50ರಲ್ಲೂ ಸುಂದರವಾಗಿ ಕಾಣುವುದು ಹೇಗೆ?

ಅಬ್ಬಾ ಆ ಪಕ್ಕದ್ಮನೆ ಸರಿತಾ ನಿನ್ನೆ ಪಾರ್ಟಿಯಲ್ಲಿ ಎಷ್ಟು ಚಂದ ಕಾಣಿಸ್ತಿದ್ದಳು ಗೊತ್ತೇನ್ರಿ? ಅಲ್ಲ ಆ ಫಾನ್ಸಿ ಸೀರೆ ಕೂಡಾ ಅದೆಷ್ಟು ಚೆನ್ನಾಗಿ ಒಪ್ಪುತ್ತಿತ್ತು ಅವರ ಮೈಗೆ! ಕಣ್ಣಿಗೆ ಕಾಡಿಗೆ ತುಟಿಗೆ ಲಿಫ್ ಸ್ಟಿಕ್ ಹಚ್ಚಿದ್ದಂತೂ ಸೂಪರ್.. ಒಟ್ಟಿನಲ್ಲಿ ಅವರು ಅಷ್ಟು ತೆಳ್ಳಗೆ ವಯಸ್ಕ ಹುಡುಗಿ ತರ ಹೇಗೆ ಮಿಂಚತಾ ಇದ್ರು ಅಂದ್ರೆ ....

ಅದು ಸರಿ ಅವರಿಗೆ ವಯಸ್ಸೇಷ್ಟು ಈಗ? ಇದೆ ಮುಖ್ಯವಾದ ವಿಷಯ. ಈಗ ಸರಿತಾ ೫೦ನೇ ವರ್ಷದಲ್ಲಿದ್ದಾರೆ. ನನಗಿಂತ ೨ ವರ್ಷ ಜಾಸ್ತಿ! ಆದರೂ ನನಗಿಂತ ಅದೆಷ್ಟೊ ವರ್ಷ ಸಣ್ಣವರಂತೆ ಕಾಣುತ್ತಾರೆ!

ಹೆಂಗಸರ ಇಂತಹ ಸಂಭಾಷಣೆಗಳು ಸಾಮಾನ್ಯವಲ್ಲವೇ? ವಯಸ್ಸಾದಂತೆ ಹಲವಾರು ಮಹಿಳೆಯರು ಅಂದ ಚಂದಗಳು ಮಾಸಿ ಅಜ್ಜಿಯಂತೆ ಕಾಣುತ್ತಾರೆ. ಅದರಲ್ಲೂ ಕೆಲವರಿಗೆ ಕಡಿಮೆ ಪ್ರಾಯದ ಮಕ್ಕಳಿರುತ್ತಾರೆ. ಅಂತಹವರಂತೂ ಮಕ್ಕಳೊಂದಿಗೆ ಹೋಗುವಾಗ ದೊಡ್ಡಮ್ಮಂದಿರಂತೆ ಕಾಣಿಸುತ್ತಾರೆ. ಇವರೇ ನಮ್ಮ ತಾಯಿ ಅಂತ ಎಲ್ಲರನ್ನೂ ಒಪ್ಪಿಸಬೇಕಾಗುತ್ತದೆ!

How to Be Beautiful at Fifty

ಕಲುಷಿತಗೊಳ್ಳುತ್ತಿರುವ ನಗರ ಪ್ರೆದೇಶದ ವಾತಾವರಣದಲ್ಲಿ ಬೇಗ ಕೂದಲು ನೆರೆಯುವುದು, ಚರ್ಮ ಸುಕ್ಕುಗಟ್ಟುವುದು, ಬೊಜ್ಜು ಬೆಳೆಯುವುದು, ಬಿಡದ ಕಾಯಿಲೆಗಳು ಹೀಗೆ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅವುಗಳ ನಡುವೆ ಸಂಸಾರ ಮತ್ತಿತರ ದೊಂದರೆಗಳ ಬಗ್ಗೆ ಅತಿಯಾಗಿ ಯೋಚಿಸುವುದು ಮಾನಸಿಕವಾಗಿಯೂ ನಮ್ಮನ್ನು ಇನ್ನಷ್ಟು ವಯಸ್ಸಾದವರಂತೆ ಗೋಚರಿಸುವಂತೆ ಮಾಡುತ್ತವೆ. ಇದು ಇಂದಿನ ಮಹಿಳೆಯರ ದೊಡ್ಡ ಅಳಲು.

