ಮಹಿಳೆಯರಲ್ಲಿ ಸೈಲೆಂಟ್ ಆಗಿ ಕಾಡುತ್ತಿದೆ ಎಂಡೋಮೆಟ್ರಿಯಲ್‌ ಕ್ಯಾನ್ಸರ್‌: ತಡೆಯೋದು ಹೇಗೆ ಗೊತ್ತಾ?

ಕಾಲಕ್ರಮೇಣ ವಯಸ್ಸಾದಂತೆ ಮಹಿಳೆಯರಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳತೊಡಗುತ್ತವೆ. ಆದರೆ ಈಗೆಲ್ಲಾ ವಯಸ್ಸು, ವಾತಾವಾರಣ, ಅನುವಂಶೀಯ ಎಂಬ ಮಾನದಂಡಗಳಿಲ್ಲದೆ ಆರೋಗ್ಯ ಸಮಸ್ಯೆಗಳು ಬಹುಬೇಗ ಗೋಚರಿಸುತ್ತವೆ. ಈ ಹಿಂದೆಲ್ಲಾ ಗರ್ಭಾಶಯದ ಒಳಪದರ/ಎಂಡೋಮೆಟ್ರಿಯಲ್ ಕ್ಯಾನ್ಸರ್‌ ಸಮಸ್ಯೆಯು ಸಾಮಾನ್ಯವಾಗಿ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 30 ಮತ್ತು 40 ವರ್ಷ ವಯೋಮಿತಿಯೊಳಗಿನ ಮಹಿಳೆಯರಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಅದ್ರಲ್ಲೂ ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಈಗ ಹೆಚ್ಚಾಗಿ ಕಂಡುಬರುತ್ತಿದೆ, ಈ ಪ್ರಮಾಣ ಈಗ ಏರಿಕೆಯಾಗುತ್ತಿರುವುದು ಎಲ್ಲರಲ್ಲೂ ಆಘಾತಕ್ಕೆ ಕಾರಣವಾಗಿದೆ. ಪ್ರತಿ ತಿಂಗಳು ಮಹಿಳೆಯ ದೇಹದಲ್ಲಾಗುವ ಬದಲಾವಣೆಗೆ ಪ್ರತಿಸ್ಪಂದಿಸುವ ಗರ್ಭಕೋಶದ ಒಳಗೋಡೆಯಲ್ಲಿ ಭ್ರೂಣ ಬೆಳವಣಿಗೆಗೆ ಪೂರಕವಾದ ಪದರವೊಂದು ಬೆಳೆಯುತ್ತದೆ ಮತ್ತು ಅದು ಫಲದೀಕರಣವಾಗದಿದ್ದಾಗ ಋತುಸ್ರಾವದ ರೂಪದಲ್ಲಿ ಕಳಚಿಕೊಂಡು ದೇಹದಿಂದ ಹೊರಹೋಗುತ್ತದೆ.

Endometrial Cancer Often Goes Unnoticed Do You Know How To Protect Yourself
Photo Credit: Freepik

ದೇಹದ ಹಾರ್ಮೋನ್‌ಗಳಲ್ಲಿ ಮುಖ್ಯವಾಗಿ ಈಸ್ಟ್ರೋಜೆನ್‌ನಲ್ಲಿ ಅಸಮತೋಲನವಾದಾಗ ಈ ಪದರವು ಅತಿಯಾದ ಬೆಳವಣಿಗೆಯನ್ನು ಕಾಣಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್‌ ಆಗಿ ಪರಿವರ್ತನೆ ಹೊಂದುತ್ತದೆ. ದೇಹದಲ್ಲಿ ಶೇಖರಣೆಯಾಗುವ ಬೊಜ್ಜು, ಅಧಿಕ ಈಸ್ಟ್ರೊಜೆನ್ ಮಟ್ಟಗಳು, ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (PCOD), ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಈ ಕ್ಯಾನ್ಸರ್ ಹೆಚ್ಛಾಗಲು ಪ್ರಮುಖ ಅಪಾಯಕಾರಿ ಅಂಶಗಳು ಎಂದು ತಿಳಿದುಬರುತ್ತದೆ.

ಈ ಎಲ್ಲಾ ಅಂಶಗಳ ಜೊತೆಗೆ ಜಡ ಜೀವನಶೈಲಿ ಮತ್ತು ಸಂಸ್ಕರಿಸಿದ ಆಹಾರ, ಕಡಿಮೆ ಪ್ರೋಟೀನ್‌, ಜಂಕ್‌ಫುಡ್‌, ಬೇಕರಿ ಪದಾರ್ಥಗಳು, ಫಾಸ್ಟ್‌ ಫುಡ್‌, ಎಣ್ಣೆಯಲ್ಲಿ ಕರಿದ ಆಹಾರಗಳು, ಹೆಚ್ಚಿನ ಸಿಹಿ ಪದಾರ್ಥಗಳು, ಕಾರ್ಬೋಹೈಡ್ರೇಟ್-ಭರಿತ ಆಹಾರ ಸೇವನೆಯು ಕೂಡ ಈ ಕ್ಯಾನ್ಸರ್ ಅಪಾಯ ಇನ್ನಷ್ಟು ಹೆಚ್ಚಿಸುತ್ತದೆ.


ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಲಕ್ಷಣಗಳೇನು?

ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಅಥವಾ ಗರ್ಭಾಶಯದ ಒಳಪದರದ ಕ್ಯಾನ್ಸರ್‌ ನ ರೋಗಲಕ್ಷಣವೆಂದರೆ ಅಸಹಜ ಗರ್ಭಾಶಯದ ರಕ್ತಸ್ರಾವ.
ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ, ಋತುಬಂಧದ ನಂತರ ಒಂದು ಅಥವಾ ಎರಡು ವರ್ಷಗಳ ಬಳಿಕವೂ ಮಹಿಳೆಗೆ ರಕ್ತಸ್ರಾವವಾದರೆ ಇದು ಅಪಾಯದ ಸಂಕೇತ.

ಋತುಬಂಧ ಪೂರ್ವದ ಮಹಿಳೆಯರಲ್ಲಿ ದೀರ್ಘಕಾಲದ ಅಥವಾ ಅನಿಯಮಿತ ರಕ್ತಸ್ರಾವ ಮತ್ತು ಅಲ್ಟ್ರಾಸೌಂಡ್‌ನಲ್ಲಿ ಗರ್ಭಾಶಯದ ಒಳಪದರ ದಪ್ಪವಾಗಿರುವುದು.


ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಪತ್ತೆ ಮಾಡುವುದು ಹೇಗೆ?

ಈ ರೀತಿಯ ಕ್ಯಾನ್ಸರ್‌ ಲಕ್ಷಣಗಳು ಗೋಚರಿಸಿದಾಗ ತಜ್ಞರ ಸಲಹೆಯಂತೆ ಬಯಾಪ್ಸಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಒಂದು ವೇಳೆ ಕ್ಯಾನ್ಸರ್ ದೃಢಪಟ್ಟರೆ ರೋಗದ ಹಂತವನ್ನು ತಿಳಿಯಲು ಎಂಆರ್‌ಐ (MRI) ಸ್ಕ್ಯಾನ್ ಮಾಡಲಾಗುತ್ತದೆ. ರೋಗವು ದೇಹದ ಬೇರೆ ಭಾಗಗಳಿಗೆ ಹರಡಿದೆಯೇ ಎಂದು ಪತ್ತೆಹಚ್ಚಲು ಕೆಲವು ಸಂದರ್ಭಗಳಲ್ಲಿ ಪಿಇಟಿ (PET) ಸ್ಕ್ಯಾನ್ ಕೂಡ ಮಾಡುವ ಸಾಧ್ಯತೆ ಇರುತ್ತದೆ.

ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಚಿಕಿತ್ಸೆಯೇನು ?

ಎಂಡೋಮೆಟ್ರಿಕ್‌ ಕ್ಯಾನ್ಸರ್‌ ದೃಢಪಟ್ಟ ಪ್ರಕರಣಗಳಿಗೆ ಶಸ್ತ್ರಚಿಕಿತ್ಸೆ ಪ್ರಮುಖವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಯಲ್ಲಿ ರೊಬೊಟಿಕ್ ಸರ್ಜರಿಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಹಾಗಾಗಿ ರೊಬೊಟಿಕ್ ಸರ್ಜರಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಅನೇಕ ಪ್ರಯೋಜನಗಳಿದ್ದು, ಬಹುತೇಕ ತಜ್ಞರು ಇದರ ಮೊರೆ ಹೋಗುತ್ತಿದ್ದಾರೆ.

Endometrial Cancer Often Goes Unnoticed Do You Know How To Protect Yourself
Photo Credit: Freepik


ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಬಾರದಂತೆ ತಡೆಯುವುದು ಹೇಗೆ?

ಎಂಡೋಮೆಟ್ರಿಯಲ್ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಚಿಕಿತ್ಸೆಯಿಂದ ಗುಣಮುಖವಾಗುವ ಸಾಧ್ಯತೆ ಇರುವ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ರೋಗಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುವುದರಿಂದ ಬದುಕುಳಿಯುವಿಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ಅಲ್ಲದೆ ತಡೆಗಟ್ಟುವಿಕೆ ಕ್ರಮಗಳನ್ನು ಅನುಸರಿಸುವುದು ಚಿಕಿತ್ಸೆಗಿಂತ ಉತ್ತಮವಾಗಿದೆ.

ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು
ಉತ್ತಮ ಆಹಾರ ಸೇವನೆ
ನಿಗದಿತ ಸಮಯಕ್ಕೆ ಆರೋಗ್ಯ ಪರೀಕ್ಷೆ

ವಿಶೇಷವಾಗಿ 30 ವಯಸ್ಸಿನ ಮಹಿಳೆಯರಲ್ಲಿ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೋಗಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ವಾಸವಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ನಿಶಾ ಬುಚಾಡೆ.

English summary

Endometrial Cancer Often Goes Unnoticed: Do You Know How To Protect Yourself?

Endometrial cancer used to be a common problem in postmenopausal women, but in recent times, it has become more common in women in their 30s and 40s.
X
Desktop Bottom Promotion