For Quick Alerts
ALLOW NOTIFICATIONS  
For Daily Alerts

ಮನಶಾಸತ್ರಜ್ಞರ ಪ್ರಕಾರ ವಿಚ್ಛೇದನಕ್ಕೆ ಮುಂದಾಗುವ ಮುನ್ನ ಗಮನಿಸಬೇಕಾದ ಅಂಶಗಳಿವು

|

ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳು ನಾಲ್ಕು ಬಗೆಯ ಪುರುಷಾರ್ಥಗಳು ಅಂತಾ ನಮ್ಮ ಪುರಾಣಗಳೇ ಸಾರಿವೆ. ಧರ್ಮ ಅಥವಾ ನ್ಯಾಯಮಾರ್ಗದಲ್ಲಿ ಅರ್ಥ ಮತ್ತು ಕಾಮನೆಗಳನ್ನು ಗಳಿಸಿಕೊಂಡರೆ ಮೋಕ್ಷವನ್ನ ಸ್ವಯಂ ಭಗವಂತನೇ ಅಂತಹಾ ಮನುಷ್ಯನಿಗೆ ಕರುಣಿಸುತ್ತಾನೆ ಅನ್ನೋದು ಇದರ ತಾತ್ಪರ್ಯ ಮತ್ತು ಹಾಗೆ ಬಾಳುವುದು ಪ್ರತೀ ಮಾನವ ಜೀವಿಯ ಕರ್ತವ್ಯ ಕೂಡ. ಹೀಗೆ ಧರ್ಮದ ಅಥವಾ ನ್ಯಾಯದ ಚೌಕಟ್ಟಿನಲ್ಲಿ ಮನುಷ್ಯ ಈಡೇರಿಸಿಕೊಳ್ಳುವ ಕಾಮನೆಯೂ ವಿಹಿತವೇ.

ಲೈಂಗಿಕ ಅಭೀಪ್ಸೆಯ ಈಡೇರಿಕೆ, ಸುಖ ಸಂಸಾರದ ಕನಸುಗಳೆಲ್ಲವೂ ಈ ಕಾಮವೆಂಬ ಪುರುಷಾರ್ಥದ ಅಡಿಯಲ್ಲಿಯೇ ಬರುವಂತಹವು. ಗಂಡು, ಹೆಣ್ಣು ಪರಸ್ಪರರನ್ನು ಮೆಚ್ಚಿ, ಗುರುಹಿರಿಯರ ಆಶೀರ್ವಾದದೊಂದಿಗೆ ಸಪ್ತಪದಿ ತುಳಿದು ನೆರವೇರುವ ವಿವಾಹವೇ ಇದಕ್ಕೆ ಸೋಪಾನ. ಅಂತಹ ದಾಂಪತ್ಯ ಸ್ವರ್ಗಕ್ಕೆ ಮೂರೇ ಗೇಣು ಇದ್ದಂತೆ. ಅತ್ಯಂತ ಪ್ರೀತಿಪಾತ್ರರ ಜೊತೆ ಜೀವನ ಪೂರ್ತಿ ಕಳೆಯುವುದಕ್ಕಿಂತ ದೊಡ್ಡ ಸೌಭಾಗ್ಯ ಬೇರೇನಿರಲು ಸಾಧ್ಯ ? ಆದರೆ ಇಲ್ಲೊಂದು ಪ್ರಶ್ನೆ: ಅನ್ಯೋನ್ಯ ದಾಂಪತ್ಯಕ್ಕೆ ಬರೀ ಪ್ರೀತಿ ಒಂದೇ ಸಾಕೇ? ಯಾಕೆ ಈ ಪ್ರಶ್ನೆ ಅಂದ್ರೆ ವೈವಾಹಿಕ ಜೀವನ ಅನ್ನೋದು ಕೇವಲ ಪ್ರೀತಿಯ ಮೇಲಷ್ಟೇ ಮುನ್ನಡೆಯೋದಕ್ಕೆ ಸಾಧ್ಯವಿಲ್ಲ.

ದಂಪತಿಗಳ ನಡುವೆ ಪ್ರೀತಿ ಇರಲೇಬೇಕಾದುದು ಅತೀ ಮುಖ್ಯವೇ ಆಗಿದ್ದರೂ ಕೂಡ ಇದರ ಜೊತೆಗೆ ಬಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಬಬ್ಬರನ್ನೊಬ್ಬರು ಗೌರವಿಸುವುದು, ಪರಸ್ಪರರ ನಡುವೆ ತಾಳ್ಮೆ, ಪರಸ್ಪರರನ್ನು ಕ್ಷಮಿಸುವುದು, ಮತ್ತು ರಾಜೀ ಮನೋಭಾವ ಮೊದಲಾದವು ವೈವಾಹಿಕ ಜೀವನ ಸರಾಗವಾಗಿ ಮುನ್ನಡೆಯಲು ಬೇಕೇ ಬೇಕಾಗಿರುವ ಪ್ರಮುಖ ಅಂಶಗಳು. ಈ ಅಂಶಗಳ ಅಭಾವವು ತೀವ್ರವಾದರೆ, ಮುಂದೆ ದಂಪತಿಗಳ ನಡುವಿನ ಪ್ರೀತಿಯೂ ಬರಿದಾಗಿ, ಮುಂದೆ ವೈವಾಹಿಕ ಜೀವನ ಅನ್ನೋದು ವಿಚ್ಛೇದನದವರೆಗೂ ಬಂದು ಮುಟ್ಟುತ್ತದೆ! ಇಂದಿನ ಸಮಾಜದಲ್ಲಿ ಆಗುತ್ತಿರುವುದೂ ಇದೇನೇ!!

