For Quick Alerts
ALLOW NOTIFICATIONS  
For Daily Alerts

ಈ ವಯಸ್ಸಿನಲ್ಲಿ ತಮ್ಮ ಹಿಂದಿನ ತಪ್ಪುಗಳ ಬಗ್ಗೆ ತುಂಬಾ ಕಾಡುತ್ತದೆಯಂತೆ?

|

"ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ" ಎನ್ನುವುದು ಈಗಿನ ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಏಕೆಂದರೆ ಈಗಿನ ಜನರ ಮನೋಭಾವ, ವೃತ್ತಿ ಜೀವನ, ಸಾಮಾಜಿಕ ಬದುಕು ಎಲ್ಲವೂ ಕೂಡ ಹೀಗೆ ಆಗಿದೆ. ಪ್ರತಿಯೊಬ್ಬರೂ ಕೂಡ ಕಾರಣಾಂತರಗಳಿಂದ ಯಾವುದೋ ಒತ್ತಡಕ್ಕೆ ಮಣಿದು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾರೆ. ಆನಂತರ ಅದರ ಬಗ್ಗೆ ನೆನೆಸಿಕೊಂಡು ಪಶ್ಚಾತಾಪ ಪಡುತ್ತಾರೆ.

People Regret For These Things At The Age Of 40s and 50s

ಮನುಷ್ಯನಿಗೆ ಹೆಚ್ಚಾಗಿ ತನ್ನ ಜೀವನದ ನೋವು - ನಲಿವುಗಳು ಅರ್ಥವಾಗುವುದು ಆತನಿಗೆ ಅರ್ಧ ವಯಸ್ಸು ಕಳೆಯುತ್ತಿದ್ದಂತೆ. ತನ್ನ ಯೌವನದ ಜೀವನದಲ್ಲಿ ಹುಮ್ಮಸ್ಸಿನಿಂದ ಪ್ರತಿಯೊಂದನ್ನು ತಾನು ಮಾಡಿದ್ದೇ ಸರಿ ಎನ್ನುವ ರೀತಿಯ ಭಾವನೆಗಳಿಂದ ನೋಡಿ ಕೆಲವು ಕಹಿ ಅನುಭವಗಳು ಎದುರಾದ ನಂತರ ಅಥವಾ ತನಗೆ ಸಿಗಬೇಕಾಗಿದ್ದ ಇನ್ನೂ ಒಳ್ಳೆಯ ಅವಕಾಶಗಳು ಲಭ್ಯವಾಗದೆ ಬೇರೆಯವರಿಗೆ ಸಿಕ್ಕಿದ ವಿಚಾರ ತಿಳಿದು ಅದೇ ನೆನಪಿನಲ್ಲಿ ಕೊರಗುತ್ತಾ ಕೂರುತ್ತಾನೆ.

ಈ ಲೇಖನದಲ್ಲಿ ಇಂತಹ ಹಲವಾರು ಸಂಗತಿಗಳು 40 ರಿಂದ 50 ವರ್ಷ ದಾಟಿದ ವ್ಯಕ್ತಿಗಳಲ್ಲಿ ಹೇಗೆ ಅವರನ್ನು ತಮ್ಮ ಕಳೆದು ಹೋದ ಜೀವನದ ' ಆ ದಿನಗಳ ' ಬಗ್ಗೆ ವಿಷಾದ ವ್ಯಕ್ತ ಪಡಿಸುವಂತೆ ಮಾಡುತ್ತವೆ ಎಂಬ ಬಗ್ಗೆ ತಿಳಿಸಲಾಗಿದೆ.

