For Quick Alerts
ALLOW NOTIFICATIONS  
For Daily Alerts

ಅಮ್ಮ ಅಂದರೆ ಅಷ್ಟಕಷ್ಟೆ, ಅವಳ ಬಗ್ಗೆ ಕೋಪವಿತ್ತು, ಅಮ್ಮಾ ನೀನ್ಯಾಕೆ ಹಾಗೆ ಮಾಡಿದೆ ಈ ಎಂದು ಈಗ ಅರಿವಾಗಿದೆ

By ಶಿವರಂಜನಿ
|

ಎಲ್ಲಾ ಅಮ್ಮಂದಿರಿಗೆ ಅಮ್ಮಂದಿರ ದಿನದ ಶುಭಾಶಯಗಳು...

ಅಮ್ಮಂದಿರ ದಿನ ಬಂದಾಗಲೆಲ್ಲಾ ಈ ಆಚರಣೆ ಒಂದೇ ದಿನಕ್ಕೆ ಸೀಮಿತವೇ ಎಂದು ಒಮ್ಮೊಮ್ಮೆ ಅನಿಸಿ ಬಿಡುತ್ತದೆ. ವಾಟ್ಸ್ಯಾಪ್‌ ಸ್ಟೇಟಸ್‌ಗಳನ್ನು ಅಲಂಕರಿಸಿ ಬಿಡುವ ಅಮ್ಮನೊಂದಿಗಿನ ಫೋಟೋ ಒಂದೇ ದಿನಕ್ಕೆ ಸಾಕೇ, ಅದನ್ನು ತೋರ್ಪಡಿಸಿಕೊಳ್ಳಬೇಕೆ ಎನಿಸಿಬಿಡುತ್ತದೆ. ತಾಯ್ತನದ ಶ್ರೇಷ್ಠತೆ ತಾಯಿಯಾದಾಗಲೇ ತಿಳಿಯುವುದು ಎನ್ನುವ ಮಾತಿದೆ..

mothers day special story

ಹೆರಿಗೆ ವಾರ್ಡ್‌ನಲ್ಲಿ ಕಿಬ್ಬೊಟ್ಟೆ ಹಿಂಡುವಂತೆ ಕಾಣಿಸುವ ನೋವು ಬಂದಾಗಲೆಲ್ಲಾ ''ಅಮ್ಮಾ'' ಎಂದು ಗಂಟಲು ಬಿರಿಯುವಂತೆ ಕಿರುಚಿ, ಬಿಕ್ಕಿದಾಗ ನನ್ನದೇ ಆದ ಜೀವ ಹೊರಬಂದಾಗ ನೋವೆಲ್ಲಾ ಮಾಯವಾಗಿ ಮುಖದಲ್ಲೊಂದು ಸಂತೋಷದ ಮುಗುಳ್ನಗೆ ಮೂಡಿತ್ತು.. ಅಮ್ಮನೆಂಬ ಪದವಿ ನನಗೂ ಬಂದಿತ್ತು... ವಾರ್ಡ್ ಹೊರಗಿದ್ದ ಅಮ್ಮ ಇದ್ದ ದೇವರಿಗೆಲ್ಲಾ ಕೈಮುಗಿದಿದ್ದರಂತೆ..!