ಪ್ರೀತಿ ಮತ್ತು ಸಂಬಂಧಗಳಲ್ಲಿ ವಿಶ್ವಾಸ ಅನ್ನೋದು ಸಂಪೂರ್ಣ ಅಳಿದುಹೋಗಿ "ಇನ್ನು ಸಾಧ್ಯವೇ ಇಲ್ಲ" ಅನ್ನೋ ಹಂತ ತಲುಪಿದಾಗಲೇ ದಂಪತಿಗಳಲ್ಲಿ ಈ ವಿಚ್ಛೇದನದ ವಿಚಾರ ತಲೆಗೆ ಬರೋದು. ಒಮ್ಮೆ ಈ ವಿಚ್ಛೇದನದ ಯೋಚನೆ ಮನದಲ್ಲಿ ಆಳವಾಗಿ ಬೇರೂರಿದಲ್ಲಿ, ಅದನ್ನ ಕಿತ್ತೊಗೆದು ಪುನ: ದಾಂಪತ್ಯ ಜೀವನದಲ್ಲಿ ಮುಂದುವರೆಯುವುದು ಅಸಾಧ್ಯಕೋಟಿಯ ಮಾತು ಅಂತಾ ಅನ್ನಿಸೋದಕ್ಕೆ ಆರಂಭವಾಗತ್ತೆ.

ವಿಚ್ಛೇದನದ ಯೋಚನೆ ನಿಮ್ಮನ್ನು ಭಾವನಾತ್ಮಕವಾಗಿ ಹಿಂಡಿ ಹಿಪ್ಪೆ ಮಾಡಿಬಿಡುತ್ತೆ. ಆ ಕ್ಷಣಕ್ಕೆ ಕಿರಿಕಿರಿ ಇಲ್ಲದ ಸ್ವತಂತ್ರ ಜೀವ್ನಾನೇ ಲೇಸು ಅನ್ನಿಸೋದಕ್ಕೂ ಶುರುವಿಟ್ಟುಕೊಳ್ಳತ್ತೆ. ಆದರೆ ಈ ಮದುವೆ ಮತ್ತು ವಿಚ್ಛೇದನ ಅನ್ನೋದು ಬೇಕಾದಾಗ ಬರೋದು, ಬೇಡದೇ ಇದ್ದಾಗ ಹೋಗೋದು ಅನ್ನೋ ಆಟದ ಥರ ಅಲ್ಲ ಅನ್ನೋದನ್ನ ದಂಪತಿಗಳು ಅರ್ಥಾನೇ ಮಾಡ್ಕೋಳಲ್ಲ. ದಾಂಪತ್ಯ ಅನ್ನೋದು ಬರೀ ಎರಡು ಜೀವಗಳನ್ನಷ್ಟೇ ಬೆಸೆಯೋವಂತಾ ಸಂಬಂಧ ಅಲ್ಲ, ಬದಲಿಗೆ ಅದು ಎರಡು ಕುಟುಂಬಗಳ ಬೆಸುಗೇನೂ ಹೌದು ಅನ್ನೋದನ್ನ ಮರೆತೇ ಬಿಡ್ತಾರೆ.

ವಿಚ್ಛೇದನದ ವಿಚಾರಕ್ಕೆ ಬಂದಾಗ ಸಾಮಾನ್ಯವಾಗಿ ಗಂಡ, ಹೆಂಡತಿ ಇಬ್ಬರಿಗೂ ಏನು ಮಾಡಬೇಕೆಂದೇ ತೋಚುವುದಿಲ್ಲ. "ನಮ್ಮಿಂದ ಇನ್ನು ಈ ದಾಂಪತ್ಯ ಜೀವನದಲ್ಲಿ ಮುಂದುವರೆಯೋಕೆ ಸಾಧ್ಯಾನೇ ಇಲ್ಲ, ಇದಕ್ಕೆ ವಿಚ್ಛೇದನವೊಂದೇ ಪರಿಹಾರ" ಅನ್ನೋ ಒಂದೇ ನಿರ್ಧಾರಕ್ಕೆ ಬರೋದೇ ಸರ್ವೇಸಾಮಾನ್ಯ. ಆದರೆ ಹಾಗೆ ಏಕಾಏಕಿ ಹೊರನಡೆಯೋದರ ಬದಲು, ಹಳಿತಪ್ಪಿರುವ ಆ ದಾಂಪತ್ಯ ಜೀವನವನ್ನ ಸರಿ ಮಾಡಿಕೊಳ್ಳೋದು ಹೇಗೆ ಅನ್ನೋದರ ಕಡೆ ನೀವೆಂದಾದರೂ ಯೋಚಿಸಿದ್ದೀರಾ ?

ಆ ಸನ್ನಿವೇಶದಲ್ಲಿ ಅಂತಹ ಯೋಚನೆ ಸುಲಭವಲ್ಲದ್ದಾಗಿರಬಹುದು. ಆದರೆ, ಜೀವನಪೂರ್ತಿ ಒಟ್ಟಿಗೆ ಬಾಳುವ ಸಂಕಲ್ಪದೊಂದಿಗೆ ಪ್ರವೇಶಿಸಿದ ಅಂತಹ ಸಂಬಂಧವನ್ನ ಉಳಿಸಿಕೊಳ್ಳೋದಕ್ಕಾಗಿ ಸೆಣಸಾಡೋದ್ರಲ್ಲಿ ತಪ್ಪೇನೂ ಇಲ್ಲ. ದಾಂಪತ್ಯದಲ್ಲಿನ ಬಿರುಕು ವಿಚ್ಛೇದನದಲ್ಲೇ ಕೊನೆಯಾಗಬೇಕೆಂದೇನೂ ಇಲ್ಲ. ಒಂದಿಷ್ಟು ಹೋರಾಟ, ಅರ್ಥಮಾಡಿಕೊಳ್ಳುವಿಕೆ, ಮತ್ತು "ಚಿಕಿತ್ಸೆ" ಯೊಂದಿಗೆ ಬಿರುಕುಬಿಟ್ಟ ದಾಂಪತ್ಯವನ್ನು ಖಂಡಿತಾ ಮತ್ತೊಮ್ಮೆ ಬೆಸೆಯೋದಕ್ಕೆ ಸಾಧ್ಯವಿದೆ.

