For Quick Alerts
ALLOW NOTIFICATIONS  
For Daily Alerts

ಗೃಹಸಚಿವರಿಗೆ ಕೆಲ ಕಿಚನ್ ಟಿಪ್ಸ್

By Prasad
|
Few useful cooking and kitchen tips
ಮನೆಯ ಹೆಣ್ಣುಮಕ್ಕಳು ಏನೇ ಬಿಟ್ಟುಕೊಟ್ಟರೂ ಅಡುಗೆಮನೆ ಬಿಟ್ಟುಕೊಡಲ್ಲ. ಅಡುಗೆಮನೆಗೆ ಗೃಹಸಚಿವರದೇ ಸಾರ್ವಭೌಮತ್ವ. ಆದರೆ, ಏನು ಮಾಡೋದು ಎಷ್ಟೇ ಲಕ್ಷ್ಯವಹಿಸಿದರೂ, ಏನೆಲ್ಲ ಮುಂಜಾಗ್ರತೆ ತೆಗೆದುಕೊಂಡರೂ ಏನೋ ಕೆಟ್ಟಿರತ್ತೆ, ಇನ್ನಾವುದೋ ವಾಸನಾರಹಿತವಾಗಿರಲ್ಲ, ಕಿರಿಕಿರಿ, ಸಿಡಿಮಿಡಿ. ಇದರ ಬಗ್ಗೆ ಗಂಡ-ಹೆಂಡಿರ ಮಧ್ಯೆ ಜಗಳಗಳಾದರೆ ಸುರುಬುರು. ಇದನ್ನೆಲ್ಲ ತಪ್ಪಿಸಲು ಇಲ್ಲಿ ಕೆಲವು ಕಿಚನ್ ಟಿಪ್ಸ್ ಗಳಿವೆ ಓದಿಕೊಳ್ಳಿ ಮತ್ತು ಪಾಲಿಸಿರಿ.

* ನಿವೇದಿತಾ ಪ್ರಭಾಕರ್, ಬೆಂಗಳೂರು

* ಥರ್ಮಾಸ್ ಫ್ಲಾಸ್ಕ್ ಗಬ್ಬು ವಾಸನೆ ಹೊಡೆಯುತ್ತಿದ್ದರೆ ಬಿಸಿನೀರಲ್ಲಿ ತುಸು ತಿನ್ನುವ ಸೋಡಾ ಹಾಕಿ ಕೆಲಕಾಲ ಬಿಟ್ಟು ತೊಳೆಯಿರಿ. ಗಬ್ಬು ವಾಸನೆ ಮಂಗಮಾಯ.

* ಮಗು ಶಾಲೆಗೊಯ್ಯುವ ನೀರಿನ ಬಾಟಲಿ ದುರ್ವಾಸನೆ ಸೂಸುತ್ತಿದ್ದರೆ ಸ್ವಲ್ಪೇ ಸ್ವಲ್ಪ ಟೂತ್ ಪೇಸ್ಟ್ ಬಳಸಿ ಗಲಗಲ ಮಾಡಿ ತೊಳೆಯಿರಿ.

* ಹೆಚ್ಚಿಟ್ಟ ಸೇಬು ಫ್ರಿಜ್ಜಲ್ಲಿಟ್ಟರೂ ಕಂದು ಬಣ್ಣಕ್ಕೆ ತಿರುಗಬಾರದಿರಲು ಸೇಬಿಗೆ ನಿಂಬೆರಸ ಅಥವಾ ಉಪ್ಪು ಅಥವಾ ಸಕ್ಕರೆ ಬಳಿಯಿರಿ. ದಿನಕಳೆದರೂ ಬಣ್ಣ ಹಂಗೇ ಇರುತ್ತದೆ.

* ಅಡುಗೆ ಹೊತ್ತಿ ಕರಕಲಾಗಿದ್ದರೆ ಒಂದೆರಡು ಎಸಳು ಈರುಳ್ಳಿ ಮತ್ತು ಬಿಸಿನೀರು ಹಾಕಿ ಐದು ನಿಮಿಷ ಬಿಟ್ಟು ತೊಳೆಯಿರಿ. ಅಥವಾ ಬಿಸಿನೀರಲ್ಲಿ ಅಕ್ಕಿಹಿಟ್ಟು ಮಿಕ್ಸ್ ಮಾಡಿ ಹೊತ್ತಿದ ಪಾತ್ರೆಯಲ್ಲಿ ಸುರಿದು ಐದಾರು ನಿಮಿಷ ಬಿಟ್ಟು ತೊಳೆಯಿರಿ. ಪಾತ್ರೆ ಲಕಲಕ.

