For Quick Alerts
ALLOW NOTIFICATIONS  
For Daily Alerts

ತಂದೆಯರ ದಿನದ ವಿಶೇಷ: ಫೇಲ್ ಆದ್ರೆ ಇನ್ನೊಂದು ವರ್ಷ ಹೋದ್ರಾಯ್ತು ಅಂತಿದ್ರು ಅಪ್ಪಾ...

By ಪ್ರೀತು ಗಣೇಶ್‌
|

ತಾಯಿ ಉದರದಲ್ಲಿರುವಾಗಲೇ ಕನಸಿನ ಜೋಳಿಗೆಯ ಹೆಗಲಿಗೇರಿಸಿ ಮಗು ಹೊರ ಬಂದು ಪ್ರಪಂಚ ನೋಡುವಾಗಿನಿಂದ ಬೆಟ್ಟದಷ್ಟು ಕಷ್ಟವಿದ್ದರೂ, ಮನದಲ್ಲೆಷ್ಟು ಗೊಂದಲವಿದ್ದರೂ ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡು ತನ್ನ ಚಿಗುರಿಗೆ ಕೊನೆಯೇ ಇಲ್ಲದ ತುಂಬು ಪ್ರೀತಿಯನ್ನು ನೀಡುತ್ತಾ ಜವಾಬ್ದಾರಿ ಹೊರುವವರು ಅಪ್ಪಾ.. ಸಣ್ಣ ಪುಟ್ಟ ವಿಷಯಕ್ಕೆ ಗದರಿದರೂ ಸದಾ ಪ್ರೋತ್ಸಾಹಿಸುತ್ತಾ ನಿನ್ನೊಡನೆ ನಾನಿರುವೆ ಎಂದು ಹುರಿದುಂಬಿಸುತ್ತಾ ಬೆನ್ನೆಲುಬಾಗಿ ನಿಂತು ಹೆಜ್ಜೆ ಹೆಜ್ಜೆಗೂ ಜೊತೆಯಾಗಿರುವವರು ಅಪ್ಪಾ.. ಪ್ರತಿ ಮಗುವಿಗೂ ಅವರಪ್ಪನೆ ಅಕ್ಕರೆಯ ಹೀರೋ ಎಂದರೆ ತಪ್ಪಾಗದು. ನನ್ನ ಪಾಲಿಗಂತೂ ಇದು ಸತ್ಯ.

Fathers Day Special Story: Preethu Ganesh Says About Her Father

ನನ್ನದು ಕೊಡಗಿನ ಪುಟ್ಟ ಗ್ರಾಮ. ನನ್ನಪ್ಪ ಕೃಷಿಕ, ಬಿಸಿಲು, ಮಳೆ ಎಂಬ ಪರಿವೇ ಇಲ್ಲದೆ ದುಡಿಯುವ ಕೈಗಳು ಇವರದು.

ನಮ್ಮೂರಿನಲ್ಲಿ ಒಳ್ಳೆಯ ಶಾಲೆ ಇರಲಿಲ್ಲ. ಬಸ್ಸಿನ ಸೌಕರ್ಯವಿಲ್ಲ ಮಡಿಕೇರಿಯಲ್ಲೆ ಓದಬೇಕಾಗಿತ್ತು. ಹಾಗಾಗಿ ಪಟ್ಟಣದಲ್ಲೆ ಸೂರು ಮಾಡಿದ್ರು. ಹೀಗೆ ಐದು ವರ್ಷ ಇರುವಾಗಿನಿಂದ ಅಪ್ಪ, ಅಮ್ಮನಿಂದ ದೂರ ಇರುವುದು ಅನಿವಾರ್ಯವಾಯಿತು. ಒಮ್ಮೆ ಬಂದು ಹೋದ್ರೆ ಮತ್ತೊಂದು ವಾರದವರೆಗೂ ಅದೇ ನೆನಪಲ್ಲಿ ದಾರಿ ನೋಡ್ತಾ ಇರ್ತಿದ್ದೆ. ವರ್ಷಕೊಮ್ಮೆ ಅಂತಿಮ ಪರೀಕ್ಷೆ ಮುಗಿದ ನಂತರ ಬೇಸಿಗೆ ರಜೆಯಲಷ್ಟೇ ಮನೆಗೆ ಭೇಟಿ.

