For Quick Alerts
ALLOW NOTIFICATIONS  
For Daily Alerts

ಪ್ರೀತಿ ಮತ್ತು ರಕ್ಷಣೆಯ ಮೂರ್ತಿ ಅಪ್ಪ!

By ರೀನಾಮಂಜು
|
ಮಕ್ಕಳನ್ನು ಬೆಳೆಸಿ, ಅವರು ಉತ್ತಮ ಸ್ಥಾನಗಳಿಸುವಲ್ಲಿ ಅಪ್ಪ-ಅಮ್ಮನ ಪಾತ್ರ ಪ್ರಮುಖವಾದದು . ಆದರೆ ಅಮ್ಮನ ಪ್ರೀತಿ ಅಪ್ಪನ ಪ್ರೀತಿಗಿಂತ ದೊಡ್ಡದು ಅಂತ ಬಣ್ಣಿಸಿ ಬಿಡುತ್ತೇವೆ. ಅಪ್ಪನಿಗೂ ಮಕ್ಕಳ ಮೇಲೆ ತುಂಬಾ ಪ್ರೀತಿ ಇರುತ್ತದೆ, ಅಮ್ಮ ವ್ಯಕ್ತ ಪಡಿಸುತ್ತಾರೆ, ಅಪ್ಪಂದಿರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಕಡಿಮೆ ಆದ್ದರಿಂದ ಸ್ಟ್ರಿಕ್ಟ್ ಅಪ್ಪ ಅಂತ ಬಿರುದನ್ನು ಪಡೆದುಬಿಡುತ್ತಾರೆ. ಮನೆಯವರ ರಕ್ಷಣಾ ಜವಬ್ದಾರಿ ಅಪ್ಪನ ಮೇಲೆ ಇರುತ್ತದೆ, ಆದ್ದರಿಂದಲೇ ಆರ್ಮಿಯವರಂತೆ ಅಪ್ಪಂದಿರು ಸ್ಟ್ರಿಕ್ಟ್ ಆಗಿ ಇರುತ್ತಾರೋ ಏನೊ.

ನನಗೆ ನಮ್ಮ ಅಪ್ಪನ ಮಹತ್ವ ತಿಳಿದಿದ್ದು ಒಂಭತ್ತನೇ ತರಗತಿಯಲ್ಲಿ ಇರುವಾಗ. ಅದುವರೆಗೆ ಅಪ್ಪ ಅಂದರೆ ನಮಗೆ ಬಟ್ಟೆ ಕೊಡಿಸುವುದು, ಮನೆ ನಿಭಾಯಿಸುವುದು, ತಪ್ಪು ಮಾಡಿದಾಗ ನಮ್ಮನ್ನು ಬೈಯುವುದು ಇಷ್ಟು ಮಾತ್ರ ಗೊತ್ತಿತ್ತು. ಆದರೆ ಅವರು ಇಡೀ ಮನೆಯನ್ನು ಕಾಯುವ ಆರ್ಮಿ ಮ್ಯಾನ್ ನಂತೆ ಇದ್ದರು ಅಂತ ಅರಿವಾದದು ಇದ್ದಕ್ಕಿದ್ದ ಹಾಗೆ ಅವರಿಗೆ ಹುಷಾರು ತಪ್ಪಿದಾಗ.

