For Quick Alerts
ALLOW NOTIFICATIONS  
For Daily Alerts

ಮೈಕ್ರೋವೇವ್ ಓವನ್ನಲ್ಲಿ ಏನೆಲ್ಲಾ ಮಾಡಬಹುದು

By * ಎಚ್.ಎಸ್. ಭಾರತಿ, ಬೆಂಗಳೂರು
|
Bharathi HS, Bengaluru
ಕಡಲೆಕಾಯಿ ಬೀಜವನ್ನು ಬಾಣಲೆಯಲ್ಲಿ ಹುರಿಯುವುದಕ್ಕಿಂತ ಓವೆನ್ ನಲ್ಲಿ 5-6 ನಿಮಿಷ ಇಡಿ. ಹುರಿದ ಕಡಲೆಬೀಜ ರೆಡಿ. ಮಸಾಲೆ ಕಡಲೆಬೀಜ ಬೇಕಾದಲ್ಲಿ ನೀವೇ ಮನೆಯಲ್ಲೇ ಮಾಡಿ. ಒಂದು ಬಟ್ಟಲಿಗೆ ಒಂದು ಚಮಚ ಕೆಂಪು ಮೆಣಸಿನ ಪುಡಿ, ಒಂದು ಚಮಚ ಉಪ್ಪು ಮತ್ತು ಒಂದು ಚಮಚದಸ್ಟು ನೀರು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಹುರಿದ ಕಡಲೆಬೀಜ ಹಾಕಿ ಚೆನ್ನಾಗಿ ಬೆರೆಸಿ. ಮತ್ತೆ 2-3 ನಿಮಿಷ ಓವೆನ್ ಗೆ ಇಡಿ. ತಣ್ಣಗಾದ ಬಳಿಕ ಉಪಯೋಗಿಸಿ. ಕಾರದ ಕಡಲೆ ಬೀಜ ರೆಡಿ. ಅಂಗಡಿಯಿಂದ ತಂದಿದ್ದಕ್ಕಿಂತ ರುಚಿಯಾಗಿರುವುದು. ಮಕ್ಕಳು ಕೇಳಿದ ಕೂಡಲೇ ಮಾಡಿ ಕೊಡಬಹುದು.

***

ಮಿಕ್ಕ ಚಪಾತಿ ಇದ್ದರೆ ಸಂಜೆಗೆ ಅದರಿಂದ ಒಳ್ಳೆಯ ಚಾಟ್ ಮಾಡಿ ಕೊಡಿ. ಚಪಾತಿಯನ್ನು ಒಂದು ನಿಮಿಷ ಓವೆನ್ ನಲ್ಲಿ ಇಡಿ. ಅದು ಗಟ್ಟಿಯಾಗುವುದು. ತಣಿದ ಬಳಿಕ ಒಂದು ಬಟ್ಟಲಿಗೆ ಹಾಕಿ ಕೈಯಲ್ಲೇ ಸ್ವಲ್ಪ ದಪ್ಪದಪ್ಪವಾಗಿ ಪುಡಿ ಮಾಡಿ. ಅದಕ್ಕೆ ನಿಮಗೆ ರುಚಿಗೆ ಬೇಕಾಗುವಷ್ಟು ಈರುಳ್ಳಿ, ಟೊಮೆಟೊ, ಸೌತೆಕಾಯಿ, ಕಾರದಪುಡಿ, ಉಪ್ಪು, ಇದ್ದರೆ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ಕೂಡಲೇ ತಿನ್ನಲು ಕೊಡಿ. ರುಚಿಯಾದ ಚಾಟ್ ರೆಡಿ. ಆರಾಮಾಗಿ ಚಪಾತಿ, ಒಂದು ಬಟ್ಟಲು ಹಸಿ ತರಕಾರಿ ಎಲ್ಲ ನಿಮ್ಮ ದೇಹಕ್ಕೆ ಸೇರಿರುತ್ತೆ. ನಿಮಗೆ ಗೊತ್ತಿಲ್ಲದೇ ಚಾಟ್ ಅಂದುಕೊಂಡು ಒಳ್ಳೆಯ ಆಹಾರ ಸೇವನೆ ಮಾಡಿರುತ್ತೀರಿ.

***

ರಸ್ತೆಯಲ್ಲಿ ಬೇಯಿಸಿದ ಹಸಿ ಜೋಳದ ವಾಸನೆ ಬರುತ್ತಿದ್ದರೆ ತಿನ್ನುವ ಆಸೆಯಾಗುತ್ತೆ ಅಲ್ವಾ? ಆದರೆ ಅದನ್ನು ನೀವು ಮಕ್ಕಳಿಗೆ ನಿಮಿಷದಲ್ಲೇ ಮನೆಯಲ್ಲೇ ರುಚಿಯಾದ ಜೋಳ ಮಾಡಿಕೊಡಿ. ಅಮೆರಿಕನ್ ಜೋಳವು ಎಲ್ಲ ಮಾಲ್ ಗಳಲ್ಲಿ ಸಿಗುತ್ತೆ. ತಂದು ಫ್ರಿಡ್ಜ್ ನಲ್ಲಿಡಿ(ಹೊರಗಡೆ ಇಟ್ಟರೆ ಹಾಳಾಗುವುದು). ನಿಮಗೆ ಬೇಕೆನಿಸಿದಾಗ ಓವೆನ್ ಬಟ್ಟಲಿಗೆ ನೀರು ಸ್ವಲ್ಪ ಉಪ್ಪು ಹಾಕಿ ಎರಡು ನಿಮಿಷಕ್ಕೆ ಇಡಿ. ಬೆಂದ ಮೇಲೆ ನೀರು ತೆಗೆದು ರುಚಿಗೆ ಸ್ವಲ್ಪ ಉಪ್ಪು, ಇದ್ದರೆ ಬೆಣ್ಣೆ, ಖಾರದಪುಡಿ ಅಥವಾ ಚಾಟ್ ಮಸಾಲ ಪುಡಿ ಅಥವಾ ಕಾಳುಮೆಣಸಿನ ಪುಡಿ ಸವರಿ ತಿನ್ನಿ. ಈ ಚಳಿಗೆ ಸಂಜೆ ಮಾಡಿಕೊಂಡು ತಿಂದರೆ ತುಂಬಾ ರುಚಿಯಾಗಿರುತ್ತದೆ.

Story first published: Thursday, August 12, 2010, 16:09 [IST]
X
Desktop Bottom Promotion