For Quick Alerts
ALLOW NOTIFICATIONS  
For Daily Alerts

ಸ್ನೇಹಕ್ಕೇಕೆ ಶಾಸ್ತ್ರದ ಹಂಗು !!

By ಪೂರ್ಣಿಮಾ ಹೆಗಡೆ
|

ಪಂಡಿತರ ಮಗಳು, ಶಿಷ್ಠಾಚಾರ ಚೆನ್ನಾಗಿ ಗೊತ್ತಿರಬೇಕು. ಬೆಳಗ್ಗೆ ಎದ್ದು ರಂಗೋಲಿ ಹಾಕಿ, ತುಳುಸಿ ಕಟ್ಟೆ ಸುತ್ತಿ ಬಂದು ಅಮ್ಮನಿಗೆ ಸ್ವಲ್ಪ ದೋಸೆ ಮಾಡಲೂ ಸಹಾಯ ಮಾಡಿ ನಂತರವಷ್ಟೇ ಕಾಲೇಜಿನ ದಾರಿ ಹಿಡಿಯಬಹುದು. ಹಾಗಂತ ಕಾಲೇಜಿಗೆ ಜೀನ್ಸ್ ಪ್ಯಾಂಟ್ ಅಥವಾ ಬೇರೆ ಯಾವುದೇ ಆಧುನಿಕ ಬಟ್ಟೆ ಹಾಕ್ಕೊಳ್ಳೊ ಕನಸು ಕಂಡ್ರೂ ಶಿಕ್ಷೆ ಕಟ್ಟಿಟ್ಟ ಬುತ್ತಿ. ಲಂಗ ದಾವಣೀ ತುಸು ಹಳೆಯದ್ದಾದ್ದರಿಂದ ಚೂಡಿದಾರದವರೆಗೂ ಪಂಡಿತರ ಸಂಪ್ರದಾಯ ಅನುಮತಿ ನೀಡಿತ್ತು.

ಅಂದಹಾಗೆ ಗಂಡುಮಕ್ಕಳೊಂದಿಗಿನ ಸ್ನೇಹ ಬಿಡಿ, ಬೇರೆ ಜಾತಿ ಹುಡುಗಿಯರ ಸ್ನೇಹ ಕೂಡ ಮೈಲಿಗೆಯೇ!ಅದ್ಯಾವ ಸೀಮೆ ಜನ? ಬಹುಶಃ ನೂರು ದಶಕಗಳ ಹಿಂದಿನವರಿರಬಹುದು ಎಂದೆಲ್ಲ ಅಂದುಕೊಳ್ಳಬೇಡಿ. ಇದು ಇಪ್ಪತ್ತೊಂದನೇ ಶತಮಾನದ ಕಥೆ! ನನ್ನ ಸ್ನೇಹಿತೆ ಸುಮನಗೌರಿಯದು (ನಾವು 'ಗೌ' ಎಂದಷ್ಟೇ ಕರೆಯುತ್ತೇವೆ). ಆಕೆಯ ಒಪ್ಪಿಗೆಯ ಮೇರೆಗೆ ಅವಳ ಪರಿಚಯವನ್ನು ನಿಮಗೂ ಮಾಡುತ್ತಿದ್ದೇನೆ.

