ಬರೀ 15 ದಿನಗಳಲ್ಲಿಯೇ ತ್ವಚೆಯ ಸೌಂದರ್ಯ ಹೆಚ್ಚಿಸುವ ಮನೆಮದ್ದುಗಳು

Posted By: Deepu
Subscribe to Boldsky

ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಇದಕ್ಕಾಗಿ ಎಷ್ಟೇ ಹಣ ವ್ಯಯಿಸಲು ಕೂಡ ನಾವು ಸಿದ್ಧರಾಗಿರುತ್ತೇವೆ. ಹಾಗಾಗಿ ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತರಹೇವಾರಿ ಉತ್ಪನ್ನವನ್ನು ಬಿಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ. ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ.

ಅಂದ ಹೆಚ್ಚಿಸಲು ಆರ್ಯುವೇದದಲ್ಲಿದೆ ಸಪ್ತ ಮಾರ್ಗ

ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಅದ್ದರಿಂದ ರಾಸಾಯನಿಕ ವಸ್ತುಗಳನ್ನು ಬಳಸಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ತಪ್ಪಿಸಿ ನೈಸರ್ಗಿಕವಾಗಿ ದೊರೆಯುವ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ. ಇಂತಹ ಸ್ವಾಭಾವಿಕ ಮನೆಮದ್ದುಗಳಲ್ಲಿ ಕೆಲವೊಂದನ್ನು ಇಲ್ಲಿ ಪರಿಚಯಿಸಲಾಗಿದ್ದು ಇದನ್ನು ಬಳಸುವುದರಿಂದ ನಮ್ಮ ತ್ವಚೆಗೆ ಅದ್ಭುತವಾದ ಹೊಳಪನ್ನು ನಾವು ನೀಡಬಹುದು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...

ಹಾಲು ಮತ್ತು ಅರಿಶಿನ

ಹಾಲು ಮತ್ತು ಅರಿಶಿನ

ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಅರಿಶಿನದ ಪಾತ್ರ ಮಹತ್ತರವಾಗಿದ್ದು ಭಾರತದಲ್ಲಿ ನೂರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಒಂದು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಕೊಂಚವೇ ಹಸಿಹಾಲಿನೊಂದಿಗೆ ಬೆರೆಸಿ ಮುಖಲೇಪ ತಯಾರಿಸಿ...ಹಾಲು ಮತ್ತು ಅರಿಶಿನ ಇದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಈ ವಿಧಾನ ಒಣಚರ್ಮಕ್ಕೆ ಹೆಚ್ಚು ಸೂಕ್ತವಾಗಿದೆ.

ಕಡ್ಲೆಹಿಟ್ಟು ಮತ್ತು ಹಾಲು

ಕಡ್ಲೆಹಿಟ್ಟು ಮತ್ತು ಹಾಲು

ಒಂದು ವೇಳೆ ಚರ್ಮದ ಹೊರಪದರದಲ್ಲಿ ತೆಳುವಾದ ಪದರ ಆವರಿಸಿದ್ದರೆ ಇದು ಸತ್ತ ಜೀವಕೋಶಗಳು ಗಟ್ಟಿಯಾಗಿ ಅಂಟಿಕೊಂಡಿದ್ದಿದ್ದಿರಬಹುದು. ಇದನ್ನು ನಿವಾರಿಸಲು ಕಡ್ಲೆಹಿಟ್ಟು ಮತ್ತು ಕೊಂಚ ಹಸಿಹಾಲನ್ನು ಬೆರೆಸಿ ಲೇಪನ ತಯಾರಿಸಿ ಮುಖದ ಮೇಲೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸತ್ತಜೀವಕೋಶಗಳು ಸುಲಭವಾಗಿ ನಿವಾರಣೆಯಾಗಿ ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಲಿಂಬೆ ಮತ್ತು ಜೇನು

