For Quick Alerts
ALLOW NOTIFICATIONS  
For Daily Alerts

ಜಾತಕ-ಕುಂಡಲಿ ತಾಳೆಯಾಗಿಲ್ಲ. ಆದರೂ ನಮ್ಮ ದಾಂಪತ್ಯ ಸುಖವಾಗಿದೆ

|

ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಅತಿ ಪ್ರಮುಖ ಸ್ಥಾನವಿದೆ. ವಿವಾಹ ಎಂದರೆ ಹುಡುಗಾಟವಲ್ಲ ಅದಕ್ಕೆ ಬಹಳಷ್ಟು ತಯಾರಿ ಮಾಡಬೇಕಾಗುತ್ತದೆ, ವಧು ಹಾಗೂ ವರನ ಜಾತಕ ಹೊಂದಾಣಿಕೆಯಾಗಬೇಕಾಗುತ್ತದೆ ಹಾಗೂ ಎಲ್ಲರ ಒಪ್ಪಿಗೆ ಪಡೆದೇ ವಿವಾಹ ಮಾಡಬೇಕು ಎಂಬುದು ಹಿರಿಯರ ನಂಬಿಕೆಯಾಗಿದೆ. ವಿವಾಹ ಎಂದರೆ ಮೊದಲು ಜಾತಕ ಕೂಡಿ ಬರುತ್ತದೆಯಾ ಎಂಬುದನ್ನೇ ಈಗಲೂ ಹಲವಾರು ಕುಟುಂಬಗಳಲ್ಲಿ ಪಾಲಿಸಲಾಗುತ್ತಿದೆ. ಇದೆಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರವಾದರೂ ಕೇವಲ ಜಾತಕ ಹೊಂದಾಣಿಕೆ ಆದ ಮಾತ್ರಕ್ಕೆ ದಂಪತಿಗಳು ಸುಖವಾಗಿ ಬಾಳುತ್ತಾರೆ ಅಥವಾ ಜಾತಕ ನೋಡದೆ ಮದುವೆಯಾದಲ್ಲಿ ವೈವಾಹಿಕ ಜೀವನ ಸುಖಮಯವಾಗಿರದು ಎಂದು ನಿಖರವಾಗಿ ಹೇಳುವುದು ಸಾಧ್ಯವೇ ಇಲ್ಲ.

ಬದಲಾದ ಕಾಲಮಾನದಲ್ಲಿ ಇಂದಿನ ಯುವಜನತೆಯ ವಿಚಾರಧಾರೆಗಳು ಸಹ ಬದಲಾಗುತ್ತಿದ್ದು, ಲವ್ ಮ್ಯಾರೇಜ್‌ಗಳು ಸಾಮಾನ್ಯವಾಗುತ್ತಿವೆ. ಇಂಥ ಲವ್ ಮ್ಯಾರೇಜ್‌ಗಳಲ್ಲಿ ಯಾವುದೇ ಜಾತಕ, ಮುಹೂರ್ತಗಳ ಬದಲಾಗಿ ಹುಡುಗ ಹಾಗೂ ಹುಡುಗಿ ಇಬ್ಬರೂ ಒಟ್ಟಾಗಿ ಬಾಳುವ ನಿರ್ಧಾರವೇ ಪ್ರಮುಖವಾಗಿರುತ್ತದೆ. ಹೀಗೆ ಜಾತಕ ನೋಡದೆ ಲವ್ ಮ್ಯಾರೇಜ್ ಆಗಿ ಸುಖವಾಗಿ ಹಾಗೂ ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿರುವ ಹೆಣ್ಣು ಮಗಳೊಬ್ಬರು ತಮ್ಮ ಕತೆಯನ್ನು ಎಳೆ ಎಳೆಯಾಗಿ ಹಂಚಿಕೊಂಡಿದ್ದಾರೆ. ಅವರ ಪ್ರೀತಿ, ಮದುವೆ ಹಾಗೂ ಜೀವನದ ಬಗ್ಗೆ ಅವರ ಮಾತುಗಳಲ್ಲೇ ಕೇಳಿ ತಿಳಿಯೋಣ ಬನ್ನಿ..