"ಏನು 'ಚಿಕಿತ್ಸೆ'ನಾ ? ಇಲ್ಲಿ 'ಚಿಕಿತ್ಸೆ' ಗೇನು ಕೆಲಸ ? ಎಂತಹಾ 'ಚಿಕಿತ್ಸೆ' ?!" ಅಂತಾ ಹುಬ್ಬೇರಿಸುತ್ತಿದ್ದೀರಾ ? ಏನೂಂತ ಮುಂದೆ ವಿವರಿಸಿದ್ದೇವೆ ನೋಡಿ....

ಬಿರುಬಿಟ್ಟಿರುವ ದಾಂಪತ್ಯವನ್ನ ಮತ್ತೆ ಗಟ್ಟಿಗೊಳಿಸುವ ದಿಶೆಯಲ್ಲಿ ವೈವಾಹಿಕ ಸಮಾಲೋಚನೆ ಮತ್ತು ಚಿಕಿತ್ಸೆ ಗಳು ಉತ್ತಮ ಪರಿಹಾರಗಳು. ವಿಚ್ಛೇದನಕ್ಕೆ ಹಾತೊರೆಯುವ ಜನರಿರುವಂತಹ ಇಂದಿನ ಕಾಲಘಟ್ಟದಲ್ಲಿಯೂ ತಮ್ಮ ಸಂಬಂಧವನ್ನು ಉಳಿಸಿಕೊಳ್ಳಬೇಕೆಂದು ಹೋರಾಡುವವರ ಪಾಲಿಗೆ ದಾಂಪತ್ಯ ಚಿಕಿತ್ಸೆ ಅನ್ನೋದು ನಿಜಕ್ಕೂ ವರದಾನವಾದೀತು..

"ಚಿಕಿತ್ಸಜ್ಞರು" ಅಥವಾ "ಚಿಕಿತ್ಸಾ ತಜ್ಞರು" ಅಂತಾ ಕರೆಸಿಕೊಳ್ಳೋ ವೃತ್ತಿಪರ ಕೌಶಲ್ಯವುಳ್ಳ ಸಮಾಲೋಚಕರಿರುತ್ತಾರೆ. ಹಳ್ಳಹಿಡಿದಿರೋ ದಾಂಪತ್ಯವನ್ನ ಮತ್ತೆ ಸರಿದಾರಿಗೆ ತರೋ ರೀತಿಯಲ್ಲಿ ಅತ್ಯುತ್ತಮವಾದ ಸಲಹೆಯನ್ನ ಕೊಡೋದ್ರಲ್ಲಿ ಈ ಚಿಕಿತ್ಸಾ ತಜ್ಞರು ಎತ್ತಿದ ಕೈ. ವಿಚ್ಛೇದನಕ್ಕೆ ಮುಂದಾಗೋ ಬಹುತೇಕ ದಂಪತಿಗಳು ಪರಸ್ಪರರ ಸಮಸ್ಯೆಗಳನ್ನ ಅರ್ಥಮಾಡಿಕೊಳ್ಳೋದ್ರಲ್ಲಿ ಸಂಪೂರ್ಣ ಸೋತಿರುತ್ತಾರೆ. ಅಂತಹ ದಂಪತಿಗಳು ಈ ಚಿಕಿತ್ಸಜ್ಞರನ್ನ ಸಂಪರ್ಕಿಸಿದಾಗ, ಅವರು ದಂಪತಿಗಳ ಸಮಸ್ಯೆಗಳನ್ನ ಆಲಿಸುತ್ತಾರೆ, ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತಾರೆ, ಹಾಗೂ ಪ್ರತ್ಯೇಕ-ಪ್ರತ್ಯೇಕವಾಗಿ ಗಂಡ, ಹೆಂಡಿರ ವೈಯಕ್ತಿಕ ಮಟ್ಟಗಳಲ್ಲಿ, ಅವರವರ ಬುದ್ಧಿಮತ್ತೆಗೆ ಅರ್ಥ ಆಗೋ ರೀತಿನಲ್ಲಿ ಅವರಿಬ್ಬರಿಗೂ ಸಮಸ್ಯೆಯನ್ನು ಮನದಟ್ಟು ಮಾಡಿಕೊಡುತ್ತಾರೆ. ಪರಿಸ್ಥಿತಿಯನ್ನ ಆಳವಾಗಿ ವಿಶ್ಲೇಷಿಸುವ ಮತ್ತು ಮೌಲ್ಯಮಾಪನ ಮಾಡುವ ಕೌಶಲ್ಯ ಈ ಚಿಕಿತ್ಸಾತಜ್ಞರಿಗೆ ಇರುತ್ತದೆ. ಇದೇ ಅವರ ವೈಶಿಷ್ಟ್ಯ. ಇದರ ಬಲದಿಂದಲೇ ಅವರು ವಿಚ್ಛೇದನಕ್ಕೆ ಮುಂದಾಗಿರೋ ದಂಪತಿಗಳ ಮನಸ್ಥಿತಿಯನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಸಮರ್ಥರಾಗ್ತಾರೆ.

