For Quick Alerts
ALLOW NOTIFICATIONS  
For Daily Alerts

ಉತ್ತರ ಕರ್ನಾಟಕದಲ್ಲಿ ಕೋಡಿಮಠ ಸ್ವಾಮಿ ಪ್ರವಾಸ

By * ರೋಹಿಣಿ ಬಳ್ಳಾರಿ
|
Kodimatha seer Shivananda Shivayogi Rajendra Swamiji
ಕೋಡಿಮಠದ ಸ್ವಾಮೀಜಿ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ಹೇಳಲು ಬಾಯಿತೆರೆದರೆ ಇಡೀ ಕರ್ನಾಟಕದ ಶ್ರೀಸಾಮಾನ್ಯರು ಮಾತ್ರವಲ್ಲ ರಾಜಕೀಯ ಲೋಕದ ಘಟಾನುಘಟಿಗಳು ಕಿವಿ, ಬಾಯಿ ತೆರೆದುಕೊಂಡು ಕೂಡುತ್ತಾರೆ.

ಯಡಿಯೂರಪ್ಪನವರ ಕುರ್ಚಿ ಗಡಗಡ ಎಂದು ಅವರು ಹೇಳಿದರೆ ವಿಧಾನಸೌಧದ ಕಿಟಕಿಗಳು ಕೂಡ ಕಟಕಟ ಎಂದಿರುತ್ತವೆ. ಅಡ್ವಾಣಿ ಪ್ರಧಾನಿ ಆಗಲ್ಲ ಅಂದಿದ್ದರು, ನಿಜವಾಯಿತು. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಅವರು ಹೇಳಿದ್ದರು, ಏನಾಗುತ್ತೋ ಏನೋ. ರಾಜಕೀಯ ಭವಿಷ್ಯ ಹೇಳುವಲ್ಲಿ ಅವರದು ಎತ್ತಿದ ಕೈ. ಯಾವುದೇ ರಾಜಕೀಯ ಪಕ್ಷಭೇದ ಮಾಡದ ಶ್ರೀಗಳು ಬಿಡುವ ಈ ರಾಜಕೀಯ ಭವಿಷ್ಯವೆಂಬ ಬಾಣಗಳು ಅವರಿಗೆ ತಿರುಗುಬಾಣವಾಗಿವೆ. ಬೆದರಿಕೆಗಳು ಬಂದ ಕಾರಣ ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು.

ಇಂತಿರುವ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿಮಠದ ಶ್ರೀಗಳು ಏ.19ರಿಂದ ಕರ್ನಾಟಕದಲ್ಲಿ ಹಿರಿಯೂರು, ಬಳ್ಳಾರಿ, ಗಂಗಾವತಿ ಮತ್ತು ಕೊಪ್ಪಳ ಪ್ರವಾಸ ಕೈಗೊಂಡಿದ್ದು, ಕೆಲ ಭಕ್ತರ ಮನೆಗಳಿಗೆ ತೆರಳಿ, ಭಕ್ತಾದಿಗಳಿಗೆ ಹಿತವಚನ ನೀಡಲಿದ್ದಾರೆ, ಆಶೀರ್ವಚನ ನುಡಿಯಲಿದ್ದಾರೆ ಎಂಬ ಸುದ್ದಿ ಆ ಪ್ರದೇಶದಲ್ಲಿರುವ ಶ್ರೀಸಾಮಾನ್ಯರಲ್ಲಿ ಮಾತ್ರವಲ್ಲ ಆ ಪ್ರದೇಶದಲ್ಲಿರುವ ರಾಜಕೀಯ ಧುರೀಣರಿಗೂ ಮೈಮೇಲೆ ರೋಮಾಂಚನದ ಗುಳ್ಳೆಗಳೇಳುವಂತೆ ಮಾಡಿದೆ.

