For Quick Alerts
ALLOW NOTIFICATIONS  
For Daily Alerts

ನಮ್ಮ ಗೆಳತನಕ್ಕೆ ಸಾಕ್ಷಿಯಾದ ಆ ಮರ

By ರೀನಾಮಂಜು
|
My Degree Friends Group
ನಾವು ಕೂರುತ್ತಿದ್ದ ಆ ಮರವನ್ನು ESPಯವರ (ನಮ್ಮ ಕ್ಲಾಸ್ ಅನ್ನು ಹಾಗೇ ಕರೆಯುತ್ತಿದ್ದರು) ಮರ ಅಂತನೇ ಇಡೀ ಕಾಲೇಜು ಗುರುತಿಸುತ್ತಿತ್ತು. ಯಾರ ತಂಟೆಗೆ ಹೋಗಲ್ಲ, ನಾವಾಯಿತು ನಮ್ಮ ಗುಂಪು ಆಯಿತು ಅಂತ ಇದ್ದೆವು (ಒಂದು ದಿನ ಕಾಲೇಜು ಸ್ಟ್ರೈಕ್ ಆದಾಗ, ನಮ್ ಗುಂಪು ಸ್ಟ್ರೈಕ್ ಮಾಡದೆ, ಎಸ್ಕೇಪ್ ಆಗಿ ಉಪನ್ಯಾಸಕರ ಮೆಚ್ಚುಗೆಗೆ, ಉಳಿದ ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾಗಿದ್ದೆವು) .

ನಮ್ಮ ಗ್ರೂಪ್ ವಿಶ್ರಾಂತಿ ಸಮಯದಲ್ಲಿ ಆ ಮರದ ಕೆಳಗೆ ಕೂತಿರುವುದನ್ನು ನೋಡಿದ್ದ ಪ್ರಿನ್ಸಿಪಾಲರು ಒಮ್ಮೆ ನಿಮಗೋಸ್ಕರ ಇಲ್ಲಿ ಒಂದು ಬೆಂಚು ಹಾಕಿಕೊಡಲೇ ಎಂದು ಕೇಳಿದರು, ಅದಕ್ಕೆ ನಾವು 'ಇಲ್ಲ ಮೇಡಂ ನಮಗೆ ಹುಲ್ಲಿನ ಮೇಲೆ ಕೂರುವುದೇ ಇಷ್ಟ' ಅಂದಿದ್ದೆವು. ನಮ್ಮ ಕ್ಲಾಸ್ ನವರನ್ನು ಬೇರೆಲ್ಲೂ ಹುಡುಕ ಬೇಕಾಗಿರಲಿಲ್ಲ, ಆ ಮರದ ಹತ್ತಿರ ಬಂದರೆ ಸಾಕಿತ್ತು, ಒಂದು ವೇಳೆ ಬೇರೆ ವಿದ್ಯಾರ್ಥಿಗಳು ಕೂತಿದ್ದರು ನಮ್ಮನ್ನು ಕಂಡ ಕ್ಷಣ ಎದ್ದು ಹೋಗುತ್ತಿದ್ದರು, ಆ ಮರ ನಮ್ಮ ಆಸ್ತಿ ಎಂಬಂತೆ ಬ್ರಾಂಡ್ ಆಗಿತ್ತು.