ಅಜ್ಜಿ ಮನೆಯಲ್ಲೇ ಬೆಳೆದ ನನಗೆ ಅಮ್ಮನೊಂದಿಗೆ ಆತ್ಮೀಯತೆ ಸ್ವಲ್ಪ ಕಡಿಮೆಯೇ

ಅಜ್ಜಿ ಮನೆಯಲ್ಲೇ ಬೆಳೆದ ನನಗೆ ಅಮ್ಮನೊಂದಿಗೆ ಆತ್ಮೀಯತೆ ಸ್ವಲ್ಪ ಕಡಿಮೆಯೇ

ನನ್ನ ಜೀವನದಲ್ಲಿಅಮ್ಮನೊಂದಿಗೆ ಆತ್ಮೀಯತೆ ಸ್ವಲ್ಪ ಕಡಿಮೆಯೇ ಕಾರಣ ಏನೆಂದರೆ ಹೆಚ್ಚಾಗಿ ಬೆಳೆದಿದ್ದೆಲ್ಲಾ ಅಜ್ಜಿ ಮನೆಯಲ್ಲೇ.. ಒಂದೂವರೆ ವರ್ಷಕ್ಕೆ ಎದೆಹಾಲು ಬಿಡಿಸಲೋಸುಗ ಅಜ್ಜಿಮನೆಗೆ ಕಳಿಸಿದ್ದರಿಂದ, ಅಜ್ಜಿ, ಚಿಕ್ಕಮ್ಮಂದಿರು ಅಮ್ಮನಷ್ಟೇ ಆತ್ಮೀಯರು. ಹಾಗಾಗಿ ನನ್ನ ಪುಟ್ಟ ಮಗಳಿಗೆ ಹುಷಾರು ತಪ್ಪಿದಾಗಲೆಲ್ಲಾ ಮೊದಲು ಫೋನಾಯಿಸುವುದು ಅಜ್ಜಿಗೆ. ಹೆತ್ತಮ್ಮ ಒಬ್ಬರಾದರೆ, ಸಾಕಿ ಬೆಳೆಸಿದ ಅಮ್ಮಂದಿರು ಅಜ್ಜಿಯೂ ಸೇರಿ ಐದು ಜನ.

ನಿನ್ನ ಕಷ್ಟಗಳ ಅರಿವು ಈಗ ನನಗಿದೆ ಅಮ್ಮಾ...

ನಿನ್ನ ಕಷ್ಟಗಳ ಅರಿವು ಈಗ ನನಗಿದೆ ಅಮ್ಮಾ...

ಇವರೆಲ್ಲರ ಪ್ರೀತಿ, ಕಾಳಜಿಯು ಹೆಚ್ಚಾಗಿ ಹಠಮಾರಿತನವೂ ನನ್ನಲ್ಲಿ ಬೆಳೆದಿದ್ದು. ಇಷ್ಟಪಟ್ಟಿದ್ದು ಬೇಕು ಎನ್ನುವ ಹಠ. ಈಗೀಗ ಅದರ ಅನುಭವ ನನಗೂ ಆಗುತ್ತಿದೆ. ಪುಟ್ಟ ಮರಿರಾಕ್ಷಸಿ ಸಿಕ್ಕಿದ್ದೆಲ್ಲಾ ಬೇಕು ಎನ್ನುವಾಗ ಒಮ್ಮೊಮ್ಮೆ ತಾಳ್ಮೆಯ ಕಟ್ಟೆಯೊಡೆದುಬಿಡುತ್ತದೆ. ಒಮ್ಮೊಮ್ಮೆ ಬೇಕು ಅಂದಿದ್ದು ಕೈಗಿಟ್ಟುಬಿಡುತ್ತೇನೆ. ಕೇಳಿದ್ದೆಲ್ಲಾ ಕೊಟ್ಟು ಅಭ್ಯಾಸ ಮಾಡಬೇಡ ಎನ್ನುವ ಮಾತು ಪತಿಯ ಕಡೆಯಿಂದ ಕೇಳಿಬರುವುದುಂಟು.. ತಾಯಿ ಹೃದಯವಲ್ಲವೇ.. ಎಲ್ಲವನ್ನೂ ಕಂದನಿಗೆ ಕೊಟ್ಟುಬಿಡಬೇಕೆನ್ನುವ ಮನಸ್ಸು ಮಾಡುತ್ತೇವೆ. ನನ್ನಮ್ಮನೂ ಹೀಗೆಯೇ ನಾನು ಹಠಮಾಡಿ ಹುಟ್ಟಿದ ಹಬ್ಬಕ್ಕೆ ಬಟ್ಟೆ ಕೊಡಿಸಿ ಎಂದು ದುಂಬಾಲು ಬಿದ್ದಾಗ ಏನೋ ಮಾಡಿ ದುಡ್ಡು ಸೇರಿಸಿ ಕೊಡಿಸಿದ್ದುಂಟು. ಇವೆಲ್ಲದರ ಅನುಭವ ಈಗೀಗ ಜವಾಬ್ದಾರಿಗಳು ಹೆಗಲ ಮೇಲೆ ಬಿದ್ದಾಗ ಅರ್ಥವಾಗುತ್ತಿದೆ.