 Friendship Day Special Story

ಪಂಡಿತರ ಘನತೆ- ಗೌರವ ಉಳಿಸಲು ಹುಟ್ಟಿದ ಏಕೈಕ ಮಗಳು ಸುಮನಗೌರಿ. ಶಿಷ್ಠಾಚಾರ, ಶಿಸ್ತು, ಸಂಪ್ರದಾಯಗಳು ಊಟದಲ್ಲಿ ಉಪ್ಪು ಬೆರೆತ ಹಾಗೇ ಅವಳ ಜೀವನದಲ್ಲಿ ಬೆರೆತಿದೆ. ತರಾವರಿ ಶ್ಲೋಕಗಳು, ಪುರಾಣ ಪಾಂಡಿತ್ಯಗಳು ಅಪ್ಪನಿಂದ ಸಹಜವಾಗಿಯೇ ಆಕೆಗೆ ವರವಾಗಿ ಬಂದಿವೆ. ಅಪ್ಪ ಹಾಕಿದ ಲಕ್ಷ್ಮಣ ರೇಖೆಯನ್ನು ದಾಟುವ ಪ್ರಯತ್ನಮಾಡದಿದ್ದರೂ ಅಧ್ಹೇಗೋ ಕಾಲೇಜು ಮೆಟ್ಟಿಲು ಹತ್ತುವ ಸೌಭಾಗ್ಯ ಅವಳದಾಗಿತ್ತು. ಅತ್ಯಂತ ಬುದ್ಧಿವಂತೆಯಾದ ಗೌರಿ ಕಾಲೇಜಿಗೆ ಬರುತ್ತಿದ್ದುದು ಬೆಳಿಗ್ಗೆ ತರಗತಿ ಆರಂಭವಾಗುವ ಎರಡು ನಿಮಿಷ ಮೊದಲು ಹಾಗೂ ತರಗತಿ ಮುಗಿದ ಅರೆಗಳಿಗೆಯಲ್ಲಿ ಕಾಲೇಜಿನಿಂದ ಅಷ್ಟು ದೂರದಲ್ಲಿ ನಡೆದು ಹೋಗುತ್ತಿರುವುದು ಕಾಣುತ್ತಿತ್ತು! ಹಾಗೆಂದ ಮಾತ್ರಕ್ಕೆ ಆಕೆ ಯಾರ ಬಳಿಯೂ ಮಾತನಾಡುತ್ತಿರಲಿಲ್ಲವೆಂದಲ್ಲ. ಪಂಡಿತರೆ ಖುದ್ದಾಗಿ ಶ್ಯಾಮ ಶಾಸ್ತ್ರೀಯ ಮಗಳನ್ನು ಪರಿಚಯ ಮಾಡಿಸಿ ಸ್ನೇಹಿತರನ್ನಾಗಿಸಿದ್ದರು. ಒಟ್ಟಿಗೇ ತರಗತಿಯಲ್ಲಿ ಕುಳಿತಿರುವ ಗೆಳತಿಯರು ಅನ್ಯೂನ್ಯವಾಗಿಯೇ ಇದ್ದರು. (ಈಗಲೂ)

ಪದವಿಯ ಕೊನೇಯ ವರ್ಷ .. ಕಳೆದ ಎರಡು ವರ್ಷಗಳಲ್ಲಿ ನಡೆಯದ ಯಾವುದೇ ಬದಲಾವಣೆ ಕೊನೆಯ ವರ್ಷ ಅಗತ್ಯಕ್ಕಿಂತ ಹೆಚ್ಚಾಗಿಯೇ ನಡೆಯಿತು! ರಾಜೇಶ್ ಅದೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಪೋಲಿಯಂತೂ ಅಲ್ಲವೇ ಅಲ್ಲ. ಆದರೂ ಆತ ತರಗತಿಗೆ ಬಂದಿದ್ದನ್ನು ಯಾರೂ ನೋಡಲೇ ಇಲ್ಲ. ಆದರೂ ಉತ್ತಮ ಅಂಕಗಳಂತೂ ಗಿಟ್ಟಿಸಿಕೊಳ್ಳುತ್ತಿದ್ದ. ಅದೊಂದು ದಿನ ಬೇಸಿಗೆಯಲ್ಲಿ ಅಚಾನಕ್ಕಾಗಿ ಬಂದ ಮಿಂಚಿನಂತೆ ತರಗತಿಗೆ ಬಂದು ಕೂತಿದ್ದ. ಆದರೆ ಗೌರಿಯ ಗ್ರಹಚಾರ ಅಂದೇ ಕೆಟ್ಟಿರಬೇಕು. ಯಾಕೆಂದರೆ, ಅಂದು ಪಾಠ ಮಾಡುತ್ತಿದ್ದದ್ದು ಉಪನ್ಯಾಸಕರ ಬದಲಿಗೆ ನಮ್ಮ ಗೌರಿ!