ಕೇವಲ ಬೇರೆಯವರ ಬಗ್ಗೆ ಯೋಚಿಸಿ ಭಯ ಪಡುವುದು

ಕೇವಲ ಬೇರೆಯವರ ಬಗ್ಗೆ ಯೋಚಿಸಿ ಭಯ ಪಡುವುದು

ಕೆಲವೊಮ್ಮೆ ನಮಗೆ ಎದುರಾಗುವ ಸಂದರ್ಭಗಳು ನಮ್ಮನ್ನು ತುಂಬಾ ಭಯ ಪಡಿಸುತ್ತವೆ ನಿಜ. ಸಂದರ್ಭಗಳು ಎಂದರೆ ಕೇವಲ ಯಾವುದೋ ಘಟನೆಗಳಿಗೆ ಸಂಬಂಧಪಟ್ಟ ವಿಚಾರಗಳೇ ಆಗಿರಬೇಕು ಎಂದೇನಿಲ್ಲ. ನಮಗಿಂತ ಸ್ವಲ್ಪ ಹೆಚ್ಚಿನ ಹಣ, ಅಧಿಕಾರ, ಜನ ಬಲ ಇರುವ ವ್ಯಕ್ತಿಗಳು ಕೂಡ ಆಗಿರಬಹುದು. ಸಾಮಾನ್ಯವಾಗಿ ನಮಗಿಂತ ಯಾರೇ ಆದರೂ ಯಾವುದೇ ವಿಷಯದಲ್ಲಿ ಮೇಲಿದ್ದರೆ ನಾವು ಅವರಿಗೆ ಭಯಪಡುತ್ತೇವೆ.

ಅವರ ಹತ್ತಿರ ಮಾತನಾಡಲು ಸ್ವಲ್ಪ ಅಳುಕು ಸ್ವಭಾವ ನಮ್ಮ ಮನಸ್ಸಿನಲ್ಲಿರುತ್ತದೆ. ಆದರೆ ಅದು ಕೇವಲ ಆ ಕ್ಷಣಕ್ಕೆ ಮಾತ್ರ ಮೀಸಲಾಗಿದ್ದರೆ ಚೆನ್ನ. ಇಡೀ ಜೀವನ ಪೂರ್ತಿ ಕಂಡ ಕಂಡವರ ಬಗ್ಗೆ ಯೋಚನೆ ಮಾಡುತ್ತಾ ಕುಳಿತು ಅವರಿಗೆ ಒದಗಿಬಂದಿರುವ ಸೌಕರ್ಯ ನನಗಿಲ್ಲ ಎಂದು ತಿಳಿದುಕೊಂಡು ಕೊರಗಿ ನಮ್ಮ ಸ್ವಂತ ಮುಂದಿನ ಜೀವನಕ್ಕೆ ಸರಿಯಾದ ರೂಪುರೇಷೆ ಕೊಡದೆ ನಾವಾಗಿಯೇ ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುವುದು ಎಷ್ಟು ಸರಿ ಅಲ್ಲವೇ? ಸರಿಯಾಗಿ ಯೋಚಿಸಿ ನೋಡಿದರೆ ಬೇರೊಂದು ಆಯಾಮದಲ್ಲಿ ನಮ್ಮ ಜೀವನ ಅವರಿಗಿಂತಲೂ ಚೆನ್ನಾಗಿರುತ್ತದೆ. ಸಾಕಷ್ಟು ಬಗೆಯ ಅತ್ಯದ್ಭುತ ಅವಕಾಶಗಳು ನಮಗಾಗಿ ಕಾದಿರುತ್ತವೆ.

ಆದರೆ ಅವುಗಳ ಅರಿವು ನಮಗೆ ಇರುವುದೇ ಇಲ್ಲ. ಜೊತೆಗೆ ಇಡೀ ದಿನ ಬೇರೆಯವರ ಬಗ್ಗೆ ಚಿಂತೆ ಮಾಡುವುದರಿಂದ ಇವುಗಳ ಬಗ್ಗೆ ನಾವು ಯೋಚಿಸುವ ಪ್ರಯತ್ನವನ್ನೂ ಸಹ ಮಾಡುವುದಿಲ್ಲ. ಹಾಗಾಗಿ 40 ರಿಂದ 50 ವರ್ಷ ದಾಟಿದ ಹಲವರಲ್ಲಿ ಇಂತಹ ಭಾವನೆಗಳು ಕಾಡುತ್ತಿರುತ್ತವೆ. ಒಮ್ಮೆ ತಮ್ಮ ಜೀವನವನ್ನು ಹಿಂದಿರುಗಿ ನೋಡಿದರೆ ತಮ್ಮ ತಪ್ಪುಗಳು ಸಾಕಷ್ಟು ಎದ್ದು ಕಾಣುತ್ತವೆ. ಜೀವನದಲ್ಲಿ ಉಂಟಾಗಬೇಕಿದ್ದ ಹಲವಾರು ಸುಮಧುರ ಕ್ಷಣಗಳಲ್ಲಿ ಸ್ವಲ್ಪ ಜಾಗರೂಕತೆ ವಹಿಸಿದ್ದರೂ ಆ ಕ್ಷಣಗಳನ್ನು ತುಂಬಾ ಆನಂದವಾಗಿ ಅನುಭವಿಸಬಹುದಾಗಿತ್ತು ಎಂಬ ವಿಷಾದ ಭಾವನೆ ಕಾಡುತ್ತದೆ.