ಜಾತಕಗಳ ಹೊಂದಾಣಿಕೆಗೆ ಯತ್ನ

ಜಾತಕಗಳ ಹೊಂದಾಣಿಕೆಗೆ ಯತ್ನ

ನಾನೋರ್ವ ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳಾಗಿದ್ದು ನಮ್ಮ ಮನೆಯಲ್ಲಿ ನಮ್ಮ ವಿವಾಹ ನಮ್ಮ ಇಷ್ಟದ ಬದಲಾಗಿ ಜಾತಕ ಹೊಂದಾಣಿಕೆ ಆಧರಿಸಿಯೇ ಮಾಡಲು ನಿರ್ಧರಿಸಿದ್ದರು. ನಮ್ಮ ತಂದೆ-ತಾಯಿಗಳ ಏಕೈಕ ಮಗಳಾದ ನಾನು ಸ್ನಾತಕೋತ್ತರ ಶಿಕ್ಷಣ ಮುಗಿಸಿದ ತಕ್ಷಣ ನನ್ನ ವಿವಾಹದ ಪ್ರಯತ್ನಗಳು ಮನೆಯಲ್ಲಿ ಆರಂಭವಾದವು. ನನ್ನ ಜಾತಕದಲ್ಲಿ ನನಗೆ ಮಂಗಳ ದೋಷವಿದೆ ಎಂಬುದು ತಿಳಿದಿತ್ತು. ಮಂಗಳ ದೋಷ ಅಥವಾ ಮಂಗಳಿಕ ದೋಷ ಇರುವ ವಧುವಿನ ಮದುವೆ ಎಷ್ಟು ಕಷ್ಟ ಎಂಬುದು ತಿಳಿದವರಿಗೆ ಗೊತ್ತು. ಮಂಗಳ ದೋಷ ಇರುವುದು ಅಶುಭ ಎಂದು ಪರಿಗಣಿಸುವುದರಿಂದ ಸೂಕ್ತ ವರನ ಹುಡುಕಾಟ ಕಷ್ಟಸಾಧ್ಯವಾಗಿತ್ತು.

ನಾನು ಪ್ರೀತಿಯಲ್ಲಿ ಬಿದ್ದೆ

ನಾನು ಪ್ರೀತಿಯಲ್ಲಿ ಬಿದ್ದೆ

ನನಗೆ ಮಂಗಳ ದೋಷವಿದ್ದ ಕಾರಣ ಜಾತಕದಲ್ಲಿ ಮಂಗಳಿಕ ದೋಷವಿರುವ ವರನ ಹುಡುಕಾಟದಲ್ಲಿ ನನ್ನ ಪಾಲಕರು ತೊಡಗಿದ್ದರು. ಅಂದರೆ ವಧು ಹಾಗೂ ವರ ಇಬ್ಬರಿಗೂ ಮಂಗಳಿಕರಾಗಿದ್ದರೆ ಅದರ ದೋಷ ತಟ್ಟುವುದಿಲ್ಲ ಎಂಬ ನಂಬಿಕೆಯಿಂದ ಅವರು ಮಂಗಳಿಕ ವರನನ್ನು ಹುಡುಕುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ನನಗೇ ತಿಳಿಯದಂತೆ ನನ್ನ ಸಹೋದ್ಯೋಗಿಯೊಬ್ಬರನ್ನು ಪ್ರೀತಿಸಲಾರಂಭಿಸಿದೆ. ಪ್ರೀತಿ ಎಂಬುದು ಕುರುಡು ಅಂತಾರೆ. ಇದು ನನ್ನ ವಿಷಯದಲ್ಲಿಯೂ ನಿಜವಾಗಿತ್ತು. ಬೇಕೆಂತಲೇ ಪ್ರೀತಿ ಮಾಡಲಿಲ್ಲ. ಅದು ತನ್ನಷ್ಟಕ್ಕೆ ತಾನೆ ಆಗಿ ಹೋಗಿತ್ತು.

Most Read: ಅತ್ತೆ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ತಾಯಿ ನೆನಪು ಬರುವುದು ಈ ಸಂದರ್ಭಗಳಲ್ಲಿ...

ನಮ್ಮಿಬ್ಬರ ಧರ್ಮಗಳೂ ಬೇರೆಯಾಗಿದ್ದವು!

ನಮ್ಮಿಬ್ಬರ ಧರ್ಮಗಳೂ ಬೇರೆಯಾಗಿದ್ದವು!

