For Quick Alerts
ALLOW NOTIFICATIONS  
For Daily Alerts

ಸುಗ್ಗಿಯ ಹಿಗ್ಗಿನ ಸಂಕ್ರಾಂತಿಗೆ 'ಸಿಹಿ ಅವಲಕ್ಕಿ' ಪೊಂಗಲ್

By Staff
|

ಸಂಕ್ರಾಂತಿ ಬಂತೆಂದರೆ ಎಳ್ಳು ಬೆಲ್ಲದ ಘಮಘಮ, ಬಾನಿನಲ್ಲಿ ಗಾಳಿಪಟ, ಹೊಸ ಬೆಳೆ ಆಗಮಿಸುವ ಸಂಭ್ರಮ. ವರ್ಷದ ಪ್ರಾರಂಭದ ಈ ಹಬ್ಬವನ್ನು ಸಾಮಾನ್ಯವಾಗಿ ದಕ್ಷಿಣ ಭಾರತದೆಲ್ಲಡೆ ಆಚರಿಸಲಾಗುತ್ತದೆ. ಮಳೆಗಾಲದ ಬಳಿಕ ಬಿತ್ತ ಬೀಜ ಮೊಳಕೆಯೊಡೆದು ಗಿಡವಾಗಿ ತೆನೆತುಂಬಿ ಬೆಳೆಯಾಗಿ ಮನೆಯಂಗಳ ಸೇರುವ ಸಂಭ್ರಮದ ಸಂದರ್ಭದಲ್ಲಿ ಈ ಬೆಳೆಯನ್ನು ನಮಗೆ ಆಹಾರದ ರೂಪದಲ್ಲಿ ನೀಡಿದ ದೇವರಿಗೆ ಮತ್ತು ಈ ಬೆಳೆ ಕೈಗೆ ಬರಲು ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ. ಹಬ್ಬದ ಸಂಭ್ರಮವನ್ನು ಬರೆಯ ಎಳ್ಳು ಬೆಲ್ಲ ನೀಡಿ ಸವಿದರೆ ಸಾಲದು, ಕೆಲವು ಸಿಹಿತಿಂಡಿ, ಹಬ್ಬದೂಟವೂ ಸಂತೋಷವನ್ನು ಹೆಚ್ಚಿಸಲು ನೆರವಾಗುತ್ತವೆ.

ಸಂತೋಷವನ್ನು ಸಿಹಿಯ ರೂಪದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಸಾಂಪ್ರಾದಾಯಿಕವಾಗಿ ಅನ್ನದಿಂದ ಮಾಡಿದ ಸಿಹಿ ಪೊಂಗಲ್ ಹೆಚ್ಚಿನ ರಾಜ್ಯಗಳಲ್ಲಿ ತಯಾರಾಗುತ್ತದೆ. ಅಂತೆಯೇ ಈ ಬಾರಿಯ ಸಂಕ್ರಾಂತಿಯ ಸಂಭ್ರಮವನ್ನು ಕೊಂಚ ಭಿನ್ನವಾಗಿ ಅಂದರೆ ಸಿಹಿಯಾದ ಅವಲಕ್ಕಿ ಪೊಂಗಲ್ ಸವಿಯುವ ಮೂಲಕ ಹೆಚ್ಚಿಸೋಣ. ಇದು ರುಚಿಕರವೂ, ಸುಲಭವಾಗಿ ತಯಾರಿಸಬಲ್ಲದ್ದೂ ಆಗಿದೆ. ಏಕೆಂದರೆ ಅನ್ನದ ಪೊಂಗಲ್‌ನಲ್ಲಿ ಅಕ್ಕಿ ಮತ್ತು ಬೇಳೆಯನ್ನು ಜೊತೆಯಾಗಿ ಬೇಯಿಸಬೇಕು.