ಸಮಯ ಇದ್ದಾಗ ಪ್ರಯತ್ನಿಸುವುದು ಬಿಟ್ಟು ಇಲ್ಲದಿದ್ದಾಗ ಚಿಂತಿಸುವುದು

ಸಮಯ ಇದ್ದಾಗ ಪ್ರಯತ್ನಿಸುವುದು ಬಿಟ್ಟು ಇಲ್ಲದಿದ್ದಾಗ ಚಿಂತಿಸುವುದು

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗೂ 20 ಮತ್ತು 30 ರ ಆಸುಪಾಸಿನಲ್ಲಿ ಹೆಚ್ಚಿನ ದುಡಿಮೆಯ ಕಾಲ ಎಂದು ಹೇಳುತ್ತಾರೆ. ಜೀವನದಲ್ಲಿ ಎಷ್ಟೇ ಹಣ ಸಂಪಾದನೆ ಮಾಡಬೇಕೆಂಬ ಕನಸಿದ್ದರೂ ಆ ಕನಸಿಗೆ ಸಾಕಾರ ಕೊಡುವ ವಯಸ್ಸು ಎಂದರೆ ಅದು 30 ರ ಆಸುಪಾಸು. ಜೊತೆಗೆ ಈ ಸಮಯದಲ್ಲಿ ಅವಕಾಶಗಳು ಕೂಡ ಅಷ್ಟೇ ಕಾಣಸಿಗುತ್ತವೆ. ಎಲ್ಲೋ ಕೆಲವರಿಗೆ ಮಾತ್ರ ತಾವು ಕಷ್ಟಪಟ್ಟು ಓದಿದ ಫಲಿತಾಂಶವಾಗಿ ಸರಿಯಾದ ಕೆಲಸ ಸಿಕ್ಕಿರುವುದಿಲ್ಲ.

ಅಷ್ಟು ಬಿಟ್ಟರೆ ಪ್ರತಿಯೊಬ್ಬರೂ ತಮ್ಮದೇ ಆದ ವೃತ್ತಿ ರಂಗಗಳಲ್ಲಿ ಒಳ್ಳೆಯ ಹೆಸರನ್ನು, ಪದವಿಯನ್ನು ಸಂಪಾದನೆ ಮಾಡಿರುತ್ತಾರೆ. ಆದರೆ ಕೆಲವರು ಹಣ ಸಂಪಾದನೆ ಮಾಡುವ ಆಸೆಯಿಂದ ಜೊತೆಗೆ ಯುವ ವಯಸ್ಸು ಆಗಿರುವ ಕಾರಣದಿಂದ ಎಲ್ಲವನ್ನೂ ನಿಭಾಯಿಸುವೆ ಎಂಬ ಹುಮ್ಮಸ್ಸು ಬೇರೆ ಇರುವುದರಿಂದ ತಮ್ಮ ಸಾಧ್ಯತೆಗೊ ಮೀರಿ ಸಿಕ್ಕಂತಹ ಎಲ್ಲಾ ಅವಕಾಶಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ.

ಹೀಗಿದ್ದಾಗ ಯಾವುದಾದರೂ ಒಂದು ಕೆಲಸದ ಮೇಲೆ ಹೆಚ್ಚಿನ ಗಮನ ವಹಿಸಲು ಸಾಧ್ಯವಾಗದೆ ಎಲ್ಲ ಕೆಲಸಗಳು ಅಪೂರ್ಣವಾಗುತ್ತವೆ. ತುಂಬಾ ಜನರಿಗೆ ಇದರಿಂದ ಬೇಸರ ಉಂಟಾಗಿ ಜೀವನದಲ್ಲಿ ಬೇರೊಂದು ದಾರಿ ತುಳಿಯಲು ಮುಂದಾಗುತ್ತಾರೆ. ಇಪ್ಪತ್ತು ವರ್ಷ ಕಳೆದ ಮೇಲೆ ಇದರ ಬಗ್ಗೆ ಅರಿವಾಗಿ ತಮಗೆ ಸಿಕ್ಕಿದ್ದ ಅವಕಾಶಗಳ ಬಗ್ಗೆ ಮತ್ತು ತಾವು ವಂಚಿತಗೊಂಡ ಒಳ್ಳೆಯ ಸಂದರ್ಭಗಳ ಬಗ್ಗೆ ಮುರುಕ ವ್ಯಕ್ತಪಡಿಸುತ್ತಾರೆ.