ನಾನು ಪ್ರೀತಿಸಿದ ಹುಡುಗ ಹಾಗೂ ನನ್ನ ಧರ್ಮ ಎರಡೂ ಬೇರೆ ಬೇರೆಯಾಗಿದ್ದವು. ಹುಡುಗನ ಕುಟುಂಬದವರು ಅತ್ಯಂತ ಪ್ರಗತಿಪರ ವಿಚಾರವುಳ್ಳವರಾಗಿದ್ದು ಜಾತಕ, ಮುಹೂರ್ತಗಳಲ್ಲಿ ತೀರಾ ನಂಬಿಕೆ ಇಟ್ಟವರಾಗಿರಲಿಲ್ಲ. ಆದರೆ ನಮ್ಮ ಮನೆಯಲ್ಲಿ ಈ ವಿಚಾರವನ್ನು ಒಪ್ಪಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ನನ್ನ ಪ್ರೀತಿಯ ವಿಷಯವನ್ನು ಮನೆಯಲ್ಲಿ ತಿಳಿಸಿದಾಗ ಒಂದೊಮ್ಮೆ ಆ ಹುಡುಗನನ್ನೇ ಮದುವೆಯಾದರೆ ನನ್ನನ್ನು ಕುಟುಂಬದಿಂದಲೇ ಬಹಿಷ್ಕರಿಸುವುದಾಗಿ ನಮ್ಮ ಮನೆಯವರು ಬೆದರಿಕೆ ಹಾಕಿದರು. ನಮ್ಮ ತಂದೆಯವರು ತಕ್ಷಣ ಪಂಡಿತರೊಬ್ಬರನ್ನು ಕರೆಸಿ ನನ್ನ ಭವಿಷ್ಯದ ಬಗ್ಗೆ ಕೇಳಿದರು. ನಿರೀಕ್ಷೆಯಂತೆಯೇ ಆ ಪಂಡಿತರು ನನ್ನ ಮನಸಿಗೆ ವಿರುದ್ಧವಾದುದನ್ನೇ ಹೇಳಿದರು. ಅಲ್ಲದೆ ನನಗೆ ಸುತ್ತಿಕೊಂಡಿರುವ ಕಾಟ ಬಿಡಿಸಲು ಒಂದಿಷ್ಟು ಪೂಜೆ, ಪುನಸ್ಕಾರ, ಹೋಮ-ಹವನ ಮಾಡಬೇಕೆಂದು ಸಲಹೆ ನೀಡಿದರು.

ಹುಡುಗನ ಜಾತಕ ನೋಡಿದರು

ಹುಡುಗನ ಜಾತಕ ನೋಡಿದರು

ಮದುವೆಯಾದರೆ ಅವನನ್ನೇ ಆಗುವೆ ಎಂದು ನಾನು ಹಟ ಹಿಡಿದಿದ್ದು ನೋಡಿದ ನನ್ನ ಮನೆಯವರು ಒಂದಿಷ್ಟು ಮೆತ್ತಗಾಗಿ ಹುಡುಗನ ಮನೆಯವರನ್ನು ಭೇಟಿಯಾಗಲು ಒಪ್ಪಿದರು. ಹುಡುಗನ ಮನೆಗೆ ಹೋದಾಗ ಮೊದಲಿಗೆ ಆತನ ಜನ್ಮ ದಿನಾಂಕ, ಜನ್ಮ ಸ್ಥಳ ಮುಂತಾದ ವಿವರಗಳನ್ನು ಸಂಗ್ರಹಿಸಿದ ನಮ್ಮ ಮನೆಯವರು ಪಂಡಿತರನ್ನು ಕರೆಸಿ ಆತನ ಜಾತಕ ಬರೆಸಿದರು. ಆದರೆ ಅವರ ದುರಾದೃಷ್ಟವೋ ಅಥವಾ ನಮ್ಮಿಬ್ಬರ ದುರಾದೃಷ್ಟವೋ ನಮ್ಮ ಜಾತಕಗಳು ಒಂಚೂರೂ ಹೊಂದಾಣಿಕೆ ಆಗುತ್ತಿರಲಿಲ್ಲ. ಈ ಮದುವೆ ಸಾಧ್ಯವೇ ಇಲ್ಲ ಎಂಬ ಪಂಡಿತರ ಮಾತನ್ನು ಈವರೆಗೂ ನಾನು ಮರೆತಿಲ್ಲ.