ನಿಜ ಹೇಳಬೇಕೆಂದರೆ ಈ ಚಿಕಿತ್ಸಜ್ಞರು ಜೀವನ ರಕ್ಷಕರೇ ಆಗಿರುತ್ತಾರೆ. ಅತ್ಯಂತ ತಾಳ್ಮೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು, ದಯಾಪರತೆ ಇವು ಈ ಚಿಕಿತ್ಸಜ್ಞರ ಗುಣವಿಶೇಷಗಳು. ಸತಿಪತಿಗಳಾದ ನಿಮ್ಮಿಬ್ಬರ ನಡುವೆ ತಪ್ಪಾಗಿರೋದು ಏನು ಅನ್ನೋದನ್ನ ಚೆನ್ನಾಗಿ ಅರ್ಥಮಾಡಿಕೊಂಡು ಸರಳವಾಗಿ ನಿಮಗದನ್ನ ವಿವರಿಸುವ ಸಾಮರ್ಥ್ಯ ಅವರಿಗಿರುತ್ತದೆ. ಅವರ ವಿವರಣೆ ನಿಮಗೆ ಸುಲಭವಾಗಿ ಅರ್ಥವಾಗೋ ಹಾಗಿರುತ್ತೆ. ದಿನದ ಬಹುತೇಕ ಭಾಗವನ್ನ ಸತಿಪತಿಗಳಾದ ನೀವು ಒಟ್ಟಾಗಿ ಕಳೆಯೋದ್ರಿಂದ ಒಬ್ಬರನ್ನೊಬ್ಬರು ಹೇಗೆಂದು ಚೆನ್ನಾಗಿಯೇ ಅರ್ಥಮಾಡಿಕೊಂಡಿರುತ್ತೀರಿ. ಚಿಕಿತ್ಸಜ್ಞರು ಈ ಅಂಶವನ್ನೇ ತಮ್ಮ ಕೆಲಸಕ್ಕೆ ಆಧಾರವಾಗಿಟ್ಟುಕೊಳ್ಳುತ್ತಾರೆ. ನಿಮ್ಮಿಬ್ಬರ ನಡುವೆ ಇರುವ ವ್ಯತ್ಯಾಸವನ್ನ ಆ ಮೂಲಕ ಅರ್ಥಮಾಡಿಕೊಳ್ಳುತ್ತಾರೆ. ಆ ಅಂತರದ ಕಂದಕವನ್ನ ಸರಿಯಾದ ರೀತಿಯಲ್ಲಿ ಕಿರಿದು ಮಾಡಲು ಅಥವಾ ಕಂದಕವನ್ನೇ ಇಲ್ಲದಂತಾಗಿಸಲು ಪ್ರಯತ್ನಿಸುತ್ತಾರೆ ಹಾಗೂ ತನ್ಮೂಲಕ ಸತಿಪತಿಗಳ ನಡುವಿನ ವಿರಸವನ್ನು ನಿವಾರಿಸುತ್ತಾರೆ. ಅಷ್ಟಕ್ಕೂ ವೈವಾಹಿಕ ಜೀವನದಲ್ಲಿ ಜೋಡಿಯಾಗಿ ಕಟ್ಟಕಡೆಗೆ ಉಳಿದುಕೊಳ್ಳೋದು ನೀವು ಗಂಡ ಹೆಂಡಿರಷ್ಟೇ ತಾನೇ ?!!

ಆದ್ದರಿಂದ, ವಿಚ್ಛೇದನದಿಂದ ತಪ್ಪಿಸಿಕೊಳ್ಳಲು ಬಹುತೇಕ ಚಿಕಿತ್ಸಜ್ಞರು ನಿಮ್ಮಲ್ಲಿ ಕೇಳುವ ಹತ್ತು ಪ್ರಶ್ನೆಗಳ ಕುರಿತು ನಾವಿಲ್ಲಿ ಪಟ್ಟಿ ಮಾಡಿದ್ದೇವೆ, ಓದಿಕೊಳ್ಳಿ.....

1. ನಿಮ್ಮ ಸಂಗಾತಿಯ ಪರಿಭಾಷೆಯನ್ನ ಅರ್ಥಮಾಡಿಕೊಳ್ಳಿ

1. ನಿಮ್ಮ ಸಂಗಾತಿಯ ಪರಿಭಾಷೆಯನ್ನ ಅರ್ಥಮಾಡಿಕೊಳ್ಳಿ

ಪ್ರೀತಿಗೆ ಸಂಬಂಧ ಪಟ್ಟ ಹಾಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ದೃಷ್ಟಿಕೋನ ಮತ್ತು ಪರಿಭಾಷೆಗಳಿರುತ್ತವೆ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ಆದ್ಯತೆಗಳು ಬೇರೆ ಬೇರೆಯದ್ದಾಗಿರಬಹುದು. ಹೀಗಾದಾಗ, ಒಬ್ಬರನ್ನೊಬ್ಬರು ಮೆಚ್ಚಿಸೋದಕ್ಕಾಗಿ ಪ್ರೀತಿಯನ್ನ ವ್ಯಕ್ತಪಡಿಸುವಲ್ಲಿ ನೀವಿಬ್ಬರೂ ಸೋಲುವ ಸಾಧ್ಯತೆ ಇರುತ್ತೆ. "ನನ್ನ ಸಂಗಾತಿ ಪ್ರೀತಿ ಮತ್ತು ಸಂವಹನಗಳ ರೂಪದಲ್ಲಿ ನನಗೆ ಬೆಂಬಲ ಮತ್ತು ಸಲಹೆಗಳನ್ನ ನೀಡಲಿ" ಅಂತಾ ನೀವು ನಿರೀಕ್ಷಿಸಬಹುದು. ಆದರೆ, ನಿಮಗೆ ಉಡುಗೊರೆಗಳನ್ನ ಕೊಡೋದರ ಮೂಲಕ ನಿಮ್ಮ ಮೇಲೆ ಪ್ರೀತಿಯ ಸುರಿಮಳೆಯನ್ನೇ ಸುರಿಸಬಹುದೆಂಬ ಇಂಗಿತ ನಿಮ್ಮ ಸಂಗಾತಿಯದ್ದಾಗಿರಬಹುದು. ಹಾಗಾಗಿ, ನಿಮ್ಮ ಸಂಗಾತಿಯ ಅವರದ್ದೇ ಆದ ಪ್ರೀತಿಯ ಪರಿಭಾಷೆಯನ್ನ ಅರ್ಥಮಾಡಿಕೊಂಡು ಅದನ್ನ ಆನಂದಿಸಿ. ಆಗ ನಿಮಗೇ ನಿಮ್ಮಿಬ್ಬರ ನಡುವಿನ ವ್ಯತ್ಯಾಸದ ಮನದಟ್ಟಾಗುತ್ತದೆ.

