ತ್ವಚೆಯ ಆರೈಕೆಗೆ ಹಣ್ಣಿನ ಸಿಪ್ಪೆಯೂ ನೆರವಾಗುತ್ತವೆ, ನಂಬಲೇಬೇಕು!

By Manu

ನಿಮ್ಮ ಮನೆಯಲ್ಲಿ ಉಪಯೋಗಿಸಿದ ಮತ್ತು ಅನುಪಯುಕ್ತ ವಸ್ತುಗಳನ್ನು ಶೇಖರಿಸಿ ಕಾರ್ಪೊರೇಷನ್ ಲಾರಿಗೆ ಹಾಕುವುದು ವಾಡಿಕೆ. ಅನುಪಯುಕ್ತ ವಸ್ತುಗಳನ್ನು ಮತ್ತು ಪದಾರ್ಥಗಳನ್ನು ಮನೆಯಲ್ಲಿ ಇರಿಸಿಕೊಳ್ಳಲು ಯಾರೊಬ್ಬರೂ ಇಚ್ಛಿಸುವುದಿಲ್ಲ. ಇದು ಮಾನವನ ಸಹಜ ಗುಣ. ಯಾರೊಬ್ಬರೂ ಸಹ ಯಾವುದೇ ಅನುಪಯುಕ್ತ ವಸ್ತುಗಳನ್ನು ಹೊರಗೆ ಬಿಸಾಡುವಾಗ ಅದರಿಂದ ಏನಾದರೂ ಉಪಯೋಗವಿದೆಯೇ ಎಂಬುದನ್ನು ಯೋಚಿಸುವುದಿಲ್ಲ. ಹಣ್ಣುಗಳ ಮತ್ತು ತರಕಾರಿಗಳ ಸಿಪ್ಪೆಗಳು, ಅನುಪಯುಕ್ತ ಎಲೆಗಳು, ಬೇರುಗಳೂ ಸಹ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ನೆರವಾಗುತ್ತವೆ. ಗಾಬರಿಪಡಬೇಡಿ.

ಹೌದು! ಅನೇಕ ರಾಸಾಯನಿಕ ಉತ್ಪನ್ನಗಳನ್ನು ಖರೀದಿಸಲು ಹಣ ವ್ಯರ್ಥಮಾಡುವ ಬದಲು ನಿಮ್ಮ ಮನೆಯಲ್ಲಿಯೇ ಸಿಗುವಂತಹ ಈ ರೀತಿಯ ಪದಾರ್ಥಗಳಿಂದ ನಿಮ್ಮ ತ್ವಚೆಯ ಕಾಂತಿಯನ್ನು ಹೆಚಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಡೆಸಿದ ಪ್ರಯೋಗಗಳು ಮತ್ತು ಪರೀಕ್ಷೆಗಳು ಯಶಸ್ವಿಯಾಗಿದ್ದು, ಈ ಅನುಪಯುಕ್ತ ಸಿಪ್ಪೆಗಳನ್ನು ಬಳಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಕೆಲ ಫೇಸ್ ಮಾಸ್ಕ್‌ಗಳ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ...

DIY face masks for healthy, gorgeous spring skin

ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್
ಕಿತ್ತಳೆಯಲ್ಲಿ ಪ್ರಾಕೃತಿಕವಾಗಿ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸುವ ಮತ್ತು ಅಂದ ಹೆಚ್ಚಿಸುವ ಗುಣವು ಹೇರಳವಾಗಿದೆ. ಇದರಿಂದ ತಯಾರಿಸುವ ಫೇಸ್ ಪ್ಯಾಕ್ ಜಿಡ್ಡಿನ ಚರ್ಮಗಳಿಗೆ ಹೆಚ್ಚು ನೆರವಾಗುತ್ತದೆ. ಒಣ ಚರ್ಮವಿದ್ದಲ್ಲಿ ಕ್ರೀಮ್‌ಯುಕ್ತ ಪನ್ನೀರು ಅಥವಾ ಮೊಸರನ್ನು ಬಳಸಬಹುದಾಗಿದೆ. ನೀವು ಮಾಡಬೇಕಾದದು ಇಷ್ಟೇ, ಒಂದು ಚಮಚ ಒಣ ಕಿತ್ತಳೆಯ ಸಿಪ್ಪೆಯ ಪುಡಿಯನ್ನು 1 ಚಮಚ ಫುಲ್ಲರ್ಸ್ ಅರ್ಥ್ ಅಥವಾ ಮುಲ್ತಾನಿ ಮಿಟ್ಟಿಗೆ ಬೆರೆಸಿಕೊಳ್ಳಿ. ನಿಮ್ಮ ಚರ್ಮದ ವಿನ್ಯಾಸಕ್ಕೆ ಅನುಗುಣವಾಗಿ ಪನ್ನೀರು ಅಥವಾ ಕ್ರೀಮ್ ಅನ್ನು ತ್ವಚೆಗೆ ಹಚ್ಚಿಕೊಳ್ಳಿ. ಇದರಿಂದ ಚರ್ಮವು ಮೃದುಗೊಳ್ಳುತ್ತದೆ. ಅಲ್ಲದೆ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ, ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೆಯೇ ಬಿಡಿ. ನಂತರ ತಂಪಾದ ನೀರಿನಿಂದ ಸ್ವಚ್ಛಗೊಳಿಸಿ, ನೈಸರ್ಗಿಕ ಮಾಯಿಶ್ಚರೈಸರ್ ಅನ್ನು ಬಳಸಿ.

ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಉಪಯೋಗ
ಕಲ್ಲಂಗಡಿಯ ಸಿಪ್ಪೆಯು ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಲು ಹೆಚ್ಚು ನೆರವಾಗುತ್ತದೆ. ಕಲ್ಲಂಗಡಿಯ ದಪ್ಪನೆಯ ಸಿಪ್ಪೆಯ ಒಳಗಿನ ಬಿಳಿ ಭಾಗವನ್ನು ನಿಮ್ಮ ಮುಖಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ನಯವಾಗಿ ತಿಕ್ಕಿಕೊಳ್ಳಿ. ನಂತರ ನಿಮ್ಮ ಮುಖವು ಒಣಗಿದ ಮೇಲೆ ನೀರಿನಿಂದ ಸ್ವಚ್ಛಗೊಳಿಸಿ. ಪ್ಯಾಟ್‌ ಡ್ರೈ ಮಾಡಿ ಮೃದುವಾದ ಮಾಯಿಶ್ಚರೈಸರ್ ಅನ್ನು ನಿಮ್ಮ ಚರ್ಮಕ್ಕೆ ಲೇಪಿಸಿಕೊಳ್ಳಿ. ರಾಸಾಯನಿಕ ಸೌಂದರ್ಯವರ್ಧಕಗಳನ್ನು ಬಳಸುವ ಬದಲು ಪ್ರತಿದಿನ ಈ ವಿಧಾನವನ್ನು ಅನುಸರಿಸಬಹುದಾಗಿದೆ.

ಸೇಬಿನ ಸಿಪ್ಪೆಯ ಫೇಸ್ ಪ್ಯಾಕ್
ಸೇಬಿನ ಸಿಪ್ಪೆಯು ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದನ್ನು ತಯಾರಿಸುವುದು ಅತೀ ಸುಲಭ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 2 ಚಮಚ ಸೇಬಿನ ಸಿಪ್ಪೆಯ ಪುಡಿ ಅಥವಾ ಪೇಸ್ಟ್ ಮತ್ತು 3 ಚಮಚ ಮಜ್ಜಿಗೆಯನ್ನು ಮಿಶ್ರಣ ಮಾಡಿಕೊಳ್ಳಿ. ಅದು ಮೃದುವಾದ ಪೇಸ್ಟ್ ಆಗುವಂತೆ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೆಯೇ ಬಿಡಿ. ನಂತರ ಸ್ವಚ್ಛಗೊಳಿಸಿ ಒಣಗಿಸಿಕೊಳ್ಳಿ. ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿ ಅನುಸರಿಸಿದರೆ ನಿಮ್ಮ ತ್ವಚೆಯು ಹೆಚ್ಚು ಕಾಂತಿಯುತಗೊಂಡು ನಳನಳಿಸುತ್ತದೆ.