ಅಪ್ಪನಿಗೆ ನಾನೆಂದರೆ ಬಲು ಪ್ರೀತಿ. ಎಷ್ಟೋ ಸಲ ಅತ್ತಾಗ ಅವರ ಕಣ್ಣಂಚಲ್ಲೂ ನೀರು, ಅಮ್ಮ ಏನಾದ್ರೂ ಕೆಲ್ಸ ಹೇಳಿದ್ರೆ ಅವಳಿಗಾಗಲ್ಲ ನೀನೆ ಮಾಡು ಅನ್ನೋರು, ಬೆಳಿಗ್ಗೆ ಬೇಗನೆ ಕರೆದ್ರೆ ಮಲಗ್ಲಿ ನಿನಗೇನು ಅಂತಿದ್ರು, ಅಪ್ಪ ಹಾಗೆ ಹೇಳೋದು ಕೇಳಿ ಎಷ್ಟೋ ಸಲ ಕಂಬಳಿ ಹೊದ್ದು ಮಲಗ್ತಿದ್ದೆ. ತೋಟಕ್ಕೆ ನಾನು ಬರ್ತೀನಿ ಅಂದ್ರೆ ನಿನಗೆ ರೂಢಿ ಇಲ್ಲ ಜ್ವರ ಬರುತ್ತೆ ಮನೇಲೆ ಇರು ಅನ್ನೋರು. ಹೀಗೆ ಚಳಿಯೆಂದರೆ ಬೆಚ್ಚನೆಯ ಹೊದಿಕೆ, ಶೆಖೆ ಎಂದರೆ ತಂಪು ಗಾಳಿಯಾಗಿ ಬೆಟ್ಟದಷ್ಟು ಕಷ್ಟಗಳಿದ್ದರೂ ಯಾವುದರ ನೆರಳೂ ತಾಕದಂತೆ ಮುದ್ದಾಗಿ ಸಲುಹಿದವರು ನನ್ನಪ್ಪ.

ಪರೋಕ್ಷ ಪ್ರೋತ್ಸಾಹಿ ಅಪ್ಪ

ಪರೋಕ್ಷ ಪ್ರೋತ್ಸಾಹಿ ಅಪ್ಪ

ಅದೊಂದು ದಿನ ನಮ್ ಶಾಲೆಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯುತಿತ್ತು ನಾನಾಗ ಎಂಟನೇ ತರಗತಿಯಲ್ಲಿದ್ದೆ ನಮ್ಮದು ಕಾನ್ವೆಂಟ್ ಶಾಲೆಯಾಗಿದ್ದರಿಂದ ಸ್ವಲ್ಪ ಹೆಚ್ಚಾಗಿ ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುತಿದ್ದರು. ವರ್ಷಾಂತ್ಯದಲ್ಲಿ ಶಾಲಾ ಪ್ರಾರ್ಥನೆ ಆದ ನಂತರ ಜಯಶೀಲರಾದವರಿಗೆ ಬಹುಮಾನ ವಿತರಿಸಲಾಗುತಿತ್ತು..

ವಾರಕೊಮ್ಮೆ ಅಷ್ಟೇ ಊರಿಂದ ಬರುತಿದ್ದ ಅಪ್ಪ ನನ್ ನೋಡ್ಬೇಕು ಅಂತ ಶಾಲೆವರೆಗೂ ಬಂದಿದ್ದರು. ಅವರ ಜೊತೆಯಲ್ಲಿ ಅವರ ಗೆಳೆಯರೊಬ್ಬರೂ ಇದ್ದರು ಅವರ ಮಗಳು ನನ್ ಗೆಳತಿ ಆಕೆಗೆ ಹೆಚ್ಚಿನ ಸ್ಪರ್ಧೆಯಲ್ಲಿ ಬಹುಮಾನ ಬಂದಿತ್ತು. ಎಲ್ಲರೆದುರು ಬಹುಮಾನ ಪಡೆಯುವುದೆಂದರೆ ಒಂದು ಬಗೆ ಹೆಮ್ಮೆ ಬಿಡಿ.

