ಕೂದಲ ಪೋಷಣೆಗೆ ಕಡೆಲೆಹಿಟ್ಟು : ಬಳಕೆಯ ವಿಧಾನಗಳು

ಕಡಲೆಹಿಟ್ಟು, ಹಿಂದಿಯಲ್ಲಿ ಬೇಸನ್ ಎಂದು ಕರೆಯಲ್ಪಡುವ ಈ ಅಡುಗೆಯ ಸಾಮಾಗ್ರಿ ಭಾರತದ ಎಲ್ಲಾ ಅಡುಗೆಮನೆಗಳಲ್ಲಿ ಸದಾ ಇದ್ದೇ ಇರುತ್ತದೆ ಹಾಗೂ ಕೇವಲ ಬೋಂಡಾ ಮಾಡುವ ಹೊರತಾಗಿ ತ್ವಚೆ ಮತ್ತು ಕೂದಲ ಆರೈಕೆಯಲ್ಲಿಯೂ ಬಹುವಾಗಿಯೇ ಬಳಸಲಾಗುತ್ತಿದೆ. ಕಡಲೆಹಿಟ್ಟು ಉತ್ತಮ ಸ್ವಚ್ಛಕಾರಕ ಸಮಾಗ್ರಿಯಾಗಿರುವ ಕಾರಣ ಹಾಗೂ ಇದಲ್ಲಿರುವ ಪೋಷಕಾಂಶಗಳು ತ್ವಚೆ ಮತ್ತು ಕೂದಲಿಗೆ ಪೂರಕವಾಗಿರುವ ಮೂಲಕ ತ್ವಚೆ ಮತ್ತು ಕೂದಲು ಕಲ್ಮಶರಹಿತಗೊಂಡು ಉತ್ತಮ ಪೋಷಣೆ ಪಡೆಯುತ್ತವೆ ಹಾಗೂ ಅದ್ಭುತವಾದ ಸಹಜಸೌಂದರ್ಯವನ್ನು ಪಡೆಯುತ್ತವೆ.

ಇದರ ಅಂಟಿ ಆಕ್ಸಿಡೆಂಟ್ ಗುಣ ಚರ್ಮವನ್ನು ಹಾನಿಗೊಳಿಸುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ವಿರುದ್ದ ಹೋರಾಡುತದೆ ಹಾಗೂ ನೆತ್ತಿಯ ಚರ್ಮ ಮತ್ತು ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ಒದಗಿಸಿ ನೀವು ಇಚ್ಛಿಸಿದ ಕೂದಲು ಪಡೆಯಲು ನೆರವಾಗುತ್ತದೆ. ಕಡಲೆಹಿಟ್ಟಿನಲ್ಲಿ ಹಲವಾರು ಪ್ರಮುಖ ವಿಟಮಿನ್ನಿಗಳು, ಪ್ರೋಟೀನುಗಳು ಹಾಗೂ ಮುಖ್ಯವಾಗಿ ಕರಗುವ ನಾರು ಇದ್ದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ ಹಾಗೂ ವಿಶೇಷವಾಗಿ ಕೂದಲ ಆರೈಕೆಗೆ ನೆರವಾಗುವ ಹಲವಾರು ಮನೆಮದ್ದುಗಳಲ್ಲಿ ಬಳಕೆಯಾಗುತ್ತದೆ.

Besan For Hair

ಕಡಲೆಹಿಟ್ಟಿನ ಈ ಪ್ರಯೋಜನಗಳನ್ನು ಪಡೆಯಲು ಹಾಗೂ ಸದೃಢ ಮತ್ತು ಆರೋಗ್ಯಕರ ಕೂದಲನ್ನು ಪಡೆಯಲು ಕಡಲೆಹಿಟ್ಟನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ. ಅದಕ್ಕೂ ಮೊದಲು ಕಡಲೆಹಿಟ್ಟಿನ ಬಳಕೆಯಿಂದ ಕೂದಲಿಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