ನಾವು ಸೆಕೆಂಡ್ ಇಯರ್ ಡಿಗ್ರಿಗೆ ಬಂದಾಗ ನಮ್ಮ ಗುಂಪಿನಲ್ಲಿದ್ದ ರೂಹಿಗೆ ಮದುವೆಗೆ ಹುಡುಗ ಗೊತ್ತಾಯಿತು. ಅವಳ ಮದುವೆಗೆ ಹೋಗಿದ್ದು ಮಾತ್ರ ತುಂಬಾ ಮಜವಾಗಿತ್ತು. ರೂಹಿ ಮುಸ್ಲೀಂ ಆಗಿದ್ದರಿಂದ ಅವಳ ಮದುವೆಗೆ ಬರುವವರು ತುಂಬಾ ಗ್ರ್ಯಾಂಡ್ ಡ್ರೆಸ್ ಮಾಡಿ ಬರುತ್ತಾರೆ. ಅದಕ್ಕೆ ನಾವು ತುಂಬಾ ಸಿಂಪಲ್ ಆಗಿ ಹೋಗೋಣ ಅಂತ ಹೋಗಿದ್ದೆವು. ನಮ್ಮನ್ನು ಅವಳ ಅಪ್ಪ - ಅಮ್ಮ ಜ್ಯೂಸ್ ಕುಡಿಯಿರಿ, ಫೋಟೊಕ್ಕೆ ನಿಲ್ಲಿ ಅಂತ ಸ್ವಲ್ಪ ಹೆಚ್ಚಾಗಿಯೇ ಗಮನಿಸಿದರು , ನಮ್ಮಲ್ಲಿ ಇಬ್ಬರು ಬ್ರಾಹ್ಮಣರು ಇದ್ದಿದ್ದರಿಂದ ನಾನ್ ವೆಜ್ ಊಟ ಬೇಡ ಅಂತ ತೀರ್ಮಾನಿಸಿ ಅವಳ ಮದುವೆಯಲ್ಲಿ ತಿನ್ನದೆ ಎಸ್ಕೇಪ್ ಆಗಿ ಅವಳಿಂದ ಬೈಯಿಸಿಕೊಂಡಿದ್ದೆವು. ನಂತರ ರೂಹಿ ನಮ್ಮನ್ನು ಭೇಟಿಯಾಗಿದ್ದು ಒಂದು ಮಗುವಿನ ತಾಯಿಯಾದ ಮೇಲೆ! ಒಮ್ಮೆ ಫೋನ್ ಮಾಡಿ ನಿಮ್ಮೆನೆಲ್ಲಾ ತುಂಬಾ ಮಿಸ್ ಮಾಡುತ್ತಿದ್ದೇನೆ ಎಂದು ಹೇಳಿದಳು. ಅವಳಿಗೋಸ್ಕರ ಚಿಕ್ಕ ಟ್ರಿಪ್ ಅರೇಂಜ್ ಮಾಡಿದೆವು. ರೂಹಿ ಗಂಡನ ಹತ್ತಿರ ಹೇಳಿ, ಮಗುವನ್ನು ಅವಳ ಅಮ್ಮನ ಹತ್ತಿರ ಬಿಟ್ಟು ನಮ್ಮ ಜೊತೆ ಟ್ರಿಪ್ ಗೆ ರಾಜಾಸೀಟ್ ಗೆ ಬಂದಿದ್ದಳು!

ನನ್ನ ಜೀವನದಲ್ಲಿ highest ಟ್ರಿಪ್ ಹೋಗಿದ್ದು ಡಿಗ್ರಿಗೆ ಬಂದ ಮೇಲೆ, ಪ್ರತಿ ತಿಂಗಳು ಎಲ್ಲಿಗಾದರು ಪಿಕ್ ನಿಕ್ ಹೋಗುತ್ತಿದ್ದವು. ಟ್ರಕ್ಕಿಂಗ್ ಗೆ ಹೋಗುವಾಗ ಪ್ರತಿಯೊಬ್ಬರು ಏನಾದರೂ ತಿನ್ನಲಿಕ್ಕೆ ತರುತ್ತಿದ್ದರು. ಮಂಗಳೂರಿನ ಪಿಲಿಕುಳಕ್ಕೆ ಹೋಗಿದ್ದು ಮಾತ್ರ ಎಲ್ಲಾ ಟ್ರಿಪ್ ಗಿಂತ ಭಿನ್ನವಾಗಿತ್ತು. ನಮ್ಮ ಕ್ಲಾಸ್ ನಿಂದ ಪಿಲಕುಳಕ್ಕೆ ಹೋಗಲು ಅನುಮತಿ ಕಾಲೇಜಿನಲ್ಲಿ ಕೇಳಿದಾಗ ಸಿಗಲಿಲ್ಲ, ಯಾರಾದರು ಸರ್ ಬಂದರೆ ಹೋಗಿ ಅಂದರು, ಕೊನೆಗೆ ರಾಜ್ಯಶಾಶ್ತ್ರ ಉಪನ್ಯಾಸಕರಾದ ರುಕ್ಮಯ ಸರ್ ರವರು ಬರುತ್ತೇನೆ ಎಂದರು.

