For Quick Alerts
ALLOW NOTIFICATIONS  
For Daily Alerts

ಇಡೀ ಕ್ಲಾಸೇ ಒಂದು ಫ್ರೆಂಡ್ಸ್ ಗ್ರೂಪ್ ಆಗಿತ್ತು!

By ರೀನಾಮಂಜು
|
My Degree Friends Grou
ವಿಶ್ ಯೂ ಹ್ಯಾಪಿ ಫ್ರೆಂಡ್ ಶಿಪ್ ಡೇ . ನಿಮಗಿರುವಂತೆ ನನಗೆ ತುಂಬಾ ಜನ ಒಳ್ಳೆಯ ಬೆಸ್ಟ್ ಫ್ರೆಂಡ್ಸ್ ಇದ್ದಾರೆ.ಆದರೆ ಫ್ರೆಂಡ್ ಶಿಪ್ ಡೇಗೆ ನಿಮ್ಮ ಜೊತೆ ನನ್ನ ಡಿಗ್ರಿ ಫ್ರೆಂಡ್ಸ್ ಗಳ ಬಗ್ಗೆ ಹೇಳಬೇಕೆಂದು ಬಯಸುತ್ತಿದ್ದೇನೆ. ಜೀವಕ್ಕೆ ಜೀವ ಕೊಡುವ ಗೆಳೆಯರು ನಿಮಗೆ ಇರಬಹುದು, ಇನ್ನು ಓದುವ ಸಮಯದಲ್ಲಿ ನಿಮ್ಮದೇ ಗೆಳೆಯರ ಗುಂಪು ಅಂತ ಇದ್ದಿರಬಹುದು. ಆದರೆ ಇಡೀ ಕ್ಲಾಸ್ ಒಂದು ಗುಂಪಿನಂತೆ ಇದ್ದದು ಇದೆಯೇ? ನಮ್ಮ ಕಾಲೇಜಿನಲ್ಲಿ ನಮ್ಮ ಕ್ಲಾಸ್ ಬಿಟ್ಟು ಬೇರೆ ಕ್ಲಾಸ್ ನಲ್ಲಿ ಆ ರೀತಿ ಇರಲಿಲ್ಲ. ಅವರಲ್ಲಿ ಫ್ರೆಂಡ್ಸ್ ಗ್ರೂಪ್ ಇತ್ತು. ಆದರೆ ನಮ್ಮಲ್ಲಿ ಇಡೀ ಕ್ಲಾಸೇ ಒಂದು ಫ್ರೆಂಡ್ಸ್ ಗ್ರೂಪ್ ಆಗಿತ್ತು!

ಹೈಸ್ಕೂಲ್ ಮತ್ತು ಪಿಯುಸಿನಲ್ಲಿ ಒಳ್ಳೆಯ ಸ್ನೇಹಿತರಿದ್ದರೂ ಫ್ರೆಂಡ್ಸ್ ಅಂತ ತುಂಬಾ ಹಚ್ಚಿಕೊಂಡಿದ್ದು ಡಿಗ್ರಿಯಲ್ಲಿರುವಾಗ. ಡಿಗ್ರಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಕಾಲೇಜಿಗೆ ಸೇರಿದೆ. ಮೊದಲ ದಿನ ಕಾಲೇಜಿಗೆ ಬಂದಾಗ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ ಒಂದು ವಾರದವರೆಗೆ ಬರೀ ಹಾಯ್ ಅಷ್ಟೇ. ಡಿಗ್ರಿಯಲ್ಲಿ ಇಂಗ್ಲೀಷ್ ಅನ್ನು ಐಚ್ಛಿಕವಾಗಿ ತೆಗೆದುಕೊಳ್ಳುವವರು ತುಂಬಾ ಕಡಿಮೆಯಾಗಿದ್ದರಿಂದ ನಮ್ಮ ಕ್ಲಾಸಿನಲ್ಲಿ ಕೇವಲ 16 ಮಂದಿ ಮಾತ್ರ ಇದ್ದೆವು.

ಆದರೆ ಇದೇ 16 ಮಂದಿ ಗುಂಪು 3 ವರ್ಷ ಕಳೆಯುವಷ್ಟರಲ್ಲಿ ಇಡೀ ಕಾಲೇಜು ಗುರುತಿಸುವಂತಹ ಗುಂಪು ನಮ್ಮದಾಯಿತು ನನಗೆ ಈಗಲೂ ನೆನಪಿದೆ, ಪಿಯುಸಿನಲ್ಲಿರುವಾಗ ಹುಡುಗರ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ, ಕೇವಲ ಹಾಯ್, ಬಾಯ್ ಅಷ್ಟೆ. ಆದರೆ ನಮ್ಮ ಈ ಗ್ರೂಪ್ ನಲ್ಲಿ ಇವನು ಹುಡುಗ ,ಅವಳು ಹುಡುಗಿ ಎಂಬ ಭಾವನೆ ಯಾರಲ್ಲೂ ಇರಲಿಲ್ಲ, ನಾವೆಲ್ಲರೂ ಬರೀ ಫ್ರೆಂಡ್ಸ್ ಎಂಬ ಭಾವನೆಯಷ್ಟೆ ನಮ್ಮಲ್ಲಿತ್ತು.

