ಜೀವ ಉಳಿಸುವ ಟೆಸ್ಟ್! ನಿಮ್ಮ ಬೆರಳೇ ಹೇಳುತ್ತೆ ಕ್ಯಾನ್ಸರ್ ಇದ್ಯಾ ಅಂತ.. ಜಸ್ಟ್ 5 ಸೆಕೆಂಡ್‌

ಇಂದು ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ (World Lung Cancer Day 2025). ಈ ದಿನ (ಆಗಸ್ಟ್ 1) ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಜೀವ ಉಳಿಸುವ ಜಾಗೃತಿಯ ಸಂಕೇತ. ಶ್ವಾಸಕೋಶದ ಕ್ಯಾನ್ಸರ್ ಇಡೀ ಜಗತ್ತಿನಲ್ಲಿಯೇ ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ದುರಂತವೆಂದರೆ, ಇದರ ಲಕ್ಷಣಗಳು ಸಾಮಾನ್ಯವಾಗಿ ಕೊನೆಯ ಹಂತದಲ್ಲಿ ಮಾತ್ರ ಕಂಡುಬರುತ್ತವೆ. ಆದರೆ, ಇದನ್ನು ಆರಂಭದಲ್ಲೇ ಪತ್ತೆಹಚ್ಚಲು ಮನೆಯಲ್ಲಿಯೇ ಮಾಡಬಹುದಾದ ಒಂದು ಸರಳ ಪರೀಕ್ಷೆಯಿದೆ. ಈ ಪರೀಕ್ಷೆ ಯಾವುದು? ಪರೀಕ್ಷೆ ಮಾಡುವುದು ಹೇಗೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ವೈದ್ಯಕೀಯ ಜಗತ್ತಿನಲ್ಲಿ ಈ ಪರೀಕ್ಷೆಯನ್ನು 'ಸ್ಕ್ಯಾಮ್ರೋಥ್ ವಿಂಡೋ ಟೆಸ್ಟ್' (Scamroth window test) ಅಥವಾ 'ವಿಂಡೋ ಗ್ಯಾಪ್ ಟೆಸ್ಟ್' ಎಂದು ಕರೆಯುತ್ತಾರೆ. ಆದರೆ, ಜನಸಾಮಾನ್ಯರ ತಿಳುವಳಿಕೆಯಲ್ಲಿ 'ಡೈಮಂಡ್ ಫಿಂಗರ್ ಟೆಸ್ಟ್' ಎಂದು ಜನಪ್ರಿಯವಾಗಿದೆ. ಈ ಪರೀಕ್ಷೆಯು ಕೇವಲ 5 ಸೆಕೆಂಡ್‌ಗಳಲ್ಲಿ ನಿಮ್ಮ ಶ್ವಾಸಕೋಶದ ಆರೋಗ್ಯದ ಬಗ್ಗೆ ಒಂದು ಪ್ರಮುಖ ಸುಳಿವು ನೀಡುತ್ತದೆ. ಇದು ಅತ್ಯಂತ ಸರಳವಾದ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ, ನಿಮ್ಮ ಎರಡು ಕೈಗಳ ಕೈಗಳ ತೋರು ಬೆರಳುಗಳನ್ನು (index fingers) ಉಗುರುಗಳೊಂದಿಗೆ ಮುಖಾಮುಖಿಯಾಗಿ (ಎದುರೆದುರಿಗೆ) ಜೋಡಿಸಬೇಕು.

World Lung Cancer Day

ಪರೀಕ್ಷೆಯನ್ನು ಮಾಡುವುದು ಹೇಗೆ?

• ನಿಮ್ಮ ಎರಡೂ ಕೈಗಳ ತೋರುಬೆರಳುಗಳನ್ನು ತೆಗೆದುಕೊಳ್ಳಿ.
• ನಿಮ್ಮ ಉಗುರುಗಳು ಪರಸ್ಪರ ಎದುರಾಗುವಂತೆ ಎರಡು ಬೆರಳುಗಳನ್ನು ನೇರವಾಗಿ ಹಿಡಿದು, ಅವುಗಳನ್ನು ಒಂದಕ್ಕೊಂದು ಸೇರಿಸಿ.
• ಈಗ, ಎರಡು ಉಗುರುಗಳ ಕೆಳಗೆ ಇರುವ ಅಂತರವನ್ನು ಸೂಕ್ಷ್ಮವಾಗಿ ಗಮನಿಸಿ.

ಪರೀಕ್ಷೆಯ ಫಲಿತಾಂಶ ಏನನ್ನು ಸೂಚಿಸುತ್ತದೆ?