ನಮ್ಮ ಮನೆಯಲ್ಲಿ ನಾವು ಸರ್ ಕೂಡ ನಮ್ಮ ಜೊತೆ ಬರುತ್ತಾರೆ ಎಂದು ಹೇಳಿ ಕಾಡಿ ಬೇಡಿ ಒಪ್ಪಿಗೆ ಪಡೆದು ಹೊರಟಿದ್ದೆವು. ಸರ್ "ನಾನು ಮನೆಗೆ ಹೋಗುತ್ತಿದ್ದೇನೆ, ಪುತ್ತೂರಿನಿಂದ ಗಾಡಿ ಹತ್ತುತ್ತೇನೆ" ಎಂದು ಹೇಳಿ ಅವರ ಮನೆಗೆ ಹೋದರು. ಇಲ್ಲಿಂದ ನಾವೆಲ್ಲಾ ಹೊರಟು ಪುತ್ತೂರು ಹತ್ತಿರ ಬಂದು ಸರ್ ನಂಬರಿಗೆ ಕಾಲ್ ಮಾಡಿದರೆ ಕನೆಕ್ಟ್ ಆಗುತ್ತಿಲ್ಲ, ನಾವು ಮಾತ್ರ ಹೇಗೆ ಹೋಗುವುದು ಎಂಬ ಭಯ ಶುರುವಾಯಿತು. ವಾಪಸ್ಸು ಬರಲು ಸಾಧ್ಯವಿಲ್ಲ. ಏನಾದರೂ ಆಗಲಿ ಅಂತ ನಾವು ನಮ್ಮ ಗಾಡಿಯನ್ನು ಮುಂದೆ ಚಲಿಸಲು ಹೇಳಿದೆವು. ಪಿಲಿಕುಳ, ಕುದುರಳಿ ನೋಡಿ ಮಾನಸ ವಾಟರ್ ಪಾರ್ಕ್ ನಲ್ಲಿ ಆಡಿದೆವು. ಮನೆಯವರ ಹತ್ತಿರ ಸರ್ ಬಂದಿರಲಿಲ್ಲ ಅಂತ ಹೇಗೆ ಹೇಳುವುದು? ಅದಕ್ಕೆ ನಮ್ಮ ಗುಂಪಿನಲ್ಲಿ ಒಬ್ಬ ಬಿಕಾಂ ಹುಡುಗ ಬಂದಿದ್ದ ಸ್ವಲ್ಪ ದಪ್ಪಕ್ಕೆ, ಎತ್ತರವಾಗಿದ್ದ ಅವನನ್ನು ನಮ್ಮ ಜೊತೆ ನಿಲ್ಲಿಸಿ ಫೋಟೊ ತೆಗೆಸಿ ಇವರೇ ನಮ್ಮ ಸರ್ ಅಂತ ನಂತರ ಅಲ್ಲಿಂದ ವಾಪಸ್ ಬಂದ ಮೇಲೆ ಮನೆಯವರಿಗೆ ತೋರಿಸಿದೆವು.

ನಮ್ಮ ಗುಂಪು ನೋಡಿ ಕಾಲೇಜಿನ ಪ್ರತಿಯೊಂದು ಕ್ಲಾಸ್ ನಮ್ಮಷ್ಟು ಒಗ್ಗಟ್ಟಿನಿಂದ ಇರಬೇಕೆಂದು ಪ್ರಯತ್ನಿಸಿ ಸೋತಿದ್ದರು. ನಮ್ಮ ಕ್ಲಾಸ್ ನಲ್ಲಿ ಪ್ರತ್ಯೇಕ ಗ್ರೂಪ್ ಇರಲಿಲ್ಲ, 16 ಮಂದಿ 16 ರೀತಿಯ ಸ್ವಭಾವದವರಗಿದ್ದರೂ ನಮ್ಮ ನಡುವೆ ಭಿನ್ನಾಭಿಪ್ರಾಯವಿರಲಿಲ್ಲ. ನನಗೆ ಸಿನಿಮಾ ಥಿಯೇಟರ್ ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ, ಏಕೆಂದರೆ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದು ಅಪ್ಪನಿಗೆ ಇಷ್ಟವಿರಲಿಲ್ಲ, ತುಂಬಾ ಚಿಕ್ಕದಿರುವಾಗ ಚಿಕ್ಕಪ್ಪನ ಜೊತೆ ಹೋಗಿ ಸಿನಿಮಾ ನೋಡಿದ ನೆನಪು, ನಂತರ ಹೋದದ್ದು ಡಿಗ್ರಿಯಲ್ಲಿ. ನಾನು ಥಿಯೇಟರ್ ನೋಡಲಿಲ್ಲ ಎಂದಾಗ ಹಾಗಾದರೆ ನೀನು ನೋಡಲೇ ಬೇಕು ಎಂದು ಮಧ್ಯಾಹ್ನ ಮೇಲಿನ ಕ್ಲಾಸ್ ಬಂಕ್ ಮಾಡಿ ಕರೆದುಕೊಂಡು ಹೋಗಿದ್ದರು. ಅಗ ನಮಗೆ ತಿಳಿದು ಬಂದ ವಿಷಯವೆಂದರೆ ನನ್ನ ಹಾಗೇ ಥಿಯೇಟರ್ ನೋಡಿರದ ಇನ್ನಿಬ್ಬರಿದ್ದರು, ಆದರೆ ಅವರು ಬಾಯಿ ಬಿಟ್ಟಿರಲಿಲ್ಲ.

