For Quick Alerts
ALLOW NOTIFICATIONS  
For Daily Alerts

ಮಲ್ಲುಗಳಿಗೆ ಹಬ್ಬ ಮಲ್ಲೇಶನಿಗೆ ಪಾಯಸ

By *ಶಾಮ್
|
Onam special jack fruit delight, Chakka Prathaman
ಹಲಸಿನ ಹಣ್ಣಿನಿಂದ ತರಹೇವಾರಿ ಸಿಹಿ ತಿಂಡಿಗಳನ್ನು ಮಾಡಬಹುದು.ಹಣ್ಣನ್ನು ಹೇರಳವಾಗಿ ಬೆಳೆಯುವ ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಹಳ್ಳಿಗಳಲ್ಲಿ ಹಲಸು ಆಧಾರಿತ ಭಕ್ಷ್ಯ ಭೋಜ್ಯಗಳು ಜನಜನಿತ. ಹಲಸಿನ ಮುಳ್ಳು ಹೊದಿಕೆಯನ್ನು ಕೊಟ್ಟಿಗೆಗೆ ಹಾಕಿ ಕಾಯಿ, ಬೀಜ,ತೊಳೆ, ತಿರುಳಿನಿಂದ ನಮ್ಮ ಹೆಣ್ಣುಮಕ್ಕಳು ಬಗೆಬಗೆಯ ಪದಾರ್ಥಗಳನ್ನು ತಯಾರಿಸುವರು. ಹೊರಗೆ ಮಳೆ ಸುರಿಯುತ್ತಿರುವಾಗ ಒಳಗೆ ಸುಟ್ಟ ಹಲಸಿನ ಹಪ್ಪಳದ ಕುರುಕುರು ಸದ್ದು ಕೇಳಿಸುತ್ತಿದ್ದರೆ ನೀವು ಮಲೆನಾಡಿನಲ್ಲೋ,ಕರಾವಳಿ ತೀರದಲ್ಲೋ ಇದ್ದೀರೆಂದೇ ಅರ್ಥ.

ಇಂಥ ಆಹಾರ ವಿಹಾರದ ಕಲ್ಪನೆ ನೆರೆಯ ಕೇರಳದಲ್ಲೂ ಹೇರಳವಾಗುಂಟು. ಇವತ್ತಿನ ದಿನ ಕೇರಳಿಗರಿಗೆ ದೊಡ್ಡ ಹಬ್ಬ. ಓಣಂ ಹಬ್ಬವನ್ನು ಪ್ರತಿಯೊಬ್ಬ ಕೇರಳಿಗ ಸಂಭ್ರಮದಿಂದ ಆಚರಿಸುತ್ತಾನೆ. ಇತರ ರಾಜ್ಯದ ಜನರು ಕೇರಳಿಗರನ್ನು ಮಲ್ಲು ಎಂದು ಸಂಭೋಧಿಸಿತ್ತಾರೆ.ವಿಶ್ವಾಸ ಉಕ್ಕಿದಾಗಲೂ ಮಲ್ಲು ಎನ್ನುವರು,ಯಾವುದೋ ಒಂದು ಕಾರಣಕ್ಕೆ ಕೋಪಬಂದಾಗಲೂ ಮಲ್ಲು ಎನ್ನುವರು. ಓಣಂ ಮಲ್ಲುಗಳಿಗೆ ನಾಡಹಬ್ಬ. ಥಾಮಸ್ ಕುಟ್ಟಿಗೆ, ಉನ್ನಿಕೃಷ್ಣನ್ನಿಗೆ, ಆಂಟೊನಿಗೆ, ಅಪ್ಪು ಪಪ್ಪುಗೆ ಮತ್ತೆಲ್ಲರಿಗೆ ಇವತ್ತು ಹಬ್ಬ. ಈ ಹಬ್ಬಕ್ಕೆ ಜಾತಿ, ಧರ್ಮ,ಪಂಗಡದ ಸೋಂಕಿಲ್ಲ. ಕೇರಳಿಗರಂತೆ ಇಡೀ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯನ್ನು ಒಳಗೊಳ್ಳುವ ಒಂದು ಹಬ್ಬ ಕನ್ನಡನಾಡಿಗರಿಗೆ ಇಲ್ಲವಾಯಿತಲ್ಲಾ ಎಂದು ಅನಿಸುತಿದೆ.

ಸಿಎನ್ ಎನ್ ಸಂಪಾದಕ ರಾಜದೀಪ್ ಸರ್ದೇಸಾಯಿ ಅವರು ಇವತ್ತಿನ ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ. happy onam everyone! given the strong kerala brigade in office no surprise that we are doing a special on cnn ibn at 8.30 pm "mallu power". ನಮ್ಮ ಕಚೇರಿಯಲ್ಲೂ ಮಲ್ಲುಗಳಿಗೆ ಕೊರತೆಯಿಲ್ಲ. ಬಹುತೇಕ ಇವತ್ತು ಎಲ್ಲರೂ ರಜೆ ಹಾಕಿ ಕೊಚ್ಚಿ, ಕೊಟ್ಟಾಯಂ, ಅಲ್ಲಪುಜ, ಪಾಲಕ್ಕಾಡ್, ತ್ರಿಸ್ಸೂರು ಕಡೆ ಹಾಯುವ ಬಸ್ಸು ರೈಲು ಹತ್ತಿಹೋಗಿದ್ದಾರೆ. ನಿನ್ನೆ ಕಚೇರಿಯಿಂದ ಬಸ್ ಸ್ಟ್ಯಾಂಡಿಗೆ ಹೊರಡುವ ಮುನ್ನ ನನ್ನ ಸಹೋದ್ಯೋಗಿ ಧನ್ಯ ಸಿಕ್ಕಳು. ಹಬ್ಬದ ವಿಶೇಷ ಏನು ಎಂದು ಕೇಳಿದೆ. ಅವಳು ತನ್ನೂರು ನೆಲ್ಲಿಕುಜಿಯಲ್ಲಿ ಚಕ್ಕ ಪ್ರಥಮನ್ ಮೆಲ್ಲುವುದಾಗಿಯೂ ನೀವು ನಿಮ್ಮ ಮನೆಯಲ್ಲಿ ತಯಾರು ಮಾಡಿಕೊಳ್ಳಿ ಶಾಮ್, ತುಂಬಾ ಸಿಂಪಲ್ ರೆಸಿಪಿ ಎಂದು ಹೇಳಿಹೊರಟಳು.