2. ನಿಮ್ಮ ಭಾವನೆಗಳನ್ನ ಹಿಡಿತದಲ್ಲಿಟ್ಟುಕೊಳ್ಳುವುದನ್ನ ರೂಢಿಸಿಕೊಳ್ಳಿ

2. ನಿಮ್ಮ ಭಾವನೆಗಳನ್ನ ಹಿಡಿತದಲ್ಲಿಟ್ಟುಕೊಳ್ಳುವುದನ್ನ ರೂಢಿಸಿಕೊಳ್ಳಿ

ಪ್ರೀತಿಪಾತ್ರರಿಗೆ ನೀವು ಮಾಡುವ ಅವಮಾನಗಳು ಅವರ ಅಂತರಂಗವನ್ನೇ ಘಾಸಿಗೊಳಿಸಿ ಬಿಡುತ್ತವೆ. ಕೋಪಗೊಂಡಾಗ ಕೆಲವೊಮ್ಮೆ ನಿಮ್ಮ ಮನದಾಳದ ಬೇಸರ, ಆಕ್ರೋಶವನ್ನೆಲ್ಲ ನಿಮ್ಮ ಸಂಗಾತಿಯ ಮೇಲೆ ಕಾರಿಕೊಳ್ಳಬೇಕೆನಿಸುತ್ತದೆ. ಆಗ ಆಕ್ರೋಶವನ್ನ ಹೊರಹಾಕುವ ಭರದಲ್ಲಿ ನೀವು ನಿಮ್ಮ ಸಂಗಾತಿಗೆ ತೀವ್ರವಾಗಿ ಅವಮಾನ ಮಾಡುವುದೂ ಇದ್ದೀತು. ಹೀಗೆಲ್ಲ ಮಾಡುವುದರ ಬದಲು, ಆಳವಾಗಿ ಉಸಿರನ್ನು ತೆಗೆದುಕೊಳ್ಳಿ, ನಿಮ್ಮ ನಾಲಗೆಗೆ ಕಡಿವಾಣ ಹಾಕಿ, ಹಾಗೂ ಸ್ವಲ್ಪ ಸಮಯ ಆ ಪರಿಸರದಿಂದಲೇ ದೂರ ಸರಿಯಿರಿ. ಹೊರಗಡೆ ಒಂದು ಹತ್ತು ನಿಮಿಷಗಳ ಕಾಲ ಅಡ್ಡಾಡಿ ಹಿಂದಿರುಗುವಷ್ಟರಲ್ಲಿ ಖಂಡಿತವಾಗಿಯೂ ನಿಮ್ಮ ಮನಸ್ಥಿತಿ ಶಾಂತವಾಗಿರುತ್ತದೆ. ಮನೆಯಲ್ಲೇ ಉಳಿದುಕೊಂಡು, ಜಗಳವನ್ನ ಮುಂದುವರೆಸುತ್ತಾ, ಒಬ್ಬರನ್ನೊಬ್ಬರು ಹಳಿದುಕೊಳ್ಳುವ ಬದಲು, "ಒಂದಷ್ಟು ತಂಗಾಳಿಯನ್ನು ಸೇವಿಸಿ ಬರುವೆ" ಎಂದು ಹೇಳಿ ಹೊರನಡೆದು ಬಿಡಿ. ಹೀಗೆ ಮಾಡುವುದೇ ಸೂಕ್ತ. ಏಕೆಂದರೆ ಬಿರುಮಾತುಗಳು ಮನಸ್ಸಿನ ಮೇಲೆ ಮಾಯದ ಗಾಯ ಮಾಡಬಲ್ಲವು.

