For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರೇಮಜೀವನದ ಬಗ್ಗೆ ಎಂದಿಗೂ ಹಂಚಿಕೊಳ್ಳಲೇ ಬಾರದ ಸಂಗತಿಗಳಿವು

|

ಒಂದು ವೇಳೆ ನೀವು ದಾಂಪತ್ಯದಲ್ಲಿದ್ದು ಅಥವಾ ಒಬ್ಬರ ಜೊತೆ ಸಂಬಂಧವನ್ನು ಹೊಂದಿದ್ದು ಅವರೊಂದಿಗಿನ ಒಡನಾಟದ ಬಗ್ಗೆ ನಿಮ್ಮ ಸ್ನೇಹಿತರಲ್ಲಿ ಹೇಳಿಕೊಳ್ಳುವಾಗ ಹಲವಾರು ವಿಷಯಗಳನ್ನು ಹೇಳಿಕೊಳ್ಳುತ್ತೇವೆ. ಹಿಂದಿನ ನಿಮ್ಮ ಭೇಟಿ ಹೇಗಿತ್ತು, ಆತ ನಿಮಗಾಗಿ ಯಾವ್ಯಾವ ಅಡುಗೆ ಮಾಡಿದ್ದ ಅಥವಾ ಯಾವ ಹೋಟೆಲಿಗೆ ಕರೆದುಕೊಂಡು ಹೋಗಿದ್ದ? ಮುಂದಿನ ರಜಾದಿನಗಳು ಎಲ್ಲಿ ಕಳೆಯುವ ಇಚ್ಛೆಯಿದೆ ಮೊದಲಾದವು. ಕೆಲವೊಮ್ಮೆ ಸೂಕ್ಷ್ಮ ಸಂದರ್ಭಗಳು ಎದುರಾಗುವ ಅಂದಾಜಿದ್ದರೆ ಈ ಬಗ್ಗೆ ನೀವು ಖಂಡಿತಾ ಎಚ್ಚರ ವಹಿಸುತ್ತೀರಿ ಹಾಗೂ ಈ ಬಗ್ಗೆ ನೀವು ಸುರಕ್ಷಿತಾ ಭಾವನೆಯನ್ನೂ ಹೊಂದಿರುತ್ತೀರಿ ಹಾಗೂ ನಿಮ್ಮ ಸಂಬಂಧವನ್ನು ಉಳಿಸಿಕೊಂಡು ಮುಂದುವರೆಸುವ ಬಗ್ಗೆ ಆಶಾವಾದವನ್ನೂ ಹೊಂದಿರುತ್ತೀರಿ.

things to not to share with friends

ಆದರೆ ಅರಿವಿಲ್ಲದೇ ಸ್ನೇಹಿತರಿಗೆ ಒದಗಿಸುವ ಕೆಲವು ಚಿಕ್ಕ ಸಂಗತಿಗಳೂ ತಮ್ಮ ಸೆರಗಿನೊಳಗೆ ನಿಮ್ಮ ಗುಟ್ಟನ್ನೂ ಕೊಂಡೊಯ್ದು ರಟ್ಟು ಮಾಡಿ ನೂಲಿನೊಂದಿಗೆ ಇಡಿಯ ಸೀರೆಯನ್ನೇ ಸೆಳೆದು ನಿಮ್ಮನ್ನು ಬೆತ್ತಲಾಗಿಸಬಹುದು! ನಿಮ್ಮ ಸ್ನೇಹಿತೆಯರು ಎಷ್ಟೇ ಆಪ್ತರಿರಲಿ, ಕೆಲವೊಂದು ವಿಷಯಗಳನ್ನು ಮಾತ್ರ ಎಷ್ಟೇ ಒತ್ತಡವಿದ್ದರೂ ಸರಿ, ಹೇಳಿಕೊಳ್ಳಲೇಬಾರದು. ಬನ್ನಿ, ಈ ಗುಟ್ಟಿನ ಸಂಗತಿಗಳು ಯಾವುವು ಎಂಬುದನ್ನು ನೋಡೋಣ.