ಕೆಟ್ಟ ಸಂದರ್ಭಗಳ ಸುಳಿಯಲ್ಲಿ ಸಿಲುಕಿ ಬಿಡುವುದು

ಕೆಟ್ಟ ಸಂದರ್ಭಗಳ ಸುಳಿಯಲ್ಲಿ ಸಿಲುಕಿ ಬಿಡುವುದು

ಇದು ಬಹಳಷ್ಟು ಜನರು ತಿಳಿದುಕೊಳ್ಳಲೇಬೇಕಾದ ಸಂಗತಿ. ಏನಂದರೆ ನಮಗೆ ಜೀವನದಲ್ಲಿ ಎಲ್ಲಾ ಸಮಯದಲ್ಲೂ ಕೇವಲ ಒಳ್ಳೆಯ ಸಂದರ್ಭಗಳೇ ಬರುವುದಿಲ್ಲ. ಜೊತೆಜೊತೆಗೆ ನಮ್ಮನ್ನು ಘಾಸಿಗೊಳಿಸುವಂತಹ ಮತ್ತು ಮನಸ್ಸಿಗೆ ಭಾರವೆನಿಸುವ ಸಂದರ್ಭಗಳು ಎದುರಾಗುತ್ತವೆ. ಅವುಗಳು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಮಾಡುತ್ತಿರುವ ಕೆಲಸ, ಹೋಗುತ್ತಿರುವ ದಾರಿ, ಅನುಸರಿಸುತ್ತಿರುವ ರೀತಿ - ನೀತಿ, ಬೆಳೆಸುತ್ತಿರುವ ಸಂಬಂಧ ಯಾವುದೇ ಆದರೂ ಒಳ್ಳೆಯ ವಿಚಾರಕ್ಕಿಂತ ಕೇವಲ ಕೆಟ್ಟ ವಿಚಾರಗಳು ಮನುಷ್ಯನನ್ನು ಬೇಗ ತನ್ನತ್ತ ಸೆಳೆಯುತ್ತವೆ.

ಮನುಷ್ಯನು ಕೂಡ ವಿಪರೀತ ಆಸಕ್ತಿ ವಹಿಸಿ ಇಂತಹ ವಿಚಾರಗಳಲ್ಲಿ ವಿಶೇಷವಾದ ಗಮನ ವಹಿಸಿ ಎಲ್ಲೋ ಒಂದು ಕಡೆ ಮನಸ್ಸು ಬೇಡ ಎನ್ನುತ್ತಿದ್ದರೂ ಸಹ ಅದೇ ದಾರಿಯಲ್ಲಿ ಗೂಳಿಯಂತೆ ಮುನ್ನುಗ್ಗುತ್ತಾನೆ. ಕಾಲವು ಕೂಡ ಆಗಾಗ ಇದರ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಆದರೂ ಕೂಡ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮಧ್ಯೆ ಮಧ್ಯೆ ಬೇರೆಯವರು ಕೂಡ ತಿಳಿಸಿ ಹೇಳಲು ಬಯಸುತ್ತಾರೆ.

ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ಹೋಗುವ ದಾರಿ ಬದಲಿಸದೆ ಹಲವಾರು ತಿಂಗಳುಗಳು ಅಥವಾ ವರ್ಷಗಳು ಉರುಳಿದ ಬಳಿಕ ತನ್ನ ಜೀವನ ನಿಜವಾಗಿ ಯಾವ ಕಡೆಗೆ ಸಾಗುತ್ತಿದೆ ಎಂಬ ಅರಿವಾಗುತ್ತದೆ. ಆದರೆ ಇಲ್ಲಿ ಒಂದು ಬುದ್ಧಿಮಾತು ಹೇಳಲೇಬೇಕು. ಯಾವುದೇ ಒಂದು ಸಂದರ್ಭ ಅಥವಾ ವ್ಯಕ್ತಿ ನಮಗೆ ಅಹಿತಕರ ಎನಿಸಿದ ತಕ್ಷಣ ಅದರಲ್ಲಿ ಮುಂದುವರೆಯಲು ಪ್ರಯತ್ನ ಪಡಬಾರದು. ಇದು ಎಲ್ಲಾ ವಿಧದಲ್ಲೂ ಕ್ಷೇಮ.

