For Quick Alerts
ALLOW NOTIFICATIONS  
For Daily Alerts

ಇಂಥಾ ಸಿಲ್ಲಿ ಕಾರಣಗಳಿಂದಲೇ ಮದುವೆಯಾಗಿ ವರ್ಷದಲ್ಲೇ ವಿವಾಹ ವಿಚ್ಛೇದನ ಆಗುವುದು

|

ಮದುವೆಯಾಗಿ ಇನ್ನೂ ಒಂದು ತಿಂಗಳೇ ಆಗಿಲ್ವಂತೆ, ಡಿವೋರ್ಸ್ ಅಂತೆ' ಎನ್ನುವುದನ್ನು ಅಕ್ಕಪಕ್ಕದ ಮನೆಯವರ ಗಾಸಿಪ್‌ನಿಂದಲೋ, ವಾಟ್ಸಾಪ್‌ ಗ್ರೂಪ್‌ ಚಾಟಿಂಗ್ನಲ್ಲೋ ನೀವು ಕೇಳಿರಬಹುದು. ಹೌದು.. ಇತ್ತೀಚೆಗೆ ಮದುವೆಯಾದ ಒಂದು ವರ್ಷದೊಳಗೇ ವಿಚ್ಛೇದನಕ್ಕೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿದ್ಯಾವಂತರೇ ಇದರಲ್ಲಿ ಮುಂದಿರುತ್ತಾರೆ ಎನ್ನುವುದೂ ಕಹಿ ಸತ್ಯ.

ಹಿರಿಯರು ನಿಶ್ಚಿಯಿಸಿದ ಮದುವೆಯಾದರೂ, ಹಲವು ವರ್ಷ ಪ್ರೀತಿಸಿ, ಮದುವೆಯಾದರೂ ಆರು ತಿಂಗಳೊಳಗೆ ನಾನೊಂದು ತೀರ ನೀನೊಂದು ತೀರ ಎನ್ನುತ್ತಾ ಡಿವೋರ್ಸ್‌ ಮೂಲಕ ಮದುವೆಯ ಬಂಧಕ್ಕೆ ತೆರೆ ಎಳೆಯುವ ಯುವಜನರಿದ್ದಾರೆ. ಯಾಕೆ ಹೀಗಾಗುತ್ತೆ, ವಿಚ್ಛೇದನೇ ಮುಂದಿರುವ ದಾರಿ ಎನ್ನುವ ನಿರ್ಧಾರ ಮಾಡುವುದ್ಯಾಕೆ ಎನ್ನುವ ಪ್ರಶ್ನೆ ನಿಮ್ಮದಾದರೆ, ಇದಕ್ಕೆ ಕಾರಣಗಳು ಹಲವು..

ಸಂಗಾತಿಗಿಂತ ತಾವೇ ಉತ್ತಮರು ಎನ್ನುವ ಭಾವ

ಸಂಗಾತಿಗಿಂತ ತಾವೇ ಉತ್ತಮರು ಎನ್ನುವ ಭಾವ

ಮದುವೆಯಾದ ಮೇಲೆ ಅನೇಕರಿಗೆ ತಮ್ಮ ಸಂಗಾತಿಗಿಂತ ತಾವೇ ಮೇಲು ಎನ್ನುವ ಅಹಂ ಬಂದುಬಿಡುತ್ತದೆ. ನನ್ನ ಒಳ್ಳೆಯತನಕ್ಕೆ ಬೇರೆ ಹುಡುಗ/ಹುಡುಗಿ ಸಿಕ್ಕಿಬಿಡ್ತಾ ಇದ್ರು. ನನಗೆ ಸರಿ ಹೊಂದಾಣಿಕೆಯಾಗದ ಇವರನ್ನು ನಾನ್ಯಾಕೆ ಕಟ್ಟಿಕೊಂಡುಬಿಟ್ಟೆನೋ, ನನ್ನ ಒಳ್ಳೆಯ ಗುಣಕ್ಕೆ ಇವರು ಸರಿಯಾದ ಜೋಡಿಯೇ ಅಲ್ಲಪ್ಪಾ ಎನ್ನುವ 'ಈಗೋ' ಮನಸ್ಸಿನಲ್ಲಿಯೇ ಒಂದು ಅಡ್ಡದೀಪವಿಡಲು ಶುರುಮಾಡಿಬಿಡುತ್ತದೆ. ಸಮಯ ಕಳೆದಂತೆ ಸಂಗಾತಿ ಏನು ಒಳ್ಳೆಯ ಕೆಲಸ ಮಾಡಿದರೂ ಅದರಲ್ಲಿ ತಪ್ಪು ಕಂಡುಹುಡುಕಿಯೇ ತೀರುತ್ತೇವೆ. ಇದು ತಪ್ಪು ಎನ್ನುವುದು ಗೊತ್ತಿದ್ದರೂ ತಮ್ಮದೇ ಸರಿ ಎನ್ನುವ ಹಾಗೆ ಆಡುವ ಬಿಗುಮಾನ ಅಸಮಾಧಾನಕ್ಕೆ ಕಾರಣವಾಗುತ್ತೆ. ಇದು ಮುಂದುವರಿದು ಸತಿಪತಿಗಳು ವಿಚ್ಛೇದನಕ್ಕೆ ಸಹಿ ಹಾಕಲು ಕಾರಣಗುತ್ತದೆ.