ನನ್ನ ಅಪ್ಪ ನೋಡುವುದಕ್ಕೆ ತೆಳ್ಳಗೆ ಇದ್ದರೂ ನಮ್ಮ ತೋಟದಲ್ಲಿ ಪ್ರತಿಯೊಂದು ಕೆಲಸವನ್ನು ಮಾಡುತ್ತಿದ್ದರು, ಶುಂಠಿ ಬೆಳೆಗಾರರಾಗಿದ್ದು ಶ್ರಮವಹಿಸಿ ದುಡಿಯುತ್ತಿದ್ದವರು ಒಂದು ದಿನ ಕೂಡ ಹುಷಾರು ತಪ್ಪಿ ಮಲಗಿದ್ದು ನನ್ನ ನೆನಪಿನಲ್ಲಿ ಇರಲಿಲ್ಲ. ಆದರೆ ಒಂದು ದಿನ ಅಪ್ಪ ನನಗೆ ತಲೆ ಸುತ್ತುತ್ತಿದೆ ಎಂದು ಮಲಗಿದರು, ಆದರೆ ನಂತರ ಅವರಿಗೆ ಮಂಚ ಬಿಟ್ಟು ಏಳಲು ಸಾಧ್ಯವಾಗುತ್ತಿರಲಿಲ್ಲ, ಅಮ್ಮ, ನಾವೆಲ್ಲಾ ಅಳಲು ಪ್ರಾರಂಭಿಸಿದೆವು, ಅಕ್ಕ ಪಕ್ಕದ ಮನೆಯವರು ಬಂದು ಕೂಡಲೇ ಅಪ್ಪನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಗ ಡಾಕ್ಟರ್ ಅಪ್ಪನಿಗೆ ಪಾರ್ಶ್ವವಾಯು ಬಂದಿದೆ, ಬದುಕುವುದು ಕಷ್ಟ ಎಂದು ಹೇಳಿದರು. ಕೂಡಲೇ ಅಪ್ಪನನ್ನು ಇನ್ನೂ ಉತ್ತಮ ಸೌಲಭ್ಯವಿರುವ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಯಿತು, ಸಾವಿನಿಂದ ಪಾರಾದರೂ ಅಪ್ಪನಿಗೆ ನಡೆದಾಡಲು ಸಾಧ್ಯವಾಗುತ್ತಿರಲ್ಲ. ಆಗಲೇ ಅಪ್ಪನ ಮಹತ್ವ ಅರಿವಾದದು.

ಅಷ್ಟು ಕಾಲ ಅಪ್ಪನೇ ಮನೆ ನಿಭಾಯಿಸುತ್ತಿದ್ದರಿಂದ ಇದ್ದಕ್ಕಿದ್ದ ಹಾಗೇ ಇಡೀ ಜವಬ್ದಾರಿ ಅಮ್ಮನ ಮೇಲೆ ಬಿತ್ತು ( ಅಮ್ಮ ಅನೇಕ ಸವಾಲುಗಳನ್ನು ಎದುರಿಸಿ ಸಮರ್ಥವಾಗಿ ಮನೆಯನ್ನು ನಡೆಸಿದರು ಕೂಡ). ನೆಂಟರಿಷ್ಟರಿಗೆ ನಾವು ಕೂತರು ತಪ್ಪು, ನಿಂತರೂ ತಪ್ಪು ಅಂತಹ ಪರಿಸ್ಥಿತಿ ನಿರ್ಮಾಣವಾಯಿತು. ನಾವು ಬರೀ ಹೆಣ್ಣ ಮಕ್ಕಳೇ ಆಗಿರುವುದರಿಂದ ಮನೆ ಗಂಡಸು ಮಲಗಿದ್ದಲ್ಲಿಯೇ ಆದರು ಮನೆಯನ್ನು ನಿರ್ವಹಿಸಲು ಗಂಡು ದಿಕ್ಕು ಯಾರು ಎಂದು ಅನುಕಂಪ ತೋರಿಸುವ ಹಾಗೇ ಹೇಳಿ ಅಮ್ಮನಿಗೆ ಗಂಡು ಮಕ್ಕಳಿಲ್ಲ ಎಂದು ಎತ್ತಿ ತೋರಿಸುತ್ತಿದ್ದರು.

