For Quick Alerts
ALLOW NOTIFICATIONS  
For Daily Alerts

ಸಂಸಾರದಲ್ಲಿ ವಿರಸ ಹೆಚ್ಚುತ್ತಿದೆಯೇ? ಈ ಪ್ರಯತ್ನ ಮಾಡಿ ನೋಡಿ

|

ವಿವಾಹದ ಸಮಯದಲ್ಲಿ ''ಮೇಡ್‌ ಫಾರ್‌ ಈಚ್‌ ಅದರ್ಸ್‌'' ಎಂದು ಹೇಳಿಸಿಕೊಂಡ ಜೋಡಿಗಳು, ವಿವಾಹದವಾದ ಸ್ವಲ್ಪ ತಿಂಗಳುಗಳಲ್ಲೇ ಅಂತರವನ್ನು ಕಾಯ್ದುಕೊಳ್ಳಲಾರಂಭಿಸುತ್ತಾರೆ.

ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದು ಆರೇಂಜ್ಡ್‌ ಮ್ಯಾರೇಜ್, ಲವ್‌ ಮ್ಯಾರೇಜ್‌ ಆಗಲಿ ವಿವಾಹಕ್ಕಿಂತ ಮುನ್ನ ಜೋಡಿ ಹಕ್ಕಿಯಾಗಿ ವಿಹರಿಸುತ್ತಿದ್ದವರು, ಎರಡು ಗಂಟು ಬಿದ್ದ ಕೂಡಲೇ ಜಗಳವಾಡಲು ಪ್ರಾರಂಭಿಸುತ್ತಾರೆ.

relationship

ದಾಂಪತ್ಯದಲ್ಲಿ ಏಕೋ ವಿರಸ ಹೆಚ್ಚಾಗುತ್ತಿದೆ ಎಂದಾಗ ಬೇರೆಯಾಗಲು ಪ್ರಯತ್ನಿಸುತ್ತಾರೆ, ವಿಚ್ಛೇದನ ಬಗ್ಗೆ ಯೋಚಿಸುತ್ತಾರೆ, ಬದಲಿಗೆ ಸರಿಪಡಿಸುವುದು ಹೇಗೆ ಎಂದು ಯೋಚಿಸುವವರು ತುಂಬಾ ಕಡಿಮೆ.

ಸಂಬಂಧವೆಂದರೆ ಪ್ರೀತಿ, ಒಡನಾಟ ಮಾತ್ರವಲ್ಲ ಜಗಳಗಳು, ಭಿನ್ನಾಭಿಪ್ರಾಯ, ತಪ್ಪುಗ್ರಹಿಕೆಗಳು ಸಂಬಂಧದಲ್ಲಿ ಸಾಮಾನ್ಯವೇ. ತಮ್ಮ ಸಂಬಂಧದಲ್ಲಿ ಯಾವುದು ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುವುದನ್ನು ಕೂತು ಮಾತನಾಡದೇ ಸಂಬಂಧದ ಮಧ್ಯೆ ಅಡ್ಡ ಗೋಡೆಯನ್ನು ಕಟ್ಟುತ್ತಾರೆ.

ನಿಮ್ಮ ದಾಂಪತ್ಯ ಜೀವನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ ಎನಿಸಿದರೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ಅನ್ಯೋನ್ಯತೆಯನ್ನು ಹೆಚ್ಚಿಸುವಂತೆ ಮಾಡಲು ಈ ಸಿಂಪಲ್‌ ಟಿಪ್ಸ್ ಕಿವಿಗೆ ಹಾಕಿಕೊಳ್ಳಿ.