3. ನಿಮ್ಮ ಸಂಗಾತಿ ಬಗ್ಗೆ ಎಂದಿಗೂ ಬೆನ್ನ ಹಿಂದೆ ಆಡಿಕೊಳ್ಳಬೇಡಿ

3. ನಿಮ್ಮ ಸಂಗಾತಿ ಬಗ್ಗೆ ಎಂದಿಗೂ ಬೆನ್ನ ಹಿಂದೆ ಆಡಿಕೊಳ್ಳಬೇಡಿ

ಹೀಗೆ ನೀವು ಮಾಡುತ್ತಿರುವುದು ನಿಮ್ಮ ಸಂಗಾತಿಗೆ ತಿಳಿದಲ್ಲಿ, ನಿಮ್ಮಿಬ್ಬರ ನಡುವೆ ಮತ್ತಷ್ಟು ವೈಮನಸ್ಸು ಉಂಟಾಗುತ್ತದೆ. ಆದ್ದರಿಂದ, ನಿಮ್ಮ ತಾಯಿಯನ್ನೂ ಒಳಗೊಂಡಂತೆ ಯಾರ ಬಳಿಯೂ ನಿಮ್ಮ ಸಂಗಾತಿಯ ಕುರಿತು ಚಾಡಿ ಮಾತುಗಳನ್ನಾಡುವುದು ಬೇಡವೇ ಬೇಡ. ಹೀಗೆ ನೀವೇ ಸ್ವತ: ನಿಮ್ಮ ಸಂಗಾತಿಯ ಬಗ್ಗೆ ಸಿಕ್ಕಸಿಕ್ಕವರಿಗೆಲ್ಲ ಚಾಡಿ ಹೇಳುತ್ತಾ ಬಂದರೆ, ಅವರುಗಳೂ ಕೂಡ ನಿಮ್ಮ ಸಂಗಾತಿಯನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಇರುತ್ತದೆ. ಇದೆಲ್ಲ ಬೇಕಾ ನಿಮಗೆ?

4. ಅವರಿರುವಂತೆಯೇ ಅವರನ್ನು ಸ್ವೀಕರಿಸಿ, ಪ್ರೀತಿಸಿರಿ

4. ಅವರಿರುವಂತೆಯೇ ಅವರನ್ನು ಸ್ವೀಕರಿಸಿ, ಪ್ರೀತಿಸಿರಿ

ಅವರು ಯಾರಾಗಿದ್ದಾರೆಯೋ ಅದೇ ಕಾರಣಕ್ಕಾಗಿ ನಿಮ್ಮ ಸಂಗಾತಿಯನ್ನ ನೀವು ಪ್ರೀತಿಸಿ. ಹೀಗಾದಾಗ, ಇಚ್ಛೆಗಳು ಮತ್ತು ಆದ್ಯತೆಗಳು ವಿಭಿನ್ನವಾಗಿದ್ದರೂ ಕೂಡ, ಪರಸ್ಪರರ ನಡುವಿನ ಪ್ರೀತಿ ಹಾಗೆಯೇ ಉಳಿದುಕೊಳ್ಳುತ್ತದೆ. ಆದ್ದರಿಂದ, ನಿಮ್ಮ ಸಂಗಾತಿಯನ್ನು ಬದಲಾಯಿಸಲು ಯತ್ನಿಸುವುದು ಬೇಡ ಅಥವಾ ಅವರ ಇಷ್ಟಾನಿಷ್ಟಗಳನ್ನ ತಿರಸ್ಕರಿಸುವುದು ಬೇಡ. ನಿಮಗಿಷ್ಟವಲ್ಲದ ವಿಭಿನ್ನ ದೃಷ್ಟಿಕೋನಗಳನ್ನು, ಅನಿಸಿಕೆಗಳನ್ನ, ಹವ್ಯಾಸಗಳನ್ನ ನಿಮ್ಮ ಸಂಗಾತಿಯು ಹೊಂದಿರಬಹುದಾದರೂ ಕೂಡ ನೀವು ಅವನ್ನು ಗೌರವಿಸಬೇಕು. ಆಗ ನೀವಿಬ್ಬರೂ ನಿಮ್ಮ ನಿಮ್ಮ ಬೇಕು-ಬೇಡಗಳನ್ನ ಸಮಾನವಾಗಿ ಗೌರವಿಸುವಂತಹ ಒಂದು ಮಧುರ ವಾತಾವರಣದ ಸೃಷ್ಟಿಯಾಗುತ್ತದೆ.

5. ಕ್ಷಮಿಸಲು ಕಲಿಯಿರಿ

5. ಕ್ಷಮಿಸಲು ಕಲಿಯಿರಿ

ಸತಿಪತಿಗಳ ನಡುವೆ ಈ ಕ್ಷಮೆಯಿಂಬುದು ಅತ್ಯಂತ ಚೇತೋಹಾರೀ ಭಾವನೆಯಾಗಿದೆ. ಸಂಬಂಧವೊಂದನ್ನು ಉಳಿಸುವ ಕ್ಷಮತೆಯಿರುವುದು ಈ ಕ್ಷಮಾ ಗುಣಕ್ಕೇನೇ. ತಪ್ಪುಗಳಾಗುವುದು ಸಹಜವಾದ್ದರಿಂದ ಅವನ್ನು ಸ್ವೀಕರಿಸಿ ಸರಿಪಡಿಸಿಕೊಳ್ಳುವ ಮನೋಭಾವ ಸತಿಪತಿಗಳಿಬ್ಬರಿಗೂ ಅಗತ್ಯ. ತಪ್ಪನ್ನು ಒಪ್ಪಿಕೊಂಡು, ಅದನ್ನು ತಿದ್ದಿಕೊಳ್ಳುವ ಮನೋಭಾವ ಇಬ್ಬರಲ್ಲೂ ಇದ್ದರೆ, ಅಂತಹ ಸಂಬಂಧಕ್ಕೆ ಯಾವ ತೊಡಕೂ ಇರಲಾರದು. ಕ್ಷಮಿಸಲು ನಿಮ್ಮಿಂದ ಸಾಧ್ಯವಿಲ್ಲವೆಂದಾದರೆ, ಅದು ದಾಂಪತ್ಯ ಜೀವನವನ್ನೇ ಹರಿದು ಚಿಂದಿ ಮಾಡುತ್ತದೆ.

