For Quick Alerts
ALLOW NOTIFICATIONS  
For Daily Alerts

ಹೃದಯದಲ್ಲಿ ಬಂದು ಅವಲಕ್ಕಿ ಕುಟ್ಟಿ ಹೋಗುವವಳೆ

By * ವಿನಾಯಕ ಪಟಗಾರ, ಕುಮಟಾ
|
Vinayak Patgar, Kumata
ನಲ್ಮೆಯ ಕಪ್ಪು ಚುಕ್ಕಿಯ, ಎಣ್ಣೆಗೆಂಪು ಬಣ್ಣದ ಹುಡುಗಿ ಎದುರಿಗೆ ಸಿಕ್ಕಿದಾಗಲೆಲ್ಲ ಹೇಳಿಬಿಡಬೇಕು ಎಂದುಕೊಂಡಿದ್ದನ್ನು ಹೇಳಲು ಬಾಯಿಗೆ ಬರದೇ ಹೆದರು ಪುಕ್ಕಲಿನಂತೆ ಹಿಂದಿರುಗಿ ಬಂದಿದ್ದೇನೆ. ನೀನು ಮರೆಯಾಗುವವರೆಗೂ ನೋಡುತ್ತ ನಿರಾಸೆಯಿಂದ ಹಿಂದಿರುಗಿದ್ದೇನೆ. ನೀನು ಓದುತ್ತಿಯೋ ಇಲ್ಲವೋ ಗೊತ್ತಿಲ್ಲ, ಆದರೂ ಈ ಪತ್ರ ಬರೆಯುತ್ತಿದ್ದೇನೆ. ನನ್ನ ಹೃದಯದ ಭಾರ ಇಳಿಸಿಕೊಳ್ಳಲು ಅಥವಾ ಹೃದಯದ ಭಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲೋ ಗೊತ್ತಾಗುತ್ತಿಲ್ಲ.

ಇವತ್ತಿಗೂ ಗೊತ್ತಿಲ್ಲ, ನಿನ್ನನ್ನು ಮೊದಲ ಸಲ ನೋಡಿದಾಗಿನಿಂದ ಇವತ್ತಿನವರೆಗೂ ನನಗೆ ನಿನ್ನ ಮೇಲೆ ಉಂಟಾಗಿದ್ದು ಗೆಳತನವೋ, ಪ್ರೀತಿ-ಪ್ರೇಮವೋ, ಆಕರ್ಷಣೆಯೋ, ಮತ್ತೆನೋ ಒಟ್ಟಿನಲ್ಲಿ ಇವತ್ತಿಗೂ ನೀನು ನೆನಪಾದರೆ ನನ್ನಲ್ಲಾಗುವ ಭಾವನೆಗಳನ್ನು ವರ್ಣಿಸಲು ಶಬ್ಧಗಳೇ ಸಿಗುವುದಿಲ್ಲ. ನಿನ್ನ ನಂತರದಲ್ಲಿ ಎಷ್ಟೋ ಹುಡುಗಿಯರನ್ನು ನೋಡಿದ್ದೇನೆ. ನೀನೇ ಯಾಕೆ ನನಗೆ ಇಷ್ಷವಾದೆ ಎನ್ನುವುದು ಸಹ ನನಗೆ ಇಲ್ಲಿಯವರೆಗೆ ಗೊತ್ತಾಗಿಲ್ಲ. ನಾಲ್ಕು ಜನರ ಮಧ್ಯೆ ಎದ್ದು ಕಾಣುವಂತಹ ವ್ಯಕ್ತಿತ್ವವೇನಲ್ಲ ನಿನ್ನದು. ಹಲವರ ಬಾಯಲ್ಲಿ "ಸುಂದರಿ" ಎಂದು ಹೊಗಳಿಕೆಗೊಳಗಾಗುವಷ್ಟು ಸೌಂದರ್ಯವತಿಯೂ ನೀನಲ್ಲ. ನಾನು ನಿನ್ನ ಜೊತೆ ಮಾತೆ ಆಡಿಲ್ಲ. ನಿನ್ನ ಹತ್ತಿರ ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತಿಲ್ಲ. ಆದರೂ ನೀನು ನನ್ನ ಮನಸ್ಸಿನಲ್ಲಿ ಇನ್ನುವರೆಗೂ ಇದ್ದಿಯಾ. ಬರಬೇಡ ಎಂದರೂ ಪದೇ ಪದೇ ಮನಸ್ಸಿನಲ್ಲಿ ಬಂದು ಹೃದಯದಲ್ಲಿ ಅವಲಕ್ಕಿ ಕುಟ್ಟಿ ಹೋಗುತ್ತಿಯಾ? ನಿನ್ನ ವ್ಯಾಪ್ತಿ ಪ್ರದೇಶದಿಂದ ನನ್ನ ಮನಸ್ಸು ಹೊರಬರುತ್ತಿಲ್ಲ ಗೆಳತಿ.