* ಜಿರಳೆಗಳು ಅಡುಗೆಮನೆಯಲ್ಲಿ ತರಲೆ ಮಾಡುತ್ತಿದ್ದರೆ ಹಿಟ್ ಸ್ಪ್ರೇ ಬಳಸುವ ಬದಲು ಬೋರಿಕ್ ಪೌಡರ್ ಅಲ್ಲಲ್ಲಿ ಉದುರಿಸಿ. ಮರುದಿನ ಜಿರಳೆಗಳು ಪಲಾಯನಗೈದಿರುತ್ತವೆ.

* ಬೆಳ್ಳುಳ್ಳಿ ಸಿಪ್ಪೆಸುಲಿಯಲು ತಡಕಾಡುತ್ತಿದ್ದರೆ ತುಸು ಬಿಸಿಮಾಡಿ ಸಿಪ್ಪೆ ಸುಲಿಯಿರಿ, ಸಿಪ್ಪೆ ಸಲೀಸಾಗಿ ಬರುತ್ತದೆ.

* ಗೋಬಿ ಮಂಚೂರಿ ಮಾಡುವ ಮುನ್ನ ಹೂಕೋಸನ್ನು ಉಪ್ಪಿ ನೀರಲ್ಲಿ ಮುಳುಗಿಸಿ ಅಥವಾ ನೀರಲ್ಲಿ ಅರಿಷಿಣ ಹಾಕಿ ಕೆಲಹೊತ್ತು ಬಿಟ್ಟು ತೆಗೆಯಿರಿ. ಹುಳುಗಳು ಸತ್ತಿರುತ್ತವೆ.

* ಯಾವುದೇ ಅಡುಗೆಗಾಗಿ ಟೊಮೇಟೊ ಸಿಪ್ಪೆ ಸುಲಿಯಬೇಕಿದ್ದರೆ ತುಸುಹೊತ್ತು ಬಿಸಿನೀರಲ್ಲಿ ಅವನ್ನು ಮುಳುಗಿಸಿಡಿ. ನಂತರ ಸಲಭವಾಗಿ ಸಿಪ್ಪೆ ಸುಲಿಯಬಹುದು.

* ತರಕಾರಿಯನ್ನು ಒಗ್ಗರಣೆಯಲ್ಲಿ ತಾಳಿಸುವಾಗ ತರಕಾರಿ ಎಣ್ಣೆಯಲ್ಲಿ ಹಾಕುವ ಮೊದಲೇ ಅರಿಷಿಣ ಹಾಕಿದರೆ ತರಕಾರಿಗಳು ನೈಜ ಬಣ್ಣ ಕಳೆದುಕೊಳ್ಳುವುದಿಲ್ಲ.

* ನಿಂಬೆಹಣ್ಣುಗಳು ಫ್ರಿಜ್ಜಲ್ಲಿಟ್ಟರೂ ತಾಜಾ ಆಗಿರಬೇಕೆಂದಿದ್ದರೆ ಒಂದು ಪಾತ್ರೆಯಲ್ಲಿ ನೀರುಹಾಕಿ ಅದರಲ್ಲಿಡಿ. ಬಹಳ ದಿನಗಳವರೆಗೆ ತಾಜಾ ಆಗಿರುತ್ತವೆ.

ಸೂಚನೆ : ಓದುಗರೆ, ಇಂಥ ಕಿಚನ್ ಟಿಪ್ಸ್ ನಿಮಗೆ ಗೊತ್ತಿದ್ದರೆ ಒಂದು ಕಡತದಲ್ಲಿ ಟೈಪಿಸಿ ಕಳಿಸಿರಿ. ಉಳಿದ ಅಡುಗೆಮನೆ ಸಾರಥಿಗಳಿಗೆ ಸಹಾಯವಾಗಲಿ.

Story first published: Wednesday, June 2, 2010, 15:02 [IST]
X
Desktop Bottom Promotion