ಆಕೆಯ ಪಾಠವನ್ನು ಕೇಳಿ ಗೌರಿಯ ಬೆನ್ನು ಹತ್ತಿದ ರಾಜೇಶ್ ಅವಳಿಗೆ ಸಂಕಟವಾಗಿ ಕಾಡತೊಡಗಿದ! ಹುಡುಗರಲ್ಲಿ ಮಾತನಾಡುವುದೇ ಅಪರಾಧ ಎಂದುಕೊಂಡಿದ್ದವಳಿಗೆ ನೂರಾರು ಕಾರಣಗಳನ್ನು ಹೇಳಿ ದಿನವೂ ಮಾತನಾಡಿಸುತ್ತಿದ್ದ. ಅಷ್ಟೇ ಅಲ್ಲ ಹಾಜರಾತಿ ಪುಸ್ತಕದಲ್ಲಿ 'ರಾಜೇಶ್' ಹೆಸರೂ ಸೇರ್ಪಡೆಯಾಗಿತ್ತು! ಗೌರಿಯಲ್ಲಿ ಪಾಠ ಕೇಳುವುದಕ್ಕೋ, ಪೆನ್, ಪುಸ್ತಕ, ನೋಟ್ಸ್ ಹೀಗೆ ಮಾತನಾಡಿಸಲೆಂದೇ ಕಾರಣಗಳನ್ನು ಹುಡುಕುತ್ತಿದ್ದ. ಕೆಲವು ದಿನಗಳ ಬಳಿಕ ಆಕೆಗೂ ಅದು ಸಹಜವಾಗಿ ಆತನಲ್ಲಿ ಮಾತನಾಡಲು ಆರಂಭಿಸಿದ್ದಳು. ಇಷ್ಟೇಲ್ಲ ಆದರೂ ಪಂಡಿತರ ಗಮನಕ್ಕೆ ಬಂದಿಲ್ಲವೆಂದುಕೊಳ್ಳಬೇಡಿ. 'ಕಂಡರಾಗದವನು ಬೆಣ್ಣೆಯಲ್ಲೂ ಕಲ್ಲು ತೆಗೆದಂತೆ' ಗೌರಿ ಜೀವನಕ್ಕೂ ಬತ್ತಿ ಇಡುವವರು ಆಕೆಯ ಸುತ್ತಲೂ ಇದ್ದರು. ಪಂಡಿತರ ಕಿವಿಗೆ ಈ ವಿಚಾರ ಗೊತ್ತಾಗಿದ್ದರೂ ಅವರಲ್ಲಿ ಅಂತಹ ಕ್ರೋಧವೇನೂ ಮೂಡಿರಲಿಲ್ಲ. ಆದರೂ ಆತ ಪರಜಾತಿ .. ಆತನೊಂದಿಗಿನ ಸ್ನೇಹ ...

ಪಂಡಿತರ ಮನಸ್ಸಿನಲ್ಲಿ ಯಾರೋ ಬಿತ್ತಿದ ವಿಷದ ಬೀಜ ಮರವಾಗಿ ಬೆಳೆದು ಗೌರಿಯ ಮೇಲೆ ನಿಧಾನವಾಗಿ ಪರಿಣಾಮ ಬೀರತೊಡಗಿತು. ಆದರೆ ಅದರ ಬಿಸಿ ಗೌರಿ ಹಾಗೂ ರಾಜೇಶ್ ನ ಸ್ನೇಹಕ್ಕೆ ತಟ್ಟಲೇ ಇಲ್ಲ! ಪದವಿ ತರಗತಿಯ ಕೊನೆಯ ಪರೀಕ್ಷೆ. ದೇವರಿಗೂ, ಪಾಲಕರಿಗೂ ಕೈಮುಗಿದು ಹೊರಟ ಗೌರಿಗೆ ತಾನು ಬಿಟ್ಟು ಹೋಗಿದ್ದ ಹಾಲ್ ಟಿಕೇಟ್ ಗಮನಕ್ಕೆ ಬಂದಿರಲೇ ಇಲ್ಲ. ಎಲ್ಲರೂ ಪರೀಕ್ಷೆ ಹಾಲಿನಲ್ಲಿದ್ದಾರೆ. ಇನ್ನೇನು ಪರೀಕ್ಷೆ ಆರಂಭವಾಗಲಿದೆ. ಗೌರಿಯ ಬಳಿ ನಿಂತು ಹಾಲ್ ಟಿಕೇಟ್ ಎಂದು ಕೇಳಿದ ಉಪನ್ಯಾಸಕರಿಗೆ ಗೌರಿಯ ಪೇಚು ಮೊರೆಯೊಂದೇ ಉತ್ತರ! ಆಗಲೇ ಆಕೆಯ ಗಮನಕ್ಕೆ ಬಂದಿದ್ದು ತನ್ನಲ್ಲಿ ಹಾಲ್ ಟಿಕೇಟ್ ಇಲ್ಲವೆನ್ನುವ ವಿಷಯ.