ನೀವು ಬೆರಳುಗಳನ್ನು ಜೋಡಿಸಿದಾಗ, ಉಗುರುಗಳ ಕೆಳಗೆ ವಜ್ರದ ಆಕಾರದ (Diamond Shape) ಒಂದು ಚಿಕ್ಕ ಅಂತರ ಕಾಣಿಸುತ್ತದೆಯೇ? ಹಾಗಿದ್ದರೆ, ನಿಮ್ಮ ಶ್ವಾಸಕೋಶದ ಆರೋಗ್ಯ ಉತ್ತಮವಾಗಿದೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ರೋಗಗಳ ಸಾಧ್ಯತೆಗಳು ಕಡಿಮೆ ಎಂದು ಅರ್ಥ. ಆದರೆ, ಒಂದು ವೇಳೆ ಅಂತರ ಕಾಣಿಸದೇ ಆ ಜಾಗ ಸಂಪೂರ್ಣವಾಗಿ ಸಮತಟ್ಟಾಗಿದ್ದರೆ, ಇದು 'ಕ್ಲಬ್ಬಿಂಗ್' ಎಂಬ ಸ್ಥಿತಿಯ ಸಂಕೇತವಾಗಿರಬಹುದು. ಅಂದರೆ, ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು.

ಕ್ಲಬ್ಬಿಂಗ್ ಎಂದರೇನು?

ಕ್ಲಬ್ಬಿಂಗ್ ಒಂದು ಗಂಭೀರ ಸ್ಥಿತಿ. ಇದರಲ್ಲಿ ಬೆರಳಿನ ತುದಿಗಳು ದಪ್ಪವಾಗಿ, ಉಗುರುಗಳು ದುಂಡಗೆ ಅಥವಾ ಹೊರಕ್ಕೆ ಉಬ್ಬಿದಂತೆ ಕಾಣುತ್ತವೆ. ಇದು ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಉಂಟಾಗುತ್ತದೆ. ಈ ಸ್ಥಿತಿಯು ಹೃದಯ, ಶ್ವಾಸಕೋಶ ಅಥವಾ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ಸೂಚಿಸಬಹುದು. ಶ್ವಾಸಕೋಶದ ಕ್ಯಾನ್ಸರ್ ಇದಕ್ಕೆ ಒಂದು ಪ್ರಮುಖ ಕಾರಣ. ದೇಹವು VEGF (Vascular Endothelial Growth Factor) ಎಂಬ ಪ್ರೋಟೀನ್ ಅನ್ನು ಬಿಡುಗಡೆ ಮಾಡುವುದರಿಂದ ಇದು ಸಂಭವಿಸುತ್ತದೆ.

ಇದು ದೇಹದಲ್ಲಿ ಹೊಸ ರಕ್ತನಾಳಗಳ ಬೆಳವಣಿಗೆಯನ್ನು ಉತ್ತೇಜಿಸುವ ಒಂದು ಪ್ರೋಟೀನ್ ಆಗಿದೆ. ಶ್ವಾಸಕೋಶ ಅಥವಾ ಹೃದಯ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹ VEGF ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಬೆರಳುಗಳಲ್ಲಿ ಊತ ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ. ಇದು ಬೆರಳುಗಳ ತುದಿಯಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

ಶ್ವಾಸಕೋಶದ ಕ್ಯಾನ್ಸರ್‌ನ ಇತರೆ ಲಕ್ಷಣಗಳು

ಕ್ಲಬ್ಬಿಂಗ್ ಹೊರತಾಗಿ, ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

• ಮೂರು ವಾರಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕಾಡುವ ಕೆಮ್ಮು.
• ಕೆಮ್ಮುವಾಗ ರಕ್ತ ಬರುವುದು.
• ಎದೆ ನೋವು ಅಥವಾ ಬಿಗಿತ.
• ಉಸಿರಾಟದ ತೊಂದರೆ.
• ನಿರಂತರ ಆಯಾಸ ಅಥವಾ ಶಕ್ತಿಯ ಕೊರತೆ.
• ಹಸಿವಾಗದಿರುವುದು ಅಥವಾ ಗಂಟಲು ಕೆರೆತ.

ಈ 'ಡೈಮಂಡ್ ಫಿಂಗರ್ ಟೆಸ್ಟ್' ಕೇವಲ ಒಂದು ಪ್ರಾಥಮಿಕ ಪರೀಕ್ಷೆ. ಇದು ವೈದ್ಯಕೀಯ ರೋಗನಿರ್ಣಯಕ್ಕೆ ಪರ್ಯಾಯವಲ್ಲ. ಒಂದು ವೇಳೆ ನಿಮ್ಮ ಪರೀಕ್ಷೆಯಲ್ಲಿ ಕ್ಲಬ್ಬಿಂಗ್ ಲಕ್ಷಣಗಳು ಕಂಡುಬಂದರೆ, ಯಾವುದೇ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆಹಚ್ಚುವುದರಿಂದ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಹೆಚ್ಚುತ್ತದೆ. ಆರೋಗ್ಯವೇ ಭಾಗ್ಯ, ಅದನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

World Lung Cancer Day 2025: The 5 Second Simple Home Test That Could Save Your Life

World Lung Cancer Day 2025: The 5 Second Simple Home Test That Could Save Your Life
Story first published: Friday, August 1, 2025, 13:20 [IST]
X
Desktop Bottom Promotion