For Quick Alerts
ALLOW NOTIFICATIONS  
For Daily Alerts

ಸಿಹಿ ತಿನಿಸಿನ ಸರದಾರ-ತೆಂಗಿನಕಾಯಿ ಬರ್ಫಿ

By manu
|

ಈ ವಾರ ಒಂದರ ಹಿಂದೊಂದರಂತೆ ಮೂರು ಹಬ್ಬಗಳು ಬರುತ್ತಿವೆ. ಅಂತೆಯೇ ಮನೆಮನೆಯಲ್ಲಿ ಸಿಹಿತಿಂಡಿಗಳ ಮಹಾಪೂರವೇ ಹರಿದು ಬರಲಿದೆ. ಇದೇ ಶುಕ್ರವಾರ, ಆಗಸ್ಟ್ 28ರಂದು ಓಣಂ ಮತ್ತು ವರಮಹಾಲಕ್ಷ್ಮಿ ಹಬ್ಬಗಳಿದ್ದರೆ ಮರುದಿನವೇ ರಕ್ಷಾಬಂಧನದ ಪವಿತ್ರ ದಿನವಾಗಿದೆ. ಲಗುಬಗನೆ ಬಂದಿರುವ ಈ ಹಬ್ಬಗಳಲ್ಲಿ ಬಗೆಬಗೆಯ ಸಿಹಿ ತಿನಿಸುಗಳನ್ನು ಮಾಡದಿದ್ದರೆ ಆಗಮಿಸುವ ಅತಿಥಿಗಳನ್ನು ಮೆಚ್ಚಿಸುವುದಾದರೂ ಹೇಗೆ?

ನಿಮ್ಮ ನೆರವಿಗೆ ಬಂದಿದೆ ಸುಲಭವಾಗಿ ತಯಾರಿಸಬಹುದಾದ, ಅತಿಥಿಗಳ ಮೆಚ್ಚುಗೆಗೆ ಖಂಡಿತಾ ಪಾತ್ರವಾಗುವ ಕೋವಾ ಕೊಬ್ಬರಿ ಬರ್ಫಿ ಅಥವಾ ತೆಂಗಿನಕಾಯಿ ಬರ್ಫಿ ಇದು ಸುಲಭವೂ, ಕಡಿಮೆ ಸಮಯದಲ್ಲಿ ತಯಾರಾಗುವಂತಹದ್ದೂ ಆಗಿದ್ದು ಅತ್ಯಂದ ಸ್ವಾದಿಷ್ಟವೂ ಆಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂಬುದನ್ನು ಕಲಿಯೋಣ:

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹತ್ತು ನಿಮಿಷಗಳು.
ತಯಾರಿಕಾ ಸಮಯ: ಹತ್ತು ನಿಮಿಷಗಳು ಭರಭರನೆ ಮಾಡಿ ತೆಂಗಿನಕಾಯಿ ಬರ್ಫಿ

 Easy To Cook Khowa Coconut Barfi

ಅಗತ್ಯವಿರುವ ಸಾಮಾಗ್ರಿಗಳು:
*ಕಾಯಿತುರಿ: ಒಂದು ಕಪ್
*ಕೋವಾ : ಒಂದು ಕಪ್
*ಹಾಲು: ಒಂದು ಕಪ್
*ಹಾಲಿನ ಪುಡಿ: ಒಂದು ದೊಡ್ಡ ಚಮಚ
*ಸಕ್ಕರೆ: ಒಂದು ಕಪ್
*ಏಲಕ್ಕಿಪುಡಿ: ಕಾಲು ಚಮಚ
*ತುಪ್ಪ: ಸುಮಾರು ನಾಲ್ಕರಿಂದ ಐದು ದೊಡ್ಡಚಮಚ