ಯಾಕೆಂದರೆ ಸಭೆ ಸಮಾರಂಭಗಳಿಗೆ ಹೋಗುವಾಗ ತನಗೆ ೫೦ ವರ್ಷವಾಯಿತು ಎಂದು ಹೇಳಿಕೊಳ್ಳಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಅದಕ್ಕಾಗಿಯೇ ವಯಸ್ಸನ್ನು ಮರೆ ಮಾಚುವ ಸೀರೆ ಅಥವಾ ಬೇರೆ ಬಟ್ಟೆಗಳು, ಅದಕ್ಕೆ ತಕ್ಕಂತೆ ಕೇಶಾಲಂಕಾರ, ಮುಖಾಲಂಕಾರ ಮಾಡಿಕೊಳ್ಳುವುದು ಹೇಗೆ ಎಂದು ಗೊತ್ತಾಗದೆ ದಿನವೆಲ್ಲ ಅದರ ಚಿಂತೆಯಲ್ಲೇ ಮುಳುಗಿರುತ್ತಾರೆ. ತಮ್ಮ ಸಮವಯಸ್ಕರು ಅಥವಾ ನಮಗಿಂತ ದೊಡ್ಡವರು ಕಡಿಮೆ ವಯಸ್ಸಿನವರಂತೆ ಕಂಡರಂತೂ ಮುಗಿಯಿತು ಬಿಡಿ ಮನೆಯಲ್ಲಿ ರಂಪಾಟವೆ.ಇದಕ್ಕಿಂತ ಇನ್ನೂ ಶೋಚನಿಯವೆಂದರೆ ಇದೇ ಕಾರಣಕ್ಕೆ ಕೆಲವರು ಖಿನ್ನತೆಗೆ ಒಳಗಾಗಿ ಎಲ್ಲರಿಂದ ದೂರ ಉಳಿದವರೂ ಇದ್ದಾರೆ!

ಹಾಗೆಂದ ಮಾತ್ರಕ್ಕೆ ಇದೇನು ಪರಿಹರಿಸಲಾಗದ ಸಮಸ್ಯೆಯಲ್ಲ. ನೀವು ೫೦ ವರ್ಷ ದಾಟಿದರೂ ಇನ್ನಷ್ಟು ಎಳೆಯವಯಸ್ಸಿನವರಂತೆ ಕಾಣಲು ನಿಮ್ಮ ಬದುಕುವ ಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕಷ್ಟೇ. ಇದರಿಂದ ನೀವು ಕೇವಲ ಸುಂದರವಾಗಿ ಕಾಣುವುದು ಮಾತ್ರವಲ್ಲ ಆರೋಗ್ಯವಾಗಿರೂ ಸದೃಢರಾಗಿಯೂ ಇರಬಹುದು.

ಬದುಕು ಇನ್ನಷ್ಟು ಸುಂದರವೆನಿರುವುದಕ್ಕೇ ಮುಖ್ಯವಾಗಿ ಬೇಕಾಗಿರುವುದೇ ಆತ್ಮವಿಶ್ವಾಸ! ತನಗೆ ಕಷ್ಟಗಳು ಬಂತಲ್ಲಾ, ನನಗೆ ಸಮಸ್ಯೆಯಿದೆ ಹೇಗೆ ಅದನ್ನು ಪರಿಹರಿಸುವುದು ಎಂಬಿತ್ಯಾದಿ ಯೋಚನೆಗಳಿಂದ ಮೊದಲು ಹೊರಬನ್ನಿ. ಯಾಕೆಂದರೆ ನಿಮ್ಮಲ್ಲಿ ಸೌಂದರ್ಯ ಕಾಣಲು ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಹಾಗೆ ಮಾನಸಿಕ ಪ್ರಶಾಂತತೆ ಕೂಡಾ. ಎಲ್ಲವನ್ನು ಬಗೆಹರಿಸಬಲ್ಲೇ, ನಾಳೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ನಿಮ್ಮ ಮುಖದಲ್ಲಿ ನಿಮಗೇ ಅರಿವಿಲ್ಲದ ಹಾಗೆ ನಗು ಮೂಡುತ್ತದೆ. ಎಲ್ಲಾ ರೋಗಗಳಿಗೂ ಸಮಸ್ಯೆಗಳಿಗೂ ನಗುವೇ ರಾಮಬಾಣವಲ್ಲವೇ?

