For Quick Alerts
ALLOW NOTIFICATIONS  
For Daily Alerts

ಅಮ್ಮಂದಿರ ದಿನದ ವಿಶೇಷ: ಯೂನಿವರ್ಸಿಟಿ ಹೇಳಿಕೊಡದ ಜೀವನ ಪಾಠ ನನ್ನಮ್ಮನಿಂದ ಕಲಿತೆ

By ಶ್ರೀರಕ್ಷಾ
|

ಆಕೆಯೆಂದರೆ ಕಾಳಜಿ, ಪ್ರೀತಿ. ಆಕೆಯೆಂದರೆ ಅಕ್ಕರೆ, ಮಮಕಾರ. ಆಕೆ ಮತ್ಯಾರೂ ಅಲ್ಲ, ನನ್ನಮ್ಮ. ಕಳೆದ ಇಪ್ಪತ್ನಾಲ್ಕು ವರ್ಷಗಳ ಹಿಂದೆ ತನ್ನ ಜೀವದ ಹಂಗು ತೊರೆದು ನನಗಾಗಿ ಹೋರಾಡಿದ ಜೀವವದು. ಅಂದಿನಿಂದ ಇಂದಿನವರೆಗೆ, ಈ ದಿನದವರೆಗೂ ತನ್ನ ಜೀವನನವನ್ನು ತನ್ನ ಮಕ್ಕಳಿಗಾಗಿ ಮುಡಿಪಾಗಿಟ್ಟವಳು. ಹೆಣ್ಣೆಂದು ಆಡಿಕೊಂಡವರಿಗೆ , ಅದೇ ಹೆಣ್ಣು ಮಗುವನ್ನು ನಾಲ್ಕು ಜನರೆದುರು ತಲೆಯೆತ್ತಿ ನಡೆಯುವಂತೆ ಮಾಡಿ, ಇದ್ದರೆ ಹೆಣ್ಣು ಮಗು ಇರಬೇಕು ಎಂಬ ಭಾವನೆ ಆಡಿದವರ ಬಾಯಲ್ಲೇ ಬರುವಂತೆ ಮಾಡಿದವಳು ನನ್ನಮ್ಮ.

mothers day special story

ಆಕೆ ಕಲಿತವಳಲ್ಲ, ಆದರೆ, ಯಾವುದೇ ಯೂನಿವರ್ಸಿಟಿ ಹೇಳಿಕೊಡದ ಜೀವನ ಪಾಠ ಆಕೆ ನನಲ್ಲಿ ತುಂಬಿದ್ದಾಳೆ. ಎಂದಿಗೂ ಏನನ್ನೂ ಬಯಸದ, ಇರುವುದರಲ್ಲೇ ಸಂತೋಷವಾಗಿರುವ ಜೀವವದು. ದಣಿದು ಬಂದ ನಮಗೆ ಆಕೆಯ ನಗುವೇ ಸಾಕು ಮತ್ತೆ ಚೈತನ್ಯ ತುಂಬಲು. ಜೀವನದಲ್ಲಿ ಏನೇ ಕಷ್ಟ ಬರಲಿ, ಆದರೆ ಆ ಕಷ್ಟಗಳು ಮಕ್ಕಳ ನಗು ಕಿತ್ತುಕೊಳ್ಳದೇ ಇರಲಿ ಎಂಬ ಮನೋಭಾವ ಹೊಂದಿರುವವಳು ನನ್ನ ಅಮ್ಮ. ಶಿಕ್ಷಣದಿಂದ ಅವಕಾಶ ವಂಚಿತೆಯಾಗಿರುವ ಆಕೆ ತನ್ನ ಮಕ್ಕಳನ್ನು ಶಿಕ್ಷಿತರನ್ನಾಗಿಸಬೇಕು ಎಂಬ ಉದ್ದೇಶದಿಂದ ಕಾರ್ಖಾನೆಯ ಬಿಸಿಯ ಬೇಗೆಯಲ್ಲಿ ಹಗಲು ರಾತ್ರಿಯೆನ್ನದೇ ದಿನಗೂಲಿ ಮಾಡಿ ಸಾಕಿರುವುದನ್ನು ಎಂದೆಂದಿಗೂ ಮರೆಯುವಂತಿಲ್ಲ.