ಈ ಭೇಟಿಗೆ ಅಷ್ಟೊಂದು ಮಹತ್ವವೇಕೆಂದರೆ, ಅವರು ಭೇಟಿ ಮಾಡುತ್ತಿರುವುದು ಬಳ್ಳಾರಿ ನಗರಕ್ಕೆ. ಬಿರು ಬಿಸಿಲಿಗೂ ಅಕ್ರಮ ಗಣಿಗಾರಿಕೆಯ ಕಾವು ತಾಗಿದ್ದರಿಂದ ಅಲ್ಲಲ್ಲಿ ಆಗಾಗ ಆಲಿಕಲ್ಲು ಸಮೇತ ಮಳೆ ಕಾಣುತ್ತಿರುವ ಬಳ್ಳಾರಿಗೆ ಹಿರಿಯೂರು ಮುಖಾಂತರ ಏ.19ರಂದು ತಲುಪಲಿದ್ದಾರೆ. ಶ್ರೀಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸೋಮವಾರ ರಾತ್ರಿ ಹಿರಿಯೂರಿನ ಭಕ್ತರ ಮನೆಯಲ್ಲಿ ವಸತಿ ಮಾಡಲಿದ್ದು, ಮಂಗಳವಾರ ಬಳ್ಳಾರಿ ತಲುಪಲಿದ್ದಾರೆ.

ಅವರ ರಾಜಕೀಯ ಭವಿಷ್ಯಗೇಳನೇ ಇರಲಿ, ಯಾರೇ ಅಧಿಕಾರ ಗದ್ದುಗೆ ಏರಲಿ, ಯಾರೇ ಬೀಳಲಿ... ಅವರು ಇತ್ತೀಚೆಗೆ ನೀಡಿರುವ ಮತ್ತೊಂದು ಭವಿಷ್ಯ ಉತ್ತರ ಕರ್ನಾಟಕದಲ್ಲಿ ತಲ್ಲಣವನ್ನುಂಟು ಮಾಡಿರುವುದು ಸುಳ್ಳಲ್ಲ. ಉತ್ತರ ಕರ್ನಾಟಕದಲ್ಲಿ ಮತ್ತೆ ಜಲಪ್ರಳಯವಾಗಲಿದೆ, ಧಾರ್ಮಿಕ ಗುರುವೊಬ್ಬರು ಅಸ್ತಂಗತರಾಗಲಿದ್ದಾರೆ, ತುಂಗಾ ನದಿ ಉಕ್ಕಿಹರಿದು ತುಂಬಾ ನಷ್ಟ ಉಂಟುಮಾಡಲಿದೆ, ಕಾರ್ತೀಕ ಮಾಸದಲ್ಲಿ ಪಕ್ಷವೊಂದು ಅವನತಿ ದಾರಿ ಹಿಡಿಯಲಿದೆ....

ಇಷ್ಟು ಸಾಕಲ್ಲ? ಜನ ಕಳವಳಕ್ಕೀಡಾಗಲು. ಇಂಥ ಸಂದರ್ಭದಲ್ಲಿಯೇ ಶ್ರೀಗಳು ಪ್ರವಾಸ ಕೈಗೊಳ್ಳುತ್ತಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಕೋಡಿಮಠದ ಸ್ವಾಮೀಜಿಗಳು ಮತ್ತೇನು ನುಡಿಯಲಿದ್ದಾರೆ, ಜನರಿಗೆ ಏನು ಸಾಂತ್ವನ ನೀಡಲಿದ್ದಾರೆ, ಪ್ರಳಯ ತಪ್ಪಿಸಿಕೊಳ್ಳಲು ಏನು ಪರಿಹಾರ ಹೇಳಲಿದ್ದಾರೆ... ಅಥವಾ ಅಕ್ರಮ ಗಣಿಗಾರಿಕೆಯ ಬಗ್ಗೆಯೇ ಹೊಸ ಭವಿಷ್ಯವೇನಾದರೂ ನುಡಿಯಲಿದ್ದಾರಾ? ಜಸ್ಟ್ ವೇಟ್ ಅಂಡ್ ವಾಚ್.

English summary

Kodimatha Swamiji tour | North Karnataka tour | Kodimatha swamiji predictions | ಕೋಡಿಮಠ ಸ್ವಾಮೀಜಿ ಪ್ರವಾಸ | ಉತ್ತರ ಕರ್ನಾಟಕಕ್ಕೆ ಸ್ವಾಮೀಜಿ ಭೇಟಿ

Hassan district Haranahalli Kodimatha seer Shivananda Shivayogi Rajendra Swamiji is touring Bellary, Gangavati and Koppal from April 19. In the mean while, the visit is from political angle too. What political prediction is he going to make in Bellary?
Story first published: Monday, April 18, 2011, 14:25 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more