ಓಣಂ ದಿವಸ ಅಕ್ಕಿ ಮತ್ತು ಕಾಯಿಹಾಲು ಬಳಸಿ ಮಾಡುವ ಅಡ ಪ್ರಥಮನ್ ವಿಶೇಷ ಖಾದ್ಯವಂತೆ. ಇನ್ನೊಂದು ಓಣಂ ತಿಂಡಿಯ ಹೆಸರು ಕಾಳನ್. ತಾಜಾ ಹಲಸಿನ ಹಣ್ಣು ಮಾರುಕಟ್ಟೆಯಲ್ಲಿ ಸಿಕ್ಕರೆ ತಯಾರಿಸುವ ಸಿಹಿ ತಿನಿಸು ಚಕ್ಕ ಪ್ರಥಮನ್. ಹಲಸು ಪೊಗದಸ್ತಾಗಿ,ಗೊಂಚಲುಗೊಂಚಲಾಗಿ ಅರಳುವ ಋತುವಿನಲ್ಲಿ ಹಣ್ಣಿನ ತೊಳೆಗಳನ್ನು ಮಿಕ್ಸಿಗೆ ಹಾಕಿ ಜಾಮ್ ರೀತಿ ರುಬ್ಬಿಕೊಂಡು ಸೀಕರಣೆಯನ್ನು ಶೀಶೆಯಲ್ಲಿ ಶೇಖರಿಸಿ ಪ್ರಿಜ್ ನಲ್ಲಿ ಇಡಬಹುದು. ಬೇಕೆಂದಾಗಲೆಲ್ಲ ಚಕ್ಕ ಪ್ರಥಮನ್ (ಹಲಸಿನ ಪಾಯಸ )ಮಾಡಿ ಸವಿಯಬಹುದು.

ಧನ್ಯಳ ರೆಸಿಪಿ ಪ್ರಕಾರ ಎರಡು ಅಚ್ಚು ಬೆಲ್ಲವನ್ನು ನೀರಿನಲ್ಲಿ ಮುಳುಗಿಸಿ ಒಲೆಯ ಮೇಲಿಡಿ. ಚೆನ್ನಾಗಿ ಕುದಿಬಂದು ಬೆಲ್ಲದ ರಸ ಆದಾಗ ಕೆಳಗಿಳಿಸಿ ಫಿಲ್ಟರ್ ಬಳಸಿ ಸೋಸಿರಿ. ಬೆಲ್ಲದಲ್ಲಿನ ಮಣ್ಣಿನ ಅಂಶ ಹೋಗಬೇಕು. ಸ್ವಲ್ಪ ಅಕ್ಕಿ ಮತ್ತು ತೆಂಗಿನಕಾಯಿಯನ್ನು ರುಬ್ಬಿಕೊಂಡು ಬೆಲ್ಲದ ರಸಕ್ಕೆ ಹಾಕಿ ಮತ್ತೆ ಕುದಿಸಬೇಕು. ಅದಕ್ಕೆ ಎರಡು ಲೋಟದಷ್ಟು ಹಲಸಿನ ಜಾಮ್ ಹಾಕಿ ಸೌಟಿನಿಂದ ಚೆನ್ನಾಗಿ ಕಲಕಿ ಪಾತ್ರೆ ಇಳಿಸಬೇಕು. ಕೊನೆಗೆ ಗೋಡಂಬಿ, ದ್ರಾಕ್ಷಿ ಸಮೇತ ತುಪ್ಪದ ಒಗ್ಗರಣೆ ಕೊಡಬೇಕು. ಅಲ್ಲಿಗೆ ಚಕ್ಕ (ಹಲಸು) ಪ್ರಥಮನ್ (ಪಾಯಸ ಅಥವಾ ಖೀರು) ಸಿದ್ಧ.ತಾಜಾ ಹಲಸಿನ ಹಣ್ಣು ಲಭ್ಯವಿದ್ದರೆ ಹಲಸಿನಹಣ್ಣನ್ನು ಸಣ್ಣಗೆ ಹೆಚ್ಚಿ ಹಾಕಬೇಕು. ಹಲಸಿನ ಪಾಯಸ ಸವಿಯಿರಿ, ಇಂಥ ಸಿಹಿ ಕಲ್ಪನೆಗಳು ದಶದಿಕ್ಕುಗಳಿಂದಲೂ ಬರಲಿ ಎಂದು ಬಯಸುತ್ತಿರಿ.

Story first published: Wednesday, September 2, 2009, 15:23 [IST]
X
Desktop Bottom Promotion