* ಕೂದಲನ್ನು ಸ್ವಚ್ಛಗೊಳಿಸುತ್ತದೆ
* ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
* ಕೂದಲು ಉದುರುವುದನ್ನು ತಪ್ಪಿಸುತ್ತದೆ
* ತಲೆಹಿಟ್ಟಿನ ವಿರುದ್ದ ಹೋರಾಡುತ್ತದೆ.
* ಕಳಾಹೀನ ಮತ್ತು ದುರ್ಬಲ ಕೂದಲನ್ನು ಮತ್ತೆ ಸದೃಢಗೊಳಿಸುತ್ತದೆ.
* ಕೂದಲಿಗೆ ಹೆಚ್ಚಿನ ಬಲ ಒದಗಿಸುತ್ತದೆ.
* ಎಣ್ಣೆಪಸೆಯ ಕೂದಲ ನಿರ್ವಹಣೆ ಸುಲಭಗೊಳಿಸುತ್ತದೆ.
* ಕೂದಲಿಗೆ ನೈಸರ್ಗಿಕ ಕಾಂತಿಯನ್ನು ಒದಗಿಸುತ್ತದೆ.

ಕೂದಲ ಬೆಳವಣಿಗೆಗೆ

ಮೊಸರಿನಲ್ಲಿರುವ ಲ್ಯಾಕ್ಟಿ ಆಮ್ಲ ಕೂದಲ ಬುಡಗಳನ್ನು ಪ್ರಚೋದಿಸಿ ಕೂದಲ ಬೆಳವಣಿಗೆ ಶೀಘ್ರಗೊಳಿಸಲು ನೆರವಾಗುತ್ತದೆ. ಲಿಂಬೆಯಲ್ಲಿರುವ ಆಮ್ಲೇಯತೆ ನೆತ್ತಿಯ ಚರ್ಮ ಆರೋಗ್ಯಕರ ವಾತಾವರಣವನ್ನು ಪಡೆಯಲು ನೆರವಾಗುವ ಮೂಲಕ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ ಹಾಗೂ ಬಾದಾಮಿ ಎಣ್ಣೆ ನೆತ್ತಿಯ ಚರ್ಮಕ್ಕೆ ಆರ್ದ್ರತೆಯನ್ನು ಒದಗಿಸಿ ಪೋಷಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ಕಡಲೆಹಿಟ್ಟು
*1 ದೊಡ್ಡ ಚಮಚ ಬಾದಾಮಿ ಎಣ್ಣೆ
*5 ದೊಡ್ಡ ಚಮಚ ಮೊಸರು
*2 ಚಿಕ್ಕ ಚಮಚ ಲಿಂಬೆರಸ

ಬಳಕೆಯ ವಿಧಾನ

ಒಂದು ಬೋಗುಣಿಯಲ್ಲಿ ಕಡ್ಲೆಹಿಟ್ಟು ಹಾಕಿ ಮೊಸರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಬಾದಾಮಿ ಎಣ್ಣೆ ಮತ್ತು ಲಿಂಬೆರಸ ಸೇರಿಸಿ ನಯವಾದ ಲೇಪ ತಯಾರಿಸಿ. ನಿಮ್ಮ ಅನುಕೂಲಕ್ಕೆ ತಕ್ಕಷ್ಟು ನೀರು ಹಾಕಿ ಕೊಂಚ ತೆಳುವಾಗಿಸಬಹುದು. ಆದರೆ ತೀರಾ ದಪ್ಪನಾಗಿಯೂ ಇರಬಾರದು, ತೀರಾ ನೀರುನೀರಾಗಿಯೂ ಇರಬಾರದು. ಈಗತಾನೇ ಕೂದಲನ್ನು ಉಗುರುಬೆಚ್ಚನೆಯ ನೀರಿನಿಂದ ತೋಯಿಸಿ ನೀರಿಳಿದ ತಕ್ಷಣ ಒದ್ದೆಯಿರುವ ಕೂದಲಿಗೆ ಈ ಲೇಪವನ್ನು ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿ. ವಿಶೇಷವಾಗಿ ಕೂದಲ ಬುಡಗಳು ಹೆಚ್ಚಿನ ಪ್ರಮಾಣ ಪಡೆಯಲಿ. ಬಳಿಕ ಶವರ್ ಕ್ಯಾಪ್ ಒಂದನ್ನು ಧರಿಸಿ ಸುಮಾರು ಕಾಲು ಘಂಟೆ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ನಿಮ್ಮ ನಿತ್ಯದ ಶಾಂಪೂ ಬಳಸಿ ಸ್ನಾನ ಮಾಡಿ, ಬಳಿಕ ಕಂಡೀಶನರ್ ಬಳಸಿ.