ವಿಧಾನ:
1) ದಪ್ಪತಳದ ಪಾತ್ರೆಯೊಂದನ್ನು ಚಿಕ್ಕ ಉರಿಯ ಮೇಲಿರಿಸಿ ಮೂರು ಚಮಚ ತುಪ್ಪ ಹಾಕಿ ಕರಗಿದ ತಕ್ಷಣ ಕಾಯಿತುರಿ ಹಾಕಿ ಸುಮಾರು ಎರಡು ನಿಮಿಷಗಳ ಕಾಲ ಹುರಿಯಿರಿ.
2) ಇನ್ನೊಂದು ಪಾತ್ರೆಯಲ್ಲಿ ಕೋವಾ ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿ. ಬಳಿಕ ಇದನ್ನು ಹುರಿದ ಕಾಯಿತುರಿಗೆ ಹಾಕಿ
3) ಈಗ ಇದಕ್ಕೆ ಹಾಲನ್ನು ಹಾಕಿ ಕಲಕುತ್ತಿರಿ. ಬಳಿಕ ಏಲಕ್ಕಿಪುಡಿ, ಹಾಲುಪುಡಿ ಹಾಕಿ ನಿಧಾನಕ್ಕೆ ತಿರುವುದನ್ನು ಮುಂದುವರೆಸಿ. ಗಾಢವಾದ ಬಳಿಕ ಒಲೆ ಆರಿಸಿ.
4) ಈಗ ಉಳಿದ ಎರಡು ಚಮಚ ತುಪ್ಪವನ್ನು ಒಂದು ತಟ್ಟೆಯ ಮೇಲೆ ಹರಡಿ.
5) ಈ ತಟ್ಟೆಯ ಮೇಲೆ ಮೇಲಿನ ಮಿಶ್ರಣವನ್ನು ಚಮಚದ ಸಹಾಯದಿಂದ ಇಡಿಯ ತಟ್ಟೆಯ ಅಗಲಕ್ಕೆ ಹರಡಿ
6) ಚಮಚದ ಹಿಡಿಯನ್ನು ಚಾಕುವಿನಂತೆ ಬಳಸಿ ಚೌಕಾಕಾರದ ಗೆರೆಗಳನ್ನೆಳೆಯಿರಿ. ಬಳಿಕ ಒಂದೊಂದೇ ತುಂಡನ್ನು ಬಿಡಿಸಿ ತೆಗೆಯಿರಿ.
7) ಬಿಸಿಯಿದ್ದಂತೆಯೂ, ತಣ್ಣಗಾದ ಬಳಿಕವೂ ಈ ಸ್ವಾದಿಷ್ಟ ಬರ್ಫಿಯನ್ನು ಸವಿಯಬಹುದು.

ಸಲಹೆ:
1) ಕಾಯಿತುರಿಯ ಬದಲು ಒಣಕೊಬ್ಬರಿ ಪುಡಿಯನ್ನೂ ಬಳಸಬಹುದು, ಆಗ ಹಾಲು ಪೂರ್ಣವಾಗಿ ಹೀರಿಕೊಂಡು ಒಣಗುವ ಮುನ್ನವೇ ಒಲೆ ಆರಿಸಬೇಕು. ಇಲ್ಲದಿದ್ದರೆ ತೀರಾ ಗಟ್ಟಿಯಾಗಿ ಹೋಗುತ್ತದೆ.
2) ಚೌಕಾಕಾರದ ತುಂಡುಗಳ ಬದಲಿಗೆ ಉಂಡೆ ಅಥವಾ ಮುಚ್ಚಳವೊಂದನ್ನು ಒತ್ತಿ ಬಿಲ್ಲೆಗಳ ರೂಪವನ್ನೂ ನೀಡಬಹುದು.
3) ಬಿಸಿಯಿದ್ದಾಗಲೇ ಅರ್ಧ ತುಂಡು ಗೋಡಂಬಿಯನ್ನು ಪ್ರತಿ ತುಂಡಿನ ಮೇಲೆ ಒತ್ತಿರಿಸಿದರೆ ನೋಡಲು ತುಂಬಾ ಚೆನ್ನಾಗಿರುತ್ತದೆ.
4) ಕಾಯಿತುರಿಯನ್ನು ಆಹಾರದ ಬಣ್ಣ ಮತ್ತು ಕೊಂಚ ಸಕ್ಕರೆ ಸೇರಿಸಿ ಕೈಯಲ್ಲಿ ಮಿಶ್ರಣ ಮಾಡಿಟ್ಟಿರಿ. ಈ ಪುಡಿಯನ್ನು ಬರ್ಫಿಯನ್ನು ತಟ್ಟೆಗೆ ಹರಡಿದ ಬಳಿಕ ಮೇಲಿನಿಂದ ನವಿರಾಗಿ ಉದುರಿಸಿ ಬಳಿಕ ತುಂಡು ಮಾಡಿದರೂ ನೋಡಲು ತುಂಬಾ ಚೆನ್ನಾಗಿ ಕಾಣುತ್ತದೆ.

English summary

Easy To Cook Khowa Coconut Barfi

This week is one of the best weeks for all the food lovers. As, three festivals back to back have been lined up. It's time to taste the delicious sweet recipes for the upcoming festivals. As we have onam and varamahalakshmi on friday the 28th followed by raksha bandhan on saturday. So all the food lovers get charged to taste the best sweet recipes this festival.
X
Desktop Bottom Promotion