ಆದರೆ ನೆನಪಿಡಿ ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರಲ್ಲ, ಎಲ್ಲರಲ್ಲೂ ಒಂದು ರೀತಿಯ ಕಪ್ಪುಚುಕ್ಕೆ ಇದ್ದೇ ಇರುತ್ತದೆ. ಅದನ್ನು ಹುಡುಕುವ ಬದಲು, ಸಂಗಾತಿಯ ಒಳ್ಳೆಯ ಗುಣವನ್ನು ಪರಿಗಣಿಸಿ, ತಾವೇ ಒಳ್ಳೆಯವರು ಎನ್ನುವುದನ್ನು ಮನಸ್ಸಿನಿಂದ ತೆಗೆದುಹಾಕಿ.

ಸ್ವಾತಂತ್ರ್ಯವೇ ಇಲ್ಲವೆಂದು ಅನಿಸಿಬಿಡುವುದು

ಸ್ವಾತಂತ್ರ್ಯವೇ ಇಲ್ಲವೆಂದು ಅನಿಸಿಬಿಡುವುದು

ಮದುವೆಯಾದ ಮೇಲೆ ನನ್ನ ಸ್ವಾತಂತ್ರ್ಯವನ್ನು ಕಟ್ಟಿಹಾಕಿದಂತಾಗಿದೆ, ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಕಾಡಬಹುದು. ಈಗಿನ ಕಾಲದಲ್ಲಿ ಎಲ್ಲರೂ ಶಿಕ್ಷಣ ಪಡೆದವರೇ ಆಗಿರುತ್ತಾರೆ. ಹಾಗಾಗಿ ಹೆಚ್ಚಿನ ಹೆಣ್ಣುಮಕ್ಕಳು ಉದ್ಯೋಗದಲ್ಲಿ ಇದ್ದೇ ಇರುತ್ತಾರೆ. ಮದುವೆಯಾದ ನಂತರ ವೃತ್ತಿ ಮುಂದುವರಿಸಲು ಸಾಧ್ಯವಾಗದೇ ಇದ್ದಾಗ ಪಂಜರದಲ್ಲಿದ್ದಂತಹ ಭಾವನೆಯನ್ನು ಅನುಭವಿಸಬಹುದು. ವೃತ್ತಿಯೇ ಮುಖ್ಯ ಎಂದುಕೊಂಡವರಿಗೆ ಮದುವೆಯಾದ ನಂತರ ದೊಡ್ಡ ಅವಕಾಶಗಳು ಬಂದರೆ, ಮನೆಯಲ್ಲಿ ಹೊರಗೆ ಹೋಗಿ ದುಡಿಯುವ ಅವಶ್ಯಕತೆ ನಿನಗಿಲ್ಲವಲ್ಲ ಎಂದಾಗ, ಒಳಗೊಳಗೇ ಕನಸಿನ ಗೋಪುರ ಕುಸಿದಂತೆ ಭಾಸವಾಗಬಹುದು. ಇದು ಕೂಡಾ ವಿಚ್ಛೇದನಕ್ಕೆ ಕಾರಣವಾಗಬಹುದು.