ಇಷ್ಟಕ್ಕೂ ನೀನು ನನಗೆ ಪ್ರಥಮ ಸಲ ಕಾಣಿಸಿದ್ದು ನನ್ನ ದಟ್ಟ ದರಿದ್ರ ನೀರುದ್ಯೋಗ ದಿನಗಳಲ್ಲಿ. ಎಂದಿನಂತೆ ಒಂದು ದಿನ ವಾಚನಾಲಯದ ಉದ್ಯೋಗದ ಜಾಹೀರಾತುಗಳನೆಲ್ಲಾ ಓದಿ ಕೆಟ್ಟ ಬಿಸಿಲಿನಲ್ಲಿ, ಮನೆಗೆ ಹೋಗಲು ಟೆಂಪೋಗೆ ಕಾಯುತ್ತಿದ್ದಾಗ ನಿನ್ನ ದರ್ಶನ ನನಗೆ ತಂಗಾಳಿಯಂತೆ ಬಂದು ತಾಕಿತ್ತು. ನಾಲ್ಕಾರು ಗೆಳತಿಯರ ಮಧ್ಯೆ ಗಂಭೀರವಾಗಿ ಕಾಲೇಜಿಗೆ ಹೋಗುತ್ತಿದ್ದ ನೀನೇ ನನಗೆ ಹೇಗೆ ಇಷ್ಟವಾದೆ? ಅಂದಿನಿಂದ ಕೆಲ ತಿಂಗಳಗಳ ಕಾಲ ನಿನ್ನ ಒಂದು ದರ್ಶನಕ್ಕಾಗಿ ನಾನು ಕಾಯುತ್ತಿದ್ದುದು ನಿನಗೆ ಕೊನೆಗೂ ಗೊತ್ತಾಗಲಿಲ್ಲವೆ? ಅಥವಾ ಗೊತ್ತಿದ್ದು ಗೊತ್ತಿಲ್ಲದ ಹಾಗೇ ಸುಮ್ಮನಿದ್ದು ಬಿಟ್ಟಿಯಾ?