ನನ್ನಿಷ್ಟದಂತೆ ಮದುವೆಯಾದೆ

ನನ್ನಿಷ್ಟದಂತೆ ಮದುವೆಯಾದೆ

ನನ್ನ ಮನೆಯವರ ವಿರೋಧವನ್ನು ಲೆಕ್ಕಿಸದೆ ನಾವಿಬ್ಬರೂ ವಿವಾಹ ಬಂಧನಕ್ಕೆ ಒಳಗಾದೆವು. ಒಂದಿಷ್ಟೂ ಮನಸ್ಸಿಲ್ಲದೆ ಕಣ್ಣೀರು ಹಾಕುತ್ತ ನನ್ನ ತಂದೆ ನನ್ನ 'ಕನ್ಯಾದಾನ' ಮಾಡಿದ್ದನ್ನು ನಾನು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಅವರ ದುಃಖ ಭರಿತ ನೋಟ ಇಂದಿಗೂ ನನ್ನನ್ನು ಕಾಡಿಸುತ್ತದೆ. ವಿವಾಹದ ಕೆಲ ತಿಂಗಳುಗಳ ನಂತರ ನಾವು ಬೇರೊಂದು ನಗರಕ್ಕೆ ವರ್ಗವಾಗಿ ಅಲ್ಲಿಯೇ ಸೆಟ್ಲ ಆದೆವು.

Most Read: ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಬೇಕಂತೆ! ಸಂಬಂಧ ಇನ್ನಷ್ಟು ಅನ್ಯೋನ್ಯತೆಯಾಗಿ ಇರುತ್ತದೆಯಂತೆ!

ಸಹಜವಾಗಿಯೇ ಕಷ್ಟಗಳನ್ನು ಎದುರಿಸಿದೆವು

ಸಹಜವಾಗಿಯೇ ಕಷ್ಟಗಳನ್ನು ಎದುರಿಸಿದೆವು

ಎಲ್ಲ ನವ ದಂಪತಿಗಳ ಜೀವನದಂತೆ ನಮ್ಮ ಜೀವನದಲ್ಲಿಯೂ ಏರುಪೇರುಗಳಿದ್ದವು. ಹೊಸ ನಗರದಲ್ಲಿನ ವಾತಾವರಣ ಹಾಗೂ ಅಲ್ಲಿನ ಜೀವನ ಶೈಲಿಯಿಂದ ಆರಂಭದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಮ್ಮ ಕಷ್ಟಗಳ ಬಗ್ಗೆ ತಿಳಿದ ನಮ್ಮ ಮನೆಯವರು ಇದಕ್ಕೆಲ್ಲ ನಾವು ಜಾತಕ ನೋಡದೆ ಮದುವೆ ಮಾಡಿಕೊಂಡಿದ್ದೇ ಕಾರಣವೆಂದು ಇತರ ಸಂಬಂಧಿಕರ ಮುಂದೆ ಗೋಳು ತೋಡಿಕೊಳ್ಳುತ್ತಿದ್ದರು.

ನಿಧಾನವಾಗಿ ಎಲ್ಲ ಸರಿಯಾಗತೊಡಗಿತು

ನಿಧಾನವಾಗಿ ಎಲ್ಲ ಸರಿಯಾಗತೊಡಗಿತು

ಒಂದು ಬಾರಿಯ ಘಟನೆ ನಿಜಕ್ಕೂ ನನ್ನಲ್ಲಿ ಹೆದರಿಕೆ ಹುಟ್ಟಿಸಿತ್ತು. ತಂದೆಯ ಮಾತು ಕೇಳದೆ ಮದುವೆಯಾಗಿ ತಪ್ಪು ಮಾಡಿ ಬಿಟ್ಟೆನಾ ಎಂದು ಎಂದು ಅನಿಸಲು ಶುರುವಾಗಿತ್ತು. ಮೂತ್ರಕೋಶದ ಗಂಭೀರ ಕಾಯಿಲೆಗೆ ತುತ್ತಾದ ನಾನು ಅಕ್ಷರಶಃ ಕುಗ್ಗಿ ಹೋಗಿದ್ದೆ. ಇದಕ್ಕೆಲ್ಲ ತಂದೆಯ ಮಾತು ಕೇಳದೆ ಮದುವೆಯಾಗಿದ್ದೇ ಕಾರಣವಾ ಎನಿಸಲು ಶುರುವಾಗಿತ್ತು. ಕೊನೆಗೂ ನನ್ನ ಮನಸ್ಸಿನಲ್ಲಿರುವುದನ್ನು ಗಂಡನಿಗೆ ಹೇಳಿದೆ. ಸಾಕಷ್ಟು ಅನುಭವದಿಂದ ತಿಳುವಳಿಕೆ ಹೊಂದಿದ್ದ ನನ್ನ ಸಂಗಾತಿಯು ಎಲ್ಲವನ್ನೂ ಸಮಾಧಾನದಿಂದ ಕೇಳಿಸಿಕೊಂಡು ಹೇಳಿದ.