ತಲೆಹೊಟ್ಟು ನಿವಾರಣೆಗೆ

ಕಡಲೆಹಿಟ್ಟು ಮತ್ತು ಮೊಸರು ಎರಡರಲ್ಲಿಯೂ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳಿವೆ ಹಾಗೂ ಕಲ್ಮಶ ಮತ್ತು ಧೂಳನ್ನು ನಿವಾರಿಸುವ ಮತ್ತು ಹೆಚ್ಚುವರಿ ಎಣ್ಣೆಯಂಶವನ್ನು ಹೀರಿ ತೆಗೆಯುವ ಗುಣಗಳೂ ಇವೆ. ಈ ಗುಣಗಳು ತಲೆಹೊಟ್ಟನ್ನು ನಿವಾರಿಸಲು ಬಳಕೆಯಾಗುತ್ತವೆ.

ಅಗತ್ಯವಿರುವ ಸಾಮಾಗ್ರಿಗಳು:

*1 ದೊಡ್ಡ ಚಮಚ ಕಡಲೆಹಿಟ್ಟು
*1 ದೊಡ್ಡ ಚಮಚ ಮೊಸರು

ಬಳಕೆಯ ವಿಧಾನ:

ಒಂದು ಬೋಗುಣಿಯಲ್ಲಿ ಮೊಸರು ಮತ್ತು ಕಡಲೆಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಲೇಪ ತಯಾರಿಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಬಹುದು. ಈ ಲೇಪವನ್ನು ತಲೆಹೊಟ್ಟು ಇರುವ ಭಾಗಕ್ಕೆ ಹೆಚ್ಚಾಗಿ ತಗಲುವಂತೆ ಇಡಿಯ ತಲೆಗೆ ಹಚ್ಚಿಕೊಳ್ಳಿ. ಸುಮಾರು ಮೂವತ್ತು ನಿಮಿಷ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ಕೂದಲ ಬುಡಗಳನ್ನು ಆಳದಿಂದ ಸ್ವಚ್ಛಗೊಳಿಸಲು

ಕಡಲೆಹಿಟ್ಟಿನ ಸರಳ ಮಿಶ್ರಣವೇ ಈ ಕೆಲಸಕ್ಕೆ ಸಾಕಾಗುತ್ತದೆ. ಕಡ್ಲೆಹಿಟ್ಟು ತಲೆಗೂದಲ ಬುಡದಲ್ಲಿ ಸಂಗ್ರಹವಾಗಿದ್ದ ಕೊಳೆಗಳನ್ನು ನಿವಾರಿಸುವ ಜೊತೆಗೇ ಆಳದಿಂದ ಕಲ್ಮಶಗಳನ್ನು ಸೆಳೆದು ನಿವಾರಿಸಿ ತ್ವಚೆಗೆ ಉತ್ತಮ ಪೋಷಣೆ ಒದಗಿಸುತ್ತದೆ. ತನ್ಮೂಲಕ ಕೂದಲು ಸೊಂಪಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

  • 2 ದೊಡ್ಡ ಚಮಚ ಕಡಲೆಹಿಟ್ಟು
  • ನೀರು ಅಗತ್ಯಕ್ಕೆ ತಕ್ಕಷ್ಟು

ಬಳಕೆಯ ವಿಧಾನ:

ಒಂದು ಬೋಗುಣಿಯಲ್ಲಿ ಕಡಲೆಹಿಟ್ಟು ಸಂಗ್ರಹಿಸಿ ಅಗತ್ಯವಿದ್ದಷ್ಟು ನೀರು ಬೆರೆಸಿ ಲೇಪ ತಯಾರಿಸಿ. ಒಂದು ಚಿಕ್ಕ ಬ್ರಶ್ ಬಳಸಿ ಈ ಲೇಪವನ್ನು ಕೂದಲ ಬುಡಕ್ಕೆ ತಲಗುವಂತೆ ಹಚ್ಚಿಕೊಳ್ಳಿ. ಸುಮಾರು ಐದರಿಂದ ಹತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಎಣ್ಣೆತ್ವಚೆಯ ನಿರ್ವಹಣೆಗೆ

ಕಡಲೆಹಿಟ್ಟು ತ್ವಚೆಯನ್ನು ಆಳದಿಂದ ಸ್ವಚ್ಛಗೊಳಿಸುವ ಕಾರಣ ಚರ್ಮದಡಿಯಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ತೈಲವನ್ನು ನಿವಾರಿಸಲು ನೆರವಾಗುತ್ತದೆ. ಮೆಂತೆಯ ಆರ್ದೃತಾಕಾರಕ ಗುಣ ತ್ವಚೆಗೆ ಆರ್ದ್ರತೆ ನೀಡುವ ಜೊತೆಗೇ ಕೂದಲಿನಲ್ಲಿ ಎಣ್ಣೆಪಸೆಯಾಗದಂತೆ ಕಾಪಾಡುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ಕಡಲೆಹಿಟ್ಟು
*2 ದೊಡ್ಡ ಚಮಚ ಮೆಂತೆಪುಡಿ
*ತೆಂಗಿನ ಹಾಲು, ಅಗತ್ಯಕ್ಕೆ ತಕ್ಕಷ್ಟು

ಬಳಕೆಯ ವಿಧಾನ

ಕಡೆಲೆಹಿಟ್ಟು ಮತ್ತು ಮೆಂತೆಪುಡಿಯನ್ನು ಒಂದು ಬೋಗುಣಿಯಲ್ಲಿ ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ತೆಂಗಿನ ಹಾಲನ್ನು ಬೆರೆಸಿ ನಯವಾದ ಲೇಪ ತಯಾರಿಸಿ. ಈ ಲೇಪವನ್ನು ತಲೆಗೂದಲಿಗೆ ಹಚ್ಚಿಕೊಳ್ಳಿ. ಬುಡದಿಂದ ತುದಿಯವರೆಗೂ ಏಕಸಮಾನವಾಗಿ ಲೇಪ ಬರುವಂತಿರಲಿ ಸುಮಾರು ಹದಿನೈದು ಇಪ್ಪತ್ತು ನಿಮಿಷ ಒಣಗಲು ಬಿಟ್ಟ ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ನಿತ್ಯದ ಶಾಂಪೂ ಬಳಸಿ ಸ್ನಾನ ಮಾಡಿ.

ಆರೋಗ್ಯಕರ ಮತ್ತು ಬಲಯುತವಾದ ಕೂದಲಿಗೆ

ಮೊಸರು ಮತ್ತು ಆಲಿವ್ ಎಣ್ಣೆ ಎರಡರಲ್ಲಿಯೂ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಇವು ಚರ್ಮಕ್ಕೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಣೆ ಒದಗಿಸುತ್ತವೆ ಹಾಗೂ ಕೂದಲ ಉತ್ತಮ ಬೆಳವಣಿಗೆಗೆ ನೆರವಾಗುತ್ತವೆ. ಲಿಂಬೆಯಲ್ಲಿರುವ ಆಮ್ಲೀಯ ಗುಣ ಕೂದಲನ್ನು ಇನ್ನಷ್ಟು ಸ್ವಚ್ಛಗೊಳಿಸುತ್ತದೆ ಹಾಗೂ ಈ ಮೂರೂ ಸಾಮಾಗ್ರಿಗಳು ಒಟ್ಟಾಗಿ ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೇ ಅತ್ಯುತ್ತಮ ಪೋಷಣೆಯನ್ನು ಒದಗಿಸಿ ಕೂದಲನ್ನು ದೃಢಗೊಳಿಸುತ್ತವೆ.