ಕೊನೆ ಗಳಿಗೆಯಲ್ಲಿ ತಮ್ಮ ಪ್ರೀತಿಪಾತ್ರರ ಜೊತೆ ಇಲ್ಲದಿರುವುದು

ಕೊನೆ ಗಳಿಗೆಯಲ್ಲಿ ತಮ್ಮ ಪ್ರೀತಿಪಾತ್ರರ ಜೊತೆ ಇಲ್ಲದಿರುವುದು

ಇದು ನಿಜಕ್ಕೂ ಮನಸ್ಸು ಒಡೆದುಹೋಗುವ ಸಂದರ್ಭ ಎಂದು ಹೇಳಬಹುದು. ತೀರಾ ನಮಗೆ ಹತ್ತಿರವಾದವರು ಸಾವು ಎಂಬ ನೆಪದಿಂದ ನಮ್ಮಿಂದ ದೂರವಾಗುತ್ತಿದ್ದಾರೆ ಎಂದು ತಿಳಿದ ತಕ್ಷಣ ಸಾಧ್ಯವಾದಷ್ಟು ಅವರ ಕಡೆಯ ಆಸೆಗಳನ್ನು ಈಡೇರಿಸುವುದು, ಅವರ ಜೊತೆ ಕಾಲಕಳೆಯುವುದು, ಅವರ ಕಷ್ಟಸುಖಗಳಲ್ಲಿ ಭಾಗಿಯಾಗುವುದು ಇತ್ಯಾದಿಗಳ ಕಡೆಗೆ ನಮ್ಮ ಗಮನ ಕೊಡಬೇಕು.

ಅದು ಗಂಡ ಹೆಂಡತಿ ಆಗಿರಲಿ, ಅಪ್ಪ, ಮಗ, ಅಮ್ಮ, ಮಗಳು, ಅಕ್ಕ, ತಂಗಿ, ತಾತ, ಅಜ್ಜಿ, ಯಾರೇ ಆದರೂ ಸರಿ. ಏಕೆಂದರೆ ಜೀವ ತುಂಬಾ ಅಮೂಲ್ಯ. ಜೀವನವನ್ನು ಇಂದಲ್ಲಾ ನಾಳೆ ನಮಗೆ ಬೇಕಾದ ಹಾಗೆ ಕಟ್ಟಿಕೊಳ್ಳಬಹುದು. ಆದರೆ ಜೀವ ಒಮ್ಮೆ ಹೋದರೆ ಮತ್ತೆಂದೂ ತಿರುಗಿ ಬರದು.

ಹಾಗಾಗಿ ಅವರು ಚೆನ್ನಾಗಿ ಇದ್ದ ಸಮಯದಲ್ಲಿ ಅವರಿಗೆ ನಾವು ಏನೂ ಮಾಡಲು ಆಗದಿದ್ದರೂ, ಸಾಯುವ ಕೊನೆಕ್ಷಣದಲ್ಲಿ ನಮ್ಮ ಋಣವನ್ನು ತೀರಿಸಬೇಕಾದದು ನಮ್ಮ ಕರ್ತವ್ಯ ಎಂದು ಭಾವಿಸಬೇಕು. ಕೇವಲ ನಮ್ಮ ಸುರಕ್ಷತೆ ಅಥವಾ ಭವಿಷ್ಯವನ್ನು ನೋಡಿಕೊಂಡು ನಂತರ ಹಲವು ದಿನಗಳು ಕಳೆದ ಬಳಿಕ ಈ ವಿಚಾರದ ಬಗ್ಗೆ ಯೋಚಿಸಿ ಕೊರಗುವುದು ಯಾವುದೇ ಕಾರಣಕ್ಕೂ ಸರಿಯಲ್ಲ.