ಲಿಂಬೆ ಮತ್ತು ಜೇನು

ಬಿಸಿಲಿನಿಂದ ಚರ್ಮ ಕಪ್ಪಗಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಲಿಂಬೆಯ ಬಿಳಿಚುಕಾರಕ ಗುಣ ಮತ್ತು ಜೇನಿನ ತಂಪೊಗೊಳಿಸುವ ಗುಣಗಳು ಒಟ್ಟಾಗಿ ಚರ್ಮದ ಬಣ್ಣವನ್ನು ಸಹಜವರ್ಣದತ್ತ ತರಲು ನೆರವಾಗುತ್ತವೆ. ಇದರಿಂದ ಕಳೆಗುಂದಿದ್ದ ಚರ್ಮ ಮತ್ತೆ ಕಾಂತಿ ಪಡೆಯುತ್ತದೆ. ಸಮಪ್ರಮಾಣದಲ್ಲಿ ಲಿಂಬೆಸರ ಮತ್ತು ಜೇನನ್ನು ಬೆರೆಸಿ ಕೊಂಚವೇ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಹತ್ತಿಯಿಂಡೆಯಿಂದ ಒರೆಸಿಕೊಳ್ಳುವ ಮೂಲಕ ಈ ಕಾಂತಿಯನ್ನು ಪಡೆಯಬಹುದು.

ಜೀರಿಗೆ ನೀರಿನಿಂದ ಮುಖ ತೊಳೆಯಿರಿ

ಜೀರಿಗೆ ನೀರಿನಿಂದ ಮುಖ ತೊಳೆಯಿರಿ

ಜೀರಿಗೆಯನ್ನು ನೀರಿನಲ್ಲಿ ಅರ್ಧಗಂಟೆ ಕುದಿಸಿ. ನಂತರ ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು. ಕಾಂತಿಯುತವಾದ ತ್ವಚೆಯನ್ನು ಪಡೆಯಲು ಇದು ಸುಲಭ ವಿಧಾನ.

ಹಸಿರು ಟೀ ಕುದಿಸಿ ಸೋಸಿದ ನೀರು

ಹಸಿರು ಟೀ ಕುದಿಸಿ ಸೋಸಿದ ನೀರು

ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಬಾಳೆಹಣ್ಣು ಮತ್ತು ಜೇನು

ಬಾಳೆಹಣ್ಣು ಮತ್ತು ಜೇನು

ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಇರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆ ಹೊಳಪು ಹೆಚ್ಚುವುದು. ಬಾಳೆಹಣ್ಣು ಕೂಡ ನಿಮ್ಮ ಮುಖಕ್ಕೆ ಒಂದು ಒಳ್ಳೆಯ ಫೇಶಿಯಲ್‌ನಂತೆ ಕೆಲಸ ಮಾಡುತ್ತದೆ. ಬಾಳೆಹಣ್ಣನ್ನು ಜೇನಿನೊಂದಿಗೆ ಚೆನ್ನಾಗಿ ಕಿವುಚಿ ನುಣ್ಣನೆ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ. ನಿಮ್ಮ ಮುಖದ ಕಾಂತಿ ವೃದ್ದಿಸುವುದರಲ್ಲಿ ಸಂದೇಹವೇ ಇಲ್ಲ.

ನಿಂಬೆ ಮತ್ತು ಕಿತ್ತಳೆ ಸಿಪ್ಪೆ

ನಿಂಬೆ ಮತ್ತು ಕಿತ್ತಳೆ ಸಿಪ್ಪೆ

ಇವುಗಳಲ್ಲಿನ ಸಿಟ್ರಸ್ ಅಂಶ ತ್ವಚೆಯ ಕಾಂತಿಗೆ ಹೆಚ್ಚು ಉಪಯುಕ್ತ. ಸ್ಕ್ರಬ್ ನಂತೆ ಕೆಲಸ ನಿರ್ವಹಿಸುವ ಈ ಸಿಪ್ಪೆಗಳನ್ನು ಬೇಕಾದಾಗ ಬಳಸಿಕೊಳ್ಳಬಹುದು. ಈ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಬೇಕೆಂದಾಗ ಹಾಲು ಮತ್ತು ಸ್ವಲ್ಪ ಓಟ್ ಪೌಡರ್ ನೊಂದಿಗೆ ಬೆರೆಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಬೇಕು. ಇದು ಸೌಂದರ್ಯಕ್ಕಷ್ಟೇ ಅಲ್ಲ ಔಷಧೀಯ ಗುಣಗಳೂ ಇದರಲ್ಲಿರುವ ಕಾರಣ ಇದರ ಬಳಕೆಯಿಂದ ದ್ವಿಗುಣ ಲಾಭ ಪಡೆಯಬಹುದು. ಈ ವಿಧಾನಗಳಲ್ಲಿ ಯಾವುದಾದರೂ ಒಂದನ್ನಾದರೂ ವಾರಕ್ಕೊಮ್ಮೆ ನೀವು ಅನುಸರಿಸಿದಲ್ಲಿ ನಿಮಗೆ ಅದ್ಭುತ ಫಲಿತಾಂಶ ಖಾತ್ರಿ. ನಿಮ್ಮ ಸೌಂದರ್ಯದ ವೃದ್ಧಿಗೊಳಿಸುವಿಕೆ ನಿಮ್ಮ ಕೈಯಲ್ಲೇ ಇರುವುದರಿಂದ ಇದರಲ್ಲಿ ಯಾವುದೇ ರಾಜಿಯನ್ನು ನೀವು ಮಾಡಿಕೊಳ್ಳಬೇಡಿ. ನಿಮ್ಮಲ್ಲಿ ಸಹಜ ಸೌಂದರ್ಯವನ್ನು ವೃದ್ಧಿಸುವ ಈ ಪರಿಣಾಮಕಾರಿ ವಿಧಾನಗಳು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.