ಅಗತ್ಯವಿರುವ ಸಾಮಾಗ್ರಿಗಳು:

*3 ದೊಡ್ಡ ಚಮಚ ಕಡಲೆಹಿಟ್ಟು
*1 ದೊಡ್ಡ ಚಮಚ ಮೊಸರು
*1 ದೊಡ್ಡ ಚಮಚ ಆಲಿವ್ ಎಣ್ಣೆ
1 ದೊಡ್ಡ ಚಮಚ ಲಿಂಬೆರಸ

ಬಳಕೆಯ ವಿಧಾನ:

ಒಂದು ಬೋಗುಣಿಯಲ್ಲಿ ಕಡ್ಲೆಹಿಟ್ಟು ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಆಲಿವ್ ಎಣ್ಣೆ ಮತ್ತು ಲಿಂಬೆರಸ ಬೆರೆಸಿ ನಯವಾಗ ಲೇಪವನ್ನಾಗಿಸಿ. ಈ ಲೇಪವನ್ನು ಕೂದಲ ಬುಡದ ಚರ್ಮ ಆವರಿಸುವಂತೆ ಹಚ್ಚಿ ಹಾಗೂ ಕೂದಲ ತುದಿಯವರೆಗೂ ತಾಕುವಂತೆ ಹಚ್ಚಿಕೊಳ್ಳಿ. ಸುಮಾರು ಮೂವತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಂಡು ನಿಮ್ಮ ಎಂದಿನ ಶಾಂಪೂ ಬಳಸಿ ಸ್ನಾನ ಮಾಡಿ.

ಕೂದಲಿಗೆ ಹೊಳಪು ಒದಗಿಸಲು

ಕೂದಲ ಆರೋಗ್ಯವನ್ನು ಉತ್ತಮಗೊಳಿಸುವ ಹೊರತಾಗಿ ಮೊಟ್ಟೆಯ ಬಿಳಿಭಾಗದಲ್ಲಿ ಚರ್ಮಕ್ಕೆ ಹೆಚ್ಚಿನ ಚೈತನ್ಯ ನೀಡುವ ಮತ್ತು ಹೊಳಪನ್ನು ಒದಗಿಸುವ ಗುಣಗಳಿವೆ. ಬಾದಾಮಿ ಎಣ್ಣೆ ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೇ ಕೂದಲನ್ನು ಮೃದುವಾಗಿಸಿ ಹೊಳಪುಳ್ಳದ್ದಾಗಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ಕಡಲೆಹಿಟ್ಟು
*2 ದೊಡ್ಡ ಚಮಚ ಬಾದಾಮಿ ಪುಡಿ
*ಒಂದು ಮೊಟ್ಟೆಯ ಬಿಳಿಭಾಗ.

ಬಳಕೆಯ ವಿಧಾನ:

ಒಂದು ಬೋಗುಣಿಯಲ್ಲಿ ಕಡಲೆಹಿಟ್ಟು ಮತ್ತು ಬಾದಾಮಿ ಪುಡಿಯನ್ನು ಹಾಕಿ ಬೆರೆಸಿ. ಬಳಿಕ ಮೊಟ್ಟೆಯ ಬಿಳಿಭಾಗವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಲೇಪ ತಯಾರಿಸಿ. ಈ ಲೇಪವನ್ನು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ. ಬಳಿಕ ಮೂವತ್ತು ನಿಮಿಷ ಒಣಗಲು ಬಿಡಿ. ನಂತಹ ಬಳಿಕ ತಣ್ಣೀರಿನಿಂದ ತೊಳೆದುಕೊಂಡು ನಿಮ್ಮ ಎಂದಿನ ಶಾಂಪೂ ಬಳಸಿ ಸ್ನಾನ ಮಾಡಿ.

English summary

Besan For Hair: Benefits & How To Use

Mainly used for its cleansing action, besan has high nutritional value and leaves you with healthy and luscious locks. It has strong antioxidant properties that fight free radical damage to enrich and nourish your scalp and give you the hair that you desire. It can be used with ingredients like lemon, curd, honey etc. to combat various hair issues. Here is how!
X
Desktop Bottom Promotion