Most Read: ನಿಮ್ಮ ಇಂತಹ ತಪ್ಪುಗಳಿಂದಲೇ ಹುಡುಗಿಯ ಮನಸ್ಸು ಮೂಡ್ ಆಫ್ ಆಗುವುದು!

"ನಿನ್ನ ಅನಾರೋಗ್ಯಕ್ಕೆ ನಿನ್ನ ಜಾತಕ ಕಾರಣವೆಂದು ನಿನಗೆ ಅನಿಸುತ್ತದೆಯಾ?

ಕಳೆದ ತಿಂಗಳು ನಾವಿಬ್ಬರೂ ಜಗಳಾಡಿದ್ದು ನಮ್ಮ ಜನ್ಮ ನಕ್ಷತ್ರಗಳ ಕಾರಣದಿಂದ ಎಂಬುದನ್ನು ನೀನು ನಂಬುವೆಯಾ? ಆದರೆ ಒಂದು ಮಾತು ಗೊತ್ತಿರಲಿ. ಅನಾರೋಗ್ಯ ಉಂಟಾಗುವುದು ಪ್ರಕೃತಿ ಸಹಜ ಕ್ರಿಯೆ. ಅದಕ್ಕಾಗಿಯೇ ಔಷಧಿಗಳಿವೆ, ವೈದ್ಯರಿದ್ದಾರೆ. ಇನ್ನು ತಪ್ಪು ಮಾಡುವುದು ಸಹಜ. ಹಾಗೆಯೇ ಜೀವನದಲ್ಲಿ ಅದರಿಂದ ಪಾಠ ಕಲಿತು ಮುಂದೆ ಸಾಗುವುದು ಜಾಣರ ಲಕ್ಷಣ. ಈ ಎಲ್ಲ ಕಷ್ಟಗಳು ನಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿವೆ, ಚಿಂತೆ ಬಿಟ್ಟು ನೆಮ್ಮದಿಯಾಗಿರು" ಎಂದರು. ಸಂಗಾತಿಯ ಈ ಸಾಂತ್ವನದ ನುಡಿಗಳು ನನ್ನಲ್ಲಿ ಮತ್ತೆ ಭರವಸೆ ಮೂಡಿಸಿ ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನ ಹೊಂದಲು ಸಾಧ್ಯವಾಯಿತು.

ನಮ್ಮ ಮದುವೆಗೆ ಈಗ ಭರ್ತಿ 10 ವರ್ಷ

ನಮ್ಮ ಮದುವೆಗೆ ಈಗ ಭರ್ತಿ 10 ವರ್ಷ

ನಮ್ಮ ಮದುವೆಯಾಗಿ ಈಗಾಗಲೇ 10 ವರ್ಷ ಕಳೆದಿದ್ದು ನಾವೊಬ್ಬ ಆರೋಗ್ಯವಂತ ಹೆಣ್ಣು ಮಗುವಿನ ಹೆಮ್ಮೆಯ ತಂದೆ, ತಾಯಿಗಳಾಗಿದ್ದೇವೆ. ನಮ್ಮ ಜೀವನವನ್ನು ನಾವು ನಮ್ಮಿಷ್ಟದಂತೆ ರೂಪಿಸಿಕೊಂಡಿದ್ದೇವೆ. ಇದರಲ್ಲಿ ಜಾತಕದ ಲವಲೇಶವೂ ಇಲ್ಲ ಎಂಬುದನ್ನು ಇಂದು ಎದೆ ತಟ್ಟಿ ಹೇಳಿಕೊಳ್ಳುತ್ತೇನೆ.

English summary

Our ‘kundali’ didn’t match. But we have a happy married life!

In this article we sharing real story of women whose kundali didn’t match. But they are happy in their life
Story first published: Wednesday, January 16, 2019, 16:40 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more