ಸಂವಹನದ ಕೊರತೆ

ಸಂವಹನದ ಕೊರತೆ

ಹಿರಿಯರು ನಿಶ್ಚಯಿಸಿದ ಮದುವೆಯೆಂದರೆ ವಧು ವರರು ಅಷ್ಟಾಗಿ ಪರಿಚಯವಿರುವುದಿಲ್ಲ. ಮದುವೆಯಾದ ನಂತರವೇ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮುಂದುವರಿಯಲು ಸಾಧ್ಯವಾಗುವುದು. ಆದರೆ ಮದುವೆಯಾದ ನಂತರ ಪತಿ ಪತ್ನಿಯ ಮಧ್ಯೆ ಕೆಲಸದ ಕಾರಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮುಕ್ತವಾಗಿ ಮಾತನಾಡುವಂತಹ ಅವಕಾಶಗಳು ಸಿಗದೇ ಇದ್ದಾಗ ಅಲ್ಲಿ ಒಳಗೊಳಗೇ ಅಸಮಾಧಾನದ ಹೊಗೆಯಾಡಬಹುದು. ಪರಸ್ಪರ ಇಷ್ಟ ಕಷ್ಟ, ಸುಖಗಳನ್ನು ಅರಿಯದೇ, ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳದೇ ಹೋದಾಗ ಮೌನವಾಗಿದ್ದ ಮಾತುಗಳು ಕೂಡಾ ಒಮ್ಮೆಲೇ ಸ್ಫೋಟವಾಗಬಹುದು. ಆ ಸಂದರ್ಭದಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದಿದ್ದಾಗ ಇಬ್ಬರ ಮನಸ್ಸೂ ಮುರಿದು ಸಂಬಂಧವು ವಿಚ್ಛೇದನದಲ್ಲಿ ಅಂತ್ಯಗೊಳ್ಳಬಹುದು.

ನಿರೀಕ್ಷೆಗಳು ಹುಸಿಯಾದಾಗ

ನಿರೀಕ್ಷೆಗಳು ಹುಸಿಯಾದಾಗ

ಮದುವೆಗೂ ಮುನ್ನ ಪ್ರತಿಯೊಬ್ಬರೂ ಕೂಡಾ ಮದುವೆಯಾದ ಮೇಲೆ ಜೀವನ ಹಾಗಿರಬೇಕು, ಹೀಗಿರಬೇಕು ಎನ್ನುವ ಹಗಲು ಕನಸು ಕಾಣುತ್ತಾರೆ. ಆದರೆ ಮದುವೆಯಾದ ಒಂದು ವಾರದಲ್ಲೇ ತಾವು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ ಎಂದಾದಾಗ ಕನಸುಗಳು ಛಿದ್ರವಾಗಬಹುದು. ಪ್ರೇಮವಿವಾಹವಾದರೂ ಕೂಡಾ ಮದುವೆಯಾದ ನಂತರ ಅನೇಕ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತಾರೆ. ಉದಾಹರಣೆಗೆ ಮದುವೆಗೂ ಮುಂಚೆ ಮಾತನಾಡುತ್ತಿದ್ದ ಹುಡುಗ, ಮದುವೆಯಾದ ಮೇಲೆ ತನ್ನ ಮನೆಯವರ ಮಾತಿಗೇ ಹೆಚ್ಚು ಪ್ರಾಮುಖ್ಯತೆ ಕೊಟ್ಟಾಗ, ಆಗಷ್ಟೇ ಮದುವೆಯಾದ ಪತ್ನಿಯ ಆಸೆಗಳನ್ನು ತಿರಸ್ಕರಿಸಿದಾಗ ಅಲ್ಲಿ ಅಸಮಾಧಾನವು ಮೂಡಬಹುದು. ಪರಸ್ಪರರ ನಿರೀಕ್ಷೆಗಳು, ಆಸೆಗಳು ಹೊಂದಾಣಿಕೆಯಾಗದೇ ಇದ್ದಾಗಲೂ ಇಬ್ಬರು ವ್ಯಕ್ತಿಗಳನ್ನು ಅದು ದೂರ ಮಾಡಬಹುದು.