ಪ್ರತಿಫಲಗಳ ನಿರೀಕ್ಷೆಯಿಲ್ಲ, ಜೀವನದಲ್ಲಿ ಆಸೆಗಳಿಲ್ಲ, ತನ್ನ ಸರ್ವಸ್ವವನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟವಳು. ಯಾರು ಬಂದು ಏನೇ ಕೇಳಲಿ, ಇಲ್ಲ ಎನ್ನುವ ಮಾತೇ ಬಾರದು ಆಕೆಯ ಬಾಯಲ್ಲಿ. ಸದಾ ನಗುಮೊಗದಿಂದಲೇ ಎಲ್ಲರನ್ನೂ ಪ್ರೀತಿಸುವ, ಮಗುವಿನಂತ ಮನಸ್ಸು ನನ್ನಮ್ಮನದು. ಆಕೆಗೆ ಖುಷಿ, ದುಃಖ ಹಂಚಿಕೊಳ್ಳಲು ಸ್ನೇಹಿತರಿಲ್ಲ, ನನಗೆ ಅವಳು, ಅವಳಿಗೆ ನಾನು ಎಂಬಂತೆ ಬದುಕಿದ್ದೆವು. ಹುಟ್ಟಿದಾಗಿನಿಂದ ಕಳೆದ ವರ್ಷದವರೆಗೂ ಆಕೆಯನ್ನು ಬಿಟ್ಟು ಎಲ್ಲೂ ಹೋಗಿರುವ ನೆನಪು ನನಗಿರಲಿಲ್ಲ. ಅನಾರೋಗ್ಯದ ನಿಮಿತ್ತ ಆಸ್ರತ್ರೆಯಲ್ಲಿರಬೇಕಾದಾಗ ಅದೇ ಬೆಡ್ಡಲ್ಲಿ ನಿನ್ನೊಂದಿಗೆ ಮಲಗಿದ್ದೆ ನಾನು. ಆದರೆ, ಉದ್ಯೋಗದ ನಿಮಿತ್ತ ಸದ್ಯ ದೂರ ಉಳಿದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಇರುವುದಂತೂ ಸತ್ಯ. ಈ ದಿನಗಳಲ್ಲಿ ನಿನ್ನ ನೆನೆಸಿಕೊಳ್ಳದ ದಿನವಿಲ್ಲ. ಮಕ್ಕಳಿಗಾಗಿ ದುಡಿದ ಜೀವ, ಮಕ್ಕಳು ಬೆಳೆದು ದೊಡ್ಡವರಾದಾಗ ಒಬ್ಬಂಟಿಯಾಗುವ ಸ್ಥಿತಿ ಪ್ರತಿಯೊಬ್ಬ ತಾಯಿಗೂ ನೋವು ತರದೇ ಇರದು. ಆದರೂ ಮಕ್ಕಳು ತಮ್ಮ ಕಾಲ ಮೇಲೆ ನಿಂತಿದ್ದಾರೆ ಎಂಬ ಸಮಾಧಾನ ಹಾಗೂ ತನ್ನ ಕಷ್ಟಕ್ಕೆ ಫಲ ಸಿಕ್ಕಿತೆಂಬ ಸಾರ್ಥಕ ಭಾವದಿಂದ ಬದುಕಿರುತ್ತಾರೆ.

ಎಲ್ಲರನ್ನೂ ಸಮಾನವಾಗಿ ಕಾಣುವ, ಕರುಣೆಯ ಕಡಲಾಗಿರುವ, ಪ್ರೀತಿ, ಮಮತೆ, ತ್ಯಾಗದ ಪ್ರತಿರೂಪವಾಗಿರುವ ನೀನು, ನನ್ನಮ್ಮ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ. ನಿನ್ನ ಛಲ, ಸಹನೆ, ಹೋರಾಟದ ಬದುಕೇ ನನಗೆ ಮಾದರಿ. ಎಲ್ಲಿ ಹೋದರೂ ಗೆದ್ದೆ ಗೆಲ್ಲುವೆ ಎನ್ನುವ ನಂಬಿಕೆ ನನಗಿದೆ. ಆ ಧೈರ್ಯ, ಹೊಂದಾಣಿಕೆ ಮನೋಭಾವ, ಸಹನೆಯನ್ನುಸ ಹುಟ್ಟಿ ಹಾಕಿದವಳು ನೀನು, ನಿನ್ನದೇ ವರಪ್ರಸಾದವದು. ಮುಂದೊಂದು ನಾನೂ ತಾಯಿಯಾಗಲೇಬೇಕು, ಅದಕ್ಕೆ ನೀ ಹೇಳಿಕೊಟ್ಟ ಮಾರ್ಗದರ್ಶನವೇ ಭದ್ರಬುನಾದಿಯಾಗುವುದಲ್ಲಿ ಯಾವುದೇ ಸಂದೇಹವಿಲ್ಲ. ಬದುಕು ಸಾಗಿಸಬೇಕಾದ ಪರಿ ಹೇಳಿಕೊಟ್ಟ ನನ್ನಮ್ಮನಿಗೆ ನನ್ನ ಬದುಕಿನ್ನುದ್ದಕ್ಕೂ ಚಿರಋಣಿ...

English summary

mothers day, Special Story by Shreeraksha

Mohers day special story by Shreeraksha, read on....
Story first published: Sunday, May 8, 2022, 18:48 [IST]
X
Desktop Bottom Promotion