1. ನಿಮ್ಮ ಸಂಗಾತಿಯ ಸಂತೋಷವನ್ನು ಪರಿಗಣಿಸಿ

1. ನಿಮ್ಮ ಸಂಗಾತಿಯ ಸಂತೋಷವನ್ನು ಪರಿಗಣಿಸಿ

ದಾಂಪತ್ಯವೆಂದ ಮೇಲೆ ಇಬ್ಬರ ಸಂತೋಷ, ಇಷ್ಟ-ಕಷ್ಟಗಳ ಬಗ್ಗೆ ಸ್ವೀಕರಿಸುವ ಮನೋಭಾವ ಇಬ್ಬರಲ್ಲೂ ಇರಬೇಕು. ಸಾಮಾನ್ಯವಾಗಿ ದಂಪತಿಗಳ ಜಗಳ ಆರಂಭವಾಗುವುದೇ ಈ 'ಇಷ್ಟ ಕಷ್ಟ'ದಿಂದ. ದಾಂಪತ್ಯ ಜೀವನಕ್ಕೂ ಕಾಲಿಡುವ ಮುನ್ನ ನಿಮ್ಮ ಇಷ್ಟಗಳಿಗೇ ಪ್ರಾಮುಖ್ಯತೆ ನೀಡುತ್ತಿದ್ದವರು, ಮದುವೆಯಾದ ಮೇಲೆ ನಿಮ್ಮ ಸಂಗಾತಿಯ ಸಂತೋಷಗಳಿಗೂ ಆದ್ಯತೆ ನೀಡಿ. ಅವರ ಸಂತೋಷಗಳನ್ನೂ ನೀವು ಪರಿಗಣಿಸಿದರೆ, ನಿಮ್ಮ ಜೀವನದಲ್ಲಿ ನಡೆಯುವ ಸರ್‌ಪ್ರೈಸ್‌ಗಳಿಗೆ ಲೆಕ್ಕವಿರದು.

ನಿಮ್ಮ ಸಂಗಾತಿಗೆ ಆಗಾಗ ಅವರಿಗಿಷ್ಟವಾದ ವಸ್ತುಗಳನ್ನು ಗಿಫ್ಟ್‌ ನೀಡುವುದೋ, ಅಥವಾ ಇಷ್ಟವಾದ ಅಡುಗೆ, ಇಷ್ಟವಾದ ಸ್ಥಳಕ್ಕೆ ಕರೆದುಕೊಂಡು ಹೋಗುವುದೋ ಮಾಡಿ. ನಂತರದಲ್ಲಿ ಆಗುವ ಬದಲಾವಣೆಗಳನ್ನು ನೋಡಿ ಸಂತೋಷ ಪಡುವವರು ನೀವೆ. ಅವರ ಇಷ್ಟ, ಸಂತೋಷಗಳ ಬಗ್ಗೆ ನೀವು ಕಾಳಜಿ ವಹಿಸಿದಾಗ ತನ್ನಿಂದತಾನೆ ನಿಮ್ಮ ಸಂಗಾತಿಯಲ್ಲಿ ತನ್ನ ಬಗ್ಗೆಯೂ ಕಾಳಜಿ ವಹಿಸುತ್ತಾನೆ/ತ್ತಾಳೆ ಎನ್ನುವ ಸಂತಸ ಮೂಡುತ್ತದೆ.