6. ನಿಮ್ಮ ಸಂಗಾತಿಗೆ ಆದ್ಯತೆ ನೀಡಿ

6. ನಿಮ್ಮ ಸಂಗಾತಿಗೆ ಆದ್ಯತೆ ನೀಡಿ

ನಿಮ್ಮ ಮಕ್ಕಳು ಮತ್ತು ನಿಮ್ಮ ಕುಟುಂಬವೇ ನಿಮಗೆ ಅತ್ಯುನ್ನತ ಆದ್ಯತೆಗಳೆಂದು ನಾವೂ ಒಪ್ಪಿಕೊಳ್ಳುತ್ತೇವೆ. ಆದರೆ ನೀವು ನಿಮ್ಮ ಸಂಗಾತಿಗೂ ಅಷ್ಟೇ ಆದ್ಯತೆ ನೀಡಬೇಕು. ಮಕ್ಕಳಿಗಾಗಿ ಪರಮ ತ್ಯಾಗಿಗಳಾಗಿದ್ದು, ಸಂಗಾತಿಯ ಅವಶ್ಯಕತೆಗಳನ್ನು ಉಪೇಕ್ಷಿಸುತ್ತಾ ಬಂದಲ್ಲಿ, ಅದು ಸುಮಧುರ ದಾಂಪತ್ಯಕ್ಕೆ ಮಾರಕ. ದಂಪತಿಯು ಕುಟುಂಬವೊಂದರ ಬೆನ್ನೆಲುಬಿದ್ದಂತೆ. ಆ ಬೆನ್ನೆಲುಬೇ ಗಟ್ಟಿಯಿಲ್ಲದಿದ್ದರೆ ನಿಮ್ಮ ಕುಟುಂಬ ನುಚ್ಚುನೂರಾಗುದೀತು ಹಾಗೂ "ನನ್ನನ್ನು ಮರೆತೇ ಬಿಟ್ಟಿರುವರು" ಎಂದು ನಿಮ್ಮ ಬಗ್ಗೆ ನಿಮ್ಮ ಸಂಗಾತಿಯು ಭಾವಿಸುವಂತಾದೀತು.

7. ಇನ್ನೊಬ್ಬರೊಂದಿಗೆ ನಿಮ್ಮ ಸಂಗಾತಿಯನ್ನು ಹೋಲಿಸುವುದು ಖಂಡಿತಾ ಸಲ್ಲದು

7. ಇನ್ನೊಬ್ಬರೊಂದಿಗೆ ನಿಮ್ಮ ಸಂಗಾತಿಯನ್ನು ಹೋಲಿಸುವುದು ಖಂಡಿತಾ ಸಲ್ಲದು

ಇತರರ ಗಂಡಂದಿರೊಂದಿಗೆ ಅಥವಾ ಹೆಂಡತಿಯರೊಂದಿಗೆ ನಿಮ್ಮ ಸಂಗಾತಿಯನ್ನು ಹೋಲಿಸುವ ತಪ್ಪನ್ನು ಎಂದೆಂದಿಗೂ ಮಾಡಬೇಡಿ. ಹೀಗೆ ಮಾಡುವುದರಿಂದ ಕೀಳರಿಮೆಯ ಸಮಸ್ಯೆಗಳು ಮತ್ತು ಕುಂಠಿತ ಆತ್ಮವಿಶ್ವಾಸದಂತಹ ತೊಂದರೆಗಳು ತಲೆದೋರುತ್ತವೆ. ಹೀಗಾದಾಗ, "ಇವರ ಪ್ರೀತಿಗೆ ನಾನು ಪಾತ್ರನಲ್ಲ/ಪಾತ್ರಳಲ್ಲ" ಅನ್ನುವ ಮನೋಭಾವ ನಿಮ್ಮ ಸಂಗಾತಿಯನ್ನು ಕಾಡಲಾರಂಭಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುವ ಪೋಸ್ಟ್ ಗಳೆಲ್ಲವೂ ಸತ್ಯಕ್ಕೆ ಹತ್ತಿರವಾದವುಗಳಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ.

8. ಆಗಾಗ್ಗೆ ಅನ್ನೋದಕ್ಕಿಂತ ಹೆಚ್ಚಾಗಿ ಪರಸ್ಪರರನ್ನು ಗೌರವಿಸುವುದನ್ನು ರೂಢಿಸಿಕೊಳ್ಳಿರಿ

8. ಆಗಾಗ್ಗೆ ಅನ್ನೋದಕ್ಕಿಂತ ಹೆಚ್ಚಾಗಿ ಪರಸ್ಪರರನ್ನು ಗೌರವಿಸುವುದನ್ನು ರೂಢಿಸಿಕೊಳ್ಳಿರಿ

ಸಂತಸಭರಿತ ವೈವಾಹಿಕ ಜೀವನಕ್ಕೆ ಪರಸ್ಪರರ ನಡುವಿನ ಗೌರವವೇ ಬುನಾದಿ. ನೀವೇನು ಹೇಳುತ್ತಿದ್ದೀರಿ ಅನ್ನೋದನ್ನ ಸ್ವಲ್ಪವೂ ಯೋಚಿಸದೇ ಬಾಯಿಗೆ ಬಂದಂತೆಲ್ಲ ಅವಾಚ್ಯ ಶಬ್ದಗಳಿಂದ ಅರಚಾಡಿದರೆ, ವಿನೋದಮಯ ದಾಂಪತ್ಯ ಜೀವನ ವಿಷಾದದಲ್ಲಿ ಅಂತ್ಯಗೊಂಡೀತು. ನಿಮಗೆ ವಿಪರೀತ ಕೋಪ ಬಂದಾಗ, ತರ್ಕಬದ್ಧವಾಗಿ ಯೋಚಿಸುವುದೆಲ್ಲ ಕಷ್ಟವೇ ಸರಿ, ಅದನ್ನ ನಾವೂ ಒಪ್ಪುತ್ತೇವೆ. ಆದರೆ ನಿಮಗೆ ಕೋಪ ತಂದ ಆ ಸಂಗತಿಯ ಬಗ್ಗೆ ನಿಮ್ಮ ಸಂಗಾತಿಯ ಬಳಿ ತುಸು ಗೌರವದಿಂದ ಹೇಳಿಕೊಳ್ಳಿ. ಪರಸ್ಪರರನ್ನ ಗೌರವಿಸುವುದರಿಂದ ದ್ವೇಷಭಾವನೆಗ್ಎ ಆಸ್ಪದವಿರುವುದಿಲ್ಲ.

