For Quick Alerts
ALLOW NOTIFICATIONS  
For Daily Alerts

ಅಮ್ಮಾ... ನಾ ಅಮ್ಮನಾದಾಗ ನಿನ್ನ ಚಡಪಡಿಕೆ ಅರಿತೆ

|

ಎಲ್ಲಾ ಪ್ರೀತಿಯ ಅಮ್ಮಂದಿರಿಗೆ ಅಮ್ಮಂದಿರ ದಿನದ ಶುಭಾಶಯಗಳು....ನನಗೆ ನನ್ನಮ್ಮನ ನೋಡಿದಾಗ ದಿನಲೂ ಒಂದು ಪ್ರಶ್ನೆ ಕಾಡುತ್ತಿತ್ತು, ಅಮ್ಮ ಯಾಕೆ ಹೀಗೆ ತುಂಬಾ ಪ್ರೀತಿ ತೋರಿಸುತ್ತಾರೆ? ಅಷ್ಟೇ ಏಕೆ ಅಮ್ಮನ ಹತ್ತಿರ ಆಗಾಗ ಅಮ್ಮಾ ಪ್ರಪಂಚದಲ್ಲಿ ನಿನಗೆ ಮಾತ್ರ ಮಕ್ಕಳಿರುವುದಾ? ಏಕೆ ಚಿಕ್ಕ-ಪುಟ್ಟ ವಿಷಯಕ್ಕೆ ಅಷ್ಟೊಂದು ಗಾಬರಿ ಬೀಳುತ್ತೀರಿ? ಎಂದು ಕೇಳುತ್ತಿದ್ದೆ.

ಅವರ ಅತಿಯಾದ ಪ್ರೀತಿ ಕಿರಿಕಿರಿಯಾಗುವಂತೆ ಅನಿಸಿದ್ದೂ ಇದೆ. ಬೆಂಗಳೂರಿನಿಂದ ಮಡಿಕೇರಿಗೆ ಬಸ್‌ ಹತ್ತಿದರೆ ಬಸ್‌ ಇಳಿಯುವಷ್ಟರಲ್ಲಿ ನೂರು ಕಾಲ್‌, ಎಲ್ಲಿದ್ದೀಯ.. ಎಲ್ಲಿದ್ದೀಯಾ? ಅಯ್ಯೋ ಬಸ್‌ ಬಂದು ತಲುಪಬೇಕಲ್ಲ, ಹಾರಿಕೊಂಡು ಬರೋಕೆ ಆಗುತ್ತಾ ಎಂದು ಕೆಲವೊಮ್ಮೆ ಕೇಳಿದ್ದೂ ಉಂಟು.. ಆದರೆ ತಾಯಿಯ ಆ ಚಟಪಡಿಕೆ ಏನೆಂದು ನಾ ತಾಯಿಯಾದಾಗ ಅರಿತೆ...

Mothers day Special story 2023

ನಮ್ಮಮ್ಮನಿಗೆ ನಾವು ಮೂರು ಹೆಣ್ಮಕ್ಕಳು. ಎಂಟು ಹೆರಿಗೆಯಾಗಿ ಉಳಿದಿದ್ದು ನಾವು ಮೂವರೇ. ಉಳಿದ ಮಕ್ಕಳು ಹೊಟ್ಟೆಯಿಂದ ಹೊರ ಬರುವ ಮುನ್ನವೇ ಕಣ್ಮುಚ್ಚಿದ್ದರು. ಅದಕ್ಕೆ ಇರಬಹುದೇನೋ ಅಮ್ಮನಿಗೆ ನಾವು ಮೂವರಿಗೆ ಒಂದು ಚಿಕ್ಕ ಗಾಯವಾದರೂ ತುಂಬಾ ಗಾಬರಿ ಬೀಳುತ್ತಾರೆ. ಚಿಕ್ಕದಾಗಿ ಜ್ವರ ಬಂದರೆ ಅವರು ಕಣ್ಣೀರು ಹಾಕಿಕೊಂಡು ಒದ್ದಾಡುತ್ತಿರುವುದನ್ನು ನೋಡುವವರಿಗೆ ಏನೋ ದೊಡ್ಡ ಸಮಸ್ಯೆ ಇರಬೇಕು ಎಂದು ಗಾಬರಿ ಉಂಟು ಮಾಡುವಷ್ಟು ಕಾಳಜಿ ನಮ್ಮ ಅಮ್ಮಂದು.