ಆದರೆ ಆಗ ನನಗೆ ಅದರ ಬಗ್ಗೆ ಅರಿವೇ ಇರಲಿಲ್ಲ. ಆ ದಿನದ ಕಾರ್ಯಕ್ರಮದಲ್ಲಿ ನನಗೆ ಒಂದು ಬಹುಮಾನವೂ ಬರಲೇ ಇಲ್ಲ ಕಾರಣ ನಾನು ಯಾವ ಸ್ಪರ್ಧೆಯಲ್ಲೂ ಭಾಗವಹಿಸಿರಲಿಲ್ಲ. ಅಪ್ಪನಿಗೆ ಬೇಜಾರಾಗಿತ್ತು ಅನಿಸುತ್ತೆ ನನ್ನೆದುರು ತೋರ್ಪಡಿಸಿರಲಿಲ್ಲ ಮೌನವಾಗಿ ಮನೆಗೆ ತೆರಳಿದ್ದರು. ಆದರೆ ಊರಿಗೆ ಹೋಗಿ ಅಮ್ಮನ ಬಳಿ ನನ್ ಮಗಳಿಗೆ ಒಂದೇ ಒಂದು ಬಹುಮಾನವೂ ಸಿಗಲಿಲ್ಲ ನನ್ ಮಗಳು ಯಾವಾಗಲು ನಮ್ ಜೊತೆನೇ ಇದ್ದಿದ್ರೆ ಹೀಗಾಗ್ತಿರ್ಲಿಲ್ಲ ಎಂದು ಬೇಜಾರು ಮಾಡ್ಕೊಂಡ್ರಂತೆ.

ಇನ್ನೊಮ್ಮೆ ರಜೆಯಲ್ಲಿ ನಾ ಮನೆಗೆ ಹೋದಾಗ ಅಮ್ಮನಿಂದ ವಿಷಯ ತಿಳಿದದ್ದೇ ತಡ ಏನು ಅನಿಸಿತ್ತೋ ನಿರ್ಧಾರ ಮಾಡಿ ಬಿಟ್ಟಿದ್ದೆ. ಮುಂದಿನ ವರ್ಷ ನಮ್ಮ ತರಗತಿಯಲ್ಲಿನ ಹೆಚ್ಚಿನ ಬಹುಮಾನಗಳು ನನಗೇ ದೊರೆತಿತ್ತು. ವಿಚಿತ್ರವೆಂದರೆ ನನ್ ಅಪ್ಪನ ಗೆಳೆಯನ ಮಗಳು ನನ್ ಗೆಳತಿ ಅಂದ್ನಲ್ಲಾ ಆಕೆಯನ್ನೂ ಹಿಂದಿಕ್ಕಿದ್ದೆ. ಸದಾ ಒಳಿತನ್ನೇ ಬಯಸುವ ಅಪ್ಪನ ಮನಸ್ಸಿಗೆ ನೋವಾದರೆ ಮಕ್ಕಳೂ ಸಹಿಸಲಾರರು. ಅವರ ಸಂತೋಷಕ್ಕಾಗಿಯಾದರೂ ಯಾವ ಕೆಲಸವನ್ನಾದರೂ ಮಾಡ ಬಲ್ಲರು. ಅಪ್ಪನೊಡನೆ ಮಕ್ಕಳ ಬಾಂಧವ್ಯ ಎಷ್ಟಿರುತ್ತೆ ಎಂಬುವುದಕ್ಕೆ ನಿದರ್ಶನ ಇದಷ್ಟೆ.