ವೈಯಕ್ತಿಕ ತೊಂದರೆಗಳು ಮತ್ತು ಅಸುರಕ್ಷತೆಯ ವಿಷಯಗಳು

ವೈಯಕ್ತಿಕ ತೊಂದರೆಗಳು ಮತ್ತು ಅಸುರಕ್ಷತೆಯ ವಿಷಯಗಳು

ಈ ಬಗ್ಗೆ ಹೇಳಿಕೊಂಡರೆ ಇದು ನಿಜವಾಗಿಯೂ ನಿಮ್ಮ ವೈಯಕ್ತಿಕ ಗುಟ್ಟುಗಳನ್ನು ನೀವಾಗಿ ರಟ್ಟುಮಾಡಿ ನಂಬಿಕೆದ್ರೋಹ ಎಸಗಿದಂತೆ! ಪ್ರತಿಯೊಬ್ಬರಿಗೂ ಇರುವಂತಹ ಕೆಲವು ವೈಯಕ್ತಿಕ ತೊಂದರೆಗಳು, ಉದಾಹರಣೆಗೆ ಆತನಲ್ಲಿ ಮನೆಮಾಡಿರುವ ಇದನ್ನು ಜಯಿಸಬಯಸುವ ಚಿಕ್ಕಂದಿನ ಭಯ, ಅನಿವಾರ್ಯ ಸಂದರ್ಭಗಳಲ್ಲಿ ಸಿಲುಕಿ ಈಗ ಬಿಡಲು ಯತ್ನಿಸುತ್ತಿರುವ ದುರಭ್ಯಾಸ ಇತ್ಯಾದಿ, ಮೊದಲಾದವುಗಳನ್ನು ನಿಮ್ಮ ಸ್ನೇಹಿತೆಯರ ವೃಂದದಲ್ಲಾಗಲೀ ನಿಮ್ಮ ಆಪ್ತರೊಂದಿಗಾಗಲೀ ಹಂಚಿಕೊಳ್ಳದಿರಿ. ಖ್ಯಾತ ಮನಃಶಾಸ್ತ್ರಜ್ಞೆ ಮಂಜುಳಾ ಎಂ.ಕೆ ಯವರು ವಿವರಿಸುವ ಪ್ರಕಾರ "ವೈಯಕ್ತಿಕ ತೊಂದರೆಯೊಂದನ್ನು ನಿಮ್ಮ ರೀತಿಯಲ್ಲಿ ಪರಿಹರಿಸುವುದು ನೀವಂದುಕೊಂಡಷ್ಟು ಸುಲಭವಲ್ಲ. ಒಂದು ವೇಳೆ ಈ ವಿಷಯವನ್ನು ನಿಮ್ಮ ಸ್ನೇಹಿತೆಯರಿಗೆ ತಿಳಿಸಿದರೆ ಅವರು ಆತನ ಬಗ್ಗೆ ಬೇರೊಂದು ಅಭಿಪ್ರಾಯಕ್ಕೆ ಬರಬಹುದು. ಇದು ವಿಷಯವನ್ನು ಇನ್ನಷ್ಟು ಕ್ಲಿಷ್ಟವಾಗಿಸಬಹುದು. ಒಂದು ವೇಳೆ, ಅಕಾಸ್ಮಾತ್ತಾಗಿ ಈ ವಿಷಯವೆಲ್ಲಾದರೂ ನಾಲ್ಕು ಜನರ ನಡುವೆ ಪ್ರಸ್ತಾಪಗೊಂಡರೆ ಇದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಅನುಕಂಪ, ಸಲಹೆ ಅಥವಾ ಭಿನ್ನಾಭಿಪ್ರಾಗಳೂ ವ್ಯಕ್ತಗೊಳ್ಳಬಹುದು. ಒಂದು ವೇಳೆ ಈ ಬಗ್ಗೆ ನಿಮಗೆ ಖಚಿತವಾದ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕೆಂಬ ಇಚ್ಛೆಯಿದ್ದರೆ ಆತನ ತಂದೆ ತಾಯಿಯರಲ್ಲಿ ನೇರವಾಗಿ ಕೇಳಬೇಕು ಅಥವಾ ಮನಃಶಾಸ್ತ್ರಜ್ಞರ ನೆರವನ್ನು ಪಡೆಯಬಹುದು. ಒಂದು ವೇಳೆ ಆತನ ಬಗ್ಗೆ ನೀವು ತಿಳಿದುಕೊಂಡಿರುವ ವಿಷಯಗಳು ಈಗಾಗಲೇ ನಿಮ್ಮ ಸ್ನೇಹಿತೆಯರಿಗೂ ತಿಳಿದಿದ್ದರೆ ಅಥವಾ ಇವರು ಈ ಬಗ್ಗೆ ತಿಳಿದುಕೊಂಡರೆ ತೊಂದರೆಯಿಲ್ಲ ಎಂದೆನಿಸಿದರೂ ಈ ಬಗ್ಗೆ ಚಕಾರವೆತ್ತದಿರುವುದೇ ಜಾಣತನವಾಗಿದೆ. ಏಕೆಂದರೆ ಆತ ಎದುರಿಸುತ್ತಿರುವ ಅಸುರಕ್ಷಿತಾ ಭಾವನೆಗಳು ಅಥವಾ ಮುಜುಗರ ತರಿಸುವ ಯಾವುದೇ ಕಾರಣಗಳು ಇನ್ನೊಬ್ಬರ ಎದುರಿಗೆ ಉಲ್ಲೇಖಗೊಂಡರೆ ಆತ ಇನ್ನಷ್ಟು ಖಿನ್ನತೆಗೆ ಒಳಗಾಗಬಹುದು. ಜಗತ್ತಿಗೆ ತಿಳಿಯಬಾರದಾಗಿದ್ದ ವಿಷಯಗಳು ನಿಮ್ಮಿಂದ ರಟ್ಟಾಯಿತು ಎಂದು ಅರಿತರೆ ಆತ ನಿಮ್ಮ ಬಗ್ಗೆಯೇ ಭಿನ್ನಾಭಿಪ್ರಾಯ ಹೊಂದುವ ಅಪಾಯವಿದೆ"