ನಾವೂ ಅಷ್ಟೇ ಶಾಲೆ ಬಿಟ್ಟು ಮನೆಗೆ ಬಂದ ಮೇಲೆ ಬೀದಿಯಲ್ಲಿ ಹೋಗಿ ಆಡಬಾರದು ಮುಂತಾದ ನಿರ್ಬಂಧಗಳು ಅಪ್ಪನ ತಮ್ಮಂದಿರು ಹೇಳಿದರು. ಆದರೆ ಅಪ್ಪ ಹುಷಾರಿದ್ದಾಗ ಕತ್ತಲೆಯಾಗುವವರೆಗೆ ನೆರೆಹೊರೆಯ ಮಕ್ಕಳ ಜೊತೆಯಲ್ಲಿ ಬೀದಿಯಲ್ಲಿ ರಗೋರಿ ಆಡಿ ಬರುತ್ತಿದ್ದವು, ಅಪ್ಪ ಕೂಡ ಕೆಲವೊಮ್ಮೆ ನಮ್ಮ ಆಟ ನೋಡಲು ಬಂದು ನಿಲ್ಲುತ್ತಿದ್ದರು. ಆದರೆ ನಂತರ ನಮ್ಮ ಆಟ ಆಡುವ ಸ್ವಾತಂತ್ರ್ಯ ಹೋಯ್ತು, ಮನೆಯಲ್ಲಿ ಆರ್ಥಿಕ ತೊಂದರೆಗಳು ಉಂಟಾದವು. ಒಂದು ವರ್ಷದವರೆಗೆ ನಮ್ಮ ಜೀವನ ನರಕವಾಯಿತು. ಕಾಯಿಲೆ ಬಿದ್ದ ಆರು ತಿಂಗಳ ಬಳಿಕ ಅಪ್ಪ ಎದ್ದು ನಡೆಯಲಾರಂಭಿಸಿದರು, ಒಂದು ವರ್ಷದಲ್ಲಿ ಮೊದಲಿನಂತೆ ಓಡಾಡಲು ಪ್ರಾರಂಭಿಸಿದರು. ಅಮ್ಮ ಈ ಸಮಯದಲ್ಲಿ ತುಂಬಾ ಕಷ್ಟಪಡಬೇಕಾಯಿತು. ಆದರೆ ಒಂದು ವರ್ಷದ ನಂತರ ನಮ್ಮ ಜೀವನ ಮೊದಲಿನಂತಾಯಿತು.

ಅವತ್ತು ಅಪ್ಪನಿಗೆ ಏನಾದರೂ ಆಗಿದ್ದರೆ ಇವತ್ತು ನನಗೆ ನನ್ನ ಕನಸುಗಳು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪ ಕೊಡುವ ರಕ್ಷಣೆಯನ್ನು, ಪ್ರೀತಿಯನ್ನು ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಈ ಬಾರಿ ಮನೆಗೆ ಹೋದಾಗ ಮರಹತ್ತಿ ಹಲಸಿನಕಾಯಿ ಕುಯ್ದು ಅದರ ತೊಳೆ ಬಿಡಿಸಿ, ಕಿತ್ತಳೆ ಮತ್ತಿತರ ಹಣ್ಣುಗಳನ್ನು ಬ್ಯಾಗಿನಲ್ಲಿ ತುಂಬಿ ಬಸ್ ಸ್ಟ್ಯಾಂಡ್ ವರೆಗೆ ಬಂದು ಬಸ್ ಹತ್ತಿಸಿದಾಗ ನನ್ನ ಅಪ್ಪನನ್ನು ಮರಳಿಸಿ ಕೊಟ್ಟ ದೇವರಿಗೆ ಥ್ಯಾಂಕ್ಸ್ ಹೇಳಿದೆ.

ಮಕ್ಕಳ ಉತ್ತಮ ಏಳಿಗೆಗಾಗಿ ಅವರಿಗೆ ಪ್ರೀತಿ ಮತ್ತು ರಕ್ಷಣೆ ಕೊಟ್ಟು ಸಲುಹುತ್ತಿರುವ ಎಲ್ಲಾ ಅಪ್ಪಂದಿರಿಗೆ ' ಅಪ್ಪಂದಿರ ದಿನದ' ಶುಭಾಶಯಗಳು.

English summary

My Father As A Army Man For The Family | Father's Day Story | ನಮ್ಮ ತಂದೆ ಮನೆ ರಕ್ಷಣೆ ಮಾಡುವ ಸೈನಿಕ | ಅಪ್ಪಂದಿರ ದಿನಕ್ಕೆ ಸ್ಟೋರಿ

Father the word is combine with love and secure. In a family mother give love and father give security to the children. Like everyone i too feel our father is great and without him i would have not achieve or full fill ny dream.
X