2. ಸಂಬಂಧವು ಆರೋಗ್ಯಕರವಾಗಿರಲಿ

2. ಸಂಬಂಧವು ಆರೋಗ್ಯಕರವಾಗಿರಲಿ

ಸಣ್ಣ ವಿಷಯಗಳಿಗೂ ಸಿಡುಕು, ಬೆಳಗ್ಗೆ ಎದ್ದಾಗಲೂ ಸಿಡುಕು ಮುಖ, ಸಂಜೆ ಮನೆಗೆ ಬಂದಾಗಲೂ ಹೆಂಡತಿಯ ಮುಖದಲ್ಲಿ ಅಥವಾ ಗಂಡನ ಮುಖ ಊದಿಕೊಂಡಿದ್ದರೆ ಇಬ್ಬರ ಮನಃಸ್ಥಿತಿಯೂ ಹಾಳಾಗುತ್ತದೆ. ಇಡೀ ದಿನ ನಕಾರಾತ್ಮಕತೆ ನಿಮ್ಮನ್ನು ಆವರಿಸಿರುತ್ತದೆ. ಹೀಗಿದ್ದಾಗ ಜಗಳಗಳು, ವಾದಗಳು ಸಾಮಾನ್ಯ. ಒಬ್ಬರ ಮೇಲೋಬ್ಬರು ಕೂಗಾಟ, ರೇಗಾಟ ಮಾಡುತ್ತಿದ್ದರೆ ವಿಷಯಗಳು ಅತಿರೇಕಕ್ಕೆ ಹೋಗಬಹುದು. ಇಂತಹ ಸಮಯದಲ್ಲಿ ಸದಾ ಖುಷಿಯಾಗಿರುವ ದಂಪತಿಗಳ ಜೊತೆ ನೀವೂ ಬೆರೆಯಿರಿ ಅಥವಾ ಕುಟುಂಬ ಸ್ನೇಹಿತರೊಂದಿಗೆ ಇಬ್ಬರೂ ಸಂತೋಷದ ಸಮಯಗಳನ್ನು ಕಳೆಯಿರಿ. ಇಂತಹ ಗೆಟ್‌ಟುಗೆದರ್‌ನಿಂದ ಬೇರೆಯವರಿಂದ ನೀವೂ ಸಕಾರಾತ್ಮಕ ವಿಷಯಗಳನ್ನು ಕಲಿಯಬಹುದು.

3. ಹೊಸ ಆರಂಭವು ಕೆಟ್ಟದ್ದಲ್ಲ

3. ಹೊಸ ಆರಂಭವು ಕೆಟ್ಟದ್ದಲ್ಲ

ಹೊಸ ಜೀವನಕ್ಕೆ ಕಾಲಿಟ್ಟಾಗ ಕೆಲವರು ''ನಿನ್ನ ಜೀವನ ಹೆಂಡ್ತಿ ಕೈಲಿ ಮುಗಿದೋಯ್ತು'' ಎಂದೋ, ಮದುವೆಯಾದ ಮೇಲೆ ಎಂಜಾಯ್‌ ಮಾಡೋಕೆ ಆಗಲ್ಲ, ನಿಮ್ಮ ಬ್ಯಾಚುಲರ್‌ ಲೈಫ್‌ ಮುಗಿದೋಯ್ತು ಎನ್ನುವ ನಿರಾಸೆಯ ಮಾತುಗಳನ್ನಾಡುತ್ತಾರೆ. ಆದರೆ ಹೊಸ ಜೀವನ ನಿಮಗೆ ಹೊಸ ಕನಸನ್ನು ನೀಡುತ್ತದೆ ಎನ್ನುವುದನ್ನು ಮರೆಯಬೇಡಿ. ಅದುವರೆಗೂ ಒಂಟಿಯಾಗಿದ್ದವರಿಗೆ, ಕೈ ಹಿಡಿದು ನಡೆಸುವ ಹೊಸ ಜೀವ ಜೊತೆಯಾಗಿದೆ ಎನ್ನುವ ಖುಷಿ ನಿಮಗಿರಲಿ.

ನಿಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸುವ ಸಮಯ ಆರಂಭವಾಗಿದೆ ಎಂದುಕೊಳ್ಳಿ. ಜೊತೆಯಾಗಿ ಸಿನಿಮಾ, ಶಾಪಿಂಗ್‌, ಟ್ರಿಪ್‌ ಹೋಗಿ ಸುಂದರ ಕ್ಷಣಗಳ ಆಲ್ಬಮ್‌ ಮಾಡಿ. ದಾಂಪತ್ಯದಲ್ಲಿ ಆಕರ್ಷಣೆ ಕಡಿಮೆಯಾಗುತ್ತಿದೆ ಎನಿಸಿದರೆ, ಜೀವನ ಬೋರ್‌ ಎನಿಸಿದರೆ ಸಂಗಾತಿಗೊಂದು ಕ್ಯಾಂಡಲ್‌ ಲೈಟ್‌ ಡಿನ್ನರ್‌ ಅಥವಾ ಡೇಟಿಂಗ್‌ ಆಯೋಜಿಸಿ. ಇದು ನಿಮ್ಮಿಮ್ಮರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು. ಸಮಯ ಸಿಕ್ಕಾಗಲೆಲ್ಲಾ ಒಟ್ಟಿಗೆ ಕಳೆಯುವ ಅವಕಾಶವನ್ನು ಬಿಡಬೇಡಿ.