ನಿನ್ನೆ ಹೇಗೆ ಕಳೆದೆವೂ ಗೊತ್ತಿಲ್ಲ ಆದರೆ ನಾಳೆಯಂತೂ ಉತ್ಸಾಹದಿಂದ ಕೂಡಿರಬೇಕು. ಇದಕ್ಕೆ ಪ್ರತಿದಿನ ಕಾಣುವ ಮುಂಜಾನೆ ಚೆನ್ನಾಗಿರಬೇಕು. ಬೆಳಿಗ್ಗೆ ಏಳುವಾಗ ಒಳ್ಳೆಯ ಚಿತ್ತದಿಂದ ಎದ್ದೇಳಿ. ನಾಳೆಯ ಬಗ್ಗೆ ಕನಸುಗಳಿರಲಿ. ಸೂರ್ಯನ ಎಳೆಯ ಕಿರಣಗಳು ನೇರವಾಗಿ ಮೈಮೇಲೆ ಬಿದ್ದರೆ ಚರ್ಮದಲ್ಲಿ ಯಾವುದೇ ಸುಕ್ಕುಗಟ್ಟುವಂತಹ ಸಮಸ್ಯೆಗಳೂ ಇರುವುದಿಲ್ಲ. ಜೊತೆಗೆ ನಿಮ್ಮ ಮನಸ್ಸು ಹಗುರಾಗಿ ಉತ್ಸಾಹದಿಂದ ಕೂಡಿರುತ್ತದೆ.

ಆಗಲೇ ಹೇಳಿದ ಹಾಗೆ ನಿಮ್ಮ ಮನಸ್ಸನ್ನು ನೀವೆ ಸಂತೋಷದಿಂದಿಡಬೇಕು. ಮುಂಜಾನೆ ಎದ್ದ ನಂತರ ಕೆಲಸವನ್ನು ಮಾಡುವಾಗ ಆದಷ್ಟು ಕಿವಿಗೆ ಇಂಪಾಗಿರುವಂತಹ, ಮನಸ್ಸಿಗೆ ಮುದ ನೀಡುವಂತಹ ಸಂಗೀತಗಳನ್ನು ಆಲಿಸಿ. ಮನೆ ಕೆಲಸಗಳನ್ನು ಆದಷ್ಟು ನೀವೆ ಮಾಡಿದರೆ ದೈಹಿಕ ವ್ಯಾಯಾಮ ದೊರೆಯುತ್ತದೆ.

ವ್ಯಾಯಾಮ ಎನ್ನುವುದು ಮನುಷ್ಯನಿಗೆ ರೋಗ ನಿರೋಧಕ ಔಷಧಿಯಂತೆ. ಬೇರೆ ಯಾವುದೇ ರೀತಿಯಲ್ಲಿ ನೀವು ನಿಮ್ಮ ಅಂದವನ್ನು ಕಾಪಾಡಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಪರಿಣಾಮಕಾರಿಯಾದುದು ವ್ಯಾಯಾಮ. ದಿನ ಬೆಳಿಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಜೊತೆಗೆ ದಿನದ ಒಂದಿಷ್ಟು ಸಮಯವನ್ನು ಧ್ಯಾನಕ್ಕಾಗಿ ಮೀಸಲಿಡಿ. ಇದರಿಂದ ದೇಹದಲ್ಲಿ ಹೊಸ ಚೈತನ್ಯ ಮೂಡಿ ದಿನದಿಂದ ದಿನಕ್ಕೆ ನಿಮ್ಮ ಚರ್ಮ ಕಾಂತಿಯುತಗೊಳ್ಳುವುದರಲ್ಲಿ ಸಂಶಯವಿಲ್ಲ.