ಸಂಪ್ರದಾಯಗಳಿಗೆ ಹೊಂದಿಕೊಳ್ಳುವುದು ಕಷ್ಟವಾದಾಗ

ಸಂಪ್ರದಾಯಗಳಿಗೆ ಹೊಂದಿಕೊಳ್ಳುವುದು ಕಷ್ಟವಾದಾಗ

ಈಗಿನವರು ಆದುನಿಕ ಮನೋಸ್ಥಿತಿಯವರು, ಪೂಜೆ, ಪುನಸ್ಕಾರಗಳೆಂದರೆ ದೂರ ನಿಲ್ಲುವವರು. ಅಂಥವರಿಗೆ ಬಲವಂತದ ಮಾಘಸ್ನಾನ ಮಾಡಿಸಿದಾಗ ಅದು ಸಂಬಂಧದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ. ಪ್ರೇಮ ವಿವಾಹದಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚು, ಅದರಲ್ಲೂ ಜಾತಿ, ಧರ್ಮಗಳನ್ನು ಮೀರಿ ಮದುವೆಯಾದ ನಂತರ, ಪತಿಯ ಮನೆಯಲ್ಲಿ ಅವರ ಮನೆಯ ಸಂಪ್ರದಾಯಗಳಿಗೆ ಒಗ್ಗಿಕೊಳ್ಳಲು ಕಷ್ಟವಾಗುವ ಕಾರಣದಿಂದ ಜಗಳಗಳು ಆರಂಭವಾಗಬಹುದು. ಅದು ವಿಚ್ಚೇದನಕ್ಕೆ ಕಾರಣವಾಗಬಹುದು. ಆದರೆ ಅವರವರ ಸಂಸ್ಕೃತಿ, ಸಂಪ್ರದಾಯಗಳನ್ನು ಗೌರವಿಸುವ ಮನೋಭಾವ ಪತಿ ಪತ್ನಿಯಲ್ಲಿ ಮಾತ್ರವಲ್ಲದೇ ಕುಟುಂಬದಲ್ಲಿಯೂ ಇದ್ದರೆ ಇಂತಹ ಸಮಸ್ಯೆಗಳು ಬಾರದು.

ತಮ್ಮ ಅಗತ್ಯತೆಗಳನ್ನು ಸಂಗಾತಿಯು ಈಡೇರಿಸುತ್ತಿಲ್ಲ ಎನ್ನುವುದು

ತಮ್ಮ ಅಗತ್ಯತೆಗಳನ್ನು ಸಂಗಾತಿಯು ಈಡೇರಿಸುತ್ತಿಲ್ಲ ಎನ್ನುವುದು

ದಂಪತಿಗಳಲ್ಲಿ ವಿಚ್ಚೇದನಕ್ಕೆ ಕಾರಣವಾಗುವ ಪ್ರಮುಖ ಕಾರಣ ಇದೇ. ನಮ್ಮ ಜೀವನದಲ್ಲಿ ನಮ್ಮದೇ ಆದ ಅಗತ್ಯತೆಗಳು ಮತ್ತು ಆಸೆಗಳನ್ನು ಹೊಂದಿರುತ್ತೇವೆ. ಅದನ್ನು ಸಂಗಾತಿಯು ಪೂರೈಸದೇ ಇದ್ದಾಗ ಸಮಸ್ಯೆಯು ಬೆಳೆಯುತ್ತದೆ. ಸಂಗಾತಿಯು ತಮ್ಮ ಆಸಕ್ತಿಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದಾಗ, ಇನ್ನೊಬ್ಬರ ಹಂಗಿನಲ್ಲಿ ನಾನ್ಯಾಕೆ ನನ್ನ ಕನಸುಗಳನ್ನು ಬದಿಗಿಡಬೇಕು ಎನ್ನುವ ಮನೋಭಾವ ವಿಚ್ಛೇದನಕ್ಕೆ ಕಾರಣವಾಗುತ್ತದೆ.