4. ರಾಜಿ ಮಾಡಿಕೊಳ್ಳುವ ಮನೋಭಾವವಿರಲಿ

4. ರಾಜಿ ಮಾಡಿಕೊಳ್ಳುವ ಮನೋಭಾವವಿರಲಿ

ಸಂಬಂಧವು ನಿಂತಿರುವುದೇ ಪ್ರೀತಿ, ವಿಶ್ವಾಸ ನಂಬಿಕೆಯ ಮೇಲೆ. ಸಣ್ಣ ವಿಷಯಗಳ ಬಗ್ಗೆ ಇಬ್ಬರೂ ಕಿತ್ತಾಡಿಕೊಂಡು ಜಗಳವನ್ನು ಮುಂದುವರಿಸಿಕೊಂಡು ಹೋದರೆ ಅದು ಬೆಳೆಯುತ್ತಲೇ ಇರುತ್ತದೆ. ವಿವಾಹವಾಗುವುದೇ ವಯಸ್ಕರಾದ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತು.ಹಾಗಾಗಿ ಮಕ್ಕಳಂತೆ ಕಿತ್ತಾಡಿಕೊಳ್ಳುವ ಬದಲು, ಬುದ್ಧಿವಂತರಂತೆ, ವಯಸ್ಕರಂತೆ ಯೋಚಿಸಿ. ಸಂಗಾತಿಯ ನಿರ್ಧಾರಗಳನ್ನೂ ಗೌರವಿಸಿ, ಅವರಿಗಿಷ್ಟವಾದ ಕೆಲಸವನ್ನು ಮಾಡಲು ನೀವೂ ಪ್ರಯತ್ನಿಸಿ. ಅಲ್ಲದೇ ಅವರಿಗೆ ಗೊತ್ತಿಲ್ಲದ ಸಂಗತಿ, ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಿ. ಇದು ಸಂಬಂಧದಲ್ಲಿನ ಸಮಸ್ಯೆಯನ್ನು ತಿಳಿಗೊಳಿಸುತ್ತದೆ. ಜಗಳವಾದ ಮೇಲೆ ಇಬ್ಬರ ತಪ್ಪುಗಳನ್ನೂ ಕುಳಿತುಕೊಂಡು ಮಾತನಾಡಿ, ನಿಮ್ಮ ತಪ್ಪಿದ್ದಲ್ಲಿ ಕ್ಷಮೆ ಕೇಳಿ. ಆ ಸಂಗತಿಯನ್ನು ಮರೆತು ಬಿಡಿ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ದಾಂಪತ್ಯವೆಂಬ ದೋಣಿ ನಡೆಯುವುದೇ ಇಬ್ಬರು ಪಯಣಿಗರಿಂದ, ನಿಮ್ಮ ಗುರಿಯೊಂದಿಗೆ, ಕನಸಿನೊಂದಿಗೆ ಇಬ್ಬರೂ ಜೊತೆಯಾಗಿ ಪಯಣಿಸಿದರೆ. ಜೀವನವು ಸುಖಕರ ಪ್ರಯಾಣವಾಗಬಹುದು.