ನಿಮ್ಮ ಸಂಗಾತಿಯ ತಂದೆ ತಾಯಿಯರು:

ನಿಮ್ಮ ಸಂಗಾತಿಯ ತಂದೆ ತಾಯಿಯರು:

ಒಂದು ವೇಳೆ ನಿಮ್ಮ ಸಂಗಾತಿಯ ತಂದೆ ತಾಯಿಯರನ್ನು ನೀವು ಈಗಾಗಲೇ ಅರಿತಿದ್ದು ಅವರೊಂದಿಗೆ ಮುಕ್ತವಾಗಿ ಮಾತನಾಡುವಷ್ಟು ಸಲಿಗೆ ಪಡೆದಿದ್ದರೆ ನೀವು ಅದೃಷ್ಟಶಾಲಿಗಳೇ ಹೌದು. ಆದರೆ ಕೆಲವು ವಿಷಯಗಳಲ್ಲಾದರೂ ಸರಿ, ಅವರ ಮತ್ತು ನಿಮ್ಮ ಅಭಿಪ್ರಾಯಗಳಲ್ಲಿ ವ್ಯತ್ಯಾಸ ಬಂದೇ ಬರುತ್ತದೆ. ಆದರೂ ನೆನಪಿಡಿ, ಒಂದು ವೇಳೆ ಈ ಚಿಕ್ಕ ಭಿನ್ನಾಭಿಪ್ರಾಯಗಳ ಬಗ್ಗೆ ಈ ನಾಲ್ಕು ಗೋಡೆಗಳ ಹೊರಗೆಲ್ಲಾದರೂ ಉಲ್ಲೇಖವೆತ್ತಿದಿರೋ, ನೀವೇ ನಿಮ್ಮ ಕೈಯಾರೆ ನಿಮ್ಮ ಕೊಳಕನ್ನು ಸಮಾಜದ ಎದುರು ಪ್ರದರ್ಶಿಸಿದಂತಾಗುತ್ತದೆ. ಬೆಂಗಳೂರಿನಲ್ಲಿ ಸ್ಥಿತ ಇನ್ನೋರ್ವ ಮನಃಶಾಸ್ತ್ರಜ್ಞೆ ಮಂದಿರಾ ಮಾಥುರ್ ರವರ ಪ್ರಕಾರ "ನೆನಪಿಡಿ, ತನ್ನ ತಂದೆ ತಾಯಿಯರ ಬಗ್ಗೆ ಆತನಿಗೆ ಅಪಾರವಾದ ಅಭಿಮಾನ ಪ್ರೀತಿ ಇರುತ್ತದೆ. ಆತನ ಬೆನ್ನಿನ ಹಿಂದೆ ನೀವು ಹೊರಗೆಡವುವ ಒಂದು ಚಿಕ್ಕ ಭಿನ್ನಭಿಪ್ರಾಯದ ಸಂಗತಿಯೂ ನೀವು ನಿಮ್ಮ ಸಂಗಾತಿಗೆ ಎಸಗುವ ಸ್ಪಷ್ಟವಾದ ನಂಬಿಕೆದ್ರೋಹವಾಗಿದೆ. ಒಂದು ವೇಳೆ ನಿಮ್ಮ ತಂದೆ ತಾಯಿಯರ ಬಗ್ಗೆ ನೀವು ಇಟ್ಟಿರುವ ಅಭಿಮಾನಕ್ಕೆ ಕುಂದಾಗುವ ಯಾವುದೇ ಮಾತನ್ನು ಆತ ನಿಮ್ಮ ಬೆನ್ನ ಹಿಂದೆ ಹೇಳಿದ್ದರೆ ನೀವು ಸಹಿಸಿಕೊಳ್ಳುತ್ತಿದ್ದೀರಾ? ಒಂದು ವೇಳೆ ಈ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳುವ ಇರಾದೆ ನಿಮಗಿದ್ದರೆ ಈ ವಿಷಯವನ್ನು ನೀವೆಲ್ಲರೂ ಒಂದೆಡೆ ಇರುವ ಸಮಯದಲ್ಲಿ ನೇರವಾಗಿ ಕೇಳಿ ಪರಿಹರಿಸಿಕೊಳ್ಳುವುದೇ ಜಾಣತನ ಮಾತ್ರವಲ್ಲ, ಇದರಿಂದ ನಿಮ್ಮ ಬಗ್ಗೆ ಆತನಿಗೆ ಗೌರವ-ಅಭಿಮಾನಗಳೂ ಹೆಚ್ಚುತ್ತವೆ".

