್ಲಿ 1 ರಿಂದ 1.5 ಇಂಚು ಆಳಕ್ಕೆ ನೆಡಬೇಕು. ಸಸಿಗಳ ನಡುವೆ 4-6 ಇಂಚು ಮತ್ತು ಸಾಲುಗಳ ನಡುವೆ 8-10 ಇಂಚು ಅಂತರವಿರಬೇಕು.

ಬೆಳ್ಳುಳ್ಳಿಯನ್ನು ಕೊಯ್ಲು ಯಾವಾಗ?

ಬೆಳ್ಳುಳ್ಳಿ ನಾಟಿ ಮಾಡಿದ ನಂತರ, ನಿಯಮಿತವಾಗಿ ನೀರು ಹಾಕಿ. ಬಳಿಕ ಅಗತ್ಯಕ್ಕೆ ಅನುಗುಣವಾಗಿ ವಾರಕ್ಕೆ ಒಂದು ಬಾರಿ ನೀರಾವರಿ ಮಾಡಿ. ಕಾಲಕಾಲಕ್ಕೆ ಕಳೆಗಳನ್ನು ತೆಗೆಯುತ್ತಿರಿ. ಸುಮಾರು 4 ರಿಂದ 5 ತಿಂಗಳ ನಂತರ, ಎಲೆಗಳು ಹಳದಿಯಾಗಿ ಒಣಗಲು ಪ್ರಾರಂಭಿಸಿದಾಗ ಬೆಳ್ಳುಳ್ಳಿಯನ್ನು ಕೊಯ್ಲು ಮಾಡಬಹುದು. ಕೊಯ್ಲು ಮಾಡಿದ ಬಳಿಕ, ಬೆಳ್ಳುಳ್ಳಿಯನ್ನು ನೆರಳಿನಲ್ಲಿ 1 ರಿಂದ 2 ವಾರಗಳ ಕಾಲ ಒಣಗಲು ಬಿಡಿ.

ರಾಸಾಯನಿಕ ಗೊಬ್ಬರ, ಕೀಟನಾಶಕ ಬೇಡ

ಇತ್ತೀಚಿನ ದಿನಗಳಲ್ಲಿ, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ. ನೈಸರ್ಗಿಕ ಗೊಬ್ಬರಗಳು ಮತ್ತು ಜೈವಿಕ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉತ್ತಮ ಗುಣಮಟ್ಟದ ಬೆಳೆಗಳನ್ನು ಪಡೆಯಬಹುದು.

ಬೆಳ್ಳುಳ್ಳಿ ಬೆಳೆಗೆ ಬರುವ ರೋಗಗಳು ಮತ್ತು ಕೀಟಗಳು

ಬೆಳ್ಳುಳ್ಳಿ ಬೆಳೆಗೆ ಕೆಲವು ರೋಗಗಳು ಮತ್ತು ಕೀಟಗಳು ಬಾಧಿಸಬಹುದು. ಅವುಗಳಲ್ಲಿ ಮುಖ್ಯವಾದವು ಎಂದರೆ ಗಡ್ಡೆ ಕೊಳೆ ರೋಗ, ಎಲೆ ಚುಕ್ಕೆ ರೋಗ ಮತ್ತು ಥ್ರಿಪ್ಸ್ ಕೀಟಗಳು. ಈ ರೋಗಗಳು ಮತ್ತು ಕೀಟಗಳನ್ನು ತಡೆಗಟ್ಟಲು, ಸಾವಯವ ಕೀಟನಾಶಕಗಳನ್ನು ಬಳಸಬಹುದು. ಬೇವಿನ ಎಣ್ಣೆ ಮತ್ತು ಇತರ ನೈಸರ್ಗಿಕ ಕೀಟನಾಶಕಗಳು ಪರಿಣಾಮಕಾರಿಯಾಗಿವೆ.

ಬೆಳ್ಳುಳ್ಳಿ ಸಾವಯವ ಕೃಷಿ ಮಾಡುವುದು ಹೇಗೆ?

ಬೆಳ್ಳುಳ್ಳಿಯು ಹಿಂಗಾರು ಬೆಳೆಯಾಗಿದ್ದು, ಅಕ್ಟೋಬರ್ ನಂತರ ಹಾಕಬೇಕು. ಬೆಳ್ಳುಳ್ಳಿ ಸಾಲುಗಳನ್ನು ದಕ್ಷಿಣೋತ್ತರವಾಗಿ ಹಾಕಬೇಕು. ಹುಣ್ಣಿಮೆಯ ಬೆಳಕು ಅಂದರೆ, ಬೆಳದಿಂಗಳು ಬೆಳ್ಳುಳ್ಳಿ ಮೊಳಕೆಗೆ ಹಾನಿಕಾರಕ. ಆದ್ದರಿಂದ, ಅಮಾವಾಸೆಯಲ್ಲಿ ಬಿತ್ತನೆ ಮಾಡಬೇಕು. ಅಮಾವಾಸೆಯಲ್ಲಿ ಮೊಳಕೆ ಬಂದರೆ ರೋಗಗಳು ಕಮ್ಮಿ. ದಕ್ಷಿಣೋತ್ತರವಾಗಿ ಬೆಳೆಯುವುದರಿಂದ ಸೂರ್ಯ ಪ್ರಕಾಶ ಸರಿಯಾಗಿ ಒದಗುವುದು.

ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯು ಹೆಚ್ಚುತ್ತಿದೆ. ಡ್ರೋನ್‌ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸುವುದು, ಸಂವೇದಕಗಳ ಮೂಲಕ ಮಣ್ಣಿನ ತೇವಾಂಶವನ್ನು ಅಳೆಯುವುದು ಮತ್ತು ಸ್ವಯಂಚಾಲಿತ ನೀರಾವರಿ ವ್ಯವಸ್ಥೆಗಳನ್ನು ಬಳಸುವುದು ಸಾಮಾನ್ಯವಾಗಿದೆ. ಇಂತಹ ತಂತ್ರಜ್ಞಾನಗಳು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಒಟ್ಟಾರೆ, ಬೆಳ್ಳುಳ್ಳಿ ಕೃಷಿಯು ಲಾಭದಾಯಕ ಉದ್ಯಮವಾಗಿದೆ. ನೀವು ಸೂಕ್ತವಾದ ಹವಾಮಾನ, ಮಣ್ಣು ಮತ್ತು ಕೃಷಿ ವಿಧಾನಗಳನ್ನು ಅಳವಡಿಸಿಕೊಂಡರೆ, ಉತ್ತಮ ಇಳುವರಿಯನ್ನು ಪಡೆಯಬಹುದು.

English summary

How to Grow Garlic Plant in Pots at home: The Tips and Tricks for Beginners

How to Grow Garlic Plant in Pots at home: The Tips and Tricks for Beginners
Story first published: Tuesday, July 1, 2025, 15:50 [IST]
X
Desktop Bottom Promotion