ಸುಗ್ಗಿಯ ಹಿಗ್ಗಿನ ಸಂಕ್ರಾಂತಿಗೆ 'ಸಿಹಿ ಅವಲಕ್ಕಿ' ಪೊಂಗಲ್

ಅನ್ನ ಬೇಗನೇ ಬೆಂದರೆ ಬೇಳೆ ಕಡಿಮೆ ಬೇಯುತ್ತದೆ. ಈ ಬೇಳೆಯನ್ನು ಹೆಚ್ಚು ಬೇಯಿಸಲು ಹೋದರೆ ಅನ್ನ ಮುದ್ದೆಯಾಗುತ್ತದೆ. ಅಂತೆಯೇ ಹೆಚ್ಚಿನ ಮನೆಗಳ ಪೊಂಗಲ್ ಕೊಂಚ ಮುದ್ದೆಮುದ್ದೆಯಾಗಿರುತ್ತವೆ. ಆದರೆ ಅವಲಕ್ಕಿ ಪೊಂಗಲ್‌ನಲ್ಲಿ ಅವಲಕ್ಕಿಯನ್ನು ಕೊಂಚ ಕಾಲ ನೆನೆಸಿ ಬಳಸಿರುವ ಕಾರಣ ಮುದ್ದೆಯಾಗದೇ ಗರಿಗರಿಯಾಗಿರುತ್ತದೆ. ಬನ್ನಿ, ಈ ಸಿಹಿಯಾದ ಪೊಂಗಲ್ ಮಾಡುವುದು ಹೇಗೆ ಎಂದು ಈಗ ಕಲಿಯೋಣ: ಚಟ್ನಿ ಜೊತೆ ಸವಿಯಿರಿ ಖಾರಾ ಪೊಂಗಲ್

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಹತ್ತು ನಿಮಿಷಗಳು

*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳೂ

ಅಗತ್ಯವಿರುವ ಸಾಮಾಗ್ರಿಗಳು:

*ಅವಲಕ್ಕಿ: ಎರಡು ಕಪ್ (ಇದರಲ್ಲಿ ಕಲ್ಲುಗಳಿಲ್ಲವೆಂದು ಖಚಿತಪಡಿಸಿಕೊಳ್ಳಿ)-ದಪ್ಪ ಅವಲಕ್ಕಿ ಉತ್ತಮ. ಈಗ ದೊರಕುತ್ತಿರುವ ಪೇಪರ್ ಅವಲಕ್ಕಿ ಅಷ್ಟು ಸೂಕ್ತವಲ್ಲ, ಪೊಂಗಲ್ ಸರಿಯಾಗಿ ಆಗುವುದೂ ಇಲ್ಲ.

*ಹೆಸರು ಬೇಳೆ: ಒಂದು ಕಪ್ (ತೊಳೆದು ಒಣಗಿಸಿಟ್ಟಿದ್ದು)

*ಕಾಯಿತುರಿ: ಒಂದು ಕಪ್

*ಬೆಲ್ಲ: ಒಂದು ಕಪ್ (ಚಿಕ್ಕದಾಗಿ ತುರಿದದ್ದು) - ಕೆಂಪು ಅಥವಾ ಕಪ್ಪುಬೆಲ್ಲ ಉತ್ತಮ. ಬಿಳಿಬೆಲ್ಲ ಕೊಂಚ ಹುಳಿಯಾಗಿರುತ್ತದೆ.

*ಏಲಕ್ಕಿ: ಎರಡರಿಂದ ಮೂರು

*ತುಪ್ಪ: ಒಂದು ಕಪ್

*ದ್ರಾಕ್ಷಿ: ಅರ್ಧ ಕಪ್

*ಗೋಡಂಬಿ: ಅರ್ಧ ಕಪ್

ವಿಧಾನ:

1) ಒಂದು ಬಾಣಲೆ ಅಥವಾ ಚಿಕ್ಕ ಪಾತ್ರೆಯಲ್ಲಿ ಹೆಸರುಬೇಳೆ ಹಾಕಿ ಚಿಕ್ಕ ಉರಿಯಲ್ಲಿ ಕೊಂಚವೇ ಕೆಂಪಗಾಗುವವರೆಗೆ ಹುರಿಯಿರಿ. ಚಿಕ್ಕ ಕಾಳುಗಳಾದರೆ ಮೂರರಿಂದ ನಾಲ್ಕು ನಿಮಿಷ ಸಾಕು. ದೊಡ್ಡಕಾಳುಗಳಾದರೆ ಸುಮಾರು ಐದರಿಂದ ಹತ್ತು ನಿಮಿಷ ಬೇಕಾಗಬಹುದು.

2) ಪ್ರೆಶರ್ ಕುಕ್ಕರ್ ಒಳಗೆ ಹೆಸರು ಬೇಳೆ ಮುಳುಗುವಷ್ಟು ನೀರು ಹಾಕಿ ಬಿಸಿಮಾಡಿ. ಇದಕ್ಕೆ ಹುರಿದ ಹೆಸರು ಬೇಳೆ ಹಾಕಿ ಎರಡು ಸೀಟಿ ಬರುವವರೆಗೆ ಬಿಸಿಮಾಡಿ. ಬಳಿಕ ತಕ್ಷಣ ಮುಚ್ಚಳದ ಮೇಲೆ ತಣ್ಣೀರು ಸುರಿದು ಸೀಟಿ ತೆಗೆದು ಮುಚ್ಚಳ ತೆರೆಯಿರಿ. (ಇಲ್ಲದಿದ್ದರೆ ಹೆಸರು ಬೇಳೆ ಪೂರ್ಣವಾಗಿ ಕರಗಿ ನೀರಾಗುತ್ತದೆ)

3) ಈ ಸಮಯದಲ್ಲಿ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.