ಆರ್ಥಿಕ ಸಂಗತಿಗಳು:

ಆರ್ಥಿಕ ಸಂಗತಿಗಳು:

ಒಂದು ವೇಳೆ ನಿಮ್ಮ ಸಂಗಾತಿ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರೆ, ಈಗ ತಾನೇ ಕೆಲಸವನ್ನು ಕಳೆದುಕೊಂಡಿದ್ದರೆ ಅಥವಾ ತಪ್ಪು ಹೂಡಿಕೆಯಿಂದ ನಷ್ಟ ಅನುಭವಿಸುತ್ತಿದ್ದರೆ ಈ ಸಂಗತಿಗಳನ್ನು ಎಂದಿಗೂ ಬೇರೆಯವರಲ್ಲಿ ಹೇಳಬಾರದು, ಬದಲಿಗೆ ಇದನ್ನು ಪರಿಹರಿಸಲು ಆತನೊಂದಿಗೇ ನೇರವಾಗಿ ಸಮಾಲೋಚಿಸುವುದು ಉತ್ತಮ. ಒಂದು ವೇಳೆ ಈ ಬಗ್ಗೆ ನಿಮ್ಮ ಸ್ನೇಹಿತವೃಂದದಲ್ಲಿ ನೀವು ಯಾವುದೇ ದುರುದ್ದೇಶವಿಲ್ಲದೇ ಯಾವುದಾದರೂ ಸೂಕ್ತ ಸಲಹೆ ಸಿಗಬಹುದೆಂಬ ಆಶಯದಿಂದಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇ ಆದರೆ ನೀವು ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೀರೆಂದು ನಿಮಗೆ ಗೊತ್ತಿರಲಾರದು! ಈ ಮೂಲಕ ಸಮಾಜದಲ್ಲಿ ಆತನ ಘನತೆಯನ್ನು ನೀವಾಗಿ ಕುಂದಿಸುತ್ತಿರುವುದು ಮಾತ್ರವಲ್ಲ, ಹರಟೆಮಲ್ಲರ ನಡುವೆ ಆತನನ್ನು ಅವಹೇಳನ ಮಾಡಿಕೊಂಡು ಅಪಹಾಸ್ಯಮಾಡಲು ನೀವೇ ಪರೋಕ್ಷವಾಗಿ ಕಾರಣರಾಗುತ್ತೀರಿ! ಈ ಅನುಭವದ ಬಗ್ಗೆ ಮೂವತ್ತೊಂದು ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಊರ್ವಶಿ ರಾಂ ರವರು ಹೀಗೆ ಹೇಳುತ್ತಾರೆ "ನನ್ನ ಪತಿ ಉದ್ಯೋಗದಲ್ಲಿದ್ದ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದ್ದ ಕಾರಣ ಅನಿವಾರ್ಯವಾಗಿ ಕೆಲವರನ್ನು ಕೆಲಸದಿಂದ ತೆಗೆದರೆ ಉಳಿದವರಿಗೆ ವೇತನಗಳನ್ನು ಕಡಿಮೆ ಮಾಡಲಾಗಿತ್ತು. ಅರ್ಧ ವೇತನದಲ್ಲಿ ನಿತ್ಯಜೀವನದ ಖರ್ಚುಗಳನ್ನು ಹೇಗೆ ನಿಭಾಯಿಸುವುದು ಎಂದು ನಮಗೆ ಚಿಂತೆಯಾಗಿತ್ತು. ಅದು ಅತ್ಯಂತ ಕಷ್ಟದ ದಿನಗಳಾಗಿದ್ದು ಮಾನಸಿಕ ಒತ್ತಡವೂ ಹೆಚ್ಚಾಗಿತ್ತು. ಆದರೆ ಈ ವಿಷಯ ಸಾರ್ವಜನಿಕವಾಗಕೂಡದು ಎಂದು ನನ್ನ ಪತಿಯ ಇಚ್ಛೆಯಾಗಿತ್ತು. ಹಾಗಾಗಿ ನಾನು ಈ ವಿಷಯವನ್ನು ನನ್ನಿಂದ ಎಲ್ಲೂ ಹೊರಹೋಗಬಾರದು ಎಂದು ಎಚ್ಚರಿಕೆ ವಹಿಸಿದ್ದೆ, ವಿಶೇಷವಾಗಿ ನನ್ನ ಸ್ನೇಹಿತೆಯರ ವೃಂದದಲ್ಲಿ ಈ ಬಗ್ಗೆ ಉಲ್ಲೇಖವಾಗದಂತೆ ಎಚ್ಚರ ವಹಿಸಿದೆ. ಬಳಿಕ ನಾವು ಆರ್ಥಿಕ ತಜ್ಞರೊಬ್ಬರಲ್ಲಿ ಸಲಹೆ ಪಡೆಯಲು ಹೋದೆವು ಹಾಗೂ ಅವರು ನಮಗೆ ಅನುಕಂಪ ಅಥವಾ ದಯೆ ತೋರಿ ಸಾಂತ್ವಾನಿಸುವ ಬದಲು ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ಕೆಲವಾರು ಅಮೂಲ್ಯ ಸಲಹೆಗಳನ್ನು ನೀಡಿದರು.