5. ವೃತ್ತಿಪರ ಸಹಾಯ

5. ವೃತ್ತಿಪರ ಸಹಾಯ

ಇಬ್ಬರ ಜಗಳ ತಾರಕಕ್ಕೇರಿ, ಅದನ್ನು ಬಗೆಹರಿಸಲು ಇಬ್ಬರಿಂದಲೂ ಸಾಧ್ಯವೇ ಇಲ್ಲ, ಸಂಬಂಧವನ್ನು ಮುಂದುವರಿಸಲಾಗದು ಇನ್ನು ವಿಚ್ಛೇದನವೇ ಸೈ ಎನ್ನುವ ಮುನ್ನ, ಮೂರನೇ ವ್ಯಕ್ತಿಯೊಂದಿಗೆ, ಆಪ್ತರೊಂದಿಗೆ ನಿಮ್ಮ ಜಗಳ, ಭಿನ್ನಾಭಿಪ್ರಾಯಗಳನ್ನು ಮುಂದಿಡಿ. ಎಲ್ಲರೂ ಸಂಬಂಧವನ್ನು ಉಳಿಸುವ ಪ್ರಯತ್ನ ಮಾಡುತ್ತಾರೆಯೇ ಹೊರತು, ದೂರ ಮಾಡಲಾರರು. ಅದೂ ಸಾಧ್ಯವಾಗದಿದ್ದರೆ ವೃತ್ತಿಪರ ವಿವಾಹ ಸಲಹೆಗಾರರು ಅಥವಾ ಚಿಕಿತ್ಸಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಬಹುದು.

ದಾಂಪತ್ಯ ಜೀವನದಲ್ಲಿ ವಿಷಯಗಳು ತೀರಾ ಹದಗೆಟ್ಟಾಗ ಉತ್ತಮ ಆಪ್ತ ಸಲಹೆಗಾರರ ಮುಂದೆ ನಿಮ್ಮ ಸಮಸ್ಯೆಗಳನ್ನು ಮುಂದಿಡುವುದರಲ್ಲಿ ತಪ್ಪೇನಿಲ್ಲ. ಇಬ್ಬರ ಸಮಸ್ಯೆ ಮೂರನೆಯವರಿಗೆ ಹೇಳಿದರೆ ಏನು ಉಪಯೋಗ ಎನ್ನು ಮನೋಸ್ಥಿತಿ ಬಿಡಿ. ಇಬ್ಬರೂ ಒಂದೇ ಮನಃಸ್ಥಿತಿಯಲ್ಲಿದ್ದಾಗ, ಮಾತಿಗೆ ಮಾತು ಬೆಳೆದು ಸಮಸ್ಯೆಗಳು ಉಲ್ಬಣವಾಗುತ್ತವೆಯೇ, ಹೊರತು ಸಮಾಧಾನಕರವಾಗಿ ಯೋಚನೆ ಮಾಡುವ ಶಕ್ತಿ ಇರುವುದಿಲ್ಲ. ಹೀಗಿದ್ದಾಗ ಆಪ್ತ ಸಮಾಲೋಚಕರ ಮಾರ್ಗದರ್ಶನ ಪಡೆಯುವುದು ಅತ್ಯಗತ್ಯ.

ವಿವಾಹವಾದ ನಂತರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ. ಹೊಂದಾಣಿಕೆಯಿಂದ ಸಂಸಾರದ ದೋಣಿಯನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಪತಿ-ಪತ್ನಿ ಇಬ್ಬರದೂ ಆಗಿರುತ್ತದೆ. ಪರಸ್ಪರ ನಂಬಿಕೆ, ಸಂಗಾತಿಯ ಅಭಿಪ್ರಾಯಗಳನ್ನು ಕೇಳುವ ತಾಳ್ಮೆ, ತಪ್ಪುಗಳನ್ನು ಒಪ್ಪಿಕೊಂಡು ಮುನ್ನಡೆಯುವಂತಹ ಮನೋಭಾವ ಇದ್ದಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡದು.

English summary

Things to do If Your Marriage Is Going Through a Bad Phase in kannada

Do these things to make your relationship healthy after marriage, read on...
X
Desktop Bottom Promotion