ದಾಳಿಂಬೆಯ ಸಿಪ್ಪೆ
ದಾಳಿಂಬೆಯ ಸಿಪ್ಪೆಗಳಲ್ಲಿ ಆಂಟಿಮೈಕ್ರೊಬೈಯಲ್ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಅಧಿಕವಾಗಿರುತ್ತವೆ. ಇದು ತ್ವಚೆಯ ಇನ್‍ಫೆಕ್ಷನ್‍ಗಳಿಗೆ ಹೇಳಿ ಮಾಡಿಸಿದ ಮನೆ ಮದ್ದಾಗಿರುತ್ತದೆ. ಇದು ತ್ವಚೆಯಲ್ಲಿರುವ ಸಂಕೋಚಕ ಗುಣಗಳನ್ನು ಉದ್ದೀಪನ ಮಾಡುತ್ತದೆ. ಈ ಸಂಕೋಚಕ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ನಿಮ್ಮ ತ್ವಚೆಯನ್ನು ಬಿಗಿ ಮಾಡುತ್ತವೆ ಮತ್ತು ತ್ವಚೆಯಲ್ಲಿರುವ ರಂಧ್ರಗಳನ್ನು ಮುಚ್ಚುತ್ತದೆ. ಇವು ತ್ವಚೆ ಇಳಿ ಬೀಳುವುದನ್ನು ತಡೆಯುತ್ತದೆ, ಜೊತೆಗೆ ಇದು ವಯಸ್ಸಾದಂತೆ ಕಾಣುವುದನ್ನು ಸಹ ತಡೆಯುತ್ತದೆ. ಈ ಸಿಪ್ಪೆಗಳನ್ನು ಹೇಗೆಲ್ಲ ಬಳಸಬಹುದು ಎಂದು ತಿಳಿದುಕೊಳ್ಳೋಣ

ಮಾಡುವ ವಿಧಾನ
ದಾಳಿಂಬೆ ಸಿಪ್ಪೆಗಳನ್ನು ಒಣಗಿಸಿ, ಪುಡಿ ಮಾಡಿ ಒಂದು ಗಾಳಿಯಾಡದ ಜಾಡಿಯಲ್ಲಿ ಹಾಕಿ ಇಟ್ಟುಕೊಳ್ಳಿ. ಈ ಪುಡಿಯನ್ನು ತಿಂಗಳಾನುಗಟ್ಟಲೆ ಬಳಸಿಕೊಳ್ಳಬಹುದು. ಇದನ್ನು ಪೇಸ್ ಮಾಸ್ಕ್ ಹಾಗಿ, ಸ್ಕ್ರಬ್ ಆಗಿ ಅಥವಾ ಇತರೆ ಫೇಸ್ ಪ್ಯಾಕ್‌ಗಳ ಜೊತೆಗೆ ಬಳಸಿಕೊಳ್ಳಬಹುದು. ಕೆಲವೊಮ್ಮೆ ನೀವು ತಾಜಾ ದಾಳಿಂಬೆ ಸಿಪ್ಪೆಯನ್ನು ಸಹ ಕೆಲವೊಂದು ಫೇಸ್ ಪ್ಯಾಕ್‌ಗಳಿಗೆ ಬಳಸಿಕೊಳ್ಳಬಹುದು. ದಾಳಿಂಬೆಯ ಕೆಲವೊಂದು ಸಿಪ್ಪೆಗಳನ್ನು ಸುಲಿದುಕೊಂಡು, ಅವುಗಳನ್ನು ಜಜ್ಜಿಕೊಳ್ಳಿ. ಒಂದು ಟೇಬಲ್ ಚಮಚ ದಾಳಿಂಬೆ ಸಿಪ್ಪೆಗೆ ಎರಡು ಟೇಬಲ್ ಚಮಚ ಮಲಾಯ್ ಅಥವಾ ಕೆನೆಯನ್ನು ಹಾಕಿ. ನಂತರ ಇದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಹಾಕಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಮತ್ತು ಕುತ್ತಿಗೆಗೆ ಲೇಪಿಸಿಕೊಳ್ಳಿ. 15 ನಿಮಿಷ ಇದನ್ನು ಬಿಟ್ಟು, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆ ಬಾಳೆಹಣ್ಣಿನ ಸಿಪ್ಪೆಯು ತ್ವಚೆಗೆ ಪೋಷಕಾಂಶಗಳನ್ನು ಒದಗಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೀವು ಮಾಡಬೇಕಾದದು ಇಷ್ಟೇ, ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತೊಳೆಯಿರಿ. ಈ ಪ್ಯಾಕ್ ನಿಮ್ಮ ಮುಖದಲ್ಲಿರುವ ಕಲೆಗಳನ್ನು ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ.

Story first published: Tuesday, February 2, 2016, 9:04 [IST]
X
Desktop Bottom Promotion