ಉನ್ನತ ಶಿಕ್ಷಣ ಪಡೆಯಲಿಲ್ಲ ಎಂಬ ಕೊರಗು

ಉನ್ನತ ಶಿಕ್ಷಣ ಪಡೆಯಲಿಲ್ಲ ಎಂಬ ಕೊರಗು

ಹೆಚ್ಚು ಓದಬೇಕು, ಹೆಚ್ಚು ದುಡಿಯಬೇಕು, ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದನೆ ಮಾಡಿ ನಾಲ್ಕು ಜನರ ಮಧ್ಯೆ ಸಂತೋಷವಾಗಿ ತಲೆಯೆತ್ತಿ ಬಾಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಲವರಿಗೆ ಓದುವ ಅವಕಾಶಗಳೇ ಸಿಗುವುದಿಲ್ಲ. ಕೆಲವರು ಸಂಪೂರ್ಣವಾಗಿ ಸಿಕ್ಕರೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಎಷ್ಟೋ ಜನರು ತಮ್ಮ ಕಷ್ಟಕರ ಜೀವನದಲ್ಲಿ ಕೂಡ ಹೇಗಾದರೂ ಮಾಡಿ ಓದಿ ನಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂದು ಆಲೋಚಿಸುತ್ತಾರೆ.

ಅವಕಾಶಗಳಿಂದ ವಂಚಿತರಾದವರು ಅವಕಾಶಗಳಿಗಾಗಿ ಹಾತೊರೆಯುತ್ತಾರೆ. ಆದರೆ ಎಲ್ಲಾ ಇದ್ದು ಸಿಕ್ಕಂತಹ ಓದುವ ಅದರಲ್ಲೂ ಉನ್ನತ ವ್ಯಾಸಂಗಕ್ಕೆ ಕಾಲಿಡುವ ಅವಕಾಶವನ್ನು ತಾವಾಗಿಯೇ ಕಳೆದುಕೊಂಡವರು ನಂತರ ತಮ್ಮ ಜೀವನದಲ್ಲಿ ತಮ್ಮ ಸ್ನೇಹಿತರನ್ನು, ತಮ್ಮ ಸಂಬಂಧಿಗಳನ್ನು ಅಥವಾ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಬದುಕುತ್ತಿರುವವರನ್ನು ನೋಡಿ ಕೇವಲ ಹೊಟ್ಟೆ ಕಿಚ್ಚು ಪಡುವುದು ಮಾತ್ರವಲ್ಲದೆ, ನಮಗೂ ಇಂತಹ ಜೀವನ ಸಿಗುವುದರಲ್ಲಿತ್ತು, ಆದರೆ ನಾವಾಗಿಯೇ ಹಾಳು ಮಾಡಿಕೊಂಡೆವು ಎಂದು ಕೊರಗುತ್ತಾರೆ. ಒಂದು ಅಂಶ ನೆನಪಿನಲ್ಲಿರಲಿ ಓದು-ಬರಹ, ನಿಮ್ಮ ಜ್ಞಾನ ಎಂದಿಗೂ ವ್ಯರ್ಥವಾಗದು.

ಅರಸಿ ಬಂದ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳದಿರುವುದು

ಅರಸಿ ಬಂದ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳದಿರುವುದು

ಯಾವುದಾದರೂ ಒಂದು ಸಂತೋಷಕರ ಸಂದರ್ಭ ಎದುರಾದ ಕ್ಷಣದಲ್ಲಿ ಅದನ್ನು ಸರಿಯಾಗಿ ಆನಂದಿಸುವುದನ್ನು ಬಿಟ್ಟು ಆ ಸಮಯದಲ್ಲಿ ಬೇರೆ ಏನನ್ನೋ ಯೋಚಿಸಿ ಮತ್ತೆ ಅದೇ ಖುಷಿಯಾದ ಸಂದರ್ಭಕ್ಕೆ ಹಾತೊರೆಯುವುದು ಎಷ್ಟು ಸರಿ ? ನೀವೇ ಹೇಳಿ. ಕೆಲವೊಂದು ವಿಪರೀತ ಸಂದರ್ಭಗಳ ಸುಳಿಗೆ ಸಿಲುಕಿ ಈ ರೀತಿ ಆಗುತ್ತದೆ. ನಮಗೆ ಸರಿಯಾದ ಯಾವುದೋ ಒಂದು ಅಂಶ ಲಭ್ಯವಾಗುವ ಸಮಯಕ್ಕೆ ಸರಿಯಾಗಿ ನಮ್ಮ ಮನಸ್ಸನ್ನು ಅಥವಾ ನಮ್ಮನ್ನೇ ಬೇರೆಡೆಗೆ ಸೆಳೆಯುವಂತಹ ಯಾವುದೋ ಒಂದು ಘಟನಾವಳಿ ನಡೆದುಹೋಗುತ್ತದೆ.