9. ತೀರ ಅಗೌರವ ತರುವ ಮಾತುಗಳನ್ನಾಡದಿರಿ

9. ತೀರ ಅಗೌರವ ತರುವ ಮಾತುಗಳನ್ನಾಡದಿರಿ

"ನಮಗೇನಿದ್ದರೂ ವಿಚ್ಛೇದನವೇ ಸರಿ" ಅಥವಾ "ಇನ್ನು ನನ್ನಿಂದ ಸಾಧ್ಯವಿಲ್ಲ, ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ" ಎಂದೆಲ್ಲ ಅರಚಾಡಬೇಡಿ. ಇಂತಹ ಚುಚ್ಚು ಮಾತುಗಳು ನಿಜಕ್ಕೂ ನಿಮ್ಮ ದಾಂಪತ್ಯವನ್ನು ಅಂತ್ಯಗೊಳಿಸಿಬಿಡುತ್ತವೆ. ನಿಮಗದೆಷ್ಟೇ ಕಿರಿಕಿರಿಯಾಗಿರಲೀ, ಬೇಸರವಾಗಿರಲೀ, ಅದರ ನಡುವೆಯೂ ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸಿರುವುದು ಸತ್ಯವೇ ಆಗಿದ್ದಲ್ಲಿ, ಇಂತಹ ಬಿರುನುಡಿಗಳನ್ನು ಖಂಡಿತಾ ನಿಮ್ಮ ಸಂಗಾತಿಯ ಎದುರು ಆಡದಿರಿ. ಆ ಕ್ಷಣಕ್ಕೆ ಒಂದೊಮ್ಮೆ ನಿಮ್ಮ ಜಗಳವು ಕೊನೆಗೊಂಡರೂ ಕೂಡ, ನೀವಾಡಿದ ಇಂತಹ ಬಿರುನುಡಿಗಳು ನಿಮ್ಮ ಸಂಗಾತಿಯ ಮನದಲ್ಲಿ ಶಾಶ್ವತವಾಗಿ ಉಳಿದುಬಿಡುತ್ತವೆ ಹಾಗೂ ಮುಂದೆದಾದರೂ ಸಂದರ್ಭ ಒದಗಿದಾಗ ಅವರು ನಿಮ್ಮ ವಿರುದ್ಧ ತಿರುಗಿ ಅವೇ ಮಾತುಗಳನ್ನಾಡುವ ಸಾಧ್ಯತೆಯೂ ಇರುತ್ತದೆ.

10. ಹೆಚ್ಚು ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಿರಿ

ಜಗಳವೊಂದನ್ನು ಶಾಂತಗೊಳಿಸುವಲ್ಲಿ, ಅಥವಾ ಸತಿಪತಿಯರನ್ನು ಸನಿಹ ತರುವಲ್ಲಿ ರತಿಕ್ರೀಡೆ ಮಹತ್ತರ ಪಾತ್ರವಹಿಸುತ್ತದೆ. ಪರಸ್ಪರರ ನಡುವಿನ ಗೌರವವನ್ನು ಹಂಚಿಕೊಳ್ಳಲು ಮತ್ತು ಇಬ್ಬರ ನಡುವೆ ಪ್ರೀತಿಯನ್ನು ಸುಭದ್ರಗೊಳಿಸಲು ದೈಹಿಕ ಸಾಮಿಪ್ಯಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ಇದಕ್ಕೂ ಮಿಗಿಲಾಗಿ, ಲೈಂಗಿಕ ಹಾರ್ಮೋನುಗಳು ನಿಮ್ಮನ್ನು ಸಂತೋಷವಾಗಿರಿಸಿ, ಮನಸ್ಸನ್ನು ಹಗುರಾಗಿಸುತ್ತವೆ. ಸರಿ ಹಾಗಿದ್ದ ಮೇಲೆ! ಇನ್ನೇಕೆ ತಡ!! ನಿಮ್ಮ ಆ ಲೈಂಗಿಕ ಜೀವನಕ್ಕೆ ಪುನ: ಜೀವ ನೀಡಿರಿ.

ನಾವು ಪ್ರಸ್ತಾಪಿಸಿರೋ ಈ ಮೇಲಿನ ಹತ್ತು ಅಂಶಗಳನ್ನ ಚಾಚೂ ತಪ್ಪದೇ ಅನುಸರಿಸಿದ್ದೇ ಆದರೆ, ದಂಪತಿಗಳ ನಡುವೆ ಈ "ವಿಚ್ಛೇದನ" ಅನ್ನೋ ಪದಕ್ಕೆ ಜಾಗಾನೇ ಇರೋಲ್ಲ. ಪರಸ್ಪರರ ನಡುವಿನ ಅನ್ಯೋನ್ಯತೆಯೊಂದಿಗೆ ದಾಂಪತ್ಯ ಜೀವನವನ್ನ ಈ ವಿಚ್ಛೇದನ ಅನ್ನೋ ಮಹಾಮಾರಿಯಿಂದ ಖಂಡಿತಾ ಪಾರಾಗಿಸಬಹುದು.

English summary

Things Psychologists Recommend A Couple To Consider Before Filing For Divorce

Here are Psychologists recommend a couple to consider before filing for divorce read on,
Story first published: Monday, November 9, 2020, 18:11 [IST]
X
Desktop Bottom Promotion