ಕೆಲವೊಮ್ಮೆ ಅವರ ವಿಪರೀತ ಕಾಳಜಿಯೇ ಕಿರಿಕಿರಿಯಾಗುತ್ತಿತ್ತು. ಅಯ್ಯೋ ಬಿಡಮ್ಮಾ ಯಾಕಿಷ್ಟು ಗಾಬರಿ ಬೀಳ್ತೀಯಾ, ನಾವು ಆರಾಮವಾಗಿದ್ದೇವೆ ಎಂದು ಹೇಳುತ್ತಿರುತ್ತೇವೆ. ಆದರೆ ಅಮ್ಮ ಮಾತ್ರ ಒಂದಿಷ್ಟು ಬದಲಾಗಿಲ್ಲ... ಇಡೀ ಜೀವನ ನಮಗಾಗಿಯೇ ಸವೆಸಿದ್ದಾಳೆ, ಸವಿಸುತ್ತಿದ್ದಾಳೆ... ಮಕ್ಕಳೇ ಅವರ ಪ್ರಪಂಚ.ಅಮ್ಮನ ನಾ ಅರಿತಿದ್ದು ನಾ ಅಮ್ಮನಾದಾಗ

ನನಗೆ ನನ್ನ ಅಮ್ಮ ನಮ್ಮ ಬಗ್ಗೆ ಚಿಕ್ಕ ವಿಷಯಕ್ಕೆ ಏಕಿಷ್ಟು ಗಾಬರಿ ಬೀಳುತ್ತಾಳೆ, ಏಕೆ ಅವಳಿಗೆ ಅಷ್ಟೊಂದು ಕಾಳಜಿ ಎಂದು ತಿಳಿದಿದ್ದು ನಾ ಅಮ್ಮನಾದಾಗ. ಹೌದು ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಬದುಕಿನಲ್ಲಿ ತುಂಬಾ ಮಹತ್ವವಾದ ಘಟ್ಟ. ಬರಲಿರುವ ಒಂದು ಪುಟ್ಟ ಜೀವದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡುವುದೇ ಆವಾಗ. ಆದರೆ ಆ ಸಮಯದಲ್ಲಿ ವೈದ್ಯರು ಈ ಗರ್ಭ ನಿಲ್ಲುವುದೇ ಡೌಟ್‌ ಎಂದು ಹೇಳುವಾಗ ಹೊಟ್ಟೆಯಲ್ಲಿ ಮಗುವನ್ನು ಹೊತ್ತು ನಿಂತ ನನಗೆ ಸಿಡಲಿನ ಆಘಾತ. ಒಂದೊಂದು ಕ್ಷಣವು ದೇವರಿಗೆ ಈ ಮಗುವನ್ನು ಆರೋಗ್ಯಕರವಾಗಿ ಕೊಡು ಎಂದು ಪ್ರಾರ್ಥಿಸುತ್ತಿದ್ದೆ. ದೇವರಿಗೂ ನನ್ನ ಪ್ರಾರ್ಥನೆ ಕೇಳಿತ್ತು... ಮಗು ಆರೋಗ್ಯಕರವಾಗಿಯೇ ಗರ್ಭದಲ್ಲಿ ಬೆಳೆಯುತ್ತಿತ್ತು... ಆದರೆ ನನಗೆ ಮತ್ತು ಪತಿಗೆ ಏನೋ ಆತಂಕ, ಪ್ರತೀ ಬಾರೀ ಸ್ಕ್ಯಾನಿಂಗ್‌ಗೆ ಹೋಗುವಾಗ ವೈದ್ಯರ ಬಳಿ ' ಎಲ್ಲಾ ನಾರ್ಮಲ್‌ ಆಗಿದೆ ತಾನೆ?' ಎಂದು ಕೇಳುತ್ತಿದ್ದೆವು. ವೈದ್ಯರು ಕೂಡ ಎಲ್ಲಾ ಸರಿಯಾಗಿದೆ ಎಂದು ಧೈರ್ಯ ತುಂಬುತ್ತಿದ್ದರು...