ನಿಮ್ಮ ಲೈಂಗಿಕ ಜೀವನದ ಬಗ್ಗೆ ಸ್ಪಷ್ಟವಾದ ಹೇಳಿಕೆಗಳು

ನಿಮ್ಮ ಲೈಂಗಿಕ ಜೀವನದ ಬಗ್ಗೆ ಸ್ಪಷ್ಟವಾದ ಹೇಳಿಕೆಗಳು

ಲೈಂಗಿಕ ಜೀವನ ರೋಚಕವಾಗಿರಬೇಕು ಹೌದು, ಇದಕ್ಕಾಗಿ ನೀವು ಕೈಗೊಳ್ಳುವ ಕೆಲವು ಚಿಕ್ಕ ಪುಟ್ಟ, ನಿರಾಪಾಯಕರವಾದ ಸಂಗತಿಗಳು, ಉದಾಹರಣೆಗೆ ವಿವಾಹ ವಾರ್ಷಿಕೋತ್ಸವಕ್ಕಾಗಿ ನೀವು ಕೊಂಡ ಮಾದಕ ಒಳ ಉಡುಪು ಅಥವಾ ವಾರಾಂತ್ಯದಲ್ಲಿ ನೀವು ಜೊತೆಯಾಗಿ ಎಲ್ಲಿ ಹೋಗುತ್ತಿದ್ದೀರಿ ಎಂಬ ಮಾಹಿತಿಗಳನ್ನು ನಿಮ್ಮ ಸ್ನೇಹಿತವೃಂದದಲ್ಲಿ ಹಂಚಿಕೊಂದರೆ ಅಪಾಯವಿಲ್ಲ. ಆದರೆ ನಿಮ್ಮ ಲೈಂಗಿಕ ಜೀವನದ ಅತ್ಯಂತ ಆಪ್ತವಾದ ಕ್ಷಣಗಳ ಯಾವುದೇ ಸ್ಪಷ್ಟವಾದ ಹೇಳಿಕೆಯನ್ನು ನೀಡುವುದು ನಿಮ್ಮ ಅನ್ಯೋನ್ಯತೆಗೆ ಮಾಡುವ ದ್ರೋಹವಾಗಿದೆ ಹಾಗೂ ನಿಮ್ಮ ಸಂಗಾತಿಯನ್ನು ಭಾರೀ ಮುಜುಗರಕ್ಕೀಡು ಮಾಡಬಹುದು. "ಲೈಂಗಿಕತೆ ಎಂಬುದು ದಂಪತಿಗಳ ನಡುವೆ ನಡೆಯುವ ಅತ್ಯಂತ ಖಾಸಗಿ ವಿಷಯವಾಗಿದ್ದು ನಿಮ್ಮ ಶಯನಗೃಹದಲ್ಲಿ ನಡೆಯುವ ಯಾವುದೇ ಸಂಗತಿಗಳು ಇಬ್ಬರ ಒಳ್ಳೆಯದಕ್ಕೇ ಇರುತ್ತದೆ. ಈ ಆಪ್ತ ಕ್ಷಣಗಳಲ್ಲಿ ಕೇವಲ ನೀವಿಬ್ಬರೇ ಇರಬೇಕೇ ವಿನಃ ಮೂರನೆಯವರಿಗಿಲ್ಲಿ ಅವಕಾಶವಿಲ್ಲ. ಲೈಂಗಿಕ ಚಟುವಟಿಕೆಯಲ್ಲಿ ಮುನ್ನಲಿವು, ಸಮ್ಮಿಲನದ ಜೊತೆಗೇ ಪರಸ್ಪರರ ಈ ಮೇಲ್ ಗಳನ್ನು ಹಂಚಿಕೊಳ್ಳುವುದು, ಪ್ರಣಯದ ವಿಷಯದಲ್ಲಿ ಪರಸ್ಪರರಿಗೆ ಮುದನೀಡುವ ಯಾವುದೇ ವೈಪರೀತ್ಯ ಮೊದಲಾದವು ಯಾವುದೇ ಇರಬಹುದು. ಒಂದು ವೇಳೆ ಈ ಖಾಸಗಿ ಕ್ಷಣಗಳ ಬಗ್ಗೆ ನೀವು ಉಲ್ಲೇಖಿಸಿದ ಯಾವುದೇ ಮಾಹಿತಿ ನಿಮ್ಮ ಸಂಗಾತಿಗೆ ಇನ್ನೊಬ್ಬರಿಂದ ತಿಳಿದರೆ ಅಥವಾ ಆತ ತನ್ನ ಸ್ನೇಹಿತವೃಂದದಲ್ಲಿ ಉಲ್ಲೇಖಿಸಿದ ವಿಷಯಗಳು ನಿಮಗೆ ತಿಳಿದುಬಂದರೆ ನಿಮ್ಮ ನಡುವಣ ನಂಬಿಕೆಯ ಸಂಕೋಲೆಯೇ ಶಿಥಿಲವಾಗಬಹುದು" ಎಂದು ಮಾಥುರ್ ರವರು ಎಚ್ಚರಿಸುತ್ತಾರೆ.

ಆತ ನಿಮ್ಮ ಸ್ನೇಹಿತೆಯರ ಬಗ್ಗೆ ಏನು ಹೇಳುತ್ತಾನೆ ಎಂಬುದು:

ಆತ ನಿಮ್ಮ ಸ್ನೇಹಿತೆಯರ ಬಗ್ಗೆ ಏನು ಹೇಳುತ್ತಾನೆ ಎಂಬುದು:

ಈ ವಿಷಯವನ್ನು ನೀವು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕಾಗುತ್ತದೆ. ಒಂದು ವೇಳೆ ಆತನಿಗೆ ನಿಮ್ಮ ಸ್ನೇಹಿತೆಯರ ಬಗ್ಗೆ ಸದಭಿಪ್ರಾಯವಿಲ್ಲದಿದ್ದರೆ ಈ ವಿಷಯವನ್ನು ಎಂದಿಗೂ ನಿಮ್ಮ ಸ್ನೇಹಿತೆಯರಲ್ಲಿ ಉಲ್ಲೇಖಿಸಕೂಡದು! ಈ ವಿಷಯವನ್ನು ಆತ ನಿಮ್ಮಲ್ಲಿ ಏಕೆ ಹೇಳಿಕೊಂಡಿದ್ದಾನೆ ಎಂದರೆ ಆತನಿಗೆ ನಿಮ್ಮಲ್ಲಿ ಅಪಾರ ವಿಶ್ವಾಸವಿದೆ ಹಾಗೂ ತನ್ನ ವೈಯಕ್ತಿಕ ಮತ್ತು ತನ್ನ ದೃಷ್ಟಿಯಿಂದ ಕಂಡ ಪ್ರಾಮಾಣಿಕ ಅಭಿಪ್ರಾಯವನ್ನು ನಿಮ್ಮಲ್ಲಿ ಹಂಚಿಕೊಂಡಿದ್ದಾನೆ. ನೀವು ಈ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಕೂಡದು! ದಂಪತಿಗಳ ನಡುವೆ ಈ ವಿಶ್ವಾಸ, ಅನ್ಯೋನ್ಯತೆಯೇ ಅತ್ಯಂತ ದೊಡ್ಡ ಆಸ್ತಿಯಾಗಿದೆ. ಈ ಬಗ್ಗೆ ನೀವು ತಪ್ಪಿಯಾದರೂ ಸ್ನೇಹಿತವೃಂದದಲ್ಲಿ ಉಲ್ಲೇಖಿಸಿದಿರೋ, ಇದು ಎಷ್ಟು ಘೋರ ಪರಿಣಾಮ ಬೀರಬಹುದೆಂದು ನೀವು ಊಹಿಸಲಾರಿರಿ! ಈ ಅಭಿಪ್ರಾಯಗಳು ಸಂಬಂಧಿತರಲ್ಲಿ ಸೇಡಿನ ಮನೋಭಾವ ಹುಟ್ಟುಹಾಕಬಹುದು ಹಾಗೂ ಇದರಿಂದ ನಿಮಗೇ ಗರಿಷ್ಟ ನಷ್ಟವಾಗುತ್ತದೆ. ನಿಮ್ಮ ಸಂಸಾರಿಕ ಮತ್ತು ಸ್ನೇಹಿತೆಯರೊಡನೆ ಜೀವನವನ್ನು ಸಮತೋಲನಗೊಳಿಸಲು ಭಾರೀ ತ್ರಾಸು ಎದುರಿಸಬೇಕಾಗುತ್ತದೆ.

ನಿಮ್ಮ ಜಗಳ ಬಗ್ಗೆ ಎಲ್ಲಾ ವಿವರಗಳನ್ನು ನೀಡುವುದು:

ನಿಮ್ಮ ಜಗಳ ಬಗ್ಗೆ ಎಲ್ಲಾ ವಿವರಗಳನ್ನು ನೀಡುವುದು:

ದಾಂಪತ್ಯದಲ್ಲಿ ಜಗಳವೂ ಇರಬೇಕು, ಆಗಲೇ ಊಟದಲ್ಲಿ ಉಪ್ಪಿನಕಾಯಿಯಂತೆ ಜೀವನ ಸ್ವಾರಸ್ಯಕರವಾಗಿರುತ್ತದೆ. ಆದರೆ ಈ ಜಗಳಗಳ ವಿವರಗಳನ್ನು ಜಗತ್ತಿಗೆಲ್ಲಾ ತಿಳಿಸುವುದು ಅಗತ್ಯವಿಲ್ಲ. ಈ ಜಗತ್ತಿನಲ್ಲಿ ಜಗಳವಾಡದ ದಂಪತಿಗಳೇ ಇಲ್ಲ. ಹಾಗೆಂದ ಮಾತ್ರಕ್ಕೆ ಜಗತ್ತಿನ ದಂಪತಿಗಳ ಜಗಳದ ವಿವರಗಳೆಲ್ಲಾ ಎಲ್ಲರಿಗೂ ತಿಳಿದಿರಲು ಸಾಧ್ಯವಿಲ್ಲ. "ದಂಪತಿಗಳ ನಡುವೆ ಎದುರಾಗುವ ಭಿನ್ನಾಭಿಪ್ರಾಯ, ಜಗಳದಿಂದ ಕೆಲವು ಕಹಿಸತ್ಯಗಳು ಬಹಿರಂಗವಾಗುತ್ತವೆ. ಸಿಟ್ಟಿನ ಭರದಲ್ಲಿ ಸಂಗಾತಿಯ ಬಗ್ಗೆ ಇರುವ ಯಾವುದೋ ವಿಷಯ ಹೊರಬರುತ್ತದೆ. ಆದರೆ ಈ ವಿಷಯಗಳನ್ನು ಸ್ನೇಹಿತರೊಂದಿಗೆ ಉಲ್ಲೇಖಿಸಿದರೆ ಇದು ನಿಮ್ಮ ದಾಂಪತ್ಯದಲ್ಲಿ ನಿಮ್ಮ ದೃಷ್ಟಿಯಿಂದ ಕಾಣುವ ತೊಂದರೆಯೇ ಅವರಿಗೆ ಕಾಣುತ್ತದೆ ಹಾಗೂ ಇವರಿಗೆ ನಿಮ್ಮ ಸಂಗಾತಿಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ದಂಪತಿಗಳ ನಡುವಣ ಜಗಳದ ಪರಿಹಾರವನ್ನೂ ಅವರಿಗೇ ಬಿಟ್ಟರೆ ಒಳಿತು. ಅಷ್ಟಕ್ಕೂ ಗಂಡಹೆಂಡಿರ ಜಗಳ ಉಂಡು ಮಲಗುವ ತನಕ" ಎಂಬ ಗಾದೆಯೇ ಇಲ್ಲವೇ? ನಿಮ್ಮ ಸ್ನೇಹಿತರೇನೂ ಈ ವಿಷಯ ಅರಿತುಕೊಳ್ಳುವುದರಿಂದ ನಿಮ್ಮ ಸಮಸ್ಯೆ ಪರಿಹಾರಗೊಳ್ಳಲು ನೆರವಾಗುತ್ತಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಹಾಗಿದ್ದರೆ ನಿಮ್ಮ ಜಗಳದ ವಿವರಗಳನ್ನು ಜಗತ್ತಿಗೆ ನೀಡುವ ಅಗತ್ಯವೇನಿದೆ? ಬದಲಿಗೆ ನೀವು ಹಿರಿಯರ ಅಥವಾ ಈ ಬಗ್ಗೆ ಅನುಭವವುಳ್ಳ ತಜ್ಞರ ನೆರವನ್ನೇಕೆ ಪಡೆಯಬಾರದು?.