ಮೊಟ್ಟೆಯ ಬಿಳಿಯ ಭಾಗ + ಮೊಸರು

ಮೊಟ್ಟೆಯ ಬಿಳಿಯ ಭಾಗ + ಮೊಸರು

ಮೊಟ್ಟೆಯ ಬಿಳಿಯ ಭಾಗ ನಿಮ್ಮ ದೇಹಕ್ಕೆ ಮಾತ್ರವಲ್ಲ, ನಿಮ್ಮ ತ್ವಚೆಗೂ ಅಷ್ಟೇ ಒಳ್ಳೆಯದು. ತ್ವಚೆಗೆ ಅತ್ಯಗತ್ಯವಾದ ಜೀವಸತ್ವ ಮತ್ತು ಖನಿಜಾಂಶಗಳು ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಮೊಟ್ಟೆ ಹಾಗೂ ಮೊಸರಿನ ಮಿಶ್ರಣ ಒಂದು ಉತ್ತಮ ಸೌಂದರ್ಯವರ್ಧಕ. ಮೊಟ್ಟೆಯ ಬೆಳಿಯ ಭಾಗ ಮತ್ತು ಮೊಸರನ್ನು ಮಿಶ್ರಣಮಾಡಿ. ಇದನ್ನು ಪೇಸ್ಟ್ ನಂತೆ ಮಾಡಿ ಮುಖಕ್ಕೆ ಹಚ್ಚಿ 15 -20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿ.

ಅರಿಶಿನ + ಮೊಸರು

ಅರಿಶಿನ + ಮೊಸರು

ನೀವು ಪರಿಪೂರ್ಣ ಸೌಂದರ್ಯವನ್ನು ಬಯಸಿದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ಇದು! ಅರಿಶಿನ ಮತ್ತು ಮೊಸರನ್ನು ಬೆರೆಸಿದ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಹೊಳಪು ನೀಡುವುದು ಮಾತ್ರವಲ್ಲದೆ, ಕಲೆಮುಕ್ತ ತ್ವಚೆ ನಿಮ್ಮದಾಗುತ್ತದೆ. ಮಯಸ್ಸಾದ ಕಳೆಯನ್ನು ಹೋಗಲಾಡಿಸುವುದರ ಜೊತೆಗೆ ಮುಖದಲ್ಲಿನ ಮೊಡವೆಗಳನ್ನೂ ಕಡಿಮೆಗೊಳಿಸುತ್ತದೆ. ಒಂದು ಚಮಚ ಅರಿಶಿನವನ್ನು ಒಂದು ಚಮಚ ಮೊಸರಿನೊಂದಿಗೆ ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ತ್ವಚೆಯ ಮೃದುತ್ವಕ್ಕಾಗಿ ಜೇನುತುಪ್ಪವನ್ನೂ ಕೂಡ ಬೆರೆಸಬಹುದು. ಹೀಗೆ ಮನೆಯಲ್ಲಿಯೇ ಅಡಗಿರುವ ಪದಾರ್ಥಗಳು ನಿಮ್ಮ ಪರಿಪೂರ್ಣ ಸೌಂದರ್ಯಕ್ಕೆ ಸಹಾಯಕವಾಗಬಲ್ಲವು. ನೀವೆ ಪ್ರಯತ್ನಿಸಿ. ಪರಿಣಾಮ ಗಮನಿಸಿ.