ತಿಂಗಳುಗಳು ಕಳೆಯುತ್ತಿದ್ದಂತೆ ಒಬ್ಬ ತಾಯಿ ಮಗುವನ್ನು ಈ ಭೂಮಿಗೆ ತರಲು ಎಷ್ಟೊಂದು ಕಷ್ಟ ಅನುಭವಿಸುತ್ತಾಳೆ ಎಂಬುವುದು ತಿಳಿಯುತ್ತಾ ಹೋಯ್ತು. ಹೊಟ್ಟೆ ಹೊತ್ತು ನಡೆಯಲು ಆಗಲ್ಲ, ಕೂರಲು ಆಗಲ್ಲ, ಆರಾಮವಾಗಿ ಮಲಗಲು ಅಂತು ಸಾಧ್ಯವೇ ಇಲ್ಲ, ಒಂದು ಕಣ್ಮುಚ್ಚುವಷ್ಟರಲ್ಲಿ ಮಸಲ್ ಕ್ಯಾಚ್‌... ಆಗ ಅಮ್ಮಾ ನಿನಗೂ ನನ್ನಂಗೆ, ನನಗೂ ಮಸಲ್ ಕ್ಯಾಚ್‌ ಆಗ್ತಾ ಇತ್ತು ಎಂದು ಹೇಳುತ್ತಿದ್ದರು.. ಒಂದು ಗರ್ಭಕ್ಕೆ ಇಷ್ಟೆಲ್ಲಾ ಒದ್ದಾಡುವಾಗ ನೀನೆಷ್ಟು ನೋವು ಅನುಭವಿಸಿರಲ್ಲ... ಎಂದು ಮನಸ್ಸಿನಲ್ಲಿಯೇ ಅವರಿಗೆ ವಂದಿಸಿದ್ದೆ.

ನಾ ಅಮ್ಮನಾದಾಗ ಮಗುವಾದ ಮೇಲೆ ತಾಯ್ತನದ ಅನುಭವವಾಯ್ತು...
ಅವಳು ತುಂಬಾ ಹೊತ್ತು ಮಲಗಿದರೆ ಅಯ್ಯೋ ಏಕೆ ಇಷ್ಟು ಹೊತ್ತು ಮಲಗಿದೆ ಎಂಬ ಚಿಂತೆ, ಮೈಯಲ್ಲಿ ಬೊಬ್ಬೆಯಾದರೆ ಅಯ್ಯೋ ಏನಾಯ್ತು ಎಂದು ಗಾಬರಿ ಬಿದ್ದು ವೈದ್ಯರ ಬಳಿ ಹೋಗಿ ಅವರು ಏನಿಲ್ಲಾ.. ಸೊಳ್ಳೆ ಅಥವಾ ಯಾವುದೋ ಕೀಟ ಕಚ್ಚಿರಬಹುದು, ಈ ಮುಲಾಮು ಹಚ್ಚಿ ಎಲ್ಲಾ ಸರಿ ಹೋಗುತ್ತೆ ಎಂದಾಗಲ ಸಮಧಾನ..... ಕುಂಭಕರ್ಣನಿಗೆ ಪೈಪೋಟಿ ನೀಡುವಂತೆ ನಿದ್ರಿಸುತ್ತಿದ್ದವಳ ನಿದ್ದೆ ಮಗಳು ಬಂದ ಮೇಲೆ ಎಲ್ಲೋಯ್ತೋ ಗೊತ್ತಿಲ್ಲ... ಕೆಲಸಕ್ಕೆ ಬಂದು ಮನೆ ತಲುಪಿ ಮಗಳ ಮುಖ ನೋಡುವವರಿಗೆ ಏನೋ ಚಡಪಡಿಕೆ... ಈಗ ಈ ಬದುಕು ಅವಳಿಗಾಗಿ ಮುಡಿಪಾಗಿದೆ... ಮುಂದೆ ನನ್ನ ಮಗಳೂ ಕೇಳಬಹುದು ಏಕೆ ನನ್ನ ಬಗ್ಗೆ ಚಿಕ್ಕ ವಿಷಯಕ್ಕೆ ಅಷ್ಟೊಂದು ಗಾಬರಿ ಬೀಳ್ತೀಯಾ ಎಂದು ಅಲ್ವಾ?

English summary

Mother's Day Special: How Does It Feel After Becoming A Mother?

Mother's day Special: How does it feel after becoming a mother?, Here is what I felt about my mother, read on..
X
Desktop Bottom Promotion