3 ವರ್ಷ ಹೇಗೆ ಕಳೆಯಿತು ಅಂತ ಗೊತ್ತಾಗಲಿಲ್ಲ, ಅದೇ ಮರದಡಿಯಲ್ಲಿ ಕುಳಿತು ಮುಂದೆ ಏನು ಮಾಡಬೇಕು ಎಂದು ತೀರ್ಮಾನಿಸಿದವು. ಕೆಲವರು ಜರ್ನಲಿಸಂ ಮಾಡುತ್ತೇನೆ ಅಂದರು, ಮತ್ತೆ ಕೆಲವರು ಇಲ್ಲ ಜಾಬ್ ಗೆ ಸೇರುತ್ತೇನೆ ಅಂದರು, ಇನ್ನೊಬ್ಬ ಸ್ನೇಹಿತ ಅಪ್ಪನ ಬಿಸಿನೆಸ್ ನೋಡಿಕೊಳ್ಳುತ್ತೇನೆ ಎಂದು ಮುಂದೆ ಏನು ಮಾಡಬೇಕು ಎಂಬ ನಿರ್ಧಾರದಿಂದ ಬಾಯ್ ಹೇಳಿದವು, ಹೀಗೆ ಬಾಯ್ ಹೇಳುವಾಗ ಯಾರೂ ಅಳಲಿಲ್ಲ, ಮಾಮೂಲಿ ಕ್ಲಾಸ್ ಮುಗಿಸಿ ಹೋಗುವಾಗ ಬಾಯ್ ಹೇಳಿ ಹೋಗುವಂತೆ ಹೇಳಿ ಬೇರೆಯಾದವು (ನಮ್ಮ ಫ್ರೆಂಡ್ ಶಿಪ್ ಬೇರೆಯಾಗಲ್ಲ ಎಂಬ ನಂಬಿಕೆಯಿಂದ) .

ಆದರೆ ಆ ಸ್ನೇಹ ಇವತ್ತಿಗೂ ನಮ್ಮಲ್ಲಿ ಇದೆ, ಅದರ ನಂತರ ತುಂಬಾ ಹೊಸ ಫ್ರೆಂಡ್ಸ್ ಸಿಕ್ಕಿದರು. ಡಿಗ್ರಿ ಫ್ರೆಂಡ್ಸ್ ಅಂದರೆ ಸ್ವಲ್ಪ ಹೆಚ್ಚಿನ ಮಮಕಾರ. ಕೆಲವರಿಗೆ ಮದುವೆಯಾಯಿತು, ಉಳಿದವರು ತಮ್ಮ ಕೆಲಸಕಾರ್ಯಗಳಲ್ಲಿ ಬ್ಯೂಸಿಯಾದೆವು, ನಮ್ಮಲ್ಲಿ ಇನ್ನೂ ಅದೇ ಸ್ನೇಹವಿದೆ, ಎಲ್ಲರೂ ಜೊತೆಯಲ್ಲಿ ಒಂದು ಮೀಟ್ ಆಗಲು ಸಾಧ್ಯವಾಗುತ್ತಿಲ್ಲ. ಆ ದಿನಕ್ಕಾಗಿ ಕಾಯುತ್ತಿದ್ದೇವೆ....

English summary

My Degree Friends Group | Friendship Day Story | ನನ್ನ ಡಿಗ್ರಿ ಫ್ರೆಂಡ್ಸ್ ಗ್ರೂಪ್ | ಫ್ರೆಂಡ್ಸ್ ಶಿಪ್ ದಿನದ ಕತೆ

I have lots of good friends. But my degree friends something special for me. Our friendship i can say something such type of friendship very rarely can see.
X
Desktop Bottom Promotion