ಇದು ನಮಗೆ ಗೊತ್ತಿದ್ದು ಆಗುತ್ತದೆಯೋ ಅಥವಾ ಗೊತ್ತಿಲ್ಲದೆ ನಡೆಯುತ್ತದೆಯೋ ಆ ದೇವರೇ ಬಲ್ಲ. ಇಂತಹ ಸಂದರ್ಭಗಳು ಕೂಡ ನಮ್ಮನ್ನು ನಂತರ ಕೊರಗುವಂತೆ ಮಾಡುತ್ತವೆ. ಅದರಲ್ಲೂ 40 ವರ್ಷ ದಾಟಿದ ನಂತರ ಇಂತಹ ನೆನಪುಗಳು ಆಗಾಗ ಮರುಕಳಿಸಲು ಪ್ರಾರಂಭವಾಗುತ್ತವೆ. ನಿವೃತ್ತಿಯ ಸಮಯದ ಆಸುಪಾಸಿನಲ್ಲಿ ನಿಜಕ್ಕೂ ಮನಸ್ಸಿಗೆ ಬೇಸರವಾಗುವ ಸಂಗತಿಗಳು ಇವು ಎಂದರೆ ತಪ್ಪಾಗಲಾರದು.

ನಿಮ್ಮ ದೇಹದ ಬಗ್ಗೆ ನಿಮಗೆ ಕಾಳಜಿ ಇಲ್ಲದಿರುವುದು

ನಿಮ್ಮ ದೇಹದ ಬಗ್ಗೆ ನಿಮಗೆ ಕಾಳಜಿ ಇಲ್ಲದಿರುವುದು

ಸಾಧಾರಣವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುವುದು 40 ವರ್ಷ ದಾಟಿದ ನಂತರವೇ. ನಿದ್ರಾಹೀನತೆಯಿಂದ ಹಿಡಿದು ದೀರ್ಘಕಾಲದ ಮಂಡಿ ನೋವು, ಮೂಳೆ ನೋವು, ರಕ್ತದ ಒತ್ತಡ, ಮಧುಮೇಹ, ಇತ್ಯಾದಿಗಳಂತಹ ಆರೋಗ್ಯ ಸಮಸ್ಯೆಗಳು ಎಡಬಿಡದಂತೆ ಕಾಡುತ್ತವೆ. ಜೀವನಶೈಲಿಯಲ್ಲಿ ಕೂಡ ಸಾಕಷ್ಟು ಬದಲಾವಣೆ ತಂದು ಕೊಂಡಿರುವುದರಿಂದ ಹಲವಾರು ಜನರಲ್ಲಿ ಇಂತಹ ಆರೋಗ್ಯ ಸಮಸ್ಯೆಗಳು ಸರ್ವೇಸಾಮಾನ್ಯ.

ಕೆಲವೊಮ್ಮೆ ದೀರ್ಘಕಾಲದಿಂದ ತೆಗೆದುಕೊಂಡು ಬರುತ್ತಿರುವಂತಹ ಔಷಧಿಗಳು ಸಹ ಅಡ್ಡ ಪರಿಣಾಮಗಳನ್ನು ಉಂಟು ಮಾಡಿ ಇರುವ ಅಲ್ಪಸ್ವಲ್ಪ ಆರೋಗ್ಯವನ್ನು ಸಹ ಇನ್ನಷ್ಟು ಹದಗೆಡಿಸುತ್ತವೆ. ಇದರಿಂದ ದೈಹಿಕ ಯಾತನೆಯ ಜೊತೆಗೆ ಸದಾ ಇದರ ಬಗ್ಗೆ ಆಲೋಚನೆ ಮಾಡುವುದರಿಂದ ಮಾನಸಿಕ ರೋಗವು ಸಹ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ನಾವು ಚಿಕ್ಕ ವಯಸ್ಸಿನಿಂದ ಒಳ್ಳೆಯ ಆಹಾರ ಪದ್ಧತಿಯನ್ನು ಅಥವಾ ಒಳ್ಳೆಯ ಜೀವನಶೈಲಿಯನ್ನು ರೂಢಿ ಮಾಡಿಕೊಂಡು ಬಂದಿದ್ದರೆ ಇಂದು ನಮಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಅನಿಸುತ್ತದೆ.