4) ಬಳಿಕ ನೀರು ಬಸಿದು ಒಂದು ಅಗಲವಾದ ಪಾತ್ರೆಯ ಮೇಲೆ ಹರಡಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ.

5) ಕುಕ್ಕರ್‌ನ ಕೆಲಸವಾದ ಬಳಿಕ ಇನ್ನೊಂದು ಪಾತ್ರೆಯಲ್ಲಿ ಕೊಂಚ ನೀರು ಹಾಕಿ ಕುದಿಸಿ. ನೀರು ಕುದಿ ಬಂದ ಬಳಿಕ ಬೆಲ್ಲದ ತುಂಡುಗಳನ್ನು ಹಾಕಿ. ನೀರು ಈ ಬೆಲ್ಲ ಮುಳುಗುವಷ್ಟಿದ್ದರೆ ಸಾಕು. ಬೆಲ್ಲಾ ಪೂರ್ಣವಾಗಿ ಕರಗುವವರೆಗೆ ಅಲ್ಲಾಡಿಸುತ್ತಿರಿ.

6) ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಕೊಂಚವೇ (ಅಂದರೆ ಸುಮಾರು ಎರಡು ದೊಡ್ಡ ಚಮಚ) ತುಪ್ಪ ಬಿಸಿಮಾಡಿ. ತುಪ್ಪ ಕರಗಿ ಕೊಂಚ ಬಿಸಿಯಾಗುತ್ತಿದ್ದಂತೆಯೇ ಮೊದಲು ಗೋಡಂಬಿ ಹಾಕಿ ಕೊಂಚ ಕೆಂಪಗಾದ ಬಳಿಕವೇ ದ್ರಾಕ್ಷಿ ಹಾಕಿ. ದ್ರಾಕ್ಷಿ ಹುರಿದ ತಕ್ಷಣ ಒಲೆಯಿಂದ ಪಾತ್ರೆಯನ್ನು ಇಳಿಸಿಬಿಡಿ (ದ್ರಾಕ್ಷಿಯನ್ನು ಎಣ್ಣೆಗೆ ಹಾಕಿದ ತಕ್ಷಣವೇ ಹುರಿದು ಬಿಡುವುದರಿಂದ ಮೊದಲೇ ಹಾಕಿದರೆ ಸುಟ್ಟು ಕರಕಲಾಗುತ್ತದೆ)

7) ಅವಲಕ್ಕಿ ನೆನೆಸಿಟ್ಟು ಹದಿನೈದು ನಿಮಿಷಗಳಾಗಿದ್ದರೆ ಇದನ್ನು ಬೆಲ್ಲದ ನೀರು ಇರುವ ಪಾತ್ರೆಗೆ ಸುರಿಯಿರಿ. ಬಳಿಕ ಬೆಂದ ಹೆಸರು ಬೇಳೆಯನ್ನು ಹಾಕಿ ತಿರುವಿ.

8) ಇದಕ್ಕೆ ಉಳಿದ ತುಪ್ಪ ಮತ್ತು ಕಾಯಿತುರಿ ಸೇರಿಸಿ ಮಿಶ್ರಣ ಮಾಡಿ.

9) ಸುಮಾರು ಒಂದು ನಿಮಿಷದ ಬಳಿಕ ಬಳಿಕ ಹುರಿದ ಗೋಡಂಬಿ ದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

10) ಬಿಸಿಯಿದ್ದಂತೆಯೇ ಅತಿಥಿಗಳಿಗೆ ಬಡಿಸಿ ಸಂಕ್ರಾಂತಿಯ ಸಂಭ್ರಮವನ್ನು ಹೆಚ್ಚಿಸಲು ನೆರವಾಗಿ. ಈ ಹೊಸರುಚಿ ಹೇಗೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ನಮಗೆ ಬರೆದು ತಿಳಿಸಿ.

English summary

Sweet Poha Pongal Recipe

Sankranti or Pongal is a harvest festival that is celebrated throughout India. This is the first festival that is celebrated at the beginning of the year. It is called a harvest festival, as it is that time of the year when people and farmers celebrate and thank the god and those who have helped them for their yeild. So, lets start preparing the sweet pongal poha recipe for Sankranti.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more