ಅಮ್ಮ ಒಬ್ಬರ ದುಡಿಮೆಯಿಂದ ಮನೆಯ ಅಗತ್ಯ ವಸ್ತುಗಳ ಖರ್ಚು ಸರಿತೂಗಿಸಬೇಕಿತ್ತು. ಅಪ್ಪನನ್ನು ಕೇಳುವ ಧೈರ್ಯವಿಲ್ಲ. ಎಲ್ಲದಕ್ಕೂ ಅಪ್ಪನನ್ನು ಆಶ್ರಯಿಸಬಾರದೆನ್ನುವ ಗುಣ ಅಮ್ಮನಲ್ಲಿತ್ತು.. ಅಮ್ಮ ಕೇಳಿದರೂ ಅಪ್ಪ ಕೊಡಿಸುವವರಲ್ಲ..ಒಂದು ರೀತಿಯಲ್ಲಿ ಸ್ವಾವಲಂಬಿಯಾಗಿಯೇ ಇರುವವರು ನಮ್ಮಮ್ಮ.. ಈಗಲೂ ಕೂಡಾ.. ಅಗತ್ಯ ಬಿದ್ದಾಗ ಮಾತ್ರ ಕೇಳುವವರೇ ಹೊರತು. ಅಪ್ಪನನ್ನು ಎಲ್ಲದಕ್ಕೂ ಆಶ್ರಯಿಸಲಾರರು.. ಅಜ್ಜಿಯೂ ಹೀಗೆ ಸ್ವಾವಲಂಬಿ ಅವರ ಕೆಲಸ ಅವರೇ ಮಾಡಬೇಕು, ಬೇರೆಯವರನ್ನು ಆಶ್ರಯಿಸಬಾರದೆನ್ನುವ ಗುಣ ಅಜ್ಜಿಯದೂ ಕೂಡಾ. ಇದೇ ವಂಶವಾಹಿನಿಯೂ ನನ್ನಲ್ಲಿ ಇರಲೇಬೇಕಲ್ಲವೇ..

ಕ್ಷಮಿಸಿ ಬಿಡು ಅಮ್ಮಾ

ಕ್ಷಮಿಸಿ ಬಿಡು ಅಮ್ಮಾ

ಮಗುವಾದ ಮೇಲೆ ಕೆಲಸ ಬಿಡಲೇಬೇಕಾದ ಪರಿಸ್ಥಿತಿ ಬಂದಾಗ, ಬೈದವರೂ ನಮ್ಮಜ್ಜಿ. ಓದಿದ್ದು ಕೆಲಸ ಬಿಟ್ಟು ಮನೆಯಲ್ಲಿರುವುದಕ್ಕಾ, ಮನೆಯ ಖರ್ಚು ಒಬ್ಬನಿಂದ ಸಾಧ್ಯವೇ, ನಿನ್ನ ಖರ್ಚಿಗಾದರೂ ಕೆಲಸ ಮಾಡು ಎನ್ನುವ ಮಾತು ಅಜ್ಜಿಯಿಂದ ಬಂದಿತ್ತು. ಯಾರ ಮೇಲೂ ಅವಲಂಬಿತರಾಗಬಾರದೆನ್ನುವ ಗುಣ ನನಗೂ ಬಂದಿರುವುದು ಈ ಅಮ್ಮಂದಿರಿಂದಲೇ..

ಮಗುವನ್ನು ಸಂಭಾಳಿಸಿಕೊಂಡು, ಮನೆಯ ಕೆಲಸದೊಂದಿಗೆ, ಬರವಣಿಗೆಯ ಕೆಲಸವನ್ನು ಸರಿತೂಗಿಸಿಕೊಂಡು ಹೋಗಲು ಒಂದು ರೀತಿಯಲ್ಲಿ ಸ್ಫೂರ್ತಿಯಾಗುವವರೆಂದರೆ ಅಮ್ಮ ಮತ್ತು ಅಜ್ಜಿ. ಅಪ್ಪನ ಸ್ವಭಾವವನ್ನು ನುಂಗಿಕೊಂಡು ಜೀವನವನ್ನು ಮುನ್ನೆಡೆಸಿಕೊಂಡು ಮಕ್ಕಳ ಸಂತೋಷದಲ್ಲೇ ತಾವು ಸಂತೋಷಪಡುವ ಅಮ್ಮ. ಇಂದಿಗೂ ಕಷ್ಟಬಂದರೂ ಅದನ್ನು ನಮ್ಮೆದುರು ತೋರಿಸಿಕೊಳ್ಳದ ಜೀವ.