ಎಲ್ಲರಂತಲ್ಲ ಅಪ್ಪ

ಎಲ್ಲರಂತಲ್ಲ ಅಪ್ಪ

ಪರ ಊರಿನಲ್ಲಿ ಓದುವ ಇಂಗಿತ ವ್ಯಕ್ತಪಡಿಸಿದಾಗ ಕೈಯಲ್ಲಿ ಕಾಸಿಲ್ಲದಿದ್ದರೂ ತೋರ್ಪಡಿಸಿಕೊಳ್ಳದೆ ಓದು ನಾನಿದ್ದೇನೆ ಎಂದು ಪ್ರೋತ್ಸಾಹಿಸಿದವರು..ತನಗೆ ಎಂದು ಏನೂ ಕೊಂಡವರಲ್ಲ.. ಆದರೆ ನಾ ಏನು ಕೇಳಿದರೂ ಇಲ್ಲ ಅಂದವರಲ್ಲ ನನ್ನಪ್ಪ..

ಈಗಲೂ ನೆನಪಿದೆ ನನಗೊಂದು ಕೆಟ್ಟ ಅಭ್ಯಾಸವಿತ್ತು ಎಷ್ಟು ಚೆನ್ನಾಗಿ ಪರೀಕ್ಷೆ ಬರೆದರೂ ಮನೆಗೆ ಹೋದ್ಮೇಲೆ ಪರೀಕ್ಷೆ ಚೆನ್ನಾಗಿ ಬರೆದಿಲ್ಲ ಏನು ಮಾಡೋದು ಎಂದು ಅಳ್ತಾ ಅಪ್ಪನ ಹಿಂದೆ ತಿರುಗ್ತಿದ್ದೆ. ಪಾಪ ಅವರಿಗೆ ನನ್ನ ನೋಡಿ ಏನನ್ನಿಸ್ತಿತ್ತೋ ಏನೋ ಚಿಂತೆ ಮಾಡ್ಬೇಡ ಫೇಲ್ ಆದ್ರೆ ಇನ್ನೊಂದು ವರ್ಷ ಹೋದ್ರಾಯ್ತು ಅಂತಿದ್ರು ಆಗೆಲ್ಲ ನನಗೆ ಫೇಲ್ ಆದ್ರೆ ಅಪ್ಪ ಹೊಡೀತಾರೆ ಮನೆಗೆ ಸೇರಿಸಲ್ಲ ಅಂತೆಲ್ಲಾ ಭಯ ಪಡ್ತಿದ್ದ ಬೇರೆ ಗೆಳತಿಯರ ನೆನಪಾಗಿ ಅವರಿಗೆಲ್ಲರಿಗಿಂತ ನನ್ನಪ್ಪ ಎಷ್ಟು ಭಿನ್ನ ಅನಿಸ್ತಿತ್ತು.

ಕಲ್ಲನ್ನು ಅರಗಿಸುವ ಶಕ್ತಿ ನನ್ನಪ್ಪ

ಕಲ್ಲನ್ನು ಅರಗಿಸುವ ಶಕ್ತಿ ನನ್ನಪ್ಪ

ನನ್ನಂತೆಯೇ ತುಂಬು ಹಠವಾದಿ, ನೇರ ನಿಷ್ಟುರ ವ್ಯಕ್ತಿ, ಕೋಪ ಬಂದರೆ ಕೆಂಡ ನನ್ನಪ್ಪ. ಯಾವುದಾದರು ವಿಷಯ ಆಲೋಚನೆಗಳು ಮನಸ್ಸಿಗೆ ಬಂತೆಂದರೆ ಮುಗೀತು ಅವತ್ತು ಎಲ್ಲರಿಗೂ ಜಾಗ್ರಣೆ. ಯಾವುದೆ ವಿಷಯವನ್ನು ಮನಸ್ಸಿಗೆ ನಾಟುವಂತೆ ತಿಳಿ ಹೇಳುವ ಪರಿ ಅವರದು.