ಡಿಗ್ರಿಗೆ ಸೇರಿದಾಗ ಮೊದಲು 20 ವಿದ್ಯಾರ್ಥಿಗಳಿದ್ದರೂ , ಇಂಗ್ಲೀಷ್ ಅನ್ನು ಐಚ್ಛಿಕವಾಗಿ ಕಲಿಯುವುದು ಕಷ್ಟ ಎಂದು ಕೆಲವರು ಬಿಟ್ಟು ಹೋದರು ಕೊನೆಗೆ ಉಳಿದದ್ದು ನಾವು 16 ಜನ. ನಾವು ಒಂದು ರೀತಿಯ ಅಲೆಮಾರಿಗಳಂತೆ ಇದ್ದೆವು, ನಮಗಾಗಿ ಒಂದು ಪ್ರತ್ಯೇಕ ಕೊಠಡಿ ಇರಲಿಲ್ಲ! ಅಷ್ಟು ದೊಡ್ಡ ಕಾಲೇಜಿನಲ್ಲಿ ನಮಗಾಗಿ ಒಂದು ಪ್ರತ್ಯೇಕ ಕೊಠಡಿಯಿರಲಿಲ್ಲವೇ ಅಂತ ಕೇಳಬೇಡಿ. ಕೊಠಡಿ ಇತ್ತು ಆದರೆ ನಾವು ತೆಗೆದುಕೊಂಡದ್ದು English Major ಆಗಿದ್ದರಿಂದ ಇಂಗ್ಲೀಷ್ ಕ್ಲಾಸ್ ಬಿಟ್ಟು ಉಳಿದ ರಾಜ್ಯ ಶಾಸ್ತ್ರ ಮತ್ತು ಸಮಾಜಸಾಸ್ತ್ರ ಪಾಠ ಕೇಳಲು HEP ಮತ್ತು HES ಕ್ಲಾಸ್ ಗೆ ಹೋಗಬೇಕಾಗಿತ್ತು. ಇದೇ ಕಾರಣದಿಂದ ಒಂದು ರೂಮಿನಿಂದ ಮತ್ತೊಂದು ರೂಮಿಗೆ ಅಲೆಯುತ್ತಿದ್ದವು. ಒಂದು ಕಾರಿಡಾರ್ ನಿಂದ ಮತ್ತೊಂದು ಕಾರಿಡಾರ್ ಗೆ ತಿರುಗಾಡುತ್ತಿರುವುದನ್ನು ನೋಡಿ ಸೈನ್ಸ್, ಬಿ,ಕಾಂ ಬಿಬಿಎಂನಲ್ಲಿರುವವರು ಇವರಿಗೆ ಕ್ಲಾಸೇ ಇರಲ್ಲ ಸುಮ್ಮನೆ ಸುತ್ತಾಡುತ್ತಿರುತ್ತಾರೆ ಅನ್ನುತ್ತಿದ್ದರು. (ವಾಸ್ತವ ಅಂದರೆ ಎಕ್ಸಾಂಗೆ ಕೂರಲು 75% ಹಾಜರಾತಿ ಕಡ್ಡಾಯವಾಗಿತ್ತು, ಅಲ್ಲದೆ ನಾವು ಕ್ಲಾಸ್ ತಪ್ಪಿಸಿ ಕೊಳ್ಳುತ್ತಿರಲಿಲ್ಲ, ಉಪನ್ಯಾಸಕರಿಗೆ ಉಳಿದ ಕ್ಲಾಸ್ ಗಿಂತ ನಮ್ಮ ಕ್ಲಾಸ್ ಅಚ್ಚುಮೆಚ್ಚಿನ ಕ್ಲಾಸ್ ಆಗಿತ್ತು)

ಕ್ಲಾಸ್ ಮುಗಿದ ನಂತರ ಬಿಡುವಿನ ವೇಳೆಯಲ್ಲಿ ಕಾಲೇಜಿನ ಗ್ರೌಂಡ್ ನಲ್ಲಿ ಒಂದು ದೊಡ್ಡ ಮರವಿತ್ತು ಅದರ ಕೆಳಗಡೆ ಕೂತು ಹರಟೆ ಹೊಡೆಯುತ್ತಿದ್ದವು. ನಮ್ಮ ಪ್ರತಿಯೊಂದು ನಿರ್ಧಾರಗಳು ಆ ಮರದ ಕೆಳಗೆ ನಿರ್ಧಾರವಾಗುತ್ತಿತ್ತು. ಮಧ್ಯಾಹ್ನ ಊಟ ಮಾಡುವುದು, ಚಿಪ್ಸ್ ತಂದು ತಿನ್ನುವುದು ಅಸೈನ್ ಮೆಂಟ್ ಬರೆಯುವುದು, ಎಕ್ಸಾಂಗೆ ಓದುವುದು ಇವೆಲ್ಲವನ್ನು ಆ ಮರದ ಕೆಳಗೆ ಕುಳಿತು ಮಾಡುತ್ತಿದ್ದವು. ಮನೆಯಲ್ಲಿ ಊಟಕ್ಕಾಗಿ ಪ್ರತ್ಯೇಕ ತಟ್ಟೆ ಇಟ್ಟು, ಅದನ್ನು ಬೇರೆ ಯಾರು ಮುಟ್ಟಬಾರದು ಅನ್ನುತ್ತಿದ್ದ ನಾನು ಗೆಳೆಯರು ಕೈ ಹಾಕಿದ ಊಟದ ಡಬ್ಬಿಯನ್ನು ತಿನ್ನುವಷ್ಟು ಬದಲಾದೆ.

English summary

Missing My Friends Degree Group | Friendship Day Story | ನನ್ನ ಡಿಗ್ರಿ ಫ್ರೆಂಡ್ಸ್ ಗ್ರೂಪ್ | ಫ್ರೆಂಡ್ಸ್ ಶಿಪ್ ದಿನದ ಕತೆ

I have lots of good friends. But my degree friends something special for me. We are all different from one another by nature but we are become one group.
X
Desktop Bottom Promotion