ಮ್ಮೊಮ್ಮೆ ಮನಸ್ಸಿನಲ್ಲಿ ಜಿಗುಪ್ಸೆ ಆವರಿಸಿದಾಗ ಅಮ್ಮ, ಅಜ್ಜಿಯ ಜೀವನವನ್ನು ನೆನಪಿಸಿಕೊಳ್ಳುತ್ತೇನೆ

ಮ್ಮೊಮ್ಮೆ ಮನಸ್ಸಿನಲ್ಲಿ ಜಿಗುಪ್ಸೆ ಆವರಿಸಿದಾಗ ಅಮ್ಮ, ಅಜ್ಜಿಯ ಜೀವನವನ್ನು ನೆನಪಿಸಿಕೊಳ್ಳುತ್ತೇನೆ

ಅನೇಕ ಬಾರಿ ಅಮ್ಮನಿಗೆ ನನ್ನಿಂದ ಬೇಜಾರಾಗುವ ಸಂದರ್ಭಗಳಿವೆ..ಕಾರಣವಿಷ್ಟೇ ಅಮ್ಮನಲ್ಲಿ ಹೇಳದೇ ಚಿಕ್ಕಮ್ಮ, ಅಜ್ಜಿಯೊಂದಿಗೆ ಎಲ್ಲಾ ವಿಷಯವನ್ನು ಹೇಳುತ್ತೇನೆ ಎನ್ನುವುದಕ್ಕಾಗಿ. ಕಾರಣವಿಷ್ಟೇ ಹಾಲು ಬಿಡಿಸಲು ಒಂದೂವರೆ ವರ್ಷಕ್ಕೆ ಅಜ್ಜಿಮನೆಗೆ ಕಳಿಸಿದ್ದ ಅಮ್ಮ.. ನಾನು ಬೇಕೆಂದಾಗಲೆಲ್ಲ ಅಮ್ಮನ ಆಸರೆ ನನಗೆ ಸಿಕ್ಕಿಲ್ಲ.. ನನ್ನ ಮಗಳಿಗೆ ಈ ರೀತಿ ಆಗದಿರಲಿ ಎನ್ನುವ ಕಾಳಜಿಯೊಂದಿಗೆ ಬೆಳೆಸುತ್ತಿದ್ದೇನೆ ನನ್ನ ಪುಟ್ಟ ರಾಜಕುಮಾರಿಯನ್ನು..ಯಾಕೆಂದರೆ ನಾನೂ ಮುಂದೊಂದು ದಿನ ಸಂಕಟ ಪಡಬಾರದಲ್ಲವೇ... ನನ್ನಿಂದ ಅಮ್ಮ ಅನುಭವಿಸಿದ ಎಲ್ಲಾ ಸಂಕಟಗಳಿಗೂ ಕ್ಷಮಾಪಣೆ ಕೇಳುತ್ತಿದ್ದೇನೆ ಅಮ್ಮಾ...

ಜೀವನದ ಒಂದು ಹಂತದಲ್ಲಾದರೂ ಅಮ್ಮನ ಪಾತ್ರ ಎಷ್ಟು ಮುಖ್ಯವಾಗುತ್ತದೆ ಎನ್ನುವುದರ ಅನುಭವ ಪ್ರತಿಯೊಂದು ವ್ಯಕ್ತಿಗೂ ಅನುಭವ ಆಗೇ ಆಗುತ್ತದೆ.. ಒಮ್ಮೊಮ್ಮೆ ಮನಸ್ಸಿನಲ್ಲಿ ಜಿಗುಪ್ಸೆ ಆವರಿಸಿದಾಗ ಅಮ್ಮ, ಅಜ್ಜಿಯ ಜೀವನವನ್ನು ನೆನಪಿಸಿಕೊಳ್ಳುತ್ತೇನೆ.. ಯಾಕೆಂದರೆ ಇವರಿಬ್ಬರೂ ಸ್ವಾಭಿಮಾನ ಕಲಿಸಿದ ಗುರುಗಳು..ಇಂದಿಗೂ ದುಡಿಯುತ್ತಿರುವ ಜೀವಗಳು.. ತಾಯಿಯೇ ಮೊದಲ ಗುರು ಎನ್ನುವುದಕ್ಕೆ ಹೆಚ್ಚಿನ ಉದಾಹರಣೆಗಳು ಬೇಕಿಲ್ಲ.. ಅಲ್ಲವೇ..

English summary

Mothers Day Special Story By Shivaranjini

Here is mothers day special story written by Shivaranjini, read on...
X
Desktop Bottom Promotion