ಜೀವನಶೈಲಿಯಲ್ಲಿ ಆಗುವಂತಹ ಅನಿರೀಕ್ಷಿತ ಬದಲಾವಣೆ

ಜೀವನಶೈಲಿಯಲ್ಲಿ ಆಗುವಂತಹ ಅನಿರೀಕ್ಷಿತ ಬದಲಾವಣೆ

ಮದುವೆಯಾಗುವರೆಗೂ ಸಿಂಗಲ್‌ ಆಗಿ ಬೇಕಾದಾಗ ತಿಂದುಂಡು ಮಲಗಿ, ಇಷ್ಟಬಂದಂತೆ ಕೆಲಸ ಮಾಡುವವರಿಗೆ ಮದುವೆಯಾದ ಮೇಲೆ ಜವಾಬ್ದಾರಿಗಳು ಹೆಗಲ ಮೇಲೇರಿದಾಗ ಎಲ್ಲವೂ ತಲೆಕೆಳಗಾಗುತ್ತದೆ. ಮದುವೆ ಎನ್ನುವುದು ಹೊಸ ಜೀವನ ಅಲ್ಲಿ ಒಬ್ಬರಲ್ಲ ಇಬ್ಬರು ಪಯಣಿಗರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ತಮಗೆ ಮನಸ್ಸು ಬಂದ ರೀತಿಯಲ್ಲಿ ವರ್ತನೆಯನ್ನು ತೋರಿದರೆ ದಾಂಪತ್ಯದಲ್ಲಿನ ಸಮಸ್ಯೆಗಳನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮ ಖಾಸಾಗಿ ಜೀವನವೇ ಹೋಯ್ತು, ಪ್ರೈವೆಸೀನೆ ಇಲ್ಲ, ಉಸಿರುಕಟ್ಟಿದಂತಾಗುತ್ತದೆ, ಇದರಿಂದ ಬಿಡುಗಡೆ ಬೇಕೇ ಬೇಕು ಎನ್ನುತ್ತಾ, ಇನ್ನೊಂದು ಯೋಚನೆಯೇ ಮಾಡದೇ ವಿಚ್ಛೇದನಕ್ಕೆ ಸಹಿ ಹಾಕಿಬಿಡುತ್ತಾರೆ ಕೆಲವರು.

ಮದುವೆ ಎನ್ನುವುದು ವಿಚ್ಛೇದನದ ಮೂಲಕ ದೂರಾಗುವ ಬಂಧವಲ್ಲ. ಇಬ್ಬರು ಅಪರಿಚಿತರು, ಪರಿಚಯವಾಗಿ, ಪರಸ್ಪರ ಅರ್ಥಮಾಡಿಕೊಂಡು ಪ್ರೀತಿಯಿಂದ ಮುಂದುವರಿಸಿಕೊಂಡು ಹೋಗುವ ಸಹಜೀವನ. ಅಲ್ಲಿ ಪರಸ್ಪರರ ಭಾವನೆಗಳಿಗೆ ಮುಕ್ತವಾದ ಸ್ವಾತಂತ್ರ್ಯವಿರಬೇಕು. ಅದು ಒಬ್ಬರ ಖಾಸಾಗೀ ಜೀವನವಲ್ಲ, ಇಬ್ಬರಿಗಾಗಿ ಖಾಸಗಿ ಸಮಯವನ್ನು ಮೀಸಲಿಡಬೇಕು. ಒಬ್ಬರದೇ ಕನಸಲ್ಲ ಇಬ್ಬರ ಕನಸನ್ನೂ ನನಸಾಗಿಸುವ ಸ್ವಾತಂತ್ರ್ಯವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಎರಡೂ ಕುಟುಂಬಗಳ ಸಂಪ್ರದಾಯಗಳ ಬಗ್ಗೆ ಗೌರವಗಳಿರಬೇಕು. ತಪ್ಪುಗಳನ್ನು ಒಪ್ಪಿಕೊಂಡು, ಸರಿಪಡಿಸಿಕೊಂಡು ಮುಂದುವರಿಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅಹಂ ಇರಬಾರದು. ಹೀಗಾದಾಗ ವಿಚ್ಚೇದನದ ಮಾತು ಬಾರದು.

English summary

Reasons For Divorce In New Marriages in Kannada

Most of us make the grave error of taking the things that matter most for granted. And a marriage that’s taken for granted has a good chance of ending in divorce.
X
Desktop Bottom Promotion