ಇನ್ನೇನು ಉಪನ್ಯಾಸಕರು ಗೌರಿಯನ್ನು ಹೊರಗೆ ಹಾಕಬೇಕು ಎನ್ನುವಷ್ಟರಲ್ಲಿ ರಾಜೇಶ್ ಪರೀಕ್ಷೆ ಹಾಲ್ ಬಿಟ್ಟು ಹೊರ ಓಡಿದ್ದ. ಉಪನ್ಯಾಸಕ ಮನವೊಲಿಸಿ ಗೌರಿಗೆ ಪರೀಕ್ಷೆ ಬರೆಯಲೂ ಅನುಮತಿ ಕೊಡಿಸಿದ್ದ. ಸ್ವಲ್ವ ಸಮಯದಲ್ಲೇ ಹಾಲ್ ಟಿಕೇಟ್ ತಂದು ಕೊಟ್ಟ ರಾಜೇಶ್ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ!

ಪಂಡಿತರ ಕಣ್ಣಲ್ಲಿ ಈಗಲೂ ನೀರಿದೆ.. ತನ್ನ ಇದುವರೆಗಿನ ಯಾವ ಶಾಸ್ತ್ರವೂ ರಾಜೇಶ್ ನಂತಹ ಒಬ್ಬನನ್ನೂ ಸೃಷ್ಟಿಸಿಲ್ಲ ಎಂಬ ಕಾರಣಕ್ಕೆ. ಇದುವರೆಗೂ ಸೋಲು ಅನುಭವಿಸದ ರಾಜೇಶ್ ಆ ಪರೀಕ್ಷೆಯಲ್ಲಿ ಸರಿಯಾಗಿ ಬರೆಯಲಾಗದೇ ಒಂದು ವರ್ಷದ ಅವನ ಭವಿಷ್ಯವೂ ನಾಶವಾಗಿತ್ತು!

ರಾಜೇಶ್ ಗೌರಿ ಹಾಗೂ ನಾನು ಪೋನ್ ನಲ್ಲೇ ಈ ವಿಷಯಗಳನ್ನೇಲ್ಲಾ ನಿನ್ನೆಯೇ ಮಾತನಾಡಿದ್ದೆವು. ಅದನ್ನು ನಿಮಗೂ ಹೇಳುವ ಹಂಬಲದಿಂದ ಬರವಣಿಗೆಯ ಒಂದಿಷ್ಟು ಜಾಗವನ್ನು ಆಕ್ರಮಿಸಿಕೊಂಡಿದ್ದೇನೆ.

ಅಂದ ಹಾಗೇ .. ಗೌರಿಯ ಸ್ನೇಹಿತೆ ಶ್ಯಾಮ ಶಾಸ್ತ್ರೀಗಳ ಮಗಳು ... ನಾನೇ !!

English summary

Friendship Day Special Story

My friend Gowri belongs to orthodox family. when she joined for college her father strictly advice her not to make any friendship with other caste students. But The word Called Friendship doesn't have any boundaries.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more