ಜಾತ್ರೆಯೊಂದರಲ್ಲಿ ನೀನು ಗೆಳತಿಯರ ಜೊತೆ ತಿರುಗುವ ಚಕ್ರದಲ್ಲಿ ಕುಳಿತು ಎಂಜಾಯ್ ಮಾಡುತ್ತಿದ್ದುದು, ಆವತ್ತು ನೀನು ಧರಿಸಿದ ಡ್ರೆಸ್ ನಿಂದ ಇನ್ನಷ್ಟು ಚೆನ್ನಾಗಿ ನನಗೆ ಕಂಡಿದ್ದು ಮನಸ್ಸಿಗೆ ಆಹ್ಲಾದವನ್ನುಂಟು ಮಾಡಿದ್ದು ಇಂದಿಗೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಎಷ್ಟೋ ಸಲ ನನ್ನ ಮನಸ್ಸಿನ ಭಾವನೆಗಳನ್ನು ನಿನ್ನಲ್ಲಿ ಹೇಳೋಣ ಎಂದುಕೊಂಡರೂ ಸಾಧ್ಯವಾಗಲೇ ಇಲ್ಲ. ಯಥಾ ಪ್ರಕಾರ ಕಾಲೇಜಿಗೆ ರಜಾ ದಿನಗಳು, ಮದುವೆಯ ಸೀಜನ್ ಪ್ರಾರಂಭವಾಯಿತು. ಕಾಲೇಜು ಮುಗಿಸಿದ ಹುಡುಗಿಯರು ಹಸೆಮಣೆಯೇರಿದರೆ, ಹುಡುಗರು ಉದ್ಯೋಗದ ಬೇಟೆಗೆ ಸಿದ್ಧರಾದರು. ನೀನಿಲ್ಲದ ಆ ರಸ್ತೆ, ಟೆಂಪೋಗೆ ಕಾಯುವಿಕೆ, ಎಲ್ಲವೂ ಅಸಹನೀಯವಾಗತೊಡಗಿತ್ತು. ಕಾಲಾಂತರದಲ್ಲಿ ಬದುಕು ವಿರಾಮವಿಲ್ಲದ ಯಂತ್ರದಂತಾಗಿದೆ. ವಿರಾಮ ಸಿಕ್ಕಾಗ ನಿನ್ನದೇ ಸವಿ ನೆನಪುಗಳ ಜಾತ್ರೆ.

ಅಂದ ಹಾಗೇ ಗೇಳತಿ, ನೀನು ಈಗ ಹೇಗಿದ್ದಿಯಾ? ಹೆಣ್ಣು ಮದುವೆಗೆ ಮೊದಲು ಭಾವನಾ ಜೀವಿ, ನಂತರ ವಾಸ್ತವವಾದಿ. ಗಂಡನಿಗೆ ಒಳ್ಳೆಯ ಹೆಂಡತಿಯಾಗಿ, ಮಗುವಿಗೆ ಒಳ್ಳೆಯ ತಾಯಿಯಾಗಿ ಸಂಸಾರ ಚೆನ್ನಾಗಿ ನಿಭಾಯಿಸುತ್ತಿದ್ದಿ ತಾನೇ? ನಾವೇ ದಡ್ಡ ಬಡ್ಡಿ ಮಕ್ಕಳು. ಹಳೆಯ ನೆನಪುಗಳ ಜಾತ್ರೆಯಲ್ಲಿ ಕಾಲಕಳೆಯುತ್ತಿರುವರು. ಆದರೂ ಒಂದು ಮಾತು. ಈ ಪತ್ರ ಓದಿದ ನಂತರವೂ ಏನೂ ಅನಿಸದಿದ್ದರೆ ಹುಚ್ಚನೊಬ್ಬನ ದಡ್ಡಪುರಾಣ ಎಂದು ಮರೆತು ಬಿಡು. ಮನಸ್ಸಿನಲ್ಲಿ ಏನಾದರೂ ಭಾವನೆಗಳು ಉಂಟಾದರೆ ಒಬ್ಬಂಟಿಯಾಗಿ ಅತ್ತು ಮನಸ್ಸು ಹಗುರಮಾಡಿಕೊಂಡು ಬಿಡು. ಏನೇ ಆಗ್ಲಿ ಹ್ಯಾಪಿ ವ್ಯಾಲಂಟೈನ್ಸ್ ಡೇ.

English summary

My love, you are still in my heart | Valentine's day 2012 | ಹೃದಯದಲ್ಲಿ ಬಂದು ಅವಲಕ್ಕಿ ಕುಟ್ಟಿ ಹೋಗುವವಳೆ

Though you are already married, my love you are still in my heart. It is not at all easy to forget the past life. Wherever you are be happy and be loyal to your husband. Happy valentine's day.
Story first published: Sunday, February 12, 2012, 22:17 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more