ಒಂದೇ ಕೆಲಸದಲ್ಲಿ ಮುಂದುವರೆಯುವುದು

ಒಂದೇ ಕೆಲಸದಲ್ಲಿ ಮುಂದುವರೆಯುವುದು

ನಮ್ಮ ಜೀವನದಲ್ಲಿ ಬದಲಾವಣೆಗಳು ಇರಬೇಕು ಎಂಬುದು ಇದಕ್ಕೆ. ಹಲವಾರು ಜನರಿಗೆ ತಮ್ಮ ಓದಿಗೆ ತಕ್ಕಂತಹ ಕೆಲಸ ಸಿಕ್ಕಿರುವುದಿಲ್ಲ. ತಮಗೆ ಇಷ್ಟವಿಲ್ಲದಿದ್ದರೂ ಯಾರೋ ಹೇಳಿದರು ಎಂದು ಅಥವಾ ತಮಗೆ ಸಿಕ್ಕ ಸಣ್ಣ ಆದಾಯ ತರುವ ಕೆಲಸವನ್ನೇ ದೀರ್ಘಕಾಲ ಮಾಡಿಕೊಂಡು ಮುಂದುವರೆಯುತ್ತಾರೆ. ನಂತರ ತಮ್ಮ ಹೆಚ್ಚಾದ ವಯಸ್ಸಿನ ಅಥವಾ ಬೇರಾವುದೋ ಕಾರಣದಿಂದ ತಮ್ಮದೇ ಆದ ವೃತ್ತಿಜೀವನದಲ್ಲಿ ಮುಂದುವರೆಯಲು ಸಾಧ್ಯವೇ ಆಗುವುದಿಲ್ಲ.

ಹಾಗಾಗಿ ತಮಗೆ ಸಿಕ್ಕಂತಹ ಸಣ್ಣಪುಟ್ಟ ಕೆಲಸದಲ್ಲಿ ತೃಪ್ತಿ ಕಾಣಬೇಕಾಗಿ ಬರುತ್ತದೆ ಮತ್ತು ಅದರಿಂದ ಸಿಗುವ ಹಣದಲ್ಲಿ ಜೀವನ ನಿರ್ವಹಣೆ ಮಾಡಬೇಕಾಗುತ್ತದೆ. ತಾವು ಓದುವಾಗ ಸಂಜೆಯ ಸಮಯದಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಯಾವುದಾದರೂ ಸಣ್ಣಪುಟ್ಟ ಕೋರ್ಸುಗಳನ್ನು ಮಾಡಿಕೊಂಡಿದ್ದರೆ ಅಥವಾ ತಮ್ಮ ಸ್ನೇಹಿತರು ಅಂತಹ ಸಣ್ಣಪುಟ್ಟ ಕೋರ್ಸ್ ಗಳಿಂದ ಇಂದು ಲಕ್ಷಾಂತರ ರೂಪಾಯಿ ದುಡಿಯುತ್ತಿರುವುದು ಕಂಡುಬಂದರೆ ಆಗ ಮನಸ್ಸಿಗೆ ನಿಜಕ್ಕೂ ಬೇಸರವಾಗುತ್ತದೆ.

ನಾನೂ ಹೀಗೆ ಮಾಡಬಹುದಿತ್ತಲ್ಲ ಎನಿಸುತ್ತದೆ. ಆದರೆ ಕಾಲ ಮಿಂಚಿ ಹೋಗಿರುವುದರಿಂದ ನಿಜವಾಗಿಯೂ ಅವಶ್ಯಕತೆ ಇರುವ ಸಮಯದಲ್ಲಿ ಏನೂ ಮಾಡಲು ಬರುವುದಿಲ್ಲ, ನಮ್ಮ ದೇಶದ ಮುಕ್ಕಾಲುಭಾಗ ಜನತೆ ಇಂದು ಇದೇ ರೀತಿಯ ಕಷ್ಟಗಳ ಸಂಕೋಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

English summary

​People Regret For These Things At The Age Of 40s and 50s

Here we are discussing about ​People Regret For These Things At The Age Of 40s and 50s. People, most of than not, have a lot of regrets on their death bed and wish that they had the chance to re-do certain aspects of their life. Read more.
Story first published: Tuesday, June 23, 2020, 14:47 [IST]
X
Desktop Bottom Promotion