ಸೌತೆಕಾಯಿ ರಸ

ಸೌತೆಕಾಯಿ ರಸ

ಒಂದು ವೇಳೆ ನಿಮ್ಮ ಚರ್ಮ ಬಿಸಿಲು ಅಥವಾ ಇನ್ನಾವುದೋ ಕಾರಣಕ್ಕೆ ತನ್ನ ಸಹಜ ಕಳೆ ಮತ್ತು ವರ್ಣವನ್ನು ಕಳೆದುಕೊಂಡಿದ್ದರೆ ಸೌತೆಯ ಲೇಪನದ ಸತತ ಬಳಕೆಯಿಂದ ನಿಮ್ಮ ಸಹಜ ವರ್ಣವನ್ನು ಮರಳಿ ಪಡೆಯಬಹುದು. ಇದಕ್ಕಾಗಿ ಅರ್ಧ ಎಳೆಸೌತೆಕಾಯಿಯನ್ನು ಸಿಪ್ಪೆಸಹಿತ ತುರಿದು ಎರಡು ಚಮಚ ಬೆಟ್ಟದ ತಾವರೆ (witch hazel)(ಮರದ ಮೇಲೆ ಬೆಳೆಯುವ ಹಳದಿ ಬಣ್ಣದ ಹೂವುಗಳಂತೆ ತೋರುವ ಗಿಡ) ಮತ್ತು ಎರಡು ಚಮಚ ನೀರು ಸೇರಿಸಿ ಅರೆಯಿರಿ. ಈ ಲೇಪನವನ್ನು ಪ್ರತಿದಿನ ಸ್ವಚ್ಛವಾಗಿ ಮುಖ ತೊಳೆದುಕೊಂಡ ಬಳಿಕ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಲೇಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮ ತನ್ನ ಸಹಜ ವರ್ಣವನ್ನು ಪಡೆಯತೊಡಗುತ್ತದೆ.

ಟೊಮೆಟೋ ಮತ್ತು ಜೇನುತುಪ್ಪ

ಟೊಮೆಟೋ ಮತ್ತು ಜೇನುತುಪ್ಪ

ಟೊಮೆಟೋವು ಚರ್ಮಕ್ಕೆ ಶಕ್ತಿ ನೀಡಿ ಬಿಗಿಗೊಳಿಸುವುದು. ಇದು ಎಲ್ಲಾ ರೀತಿಯ ಚರ್ಮಕ್ಕೆ ಒಳ್ಳೆಯದು. ಜೇನುತುಪ್ಪದೊಂದಿಗೆ ಸೇರಿಸಿದಾಗ ಚರ್ಮಕ್ಕೆ ಒಳ್ಳೆಯ ಕಾಂತಿ ಸಿಗುವುದು. ಜೇನುತುಪ್ಪ ಮತ್ತು ಟೊಮೆಟೋ ಜ್ಯೂಸ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣ ಮುಖಕ್ಕೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಮುಖ ತೊಳೆಯಿರಿ.

ಓಟ್ಸ್ ಮತ್ತು ಜೇನುತುಪ್ಪ

ಓಟ್ಸ್ ಮತ್ತು ಜೇನುತುಪ್ಪ

ಈ ಫೇಸ್ ಮಾಸ್ಕ್ ಮುಖಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು. ನಿದ್ರಿಸುವಾಗ ಚರ್ಮವನ್ನು ಇದು ಪುನಶ್ಚೇತನಗೊಳಿಸುವುದು. ಎರಡು ಚಮಚ ಜೇನುತುಪ್ಪದೊಂದಿಗೆ ಎರಡು ಚಮಚ ಓಟ್ಸ್ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ. ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ಬೆಳಗ್ಗೆ ಮುಖ ತೊಳೆಯಿರಿ.

 

English summary

Simple Tips To Get Younger Looking Skin

You cherish to see that flawless skin that most people have. You can also get a beautiful and young skin at home by using simple home remedies. Natural ingredients are proven to be the best for your skin as they contain many vitamins that are needed for your skin to stop the signs of ageing.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more