ಬೆಳಿಗ್ಗೆ ಎದ್ದು ಸಾಮಾನ್ಯ ಉಪಾಹಾರಗಳನ್ನು ಸೇವಿಸುತ್ತೇವೆಯಲ್ಲವೆ. ಅದಕ್ಕಿಂತ ಮೊದಲು ಮೊಳಕೆಕಟ್ಟಿದ ಕಾಳುಗಳನ್ನು ನಿಯಮಿತವಾಗಿ ತಿನ್ನುತ್ತಾ ಬನ್ನಿ. ನಿಮ್ಮ ದೇಹದಲ್ಲಿ ಶಕ್ತಿಯು ಮರುಕಳಿಸುತ್ತದೆ. ವಯಸ್ಸಿಗೆ ತಕ್ಕ ಹಾಗೆ ಕೇಶಾಲಂಕಾರಗಳನ್ನು ಮಾಡಿಕೊಳ್ಳುವುದು ಉತ್ತಮ. ಮೆಂತೆ ಮೊಸರಿನಂತಹ ಪ್ರಕೃತಿದತ್ತ ವಸ್ತುಗಳನ್ನು ಉಪಯೋಗಿಸಿ ಕೂದಲಿನ ಆರೋಗ್ಯವನ್ನೂ ಕಾಪಾಡಿಕೊಳ್ಳಿ.

ಇನ್ನು ವಯಸ್ಸಾಗಿತ್ತಿದ್ದ ಹಾಗೆ ಬೊಜ್ಜು ಬೆಳೆಯುವುದು ಸಾಮಾನ್ಯ. ಅದರಲ್ಲೂ ಪ್ರಸವದ ನಂತರ ಉದರದ ಮೇಲೆ ನೆರಿಗೆಗಳೂ ಕಾಣಿಸಿಕೊಳ್ಳುತ್ತವೆ. ವ್ಯಾಯಾಮ ಮಾಡುವುದು ಕೊಬ್ಬು ಕಡಿಮೆ ಇರುವ ಎಣ್ಣೆ ಪದಾರ್ಥಗಳು, ಕೊಬ್ಬಿನ ಅಂಶ ಕಡಿಮೆ ಇರುವ ಪದಾರ್ಥಗಳನ್ನು ಸೇವಿಸಿದರೆ ಬೊಜ್ಜನ್ನು ನಿಯಂತ್ರಿಸಬಹುದು.

ವಯಸ್ಸಾಗುತ್ತಿದ್ದಂತೆ ಉಗುರುಗಳು ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗದಂತೆ ಎಚ್ಚರಿಕೆ ವಹಿಸಿ. ಸರಿಯಾದ ಕಾಲಕ್ಕೆ ಉಗುರುಗಳಿಗೆ ಸರಿಯಾದ ಆಕೃತಿ ಕೊಟ್ಟು ಕತ್ತರಿಸಿ. ಆಗಾಗ ನಿಂಬೆಹಣ್ಣುನಿಂದ ಉಗುರುಗಳನ್ನು ಉಜ್ಜಿ ಬಿಸಿ ನೀರಿನಲ್ಲಿ ಉಗುರುಗಳನ್ನು ಸ್ವಚ್ಚಗೊಳಿಸಿ.

ಮನೆಯಲ್ಲೇ ಇರುವ ನಿಮಗೆ ಒಂದಿಷ್ಟು ಬದಲಾವಣೆಯ ಅಗತ್ಯವಿದೆ. ಸ್ಚಲ್ಪ ದಿನ ನೀವಿರುವ ಸ್ಥಳದಿಂದ ಬೇರೆಡೆಗೆ ಹೋಗಿಬನ್ನಿ ಇದರಿಂದ ಮನಸ್ಸಿಗೆ ಹಿತವಾಗಿರುತ್ತದೆ.ಇನ್ನು ಉಡುಪಿನ ಬಗ್ಗೆಯೂ ನೀವು ಹೆಚ್ಚು ಗಮನವಹಿಸುವುದು ಸೂಕ್ತ. ಬಟ್ಟೆ ಸುಂದರವಾಗಿದೆ ಎಂದು ಕೊಳ್ಳುವುದಕ್ಕಿಂತ ಅದು ನಿಮಗೆಷ್ಟು ಒಪ್ಪುತ್ತದೆ ಎನ್ನುವುದನ್ನು ನೋಡಿ ಉಡುಪುಗಳನ್ನು ಕೊಂಡುಕೊಳ್ಳಿ. ಏಕೆಂದರೆ ನಿಮ್ಮ ವಯಸ್ಸು ೫೦ ದಾಟಿದೆ ಎಂಬುದು ಪಕ್ಕದಮನೆಯವರಿಗೇಕೆ ತಿಳಿಯಬೇಕು ?

X
Desktop Bottom Promotion