ಪರ ಊರಿಗೆ ಬಂದಾಗ ಎಲ್ಲರೂ ಇರುತ್ತಾರೆ ಯಾರೂ ನಮ್ಮವರಾಗಿರಲ್ಲ.ಬೇಗನೇ ಆಪ್ತರಾಗ್ತಾರೆ ಕಷ್ಟ ಎಂದಾಗ ಸ್ಪಂದಿಸೋ ಮನಸ್ಸು ಕಡಿಮೆ. ಕೆಲವೊಮ್ಮೆ ಕಛೇರಿಯಲ್ಲಿ ಸಣ್ಣ ಮನಸ್ತಾಪವನ್ನೂ ಅರಗಿಸಿಕೊಳ್ಖುವುದು ಕಷ್ಟ. ಕೊಂಕು ನುಡಿಗೆ ಬೇಸತ್ತು ಕುಗ್ಗಿ ಹೋಗುವುದೂ ಇದೆ ಅಂತಹ ಸಂಧರ್ಭದಲ್ಲಿ ಅಪ್ಪನ ಮಾತುಗಳು ನೆನಪಾಗಿ ಬಿಡುತ್ತೆ ಧೈರ್ಯ ತಂದುಕೊಳ್ತೀನಿ.

ಅಪ್ಪನ ಮಾತು ಎಂದೆದೂ ಹಿತ

ಅಪ್ಪನ ಮಾತು ಎಂದೆದೂ ಹಿತ

ಉದ್ಯೋಗ ಸಿಕ್ಕಿ ಬೆಂಗಳೂರ ಹಾದಿ ಹಿಡಿಯುವ ಸಮಯದಲ್ಲಿ ಅಪ್ಪ ಹೇಳಿದ ಮಾತು ಈಗಲೂ ಗುಂಯ್ ಗುಟ್ಟುತ್ತಿದೆ. ನಿನ್ನದಲ್ಲದ ತಪ್ಪಿಗೆ ಯಾರಿಗೂ ತಲೆಬಾಗಬೇಡ, ಪೊಳ್ಳು ಮಾತಿಗೆ ಕಿವಿಗೊಡ ಬೇಡ, ಕೆಲವೊಮ್ಮೆ ಸುಳ್ಳು ಅಪವಾದಗಳು ಬಂದಾಗ ಕೊರಳ ಪಟ್ಟಿ ಹಿಡಿದು ಕೇಳಲೂ ಹಿಂಜರಿಯಬೇಡ ನೇರ ನಿಷ್ಟುರ ನಡೆ ನಿನ್ನದಾದ್ರೂ ಪರವಾಗಿಲ್ಲ ಯಾರಿಗೂ ಕೆಡಕನ್ನು ಬಯಸಬೇಡ ಒಳ್ಳೆಯ ಭವಿಷ್ಯವಿದೆ ಹೋಗಿ ಬಾ ಎಂದಿದ್ದರು. ಅವರ ಮಾತೇ ಜೀವನದುದ್ದಕ್ಕೂ ಹಿತ. ನಿಮ್ಮ ಮಾತಿನಂತೆ ಎಂದೂ ನಡೆಯುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಎಂದೂ ಋಣಿ ಅಪ್ಪ.

ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯ ವರ್ಣಿಸಲಾಗದು ಬರೆ ಅನುಭವಕಷ್ಟೆ ನಿಲುಕುವಂತದ್ದು. ಹಾಂ ಜೀವಕೊಟ್ಟು ಬದುಕು ಕಲಿಸಿದ ಜಗತ್ತಿನ ಪ್ರತಿಯೊಂದು ಅಪ್ಪಂದಿರಿಗೂ ಅಪ್ಪಂದಿರ ದಿನದ ಶುಭಾಶಯಗಳು.

English summary

Father's Day Special Story: Preethu Ganesh Says About Her Father

On father's day special boldsky kannada covering special feature, here is one such story, Read on
X
Desktop Bottom Promotion