ನೀವು ಈ ಬಗ್ಗೆ ಯಾವ ಸಹಾಯ ಪಡೆಯಬಹುದು?

ನೀವು ಈ ಬಗ್ಗೆ ಯಾವ ಸಹಾಯ ಪಡೆಯಬಹುದು?

ನಿಮ್ಮ ಸಂಬಂಧದ ಬಗ್ಗೆ ನೀವು ಹಲವು ವಿವರಗಳನ್ನು ನಿಮ್ಮಲ್ಲೇ ಉಳಿಸಿಕೊಳ್ಳುವುದು ಉತ್ತಮವೇ ಸರಿ. ಒಂದು ವೇಳೆ ನಿಮ್ಮ ಸಂಗಾತಿಯನ್ನು ಕುರಿತಾದ ವಿಷಯವೊಂದು ನಿಮ್ಮನ್ನು ಅತಿಯಾಗಿ ಕಾಡುತ್ತಿದ್ದರೆ ಹಾಗೂ ಇದಕ್ಕೆ ನಿಮ್ಮ ಕುಟುಂಬ ಸದಸ್ಯರು ಅಥವಾ ತಜ್ಞರು ಅಥವಾ ಮಾನಸಿಕ ಸಮಾಲೋಚಕರೊಂದಿಗೆ ಉಲ್ಲೇಖಿಸಿ ಸೂಕ್ತ ಪರಿಹಾರವನ್ನು ಪಡೆಯುವುದು ಒಳಿತು.

ಈ ವಿಷಯಗಳಲ್ಲಿ ಸಾಮಾನ್ಯವಾಗಿ ಒಳಗೊಳ್ಳುವ ಅಂಶಗಳೆಂದರೆ:

- ದೈಹಿಕ ಅಥವಾ ಮಾನಸಿಕವಾಗಿ ನೀಡುತ್ತಿರುವ ಪೀಡನೆ/ಹಿಂಸೆ

_ ವಸ್ತುವೊಂದನ್ನು ಬಳಸಿ ನೀಡುವ ಹಿಂಸೆ

- ದಾಂಪತ್ಯ ದ್ರೋಹ

- ಮನೋಭಾವದಲ್ಲಿ ತೀವ್ರತರದ ಏರುಪೇರು ಅಥವಾ ಮಾನಸಿಕ ಆರೋಗ್ಯ ಸಂಬಂಧಿತ ತೊಂದರೆಗಳು

- ವೈದ್ಯರ ಸಲಹೆಯನ್ನು ಪಡೆಯಲೇಬೇಕಾದ ದೈಹಿಕ ಕಾಯಿಲೆಗಳು.

English summary

Things Should Not Share With Your Friends About Your Relationship

There are certain things that your friends just don’t need to know. For good and bad, better or worse, the finer details of your most important relationship needs to stay in house.
X
Desktop Bottom Promotion